07 ಜನವರಿ 2024

ರೈತರ ಶೋಷಣೆ ಮತ್ತು ಜಾತಿ ಪದ್ದತಿಯ ವಿರುದ್ದ ಸಿಡಿದೆದ್ದ #ಕಾಟೇರ...

 


ರೈತರ ಶೋಷಣೆ ಮತ್ತು ಜಾತಿ ಪದ್ದತಿಯ ವಿರುದ್ದ ಸಿಡಿದೆದ್ದ #ಕಾಟೇರ...


ಜಗತ್ತಿನಲ್ಲಿ ಇರೋದೆ ಕೆಲವು ಕಥೆಗಳು ಆ ಕಥೆಗಳನ್ನು ವಿಭಿನ್ನವಾಗಿ ಪ್ರಸ್ತುತಪಡಿಸುವವನೇ ಉತ್ತಮ ಕಥೆಗಾರ. ಅಂತಹ ಕಥೆಗಳನ್ನು ಸಶಕ್ತವಾಗಿ ಚಿತ್ರರೂಪ ನೀಡಿ ನಿರ್ದೇಶನ ಮಾಡಿ ಗೆದ್ದ ಚಿತ್ರ ಕಾಟೇರ. ವಾರದಲ್ಲೇ ಶತಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗೋ ಚಿತ್ರದ ಸೂತ್ರದಾರ ತರುಣ್  ಸುಧೀರ್ .

ರೀನಾ ಡಿಸೋಜಾ ಪಾತ್ರದಲ್ಲಿ ಶ್ವೇತಾ ಪ್ರಸಾದ್ ರವರು ಪೋರೆನ್ಸಿಕ್ ತಂಡದ ಜೊತೆಗೆ ತಲೆಬುರುಡೆಯ ಬಗ್ಗೆ ಸಂಶೋಧನೆ ಮಾಡುವ ಶಾಟ್ ನೊಂದಿಗೆ ಆರಂಭವಾಗುವ ಚಿತ್ರದ ಕೊನೆಯ ಫ್ರೇಮ್ ವರಗೆ ಟೈಟಲ್ ಕಾರ್ಡ್ ನೋಡುವವರೆಗೆ ಉಸಿರು ಬಿಗಿ ಹಿಡಿದು ನೋಡುವ ಸಿನಿಮಾ ಕಾಟೇರ. ದರ್ಶನ್ ರವರ ಮಾಮೂಲಿ ಸಿನಿಮಾಕ್ಕೆ ಹೋಲಿಸಿದರೆ ಇಲ್ಲಿ ಬೇರೆ ರೀತಿಯ ದರ್ಶನ್ ರವರ ದರ್ಶನವಾಗುತ್ತದೆ.

ಭೀಮನಹಳ್ಳಿಯ ಕಬ್ಬಿಣ ಕಾಸಿ ಬಡಿದು ಹತಾರ ಮಾಡುವ  ಕಾಟೇರ ತನ್ನ ಹಳ್ಳಿಯ ರೈತರಿಗೆ ಭೂಸುಧಾರಣಾ ಕಾಯಿದೆಯನ್ನು ಜಾರಿಗೆ ತರಲು ರೈತರನ್ನು ಊಳಿಗಮಾನ್ಯ ಭೂಮಾಲೀಕರಾದ ದೇವರಾಯ ಮತ್ತು ಕಾಳೇಗೌಡರಿಂದ ಪಾರು ಮಾಡಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಆ ಸವಾಲುಗಳನ್ನು ಕಾಟೇರ ಹೇಗೆ ಎದುರಿಸದ ಜಾತಿ ಪದ್ದತಿಗೆ ಹೇಗೆ ಸೆಡ್ಡು ಹೊಡೆದ  ಎಂಬುದನ್ನು ನೀವು ತೆರೆಯ ಮೇಲೆಯೇ ನೋಡಬೇಕು.ಈ ಚಿತ್ರದಲ್ಲಿ ದರ್ಶನ್ ಅಭಿನಯ ಬೇರೆಯೇ ಲೆವೆಲ್ ನಲ್ಲಿದೆ. 

ನಾನು ಸಿನಿಮಾ ನೋಡಿದ್ದು ಐನಾಕ್ಸ್ ರಾಯಲ್ ಸೀಟ್ ನಲ್ಲಿ ನನ್ನ ಪಕ್ಕ ಆರಾಮಾಗಿ ಮಲಗಿ ಸಿನಿಮ ನೋಡುವ ಸುಮಾರು ಅರವತ್ತು ವರ್ಷ ವಯಸ್ಸಿನ ವ್ಯಕ್ತಿ ಸಿನಿಮಾ ಅರಂಭವಾದ ಹತ್ತು ನಿಮಿಷಕ್ಕೆ ಸೀಟಿನ ತುದಿಗೆ ಕುಳಿತು ನೋಡಲಾರಂಬಿಸಿದರು.ಈ ಉದಾಹರಣೆ ಸಾಕು ಸಿನಿಮಾದ ಗುಣಮಟ್ಟ ತಿಳಿಸಲು. ಮಾಸ್ತಿಯವರ ಸಂಭಾಷಣೆ ಚಿತ್ರವನ್ನು ಇನ್ನೂ ಕಳೆಗಟ್ಟಿಸಿದೆ" ಗಂಡ್ಸಾದವ್ನು ಕೆಲ್ಸ ಮಾಡಿ ಬೆವ್ರು ಸುರ್ಸುಬೇಕಲೇ, ಹೆಣ್ ನೋಡಿ  ಜೊಲ್ ಸುರ್ಸ್ ಬಾರ್ದು" ಮುಂತಾದ ಡೈಲಾಗ್ ಜನರ ಮನ ತಾಗುತ್ತವೆ.

ತಾರಾಗಣದಲ್ಲಿ ಅನುಭವಿ ನಟ ನಟಿಯರು ಚಿತ್ರದ ಘನತೆಯನ್ನು ಹೆಚ್ಚಿಸಿದ್ದಾರೆ.

ಕಾಟೇರನಾಗಿ ದರ್ಶನ್ ಎರಡು ಶೇಡ್ ಗಳಲ್ಲಿ ಅಭಿನಯಿಸಿರುವುದು ಅವರ ಅಭಿಮಾನಿಗಳಿಗೆ ಡಬಲ್ ಧಮಾಕ.

ಪ್ರಭಾವತಿ ಪಾತ್ರದಲ್ಲಿ ಆರಾಧನಾ ರಾಮ್ ಮೊದಲ ಚಿತ್ರದಲ್ಲೇ ಅಭಿನಯದಲ್ಲಿ ಸೆಂಚುರಿ ಹೊಡೆದಿರುವರು.

ದೇವರಾಯನಾಗಿ ಜಗಪತಿ ಬಾಬು ಉತ್ತಮ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ.

ಮಹದೇವಣ್ಣ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಭಿನಯ ಸುಂದರ.

ಕಾಟೇರನ ಸಹೋದರಿ

ಕುಮಾರಿಯಾಗಿ ಶ್ರುತಿ ಅಭಿನಯ ಎಂದಿನಂತೆ ಉತ್ತಮ.

ಮಾತುಬಾರದ ನಾಟಕ ಕಲಾವಿದ 

ಚೋಂಗ್ಲಾ ಪಾತ್ರದಲ್ಲಿ ವೈಜನಾಥ ಬಿರಾದಾರ್ ಅಭಿನಯ ಕೆಲವೆಡೆ ನಗು ತಂದರೆ ಕೆಲವೆಡೆ ಕಣ್ಣು ತೇವವಾಗುತ್ತದೆ.

ಪುಟ್ಟರಾಜು ಪಾತ್ರದಲ್ಲಿ ಮಾಸ್ಟರ್ ರೋಹಿತ್ ಚುರುಕಾಗಿ ಅಭಿನಯಿಸಿದರೆ,

ಅವಿನಾಶ್ ಶಾನುಬೋಗನಾಗಿ ತಣ್ಣನೆಯ ವಿಲನ್ ಪಾತ್ರ ಮಾಡಿದ್ದಾರೆ.

ಕಾಳೇಗೌಡನಾಗಿ ವಿನೋದ್ ಕುಮಾರ್ ಆಳ್ವ ತೆರೆಯ ಮೇಲೆ ಮಿಂಚಿದ್ದಾರೆ.

ಸುಧಾಕರ್ ರವರ ಛಾಯಾಗ್ರಹಣ ಕಣ್ಣಿಗೆ ಹಬ್ಬ. ಸಂಕಲನಕಾರರಾದ ಕೆ ಎಮ್ ಪ್ರಕಾಶ್ ಚಿತ್ರ ವೇಗವಾಗಿ ಚಲಿಸಲು ತಮ್ಮದೇ ಯೋಗದಾನ ನೀಡಿದ್ದಾರೆ.ಹರಿಕೃಷ್ಣ ರವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್.ಸಂಗೀತಕ್ಕೆ ತಕ್ಕ ಚೇತನ್ ಕುಮಾರ್, ಯೋಗರಾಜ್ ಭಟ್ ಹಾಗೂ ನನ್ನ ನೆಚ್ಚಿನ ಗೀತ ರಚನೆಕಾರ ವಿ ನಾಗೇಂದ್ರ ಪ್ರಸಾದ್ ರವರ ಸಾಹಿತ್ಯ ಅತ್ಯುತ್ತಮ. 

ಈ ಚಿತ್ರ 70 ,80 ರ ದಶಕದ ಕಥೆ ಆಧಾರಿತ ಆದರೂ ಈಗಲೂ ಅಲ್ಲಲ್ಲಿ ಮರ್ಯಾದೆಗೇಡು ಹತ್ಯೆ, ಜಾತಿ ಪದ್ದತಿಯು ಆಚರಣೆ ನೋಡಿದರೆ ಇದು ಇಂದಿನ ಕಥೆಯೂ ಹೌದು.

 ಎಂಭತ್ತರ ದಶಕಕ್ಕೂ ಹಿಂದಿನವರು ಈ ಚಿತ್ರ ನೋಡಿ ತಮ್ಮ ಕಾಲದ ಜನ  ಜೀವನ ರಿವೈಂಡ್ ಮಾಡಿಕೊಳ್ಳಬಹುದು 

ಜಾತಿ ಪದ್ದತಿ, ಇಂದಿನ ಪೀಳಿಗೆಯ  ಯುವಕರು ಆ ಕಾಲದ ಜೀವನಪದ್ದತಿ ನೋಡಬಹುದು.ಒಟ್ಟಾರೆ ಇದು ಎಲ್ಲರೂ ನೋಡಬೇಕಾದ ಸಿನಿಮಾ ಕೊನೆಯದಾಗಿ ಇಂತಹ ಚಿತ್ರ ನಿರ್ಮಿಸಿದ ಧೀರ ರಾಕ್ಲೈನ್ ವೆಂಕಟೇಶ್ ರವರಿಗೆ ಅಭಿನಂದನೆ ಸಲ್ಲಿಸಲೇಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

03 ಜನವರಿ 2024

ಎರಡು ಹಾಯ್ಕುಗಳು

 


ಹಾಯ್ಕುಗಳು 


ಸತತ ಮೋಡ

ದಂಗಾದನು ದಿನಪ

ಬೆಳಕು ಎಲ್ಲಿ?



ರೈತಗೆ ಕಷ್ಟ

ದಂಗೆಯೇಳಬೇಕೇನು 

ಅನ್ನದಾತನು?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

02 ಜನವರಿ 2024

ಅಂತರ್ಮುಖಿಗಳಿಗೊಂದು ದಿನ


 


ಅಂತರ್ಮುಖಿಗಳಿಗೊಂದು ದಿನ 


ಕೆಲವರು ಮಾತನಾಡುತ್ತಿದ್ದರೆ ನಾನ್ ಸ್ಟಾಪ್... ಅಂತಹ ವ್ಯಕ್ತಿಗಳ ಕಂಡು   ಅವರು ಕಲ್ಲನ್ನು ಬೇಕಾದರೂ ಒಮ್ಮೆ ಮಾತನಾಡಿಸಬಲ್ಲರು ಎಂದು ಜೋಕ್ ಮಾಡುವುದುಂಟು. ಇದಕ್ಕೆ ವಿರುದ್ಧವಾಗಿ ಕೆಲವರನ್ನು ಎಷ್ಟು   ಮಾತನಾಡಿಸಿದರೂ ಅವರ ಕಡೆಯಿಂದ ಬೇಗ ಪ್ರತಿಕ್ರಿಯೆ ಬರುವುದೇ ಇಲ್ಲ. ಅಯ್ಯೋ ಮಾತಾಡು ಬಾಯಿಂದ ಮುತ್ತೇನು ಉದುರೋಲ್ಲ ಎಂದು ಇಂತವರ ಕಿಚಾಯಿಸುವುದೂ ಉಂಟು ಇಂತಹ ಮೂಡಿಯಾಗಿರುವ ,ಕಡಿಮೆ ಪ್ರತಿಕ್ರಿಯೆ ನೀಡುವ, ಆಗೊಂದು ಈಗೊಂದು ಮಾತನಾಡುವ , ಎಲ್ಲರೊಡನೆ ಕಡಿಮೆ ಬೆರೆಯುವವರನ್ನು ಅಂತರ್ಮುಖಿಗಳು ಎಂದು ಕರೆಯಬಹುದು.

ಬೇರೆಯರೊಂದಿಗೆ ಬೆರೆಯದೇ ಮಂಕಾಗಿರುವ ಇವರು ದಡ್ಡರೆಂದು ನೀವು ಭಾವಿಸಲೇಬಾರದು ಡಾರ್ವಿನ್ ನಿಂದ ಹಿಡಿದು  ಐನ್ಸ್ಟೈನ್ ನಂತಹ ಮಾಹಾನ್ ವಿಜ್ಞಾನಿಗಳು ಕೂಡಾ ಅಂತರ್ಮುಖಿ ವ್ಯಕ್ತಿತ್ವಕ್ಕೆ ಉದಾಹರಣೆ ಎಂಬುದು ನೆನಪಿರಲಿ.

ಪ್ರತಿವರ್ಷ ಜನವರಿ 2 ರಂದು ವಿಶ್ವ ಅಂತರ್ಮುಖಿ ದಿನವನ್ನು ಆಚರಿಸಲಾಗುತ್ತದೆ.

ಅಂತರ್ಮುಖಿಗಳು ಏಕಾಂಗಿಯಾಗಿ ಇರುತ್ತಾರೆಂದು ಅವರ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಲಾಗಿದೆ. ನಮ್ಮ ಸಮಾಜ ಅಂತರ್ಮುಖಿಗಳನ್ನು ದುರಹಂಕಾರಿ, ನಿರಾಸಕ್ತಿ, ಅಂಜಿಕೆಯುಳ್ಳವರು ಎಂದು ತಪ್ಪಾಗಿ ನಿರ್ಣಯಿಸಲಾಗುತ್ತದೆ. ಈ ದಿನವು ಜನರು ಇಂತಹವರನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹೆಸರಾಂತ ಮನಶಾಸ್ತ್ರಜ್ಞರಾದ 

ಕಾರ್ಲ್ ಜಂಗ್ ರವರು ಮೊದಲ ಬಾರಿಗೆ    1921ರಲ್ಲಿ  "ಸೈಕಲಾಜಿಕಲ್ ಟೈಪ್ಸ್" ಎಂಬ ಪುಸ್ತಕದಲ್ಲಿ   ಅಂತರ್ಮುಖಿ ಪರಿಕಲ್ಪನೆಯನ್ನು ಮೊದಲು ವ್ಯಾಖ್ಯಾನಿಸಿದರು.  ಪ್ರತಿಯೊಬ್ಬ ವ್ಯಕ್ತಿಯು ಅಂತರ್ಮುಖಿ ಮತ್ತು ಬಹಿರ್ಮುಖಿ ಎಂಬ ಎರಡು ವರ್ಗಗಳಾಗಿ ಬರುತ್ತಾರೆ ಎಂದು ಅವರು ಪ್ರತಿಪಾದಿಸಿದರು. ಜಂಗ್ ಅಂತರ್ಮುಖಿಗಳನ್ನು ಗ್ರೀಕ್ ದೇವರು ಅಪೊಲೊಗೆ ಹೋಲಿಸಿದ್ದಾರೆ. 

ಅಪೊಲೊ ತಿಳುವಳಿಕೆ ಮತ್ತು ಜ್ಞಾನೋದಕ್ಕೆ ಪ್ರಸಿದ್ಧಿ.  ಅಪೊಲೊ ಅಂತರ್ಮುಖಿಗಳು ತಮ್ಮ ಆಂತರಿಕ ಪ್ರಪಂಚದ ಪ್ರತಿಬಿಂಬ, ಕನಸು ಮತ್ತು ದೃಷ್ಟಿಯ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ವಿವರಿಸಿದರು.

ಅಂತರ್ಮುಖಿಗಳು ಏಕಾಂಗಿಯಾಗಿರುವುದನ್ನು ಹೆಚ್ಚಾಗಿ ಆನಂದಿಸುತ್ತಾರೆ. ಅಂತಹವರು ಮೌನವಾಗಿರುವುದೇ ಹೆಚ್ಚು, ಆದರೆ ಒರಟರಾಗಿವುದಿಲ್ಲ. ಅವರು ಸಾಮಾಜಿಕವಾಗಿ ಉತ್ತಮರಾಗಿರುತ್ತಾರೆ. ಅವರು ಅತ್ಯಂತ ಉತ್ಸಾಹಿಗಳಾಗಿದ್ದು, ಅನ್ವೇಷಕರಾಗಿರುತ್ತಾರೆ. ಎಷ್ಟೋ ಸಲ ಅಂತರ್ಮುಖಿಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. 


ಅಂತರ್ಮುಖಿಗಳು ಹೊಸ ಮಾಹಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ನಿಧಾನ ಮಾಡುವರು. 

ಅಂತರ್ಮುಖಿಗಳು ಯಾರ ವಿರೋಧಿಗಳಾಗಿರುವುದಿಲ್ಲ, ಆದರೆ ಅವರು ಹೆಚ್ಚು ಜಾಗರೂಕರಾಗಿರುತ್ತಾರೆ ಮತ್ತು ಅವರು ತೆಗೆದುಕೊಳ್ಳುವ .

ಅಂತರ್ಮುಖಿಗಳು ಆಳವಾದ ಚಿಂತಕರು ಮತ್ತು ಹೆಚ್ಚು ಸೃಜನಶೀಲರು.

ಆದ್ದರಿಂದ ನಮ್ಮ ಸುತ್ತ ಮುತ್ತ ಇರುವ ಅಂತರ್ಮುಖಿಗಳನ್ನು ಗೌರವಿಸೋಣ.ಅವರ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ ತನ್ಮೂಲಕ ಅವರ ಸಂತಸವನ್ನು ಅನುಭವಿಸಲು ಬಿಡೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

01 ಜನವರಿ 2024

ಸ್ವಾಗತ 2024

 


2024

ಬರ ,ಬೆಲೆ ಏರಿಕೆ,ಯುದ್ದಗಳಿಂದ
ಬಸವಳಿದಿದ್ದು ಸಾಕು|
ಸುಖ ಸಮೃದ್ದಿ ನೀಡಲಿ
ಬರುವ ಎರಡು ಸಾವಿರದ ಇಪ್ಪತ್ನಾಲ್ಕು||

ಸಿಹಿಜೀವಿ ವೆಂಕಟೇಶ್ವರ
ತುಮಕೂರು

31 ಡಿಸೆಂಬರ್ 2023

ಸೋಮನಗೌಡರ ಮೋತಿ.


 





ಸೋಮನಗೌಡರ ಮೋತಿ.


ಕೆಲವು ಪ್ರಾಣಿಗಳು ಮಾನವರಿಗಿಂತಲೂ ಸೂಕ ಸಂವೇದನೆ ಹೊಂದಿರುತ್ತವೆ.ನಾಯಿಯಂತಹ ಪ್ರಾಣಿಗಳು ನಿಯತ್ತಿಗೆ ಹೆಸರುವಾಸಿ.ಅನ್ನ ಹಾಕಿದ ಮನೆಗೆ ಕನ್ನ ಹಾಕಲು ಬಂದ ಕಳ್ಳರ ಸಂಚನ್ನು ಬಯಲು ಮಾಡಿ ಮಾಲೀಕನ ಸಂಪತ್ತನ್ನು ರಕ್ಷಣೆ ಮಾಡಿದ ಮೋತಿಯ ಕಥೆ   ನಾವು ಪ್ರಾಥಮಿಕ ಹಂತದಲ್ಲಿ ಓದುವಾಗ ನಮ್ಮ ಪಠ್ಯ ವಾಗಿತ್ತು ಈ ಕಥೆಯನ್ನು ನೀವೂ ಓದಿರುತ್ತೀರಿ. ಮತ್ತೊಮ್ಮೆ ಜ್ಞಾಪಿಸಿಕೊಳ್ಳೋಣ.

ಸೋಮನಗೌಡರು ಊರಿಗೆಲ್ಲ ದೊಡ್ಡ ಶ್ರೀಮಂತರು. ಅವರು ಒಂದು ನಾಯಿಯನ್ನು ಸಾಕಿದ್ದರು. ಅದರ ಹೆಸರು ಮೋತಿ, ಮೋತಿ ಬಲು ನಂಬಿಗೆಯ ಪ್ರಾಣಿ. ಜಾಣತನಕ್ಕೆ ಅದು ಊರಿಗೆಲ್ಲ ಹೆಸರಾಗಿತ್ತು. ಗೌಡರ ಮನೆ ಊರ ಹೊರಗೆ ಇತ್ತು. ಪ್ರತಿ ರಾತ್ರಿಯೆಲ್ಲ ಎಚ್ಚರವಾಗಿದ್ದು ಮನೆ ಕಾಯುತ್ತಿತ್ತು. 


ಒಂದು ದಿನ ಆಪ್ತರ ಮದುವೆಗೆ ಗೌಡರ ಮನೆಯವರೆಲ್ಲ ನೆರೆಯೂರಿಗೆ ಹೋದರು. ಮೋತಿಯನ್ನು ಮನೆ ಕಾಯಲು ಬಿಟ್ಟು ಹೋದರು. ಗೌಡರ ಮನೆಯಲ್ಲಿ ಬಹಳ ಬಂಗಾರವಿತ್ತು, ಕಳ್ಳರು ಸಮಯ ಸಾಧಿಸುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಈ ಸಮಯ ನೋಡಿ ಗೌಡರ ಮನೆಗೆ ಹಿಂಬದಿಯಿಂದ ಕನ್ನ ಹಾಕಿದರು. ಕಳ್ಳರ ಗುಂಪಿನಲ್ಲಿ ಮೂರು ನಾಲ್ಕು ಜನರಿದ್ದರು. ಮೋತಿ ಅವರನ್ನು ನೋಡಿತು. ಆದರೆ ಬೊಗಳಲಿಲ್ಲ. ಎಲ್ಲವನ್ನು ನೋಡುತ್ತ ಮರೆಯಲ್ಲಿ ನಿಂತಿತು.

  

ಗೌಡರ ಬಂಗಾರ ಮತ್ತು ಹಣ ತುಂಬಿದ ಪೆಟ್ಟಿಗೆ ಭಾರವಾಗಿತ್ತು. ಕಳ್ಳರಿಗೆ ಅವಸರದಲ್ಲಿ ದೂರ ಒಯ್ಯಲು ಸಾಧ್ಯವಾಗಲಿಲ್ಲ. ಅವರಿಗೆ ಏನು ಮಾಡಬೇಕೆಂದು ತಿಳಿಯದಾಯಿತು. ಅಷ್ಟರಲ್ಲಿ ಬೆಳಗಾಗುತ್ತ ಬಂತು. ಬಹಳ ಯೋಚನೆ ಮಾಡಿದರು. ಕೊನೆಗೆ ಊರ ಹೊರಗಿನ ಗುಡ್ಡದ ಸಮೀಪ ಅದನ್ನು ಒಯ್ದರು. ಅಲ್ಲಿ ಅದನ್ನು ಹೂಳಿಟ್ಟರು. ಮೋತಿ ಗೊತ್ತಾಗದಂತೆ ಅವರನ್ನು ಹಿಂಬಾಲಿಸಿತು. ಹೂಳಿಟ್ಟ ಸ್ಥಳವನ್ನು ನೋಡಿತು. ಮರುದಿನ ಪೆಟ್ಟಿಗೆಯನ್ನು ಒಡೆದು ಕಳ್ಳರು ಅದನ್ನು ಹಂಚಿಕೊಳ್ಳುವವರಿದ್ದರು.


ಮದುವೆ ಮುಗಿಸಿ ಗೌಡರು ಮನೆಗೆ ಬಂದರು. ಮೋತಿ ಎಂದಿನಂತೆ ಒಡೆಯನನ್ನು ಸ್ವಾಗತಿಸಲಿಲ್ಲ. ಮೋತಿಯ ಜೋಲುಮೋರೆ ನೋಡಿ ಗೌಡರಿಗೆ ಗಾಬರಿಯಾಯಿತು, ಬಾಗಿಲು ತೆಗೆದು ಒಳಗೆ ಬಂದರು. ಹಿಂಬದಿಯ ಗೋಡೆ ಒಡೆದಿತ್ತು. ಪೆಟ್ಟಿಗೆ ಮಾಯವಾಗಿತ್ತು.


ಮೋತಿ ದೀನ ಸ್ವರದಿಂದ ಕೂಗಿತು. ಗೌಡರು ಹೊರಗೆ ಬಂದರು. ಮೋತಿ ಗೌಡರ ಧೋತರವನ್ನು ಹಿಡಿದೆಳೆಯಿತು. ಗೌಡರು ಮೋತಿಯ ಹಿಂದೆ ಹೋದರು. ಮೋತಿ ಪೆಟ್ಟಿಗೆ ಹುಗಿದ ಸ್ಥಳವನ್ನು ಕಾಲಿನಿಂದ ಕೆದರಿತು. ಗೌಡರಿಗೆ ಅನುಮಾನ ಬಂದಿತು. ತಮ್ಮ ಆಳುಗಳನ್ನು 

ಕರೆಯಿಸಿದರು. ಆ ಸ್ಥಳದಲ್ಲಿ ಅಗೆಯಿಸಿದರು. ಅಲ್ಲಿ ಅವರಿಗೆ ತಮ್ಮ ಪೆಟ್ಟಿಗೆಯು ಕಾಣಿಸಿತು. ಆಳುಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಗೌಡರ ಮನೆಗೆ ತಂದರು. ಗೌಡರು ಮೋತಿಯ ಜಾಣತನಕ್ಕೆ ಮೆಚ್ಚಿದರು. ಪ್ರೀತಿಯಿಂದ ಮೈಮೇಲೆ ಕೈಯಾಡಿಸಿದರು. ಮೋತಿಗೆ ಸಂತೋಷವಾಯಿತು.


ಇಂದಿನ ಪ್ರಸ್ತುತ ಸಮಾಜದಲ್ಲಿ ಬಹುತೇಕ ಕಡೆಯಲ್ಲಿ ಕಾಣಸಿಗುವ ಅಪ್ರಮಾಣಿಕತೆ, ಸೋಮಾರಿತನ, ಕಾರ್ಯಬದ್ದತೆಯ ಕೊರತೆ ಮುಂತಾದವುಗಳ ನೋಡಿ ಯಾಕೋ ಸೋಮನ ಗೌಡರ ಮೋತಿ ನೆ‌ನಪಾಯಿತು..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529