23 ಅಕ್ಟೋಬರ್ 2023

ಕ್ರಿಕೆಟ್ ಹನಿಗಳು...

 




ಕ್ರಿಕೆಟ್ ಹನಿಗಳು ...



ಕರಾರುವಾಕ್ ಚೆಂಡೆಸತದಿಂದ

ನ್ಯೂಜಿಲೆಂಡ್ ದಾಂಡಿಗರ 

ಬೆವರಿಳಿಸಿದರು ನಮ್ಮ ಶಮಿ|

ಒಂದು ದಿನ ಮೊದಲೇ ಭಾರತೀಯರು ಹೆಮ್ಮೆಯಿಂದ

ಅಚರಿಸಿದೆವು ವಿಜಯದಶಮಿ ||



ಐದು ಓಟಗಳ ಕೊರತೆಯಿಂದ 

ವಿರಾಟ್ ಗೆ   ದೇವರ ದಾಖಲೆ

ಮುರಿಯುವ ಅವಕಾಶ ಮಿಸ್ಸಾಯ್ತು|

ಬೇಸರವಿಲ್ಲ.ದಾಖಲೆಯಾಗಲಿದೆ.

ಈಗ ಭಾರತವು ಅಂಕ ಪಟ್ಟಿಯಲ್ಲಿ

ಮೊದಲ ಸ್ಥಾನ ಪಡೆದಾಯ್ತು|| 


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

22 ಅಕ್ಟೋಬರ್ 2023

ಬಿಲ್ಗವನ .



*ಅಂಬೆ*


(ಬಿಲ್ಗವನ)


ಓಂ

ದೇವಿ

ನಮನ

ನಿನ್ನಡಿಗೆ

ಹರಸೆಮ್ಮನು

ಕರುಣದಿಂದಲಿ 

ಭಜಿಸುವೆವು ನಿನ್ನ

ಸಹಸ್ರ ನಾಮದಿಂದಲಿ 

ಮನ್ನಿಸೆಮ್ಮ ತಪ್ಪನು 

ಸದ್ಬುದ್ದಿಯ ನೀಡು

ಒಳಿತು ಮಾಡಿಸು

ಸ್ವಾರ್ಥ ಬಿಡಿಸು

ಕೈಹಿಡಿದು

ಕಾಪಾಡು

ಅಂಬೆ 

ನೀ 


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

19 ಅಕ್ಟೋಬರ್ 2023

ಅಂಡಮಾನ್ ನ ವೀರ್ ಸಾವರ್ಕರ್ ವಿಮಾನ ನಿಲ್ದಾಣ....

 


ಭಾಗ 7

ವೀರ ಸಾವರ್ಕರ್ ವಿಮಾನ ನಿಲ್ದಾಣ...

ಅಂದು ಬೆಳಿಗ್ಗೆ ನನ್ನ ಜೀವನದ ಎರಡನೇ ವಿಮಾನ ಯಾನಕ್ಕೆ ಸಿದ್ದತೆ ಮಾಡಿಕೊಂಡು ಬೆಳಿಗ್ಗೆ ಏಳಕ್ಕೆ ನಿಲ್ದಾಣ ಪ್ರವೇಶಿಸಿ , ಬೋರ್ಡಿಂಗ್ ಪಾಸ್ ತೆಗೆದುಕೊಂಡು ನಮ್ಮ ಲಗೇಜ್ ಗಳನ್ನು ಲಗೇಜ್ ಕೌಂಟರ್ ನಲ್ಲಿ ನೀಡಿ   ಚೆಕ್ ಇನ್ ಆಗಿ ಇನ್ನೂ ಸಮಯ ಇದ್ದದ್ದರಿಂದ ನಿಲ್ದಾಣದ ಪುಸ್ತಕದ ಅಂಗಡಿ, ಕಾಫಿ ಶಾಪ್, ಇತ್ಯಾದಿ ನೋಡಲು ಒಂದು ರೌಂಡ್ ಹಾಕಿದೆ.
ಚೆನ್ನೈ ನ ಅಣ್ಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 8 .10 ಕ್ಕೆ ಹೊರಟ ನಾವು ವಿಮಾನದಲ್ಲಿ ಎರ್ ಇಂಡಿಯಾ ದವರು ನೀಡಿದ ಬೆಳಗಿನ ಉಪಹಾರ  ಸೇವಿಸಿದೆವು. ಉಪ್ಪಿಟ್ಟು ,ಇಡ್ಲಿ,  ಚಟ್ನಿ, ಸಾಂಬಾರ್, ಬನ್, ಬೆಣ್ಣೆ ಎಲ್ಲಾ ರುಚಿಕರವಾಗಿತ್ತು. ವಿಮಾನದಲ್ಲಿ ಅಂಡಮಾನ್ ನ ಟ್ರಾವೆಲ್ ಏಜೆಂಟ್ ಆದ ತಿರುಪತಿ ರವರ ಪರಿಚಯವಾಯಿತು. ಇಂಗ್ಲಿಷ್ ನಲ್ಲಿ ನಮ್ಮ ಸಂಭಾಷಣೆ ಸಾಗಿತ್ತು, ಅವರ ವೃತ್ತಿ, ಪ್ರವಾಸ, ಅಂಡಮಾನ್ ವಿಶೇಷತೆ ,ಕೃಷಿ ರಾಷ್ಟ್ರದ ಮತ್ತು ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ಮುಂದುವರೆಯಿತು. ಅಂಡಮಾನ್ ನಲ್ಲಿ ಸಹಾಯ ಬೇಕಾದರೆ ಕರೆ ಮಾಡಲು ಪೋನ್ ನಂಬರ್ ಸಹ ನೀಡಿದರು.
2 ಗಂಟೆಗಳ ವಿಮಾನ ಯಾನದ ಬಳಿಕ ವಿಮಾನ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು.
ವಿಮಾನ ಇಳಿಯುವಾಗ 65 ವರ್ಷಗಳ ನನ್ನ ಸಹಯಾನಿ "ಎಲ್ಲಾ ಸರಿ ಈ ಏರ್ ಇಂಡಿಯಾ ದವರು ಗಗನ ಸಖಿ ಯವರ ಬದಲಾಗಿ ಗಗನ ಸಖರನ್ನು ಕಳಿಸಿದ್ದು ಯಾಕೋ ನನಗೆ ಇಷ್ಟ ಆಗಲಿಲ್ಲ " ಎಂದು ಗೊನಗಿದರು!
ವಿಮಾನ ಇಳಿದು ಟರ್ಮಿನಲ್ ತಲುಪುವಾಗ ಆ ವಿಮಾನ ನಿಲ್ದಾಣದ ಬಗ್ಗೆ ತಿರುಪತಿ ರವರು ಮಾಹಿತಿ ನೀಡಿದರು.

 ಪೋರ್ಟ್ ಬ್ಲೇರ್ನ ದಕ್ಷಿಣಕ್ಕೆ 2 ಕಿಮೀ  ದೂರದಲ್ಲಿರುವ ನಿಲ್ದಾಣವೇ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲು ಇದು ದೇಶೀಯ ವಿಮಾನ ನಿಲ್ದಾಣವಾಗಿದ್ದು   "ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣ" ಎಂದು ಕರೆಯಲ್ಪಡುತ್ತಿತ್ತು. ಇದನ್ನು 2002 ರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ 11 ವರ್ಷಗಳ ಕಾಲ ನಗರದ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಲಾಗಿದ್ದ ವಿನಾಯಕ ದಾಮೋದರ್ ಸಾವರ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡಲಾಯಿತು.  

ಹಳೆಯ ಟರ್ಮಿನಲ್ 400 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಇದು 6,100 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಏರೋಬ್ರಿಡ್ಜ್‌ಗಳಿಲ್ಲದ ಎರಡು ಗೇಟ್‌ಗಳನ್ನು ಹೊಂದಿದೆ . ಟರ್ಮಿನಲ್‌ನಿಂದ ಏಪ್ರನ್‌ನಲ್ಲಿ ನಿಲುಗಡೆ ಮಾಡಿರುವ ವಿಮಾನಕ್ಕೆ ಸಾರಿಗೆಯನ್ನು ಒದಗಿಸಲು ಬಸ್‌ಗಳನ್ನು ಬಳಸಲಾಗುತ್ತದೆ.
ಎಡಭಾಗದಲ್ಲಿ ಹಳೆಯ ಟರ್ಮಿನಲ್ ಜೊತೆಗೆ ಟರ್ಮಿನಲ್ 2 ನಿರ್ಮಾಣ ಮಾಡಲಾಗಿದೆ.

ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದಾಗಿ 40,837 ಚ.ಮೀ.  ವ್ಯಾಪ್ತಿಯಲ್ಲಿ   707 ಕೋಟಿ   ರೂಪಾಯಿ ವೆಚ್ಚದಲ್ಲಿ ಪ್ರಯಾಣಿಕರ ಟರ್ಮಿನಲ್ 2019 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಿತು. ಇದು ಮೂರು ಮಹಡಿಗಳನ್ನು ಹೊಂದಿದೆ-ಒಂದು ಆಗಮನಕ್ಕೆ, ಎರಡನೆಯದು ನಿರ್ಗಮನಕ್ಕೆ ಮತ್ತು ಮೂರನೆಯದು ಕಾಯಲು. ಟರ್ಮಿನಲ್ ಒಳಗೆ, 28 ಚೆಕ್-ಇನ್ ಕೌಂಟರ್‌ಗಳು, ನಾಲ್ಕು ಕನ್ವೇಯರ್ ಬೆಲ್ಟ್‌ಗಳು ಮತ್ತು ಮೂರು ಏರೋಬ್ರಿಡ್ಜ್‌ಗಳಿವೆ. ಇದು ಪೀಕ್ ಅವರ್‌ಗಳಲ್ಲಿ 1,200  ಪ್ರಯಾಣಿಕರನ್ನು ,600 ದೇಶೀಯ ಮತ್ತು 600 ಅಂತರರಾಷ್ಟ್ರೀಯ  ನಿಭಾಯಿಸಲು ಸಾಧ್ಯವಾಗುತ್ತದೆ ಮತ್ತು ವರ್ಷಕ್ಕೆ 5 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.  ಇದು ಜೂನ್ 2023 ರಲ್ಲಿ ಪೂರ್ಣಗೊಂಡಿತು ಮತ್ತು 18 ಜುಲೈ 2023 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದರು.
ಉದ್ಘಾಟನೆಯಾದ ಮೂರು ತಿಂಗಳ ಬಳಿಕ ನೋಡಿದ ಈ ನಿಲ್ದಾಣದ ವಿನ್ಯಾಸ ಮತ್ತು ನೋಟ ನಯನ ಮನೋಹರವಾಗಿದೆ. ಪೋಟೋ ತೆಗೆದುಕೊಳ್ಳಲು ಮನಸ್ಸಾದರೂ ಭದ್ರತಾ ಕಾರಣದಿಂದ ಅಧಿಕಾರಿಗಳ ಕಟ್ಟು ನಿಟ್ಟಿನ ನಿರಾಕರಣೆಯಿಂದ ಅವರ ಅಪ್ಪಣೆ ಪಡೆದು ಕೆಲ ಪೋಟೋ ತೆಗೆದುಕೊಂಡು ಹೊರಬಂದ ನಮ್ಮನ್ನು ಸಾವರ್ಕರ್ ರವರ ಕಂಚಿನ ಪುತ್ಥಳಿ ಸ್ವಾಗತಿಸಿತು ಅದರ ಮುಂದೆ ನಿಂತು ಪೋಟೋ ಕ್ಲಕ್ಕಿಸಿಕೊಂಡ ನಮ್ಮನ್ನು ನಮ್ಮ ಟ್ರಾವೆಲ್ ಏಜೆನ್ಸಿಯ ಪ್ರಕಾಶ್ ರವರು ಸ್ವಾಗತಿಸಿ ಎನ್ ಕೆ ಲಾಡ್ಜ್ ಗೆ ಕರೆದುಕೊಂಡುಹೋದರು...

ಮುಂದುವರೆಯುತ್ತದೆ...

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529





18 ಅಕ್ಟೋಬರ್ 2023

ಹಾಯ್ಕುಗಳು...

 



ಗತಕಾಲದಿ

ಚಾಪಶರ ಕಲಿಕೆ

ವೀರಲಕ್ಷಣ.




ದೇಶಭಕ್ತರ 

ಚಾಗವ ನೆನೆಯುತ 

ಗೌರವಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


10 ಅಕ್ಟೋಬರ್ 2023

ನೇತಾಜಿ ಐಲ್ಯಾಂಡ್

 






ಜನವಸತಿ ರಹಿತ ನೇತಾಜಿ ಸುಭಾಷ್ ಚಂದ್ರ ಬೋಸ್ ಐಲ್ಯಾಂಡ್. 


ಈಗ  ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು   ಮರುನಾಮಕರಣ ಹೊಂದಿರುವ ದ್ವೀಪಕ್ಕೆ ಸಮಾನ ಮನಸ್ಕರ ತಂಡದೊಂದಿಗೆ ಅಂಡಮಾನ್ ನ ಸೆಲ್ಯುಲಾರ್ ಜೈಲ್ ನೋಡಿದ ಮರು ದಿನ  ಭೇಟಿ ನೀಡಿದೆವು.ಪೋರ್ಟ್ ಬ್ಲೇರ್ ನಿಂದ ಮಹೇಶ್ವರಿ ಎಂಬ ಕ್ರೂಸರ್ ನಲ್ಲಿ  ನಮ್ಮ  ತಂಡದೊಂದಿಗೆ  ನೇತಾಜಿ ದ್ವೀಪದೆಡೆಗೆ ಪಯಣ ಬೆಳೆಸಿದೆವು.ನಮ್ಮ ಟೂರ್ ಗೈಡ್ ಈ ದ್ವೀಪದ ವಿಶೇಷತೆಗಳು ಮತ್ತು ಇತಿಹಾಸದ ಬಗ್ಗೆ ಹೇಳುತ್ತಾ ಹೋದ ನಮ್ಮ ಕಿವಿಗಳು ಅವನ ಮಾಹಿತಿಯನ್ನು ಕೇಳುತ್ತಾ ಕಣ್ಣುಗಳು ನಿಸರ್ಗ ಸೌಂದರ್ಯ ಸವಿಯುತ್ತಿದ್ದವು .ಆಗಾಗ್ಗೆ ನಮ್ಮ ಮೊಬೈಲ್ ನಲ್ಲಿ ಅದ್ಬುತ ಪ್ರಕೃತಿ ಸೌಂದರ್ಯ ಸೆರೆಯಾಗುತ್ತಿತ್ತು.
 ಮೊದಲು ರಾಸ್ ಐಲ್ಯಾಂಡ್ ಎಂದು ಕರೆಯಲಾಗುತ್ತಿದ್ದ ಇದು  ಅಂಡಮಾನ್ ದ್ವೀಪಸಮೂಹದಲ್ಲಿರುವ ಒಂದು  ದ್ವೀಪವಾಗಿದೆ. ಇದು ದಕ್ಷಿಣ ಅಂಡಮಾನ್ ಆಡಳಿತ ಜಿಲ್ಲೆ , ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸೇರಿದೆ. ಈ    ದ್ವೀಪವು ಕೇಂದ್ರ ಪೋರ್ಟ್ ಬ್ಲೇರ್ನಿಂದ ಪೂರ್ವಕ್ಕೆ 3 ಕಿಮೀ ದೂರದಲ್ಲಿದೆ.ಇದು   ಐತಿಹಾಸಿಕ ಅವಶೇಷಗಳನ್ನು ಒಳಗೊಂಡ  ಪ್ರವಾಸಿ ಆಕರ್ಷಣೆಯಾಗಿದೆ. 

ರಾಸ್ ದ್ವೀಪಕ್ಕೆ ಸಮುದ್ರ ಸಮೀಕ್ಷಕ ಡೇನಿಯಲ್ ರಾಸ್ ಹೆಸರಿಡಲಾಗಿತ್ತು. ಡಿಸೆಂಬರ್ 2018 ರಲ್ಲಿ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಗೌರವಾರ್ಥವಾಗಿ ಇದನ್ನು ನೇತಾಜಿ ಸುಭಾಸ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ.

ಈ ದ್ವೀಪವನ್ನು ಪ್ರವಾಸಿಗರು ಕಾಲ್ನಡಿಗೆಯಲ್ಲಿ ಸಾಗುತ್ತಾ ಅಲ್ಲಲ್ಲಿ ಸಿಗುವ ಜಿಂಕೆ ಮತ್ತು ನವಿಲುಗಳ ನೋಡುತ್ತಾ ಆನಂದಿಸಬಹುದು. ವೃದ್ಧರು ಮತ್ತು ಮಕ್ಕಳಿಗೆ ಎಲೆಕ್ಟ್ರಿಕ್ ಕಾರ್ ವ್ಯವಸ್ಥೆ ಇದೆ. ಒಬ್ಬರಿಗೆ 80 ರೂಪಾಯಿಗಳನ್ನು ಪಾವತಿಸಿ ಈ ಸೌಲಭ್ಯ ಪಡೆಯಬಹುದು.
 ಬಜಾರ್, ಬೇಕರಿ, ಅಂಗಡಿಗಳ ಅವಶೇಷಗಳು,ನೀರಿನ ಸಂಸ್ಕರಣಾ ಘಟಕ , ಚರ್ಚ್ , ಟೆನ್ನಿಸ್ ಕೋರ್ಟ್ , ಪ್ರಿಂಟಿಂಗ್ ಪ್ರೆಸ್ , ಸೆಕ್ರೆಟರಿಯೇಟ್, ಆಸ್ಪತ್ರೆ , ಸ್ಮಶಾನ , ಈಜುಕೊಳ ,  ಬೃಹತ್ ಉದ್ಯಾನಗಳು ಮತ್ತು  ಮುಖ್ಯ ಆಯುಕ್ತರ ನಿವಾಸ , ಸರ್ಕಾರಿ ಭವನ , ಹಳೆಯ ಅಂಡಮಾನೀಸ್ ಹೋಮ್, ಟ್ರೂಪ್ ಬ್ಯಾರಕ್ಗಳು , ಎಲ್ಲಾ ಶಿಥಿಲಾವಸ್ಥೆಯಲ್ಲಿದ್ದು, ಹಳೆಯ ಬ್ರಿಟಿಷ್ ಆಡಳಿತವನ್ನು ನೆನಪಿಸುತ್ತದೆ.    

1880 ರ ದಶಕದ ಉತ್ತರಾರ್ಧದಲ್ಲಿ ರಾಸ್ ಐಲ್ಯಾಂಡ್ ಲಿಟರರಿ ಎಂಬ ಸಣ್ಣ  ನಿಯತಕಾಲಿಕವನ್ನು ಆರಂಭಿಸಿದ.  ಈ ಪ್ರದೇಶದ ಮೊದಲ ವಸಾಹತುಶಾಹಿ ದಿನಗಳ ಕಥೆಗಳು ಮತ್ತು ಆತ್ಮಚರಿತ್ರೆಗಳನ್ನು ಒಳಗೊಂಡ   ಪ್ರಕಟಣೆ ಮಾಡಲಾಗುತ್ತಿತ್ತು. ಇವು  ಇದೇ  ದ್ವೀಪದ ಉತ್ತರದ ತುದಿಯಲ್ಲಿರುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಪ್ರಿಂಟ್ ಆಗುತ್ತಿದ್ದವು.ಇಂದು ಅದರ ಶಿಥಿಲವಾದ ಕಟ್ಟಡ ನೋಡಬಹುದು.  

ದ್ವೀಪದ ಉತ್ತರದ ತುದಿಯವರೆಗೆ ಒಂದು ಮಾರ್ಗವಿದೆ, ಅಲ್ಲಿ ಹೊಸ ಕಾಂಕ್ರೀಟ್ 10 ಮೀ ಎತ್ತರದ ವೃತ್ತಾಕಾರದ ಲೈಟ್ಹೌಸ್ ಟವರ್ ಅನ್ನು 1977 ರಲ್ಲಿ ನಿರ್ಮಿಸಲಾಗಿದೆ. ತೀರದ ಕಡೆಯಿಂದ ಸುಮಾರು 50 ಮೀಟರ್  ದೂರದಲ್ಲಿರುವ ಬಂಡೆಯ ಮೇಲೆ. ಕಡಿಮೆ ಅಲೆಗಳಿರುವ ಸಂದರ್ಭದಲ್ಲಿ  ಗೋಪುರವನ್ನು ತಲುಪಬಹುದು. ನಾವು ಹೋದಾಗ ಕಡಿಮೆ ಅಲೆಗಳಿದ್ದ ಪರಿಣಾಮ ಲೈಟ್ ಹೌಸ್ ತಲುಪಿ ಫೋಟೋಗಳನ್ನು ಕ್ಲಿಕ್ ಮಾಡಿಕೊಂಡೆವು.  ಈ ಲೈಟ್ಹೌಸ್ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ  ಬ್ಯಾಟರಿಗಳನ್ನು ಚಾರ್ಜ್ ಮಾಡಲು ಫೋಟೋ ವೋಲ್ಟಾಯಿಕ್ ಪ್ಯಾನೆಲ್ಗಳನ್ನು ಪರಿಚಯಿಸಲಾಗಿದೆ ಎಂಬ ಮಾಹಿತಿಯನ್ನು ಗೈಡ್ ನೀಡಿದನು. 

ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪವು ದಟ್ಟವಾದ ಕಾಡುಗಳನ್ನು ಹೊಂದಿದೆ.  ಪ್ರವಾಸಿಗರ ಹೊರತಾಗಿ ಜನವಸತಿಗೆ ಇಲ್ಲಿ ಅವಕಾಶ ಕೊಟ್ಟಿಲ್ಲ.
ದ್ವೀಪದ ಅದ್ಭುತ ಪ್ರಕೃತಿ ಸೌಂದರ್ಯ ಸವಿಯಲು,ಮಚ್ಚೆಯುಳ್ಳ ಜಿಂಕೆಗಳು ಮತ್ತು ನವಿಲುಗಳನ್ನು ನೋಡಲು  ತಾಳೆ ಮತ್ತು ತೆಂಗಿನ ಮರಗಳ ಸೊಬಗು ಸವಿಯಲು ನೀವೂ  ಒಮ್ಮೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪಕ್ಕೆ ಬಂದು ಬಿಡಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529