25 ಸೆಪ್ಟೆಂಬರ್ 2022

ವಿ ವಿ ಸಾಗರದ ಕೋಡಿ


 


ಪ್ರವಾಸ ೨ 

ವಿ ವಿ ಸಾಗರದ  ಕೋಡಿ.


ನನ್ನಣ್ಣ ಪದೇ ಪದೇ ಫೋನ್ ಮಾಡಿ ಮಾರಿಕಣಿವೆ ನೋಡಲು ಯಾವಾಗ ಬರ್ತಿರಾ? ಎನ್ನುತ್ತಿದ್ದ  ನನಗೆ ಹೋಗಲು ಆಸೆಯಿದ್ದರೂ ಮಕ್ಕಳ ಶಾಲೆ, ಪರೀಕ್ಷೆ, ಲ್ಯಾಬ್ ಹೀಗೆ ಪದೇ ಪದೇ ಮುಂದೂಡಿ ಕೊನೆಗೆ ನಾನೊಬ್ಬನೇ ಶನಿವಾರದ ಶಾಲೆಯ ಅವಧಿಯ ನಂತರ ಕಾರಿನ ಸ್ಟೇರಿಂಗ್ ಹಿಡಿದು ತುಮಕೂರಿನಿಂದ  ಹೈವೆಯಲ್ಲಿ ದುರ್ಗದ ಕಡೆ ಪಯಣ ಆರಂಭಿಸಿಯೇಬಿಟ್ಟೆ .ಮಾರ್ಗ ಮಧ್ಯ ಅಣ್ಣ ಕರೆ ಮಾಡಿ ತಾನು ಮಾರಿಕಣಿವೆಯ ಬಳಿ ಬಂದಿರುವುದಾಗಿ ತಿಳಿಸಿದ. ಹಿರಿಯೂರಿನಲ್ಲಿ ಕಾರ್ ನಿಲ್ಲಿಸಿ ವಿಶ್ರಾಂತಿ ಪಡೆದು ಟೀ ಕುಡಿದು ನಾನು ಮೊದಲು ಶಿಕ್ಷಕನಾಗಿ ಕೆಲಸ ಮಾಡಿದ ಹುಚ್ಚವ್ಬನ ಹಳ್ಳಿಯ ಶಾಲೆಯ ನೋಡಿ.ಹಳೆಯ ನೆನಪುಗಳ ಮೆಲುಕು ಹಾಕುತ್ತಾ  ಮಾಯಸಂದ್ರ ,ಬೀರೇನಹಳ್ಳಿ ,ಭರಂಗಿರಿ ದಾಟಿ ಮಾರಿಕಣಿವೆಗೆ ಸೇರಿದಾಗ ಬಾಲ್ಯದಲ್ಲಿ ನೋಡಿದ ಜಾತ್ರೆಯ ಜನದ ನೆನಪಾಯಿತು. ವಾಹನಗಳ ಸ್ಲೋ ಮೂವಿಂಗ್ ಟ್ರಾಪಿಕ್ ನಲ್ಲಿ ಕಣಿವೆ ಮಾರಮ್ಮನ ದೇವಾಲಯ ಸೇರಿದ್ದು ಹರಸಾಹಸ ಮಾಡಿದಂತಾಗಿತ್ತು. 

ಅಣ್ಣ ಅತ್ತಿಗೆಯ ಜೊತೆಗೂಡಿ ಕಣಿವೆ ಮಾರಮ್ಮನ ದರ್ಶನ ಪಡೆದು ಬೆಟ್ಟದ ಮೇಲೇರಿದಾಗ ಹೊಟ್ಟೆ ತಾಳ ಹಾಕುತ್ತಿತ್ತು . ಅಮ್ಮ ಕಟ್ಟಿಕೊಟ್ಟಿದ್ದ  ನನ್ನ ಫೇವರಿಟ್ ಅನ್ನ ಮೊಸರ ಬುತ್ತಿಯ ಜೊತೆಯಲ್ಲಿ ಅಣ್ಣ ಆಗ ತಾನೆ ತಂದ ಬಿಸಿ ಬೋಂಡಾದ ಜೊತೆಯಲ್ಲಿ 89 ವರ್ಷಗಳ ನಂತರ ಸಂಪೂರ್ಣವಾಗಿ ತುಂಬಿದ ವಿ ವಿ ಸಾಗರದ ನೀರು ನೋಡುತ್ತಾ  ತಿನ್ನಲು ಶುರು ಮಾಡಿದೆವು .ಸ್ವರ್ಗ ಮೂರೇ ಗೇಣು! 


 1933ರ ಬಳಿಕ  ಮಾರಿ ಕಣಿವೆ ಡ್ಯಾಂ ಕೋಡಿ ಬಿದ್ದಿದ್ದು, ಅಂದು ಶನಿವಾರ ರಜೆ ದಿನವಾಗಿದ್ದರಿಂದ ಡ್ಯಾಂ ನೋಡಲು ಜನಸಾಗರವೇ ಹರಿದು ಬಂದಿತ್ತು.

ಬೆಳಗ್ಗೆಯಿಂದಲೇ ಪ್ರವಾಸಿಗರು ಜಲಾಶಯದ ಕಡೆ ಮುಖ ಮಾಡಿದ್ದು, ಜಲಾಶಯ, ಮಾರಿ ಕಣಿವೆ ಮಾರಮ್ಮ ದೇವಸ್ಥಾನ, ಪಾರ್ಕ್, ಪ್ರವಾಸಿ ಮಂದಿರ, ಕೋಡಿ ಬಿದ್ದಿರುವ ಜಾಗ ಹಾಗೂ ಹಾರನ ಕಣಿವೆ ರಂಗನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಡ್ಯಾಂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪ್ರವಾಸಿಗರೇ ತುಂಬಿ ತುಳುಕುತ್ತಿದ್ದರು.


ಪ್ರವಾಸಿಗರು ದೂರದ ಊರುಗಳಿಂದ ಜಲಾಶಯ ನೋಡಲು ಬಂದಿದ್ದರು. ಕುಟುಂಬದ ಸದಸ್ಯರು ಮತ್ತು ಮಕ್ಕಳು, ಸ್ನೇಹಿತರು, ಪ್ರೇಮಿಗಳು ಸೇರಿದಂತೆ ಮತ್ತಿತರರು ಜಲಾಶಯಕ್ಕೆ ಆಗಮಿಸಿದ್ದರು. ಅಂದಾಜು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಜಲಾಶಯ ನೋಡಲು ಬಂದಿದ್ದರು. ಆಟೋ, ಕಾರು, ಬೈಕ್, ಬಸ್, ಇನ್ನಿತರ ವಾಹನಗಳಲ್ಲಿ  ಚಿತ್ರದುರ್ಗ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಮತ್ತಿತರರ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಜಲಾಶಯದ ಸರ್ಕಲ್‌ನಿಂದ, ಮಾರಿಕಣಿವೆ ಗ್ರಾಮ, ಕೋಡಿ ಬೀಳುವ ಜಾಗ ಹಾಗೂ ಹೊಸದುರ್ಗ ರಸ್ತೆ ಸೇರಿದಂತೆ ಸುಮಾರು 3 ಕಿಲೋ ಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಜಾಮ್ ಉಂಟಾಗಿತ್ತು.   ಸಿಂಗಲ್ ರಸ್ತೆ ಹಾಗೂ ಚಿಕ್ಕ ರಸ್ತೆ ಇರುವುದರಿಂದ ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜಲಾಶಯದ ನೀರು ಕೋಡಿ ಹೋಗುವ ಜಾಗದ ನೀರಿನಲ್ಲಿ ಪ್ರವಾಸಿಗರು ನೆನೆದು ಮಿಂದೆದ್ದರು. ಕೆಲವರು ಕೈಕಾಲು ಮುಖ ತೊಳೆದರೆ, ಇನ್ನು ಕೆಲವರು ಸ್ನಾನವನ್ನೇ ಮಾಡಿದರು. ಇನ್ನು ಕೆಲವರು ಸೆಲ್ಫೀ, ಫೋಟೋ, ವೀಡಿಯೋ ತೆಗೆಯುವುದರಲ್ಲಿ ನಿರತರಾಗಿದ್ದರು. ಸಾಮಾನ್ಯವಾಗಿ ಮೊದಲು ಯಾವುದಾದರೂ ಪ್ರವಾಸಿ ಸ್ಥಳಗಳನ್ನು ನೋಡುವಾಗ ನಾನು ಪೋಟೊ ತೆಗೆಯಲು ಹೋದರೆ " ಅದೇನ್ ಪೋಟೋ ಹುಚ್ ನಿನಿಗೆ ,ಬಾರಪ್ಪ ಸಾಕು" ಎನ್ನುತ್ತಿದ್ದ ನನ್ನಣ್ಣ " ಇಗ ಇಲ್ಲೊಂದು ಪೋಟಾ ಹೊಡ್ಕ, ಇಗ ಇಲ್ಲಿ ತೆಗಿ, ಬಾರೆ ಮಂಗಳ " ಎಂದು ಅತ್ತಿಗೆಯ ಜೊತೆಗೆ ಪೋಸ್ ಕೊಟ್ಟು ನಗುತ್ತಾ ನಿಂತು ಬಿಡುತ್ತಿದ್ದ ಸಾಲದ್ದಕ್ಕೆ " ಎಲ್ಲಿ ತೋರ್ಸು  ಎಂಗ್ ಬಂದೈತೆ ಪೋಟಾ? " ಎಂದು ಚೆಕ್ ಮಾಡುತ್ತಿದ್ದ. 


ಡ್ಯಾಂ ಮೇಲೆ ಪೋಲಿಸ್ ಕಾವಲಿತ್ತು ಯಾರನ್ನೂ ಬಿಡುತ್ತಿರಲಿಲ್ಲ ದೂರದಿಂದಲೇ ಫೋಟೋ ತೆಗೆದುಕೊಂಡು ಬರುವಾಗ ಯಾರೋ ಡ್ಯಾಂ ಬಗ್ಗೆ  ಮಾತನಾಡು‌ವುದು ಕಿವಿಯ ಮೇಲೆ ಬಿತ್ತು ಆಗ ನಾನು ಓದಿದ ವಿಷಯ ನೆನಪಾಯಿತು.


ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ ವೇದಾ ಎಂಬ ನದಿ ಕಡೂರಿನ ಬಳಿ ಅವತಿ ನದಿಯನ್ನು ಸೇರುತ್ತದೆ. ಅವು ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಚಿತ್ರದುರ್ಗದ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಡ್ಯಾಂ.

ಇನ್ನೂ ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು 1897ರಲ್ಲಿ ಮೈಸೂರು ಮಹಾ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಿಸಿತ್ತು. ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ನಿರ್ಮಿಸಿ 1907ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರು. ಅಲ್ಲದೇ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿ ವಿಲಾಸ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.

89 ವರ್ಷಗಳ ಬಳಿಕ ಬಹುತೇಕ ಭರ್ತಿಯಾದ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬಿದ್ದಿರುವುದು ಜನತೆಯಲ್ಲಿ ಅತೀವ ಸಂತಸ ಉಂಟುಮಾಡಿದೆ.


ನೀವು ಈ ಕೌತುಕ ಕಣ್ತುಂಬಿಕೊಳ್ಳಲು 

ಜಲಾಶಯ ದೃಶ್ಯ ಸವಿಯಲು ಒಮ್ಮೆ ಭೇಟಿ ನೀಡಿ.

ಹೊಸಬರಿಗೆ  ಈ ಜಲಾಶಯ ತಲುಪಲು ಮಾರ್ಗ ಹೀಗಿದೆ 

 ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ, 21 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಬಂದರೆ ಜಲಾಶಯವನ್ನು ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಜಲಾಶಯವನ್ನು ಪ್ರವೇಶಿಸಬಹುದು. ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಾಣಿ ವಿಲಾಸಪುರ ಕ್ರಾಸ್ ಮೂಲಕ ಬಂದು ಡ್ಯಾಂ ವೀಕ್ಷಿಸಬಹುದಾಗಿದೆ. 


ನಾವು ಡ್ಯಾಂ ನೋಡಿದ ಬಳಿಕ ಕೋಡಿ ಬಿದ್ದ ಸ್ಥಳಕ್ಕೆ ಹೊರಟೆವು ಅಲ್ಲಿಯೂ ಜನಜಂಗುಳಿ ,ಆಗ ತಾನೆ ಶುರುವಾದ ತುಂತುರು ಮಳೆ ,ಹಸಿರೊದ್ದ ಗುಡ್ಡ ಇವು ಮಲೆನಾಡ ದೃಶ್ಯಗಳನ್ನು ನೆನಪು ಮಾಡಿದವು. ನಂತರ ಹಾರನ ಕಣಿವೆ ರಂಗನಾಥಸ್ವಾಮಿಯ  ದರ್ಶನ ಪಡೆದು ದೇವಾಲಯದ ಹಿಂಭಾಗಕ್ಕೆ ಬಂದು ನೋಡಿದಾಗ ವಾಣಿ ವಿಲಾಸ "ಸಾಗರ " ನಿಜವಾಗಿಯೂ ಅನ್ವರ್ಥವಾಗಿ ಬಯಲು ಸೀಮೆಯಲ್ಲಿ ಸಾಗರ ನೋಡಿದ ಅನುಭವವಾಯಿತು.  ನಿಧಾನವಾಗಿ ಸೂರ್ಯ ದೇವ ಸಾಗರದಲ್ಲಿ ಲೀನವಾದ .ಮಳೆಯ ಮಧ್ಯದಲ್ಲೇ ಬೇವಿನಹಳ್ಳಿಯ ಕಡೆ ಹೊರಟೆವು . ಬೇವಿನಹಳ್ಳಿಗೆ ಸಂಪರ್ಕ ರಸ್ತೆ  ನೀರಿನಿಂದ  ಮುಳುಗಡೆಯಾದ ಪರಿಣಾಮವಾಗಿ ಕಾಡಿನ ದಾರಿಯಲ್ಲಿ ಕಾರ್ ಚಲಾಯಿಸುವ ಸಾಹಸ ಮಾಡುತ್ತಾ ಹೊರಟೆ. ಕಾರ್ ನ ಕೆಳ ಭಾಗಕ್ಕೆ ಕಡ್ಡಿಗಳು ಪಟ ಪಟ ಬಡಿಯುವಾಗ ಕೆಲವೊಮ್ಮೆ ಆತಂಕವಾಗುತ್ತಿತ್ತು.  ಏಳು ಕಿಲೋಮೀಟರ್ ಕ್ರಮಿಸಲು ಅರ್ಧ ಗಂಟೆಯಾಗಿತ್ತು. ಅಂತೂ ಬೇವಿನಳ್ಳಮ್ಮನ ಗುಡ್ಡ ಏರಿ ತಾಯಿಯ ದರ್ಶನ ಪಡೆದಾಗ ರಾತ್ರಿ ಏಳು ಗಂಟೆ ! ಅಲ್ಲಿಂದ ವಿ ವಿ ಸಾಗರದ ಅದ್ಭುತವಾದ ದೃಶ್ಯಗಳನ್ನು ನೋಡುವ ನಮ್ಮ ಆಸೆ ಈಡೇರಲಿಲ್ಲ. ಅದೇ ದುರ್ಗಮ ದಾರಿಯಲ್ಲಿ ಹಿಂತಿರುಗಿ ಮಾಡದಕೆರೆಯ ಮಾರ್ಗವಾಗಿ ಚೌಡಗೊಂಡನಹಳ್ಳಿಯ ನಮ್ಮ   ಮನೆ ತಲುಪಿದಾಗ ರಾತ್ರಿ  ಎಂಟೂವರೆ.ಅಮ್ಮ ಬಿಸಿ ಬಿಸಿ ಮುದ್ದೆ ಮಾಡಿಕೊಟ್ಟರು ಹೊಟ್ಟೆ ತುಂಬಾ ಮುದ್ದೆ ಉಂಡು ನಾನು ಮಲಗಲು ಸಿದ್ದನಾದೆ ನನ್ನಣ್ಣ ಮೊಬೈಲ್ ನಲ್ಲಿ ಇದ್ದ ಮಾರಿಕಣಿವೆಯ ಫೋಟೋಗಳನ್ನು ಮತ್ತೊಮ್ಮೆ ನೋಡಿ ಖುಷಿಪಡುತ್ತಿದ್ದ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

24 ಸೆಪ್ಟೆಂಬರ್ 2022

ಜಿ ಎಸ್ ಬಸವರಾಜು

 



ನಾನು ಕಂಡ ಸಂಸದ ಜಿ ಎಸ್ ಬಸವರಾಜ್.


ಸರಳ ಸಜ್ಜನ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಕಾಣಸಿಗುವುದೇ ಅಪರೂಪ. ನಮ್ಮ ಮಧ್ಯ ಇರುವ ಜಿ ಎಸ್ ಬಸವರಾಜು ರವರು ಇದಕ್ಕೆ ಅಪವಾದ .  ಪಂಚಗೆಲುವುಗಳನ್ನು ಪಡೆದು ಲೋಕಸಭೆಗೆ ಆಯ್ಕೆಯಾದ ಬಸವರಾಜು ರವರು ಪ್ರಸ್ತುತ ಲೋಕಸಭಾ ಸದಸ್ಯರೂ ಕೂಡಾ ಹೌದು. ಅವರ ನೇರ ಮತ್ತು ದಿಟ್ಟ ಮಾತುಗಳು ನನಗೆ ಬಹಳ ಇಷ್ಟ . ಸಮಾರಂಭಗಳಲ್ಲಿ ಆಡಂಬರದ ಪದಗಳ ಬಳಕೆ ಮಾಡದೆ ಸಾಮಾನ್ಯ ಜನರಿಗೆ ಅರ್ಥವಾಗುವ ಅವರ ಮಾತುಗಳು  ಹಳ್ಳಿಯ ಜನರಿಗೆ ಅಚ್ಚುಮೆಚ್ಚು ಎಂದೇ ಹೇಳಬೇಕು. ಅವರ ಮನೆಯ ಮುಂದೆ ಪ್ರತಿದಿನ ಮುಂಜಾನೆ ಕಂಡು ಬರುವ ಜನರ ಗುಂಪು,ಹಾಗೂ ಆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯು ಜನರ ಮನ ಗೆದ್ದಿದೆ. 


"ನನ್ನ ಮಗಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶ ಬೇಕಾಗಿತ್ತು. ಬಸವರಾಜಣ್ಣ ಅವರ ಬಳಿ ಹೋಗಿ ಎಂ .ಪಿ ಕೋಟಾ ಅಡಿಯಲ್ಲಿ ಸೀಟು ಕೊಡಿಸಲು ಕೇಳಿದಾಗ ತಕ್ಷಣವೇ ಪತ್ರ ಕೊಟ್ಟರು.ನನ್ನ ಮಗಳೀಗ  ಕೆ ವಿ ನಲ್ಲಿ ಮೂರನ ತರಗತಿಯಲ್ಲಿ ಓದುತ್ತಿದ್ದಾಳೆ. ನಾನು ಯಾವಾಗಲೂ ಬಸವರಾಜಣ್ಣ ನವರಿಗೆ ಚಿರ ಋಣಿಯಾಗಿರುವೆ "  ಎಂದು ತಮಗೆ ಒಳಿತು ಮಾಡಿದ ಜಿ ಎಸ್ ಬಿ ರವರ ಬಗ್ಗೆ  ತುಮಕೂರು ನಗರದ ಗೋಕುಲ ಬಡಾವಣೆಯ ನಿವಾಸಿಗಳಾದ ಮುನಿ ಬಸವರಾಜು ರವರ ಮಾತುಗಳನ್ನು ಕೇಳಿದಾಗ  ಜಿ ಎಸ್ ಬಿ ರವರ ಬಗ್ಗೆ ಗೌರವ ಬರದೇ ಇರದು. 

ಗಂಗಸಂದ್ರ ಸಿದ್ದಪ್ಪ ಬಸವರಾಜ್ ರವರು ಜಿ ಎಸ್ ಬಿ ಆಗಿ ಬೆಳೆದದ್ದೇ ಒಂದು ರೋಚಕ ಕಥೆ.ಸ್ವಾತಂತ್ರ್ಯಕ್ಕೆ ಪೂರ್ವದಲ್ಲಿ ಅಂದರೆ  1941ರಲ್ಲಿ ಜನಿಸಿದ ಅವರು 1960 ರಲ್ಲಿ  ಪಿ ಎಲ್ ಡಿ ಬ್ಯಾಂಕ್ ಸದಸ್ಯರಾಗಿ   ರಾಜಕೀಯ ಪಾದಾರ್ಪಣೆ ಮಾಡಿದರು .ಎ.ಪಿ ಎಂ ಸಿ ಅಧ್ಯಕ್ಷರಾದಾಗ ರಾಜಕೀಯ ಪಕ್ಷಗಳು ಅವರ ಸೇವೆಯನ್ನು ಗಮನಿಸಿದವು. ಜನರ ಮನಗೆಲ್ಲುತ್ತಾ ಲೋಕ ಸಭಾ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದೇ ಹೇಳಬಹುದು. 

  2019 ರಲ್ಲಿ ತುಮಕೂರು ಲೋಕಸಭಾ  ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಅವರು ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ನೊಂದಿಗೆ ಪ್ರಾರಂಭಿಸಿದರು ಮತ್ತು ಈಗ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ . ಅವರು 2019 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15,000 ಮತಗಳ ಅಂತರದಿಂದ ಮಾಜಿ ಪ್ರಧಾನಿ ಶ್ರೀ ಎಚ್ ಡಿ  ದೇವೇಗೌಡರನ್ನು ಸೋಲಿಸಿದರು . ಅವರು ತುಮಕೂರಿನಿಂದ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ, 1984, 1989 ಮತ್ತು 1999 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿ, ಮತ್ತು 2009 ಮತ್ತು 2019 ರಲ್ಲಿ ಬಿಜೆಪಿ ಸದಸ್ಯರಾಗಿ. ಆಯ್ಕೆಯಾಗಿ ಈಗಲೂ ಜನಸೇವೆಯಲ್ಲಿ ತೊಡಗಿದ್ದಾರೆ.   


ಸಿದ್ದರಬೆಟ್ಟದ ಶ್ರೀರಂಭಾಪುರಿ ಶಾಖಾಮಠದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿಗಳು ಜಿ ಎಸ್ ಬಿ  ರವರ ಸಾಧನೆಗಳ ಬಗ್ಗೆ ಮುಕ್ತ ಕಂಟದಿಂದ ಹೀಗೆ ಶ್ಲಾಘಿಸುತ್ತಾರೆ. "ತುಮಕೂರು ಜಿಲ್ಲೆಯಲ್ಲಿ ಯಾವುದೇ ನದಿಗಳು ಇಲ್ಲದಿದ್ದರೂ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿದ್ದರೆ ಅದಕ್ಕೆ ಜಿ.ಎಸ್.ಬಸವರಾಜು ಕಾರಣ.ಇಂದಿನ ಎತ್ತಿನಹೊಳೆ ಯೋಜನೆಯ ಹಿಂದೆ ಜಿ.ಎಸ್.ಬಸವರಾಜು ಅವರ ಪಾತ್ರ ಮಹತ್ವದ್ದಾಗಿದೆ.ಧಾರ್ಮಿಕವಾಗಿ,ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಲವಾರು ಮಹತ್ವದ ಕಾರ್ಯಗಳನ್ನು ಜಿ.ಎಸ್.ಬಸವರಾಜು ಮಾಡಿದ್ದು, ಇವರ ಈ ಸೇವೆಯನ್ನು ಪರಿಗಣಿಸಿಯೇ ಶ್ರೀರಂಭಾಪುರಿ ಕ್ಷೇತ್ರ ಮಾನ್ಯರಿಗೆ ಶ್ರೀರೇಣುಕಾ ಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ".


ಜನಪರ ಕಾಳಜಿಯ ಜಿ ಎಸ್ ಬಿ  ರವರು ಇನ್ನೂ ಹೆಚ್ಚಿನ ಜನಸೇವೆ ಮಾಡಲು ದೇವರು ಅವರಿಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ಮನದುಂಬಿ ಹಾರೈಸುವೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529.

23 ಸೆಪ್ಟೆಂಬರ್ 2022

ನಿನ್ನದೇ ಕನವರಿಕೆ

 #ಕನಸಲು_ನಿನ್ನದೆ_ಕನವರಿಕೆ 


ನನ್ನ ಪ್ರೀತಿಯ ಆಳ ತಿಳಿಸಲು

ಇನ್ನೇನು ಸಬೂತು ಕೊಟ್ಟು

ಮಾಡಲಿ ಮನವರಿಕೆ |

ಹಗಲಿನಲ್ಲೂ, ಇರುಳಿನಲ್ಲೂ 

ಕನಸಿನಲ್ಲೂ ನಿನ್ನದೆ ಕನವರಿಕೆ ||


#ಸಿಹಿಜೀವಿಯ_ಹನಿ 

21 ಸೆಪ್ಟೆಂಬರ್ 2022

ಅಮಾಯಕ

 ಎಲ್ಲೋ ಒಂದೇ ಕೂದ್ಲ ಸಿಕ್ಕೈತಿ

ಅಂಗಿ ಸ್ವಲ್ಪು ಲಿಪ್ಸ್ಟಿಕ್ ಹತ್ತೈತಿ

ಅಷ್ಟಕ್ಕ ಅನುಮಾನ ಪಡ್ತಿ ಯಾಕ |

ಇನ್ನೊಮ್ಮೆ ಇಂಗಾಗಲ್ಲ 

ನಂಬು ನಾ ಅಮಾಯಕ ||