16 ಆಗಸ್ಟ್ 2022

ಎಲೆ ಮರೆಯ ಅಲರು ...


 


ವಿಮರ್ಶೆ ೫೧

ಎಲೆ ಮರೆಯ ಅಲರು.


ಬೆಳಗೆರೆ ಕೃಷ್ಣಶಾಸ್ತ್ರಿಗಳ ಯೇಗ್ದಾಗೆಲ್ಲಾ ಐತೆ ಪುಸ್ತಕ ಓದಿದ ಮೇಲೆ ಅವರ ಇತರ ಕೃತಿಗಳನ್ನು ಓದುವ ಹಂಬಲವಾಯಿತು.ಅದರಂತೆ ಮೊನ್ನೆ ಎಲೆ ಮರೆಯ ಅಲರು ಎಂಬ ಅವರ ಕೃತಿಯನ್ನು ಓದಿದೆ.

ಓದುತ್ತಾ ಬೆಂಗಳೂರು, ತಳಕು, ಆಂದ್ರ ಹೆಗ್ಗೆರೆ ,ಕಾಪರಹಳ್ಳಿ ,ಬೆಳಗೆರೆ ಹೀಗೆ ನಾನಾ ಊರುಗಳ ಸುತ್ತಿದ ಹಾಗೂ ನಾನಾ ವ್ಯಕ್ತಿಗಳ ವ್ಯಕ್ತಿತ್ವದ ಪರಿಚಯವಾಯಿತು.ಕೃಷ್ಣ ಶಾಸ್ತ್ರಿಗಳ ನಿರೂಪಣೆ ಮತ್ತು ಬರವಣಿಗೆಯ ಶೈಲಿ ಓದುಗರನ್ನು ಸೆಳೆಯುತ್ತದೆ. ಒಂದೇ ಸಿಟ್ಟಿಂಗ್ ನಲ್ಲಿ ಕೂತು ಓದುವಂತೆ ಮಾಡುತ್ತದೆ.

ಸ್ವಿಮ್ಮಿಂಗ್ ನಾರಾಯಣ ರವರು ಅವರಿಗೆ ಬೆಂಗಳೂರಿನಲ್ಲಿ ಆಶ್ರಯದಾತರಾಗಿ ಅನ್ನದಾತರಾಗಿ ಸಹಕಾರ ನೀಡಿದ್ದನ್ನು ತಮ್ಮ ಅಗ್ರ ಲೇಖನದಲ್ಲಿ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾ ನಾರಾಯಣ ರವರ ವ್ಯಕ್ತಿತ್ವದ ಪರಿಚಯ ಮಾಡಿದ್ದಾರೆ.

ನಾವೂ ನಾಟಕವಾಡಿದ್ದು ಎಂಬ ಅಧ್ಯಾಯದಲ್ಲಿ ಹುಡುಗಾಟಿಕೆಗೆಂದು ಆಡಿದ ಮಾತು ನಿಜವಾಗಿ ಶಾಲೆಯ ಶಿಕ್ಷಕರ ಮತ್ತು ಹಿರಿಯರ ಬೆಂಬಲದಿಂದ ಯಶಸ್ವಿಯಾಗಿ ಅದರಿಂದ ಬಂದ ಹಣವನ್ನು ವಿದ್ಯಾರ್ಥಿಗಳ ಮಧ್ಯಾಹ್ನದ ಉಪಾಹಾರಕ್ಕೆ ಬಳಸುವ ಅವರ ಮುಂದಾಲೋಚನೆ ಮತ್ತು ಸಹಾಯ ಮಾಡುವ ಗುಣಕ್ಕೆ ಹಿಡಿದ ಕನ್ನಡಿ ಎನ್ನಬಹುದು ಇದು ಮುಂದೆ ಬೆಳಗೆರೆಯಲ್ಲಿ ಶಾರದಾ ಶಾಲೆ ಆರಂಭದಿಂದ ಹಿಡಿದು  ಇತರ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರಕಟವಾಗಿದ್ದನ್ನು ಕಾಣಬಹುದು.

ಈ ಪುಸ್ತಕದಲ್ಲಿ ಹೆಗ್ಗರೆಯಲ್ಲಿ ಅವರು ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಸಂಧರ್ಭದಲ್ಲಿ ದಾನಿಗಳಿಂದ ಹಣ ಸಂಗ್ರಹಿಸಿ ಶಾಲಾ ಕೊಠಡಿಗಳು ಮತ್ತು ರಂಗಮಂದಿರ ನಿರ್ಮಾಣ ಮಾಡಿದ ವಿವರಗಳು ಮತ್ತು ಕಬ್ಬಿಣದ ಅಂಗಡಿಯ ಮುಸ್ಲಿಂ ಮಾಲಿಕನ ನಡುವಿನ ಸಂಭಾಷಣೆ ಮತ್ತು ಸಂಬಂಧ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಸರ್ಕಾರದ ಹಣದಲ್ಲಿ ಎಷ್ಟು ಪರ್ಸೆಂಟ್ ಕಮಿಷನ್  ಹೊಡೆಯೋಣ ಎಂದು ಯೋಚಿಸುವ ಕಂಟ್ರಾಕ್ಟರ್ ಮತ್ತು ಅಧಿಕಾರಿಗಳು ನಮ್ಮ ಕೃಷ್ಣ ಶಾಸ್ತ್ರಿಗಳ ಆದರ್ಶ ರೂಢಿಸಿಕೊಂಡು ಸೇವಾ ಮನೋಭಾವ ಹೊಂದಬೇಕಿದೆ.ಅದು ಅಸಾಧ್ಯ ಕನಸು ಎಂಬುದು ಸಹ ನನಗೆ ಮನವರಿಕೆ ಆಗಿದೆ.ಹೆಗ್ಗೆರೆಯ ನಮ್ಮ ಬಂಧುಗಳ ಮನೆಗೆ ಹೋದಾಗ ಈಗಲೂ ಗಟ್ಟಿಮುಟ್ಟಾಗಿ ನಿಂತ ಶಾಲಾಕೊಠಡಿಗಳು ಮತ್ತು ರಂಗಮಂದಿರ ನೋಡಿ ಮನದಲ್ಲೇ ಕೃಷ್ಣ ಶಾಸ್ತ್ರಿಗಳಿಗೆ ಒಂದು ನಮನ ಸಲ್ಲಿಸುವೆ.   

  ಟಿ ಎಸ್  ವೆಂಕಣ್ಣಯ್ಯನವರ ಆದರ್ಶ ಮತ್ತು ನಮ್ಮ ಒಡೆಯರ ಉನ್ನತವಾದ ಆಡಳಿತ ಚಿಂತನೆ ನಮಗೆ ಈ ಪುಸ್ತಕದಲ್ಲಿ ಶಾಸ್ತ್ರಿರವರು ಕಟ್ಟಿಕೊಟ್ಟಿದ್ದಾರೆ.   ವೆಂಕಣ್ಣಯ್ಯನವರು ಮಹಾರಾಜರ ಮಗನ ಕಲಿಕೆ ಗಣನೀಯವಾಗಿ ಇಲ್ಲದ ಕಾರಣ  ಅನುತ್ತೀರ್ಣ ಮಾಡಿರುತ್ತಾರೆ.   ಆಗ ಅರಮನೆಗೆ ವೆಂಕಣ್ಣಯ್ಯನವರ  ಕರೆಸಿದ ಮಹಾರಾಜರು ಮನಸ್ಸು ಮಾಡಿದ್ದರೆ ಮಗನನ್ನು ಪಾಸು ಮಾಡಲು ಹೇಳಬಹುದಾಗಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಮನೆ ಪಾಠ ಮಾಡಲು ವೆಂಕಣ್ಣಯ್ಯನವರ ಕೇಳಿದರು ಅದಕ್ಕೆ ಒಪ್ಪದೇ ಮನೆ ಪಾಠ ಮಾಡಲು ಅವರ ಶಿಷ್ಯರಾದ ಕುವೆಂಪುರವರ ಗೊತ್ತು ಮಾಡುವ ಭರವಸೆ ನೀಡಿದರು.ಕೊನೆಗೆ ಬಿ ಎಂ ಶ್ರೀ ರವರು ಮನೆ ಪಾಠ ಮಾಡುವ ಮೂಲಕ ಯುವರಾಜರು ಪಾಸಾದರು . ಈ ಘಟನೆಯನ್ನು ಓದಿದ   ಶಿಕ್ಷಕನಾದ ನನಗೆ  ಶಿಕ್ಷಣದ ವ್ಯಾಪರೀಕರಣದ ಈ  ದಿನಗಳಲ್ಲಿ ವೆಂಕಣ್ಣಯ್ಯನವರಂತಹ ಅಧ್ಯಾಪಕರು ಮತ್ತು ಮಹಾರಾಜರಂತಹ ಆಡಳಿತಗಾರರ ಅವಶ್ಯಕತೆ ತೀರಾ ಇದೆ ಎಂದೆನಿಸಿತು.

ಮದ್ದನಕುಂಟೆಯಲ್ಲಿ ಜೈಮಿನಿ ಭಾರತ ಓದಿದ ಘಟನೆಯನ್ನು ನೆನೆಯುತ್ತಾ ಇವರು ಜೈಮಿನಿ ಭಾರತವನ್ನು ತಪ್ಪಾಗಿ ಓದಿದಾಗ  ,ಇವರಿಗೆ  ಮುಜಗರವಾಗದಂತೆ ಆ ಹಳ್ಳಿಯ ಅನಕ್ಷರಸ್ಥರು ತಿದ್ದಿದ ಪರಿಯನ್ನು ಶಾಸ್ತ್ರೀಯವರು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ.


ಹೀಗೆ ಇಡೀ ಪುಸ್ತಕದಲ್ಲಿ ಎಲೆ ಮರೆಯ ಅಲರುಗಳನ್ನು ನಮಗೆ ತೋರಿಸುವ ಕಾರ್ಯವನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಮಾಡಿದ್ದಾರೆ.ಈ ಎಲ್ಲಾ ಅಲರುಗಳು ನಮ್ಮಲ್ಲಿ ಸುಪ್ತವಾಗಿರುವ ಒಳ್ಳೆಯ ಗುಣಗಳನ್ನು ಜಾಗೃತಗೊಳಿಸುವುದರಲ್ಲಿ ಸಂದೇಹವಿಲ್ಲ. ನೀವೂ ಒಮ್ಮೆ ಎಲೆ ಮರೆಯ ಅಲರಿನ ದರ್ಶನ ಮಾಡಲು ಮನವಿ ಮಾಡುವೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

13 ಆಗಸ್ಟ್ 2022

ಮನೆ ಮನೆಯಲ್ಲಿ ತಿರಂಗಾ ...


 



ಮನೆ ಮನೆಯಲ್ಲಿ ತಿರಂಗಾ 


ನಮ್ಮ ರಾಷ್ಟ್ರ ಧ್ವಜ , ರಾಷ್ಟ್ರ ಗೀತೆ ಮತ್ತು ರಾಷ್ಟ್ರ ಲಾಂಛನಗಳನ್ನು ಗೌರವಿಸುವುದು ಪ್ರತಿಯೊಂದು ನಾಗರೀಕನ  ಮೂಲಭೂತ ಕರ್ತವ್ಯವಾಗಿದೆ.ಇತ್ತೀಚಿನ ದಿನಗಳಲ್ಲಿ ಭಾರತೀಯರಲ್ಲಿ ರಾಷ್ಟ್ರಭಕ್ತಿ ಹೆಚ್ಚು ಜಾಗೃತಗೊಂಡಿರುವದು ಕಂಡುಬರುತ್ತಿದೆ. 


ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಪರ್ವಕಾಲದಲ್ಲಿ ಭಾರತ ಸರ್ಕಾರವು ಧ್ವಜ ಸಂಹಿತೆಗೆ ಕೆಲ ತಿದ್ದುಪಡಿ ಮಾಡಿ ಮನೆ  ಮನೆಯಲ್ಲೂ  ಧ್ವಜಾರೋಹಣ ಮಾಡುವ ಅವಕಾಶವನ್ನು ನೀಡಿದೆ.ಸ್ವಾತಂತ್ರ್ಯ ಪಡೆದ ಎಪ್ಪತ್ತೈದು ವರ್ಷಗಳ ಸವಿನೆನಪಿಗಾಗಿ ಮಾಡುವ ಈ ಉಪಕ್ರಮವು ಸರ್ವ ನಾಗರೀಕರಿಂದ ಸ್ವಾಗತಿಸಲ್ಪಟ್ಟು  ದಿನಾಂಕ13 ರ ಆಗಸ್ಟ್ ನ  ಮನೆ ಮನೆಯಲ್ಲೂ  ನಮ್ಮ ತಿರಂಗ ಹಾರಾಡುತ್ತಿದೆ  ಈ ಹಿನ್ನೆಲೆಯಲ್ಲಿ ತಿರಂಗಾ ಹಾರಿಸುವ ಕೆಲ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುವೆ.


ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸಲಾಗುತ್ತದೆಯಾದರೂ ಈ ಎರಡೂ ದಿನಗಳ ಧ್ವಜಾರೋಹಣದ ಮಧ್ಯೆ ವ್ಯತ್ಯಾಸವಿದೆ.

ಭಾರತಕ್ಕೆ 1947ರ ಆ.15ರಂದು ಸ್ವಾತಂತ್ರ್ಯ ಸಿಕ್ಕ ನೆನಪಿಗಾಗಿ ಪ್ರತಿ ಆ.15ಕ್ಕೆ ಧ್ವಜಾರೋಹಣ ಮಾಡಲಾಗುತ್ತದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಸಂವಿಧಾನ ರಚನೆಯಾಗಿರಲಿಲ್ಲ ಹಾಗೂ ರಾಷ್ಟ್ರಪತಿ ಚುನಾಯಿತರಾಗಿರಲಿಲ್ಲ. ಆ ಹಿನ್ನೆಲೆ ಸ್ವಾತಂತ್ರ್ಯ ದಿನಕ್ಕೆ ಪ್ರಧಾನಿ ಅವರೇ ಧ್ವಜಾರೋಹಣ ಮಾಡುತ್ತಾರೆ. ಹಾಗೆಯೇ 1950ರ ಜ.26ರಂದು ಸಂವಿಧಾನ ರಚನೆಯಾದ ನೆನಪಿಗಾಗಿ ನಡೆಸಲಾಗುವ ಗಣರಾಜ್ಯೋತ್ಸವಕ್ಕೆ ರಾಷ್ಟ್ರಪತಿಗಳೇ ಧ್ವಜಾರೋಹಣ ನಡೆಸುತ್ತಾರೆ.

ಸ್ವಾತಂತ್ರೋತ್ಸವದಂದು ಧ್ವಜವನ್ನು ಕೆಳಗೇ ಕಟ್ಟಿರಲಾಗುತ್ತದೆ. ಹಾಗೆಯೇ ಪ್ರಧಾನಿ ಅವರು ಅದನ್ನು ನಿಧಾನವಾಗಿ ಮೇಲಕ್ಕೇರಿಸಿ, ಧ್ವಜ ಬಿಚ್ಚುತ್ತಾರೆ. ಆದರೆ ಗಣರಾಜ್ಯೋತ್ಸವದಂದು ಧ್ವಜವನ್ನು ಮೊದಲಿಗೇ ಮೇಲೆಯೇ ಕಟ್ಟಲಾಗಿರುತ್ತದೆ. ಅದನ್ನು ರಾಷ್ಟ್ರಪತಿ ಬಿಚ್ಚುತ್ತಾರಷ್ಟೇ. ಇಲ್ಲಿ ಧ್ವಜವನ್ನು ಮೇಲೇರಿಸುವ ಪ್ರಶ್ನೆ ಇರುವುದಿಲ್ಲ. ಇಂಗ್ಲಿಷ್ನಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣವು 'Flag Hoisting' ಎಂದು ಗುರುತಿಸಿಕೊಂಡರೆ, ಗಣರಾಜ್ಯೋತ್ಸವದ ಧ್ವಜಾರೋಹಣವು 'Flag Unfurling' ಎಂದು ಗುರುತಿಸಿಕೊಳ್ಳುತ್ತದೆ.

ಸ್ವಾತಂತ್ರೋತ್ಸವದಂದು ಧ್ವಜವನ್ನು ನವದೆಹಲಿಯ ಕೆಂಪು ಕೋಟೆಯಲ್ಲಿ ಹಾರಿಸಲಾಗುತ್ತದೆ. ಗಣರಾಜ್ಯೋತ್ಸವದಂದು ರಾಜಪಥದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗುತ್ತದೆ.

ಈಗ ಧ್ವಜವನ್ನು ನಾವೇ ನಮ್ಮ ಮನೆಗಳಲ್ಲಿ ಹಾರಿಸುವ ಅವಕಾಶವನ್ನು ನೀಡಿದ್ದಾರೆ .


"ಹರ್ ಘರ್ ತಿರಂಗಾ" ಎಂಬ ಅಭಿಯಾನದಲ್ಲಿ

2022ಅಗಷ್ಟ 13ರಿಂದ 15ವರೆಗೆ

ಪ್ರತಿಯೊಬ್ಬರೂ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ  ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸೋಣ

ತ್ರಿವರ್ಣದ ಕಂಪನ್ನು ಹಂಚೋಣ.

ತ್ರಿವರ್ಣ ಧ್ವಜಾರೋಹಣ ಮಾಡಲು ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಿ ದೇಶಪ್ರೇಮ ಮೆರೆಯೋಣ ಮತ್ತು ತಾಯಿ ಭಾರತಿಗೆ ನಮಿಸೋಣ.


ನಮ್ಮ ಮನೆಯ ಮೇಲೆ  ಅಗಷ್ಟ್  13 ರ  ಶನಿವಾರ ಮುಂಜಾನೆ 7.00 ಘಂಟೆಗೆ ಧ್ವಜಾರೋಹಣ ಮಾಡಿ ಅಗಷ್ಟ 15 ಸೋಮವಾರ ಸಂಜೆ 5.00 ಘಂಟೆಗೆ ಧ್ವಜವನ್ನು ಇಳಸೋಣ.

ನಮ್ಮ ಮನೆಯ ಮೇಲಿನ ಅತೀ ಎತ್ತರದ ಜಾಗದಲ್ಲಿ ಧ್ವಜರೋಹಣ  ಮಾಡೋಣ.

ಧ್ವಜ ಸ್ಥಂಭ & ಧ್ವಜ ನೇರವಾಗಿರುವಂತೆ ನೋಡಿಕೊಳ್ಳೋಣ. ಎಡಕ್ಕೆ ಬಲಕ್ಕೆ ಹಿಂದಕ್ಕೆ ಮುಂದಕ್ಕೆ ವಾಲಿರದಂತೆ ನೋಡಿಕೊಳ್ಳೋಣ.

ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ ಹಾಗೂ ಸಮಾನವಾಗಿ ಹಾಗೂ ಧ್ವಜದ ಬಲಗಡೆ ಯಾವುದೇ ಧ್ವಜ ಇರದಂತೆ ನೋಡಿಕೊಳ್ಳೋಣ.

ಗ‍ಲೀಜಾದ ಮತ್ತು ಹರಿದ ಧ್ವಜವನ್ನು ಹಾರಿಸದಿರೋಣ .

ಧ್ವಜವನ್ನು ಆಲಂಕಾರಿಕ ವಸ್ತುವಾಗಿ ಯಾವುದೇ ಕಾರಣಕ್ಕೆ ಬಳಸದಿರೋಣ.

ತೊಡುವ ಬಟ್ಟೆಯಲ್ಲಿ ಸೊಂಟಕ್ಕಿಂತ ಕೆಳಭಾಗದಲ್ಲಿ ಧ್ವಜವಿರದಂತೆ ನೋಡಿಕೊಳ್ಳೋಣ  .ಒಂದೇ ದಾರದಲ್ಲಿ ಎರಡು ಧ್ವಜ ಹಾರಿಸದಿರೋಣ .  ಧ್ವಜವನ್ನು ನೆಲಕ್ಕೆ ತಾಕಿಸದಿರೋಣ .ಯಾವುದೇ ಕಾರಣಕ್ಕೂ ತ್ರಿವರ್ಣ ಧ್ವಜವನ್ನು ಬಂಡಲ್ ರೀತಿ ಬಳಸದಿರೋಣ   . ಶ್ವೇತ ವರ್ಣದ ಮಧ್ಯ 24 ಗೆರೆಗಳ ನೀಲಿ ಬಣ್ಣದ ಅಶೋಕ ಚಕ್ರವಿರುವ ಧ್ವಜವನ್ನೇ ಹಾರಿಸೋಣ .

ಧ್ವಜದ ಮೇಲೆ   ಯಾವುದೇ   ಬರಹ ಇರದಂತೆ ನೋಡಿಕೊಳ್ಳೋಣ . ಹಾಗೂ ಧ್ವಜವನ್ನು ಜಾಹೀರಾತಿಗೆ ಬಳಸದಿರೋಣ.

ಧ್ವಜವನ್ನು ಹಾರಿಸುವ ಕಂಬ/ಸ್ತಂಭದ ಮೇಲೆ ಜಾಹಿರಾತು ಇರದಂತೆ ನೋಡಿಕೊಳ್ಳೋಣ.

ಅಸುರಕ್ಷಿತ ಅಥವಾ ಧ್ವಜಕ್ಕೆ ಹಾನಿಯುಂಟಾಗಬಹುದಾದ ಸ್ಥಳದಲ್ಲಿ ಧ್ವಜಾರೋಹಣ ಮಾಡದಿರೋಣ. 

ತ್ರಿವರ್ಣ ಧ್ವಜಕ್ಕೆ ತನ್ನದೇ ಆದ ಗೌರವ ಘನತೆ ಇರುತ್ತದೆ. ಅಗಷ್ಟ್ 15ರಂದು ಸಂಜೆ 5.00 ಘಂಟೆಗೆ ಧ್ವಜ ಇಳಿಸಿದ ನಂತರ ಅಶೋಕ ಚಕ್ರ ಮೇಲೆ ಬರುವಂತೆ ಧ್ವಜವನ್ನು ಮಡಿಕೆ ಮಾಡಿ ಸುರಕ್ಷಿತ ಜಾಗದಲ್ಲ ಇಡೋಣ.


ನಮ್ಮ ಧ್ವಜ ನಮ್ಮ ಹೆಮ್ಮೆ. ಮನೆ ಮನೆಯಲ್ಲಿ ನಮ್ಮ ದ್ವಜ 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



12 ಆಗಸ್ಟ್ 2022

ಶಿವಮೊಗ್ಗ ಸುಬ್ಣಣ್ಣ..

 #ಶಿವಮೊಗ್ಗಸುಬ್ಬಣ್ಣ 


ಕಂಚಿನ ಕಂಟದ 

ಮ್ಯಾಗ್ಸಸ್ಸೇ ಪ್ರಶಸ್ತಿ ಪುರಸ್ಕೃತ

ಗಾಯನದ ಅಣ್ಣ |

ಗಂಧರ್ವ ಲೋಕಕ್ಕೆ

ಇಂದು  ತೆರಳಿದ್ದಾರೆ 

ಹೋಗಿ ಮತ್ತೆ ಭುವಿಗೆ ಬನ್ನಿ 

ನಮ್ಮ ಶಿವಮೊಗ್ಗ  ಸುಬ್ಬಣ್ಣ ||


#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ಉಗ್ಗುವಿಕೆ ರೋಗವಲ್ಲ...


 


ಆತ್ಮಕಥೆ ೩೩ 


ಉಗ್ಗುವಿಕೆ ರೋಗವಲ್ಲ .


ಇತ್ತೀಚಿಗೆ ರಾಬರ್ಟ್ ಕನ್ನಡ ಸಿನಿಮಾ ನೋಡಿದೆ .ಅದರಲ್ಲಿನ ನಾಯಕನ ಒಂದು ಶೇಡ್ ನ ಪಾತ್ರ ಉಗ್ಗುವ ಮಾತನಾಡುವ ಪಾತ್ರ. ಅದೇ ರೀತಿಯಲ್ಲಿ ದಿನನಿತ್ಯದ ಜೀವನದಲ್ಲಿ ಹಲವಾರು ಜನ ಉಗ್ಗುತ್ತಾ ಮಾತನಾಡುವ ಜನರ ನೋಡುತ್ತೇವೆ. ಕೆಲವರು ಉಗ್ಗುವುದನ್ನು ಅಪಹಾಸ್ಯ ಮಾಡುವರಿಗೇನೂ ಕಮ್ಮಿಯಿಲ್ಲ.


ಬಾಲ್ಯದಲ್ಲಿ ನಾನೂ ಸಹ ಈ ಉಗ್ಗುವಿಕೆಯಿಂದ ಬಳಲಿದ್ದಿದೆ. ನಾನು ನಾಲ್ಕನೇ ತರಗತಿಯಲ್ಲಿ ಓದುವಾಗ ನನ್ನ ಸಹಪಾಠಿ ಶಿವಣ್ಣ ಉಗ್ಗುತ್ತಿದ್ದ .ನಾನು ಅವನ ಉಗ್ಗನ್ನು ಪ್ರತಿ ದಿನ ಅಣಕಿಸುತ್ತಾ ಕ್ರಮೇಣ ನನಗೂ ಮಾತನಾಡುವಾಗ  ಉಗ್ಗುವುದು ಸಾಮಾನ್ಯವಾಯಿತು.ಇದು ನಾನು ಪದವಿ ಓದುವ ವರೆಗೂ ಮುಂದುವರೆದು ಒಮ್ಮೆ ಚಿತ್ರದುರ್ಗದಲ್ಲಿ ಮೈಸೂರಿನ ಸ್ಪೀಚ್ ಅಂಡ್ ಇಯರಿಂಗ್ ಸಂಸ್ಥೆಯವರು ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದರು .ಅಲ್ಲಿಗೆ ನಾನು ಹೋದಾಗ ವೈದ್ಯರು ಉತ್ತಮವಾಗಿ ಕೌನ್ಸಿಲಿಂಗ್  ಮಾಡುತ್ತಾ ,ಭಯ ಉದ್ವೇಗ ಕಡಿಮೆ ಮಾಡಿಕೊಂಡು ನಿಧಾನವಾಗಿ ಮಾತನಾಡುವ ರೂಡಿ ಮಾಡಿಕೊಳ್ಳಲು ಸಲಹೆ ನೀಡಿದರು .ಅವರ ಸಲಹೆ ಪಾಲಿಸಿದೆ. ಕ್ರಮೇಣವಾಗಿ ಉಗ್ಗು ಮಾಯವಾಗಿ ಈಗ ಸಾಮಾನ್ಯವಾಗಿ ಮಾತನಾಡುತ್ತಾ ಇಪ್ಪತ್ತೆರಡು ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿರುವೆ.  

ತರಗತಿಯ ಕೊಠಡಿಯಲ್ಲಿ ಈ ರೀತಿಯಲ್ಲಿ ಉಗ್ಗುವ ಮಕ್ಕಳ ಅಪಹಾಸ್ಯ ಮಾಡುವ ಮಕ್ಕಳಿಗೆ ಬುದ್ದಿ ಹೇಳಿರುವೆ .ಉಗ್ಗಿನ ಸಮಸ್ಯೆ ಇರುವ ಮಕ್ಕಳಿಗೆ ಕೌನ್ಸಿಲಿಂಗ್ ಸಹ ಮಾಡುತ್ತಿರುವೆ.

ಅಷ್ಟಕ್ಕೂ ಉಗ್ಗು ಎನ್ನುವುದು ರೋಗವೇನಲ್ಲ . ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನದಿಂದ ಉಗ್ಗು ನಿವಾರಣೆ ಖಚಿತ.  ಇದು ಕೇವಲ ಸಾಮಾನ್ಯರಿಗೆ ಮಾತ್ರ ಅಥವಾ ಇಂತವರಿಗೇ ಬರಬೇಕೆಂದೇನೂ ಇಲ್ಲ ಅದರೆ ಉಗ್ಗು ಮೆಟ್ಟಿ ನಿಂತು ನಮ್ಮ ವ್ಯಕ್ತಿತ್ವ ಕಾಣುವಂತೆ ನಾವು ಬದುಕಬೇಕು. 

ಕೇರಳದ ಮುಖ್ಯ ಮಂತ್ರಿಯಾಗಿದ್ದ ಇಎಂಎಸ್ ನಂಬೂದಿರಿಪಾದ್  ಅವರೂ  ಉಗ್ಗುತ್ತಿದ್ದರು.  ಅವರಿಗೆ ಪತ್ರಕರ್ತರು, 'ನೀವು ಯಾವತ್ತೂ ಉಗ್ಗುತ್ತೀರಾ?' ಎಂದು ಕೇಳಿದ್ದಕ್ಕೆ, 'ಇಲ್ಲ ಇಲ್ಲ. ನಾನು ಮಾತಾಡುವಾಗ ಮಾತ್ರ ಉಗ್ಗುತ್ತೇನೆ' ಎಂದು ಹೇಳಿದ್ದು ನೆನಪಾಗುತ್ತಿದೆ. ನಿಮಗೆ ಗೊತ್ತಿರಲಿ, ನಂಬೂದಿರಿಪಾದ್  ಅವರಿಗೂ ಈ ಸಮಸ್ಯೆ ಇತ್ತು. ಆದರೆ ಅವರು ಎರಡು ಬಾರಿ ಕೇರಳದ ಮುಖ್ಯಮಂತ್ರಿಯಾದರು. ನಮ್ಮ ದೇಶದ ಪ್ರಮುಖ ಕಮ್ಯುನಿಸ್ಟ್ ನಾಯಕ ಎಂದು ಕರೆಯಿಸಿಕೊಂಡರು. ಅವರಿಗೆ ತಮ್ಮ ಉಗ್ಗುವಿಕೆ ಒಂದು ಸಮಸ್ಯೆ ಎಂದು ಅನಿಸಲೇ ಇಲ್ಲ. 

''ನಾನು ಉಗ್ಗುವುವಾಗ ನಿಮಗೆ ತಮಾಷೆ ಎನಿಸುತ್ತದೆ, ಆದರೆ ನನಗೆ ಇನ್ನೂ ತಮಾಷೆಯೆನಿಸುತ್ತದೆ, ಯಾಕೆಂದರೆ ನಾನು ಹೇಳುವುದನ್ನೆಲ್ಲಾ ನೀವು ಗಮನವಿಟ್ಟು ಕೇಳುತ್ತೀರಿ' ಎಂದು ಹೇಳುತ್ತಿದ್ದರು. "ನಾನು ಏನು ಹೇಳುತ್ತೇನೆ ಎಂಬುದನ್ನು ಕೇಳಿ, ನಾನು ಹೇಗೆ ಹೇಳುತ್ತೇನೆ ಎಂಬುದನ್ನಲ್ಲ' ಎಂದು ನಂಬೂದರಿಪಾದ್ ರವರು ಪತ್ರಕರ್ತರಿಗೆ ತಿರುಗೇಟು ನೀಡುತ್ತಿದ್ದರು. 


ನಿಮ್ಮಲ್ಲಿ ಉಗ್ಗುವಿಕೆ ಇದೆ ಎಂಬುದರ ಬಗ್ಗೆ ಹೆಚ್ಚು ಗಮನಕೊಟ್ಟರೆ, ಅದು ಒಂದು ಸಮಸ್ಯೆ ಎನಿಸಬಹುದು. ಆದರೆ ನಾನು ನಿಧಾನವಾಗಿ ಮಾತಾಡುತ್ತೇನೆ ಎಂದು ಅಂದುಕೊಂಡು ಮಾತಾಡಿ, ನಿಮ್ಮ ಸಮಸ್ಯೆ ಅರ್ಧ ಕಮ್ಮಿಯಾಗಿರುತ್ತದೆ.

ಖ್ಯಾತ 'ರಾಕ್ ಅಂಡ್ ರೋಲ್ '  ಹಾಡುಗಾರ ಎಲ್ವಿಸ್ ಪ್ರೆಸ್ಲಿ  ಒಂದು ಕಾಲಕ್ಕೆ ಉಗ್ಗುತ್ತಿದ್ದರು. ಖ್ಯಾತ ಹಾಲಿವುಡ್ ನಟ ಮರ್ಲಿನ್  ಮನ್ರೊಗೂ  ಈ ಸಮಸ್ಯೆಯಿತ್ತು. ಬ್ರಿಟನ್ನ ಜನಪ್ರಿಯ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಕೂಡ ಉಗ್ಗುತ್ತಿದ್ದರು. ಹಾಗೆ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬಿಡೆನ್ ಅವರಿಗೂ ಉಗ್ಗುವ ಸಮಸ್ಯೆಯಿದೆ. ಇದನ್ನು ಹೊಂದಿಯೂ ಅವರು ಆ ಸ್ಥಾನಕ್ಕೇರಲಿಲ್ಲವೇ? "ಕೆಲವರು ನಡೆಯುವಾಗ ಮುಗ್ಗರಿಸುತ್ತಾರೆ. ಆದರೆ ನಾನು ಮಾತಾಡುವಾಗ' ಎಂದು ನಟಿ ಬ್ರೂಸ್ ವಿಲ್ಲಿಸ್ ಹೇಳಿದ್ದು ಗೊತ್ತಿಲ್ಲವೇ? 'ನಾನು ಉಗ್ಗುತ್ತಿದ್ದೆ. ಆದರೆ ಹಾಡಲಾರಂಭಿಸಿದಾಗ ಉಗ್ಗುತ್ತಿರಲಿಲ್ಲ. ನಂತರ ನಾನು ಹಾಡುವುದನ್ನೇ ನನ್ನ ಕಾಯಕ ಮಾಡಿಕೊಂಡೆ' ಎಂದು ಮಾರ್ಕ್ ಅಂಥೋನಿ ಹೇಳಿದ್ದನ್ನು ನೆನಪಿಸಿಕೊಳ್ಳಿ.  

ಉಗ್ಗುವುದನ್ನು ಯಾರು ಬೇಕಾದರೂ ಹಂತ ಹಂತವಾಗಿ ಕಮ್ಮಿ ಮಾಡಿಕೊಳ್ಳಬಹುದು. ಮೊದಲು ನೀವು ಮಾಡಬೇಕಾದುದೆಂದರೆ  ಉಗ್ಗುವುವಿಕೆ ಮಹಾನ್ ದೋಷ ಮತ್ತು ಅದರಿಂದ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತಿದೆ ಎಂಬುದನ್ನು  ಮೊದಲು ನಿಮ್ಮ ಮನಸಿನಿಂದ ತೆಗೆದು ಹಾಕಿ.ಇದರ ಜೊತೆಗೆ 

ಸಾಮಾನ್ಯ ಮಾತನಾಡುವವರು ಉಗ್ಗುವವರ ಬಗ್ಗೆ ಕೀಳಾಗಿ ಕಾಣುವುದು,  ಅಪಹಾಸ್ಯ ಮಾಡುವುದನ್ನು ನಿಲ್ಲಿಸೋಣ .



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು