29 ಮೇ 2022

ಸೌಂದರ್ಯವರ್ಧಕ


 #ಸೌಂದರ್ಯವರ್ಧಕ


#ಸಿಹಿಜೀವಿಯ_ಹನಿ 


ಮೈಕಪ್ಪೆಂದು ಮೇಕಪ್ಪು

ಹಾಕಿಕೊಂಡರೆ ಅಂತಹ 

ಸೌಂದರ್ಯ ಕ್ಷಣಿಕ|

ಆತ್ಮವಿಶ್ವಾಸದಿಂದ ಮೊಗದಲಿ

ಮೂಡುವ ಮಂದಹಾಸ

ನಿಜವಾದ ಸೌಂದರ್ಯವರ್ಧಕ ||


#ಸಿಹಿಜೀವಿ

27 ಮೇ 2022

ಹೊನ್ನಾವರಿಕೆ. ಪುಸ್ತಕ ವಿಮರ್ಶೆ.

 



ಹೊನ್ನಾವರಿಕೆ. ವಿಮರ್ಶೆ ೩೭ 

ಎಂ ಆರ್ ಕಮಲ ರವರು ರಚಿಸಿರುವ ಹೊನ್ನಾವರಿಕೆ ಪ್ರಬಂಧಗಳ ಸಂಕಲನ ಹೆಸರಿನಿಂದಲೇ ನನ್ನ ಕುತೂಹಲ ಕೆರಳಿಸಿ ಓದುವಂತೆ ಪ್ರೇರೇಪಿಸಿತು.

ಎಂ.ಆರ್. ಕಮಲ, ಹಾಸನ ಜಿಲ್ಲೆಯ ಅರಸೀಕರೆ ತಾಲ್ಲೂಕಿನ ಮೇಟಿಕುರ್ಕೆ ಯವರು, ಹುಟ್ಟಿದ್ದು: ೧೯೫೯ರಲ್ಲಿ, ತಂದೆ ಎಂ. ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ., ಎಲ್.ಎಲ್.ಬಿ. ಪದವೀಧರೆಯಾದ ಇವರು ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿ.ಎಂ.ಶ್ರೀ' ಸ್ವರ್ಣಪದಕ ಪಡೆದಿದ್ದಾರೆ. ಫ್ರೆಂಚ್ ಭಾಷೆಯನ್ನು ಆರು ವರ್ಷಗಳ ಕಾಲ ಅಧ್ಯಯನ ಮಾಡಿರುವ ಕಮಲ ಫ್ರೆಂಚ್ ಭಾಷೆಯಲ್ಲಿ ಪದವೀಧರರು.


ಕನ್ನಡ ಸಾಹಿತ್ಯ ಮತ್ತು ನಾಟ್ಯಕ್ಷೇತ್ರದಲ್ಲಿ ಕಮಲ ಅವರ ಹೆಸರು ಮತ್ತು ಸಾಧನೆಗಳು ಚಿರಪರಿಚಿತ. ಪ್ರಕಟಿತ ಕಾವ್ಯ ಸಂಗ್ರಹಗಳು: ಶಕುಂತಲೋಪಾಖ್ಯಾನ (೧೯೮೮), ಪಾಣೆ ಮತ್ತು ಇತರ ಕವಿತೆಗಳು (೧೯೯೨),  ಮಾತೋಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಪುರಸ್ಕಾರ ಹಾಗೂ ಮುದ್ದಣ ಕಾವ್ಯ ಪ್ರಶಸ್ತಿ ಪಡೆದಿವೆ, ಹೂವ ಚೆಲ್ಲಿದ ಹಾದಿ (೨೦೦೭), ಮಾಡಿದಡಿ (೨೦೧೭), ಗದ್ಯಗಂಧಿ (೨೦೨೦), ಮಾರಿಬಿಡಿ ಸಂಕಲನ ಅಮ್ಮ ಪ್ರಶಸ್ತಿ ಪಡೆದಿದೆ. ಕಾವ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ೨೦೧೮ನೇ ಸಾಲಿನ ಮಾಸ್ತಿ ಪ್ರಶಸ್ತಿಯನ್ನು ಕಮಲ ಪಡೆದಿದ್ದಾರೆ. ನೆಲದಾಸೆಯ ನಕ್ಷತ್ರಗಳು (೨೦೨೧) ಅವರ ಆರನೆಯ ಕಾವ್ಯಸಂಗ್ರಹ,


ಕಾಳನಾಮ ಚರಿತೆ ೨೦೧೮ರಲ್ಲಿ ಪ್ರಕಟವಾದ ಹಗುರ ಹರಟೆಯ ಹಂದರ, ಕಸೂತಿಯಾದ ನೆನಪು, ಕೊಳದ ಮೇಲಿನ ಗಾಳಿ ೨೦೧೯ರಲ್ಲಿ, ಊರ ಬೀದಿಯ ಸುತ್ತು ಕ್ವಾರಂಟೈನ್ ೨೦೨೦ರಲ್ಲಿ ಪ್ರಕಟವಾದ ಪ್ರಬಂಧ ಸಂಕಲನ. ಇವು ಇವರ ಪ್ರಮುಖ ಸಾಹಿತ್ಯದ ಕೃತಿಗಳು


ಅನುವಾದ ಸಾಹಿತ್ಯದಲ್ಲಿ ಮಹತ್ವದ ಕೊಡುಗೆ ನೀಡಿರುವ ಕಮಲ ಆಫ್ರಿಕನ್-ಅಮೆರಿಕನ್, ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಶ್ರಮವನ್ನು ಹೊಂದಿದ್ದಾರೆ. ಕತ್ತಲ ಹೂವಿನ ಹಾಡು (೧೯೮೯), ಇವರು ಸಂಪಾದಿಸಿ, ಕನ್ನಡಿಸಿರುವ ಕಪ್ಪು ಲೇಖಕಿಯರ ಕಾವ್ಯ ಸಂಗ್ರಹ. ಕನ್ನಡದಲ್ಲಿ ಮೊದಲ ಬಾರಿಗೆ ಕಪ್ಪು ಕವಿಗಳನ್ನು ಪರಿಚಯಿಸುವ ಪ್ರಯತ್ನ ಓದುಗರ ಗಮನ ಮತ್ತು ವಿಮರ್ಶಕ ಮಾನ್ಯತೆ ಎರಡನ್ನೂ ಪಡೆಯಿತು. ಈ ಪ್ರಯತ್ನದ ವಿಸ್ತರಣೆಯಾಗಿ ಆಫ್ರಿಕನ್ ಅಮೆರಿಕನ್ ಸಮಾಜ ವಿಕಾಸಗೊಂಡ ಬಗೆ, ಗುಲಾಮಗಿರಿ ಪದ್ಧತಿಯ ವಿರುದ್ಧ ಅವರ ಹೋರಾಟ, ಮಹಿಳೆಯರು ಸಾಹಿತ್ಯದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಪಡೆದುಕೊಳ್ಳಲು ಮಾಡಿದ ಹೋರಾಟಗಳ ಕಥೆಯನ್ನು ಕಪ್ಪು ಪಟ್ಟಿ ಬೆಳಕಿನ ಹಾಡು' ಕೃತಿ ಸರಣಿಯ ನಾಲ್ಕು ಪುಸ್ತಕಗಳು ತೆರೆದಿಡುತ್ತವೆ. ಆರು ವರ್ಷಗಳ ಅವಧಿಯಲ್ಲಿ ಆಯ್ಕೆ, ಸಂಪಾದನೆ ಮತ್ತು ಅನುವಾದಗೊಂಡ ಈ ಕೃತಿಗಳು: ಕಪ್ಪು ಪಟ್ಟಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ, ರೂಸಾಪಾರ್ಕ್ಸ್ಳ ನನ್ನ ಕಥೆ ಮತ್ತು ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ. ಈ ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ, ಶಿವಮೊಗ್ಗ ಕರ್ನಾಟಕ ಸಂಘದ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿಗೆ ಪಾತ್ರವಾಗಿವೆ. ಅನುವಾದ ಕ್ಷೇತ್ರದಲ್ಲಿನ ಸಾಧನೆಗಾಗಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಯನ್ನು ಕೂಡ ಕಮಲ ಪಡೆದಿದ್ದಾರೆ. 



ಪ್ರಸ್ತುತ ಹೊನ್ನಾವರಿಕೆ ಪ್ರಬಂಧಗಳು

 ಅವರ ಈ ಹಿಂದಿನ ಗದ್ಯ ಬರಹಗಳಂತೆಯೇ ಸರಳ ಮತ್ತು ನೇರ ನಿರೂಪಣೆ ಈ ಪ್ರಬಂಧಗಳಲ್ಲಿಯೂ ವಿಸ್ತಾರಗೊಂಡಿದೆ. ಈ ಅಂಶಗಳೇ ಅವರಿಗೆ ತಮ್ಮದೇ ಓದುಗ ವರ್ಗವನ್ನು ಸೃಷ್ಟಿ ಕೊಟ್ಟಿವೆ.


ಮನುಷ್ಯನ ಖಾಸಗಿ ಬದುಕಿನ ಅನುಭವಗಳು ಲೋಕಾನುಭವವಾಗಿ ಬದಲಾದಾಗ ಅರಿವೇ ಆಗದೆ ಓದುಗನ ಮನಸ್ಸನ್ನು ವ್ಯಾಪಿಸಬಲ್ಲವು  ಇಲ್ಲಿ ಹೇಳುತ್ತಿರುವ ಸಂಗತಿ, ಪ್ರಸಂಗ, ಅನುಭವಗಳು ನಮಗೂ ಆ ಗಿವೆಯಲ್ಲ ಎಂಬ ಅಚ್ಚರಿಯಲ್ಲಿ ಓದುಗ ಅದರಲ್ಲಿ ತಲ್ಲೀನವಾಗಬಲ್ಲ ಗುಣವನ್ನು ಈ ಪ್ರಬಂಧಗಳು ಪಡೆದಿವೆ. ಅದರಲ್ಲೂ ನನ್ನಂತಹ ಶಿಕ್ಷಕರಿಗೆ ಅನಿಸದೆ ಇರದು. ಬದುಕಿನ ಸಾಮಾನ್ಯ ಸಂಗತಿಗಳಿಗೂ ಅದರದೇ ಆದ ಚೆಲುವು ಇರುತ್ತದೆ  ಎಂಬ  ಅರಿವನ್ನು ಈ ಬರಹಗಳು ಮೂಡಿಸತ್ತವೆ.


ಚೋಟುದ್ದದ ಹುಡುಗರು ,

ಕಳೆದುದು ಸಿಗದಿರಲಿ,ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ,ಕನಸೊಂದನ್ನು ಸುರುಳಿ ಸುತ್ತಿ,ಬಾಗಿಲು ತೆಗೆಯ,

ವರ್ತಮಾನ ಕಾಲದ ಹುಡುಕಾಟದಲ್ಲಿ , ಎಲ್ಲ ಹೆಣ್ಣುಗಳ ದನಿಯಾಗಲಿ,ಒಂದು ಲಹರಿ,

ಬಚ್ಚಿಟ್ಟಿದ್ದು ಪರರಿಗೂ ಅಲ್ಲ,

'ಡಿಲೀಟ್' ಮಾಡುತ್ತಾ ಬದುಕುವುದು,

ಗಂಟಲಲ್ಲಿ ಮುರಿದ ಮುಳ್ಳು ,

ಬೀದಿಯಲ್ಲಿ ಸಿಕ್ಕ ಕತೆಗಳು,

ಒಂದು ರಫ್ ನೋಟ್ಬುಕ್,ವಾಸ್ತವದ ಬೆಂಕಿಯಲ್ಲಿ ಸುಡದ ನೆನಪುಗಳು, ಗಾಡಿಯ ಮೋಹ,

ನೆನಪುಗಳ ಬುತ್ತಿ ಚಿಗುರು, ಮುಂತಾದ ವಿಭಿನ್ನ ವಿಷಯಗಳ ಪ್ರಬಂಧಗಳು ನನಗೆ ಇಷ್ಟ ಆದವು.

ಅದರಲ್ಲೂ ಕೊನೆಯ ಪ್ರಬಂಧವಾದ 

ಎಲ್ಲಾ "ಪ್ರೀತಿಯ ಶಿಕ್ಷಕರಿಗೆ " ಎಂಬ ಪ್ರಬಂಧವು ನನ್ನಂತವನ ಕುರಿತೇ ಬರದಂತಹ ಸಲಹಾ ರೂಪದ ಪ್ರಬಂಧ ಎನಿಸಿತು.


ಒಟ್ಟಾರೆ ನೀವು ಒಮ್ಮೆ ಹೊನ್ನಾವರಿಕೆ ಓದಿದರೆ ವಿಭಿನ್ನ ವಿಷಯಗಳ ಪ್ರಬಂಧಗಳ ಪ್ರಪಂಚ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.


ಪುಸ್ತಕದ ಹೆಸರು: ಹೊನ್ನಾವರಿಕೆ

ಲೇಖಕರು : ಎಂ ಆರ್ ಕಮಲ 

ಪ್ರಕಾಶನ: ಕಥನ ಪ್ರಕಾಶನ ಬೆಂಗಳೂರು

ಬೆಲೆ: 175.00 ₹



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಗುಣಾತ್ಮಕ ಶಿಕ್ಷಣ ನಮ್ಮ ಅದ್ಯತೆಯಾಗಬೇಕಿದೆ.


 


ಗುಣಾತ್ಮಕ ಶಿಕ್ಷಣಕ್ಕೆ ಮಹತ್ವ ನೀಡೋಣ .

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಪಡೆದ ನಾವು ಪಿ ಯು ಸಿ ಯಲ್ಲಿ ಅಂತಹದೇ ಫಲಿತಾಂಶ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ. ಸಂತಸದ ಈ ಹೊತ್ತಿನಲ್ಲಿ ರಾಷ್ಟ್ರೀಯ ಸಾಧನೆ ಸಮೀಕ್ಷೆ (NAS) ವರದಿ ನಮ್ಮ ಕೈ ಸೇರಿದೆ. ಆ ವರದಿಯ ಪ್ರಮುಖವಾದ ಅಂಶಗಳು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಕಲಿಕೆ ಅಷ್ಟೊಂದು ಅಭಿವೃದ್ಧಿಯಾಗಿಲ್ಲ ಎಂಬುದನ್ನು ಬೊಟ್ಟು ಮಾಡಿ ತೋರಿಸುತ್ತದೆ.ಇದು ದೇಶದಾದ್ಯಂತ ನಡೆದ ಸಮೀಕ್ಷೆಯ  ವರದಿಯಾಗಿದ್ದು ಈ ಸಮೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು.

3,5,8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಧನೆ ಯಾವಮಟ್ಟದಲ್ಲಿದೆ ಎಂಬುದನ್ನು ತಿಳಿಯುವುದಕ್ಕಾಗಿ ರಾಷ್ಟ್ರಮಟ್ಟದಲ್ಲಿ 'ರಾಷ್ಟ್ರೀಯ ಸಾಧನೆ ಸಮೀಕ್ಷೆ ನಡೆಸಲಾಗಿದೆ. ಸರ್ಕಾರಿ ಶಾಲೆ, ಅನುದಾನಿತ ಶಾಲೆ ಖಾಸಗಿ ಶಾಲೆ ಮತ್ತು ಕೇಂದ್ರೀಯ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಸಮೀಕ್ಷೆ ನಡೆದಿದೆ. ಇದು ದೊಡ್ಡ ಮಟ್ಟದ ಸಮೀಕ್ಷೆಯಾಗಿದೆ. 2021ರ ಸಮೀಕ್ಷೆಯ ವರದಿಯು ಈಗ ಪ್ರಕಟವಾಗಿದೆ. ಭಾಷೆ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್ ಮುಂತಾದ ವಿಷಯಗಳಲ್ಲಿನ ಕಲಿಕಾ ಮಟ್ಟವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. 2017ರ ಸಮೀಕ್ಷೆಗೆ ಹೋಲಿಸಿದರೆ 2021ರಲ್ಲಿ ಕಲಿಕಾಮಟ್ಟವು ಕುಸಿತ ಕಂಡಿದೆ.ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ವಿವಿಧ ವಿಷಯಗಳ ಕಲಿಕಾ ಮಟ್ಟವು ಕಳವಳಕಾರಿಯಾಗಿದೆ ಎಂಬುದರತ್ತ ಸಮೀಕ್ಷಾ ವರದಿಯು ಬೆಳಕು ಚೆಲ್ಲಿದೆ.
ಭಾಷೆ, ಗಣಿತ, ವಿಜ್ಞಾನ, ಪರಿಸರ ಅಧ್ಯಯನ, ಇಂಗ್ಲಿಷ್ ಹಾಗೂ ಆಧುನಿಕ ಭಾರತೀಯ ಭಾಷೆಗಳ ಅಧ್ಯಯನದಲ್ಲಿ 3, 5, 8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಧನೆಯ ಅಂಕಗಳನ್ನು ವರದಿ ಬಹಿರಂಗಪಡಿಸಿದೆ. ಗರಿಷ್ಠ 500  ಅಂಕಗಳನ್ನು ನಿಗದಿಪಡಿಸಲಾಗಿದ್ದು,  ಬಹುತೇಕ ಈ ಎಲ್ಲ ಹಂತಗಳಲ್ಲೂ ಅಂಕಗಳು ಕಡಿಮೆಯಾಗಿರುವುದು ಸಮೀಕ್ಷೆಯಿಂದ ಸಾಬೀತಾಗಿದೆ.

10ನೇ ತರಗತಿಯ ಇಂಗ್ಲಿಷ್ನಲ್ಲಿ ಮಾತ್ರ 2017ಕ್ಕೆ ಹೋಲಿಸಿದರೆ 269ಅಂಕ ಪಡೆದಿದ್ದ ಮಕ್ಕಳು, 2011ರಲ್ಲಿ 383 ಅಂಕ ಪಡೆದಿರುವುದು ತುಸು ಸಮಾಧಾನ ತಂದಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಮತ್ತೊಂದು ಮಾಹಿತಿಯ ಅತಂಕಕಾರಿಯಾಗಿದೆ .ಅದೇನೆಂದರೆ ಪ್ರೌಢಶಾಲಾ ಹಂತದಲ್ಲಿ, ಆಧುನಿಕ ಭಾರತೀಯ ಭಾಷಾ ವಿಷಯದಲ್ಲಿ ಉಲ್ಲೇಖವಾಗಿರುವ ಕಥೆ, ನಾಟಕ, ವಸ್ತುವಿಷಯವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ವಿಭಾಗದಲ್ಲಿ ವಿದ್ಯಾರ್ಥಿಗಳು 2017ರಲ್ಲಿ 500ಕ್ಕೆ 252 ಅಂಕ ಪಡೆದಿದ್ದರು, ಆದರೆ 2011ರಲ್ಲಿ ಈ ಸಾಮರ್ಥ್ಯವು 242 ಅಂಕಗಳಿಗೆ  ಕುಸಿದಿದೆ.
ಈ ಮೇಲಿನ ಅಂಶಗಳನ್ನು ಗಮನಿಸಿದರೆ ನಮಗೆ ಸಾಮಾನ್ಯವಾಗಿ ಗ್ರಹಿಕೆಯಾಗುವುದು ನಮ್ಮ ಮಕ್ಕಳ ಓದುವ ಮತ್ತು ಬರೆಯುವ ಕೌಶಲ್ಯ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವಾಗಿ ಈ ಸಮೀಕ್ಷೆಯು ಮತ್ತೊಂದು ವರದಿಯನ್ನು ಗಮನಿಸುವುದಾದರೆ

ದೇಶದ ಪ್ರೌಢಶಿಕ್ಷಣ ವ್ಯವಸ್ಥೆಯಲ್ಲಿ 10ನೇ ತರಗತಿ ಮಕ್ಕಳಿಗೆ ಆಧುನಿಕ ಭಾರತೀಯ ಭಾಷೆಯೊಂದನ್ನು (ಎಂಐಎಲ್) ಬೋಧಿಸಲಾಗುತ್ತದೆ. ಸಂಸ್ಕೃತ, ಹಿಂದಿ, ಬಂಗಾಳಿ, ಕನ್ನಡ, ತಮಿಳು ಸೇರಿ ಒಟ್ಟು 21 ಭಾಷೆಗಳನ್ನ ಆಧುನಿಕ ಭಾರತೀಯ ಭಾಷೆ ಎಂದು ವರ್ಗೀಕರಿಸಲಾಗಿದೆ. ಆದರೆ ದೇಶದಾದ್ಯಂತ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಲ್ಲಿ ಅರ್ಧಕ್ಕೂ ಹೆಚ್ಚಿನವರು,  ಈ  ಪಠ್ಯವನ್ನು ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿಯೇತರ ಭಾಷೆಯನ್ನು ಎಂಐಎಲ್ ಆಗಿ ಬೋಧಿಸಲಾಗುತ್ತದೆ. ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಹೊರತುಪಡಿಸಿದ ಭಾಷೆಗಳನ್ನು ಎಂಐಎಲ್ ಆಗಿ ಬೋಧಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ಭಾಗಿಯಾದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳಲ್ಲಿ, ಶೇ 59ರಷ್ಟು ಜನರು ಎಂಐಎಲ್ನಲ್ಲಿ ಇರುವ ಕವನ, ಗದ್ಯ ಮತ್ತು ನಾಟಕಗಳನ್ನು ಓದಲು ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲೂ ಶೇ 65ರಷ್ಟು ವಿದ್ಯಾರ್ಥಿಗಳು ಎಂಐಎಲ್ನಲ್ಲಿ ಇರುವ ಕವನ, ಗದ್ಯ ಮತ್ತು ನಾಟಕಗಳನ್ನು ಓದಲು-ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ. ಇದೂ ಮತ್ತೂ ಆಘಾತಕಾರಿಯಾದ ಅಂಶ.

ಈ ರೀತಿಯ ಕಲಿಕಾ ಸಾಧನೆಯ ಕುಸಿತಕ್ಕೆ ಕಾರಣ ಹುಡುಕಲು ಹೊರಟರೆ ಹಲವಾರು ಅಂಶಗಳು  ಇದೇ ಸಮೀಕ್ಷೆಯಲ್ಲಿ ನಮಗೆ ಸಿಗುತ್ತವೆ. ಅಂತಹ ಅಂಶಗಳಲ್ಲಿ ಬೋಧನೆಯ ಜೊತೆಗೆ ಶಿಕ್ಷಕರಿಗೆ ಇತರೆ ಕಾರ್ಯಭಾರ ಹಾಕಿರುವುದು ಎಂದು ದೇಶದ 43% ಶಿಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ತರಗತಿ ಬೋಧನೆಯಲ್ಲಿ ವಿದ್ಯಾರ್ಥಿಗಳನ್ನು ಸೆಳೆಯಲು ಅತಿಮುಖ್ಯ ಎಂದು ಪರಿಗಣಿತವಾಗಿರುವ ಬೋಧನೋಪಕರಣಗಳು ಹಾಗೂ ಪೂರಕ ಸಲಕರಣೆಗಳ ಪೂರೈಕೆಯಲ್ಲಿ ಕೊರತೆಯಿದೆ ಎಂಬುದರತ್ತ ವರದಿ ಬೊಟ್ಟು ಮಾಡಿದೆ. 3 ಹಾಗೂ 8ನೇ ತರಗತಿಯಲ್ಲಿ ಶೇ.63ರಷ್ಟು ಕೊರತೆಯಿದ್ದರೆ, 5 ಹಾಗೂ 10ನೇ ತರಗತಿಯಲ್ಲಿ ಶೇ. 62ರಷ್ಟು ಕೊರತೆ ಇದೆ ಎಂಬುದು ಸಮೀಕ್ಷೆಯಲ್ಲಿ ಬಿಂಬಿತವಾಗಿದೆ. ಇದೂ ಸಹ ಕಲಿಕೆಯ ಕುಸಿತಕ್ಕೆ ಒಂದು ಕಾರಣ ಎಂದರೆ ತಪ್ಪಾಗಲಾರದು.
ದೇಶದ  ಕೆಲ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆಯಿದೆ ಎಂಬುದನ್ನು ಈ ಸಮೀಕ್ಷೆಯು ಬಹಿರಂಗಪಡಿಸಿದೆ.
ಶಾಲಾ ಕಟ್ಟಡಗಳ ಗುಣಮಟ್ಟವೂ ಶೈಕ್ಷಣಿಕ ಚಟುವಟಿಕೆಯಲ್ಲಿ ಅತಿಮುಖ್ಯ. ಆದರೆ ರಾಜ್ಯದ 3ನೇ ತರಗತಿ ಹಂತದ ಶಾಲಾ ಕಟ್ಟಡಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡಬೇಕಿದೆ ಎಂದು ಶೇ 23ರಷ್ಟು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರೌಢಶಾಲಾ ಹಂತದಲ್ಲಿ ಕಟ್ಟಡಗಳ ದುರಸ್ತಿ ಬೇಡಿಕೆ ಸ್ವಲ್ಪ ಕಡಿಮೆಯಿದೆ ಎಂಬುದು ಸಮಾಧಾನಕರ ಸಂಗತಿ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಈ ಹಂತದಲ್ಲಿ ಮಕ್ಕಳ ಕಲಿಕೆಯ ಕುಸಿತ ಎಲ್ಲರೂ ಯೋಚಿಸಬೇಕಾದ ಸಂಗತಿ. ಈ ಸಂಧರ್ಭದಲ್ಲಿ  ಪಠ್ಯಕ್ರಮ ಪಠ್ಯ ಪುಸ್ತಕ ಕುರಿತಾಗಿ ಅನಗತ್ಯ ಗೊಂದಲ ಮಾಡಿಕೊಂಡು ರಾಡಿ ಎಬ್ಬಿಸುತ್ತಿರುವುದು ದುರದೃಷ್ಟಕರ .ಇಂತಹ ಸಂಧರ್ಭದಲ್ಲಿ ಒಬ್ಬರ  ಮೇಲೋಬ್ಬರು ಅನಗತ್ಯವಾಗಿ ದೂರದೆ ಆಳುವವರು,ಅಧಿಕಾರಿಗಳು,ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಎಲ್ಲರೂ ಸೇರಿ ನಮ್ಮ ದೇಶದ ಮಕ್ಕಳ ಕಲಿಕೆ ಉತ್ತಮವಾಗಲು ಹಾಗೂ ಗುಣಾತ್ಮಕ ಆಗಿರುವಂತೆ ಕ್ರಮ ವಹಿಸಬೇಕಿದೆ. ದೇಶದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವ ಶಿಕ್ಷಣ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಿದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

26 ಮೇ 2022

ಕವಿ ಹಿಡಿದ ಕನ್ನಡಿ .


 



ಕವಿ ಹಿಡಿದ ಕನ್ನಡಿ.  ವಿಮರ್ಶೆ.



ಕವಿ ಹಿಡಿದ ಕನ್ನಡಿ .ಇದು ಕವಿ ದೊಡ್ಡರಂಗೇಗೌಡರು ಅಂಕಣ ಬರಹಗಳ ಸಂಕಲನವಾಗಿದೆ. ಇಲ್ಲಿ ದೇಸೀಯ ನೆಲೆಗಟ್ಟಿನಲ್ಲಿಯೇ ಸಹಜವಾದ ಸಹೃದಯ ಪ್ರೀತಿಯ ವಿಮರ್ಶಾ ಲೇಖನಗಳಿವೆ. ಈ ಕೃತಿಯಲ್ಲಿ ಅನೇಕ ಲೇಖನಗಳಿದ್ದು ಸಾಹಿತ್ಯ ದಿಗ್ಗಜರಾದಂಥ ಶ್ರೇಷ್ಠ ಕವಿಗಳಿಂದ ಸಾಮಾನ್ಯ ಎಲೆಮರೆಯ ಕಾಯಿಯಂಥ ಕವಿಗಳ ಕಾವ್ಯ ಕೃತಿಗಳವರೆಗೆ ವಿಮರ್ಶೆ ಸಾಗುತ್ತದೆ. ಪ್ರಾಚೀನ ಕಾಲದ ಮಹತ್ವತೆಯನ್ನು ಆಧುನಿಕ ಜಗತ್ತಿನವರೆಗೂ ನಡೆದ ಘಟನೆಗಳು ಅವುಗಳ ವಿಭಿನ್ನ ದೃಷ್ಟಿ ಧೋರಣೆಯ ಆಯಾಮಗಳನ್ನು ಇಂದು ಎಲ್ಲ ವರ್ಗದ ಜನರೂ ಓದಿ ಅರ್ಥೈಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾದ ಗಹನವಾದ ವಿಚಾರ ಅಡಗಿದೆ.

ಸಾಹಿತ್ಯ ನಿರ್ಮಿತಿಯ ಹಿಂದಿರುವ ಪ್ರಜ್ಞೆಯನ್ನು ಹೆಚ್ಚು ವಾಸ್ತವಿಕವನ್ನಾಗಿ ಮಾಡುತ್ತದೆ. ಹಾಗೆಯೇ ದೊಡ್ಡರಂಗೇಗೌಡರ ಕಾಲದ ವಸ್ತುವನ್ನು ಗ್ರಹಿಸಿದ ರೀತಿಯನ್ನು ಅವರ ಒಟ್ಟಾರೆ ತಾತ್ವಿಕ ಹಿನ್ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳಬೇಕು. ಈ ಜಾಗತಿಕ ಅನುಭವದ ಹಿನ್ನೆಲೆ ದಟ್ಟವಾಗಿದೆ  ಕವಿ ಯೇಟ್ಸ್ ನ ಹಾಗೆ ದೊಡ್ಡರಂಗೇಗೌಡರು ಕೂಡಾ ಪೂರ್ಣ ಬೌದ್ಧಿಕ ವ್ಯವಸ್ಥೆಯನ್ನು ವೈಯುಕ್ತಿಕ ಹಂತದಲ್ಲಿ ನಿರ್ಮಿಸಿಕೊಂಡರು. ಹಾಗಾಗಿ ಆಲೋಚನಾ ಕ್ರಮಗಳು ನಿರಾಯಾಸವಾಗಿ ಬರುತ್ತವೆ. ಈ ರೀತಿಯ ಕವಿಗಳು ತಮ್ಮ ವಿಚಾರಗಳನ್ನು ತಮ್ಮ ವೈಚಾರಿಕ ಆಕೃತಿಗಳ ಶೋಧನೆಗಾಗಿ ಬಳಸಿದ್ದಾರೆ. ಇವರ ಪ್ರತಿಮಾ ಜಗತ್ತು, ಭಾಷೆಯ ಉಪಯೋಗ ಮುಂತಾದವು ಅಭಿವ್ಯಕ್ತಿಯಲ್ಲಿ ತಮ್ಮ ಬೌದ್ಧಿಕ ಜಗತ್ತಿನ ಸೂಕ್ಷ್ಮ ವಾಹಕಗಳಾಗಿ ದುಡಿಯುತ್ತವೆ. ಇದು ಮೆಚ್ಚಬೇಕಾದ ಅಂಶವಾಗಿದೆ.

ಕವಿ ಮತ್ತು ಲೇಖಕರಾದ ದೊಡ್ಡರಂಗೇಗೌಡರು ಈ ಪುಸ್ತಕ ಬರೆಯಲು ಪ್ರೇರಣೆಯಾದ ಅಂಶಗಳನ್ನು ಹೀಗೆ ವಿವರಿಸುತ್ತಾರೆ.

"ಅರವತ್ತರ ದಶಕದಿಂದಲೂ ನಾನು ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡೆ, ನಿರಂತರ ಕೃಷಿ ಮಾಡುತ್ತಾ ಬಂದೆ, ಕನ್ನಡ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾ ಬಂದೆ. ಹಾಗೆ ಬರೆದ ಕೆಲವು ಲೇಖನಗಳನ್ನು ಸಂಕಲಿಸಿ ಇಲ್ಲಿ ಕೃತಿಯ ರೂಪದಲ್ಲಿ ನೀಡಿದ್ದೇನೆ.


ನನ್ನ ಸುತ್ತ ಮುತ್ತಣ ಸನ್ನಿವೇಶಗಳಿಗೆ ಪ್ರಾಮಾಣಿಕವಾಗಿ ಒಬ್ಬ ಕವಿಯಾಗಿ ಸಮಾಜಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದೇನೆ. ಸಾಹಿತ್ಯ ಯಾವತ್ತೂ ಜನಜೀವನದ ಪ್ರತಿಬಿಂಬವೂ ಹೌದು. ಈ ಕಾರಣದಿಂದಲೂ ಇದು ಕವಿ ಗ್ರಹಿಸಿದ ಗ್ರಹಿಕೆಗಳು ಎಲ್ಲ ರೂಕ್ಷ ವಿಷಯಗಳಿಗೂ ಕವಿ ಕನ್ನಡಿ ಹಿಡಿದು ನೋಡಿ ಪ್ರತಿಕ್ರಿಯಿಸಿದ್ದರ ಫಲ ಇದು.  ಹೀಗಾಗಿ "ಕವಿ ಹಿಡಿದ ಕನ್ನಡಿ” ಎಂದು ಪುಸ್ತಕಕ್ಕೆ ಹೆಸರಿಸಿದ್ದೇನೆ." ಎಂದಿದ್ದಾರೆ.

ಈ ಕೃತಿಯಲ್ಲಿ ಬರುವ ಲೇಖನಗಳ ಕಡೆ ಒಮ್ಮೆ ಗಮನ ಹರಿಸುವುದಾದರೆ 

ನಾವು ಭಾರತೀಯರು ಎತ್ತ ಸಾಗುತ್ತಿದ್ದೇವೆ? ಎಂಬ ಲೇಖನದಲ್ಲಿ ಆಧುನಿಕತೆಯೆಡೆಗೆ ಮಾನವ ಸಾಗಬೇಕಾದಾಗ ಆದ ಕೆಲ ಘಟನೆಗಳ ಚಿತ್ರಣ ನೀಡಿದ್ದಾರೆ.

ಸಾಹಿತ್ಯ ಸೌರಭ “ವಡ್ಡಾರಾಧನೆ” ,

ಕವಿ ಪಂಪಣ್ಣ ಅವರ ಮಹಾನ್ ಸಾಧನೆ ,ಪಾಂಡಿತ್ಯದಲ್ಲಿ ಎತ್ತಿದ ಕೈ : ಮಂಜೇಶ್ವರದ ಗೋವಿಂದ ಪೈ! 

ಮುಂಬೆಳಕಿನ ಮುಂಗೋಳಿ ಹಟ್ಟಿಯಂಗಡಿ ನಾರಾಯಣರಾಯರು, ಕನ್ನಡ ಕಾವ್ಯಕ್ಕೆ ಹೊಸ ನುಡಿಗಟ್ಟು ನೀಡಿದ  ಬಿ.ಎಂ.ಶ್ರೀ ,ಅಮಿತಾನಂದ ನೀಡುವ ಸೃಜನ ಸಂಪನ್ನ,ದಾರ್ಶನಿಕ ಮಾರ್ಗ ಕವಿ ಡಿ.ವಿ.ಜಿ.,ವೈಚಾರಿಕತೆ ಬಿತ್ತಿದ ಅಪೂರ್ವ ಮಹಾಕವಿ ಕುವೆಂಪು,“ಸರ್ವ ಸೌಖ್ಯವೂ ಕುಟುಂಬದಲ್ಲೇ ಇದೆ”ಎಂದು ಸಾರಿದ ವರಕವಿ ದ.ರಾ.ಬೇಂದ್ರೆ ಬಹುಮುಖಿ ಆಯಾಮಗಳ ಬೇಂದ್ರೆ,ನಮ್ಮ ನಮ್ಮ ಮತಿಗಳು ನಮ್ಮ ಮೆಚ್ಚಿನ ದೀವಿಗೆಯಾಗಲಿ!

ಸಾಹಿತ್ಯ ಸಂಸರ್ಗ ಹಾ.ಮಾ.ನಾ ಒಂದು ಸಂಸ್ಮರಣೆ, ಮಂದಾರ ಹೂವಿನಂಥ ಮಹೋನ್ನತ ಮುಗಳಿ,

ಉತ್ಕರ್ಷದ ಹೊನಲಿನಲ್ಲಿ ಸುಗಮ ಸಂಗೀತ ಮುತ್ತಿನಂಥ ಕಾವ್ಯ ಬರೆದ ಕೊಡಗಿನ ಮುತ್ತಣ್ಣ,

ಸಹೃದಯರ ಭಾವ ಸಂಚಲನ ಮಾಡಿದ ಕವಿ ಇಂಚಲ ಅನನ್ಯ ಆಧ್ಯಾತ್ಮ ರಂಗ: ಅವತಾರ ಶೃಂಗ ,

ಆದರ್ಶ ಗುರುಗಳು ಸತ್ಪುರುಷರು ಕನ್ನಡ ನವ್ಯಕಾವ್ಯದ ಬಹುಮುಖೀ ಆಯಾಮಗಳು,ಕನ್ನಡ ಕಾವ್ಯಲೋಕ ದಾಖಲಿಸಿದ ಯುಗಾದಿ ನಾಡಕಟ್ಟುವ ಹಾಡು ಬರೆದನವ್ಯ ಕವಿ ಗೋಪಾಲಕೃಷ್ಣಾಡಿಗರು, ಪರ್ವತವಾಣಿ ಅವರ ಬಿಂಬ ಪ್ರತಿಬಿಂಬಗಳು , ಸಿ.ಪಿ.ಕೆ. ಅವರ “ಚಿಂತನೆ ಚಿಂತಾಮಣಿ" ಭಾವನೆಗಳ ಜೊತೆಗೆ ಚಿಂತನೆಗಳ ಬೆಸೆದ ಕವಿ  ವಿಷ್ಣುನಾಯ್ಕ, ಅಭಿವ್ಯಕ್ತಿಯ ಸಾಧ್ಯತೆಗಳ ವಿಸ್ತರಿಸಿದ ಅಸೀಮ ಅನ್ವೇಷಕತೇಜಸ್ವಿ,ಜ್ವಾಲಾಮುಖಿಯಂಥ ಕಾವ್ಯ ಬರೆದ ವಾಲೀಕಾರ

ಮಧು ಮಧುರ ಗೀತೆಗಳನಿತ್ತ ಗೀತಕಾರ ಸು. ರುದ್ರಮೂರ್ತಿಶಾಸ್ತ್ರಿ, ಶ್ರೀನಿವಾಸರಾಜು ಅಕ್ಕರೆಯ ಕನ್ನಡದ ಅನನ್ಯ ಪರಿಚಾರಕ ಅಸಮಾನತೆಯ ವಿರುದ್ಧ ಸಿಡಿದೆದ್ದ ತಪ್ತಕವಿ,ದಲಿತ ಬದುಕಿನ ಸಮರ್ಥ ಚಿತ್ರಣ ನೀಡಿದ ಕವಿ,ಡಾ|| ಸಿದ್ಧಲಿಂಗಯ್ಯ ,

 ಈ ನೆಲದ ಕೃಷಿಕ ಕವಿ ಸಿದ್ದಪ್ಪ ಬಿದರಿ, ಅಲೆಮಾರಿ ಜೀವನಕ್ಕೆ ಹಿಡಿದ ರನ್ನಗನ್ನಡಿಗಬಾಳ,

ಆಧುನಿಕ ಕಾವ್ಯ ವೈಚಾರಿಕತೆಗೆ ಪ್ರಾಮುಖ್ಯ ವಾಸ್ತವತೆಯ ರೂಕ್ಷ ಮುಖಗಳು,ಮುಂತಾದ ಲೇಖನಗಳು ಓದುಗರಿಗೆ ಕೆಲ ಮಹಾನ್ ವ್ಯಕ್ತಿಗಳ ಪರಿಚಯ ಮಾಡುತ್ತಾ ನಮ್ಮ ಜ್ಞಾನವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.


ಪುಸ್ತಕದ ಹೆಸರು: ಕವಿ ಹಿಡಿದ ಕನ್ನಡಿ 

ಲೇಖಕರು:ಡಾ. ದೊಡ್ಡ ರಂಗೇಗೌಡ.

ಪ್ರಕಾಶನ:ಉನ್ನತಿ ಪ್ರಕಾಶನ

ವರ್ಷ:೨೦೧೫

ಬೆಲೆ:೨೪೦₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

25 ಮೇ 2022

ಓಟ .ಹನಿಗವನ


 


ಓಟ 

ಪ್ರೀತ್ಸೆ ...ಪ್ರೀತ್ಸೇ... ಎಂದು
ಪೀಡಿಸುತಾ ಅವನು
ಹಿಂದೆ ಬಿದ್ದಿರುವುದನ್ನು 
ಕಂಡು ಬೀರಿದಳು ತೀಕ್ಷ್ಣ ನೋಟ|
ಅವಳ ಕಣ್ಣೋಟಕ್ಕೆ ಹೆದರಿ
ಶುರು ಮಾಡಿದ ಮನೆ ಕಡೆ ಓಟ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ