26 ಮೇ 2022

ಕವಿ ಹಿಡಿದ ಕನ್ನಡಿ .


 



ಕವಿ ಹಿಡಿದ ಕನ್ನಡಿ.  ವಿಮರ್ಶೆ.



ಕವಿ ಹಿಡಿದ ಕನ್ನಡಿ .ಇದು ಕವಿ ದೊಡ್ಡರಂಗೇಗೌಡರು ಅಂಕಣ ಬರಹಗಳ ಸಂಕಲನವಾಗಿದೆ. ಇಲ್ಲಿ ದೇಸೀಯ ನೆಲೆಗಟ್ಟಿನಲ್ಲಿಯೇ ಸಹಜವಾದ ಸಹೃದಯ ಪ್ರೀತಿಯ ವಿಮರ್ಶಾ ಲೇಖನಗಳಿವೆ. ಈ ಕೃತಿಯಲ್ಲಿ ಅನೇಕ ಲೇಖನಗಳಿದ್ದು ಸಾಹಿತ್ಯ ದಿಗ್ಗಜರಾದಂಥ ಶ್ರೇಷ್ಠ ಕವಿಗಳಿಂದ ಸಾಮಾನ್ಯ ಎಲೆಮರೆಯ ಕಾಯಿಯಂಥ ಕವಿಗಳ ಕಾವ್ಯ ಕೃತಿಗಳವರೆಗೆ ವಿಮರ್ಶೆ ಸಾಗುತ್ತದೆ. ಪ್ರಾಚೀನ ಕಾಲದ ಮಹತ್ವತೆಯನ್ನು ಆಧುನಿಕ ಜಗತ್ತಿನವರೆಗೂ ನಡೆದ ಘಟನೆಗಳು ಅವುಗಳ ವಿಭಿನ್ನ ದೃಷ್ಟಿ ಧೋರಣೆಯ ಆಯಾಮಗಳನ್ನು ಇಂದು ಎಲ್ಲ ವರ್ಗದ ಜನರೂ ಓದಿ ಅರ್ಥೈಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾದ ಗಹನವಾದ ವಿಚಾರ ಅಡಗಿದೆ.

ಸಾಹಿತ್ಯ ನಿರ್ಮಿತಿಯ ಹಿಂದಿರುವ ಪ್ರಜ್ಞೆಯನ್ನು ಹೆಚ್ಚು ವಾಸ್ತವಿಕವನ್ನಾಗಿ ಮಾಡುತ್ತದೆ. ಹಾಗೆಯೇ ದೊಡ್ಡರಂಗೇಗೌಡರ ಕಾಲದ ವಸ್ತುವನ್ನು ಗ್ರಹಿಸಿದ ರೀತಿಯನ್ನು ಅವರ ಒಟ್ಟಾರೆ ತಾತ್ವಿಕ ಹಿನ್ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳಬೇಕು. ಈ ಜಾಗತಿಕ ಅನುಭವದ ಹಿನ್ನೆಲೆ ದಟ್ಟವಾಗಿದೆ  ಕವಿ ಯೇಟ್ಸ್ ನ ಹಾಗೆ ದೊಡ್ಡರಂಗೇಗೌಡರು ಕೂಡಾ ಪೂರ್ಣ ಬೌದ್ಧಿಕ ವ್ಯವಸ್ಥೆಯನ್ನು ವೈಯುಕ್ತಿಕ ಹಂತದಲ್ಲಿ ನಿರ್ಮಿಸಿಕೊಂಡರು. ಹಾಗಾಗಿ ಆಲೋಚನಾ ಕ್ರಮಗಳು ನಿರಾಯಾಸವಾಗಿ ಬರುತ್ತವೆ. ಈ ರೀತಿಯ ಕವಿಗಳು ತಮ್ಮ ವಿಚಾರಗಳನ್ನು ತಮ್ಮ ವೈಚಾರಿಕ ಆಕೃತಿಗಳ ಶೋಧನೆಗಾಗಿ ಬಳಸಿದ್ದಾರೆ. ಇವರ ಪ್ರತಿಮಾ ಜಗತ್ತು, ಭಾಷೆಯ ಉಪಯೋಗ ಮುಂತಾದವು ಅಭಿವ್ಯಕ್ತಿಯಲ್ಲಿ ತಮ್ಮ ಬೌದ್ಧಿಕ ಜಗತ್ತಿನ ಸೂಕ್ಷ್ಮ ವಾಹಕಗಳಾಗಿ ದುಡಿಯುತ್ತವೆ. ಇದು ಮೆಚ್ಚಬೇಕಾದ ಅಂಶವಾಗಿದೆ.

ಕವಿ ಮತ್ತು ಲೇಖಕರಾದ ದೊಡ್ಡರಂಗೇಗೌಡರು ಈ ಪುಸ್ತಕ ಬರೆಯಲು ಪ್ರೇರಣೆಯಾದ ಅಂಶಗಳನ್ನು ಹೀಗೆ ವಿವರಿಸುತ್ತಾರೆ.

"ಅರವತ್ತರ ದಶಕದಿಂದಲೂ ನಾನು ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡೆ, ನಿರಂತರ ಕೃಷಿ ಮಾಡುತ್ತಾ ಬಂದೆ, ಕನ್ನಡ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾ ಬಂದೆ. ಹಾಗೆ ಬರೆದ ಕೆಲವು ಲೇಖನಗಳನ್ನು ಸಂಕಲಿಸಿ ಇಲ್ಲಿ ಕೃತಿಯ ರೂಪದಲ್ಲಿ ನೀಡಿದ್ದೇನೆ.


ನನ್ನ ಸುತ್ತ ಮುತ್ತಣ ಸನ್ನಿವೇಶಗಳಿಗೆ ಪ್ರಾಮಾಣಿಕವಾಗಿ ಒಬ್ಬ ಕವಿಯಾಗಿ ಸಮಾಜಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದೇನೆ. ಸಾಹಿತ್ಯ ಯಾವತ್ತೂ ಜನಜೀವನದ ಪ್ರತಿಬಿಂಬವೂ ಹೌದು. ಈ ಕಾರಣದಿಂದಲೂ ಇದು ಕವಿ ಗ್ರಹಿಸಿದ ಗ್ರಹಿಕೆಗಳು ಎಲ್ಲ ರೂಕ್ಷ ವಿಷಯಗಳಿಗೂ ಕವಿ ಕನ್ನಡಿ ಹಿಡಿದು ನೋಡಿ ಪ್ರತಿಕ್ರಿಯಿಸಿದ್ದರ ಫಲ ಇದು.  ಹೀಗಾಗಿ "ಕವಿ ಹಿಡಿದ ಕನ್ನಡಿ” ಎಂದು ಪುಸ್ತಕಕ್ಕೆ ಹೆಸರಿಸಿದ್ದೇನೆ." ಎಂದಿದ್ದಾರೆ.

ಈ ಕೃತಿಯಲ್ಲಿ ಬರುವ ಲೇಖನಗಳ ಕಡೆ ಒಮ್ಮೆ ಗಮನ ಹರಿಸುವುದಾದರೆ 

ನಾವು ಭಾರತೀಯರು ಎತ್ತ ಸಾಗುತ್ತಿದ್ದೇವೆ? ಎಂಬ ಲೇಖನದಲ್ಲಿ ಆಧುನಿಕತೆಯೆಡೆಗೆ ಮಾನವ ಸಾಗಬೇಕಾದಾಗ ಆದ ಕೆಲ ಘಟನೆಗಳ ಚಿತ್ರಣ ನೀಡಿದ್ದಾರೆ.

ಸಾಹಿತ್ಯ ಸೌರಭ “ವಡ್ಡಾರಾಧನೆ” ,

ಕವಿ ಪಂಪಣ್ಣ ಅವರ ಮಹಾನ್ ಸಾಧನೆ ,ಪಾಂಡಿತ್ಯದಲ್ಲಿ ಎತ್ತಿದ ಕೈ : ಮಂಜೇಶ್ವರದ ಗೋವಿಂದ ಪೈ! 

ಮುಂಬೆಳಕಿನ ಮುಂಗೋಳಿ ಹಟ್ಟಿಯಂಗಡಿ ನಾರಾಯಣರಾಯರು, ಕನ್ನಡ ಕಾವ್ಯಕ್ಕೆ ಹೊಸ ನುಡಿಗಟ್ಟು ನೀಡಿದ  ಬಿ.ಎಂ.ಶ್ರೀ ,ಅಮಿತಾನಂದ ನೀಡುವ ಸೃಜನ ಸಂಪನ್ನ,ದಾರ್ಶನಿಕ ಮಾರ್ಗ ಕವಿ ಡಿ.ವಿ.ಜಿ.,ವೈಚಾರಿಕತೆ ಬಿತ್ತಿದ ಅಪೂರ್ವ ಮಹಾಕವಿ ಕುವೆಂಪು,“ಸರ್ವ ಸೌಖ್ಯವೂ ಕುಟುಂಬದಲ್ಲೇ ಇದೆ”ಎಂದು ಸಾರಿದ ವರಕವಿ ದ.ರಾ.ಬೇಂದ್ರೆ ಬಹುಮುಖಿ ಆಯಾಮಗಳ ಬೇಂದ್ರೆ,ನಮ್ಮ ನಮ್ಮ ಮತಿಗಳು ನಮ್ಮ ಮೆಚ್ಚಿನ ದೀವಿಗೆಯಾಗಲಿ!

ಸಾಹಿತ್ಯ ಸಂಸರ್ಗ ಹಾ.ಮಾ.ನಾ ಒಂದು ಸಂಸ್ಮರಣೆ, ಮಂದಾರ ಹೂವಿನಂಥ ಮಹೋನ್ನತ ಮುಗಳಿ,

ಉತ್ಕರ್ಷದ ಹೊನಲಿನಲ್ಲಿ ಸುಗಮ ಸಂಗೀತ ಮುತ್ತಿನಂಥ ಕಾವ್ಯ ಬರೆದ ಕೊಡಗಿನ ಮುತ್ತಣ್ಣ,

ಸಹೃದಯರ ಭಾವ ಸಂಚಲನ ಮಾಡಿದ ಕವಿ ಇಂಚಲ ಅನನ್ಯ ಆಧ್ಯಾತ್ಮ ರಂಗ: ಅವತಾರ ಶೃಂಗ ,

ಆದರ್ಶ ಗುರುಗಳು ಸತ್ಪುರುಷರು ಕನ್ನಡ ನವ್ಯಕಾವ್ಯದ ಬಹುಮುಖೀ ಆಯಾಮಗಳು,ಕನ್ನಡ ಕಾವ್ಯಲೋಕ ದಾಖಲಿಸಿದ ಯುಗಾದಿ ನಾಡಕಟ್ಟುವ ಹಾಡು ಬರೆದನವ್ಯ ಕವಿ ಗೋಪಾಲಕೃಷ್ಣಾಡಿಗರು, ಪರ್ವತವಾಣಿ ಅವರ ಬಿಂಬ ಪ್ರತಿಬಿಂಬಗಳು , ಸಿ.ಪಿ.ಕೆ. ಅವರ “ಚಿಂತನೆ ಚಿಂತಾಮಣಿ" ಭಾವನೆಗಳ ಜೊತೆಗೆ ಚಿಂತನೆಗಳ ಬೆಸೆದ ಕವಿ  ವಿಷ್ಣುನಾಯ್ಕ, ಅಭಿವ್ಯಕ್ತಿಯ ಸಾಧ್ಯತೆಗಳ ವಿಸ್ತರಿಸಿದ ಅಸೀಮ ಅನ್ವೇಷಕತೇಜಸ್ವಿ,ಜ್ವಾಲಾಮುಖಿಯಂಥ ಕಾವ್ಯ ಬರೆದ ವಾಲೀಕಾರ

ಮಧು ಮಧುರ ಗೀತೆಗಳನಿತ್ತ ಗೀತಕಾರ ಸು. ರುದ್ರಮೂರ್ತಿಶಾಸ್ತ್ರಿ, ಶ್ರೀನಿವಾಸರಾಜು ಅಕ್ಕರೆಯ ಕನ್ನಡದ ಅನನ್ಯ ಪರಿಚಾರಕ ಅಸಮಾನತೆಯ ವಿರುದ್ಧ ಸಿಡಿದೆದ್ದ ತಪ್ತಕವಿ,ದಲಿತ ಬದುಕಿನ ಸಮರ್ಥ ಚಿತ್ರಣ ನೀಡಿದ ಕವಿ,ಡಾ|| ಸಿದ್ಧಲಿಂಗಯ್ಯ ,

 ಈ ನೆಲದ ಕೃಷಿಕ ಕವಿ ಸಿದ್ದಪ್ಪ ಬಿದರಿ, ಅಲೆಮಾರಿ ಜೀವನಕ್ಕೆ ಹಿಡಿದ ರನ್ನಗನ್ನಡಿಗಬಾಳ,

ಆಧುನಿಕ ಕಾವ್ಯ ವೈಚಾರಿಕತೆಗೆ ಪ್ರಾಮುಖ್ಯ ವಾಸ್ತವತೆಯ ರೂಕ್ಷ ಮುಖಗಳು,ಮುಂತಾದ ಲೇಖನಗಳು ಓದುಗರಿಗೆ ಕೆಲ ಮಹಾನ್ ವ್ಯಕ್ತಿಗಳ ಪರಿಚಯ ಮಾಡುತ್ತಾ ನಮ್ಮ ಜ್ಞಾನವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.


ಪುಸ್ತಕದ ಹೆಸರು: ಕವಿ ಹಿಡಿದ ಕನ್ನಡಿ 

ಲೇಖಕರು:ಡಾ. ದೊಡ್ಡ ರಂಗೇಗೌಡ.

ಪ್ರಕಾಶನ:ಉನ್ನತಿ ಪ್ರಕಾಶನ

ವರ್ಷ:೨೦೧೫

ಬೆಲೆ:೨೪೦₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

25 ಮೇ 2022

ಓಟ .ಹನಿಗವನ


 


ಓಟ 

ಪ್ರೀತ್ಸೆ ...ಪ್ರೀತ್ಸೇ... ಎಂದು
ಪೀಡಿಸುತಾ ಅವನು
ಹಿಂದೆ ಬಿದ್ದಿರುವುದನ್ನು 
ಕಂಡು ಬೀರಿದಳು ತೀಕ್ಷ್ಣ ನೋಟ|
ಅವಳ ಕಣ್ಣೋಟಕ್ಕೆ ಹೆದರಿ
ಶುರು ಮಾಡಿದ ಮನೆ ಕಡೆ ಓಟ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

22 ಮೇ 2022

ಆಕೆ ಉಲಿದ ಹಾಡು .


 


ಆಕೆ ಉಲಿದ ಹಾಡು.


ಹಾಡೆಂದರೆ ನನಗೆ ಪಂಚಪ್ರಾಣ ಬಾಲ್ಯದಿಂದಲೂ ಶಿಕ್ಷಕರ ಮತ್ತು ಸ್ನೇಹಿತರ ಒತ್ತಾಯದ ಮೇರೆಗೆ ಆಗಾಗ ಹಾಡುತ್ತಿದ್ದೆ. ನಾನು ಬೇರೆಯವರ ಹಾಡು ಕೇಳಿ ಖುಷಿ ಪಡುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ. ನಾನು ಯರಬಳ್ಳಿಯಲ್ಲಿ ಪಿ ಯು ಸಿ ಓದುವಾಗ ನಮ್ಮ ಸಹಪಾಠಿಯಾಗಿದ್ದ ಹರ್ತಿಕೋಟೆಯ ರೂಪ ಎಂಬ ವಿದ್ಯಾರ್ಥಿನಿ ಶಬರಿ ಮಲೆ ಸ್ವಾಮಿ ಅಯ್ಯಪ್ಪ ಚಿತ್ರದ "ಗಣಪತಿಯೇ..... ಬುದ್ದಿದಾತನೆ.... ಸಲಹು ಗಣೇಶನೇ ....ನೀ ನಮ್ಮ ಗೆಲುವಾಗಿ ಬಾ....." ಎಂಬ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು .ಅವರು ಹಾಡಿದ ಹಾಡು ಕ್ಯಾಸೆಟ್ ನಲ್ಲಿ ಹಾಡಿದ ರೀತಿಯೇ ಇತ್ತು. ಈಗಲೂ ಆ ಭಕ್ತಿ ಗೀತೆ ಕೇಳಿದಾಗ ರೂಪ ನೆನಪಾಗುತ್ತಾರೆ. 

ಟಿ ಸಿ ಹೆಚ್ ಓದುವಾಗ ಗಾಯಕಿಯರ ದಂಡೇ ಇತ್ತು. ಭಾರತಿ ಎಂಬ ಪ್ರಶಿಕ್ಷಣಾರ್ಥಿ " ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ " ಎಂಬ ಹಾಡನ್ನು ಭಾವ ತುಂಬಿ ಹಾಡುತ್ತಿದ್ದರು. ಹದಿನೈದು ದಿನಕ್ಕೆ ಒಂದು ಸಮಾರಂಭದಲ್ಲಿ ಇವರ ಹಾಡನ್ನು ಕೇಳಲು ನಾವು ಕಾತುರರಾಗಿದ್ದೆವು. ಅದೇ ಸಮಯದಲ್ಲಿ ಶೈಲಜಾ ಎಂಬ ನಮ್ಮ ಸಹಪಾಠಿ" ಹಸಿರು ಗಾಜಿನ ಬಳೆದಳೆ.... ಸ್ತ್ರೀ ಕುಲದ ಶುಭ ಕರಗಳೆ" ಎಂಬ ಗೀತೆಯನ್ನು ಬಹಳ ಸೊಗಸಾಗಿ ಹಾಡುತ್ತಿದ್ದರು. ನೋಡಲು ಸ್ವಲ್ಪ ಕಪ್ಪಾಗಿದ್ದರೂ ಇವರ ಸ್ವರಕ್ಕೆ ಮಾರುಹೋಗದ ಹುಡಗರಿರಲಿಲ್ಲ. ಆ ಪೈಕಿ ಸ್ವಲ್ಪ ಹೆಚ್ಚಾಗಿ ಮಾರುಹೋದ ನಮ್ಮ ಗೆಳೆಯ ಲೋಕೇಶ್ ಶೈಲಾಜಾಳನ್ನೇ ಮದುವೆಯಾಗಿ ಈಗ ಸುಖ ಸಂಸಾರ ನಡೆಸುತ್ತಿದ್ದಾರೆ. ಇವರಿಬ್ಬರೂ ಈಗಲೂ ಸಂಪರ್ಕದಲ್ಲಿ ಇದ್ದು ಸ್ನೇಹವನ್ನು ಮುಂದುವರೆಸಿದ್ದೇವೆ. ಭಾರತಿ ಮತ್ತು ರೂಪರವರು ಈಗ ಎಲ್ಲಿವರೋ ತಿಳಿದಿಲ್ಲ. ಆದರೂ ಅವರು ಹಾಡಿದ ಹಾಡುಗಳ ಕೇಳಿದಾಗ ಅವರ ನೆನಪಾಗುತ್ತದೆ. ಮತ್ತು ಕಾಲೇಜಿನ ದಿನಗಳು ಮರುಕಳಿಸುತ್ತವೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

12 ಮೇ 2022

ಬೆಲ್ಲಂ ಪುಲ್ಲಕ್ಕ .ಪುಸ್ತಕ ವಿಮರ್ಶೆ


 ವಿಮರ್ಶೆ 35.


ಬೆಲ್ಲಂ ಪುಲ್ಲಕ್ಕ 



ತುಮಕೂರು ಮೂಲದ ಲೇಖಕರಾದ

ಮಲ್ಲಿಕಾರ್ಜುನ ಹೊಸಪಾಳ್ಯರ ಬೆಲ್ಲಂಪುಲ್ಲಕ್ಕ  ಶೀರ್ಷಿಕೆಯ ಆಕರ್ಷಕ ಪುಸ್ತಕದ  ಹದಿನೈದು ಅಧ್ಯಾಯಗಳಲ್ಲಿ ಪ್ರತಿ ಅಧ್ಯಾಯವೂ ಓದಿಸಿಕೊಂಡು ಹೋಗುತ್ತವೆ. ಈ ಸಂಕಲನದಲ್ಲಿ ಕೃಷಿಯನ್ನು ನಂಬಿದ ರೈತರ ದಿನನಿತ್ಯದ ಬದುಕಿನ ತವಕ ತಲ್ಲಣ, ನೋವು ನಲಿವು, ಸಂಭ್ರಮ ಸಡಗರ, ಜಗಳ-ಮುನಿಸು ಎಲ್ಲವೂ ಇವೆ. ಓದುಗರಿಗೆ ಅಪರೂಪಕ್ಕೆ ಸಿಗುವ ಹಳ್ಳಿಗಾಡಿನ ಒಳನೋಟಗಳನ್ನು ಅವರು ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ.


ನಗರಗಳಿಗೆ ಹೋಲಿಸಿ ಗ್ರಾಮಗಳಲ್ಲಿ ಅದಿಲ್ಲ ಇದಿಲ್ಲ ಎಂಬ 'ಇಲ್ಲವುಗಳ ಪಟ್ಟಿಯನ್ನೇ ಎಲ್ಲರೂ ಮುಂದಿಡುತ್ತಾರೆ. ಆದರೆ ಒಳಹೊಕ್ಕು ನೋಡಿದರೆ ಅಲ್ಲಿನ ಸೀಮಿತ ಅವಕಾಶಗಳನ್ನು ಹಿಗ್ಗಿಸಬಲ್ಲ ನಾನಾ ಬಗೆಯ ಸಾಧ್ಯತೆಗಳನ್ನು ಶೋಧಿಸುವವರ ಎಷ್ಟೊಂದು ಕಥನಗಳು ಕಾಣುತ್ತವೆ. ಅಲ್ಲಿನ ಬದುಕಿನಲ್ಲಿ ಎಷ್ಟೊಂದು ಬಣ್ಣಗಳು ಕಾಣುತ್ತವೆ. ದುಡಿಮೆಗೆ ಎಷ್ಟೊಂದು ಪರ್ಯಾಯಗಳಿಗೆ ಮನರಂಜನೆಗೆ ಏನೆಲ್ಲ ಅವಕಾಶಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಜನರಾಡುವ ಭಾಷೆಯಲ್ಲಿ ಎಷ್ಟೊಂದು ವೈವಿಧ್ಯ ಕಾಣುತ್ತದೆ.


ಮಲ್ಲಿಕಾರ್ಜುನ ಹೊಸಪಾಳ್ಯರವರ 

ಹುಟ್ಟೂರು, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹೊಸಪಾಳ್ಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಟಿ.ಪಿ.ಕೈಲಾಸಂ ಚಿನ್ನದ ಪದಕ ಪಡೆದ ಇವರು ಮೂರು ದಶಕಗಳಿಂದ ದೇಸಿ ಬೀಜಗಳ ಸಂರಕ್ಷಣೆ, ಜಲಮೂಲ ದಾಖಲಾತಿ, ಸುಸ್ಥಿರ ಕೃಷಿ, ಸಿರಿಧಾನ್ಯ ಉತ್ತೇಜನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆ, ವಿವಿಧ ಸಂಸ್ಥೆ ಹಾಗೂ ಸರ್ಕಾರಿ ಯೋಜನೆಗಳಲ್ಲಿ ದಾಖಲಾತಿ ಸಮಾಲೋಚಕ ವೃತ್ತಿ ಹವ್ಯಾಸಿ ಬರಹಗಾರರಾದ ಇವರ ರಚನೆಗಳು  ಕನ್ನಡ ಪ್ರಭ, ವಿಜಯಕರ್ನಾಟಕ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ಕೃಷಿ ವಿಚಾರಗಳ ಅಂಕಣ ಬರವಣಿಗೆ, ಪ್ರಬಂಧ ಹಾಗೂ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.


ಕೃಷಿ ಮಾಧ್ಯಮ ಕೇಂದ್ರದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ: ಸಿಡಿಎಲ್ ಸಂಸ್ಥೆಯ 'ಚರಕ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 'ಮುರುಘಾಶ್ರೀ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಸುಕೃತ ಕೃಷಿ ಬರಹಗಾರ ಪ್ರಶಸ್ತಿ ಪುರಸ್ಕೃತ, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂದಿದೆ.


'ತೇಜಸ್ವಿ ನೆನಪಲ್ಲಿ ಅಲ್ಮೇರಾ ರಿಪೇರಿ' ಪ್ರಬಂಧಗಳ ಸಂಕಲನವೂ ಸೇರಿದಂತೆ, ಕೃಷಿ ಮತ್ತು ನೀರಿಗೆ ಸಂಬಂಧಪಟ್ಟ 'ನೆಟ್ಟಿರಾಗಿ', 'ಕೃಷಿ ಆಚರಣೆ', 'ಪೈರುಪಚ್ಚೆ. 'ಕೊರಲೆ', 'ಚೌಳು ನೆಲದ ಬಂಗಾರ', 'ಸಿರಿಧಾನ್ಯ ಪರಂಪರೆ', 'ನಶಿಸುತ್ತಿರುವ ನೀರಿನ ಜ್ಞಾನ', 'ತಲಪರಿಗೆ' ಇತ್ಯಾದಿ 13 ಪುಸ್ತಕಗಳ ಪ್ರಕಟಣೆ ಆಗಿವೆ.

 

ಗದ್ದಲದ ಸಂಭ್ರಮದ ಗದ್ದೆ ಕಣಗಾಲ ನನ್ನ ಬಾಲ್ಯ ನೆನಪಿಸಿತು. ರಾಜ್ ಕುಮಾರ್ ಮತ್ತು ರಾಗಿ ರೊಟ್ಟಿ ಪ್ರಬಂಧ ನನ್ನ ತಾಯಿಯ ನೆನಪು ಮಾಡಿಸಿತು. ಮಲ್ಲಿಕಾರ್ಜುನ್ ರವರಿಗೆ ರೊಟ್ಟಿ ಇಷ್ಟ ಇರಲಿಲ್ಲ .ಆದರೆ ನನಗೆ ನನ್ನಮ್ಮ ಮಾಡಿದ ರಾಗಿ ರೊಟ್ಟಿ ಈಗಲೂ ಇಷ್ಟ. ಗಂಧಸಾಲೆಯ ಘಮಲಿನಲ್ಲಿ ಬರುವ  ಭತ್ತದ ತಳಿಗಳಂತಹ ತಳಿಗಳ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಆಗಬೇಕು. ಪೊರಕೆಗಳ ಬಗ್ಗೆ ಬರೆದ ಪ್ರಬಂಧವು ನಾನೂ ಒಮ್ಮೆ ಪ್ರಬಂಧ ಬರೆದಿದ್ದನ್ನು ನೆನಪಿಗೆ ತಂದಿತು.

ಪ್ರತಿಯೊಂದು ಪ್ರಬಂಧಕ್ಕೆ ಹೊಂದುವ ರೇಖಾಚಿತ್ರಗಳ ಉಲ್ಲೇಖ ಮಾಡಲೇಬೇಕು .ಜೊತೆಗೆ ಆಕರ್ಷಕ ಶೀರ್ಷಿಕೆಗೆ ತಕ್ಕಂತೆ ಮುಖಪುಟವಿದೆ.

ಒಟ್ಟಾರೆ ಹಳ್ಳಿಗಾಡಿನ ಸುತ್ತಾಟದ ಕಥೆಗಳನ್ನು ಓದಿ ಬೆಲ್ಲಂಪುಲ್ಲಕ್ಕರ ಚಾಕಚಕ್ಯತೆ, ಲೇಖಕರ ತಂದೆಯವರ ಬೈಯ್ಗಳವನ್ನು ಸವಿಯಲು ನೀವು ಬೆಲ್ಲಂ ಪುಲ್ಲಕ್ಕ ಓದಲೇಬೇಕು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


11 ಮೇ 2022

ಆರ್ಯ ವೀರ್ಯ .ಪುಸ್ತಕ ವಿಮರ್ಶೆ.


 


ವಿಮರ್ಶೆ ೩೪

ಆರ್ಯ ವೀರ್ಯ 


ಆರ್ಯ ವೀರ್ಯ ಪುಸ್ತಕದ ಲೇಖಕರಾದ ಕೆ ಎನ್ ಗಣೇಶಯ್ಯ ರವರು ಓದುಗರನ್ನು ಚಿಂತನೆಗೆ ಹಚ್ಚುವ ಕೃತಿಗಳನ್ನು ಬರೆಯುವುದರಲ್ಲಿ ಎತ್ತಿದ ಕೈ. 

ವೃತ್ತಿಯಿಂದ ಕೃಷಿ ವಿಜ್ಞಾನಿ, ಕೋಲಾರ ಜಿಲ್ಲೆಯವರು. 30 ವರ್ಷ ತಳಿ ಅಭಿವೃದ್ಧಿಯಲ್ಲಿ ತೊಡಗಿದ್ದವರು, ಪ್ರಾಣಿ, ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ, ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ, ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮತ್ತು ಆರು ವೈಜ್ಞಾನಿಕ ಪುಸ್ತಕಗಳ ಪ್ರಕಟಣೆ ಮಾಡಿರುವರು.


'ಶಾಲಭಂಜಿಕೆ' ಸಣ್ಣಕಥೆ ಮೊದಲ ಸೃಜನಶೀಲ ಬರವಣಿಗೆ, ಅದೇ ಹೆಸರಿನ ಸಂಕಲನವೂ ಪ್ರಕಟವಾಗಿದೆ. ವಿವಿಧ ಪತ್ರಿಕೆಗಳಲ್ಲಿ ಹಲವಾರು ಕಥೆಗಳು ಪ್ರಕಟವಾಗಿವೆ. 'ಕನಕ ಮುಸುಕು', 'ಕರಿಸಿರಿಯಾನ', 'ಕಪಿಲಿಪಿಸಾರ', 'ಚಿತಾದಂತ', 'ಏಳು ರೊಟ್ಟಿಗಳು', 'ಮೂಕ ಧಾತು', 'ಶಿಲಾಕುಲ ವಲಸೆ', 'ಬಳ್ಳಿಕಾಳ ಬಳ್ಳಿ' ಮತ್ತು 'ರಕ್ತ ಸಿಕ್ತ ರತ್ನ' ಇವು ಅವರ ಕಾದಂಬರಿಗಳು. 'ಶಾಲಭಂಜಿಕೆ', 'ಪದ್ಮಪಾಣಿ, 'ನೇಹಲ', 'ಸಿಗೀರಿಯಾ', 'ಕಲ್ಪವಸಿ', 'ಮಿಹಿರಾಕುಲ', 'ಪಂನಿ ತಾಂಡವ' ಮತ್ತು 'ಆರ್ಯ ವೀರ್ಯ' ಕಥಾಸಂಕಲನಗಳು: 'ಭಿನ್ನೋಟ', 'ವಿ-ಚಾರಣ', 'ಭಿನ್ನಬಿಂಬ' ಮತ್ತು 'ತಾರುಮಾರು' ಇವು ಅವರ ಲೇಖನಗಳ ಸಂಗ್ರಹ.

ಕರ್ನಾಟಕ ಸರಕಾರದ ಪರಿಸರ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ : ದತ್ತಿ ಪ್ರಶಸ್ತಿ ಜೊತೆಗೆ ಹಲವಾರು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.


ಪ್ರಸ್ತುತ ಕಥಾ ಸಂಕಲನದಲ್ಲಿ ಇರುವ 

ಚಿಂತನಾ ಬೊಗುಣಿ ಎಂಬ ಕಥೆಯಲ್ಲಿ

ಮಾಧವ ರಾವ್ ಮಗ ಮುರುಳಿ ಉತ್ತರ ಪ್ರದೇಶದ ಪ್ರವಾಸ ಹೋಗಿ ಬಂದಾಗಿನಿಂದ ಆದ ಅನಪೇಕ್ಷಿತ ವರ್ತನೆಗಳನ್ನು ಹಾಗೂ  ಬದಲಾವಣೆಗಳನ್ನು  ಗಮನಿಸುವ ತಂದೆ ಹಾಗೂ ತಂದೆಯ ಗೆಳೆಯರಾದ  ಶ್ರೀಧರ್ ರವರು  ಸಮಸ್ಯೆಯನ್ನು ಬಗೆಹರಿಸುವರೇ ಅಥವಾ ಸಮಸ್ಯೆಗಳನ್ನು ಸೃಷ್ಟಿ ಮಾಡಿದರೇ ಎಂಬುದೇ ಕಥೆಯ ಕುತೂಹಲಕರ ಅಂಶ .

ಈ ಕಥೆಯಲ್ಲಿ ಬರುವ ಕೆಲ ಸಂಭಾಷಣೆಗಳಲ್ಲಿ ಕೆಲವು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ.

'ಯಾವುದೇ ಒಂದು ಚಿಂತನೆ ಮಾತ್ರವೇ ಪ್ರಬಲವಾದ ವ್ಯಕ್ತಿಯಾಗಿ ಬೆಳೆದು ನೆಲೆಯಾಗಲು  ಅದರ ನೆರಳಿನಲ್ಲಿ ಆಶ್ರಯ ಪಡೆಯುವ ಬುದ್ಧಿಜೀವಿಗಳನ್ನು ಹೊರಗೆಳೆಯದಿದ್ದರೆ ಸಮಾಜಕ್ಕೆ ಉಪಯುಕ್ತವಾಗಬಹುದಾದ ಇತರೆ ಜ್ಞಾನ ಸಸ್ಯಗಳ ಬೆಳವಣಿಗೆ ಕುಂಠಿತ ವಾಗುತ್ತದೆ ಎಂಬ ಸಂಶಯಾಸ್ಪದ ಕಾರಣಕ್ಕಾಗಿ ನಾವು ಅಂತಹ ಅಪಾಯಕಾರಿ ಬೆಳವಣಿಗೆಗಳನ್ನು ವಿರೋಧಿಸಬೇಕು ಎನ್ನುವುದು ನಮ್ಮ ಸಂಘದ ಗುರಿಯಾಗಿದ್ದಲ್ಲಿ ಅಂತಹ ಎಲ್ಲ ಬೆಳವಣಿಗೆಗಳನ್ನೂ ವಿರೋಧಿಸಬೇಕು ಅಲ್ಲವೇ? 'ದಾಸ ಕ್ಯಾಪಿಟಲ್' ಆಗಲಿ, ಲೋಹಿಯಾರ ತತ್ವಗಳಾಗಲಿ, ವಿವೇಕಾನಂದರ ಬೋಧನೆ ಗಳಾಗಲಿ, ಮಹಾತ್ಮ ಗಾಂಧಿಯವರ ತತ್ವಗಳಾಗಲಿ, ಹೀಗೆ ಯಾವುದೇ ವಿಚಾರ ಪ್ರಬಲ ಶಕ್ತಿಯಾಗಿ ಬೆಳೆದು ಆ ಕಾಲಘಟ್ಟದ ವೈಚಾರಿಕ ಮನಸ್ಸುಗಳನ್ನು ತಮ್ಮ ದಾಸರನ್ನಾಗಿಸಿಕೊಂಡಲ್ಲಿ ಆಗ ಸರ್ವತೋಮುಖ ಜ್ಞಾನವೃದ್ಧಿಗೆ ಅಡ್ಡಿಯಾಗುತ್ತದೆ. ಎನ್ನುವ ಅಂಶಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.


 ರುಂಡಗಂಡ ಎಂಬ ಕಥೆಯಲ್ಲಿ 

ನಂದನ್ ಅವರ ಮಗಳು ಸಂದ್ಯಾ ರಾಘವ್ ನನ್ನು ಮದುವೆಯಾಗಿ ,ನಂತರ ಸಂದ್ಯಾಳ ಕಾಲೇಜಿನ ಗೆಳೆಯ ಸಂತೋಷ್ ದೇಹಕ್ಕೆ ರಾಘವ್ ಮುಖ ಸೇರಿದ ಬಗ್ಗೆ ಸಂಧ್ಯಾ ತನಿಖಾದಿಕಾರಿಯಾಗಿ ,ಹಣ ವರ್ಗಾವಣೆಯಾದ ಬಗ್ಗೆ ಹಾಗೂ ರಾಘವ್ ನ ಮೋಸವನ್ನು , ಆಧಾರ್ ಕಾರ್ಡ್ ನ  ಅಧಾರದ ಮೇಲೆ ಚಾಕಚಕ್ಯತೆಯಿಂದ ಕಂಡುಹಿಡಿಯುವ ಕಥನ ಕುತೂಹಲಕಾರಿಯಾಗಿದೆ.

ಕಥೆಯ ಪಾತ್ರಧಾರಿ ಸಂಧ್ಯಾ ಹೇಳುವಂತೆ ,ಇಟಲಿಯ ಸೆರ್ಗಿಯೋ ಕನವರೋ ಎಂಬ ವೈದ್ಯ ವಿಜ್ಞಾನಿ ಹತ್ತು ವರ್ಷದ ಹಿಂದೆ, ಅಂದರೆ ಸುಮಾರು 2015 ರಿಂದ 2017ರ ಸಮಯದಲ್ಲಿ ಒಬ್ಬ ಚೀನೀ ವೈದ್ಯನೊಡನೆ ಸೇರಿ ಒಬ್ಬರ ಶಿರವನ್ನು ಮತ್ತೊಬ್ಬರ ದೇಹಕ್ಕೆ ಕಸಿಮಾಡುವ ತಮ್ಮ ಪ್ರಯತ್ನ ಫಲಕಾರಿಯಾಗಿದೆ ಎಂದು ಘೋಷಿಸಿದ್ದ. ಅದೇ ಸಮಯದಲ್ಲಿ ದೇಹವೆಲ್ಲ ಊನವಾಗಿದ್ದ, ಆದರೆ ಎಲ್ಲ ರೀತಿಯಲ್ಲೂ ಆರೋಗ್ಯಕರ ಶಿರವನ್ನು ಹೊಂದಿದ್ದ, ಅತ್ಯಂತ ಬುದ್ಧಿಶಾಲಿಯೂ ಆದ ಚೀನೀ ವ್ಯಕ್ತಿಯೊಬ್ಬ ಅಂತಹ ಶಸ್ತ್ರಚಿಕಿತ್ಸೆ ಸಾಧ್ಯವಾಗುವ ಹಾಗಿದ್ದರೆ ತಾನು ಒಂದು ದೇಹ ಪಡೆಯಲು ಸಿದ್ಧವೆಂದು ಹೇಳಿಕೊಂಡಿದ್ದ. ಅದಕ್ಕೆ, 'ಬೈನ್ ಡೆಡ್' ಆಗಿದ್ದ ರೋಗಿಗಳು ಸಿಕ್ಕಿದಲ್ಲಿ ತಾನು ಆ 29 ಶಸ್ತ್ರಚಿಕಿತ್ಸೆ ಮಾಡುವುದಾಗಿ ಇಟಲಿಯ ಈ ವೈದ್ಯ ಒಪ್ಪಿದ್ದ ಕೂಡಾ. ಇದರ ಬಗ್ಗೆ ಹಲವಾರು ವಿಜ್ಞಾನಿಗಳು ಮತ್ತು ವೈದ್ಯರು ಸಂಶಯ ವ್ಯಕ್ತಪಡಿಸಿದ್ದರೂ, ಇಲಿಗಳಲ್ಲಿ ಇದು ಸಾಧ್ಯ ಎಂದು ಈಗಾಗಲೇ ತೋರಿಸಲಾಗಿತ್ತು. ಪಲ್ಲವ್ ಭಾಗ ಅವರು ಕೊಟ್ಟ ವರದಿಯ ಪ್ರಕಾರ ಈ ಶಸ್ತ್ರಕ್ರಿಯೆ ಮಾನವರಲ್ಲಿಯೂ ನಡೆಯುತ್ತಿದ್ದು, ಹಲವಾರು ಅಂತಹ ವ್ಯಕ್ತಿಗಳು ಈಗಾಗಲೇ  ಶಸ್ತ್ರಚಿಕಿತ್ಸೆ ಗೆ ಒಳಗಾಗಿರುವ ಸಾಧ್ಯತೆಗಳ ಬೆನ್ನಟ್ಟುವ ಮೂಲಕ ಪತ್ತೇದಾರಿ ಕೆಲಸ ಮಾಡಿ ಅಪರಾಧಿಗಳ ಹಿಡಿಯುವ ಕಾರ್ಯ ಮಾಡಿದರು.


ಮತ್ತೊಂದು ಕಥೆ ಆರ್ಯ ವೀರ್ಯ ಓದಿದಾಗ ಮಾನವನ ವಂಶಧಾತುಗಳನ್ನು ಸಂಸ್ಕರಣಗೊಳಿಸಿ, ತಿದ್ದಿ, ಬದಲಾವಣೆ ಮೂಲಕ 'ಬುದ್ಧಿವಂತಿಕೆಯನ್ನು ಹೆಚ್ಚಿಸುವತ್ತ ಅಥವಾ ಆರೋಗ್ಯವನ್ನು ಉತ್ತಮ ಗೊಳಿಸುವತ್ತ ಅಥವಾ ಜೀವನವನ್ನು ಸುಗಮಗೊಳಿಸುವತ್ತ ನಡೆಯುತ್ತಿರುವ ಪ್ರಯತ್ನಗಳು ಇಂದು ನಿನ್ನೆಯವಲ್ಲ. ಈ ನಿಟ್ಟಿನಲ್ಲಿ ಒಂದು ಅಪರೂಪದ, ರಹಸ್ಯ ಯೋಜನೆಯನ್ನು ನಾಜಿ ಪ್ರಮುಖರು ಕೈಗೊಂಡಿದ್ದರೆಂಬ ಬಗ್ಗೆ ಹಲವು ಮೂಲಗಳಿಂದ ದೃಢಪಟ್ಟಿದೆ. ಅಂತಹ ಒಂದು ಯೋಜನೆಯ ಸುತ್ತ ಬೆಳೆದ ಕತೆಯೂ ಈ ಸಂಕಲನದಲ್ಲಿದೆ. ಈ ಕಾರ್ಯ ಸಾಧಿಸಲು ನಾಜಿಗಳು ಯಾವ ಮಟ್ಟಕ್ಕೂ ಇಳಿಯಬಲ್ಲರು ಎಂಬುದನ್ನು ಈ ಕಥೆಯಲ್ಲಿ ಚಿತ್ರ ಸಹಿತ ದಾಖಲೆ ಸಹಿತ ನೀಡಿದ್ದಾರೆ.

ಎಂದಿನಂತೆ ಕೆ ಎನ್ ಗಣೇಶಯ್ಯ ರವರ ಶೈಲಿಯಾಗಿ ಆಧಾರಗಳ ಉಲ್ಲೇಖ,ಪೂರಕ ಚಿತ್ರಗಳು ಸಂಶೋಧನಾ ಗುಣ ಹಾಗೂ

ಘಟನೆಗಳು ನಿರೂಪಣೆಯ ಚಾಕಚಕ್ಯತೆ ಈ ಕಥಾ ಸಂಕಲನದಲ್ಲಿಯೂ ಇದೆ .ಒಮ್ಮೆ ಓದಿ  ನಿಮಗೆ ವಿಶ್ವ ಪರ್ಯಟನೆ ಮಾಡಿದ, ವಿಜ್ಞಾನದ ಸಂಶೋಧನೆ ಮಾಡಿದ ಅನುಭವವಾಗುವುದರಲ್ಲಿ ಸಂದೇಹವಿಲ್ಲ..


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ