24 ಫೆಬ್ರವರಿ 2022

ಇತರೆ ಭಾಷೆಗಳನ್ನೂ ಕಲಿಯೋಣ.


 


ಮಾನವನ ಮೆದುಳು ಹೆಚ್ಚು ಭಾಷೆಗಳನ್ನು ಕಲಿಯಲು ಶಕ್ತಿ ಇದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ .ಹೆರಾಲ್ಡ್ ಸೃಜ್ ಎಂಬುವವರು ನಾಲ್ಕು ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು ಎಂಬುದೇ ಇದಕ್ಕೆ ಸಾಕ್ಷಿ. ನಮ್ಮ ಮಾತೃಭಾಷೆ ಜೊತೆಗೆ ನಾವೂ ಕೂಡಾ ಇತರೆ ಭಾಷೆಗಳ ಕಲಿಯೋಣ . ಇತರ ಭಾಷೆಗಳನ್ನು ಕಲಿಯುವ ಅನುಕೂಲಗಳಲ್ಲಿ ನಮ್ಮ ಸಂವಹನ ಉತ್ತಮವಾಗುತ್ತದೆ,ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಹಕಾರಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ವ್ಯಕ್ತಿತ್ವ ನಮಗರಿವಿಲ್ಲದೇ ಉತ್ತಮಗೊಳ್ಳುತ್ತದೆ.ಹಾಗಾದರೆ ತಡವೇಕೆ ಎರಡು ಸಾವಿರದ ಇಪ್ಪತ್ತೆರಡರ ಈ   ವರ್ಷದಲ್ಲಿ ಕನಿಷ್ಟ ಎರಡು ಹೊಸ ಭಾಷೆ ಕಲಿಯೋಣ.


ಸಿಹಿಜೀವಿ

ಸಿ. ಜಿ ವೆಂಕಟೇಶ್ವರ

23 ಫೆಬ್ರವರಿ 2022

ಯಾರು ಸರಿ .


 


ಯಾರು  ಸರಿ 


ಕೂಗುತ ಬಂದನು ಬೀದಿಯ ಬದಿಯಲಿ ಪ್ಲಾಸ್ಟಿಕ್ ಮಾರುವ

ಮಾಮಣ್ಣ|

ಬ್ರಷ್ಷು, ಬಾಕ್ಸು, ತಟ್ಟೇ ಲೋಟ

ಎಲ್ಲಾ ಪ್ಲಾಸ್ಟಿಕ್ ಕೊಳ್ಳಿರಿ ಎನ್ನತ್ತಾ

ಕೂಗಿದನು ಕೇಳಣ್ಣ||


ಪುಟ್ಟನ ಅಮ್ಮ ಸರಸರ ನಡೆದಳು

ಪ್ಲಾಸ್ಟಿಕ್ ತೇರಿನ ಸನಿಹಕ್ಕೆ|

ಬಾಲಂಗೋಚಿಯ ತರದಲಿ ಅವನೂ

ಓಡಿದ ಪ್ಲಾಸ್ಟಿಕ್ ಗುಡ್ಡದ ಪಕ್ಕಕ್ಕೆ ||


ಪುಟ್ಟನು ಕೇಳಿದ ಅಮ್ಮನಿಗೆ 

ಪ್ಲಾಸ್ಟಿಕ್ ಬೇಡ ಎಂದರು ನಮ್ಮ

ಮಿಸ್ಸು ಯಾಕೆ ಕೊಳ್ಳುವೆ ಪ್ಲಾಸ್ಟಿಕ್ಕು |

ಅಮ್ಮ ನುಲಿಯುತ ನುಡಿದಳು 

ಕಮ್ಮಿ ಬೆಲೆಗೆ ವಸ್ತುಗಳು ಸಿಕ್ಕರೆ

ಸುಮ್ಮನೆ ಕೊಳ್ಳುಬೇಕು ಅದೇ ಲಾಜಿಕ್ಕು ||


ಪುಟ್ಟ ಮತ್ತೆ ಹೇಳಿದನು 

ಅಮ್ಮಾ ಪ್ಲಾಸ್ಟಿಕ್ ಬೇಡ ಪರಿಸರ ವನ್ನು ಉಳಿಸೋಣ| 

ಅಮ್ಮ ಗದರಿದಳು  ಕಡಿಮೆ ದುಡ್ಡಿನಲ್ಲಿ 

ಸಿಕ್ಕ ವಸ್ತುಗಳ ಬಳಸಿ ಹಣವ ಉಳಿಸೋಣ||


ಪುಟ್ಟನ ಮನದಲಿ ಅನುಮಾನ  ಮೂಡುತ ಹಿಡಿದನು ಮನೆಯ ದಾರಿ|

ಶಾಲೆಯ ಮಿಸ್ಸು, ಅಮ್ಮ 

ಇವರಲಿ  ಯಾರು  ಸರಿ??


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ಸಿಂಹ ಧ್ವನಿ ೨೩/೨/೨೨


 

ನಿಲುವುಗನ್ನಡಿ.

*ನಿಲುವುಗನ್ನಡಿ*



ನಮ್ಮ ಮನೆಯಲ್ಲಿ

ನೋಡಿಕೊಳ್ಳುವುದಿಲ್ಲ

ನನ್ನ ಬಿಂಬವನ್ನು,

ಕಾಣದಂತೆ ಎತ್ತಿಟ್ಟಿರುವೆ 

ನಮ್ಮ ಮನೆಯ ಕನ್ನಡಿ|

ಕಾರಣವಿಷ್ಟೇ ಈಗೀಗ 

ನೋಡುತ್ತಲೇ ಇರುವೆ ನಿನ್ನ

ಕಣ್ಣುಗಳ ,ಅವುಗಳೇ ನಿಲುವುಗನ್ನಡಿ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

 

22 ಫೆಬ್ರವರಿ 2022

ಹಾಲು ಕುಡಿಪ್ಪನ ಕಾಳೇ ಹಬ್ಬ.


 



ಹಾಲು ಕುಡಿದಪ್ಪನ ಕಾಳೇ ಹಬ್ಬ  . ಆತ್ಮ ಕಥೆ ೨೮


ನಾನು ಚಿಕ್ಕವನಿದ್ದಾಗ ಆಗಾಗ ಕೊಟಗೇಣಿಯಿಂದ ಮಾವನವರ ಊರಾದ ಯರಬಳ್ಳಿಗೆ ಬರುತ್ತಿದ್ದೆ. ಒಮ್ಮೆ ಹೀಗೆ ಬಂದಾಗ ನಮ್ಮ ಲಕ್ಷ್ಮಜ್ಜಿ ನನ್ನನ್ನು  ಯರಬಳ್ಳಿಯ ಗೊಲ್ಲರ ಹಟ್ಟಿಗೆ ಕಾಳೇ ಹಬ್ಬದ ಉತ್ಸವಕ್ಕೆ  ಕರೆದುಕೊಂಡು ಹೋಗಿದ್ದರು .ರಾತ್ರಿಯ ಊಟದ ನಂತರ ಲಾಟೀನಿನ ಬೆಳಕಿನಲ್ಲಿ ಸುಮಾರು ಒಂದೂವರೆ ಕಿಲೋಮೀಟರ್ ದಾರಿಯಲ್ಲಿ ಊರವರೆಲ್ಲ ಸೇರಿ  ಗುಂಪು ಗುಂಪಾಗಿ ನಡೆದುಕೊಂಡು ಗೊಲ್ಲರ ಹಟ್ಟಿಯ ಕಡೆ  ಪಯಣ ಬೆಳೆಸಿದೆವು .

ನಾನು ಮಾರ್ಗ ಮಧ್ಯದಲ್ಲಿ ಅಜ್ಜಿಗೆ  ಪ್ರಶ್ನೆ ಹಾಕಿದೆ. ಅಜ್ಜಿ ಈ ಗೊಲ್ಲರ ದೇವರಿಗೆ ಹಾಲುಗುಡದಪ್ಪ ಎಂದು ಯಾಕೆ ಕರೀತಾರೆ ಅಂದೆ. ಅದಕ್ಕೆ ಅಜ್ಜಿ ಒಂದು ಕಥೆ ಹೇಳುತ್ತಾ ನಡೆದರು.


ಹಿಮಾಲಯ ತಪ್ಪಲಿನ ದಟ್ಟಡವಿಯಲ್ಲಿ ಅಡಿವೆಣ್ಣ ಮತ್ತು ಗಿಡಿವಣ್ಣ ಎಂಬ ಮುಗ್ದರಿಬ್ಬರು ದನಗಳನ್ನು ಮೇಯಿಸುತ್ತಿರುವಾಗ ಅದೇ ಮಾರ್ಗದಲ್ಲಿ ಹಿಮಾಲಯಕ್ಕೆ ಹೊರಟಿದ್ದ ಸನ್ಯಾಸಿಗಳು ಕಣ್ಣಿಗೆ ಬೀಳುತ್ತಾರೆ.ನೀವೆಲ್ಲಿಗೆ ಹೋಗುವಿರಿ ಎಂದಾಗ  ತಾವು ದೇವರನ್ನು ಕಾಣಲು ಹೋಗುತ್ತೇವೆ ಎಂದು ಗೋಪಾಲಕರ ಪ್ರಶ್ನೆಗೆ ಉತ್ತರಿಸಿದರು. ಸ್ವಾಮಿ ಮರಳಿ ಬರುವಾಗ ನಮಗೂ ಒಂದು ದೇವರನ್ನು ತನ್ನಿ ಎಂದು ಕೋರಿಕೆ ಇಡುತ್ತಾರೆ. ಹಿಮಾಲಯದಿಂದ ಸನ್ಯಾಸಿಗಳು ಮರಳಿ ಅದೇ ದಾರಿಯಲಿ ಬರುವಾಗ ಅದೇ ಹುಡುಗರು ಕಣ್ಣಿಗೆ ಬೀಳುತ್ತಾರೆ. ಅಯ್ಯೋ ದೇವರನ್ನು ತರಲು ಮರೆತಿದ್ದೇವೆ. ದನಗಾಹಿಗಳಿಗೆ ಏನೆಂದು ಉತ್ತರಿಸಲಿ ಎಂಬ ಚಿಂತೆಯಲ್ಲಿರುವಾಗಲೆ ಮಕ್ಕಳು ಸ್ವಾಮಿ ದೇವರನ್ನು ಕೊಡಿ ಎಂದು ಕೇಳುತ್ತಾರೆ .ಆಗ ಸನ್ಯಾಸಿಗಳು ದಾರಿಯಲ್ಲಿ ಬಿದ್ದಿದ್ದ ಕುರಿ ಪಿಚ್ಚಿಗೆ ಕಲ್ಲಿನ ಚೂರುಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ತೆಗೆದುಕೊಳ್ಳಿ ಇದೇ ನಿಮ್ಮ ದೇವರು ಎಂದು ಸಣ್ಣ ಗಂಟನ್ನು ಕೊಟ್ಟು ಹೊಗುತ್ತಾರೆ. ಗೋಪಾಲಕರು ಗಂಟನ್ನು ತಿಪ್ಪೆಯ ಮೆಲಿಟ್ಟು ಪ್ರತಿ ನಿತ್ಯ ಕರೆದ ಹಾಲನ್ನು ಗಂಟು ದೇವರಿಗೆ ನೈವೇದ್ಯ ಮಾಡುತ್ತಿದ್ದರು. ಮನೆಯವರು ಹಾಲನ್ನು ಏಕೆ ತಂದಿಲ್ಲ ಎಂದು ಪ್ರಶ್ನಿಸಿದರೆ ದಿನಕ್ಕೊಂದು ಸುಳ್ಳು ಹೇಳುತ್ತಿದ್ದರು. ಸಂಶಯ ಬಂದ ಪೋಷಕರು  ಒಂದು ದಿನ ದನಗಳ ಗೂಡಿನ ಹತ್ತಿರ ಬರುತ್ತಾರೆ. ಮಕ್ಕಳು ತಿಪ್ಪೆಯ ಮೇಲೆ ಹಾಲು ಸುರಿಯುವುದನ್ನು ನೋಡಿ ಅದರಲ್ಲಿ ಏನಿದೆ ನೋಡಬೇಕೆಂದು ತಿಪ್ಪೆಯನ್ನು ಬಗೆಯುತ್ತಾರೆ. ಅದರಿಂದ ಸರ್ಪ ವೊಂದು  ಹೊರಬಂದು ಓಡಾಡಲಾರಂಭಿಸುತ್ತದೆ.ಅದನ್ನು ನೋಡಿದ ಗೋಪಾಲಕರು  ನಮ್ಮ ದೇವರು ಓಡುತ್ತಿದೆ ಎಂದು ಹೆಗಲಮೇಲಿದ್ದ ಕರಿಕಂಬಳಿಯನ್ನು ಸರ್ಪದ ಮೇಲೆ ಹಾಕಿ ಬಿಗಿಯಾಗಿ ಕಟ್ಟುತ್ತಾರೆ .ಅದನ್ನೆ ದೇವರು ಎಂದು ತಿಳಿದ ಮುಗ್ಧ ಗೋಪಾಲಕರು ಅಡವಿಯಲ್ಲಿ ಸಿಕ್ಕಿದ ಮುತ್ತುಗದ ಎಲೆಗಳನ್ನು ತಂದು ಗುಡಿ ಕಟ್ಟಿ ಪೂಜೆ ಆರಂಭಿಸುತ್ತಾರೆ. ಒಮ್ಮೆ ಆ ಹುಡುಗರ ಕನಸಲ್ಲಿ ಬಂದು ನಾನು ಇಲ್ಲಿರಲಾರೆ ದಕ್ಷಿಣದಲ್ಲಿರುವ ಯರಬಳ್ಳಿ ಹೋಗಿ ನೆಲೆಸುತ್ತೇನೆ .ಎಂದು ಹೇಳಿ ಮಾಯ ವಾಗುತ್ತದೆ. ಅಂದಿನಿಂದ ಸ್ವಾಮಿ ಇಲ್ಲೆ ನೆಲೆ ನಿಂತಿದ್ದಾನೆ .


ಎಂದು ಅಜ್ಜಿ ಸ್ವಾಮಿಯ ಕಥೆ ಹೇಳಿ ಮುಗಿಸಿದಾಗ ಗೊಲ್ಲರಹಟ್ಟಿ ತಲುಪಿದ್ದೆವು. ಉರುಮೆಯ ಶಬ್ದ ಜೋರಾಗಿತ್ತು . ನಮ್ಮನ್ನು ದೇವಾಲಯದ ಒಳಗೆ ಬಿಡಲಿಲ್ಲ ಕಳ್ಳೆ ಹಾಕಿರುವ ಕಾಂಪೌಂಡ್ ಹೊರಗೆ ನಿಂತು  ಒಳಗೆ ಇರುವ ಮುತ್ತುಗದ ದೇವಾಲಯಕ್ಕೆ ಕೈಮುಗಿದೆವು.ಕೇವಲ ಗೊಲ್ಲರಿಗೆ ಮಾತ್ರ ದೇವಾಲಯಗಳ ಒಳಗೆ ಪ್ರವೇಶವಿತ್ತು. ಸ್ವಾಮಿಯ ಹೆಸರಲ್ಲಿ ಕೊಬ್ಬರಿ ಸುಡುವ ಹರಕೆ ತೀರಿಸಿದೆವು .ಕಡ್ಲೇಮಿಠಾಯ್ ಕೊಂಡು ತಿಂದೆವು .ಮತ್ತೊಮ್ಮೆ ಕೈಮುಗಿದು ಬೇಸಿದ ಕಾಳಿನ ಪ್ರಸಾದ ತಿಂದು ಮನೆಯ ಕಡೆ ಹೊರೆಟೆವು. ಮನೆಗೆ ಬರುವಾಗ ಅಜ್ಜಿ ಸ್ವಾಮಿಯ ಬಗ್ಗೆ ಇತರೆ ಮಾಹಿತಿ ನೀಡಿದರು. ಸ್ವಾಮಿಗೆ ಹುರುಳಿಕಾಳು, ಕೋಳಿ ನಿಷಿದ್ದ. ಯಾರಾದರೂ ಹುರುಳಿಕಾಳು ,ಕೋಳಿ ತಿಂದು ಹಟ್ಟಿ ಪ್ರವೇಶ ಮಾಡಿದರೆ ಅವರಿಗೆ ಕಷ್ಟ ತಪ್ಪಿದ್ದಲ್ಲ . ವರ್ಷಕ್ಕೊಮ್ಮೆ ಸ್ವಾಮಿ ಹೊಳೆಗೆ ಹೋಗುವಾಗ ಕರೆಂಟ್ ಲೈನ್ ಕೆಳಗೆ ಹೋಗುವುದಿಲ್ಲ. ಕರೆಂಟ್ ಲೈನ್ ಕಟ್ ಮಾಡಿದರೆ ಮುಂದೆ ಸಾಗುತ್ತದೆ.ಇದು ಈಗಲೂ ಮುಂದುವರೆದಿದೆ.ಸ್ವಾಮಿಗೆ 

ತುಪ್ಪದ ದೀಪವನ್ನೆ ಹಚ್ಚಬೇಕು. ದೇವರ ಪೂಜಾರಿ ಬಹಳ ಕಟ್ಟುನಿಟ್ಟಾಗಿ ಇರಬೇಕು ಅವರು ಒರತೆ ನೀರನ್ನೆ ಕುಡಿಯಬೇಕು. ಸ್ನಾನ ಕ್ಕೂ ಮತ್ತು  ಅಭಿಷೇಕ ಮಾಡಲು ಮೀಸಲು ನೀರು  ಬಳಸಬೇಕು . ಪೂಜಾರಪ್ಪ ಬರಿಗಾಲಲ್ಲೇ ನಡೆಯಬೇಕು. 

ಎಂದು ಅಜ್ಜಿ ಹೇಳುತ್ತಾ ನಾನೂ ಹೂಂಗುಡುತ್ತಾ ಕೆರೆ ಏರಿ ದಾಟಿ ಊರ ತಲುಪಿದೆವು. ಅದೇ ಧ್ಯಾನದಲ್ಲಿ ಹೋಗಿ ಮಲಗಿದ ನನಗೆ ರಾತ್ರಿ ಕನಸಲ್ಲೂ ಹಾವಿನ ರೂಪದಲ್ಲಿ ಹಾಲುಕುಡಿದಪ್ಪನ ದರ್ಶನವಾಗಿತ್ತು. ಬೆಚ್ಚಿ ಬಿದ್ದು ಎದ್ದು ನೋಡಿದಾಗ ಸೂರ್ಯ ರಂಗಪ್ಪನ ಪೌಳಿ ದಾಟಿ ಮೇಲೆ ಬಂದಿದ್ದ.


ಸಿಹಿಜೀವಿ.

ಸಿ ಜಿ ವೆಂಕಟೇಶ್ವರ