16 ಜನವರಿ 2022

ಕಾಗದ.ಹನಿ

 




ನಿನ್ನ ಸೌಂದರ್ಯವನು ಹೊಗಳಿ

ಕವಿತೆ ಬರೆಯಲು ಸಿಗುತ್ತಿಲ್ಲ ಪದ

ನನ್ನ ಹೃದಯಕೆ ನೀ ಬಂದು

ಖಾಲಿಯಾದ ನನ್ನದೆಯ ಹಾಳೆಯಲಿ

ಬರೆದುಕೋ ನಿನಗೇ ಒಂದು ಕಾಗದ ||


ಸಿಹಿಜೀವಿ.

ಕಾವೇರಿಯ ಹನಿಗಳು


 




ಕಾವೇರಿ ಹನಿಗಳು 



ಮಾತು ಕಥೆ 


ಜಲವಿವಾದಗಳು ಎಂದಿಗೂ

ಇದ್ದದ್ದೆ ಅದೊಂದು ಹಳೇ ಕಥೆ||

ಖಂಡಿತವಾಗಿಯೂ ಬಗೆಹರಿವುದು

ನಡೆದರೆ ಎಲ್ಲರ ನಡುವೆ ಮುಕ್ತ ಮಾತುಕತೆ||


ರಾಜಕಾರಣ



ರಾಜಕೀಯಪ್ರತಿಷ್ಠೆ ಮತ್ತು ಅತಿಯಾಸೆ 

ಜಲವಿವಾದಗಳಿಗೆ ಮೂಲಕಾರಣ||

ರಾಜ್ಯಗಳ ಮಧ್ಯ ಸೌಹಾರ್ದ ಮಾತುಕತೆಯಾಗಲಿ

ನಿಲ್ಲಿಸಿ ಬಿಡಲಿ ಸ್ವಾರ್ಥ ರಾಜಕಾರಣ||



೩ 

ನೀವೇರಿ 


ಬೈಯುತಿಹಳು ನಮ್ಮನೆಲ್ಲ 

ಪಾಪ ತೊಳೆಯುವ ತಾಯಿ ಕಾವೇರಿ||

ನೀವು  ಜಗಳವಾಡಲು  ನನ್ನ ಹೆಸರೇಕೆ?

ನಿಮ್ಮ ಜಗಳಕೆ ಕಾರಣ ನಾನಲ್ಲ ನೀವೇರಿ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ




15 ಜನವರಿ 2022

ಸಿಹಿಜೀವಿಯ ದಿನಚರಿ


 

ಸಿಹಿಜೀವಿಯ ದಿನಚರಿ
 ಸಂಕ್ರಾಂತಿ ಹಬ್ಬದ ದಿನ

ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮ ಮುಗಿಸಿ ದಿನಪತ್ರಿಕೆ ಓದಿದೆನು. ಮನೆಯವರೆಲ್ಲರೂ ಸ್ನಾನ ಮಾಡಿ ಪೂಜೆ ಮಾಡಲು ಸಿದ್ದರಾದರು .ವಾರದಿಂದ ಕಷ್ಟ ಪಟ್ಟು ಇಷ್ಟ ಪಟ್ಟು  ತಯಾರಿಸಿದ ಎಳ್ಳು ಬೆಲ್ಲ ದೇವರಿಗೆ ನೈವೇದ್ಯ ಮಾಡಿ ಮನೆಯವರಿಗೆಲ್ಲ ಹಂಚಿ ತಿಂದು ನಲಿದೆವು.
ನಿನ್ನೆ ದಿನ ಶಾಪಿಂಗ್ ಮಾಡಿ ತಂದ ಅವರೇಕಾಯಿ, ಕಬ್ಬು ದೇವರಿಗೆ ನೈವೇದ್ಯ ಮಾಡುವುದನ್ನು ಮರೆಯಲಿಲ್ಲ.
ನಂತರ ಸಿಹಿ ಮತ್ತು ಖಾರ ಪೊಂಗಲ್ ಸವಿದೆವು. ಬಹುದಿನಗಳ ಹಿಂದೆ ಓದಿದ್ದ ಆವಿಷ್ಕಾರದ ಹರಿಕಾರ ಎಂಬ ಪುಸ್ತಕಕ್ಕೆ ವಿಮರ್ಶೆ ಬರೆದು ನನ್ನ ಬ್ಲಾಗ್ ನಲ್ಲಿ ಪ್ರಕಟ ಮಾಡಿದೆ. ವಾಸು ಸಮುದ್ರವಳ್ಳಿ ಅವರು ಬರೆದ ಮಕ್ಕಳ ಕವಿತೆಗಳ ಪುಸ್ತಕ "ಉಂಡಾಡಿ ಗುಂಡ" ಓದಿ ವಿಮರ್ಶೆ ಬರೆದು ನನ್ನ ಬ್ಲಾಗ್ ಮತ್ತು ಪ್ರತಿಲಿಪಿಯಲ್ಲಿ ಪ್ರಕಟಮಾಡಿದೆನು. ಡಾ.ಪರಮೇಶ್ ರವರು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಕುರಿತಾದ "ಮಹಾಬಯಲು" ಎಂಬ ಪುಸ್ತಕ ಓದಲು ಶುರುಮಾಡಿದೆ.

ನನ್ನ ವಿದ್ಯಾರ್ಥಿ ವಿಶ್ವನಾಥ್ ಬರೆದ ಕವನ ಸಂಕಲನದ ಕರಡು ಪ್ರತಿಯನ್ನು ಓದಿ ಮುನ್ನುಡಿ ಬರೆಯಲು ಆರಂಭಿಸಿದೆ.
ಮಧ್ಯಾಹ್ನ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆನು.
ಸಂಜೆ ನನ್ನ ಮಕ್ಕಳು ಮನೆಗೆ ಬರುವವರಿಗೆ ಎಳ್ಳು ಬೆಲ್ಲ ವಿತರಣೆ ಮಾಡಲು ಸಿದ್ದವಾದ ಬಗೆ ಸಂತಸವಾಯಿತು .
ಮನೆಯವರೆಲ್ಲರೂ ಕುಳಿತು
ಅಪರೂಪಕ್ಕೆ ಟೀವಿಯಲ್ಲಿ ಯುವರತ್ನ ಚಿತ್ರ ನೋಡಿದೆವು . ಆದರೂ ಸಂಜೆಯ ಹೊತ್ತಿಗೆ ನಮ್ಮ ಮಾವನವರಾದ ಕೃಷ್ಣಮೂರ್ತಿ ರವರ ಹಾರ ಹಾಕಿದ ಭಾವಚಿತ್ರ ನೋಡಿ ಬೇಡವೆಂದರೂ ಯಾಕೊ ಮನಸ್ಸು ಭಾರವಾಯಿತು. ಕಳೆದವರ್ಷ ನಮ್ಮೊಂದಿಗೆ ಹುಡುಗರಂತೆ ಚಟುವಟಿಕೆಯಿಂದ ಇದ್ದು ನಮ್ಮನೆ ಹಬ್ಬದಲ್ಲಿ ಪಾಲ್ಗೊಂಡ ಮಾವ ಈಗ ನಮ್ಮೊಂದಿಗೆ ಇಲ್ಲ ಅಂದರೆ ನಮ್ಮ ಕೈಯಲ್ಲಿ ಏನೂ ಇಲ್ಲ ಅವನಾಟ ಎಂದು ಯೋಚಿಸುತ್ತಾ ಹಾಸಿಗೆಗೆ ಹೋದರೆ ನಿದ್ರೆ ಹತ್ತಲು ಯಾಕೋ ಬಹಳ ಹೊತ್ತು ಹಿಡಿಯಿತು....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.

ಉಂಡಾಡಿ ಗುಂಡ .ವಿಮರ್ಶೆ.


 


ಉಂಡಾಡಿ ಗುಂಡ. ಕೃತಿ ವಿಮರ್ಶೆ


ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಲ್ಲಿ ಪರಿಚಿತರಾದ ವಾಸು ಎಂದೇ ಪರಿಚಿತವಾಗಿರುವ ಸಮುದ್ರವಳ್ಳಿ ವಾಸು ರವರ ಮಕ್ಕಳ ಕವನಗಳ ಸಂಕಲನ  ಉಂಡಾಡಿ ಗುಂಡ ಪುಸ್ತಕ ಓದಿದೆ.ಇದರಲ್ಲಿ ಮಕ್ಕಳಿಗೆ ಬಹಳ ಇಷ್ಟವಾಗುವ ಮೂವತ್ತೈದು ಕವನಗಳಿವೆ.ನೀವು ಕೂಡಾ ಓದಿ    ಇವು ದೊಡ್ಡವರಿಗೂ ಇಷ್ಟವಾಗುತ್ತವೆ. 


 ಸಮುದ್ರವಳ್ಳಿ  ವಾಸುರವರು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಸಮುದ್ರವಳ್ಳಿ ಎಂಬ ಗ್ರಾಮದಲ್ಲಿ ಜನಿಸಿದವರು ರೈತ ಕುಟುಂಬದಲ್ಲ ಜನಿಸಿದ ಇವರು ಬಾಲ್ಯದಲ್ಲಿಯೇ ಸಾಹಿತ್ಯಾಸಕ್ತಿಯ ಗೀಳನ್ನು ಹೊಂದಿದ್ದು ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನಗಳು , ಕವಿತೆಗಳು, ಕಥೆಗಳು ಪ್ರಕಟಗೊಂಡಿವೆ. ಈಗಾಗಲೇ ಸಿಹಿಮುತ್ತು ಎಂಬ ಚುಟುಕು ಸಂಕಲನ, ಯಡವಟ್ಟು ವಾಸು ಎಂಬ  ಹಾಸ್ಯ ಲೇಖನ  ಮಕ್ಕಳ ಕಿರುನಾಟಕಗಳು, ಹುಚ್ಚುತ್ತಿ ಎಂಬ ಕಥಾ ಸಂಕಲನ, ಮಲೆನಾಡಿನ ಮಾರ್ಗದಾಳುಗಳು ಎಂಬ  ಕಾದಂಬರಿ,ಧಣ ಢಣ ಘಂಟೆ ಬಾರಿಸಿತು ಎಂಬ ಮಕ್ಕಳ ಕವನಗಳ ಸಂಕಲನ ಸಿಂಗಾರಿ ಎಂಬ  ಕಥಾಕವನ ಸಂಕಲನ , ನನ್ನಾಕೆ ಹೇಳಿದ್ದು ಎಂಬ  ಹನಿಗವನ ಸಂಕಲನ, ಅಂತರಂಗದ ಅಳಲು ಎಂಬ ಕವನ ಸಂಕಲನ ಪ್ರಕಟಮಾಡಿದ್ದಾರೆ ಪ್ರಸ್ತುತ ಉಂಡಾಡಿ ಗುಂಡ ಎಂಬ ಮಕ್ಕಳ ಕವನಗಳು ಮಕ್ಕಳ ಮನಗೆಲ್ಲುವುದರಲ್ಲಿ ಸಂದೇಹವಿಲ್ಲ.   ಇವರ ಮಲೆನಾಡಿನ ಮಾರ್ಗದಾಳುಗಳು ಕಾದಂಬರಿ ಎರಡನೇ ಮುದ್ರಣಗೊಂಡು ಓದುಗರ ಮನಗೆದ್ದ ರೀತಿಯಲ್ಲಿ  ಈ ಪುಸ್ತಕವೂ ಓದುಗರ ತಲುಪಲಿ ಎಂದು ಹಾರೈಸುವೆ .


ಪ್ರಸ್ತುತ ಉಂಡಾಡಿ ಗುಂಡ ಪುಸ್ತಕದ ಬಗ್ಗೆ ಹೇಳುವುದಾದರೆ

ವಾಸು ಅವರು ನಮ್ಮ ನಾಡಿನ  ಹಿರಿಯ ಕವಿಗಳ ಬಗ್ಗೆ ಬರೆಯುವಾಗ ಹಲವಾರು ವಿಚಾರಗಳನ್ನು ಸಂಗ್ರಹಿಸಿದ್ದಾರೆ. ಹಲವು ದಿನ ಕೂತು ಪದ್ಯ ರೂಪ ಕೊಟ್ಟಿದ್ದಾರೆ.


ಮಗ್ಗಿಯ ಮೇಲಿನ ಕವನಗಳು ಮತ್ತಷ್ಟು ಸುಂದರವಾಗಿವೆ. 


'ಹಣ್ಣು' ಕವಿತೆಯಲ್ಲಿ

 "ಬಾಳೆಹಣ್ಣು ತಿಂದು

ಸಹಬಾಳ್ವೆ ಮಾಡಿ ...

ಕಿತ್ತಲೆಹಣ್ಣು ತಿಂದು 

ಕಿತ್ತಾಡದೆ ಒಟ್ಟಾಗಿರಿ "

ಎಂಬ ಒಗ್ಗಟ್ಟಿನ ತತ್ವ ಹೇಳಿದೆ.


'ಪಾಪು' ಕವಿತೆಯಲ್ಲಿ ಬರುವ

"ನಗುವಿನಲೆಯ ಇರುಳ ದೀಪ

 ಬಿದಿಗೆ ಚಂದ್ರನಂತೆ ರೂಪ !"

ಎಂಬ ಪದಗಳು ನಮ್ಮನ್ನು ಸೆಳೆಯುವವು.


ಪೊಲೀಸ್ ಗೆಳೆಯರ ಬಗ್ಗೆ ಬರೆದಿರುವ ಕವನ  ಅಭಿಮಾನದ ನುಡಿಗಳಿಂತಿವೆ.

"ಸಮವಸ್ತ್ರ ಧರಿಸಿ, ತಮೋಗುಣ ಅಳಿಸುವಿರಿ

ಸಹಬಾಳ್ವೆ, ಸಮಾನತೆ ಉಳಿಸುವಿರಿ."


'ಪರೀಕ್ಷೆ' ಕವಿತೆಯಲ್ಲಿ ಮಕ್ಕಳಿಗೆ ಪರೀಕ್ಷೆಗಳ ಬಗ್ಗೆ ಭಯ ಬೇಡ ಎಂಬ ಸಲಹೆ ನೀಡಿರುವರು.

"ಇಷ್ಟದಿ ಕಲಿತರೆ ರಸಗುಲ್ಲ

ಕಷ್ಟದಿ ಕಲಿತರೆ ಕಸ ಎಲ್ಲಾ"


ಪುಟ್ಟನ ಪರಿಸರ ಪ್ರಜ್ಞೆ ನಿಮಗೂ  ಖಂಡಿತಾ ಖುಷಿಕೊಡುತ್ತದೆ.

"ಕೆರೆಗಳ ಹೂಳನು ಎತ್ತೋಣ ಗಿಡಮರಬಳ್ಳಿ ಬೆಳೆಸೋಣ."


ವ್ಯಾಕರಣದ ಬಗೆಗಿನ ಕವಿತೆ ಲಘುಹಾಸ್ಯದ ಮೂಲಕ ಜ್ಞಾನವನ್ನು ನೀಡುತ್ತದೆ. ಉದಾಹರಣೆಗೆ 

"ಸ್ವರಗಳು ಎಂದರೆ ಸರಗಳು ಅಲ್ಲ ವ್ಯಂಜನವೆಂದರೆ ಅಂಜನವಲ್ಲ

ಗಾದೆ ಮಾತಿನಲಿ ಬಾಧೆಯು ಇಲ್ಲ."


 ಹೀಗೆ 35 ಮಕ್ಕಳ ಕವನಗಳು ಭಿನ್ನವಿಭಿನ್ನ ವಸ್ತುವನ್ನು ಒಳಗೊಂಡಿವೆ. ಕೆಲವು ಪದ್ಯ ಗಳಿಗೆ ಛಂದಸ್ಸನ್ನೂ ಬಳಸಲಾಗಿದೆ.ಕೆಲವು ಉತ್ತಮ ಪ್ರಾಸಗಳಿಂದ ಕೂಡಿವೆ .

ಮಕ್ಕಳ ಸಾಹಿತ್ಯ ಕೃತಿಗಳು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಸಮುದ್ರವಳ್ಳಿ ವಾಸು ರಂತವರು ಇನ್ನೂ ಹೆಚ್ಚಿನ ಮಕ್ಕಳ ಪುಸ್ತಕಗಳನ್ನು ಬರೆಯಲಿ ಎಂದು ಹಾರೈಸುವೆ.



ಪುಸ್ತಕ: ಉಂಡಾಡಿ ಗುಂಡ.

ಕವಿ: ಸಮುದ್ರವಳ್ಳಿ ವಾಸು.

ಪ್ರಕಾಶನ: ಯದುನಂದನ ಪ್ರಕಾಶನ

ಬೆಲೆ: 80


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು

9900925529


ಆವಿಷ್ಕಾರದ ಹರಿಕಾರ .ವಿಮರ್ಷೆ





ಆವಿಷ್ಕಾರದ ಹರಿಕಾರ 
ಕೃತಿ ವಿಮರ್ಶೆ

ಅವಿ ಯೋರಿಶ್ ರವರು ಬರೆದಿರುವ
ಆವಿಷ್ಕಾರದ ಹರಿಕಾರ ಪುಸ್ತಕವನ್ನು ವಿಶ್ವೇಶ್ವರ ಭಟ್ ರವರು ಕನ್ನಡಕ್ಕೆ ಬಹು ಸೊಗಸಾಗಿ ಅನುವಾದ ಮಾಡಿದ್ದಾರೆ.
ಅವಿ ಯೋರಿಶ್ ಮೂಲತಃ ಓರ್ವ ಉದ್ಯಮಿ, ಐದು ಪುಸ್ತಕಗಳ  ಲೇಖಕ ಮತ್ತು ಚಿಂತಕ ಅಮೆರಿಕ ಸರ್ಕಾರದ ಹಣಕಾಸು ಮತ್ತು ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ. ಅಮೆರಿಕ ವಿದೇಶಾಂಗ ನೀತಿ ಮಂಡಳಿಯಲ್ಲಿ ಸೀನಿಯರ್ ಫೆಲೋ, ಕಳೆದ ಇಪ್ಪತ್ತು ವರ್ಷಗಳಲ್ಲಿ, ಅವಿ ಜಗತ್ತಿನಾದ್ಯಂತ ಪ್ರಮುಖ ವೇದಿಕೆಗಳಲ್ಲಿ ಉಪನ್ಯಾಸ ನೀಡಿದವರು 'ದಿ ನ್ಯೂಯಾರ್ಕ್ ಟೈಮ್ಸ್,' 'ದಿ ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ವಿಶ್ವದ ಐವತ್ತಕ್ಕೂ ಹೆಚ್ಚು ಪ್ರಭಾವಿ ಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಲೇಖನಗಳನ್ನು ಪ್ರಕಟಿಸಿರುವ ಆವಿ , ಸಿಎನ್ಎನ್, ಫಾಕ್ಸ್ ನ್ಯೂಸ್ ಸೇರಿದಂತೆ ಅನೇಕ ಪ್ರಮುಖ ಟಿವಿ ಚಾನೆಲ್ಲುಗಳ ಸಂವಾದದಲ್ಲಿ ಕಾಣಿಸಿಕೊಂಡಿದ್ದಾರೆ. ಮಧ್ಯಪ್ರಾಚ್ಯ ಪರಿಣತರಾಗಿರುವ, ಅವಿ ಅವರ ಪ್ರಸ್ತುತ ಪುಸ್ತಕ, ವಿಶ್ವದ ನಲವತ್ತಕ್ಕೂ ಅಧಿಕ ಭಾಷೆಗಳಿಗೆ ಅನುವಾದವಾಗಿರುವುದು ಅವರ ಚಿಂತನೆಯ ಪ್ರಸ್ತುತತೆ ಮತ್ತು ಮಹತ್ವವನ್ನು ಸಾರುತ್ತವೆ.

ಬುದ್ಧಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂಬ ಟ್ಯಾಗ್ ಲೈನ್ ನೊಂದಿಗೆ ಇರುವ ಈ ಪುಸ್ತಕ ಓದಿದಾಗ ಒಂದು ಪುಟ್ಟ ರಾಷ್ಟ್ರ ತನ್ನ ಬದ್ಧತೆ ಮತ್ತು ಛಲದಿಂದ ಹೇಗೆ ಜಗತ್ತಿನಲ್ಲಿ ತನ್ನದೇ ಹೆಸರು ಉಳಿಸಿಕೊಂಡಿದೆ ಎಂಬುದನ್ನು ಮನವರಿಕೆ ಮಾಡುತ್ತಾ  ಆ ದೇಶದ ನಾಗರಿಕರ ದೇಶಭಕ್ತಿಯ ಪರಿಚಯ ಮಾಡಿಸುವುದು ಹಾಗೂ   ನಮ್ಮಲ್ಲೂ ನಮ್ಮ ದೇಶದ ಬಗ್ಗೆ ಇರಬೇಕಾದ  ಗೌರವ ಮತ್ತು ಭಕ್ತಿಯನ್ನು ಬಡಿದೆಬ್ಬಿಸುತ್ತದೆ. 

ಅನುವಾದಕರ ಮಾತಿನಲ್ಲೇ ಹೇಳುವುದಾದರೆ ಹಸಿದ ಹೊಟ್ಟೆ ತುಂಬಿಸಲು, ಅನಾರೋಗ್ಯ ಗುಣಪಡಿಸಲು, ರಕ್ಷಣೆ ಇಲ್ಲದವರ ರಕ್ಷಿಸಲು ಹಾಗೂ ಮರುಭೂಮಿಯನ್ನು ಅರಳಿಸಲು ಇಸ್ರೇಲಿಗರು ಏನೆಲ್ಲಾ ಮಾಡುತ್ತಿದ್ದಾರೆ, ಗೊತ್ತಾ?

ಇಸ್ರೇಲ್ ಎಂಬ ಪುಟ್ಟ ದೇಶದಲ್ಲಿರುವ ಎಲ್ಲಾ ಧರ್ಮಗಳ ಸೃಜನಶೀಲ ಮಿದುಳುಗಳೂ ಹಠಕ್ಕೆ ಬಿದ್ದವರಂತೆ ಜಗತ್ತನ್ನು ಸುಂದರ ತಾಣವನ್ನಾಗಿ ರೂಪಿಸಲು ಪಟ್ಟು ಹಿಡಿದು ಕುಳಿತಿರುವುದು ಏಕೆ? ಜಗತ್ತಿನಾದ್ಯಂತ ನೂರಾರು ಕೋಟಿ ಜನರ ಬದುಕನ್ನು ಇಸ್ರೇಲಿನ ಅದ್ಭುತ ಆವಿಷ್ಕಾರಗಳು ಹೇಗೆ ಬದಲಿಸುತ್ತಿವೆ ಎಂಬುದನ್ನು 'ಈ' ಕೃತಿ ಕಟ್ಟಿಕೊಡುತ್ತದೆ. ಜಗತ್ತನ್ನು ದುರಸ್ತಿ ಮಾಡುವ ಯಹೂದಿಗಳ 'ಟಿಕ್ಕುನ್ ಓಲಮ್' ಎಂಬ ಚಿಂತನೆಯನ್ನು ಬಳಸಿ, ದೇಶದೇಶಗಳ ಆತ್ಮವನ್ನೇ ತಟ್ಟಿ, ಪ್ರಪಂಚದ ಬಹುದೊಡ್ಡ ಸವಾಲುಗಳನ್ನು ಮುಗುಮ್ಮಾಗಿ ಪರಿಹರಿಸಲು ಇಸ್ರೇಲ್ ತನ್ನ ಗಾತ್ರಕ್ಕೆ ಮೀರಿದ ಪಾತ್ರವನ್ನು ನಿಭಾಯಿಸುತ್ತಿದೆ.

ಇಸ್ರೇಲ್ನಲ್ಲಿ ಪರಮಾದ್ಭುತ ಆವಿಷ್ಕಾರಿಗಳಿದ್ದಾರೆ. ಜನರನ್ನು ಉಳಿಸುವ ಹಾಗೂ ಬದುಕಿನ ಉನ್ನತ ಉದ್ದೇಶವನ್ನು ಕಂಡುಕೊಳ್ಳುವ ಸೂತ್ರಕ್ಕೆ ಅವರೆಲ್ಲ ಬಂಧಿಗಳು, ವೈಫಲ್ಯ ಹಾಗೂ ಅಡ್ಡಿ ಆತಂಕಗಳ ಮುಖಕ್ಕೆ ಹೊಡೆದಂತೆ ಈ ಸೃಜನಶೀಲ ಮನಸ್ಸುಗಳು ಅವಕಾಶ ಮತ್ತು ಧೈರ್ಯವನ್ನು ಹುಡುಹುಡುಕಿ ಬಾಚಿಕೊಳ್ಳುತ್ತವೆ. ತನ್ನ ಪಾಲಿಗಿಂತ ಹೆಚ್ಚು ಕತ್ತಲೆಯನ್ನು ಅನುಭವಿಸಿದ ದೇಶಕ್ಕೆ ಈ ಕತೆಗಳೇ ಬೆಳಕಿನ ಕಿರಣಗಳು ಉದ್ಯಮಶೀಲರು, ಸ್ಪಾರ್ಟಪ್ಗಳ ಬಗ್ಗೆ ಆಸಕ್ತಿ ಹೊಂದಿರುವವರು ಹಾಗೂ ಸೃಜನಶೀಲ ಆವಿಷ್ಕಾರಗಳ ಬಗ್ಗೆ ಕುತೂಹಲ ಹೊಂದಿರುವ ಪ್ರತಿಯೊಬ್ಬರೂ ಓದಬೇಕಾದ ಪುಸ್ತಕವಿದು.
ಜಗತ್ತಿನಲ್ಲಿ ಅತಿ ಹೆಚ್ಚು ಅನ್ವೇಷಣೆ ಮತ್ತು ಆವಿಷ್ಕಾರಗಳು ನಡೆಯುವ ದೇಶವೆಂದರೆ ಇಸ್ರೇಲ್, ಇವನ್ನೆಲ್ಲಾ ನೋಡಿದರೆ, 85 ಲಕ್ಷ ಜನರಿರುವ ಆ ಒಂದು ಪುಟ್ಟ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪವಾಡಸದೃಶ, ಕರ್ನಾಟಕದ ಆರು ಜಿಲ್ಲೆಗಳಷ್ಟು ಚಿಕ್ಕದಾಗಿರುವ ಇಸ್ರೇಲ್ನಲ್ಲಿ ಜಗತ್ತಿನ ಯಾವ ದೇಶಗಳಲ್ಲೂ ನಡೆಯುವುದಕ್ಕಿಂತ ಹೆಚ್ಚು ಆವಿಷ್ಕಾರಗಳು, ಸಂಶೋಧನೆಗಳು ನಡೆಯುತ್ತಿವೆ.

ಅತಿ ಕಡಿಮೆ ನೈಸರ್ಗಿಕ ಸಂಪನ್ಮೂಲ, ಕಡಿಮೆ ಜನಸಂಖ್ಯೆ ಮತ್ತು ವೈರಿ ನೆರೆ-ಹೊರೆಗಳನ್ನು ಹೊಂದಿರುವ ಆವಿಷ್ಕಾರಗಳ ಹರಿಕಾರನಾಗಿದ್ದು ಹೇಗೆ? ಭಾರತ, ಕೆನಡ, ಜಪಾನ್, ಕೊರಿಯಾ, ಬ್ರಿಟನ್ಗಳಿಗಿಂತ ಹೆಚ್ಚು ಸ್ಟಾರ್ಟ್ಪ್ಗಳು ಇಸ್ರೇಲಿನಲ್ಲಿರಲು ಸಾಧ್ಯವಾಗಿದ್ದು ಹೇಗೆ ? ಅದು ಜಾಗತಿಕ ಜಲ ಮಹಾಶಕ್ತಿಯಾಗಿ ಹೊರಹೊಮ್ಮಿದ್ದು ಹೇಗೆ? ಆಹಾರ, ನೀರು, ಹೈನು, ಔಷಧ, ರಕ್ಷಣಾ ಉಪಕರಣಗಳಿಗೆ ಬೇರೆ ದೇಶಗಳನ್ನು ಅವಲಂಬಿಸದೇ ಇಂದು ಇಸ್ರೇಲ್ ಸ್ವಾವಲಂಬನೆ ಸಾಧಿಸಿರುವುದು ಹೇಗೆ? ಇದು ನಿಜಕ್ಕೂ ರೋಚಕ ಕಥನ. ಎಂಬುದು ನೀವು ಈ ಪುಸ್ತಕ ಓದಿ ಮುಗಿಸಿದಾಗ ನಿಮಗೆ ಅನ್ನಿಸದೇ ಇರದು.

ಒಟ್ಟು  ೧೮ ಅಧ್ಯಾಯಗಳಿರುವ ಈ ಕೃತಿಯು  ಈಗಾಗಲೇ ಐದು ಬಾರಿ ಮರುಮುದ್ರಣ ಕಂಡಿದೆ ಎಂಬುದು ಪುಸ್ತಕದ ಜನಪ್ರಿಯತೆ ಬಗ್ಗೆ ತಿಳಿಸುತ್ತದೆ. ಯಹೂದಿಗಳು ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ, ಬೈಕ್  ಆ್ಯಂಬುಲೆನ್ಸ್ಗಳ  ಕ್ರಾಂತಿ ನಿಜವಾದ ಉಕ್ಕಿನ ಮನುಷ್ಯರು,
ಮಿದುಳಿಗೊಂದು ಜಿಪಿಎಸ್ ,ಗೋಲ್ಡನ್ ಪೈರ್ ವಾಲ್ , ಬೆನ್ನುಹುರಿಯ ಮೇಲೆ ಕಣ್ಣು,
ಮರೆಯಾದವರಿಗೆ ಮರುಜೀವ ಈ ಅಧ್ಯಾಯಗಳು ನನಗೆ ಬಹಳ ಇಷ್ಟವಾದವು .


ಪುಸ್ತಕದ ಹೆಸರು: ಆವಿಷ್ಕಾರದ ಹರಿಕಾರ.
ಅನುವಾದ : ವಿಶ್ವೇಶ್ವರ ಭಟ್
ಪ್ರಕಾಶನ: ವಿಶ್ವ ವಾಣಿ
ಬೆಲೆ : 350.

ಸಿಹಿಜೀವಿ ಸಿ ಜಿ ವೆಂಕಟೇಶ್ವರ
ತುಮಕೂರು