01 ಡಿಸೆಂಬರ್ 2021

ಭಾರತವನ್ನು ಆರ್ಥಿಕ ಶಕ್ತಿಯಾಗಿ ಪರಿವರ್ತಿಸೋಣ.ಲೇಖನ


 


ಜಿ.ಡಿ .ಪಿ .ಯ ಬೆಳವಣಿಗೆ

ಆಶಾದಾಯಕ ಸಂಗತಿ .


 ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 8.4ರ ಬೆಳವಣಿಗೆ ಕಂಡಿದ್ದು, ಕೋವಿಡ್‌ಗೂ ಮುಂಚಿನ ಮಟ್ಟವನ್ನು ತಲುಪಿರುವುದು ಆಶಾದಾಯಕ ಸಂಗತಿಯಾಗಿದೆ.

ಭಾರತದ ಆರ್ಥಿಕತೆಯು ಕೋವಿಡ್ ನಂತಹ  ಕಠಿಣ ಸನ್ನಿವೇಶ ಎದುರಿಸಿದರೂ ಮೇಲೆದ್ದು ಬರುವ ತಾಕತ್ತಿದೆ ಎಂಬುದನ್ನು ಈ ಅಂಕಿ ಅಂಶಗಳು ಸಾಬೀತುಪಡಿಸುತ್ತವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಎರಡಂಕಿ ಪ್ರಗತಿ ಸಾಧಿಸುವ ನಿರೀಕ್ಷೆ ಮಾಡಲಾಗಿದೆ ಎಂದು ಮುಖ್ಯ ಅರ್ಥಿಕ ಸಲಹೆಗಾರ (ಸಿಇಎ) ಕೆ.ವಿ. ಸುಬ್ರಮಣಿಯನ್ ರವರ ಹೇಳಿಕೆ ಈ ವಿಚಾರದಲ್ಲಿ ಮಹತ್ವ ಪಡೆಯಲಿದೆ.


ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ಶೇ.13.7ರಷ್ಟು ಬೆಳವಣಿಗೆ ಕಂಡಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಶೇ 6ಕ್ಕಿಂತಲೂ  ಹೆಚ್ಚಿನ ಮಟ್ಟದ ಬೆಳವಣಿಗೆ ಕಾಣಲಿದ್ದು, ಒಟ್ಟಾರೆಯಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿ ಪ್ರಗತಿಗೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.


ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭ ಆಗಿರುವುದರಿಂದ ಜನರು ಸರಕು ಮತ್ತು ಸೇವೆಗಳ ಖರೀದಿಗೆ ಮಾಡುತ್ತಿರುವ ಖರ್ಚಿನಲ್ಲಿ ಏರಿಕೆ ಕಂಡುಬಂದಿದೆ. ಹೆಚ್ಚು ಜನರು ಲಸಿಕೆ ಪಡೆದಿದ್ದರಿಂದ ಈ  ಅವಧಿಯಲ್ಲಿ ಕೋವಿಡ್ ತೀವ್ರತೆಯೂ ಕಡಿಮೆ ಆಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಎರಡನೇ ತ್ರೈಮಾ ಸಿಕದಲ್ಲಿ ಜೆಡಿಪಿಯು: ಈ ಪ್ರಮಾಣದ ಬೆಳವಣಿಗೆ ಕಂಡಿದೆ.


ಇದೇ ವೇಳೆ ನಮ್ಮ ದೇಶದ 

ದೇಶದ ವಿತ್ತೀಯ ಕೊರತೆಯು ಅಕ್ಟೋಬರ್ ತಿಂಗಳ ಅಂತ್ಯಕ್ಕೆ 2 5.47 ಲಕ್ಷ ಕೋಟಿಗಳಷ್ಟಾಗಿದೆ. ಬಜೆಟ್ ಅಂದಾಜಿನ ಪ್ರಕಾರ ಶೇ 36.3ರಷ್ಟಾಗಿರುವುದು ಪ್ರಮುಖವಾಗಿ ಗಮನಿಸಬೇಕಾದ ಅಂಶವಾಗಿದೆ.


ವರಮಾನ ಸಂಗ್ರಹದಲ್ಲಿ ಸುಧಾರಣೆ ಕಂಡುಬಂದಿರುವುದರಿಂದ ವಿತ್ತೀಯ ಕೊರತೆಯು ಈ ಪ್ರಮಾಣದ ಬೆಳವಣಿಗೆ ಕಂಡಿದೆ ಎಂದು ಸಿಜಿಎ ತಿಳಿಸಿದೆ.

ಇಷ್ಟೆಲ್ಲಾ ಆಶಾದಾಯಕ ಬೆಳವಣಿಗೆಯ ಮುಧ್ಯೆ ಒಮೈಕ್ರಾನ್ ವೈರಸ್ ನ ಕಾರ್ಮೋಡ  ಪ್ರಪಂಚದ ವಿವಿಧ ದೇಶಗಳಲ್ಲಿ ಹರಡುತ್ತಾ ಆತಂಕ  ಕವಿದಿರುವುದು ದುರದೃಷ್ಟಕರ. ಬೇರೆ ದೇಶಗಳಲ್ಲಿ ಕೋವಿಡ್ ಮೂರು ಮತ್ತು ನಾಲ್ಕನೇ ಅಲೆಗಳು ಅಪ್ಪಳಿಸಿದರೂ ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿ ಇರುವುದಕ್ಕೆ ಕಾರಣ ನಮ್ಮ ಲಸಿಕಾ ಅಭಿಯಾನ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ನಮ್ಮಲ್ಲಿ ಕೆಲವರು ಎರಡನೇ ಡೋಸ್ ಲಸಿಕೆ ಪಡೆದಿಲ್ಲದಿರುವುದು .ಬೇಸರದ ಸಂಗತಿ.ಇಂತವರು ಸರ್ಕಾರಗಳು ಮತ್ತು ವ್ಯವಸ್ಥೆಯ ಟೀಕೆಮಾಡುತ್ತಾ ತಮ್ಮ ಕರ್ತವ್ಯ ಮರೆಯುವ ಜಾಣ ಪ್ರಜೆಗಳು. ಸರ್ಕಾರ ಮತ್ತು ತಜ್ಞರು ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಜವಾಬ್ದಾರಿಯುತ ಪ್ರಜೆಗಳಾದ ನಾವು ಪಾಲಿಸೋಣ . ನಮ್ಮ ಆರೋಗ್ಯ ಕಾಪಾಡಿಕೊಂಡು ಜೀವವಿದ್ದರೆ ಜೀವನ ಎಂಬ ಸತ್ಯ ಅರಿತು ಒಗ್ಗಟ್ಟಾಗಿ ಸಾಧಿಸೋಣ. ತನ್ಮೂಲಕ ಭಾರತವನ್ನು ಪ್ರಪಂಚದಲ್ಲಿಯೇ ದೊಡ್ಡದಾದ ಆರ್ಥಿಕ ಶಕ್ತಿಯನ್ನಾಗಿ ಪರಿವರ್ತಿಸೋಣ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



30 ನವೆಂಬರ್ 2021

ನಂಬಿಕೆ ದ್ರೋಹಿಗಳು


 



*ನಂಬಿಕೆ ದ್ರೋಹಿಗಳು*


ನಂಬಿಕೆ ದ್ರೋಹಿಗಳು

ಸದಾ ನಮ್ಮೊಂದಿಗೆ

ಇದ್ದೇ ಇರುವರು 

ನಂಬಿಸಿ ದ್ರೋಹ ಎಸಗುತ್ತಾ

ಅವರಿವರಿಗೆ|

ತಿಪ್ಪರಲಾಗ ಹಾಕಿದರೂ 

ಮೋಸ ಮಾಡಲಾದೀತೆ

ಇಂತಹವರು ನಮ್ಮ

ದೇವರಿಗೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


29 ನವೆಂಬರ್ 2021

ಅವನು ಕರೆದಾಗ ಹೋಗಲು ಸಿದ್ದರಿರೋಣ .


 



ಅವನು ಕರೆದಾಗ ಹೋಗಲು ಸಿದ್ಸರಿರೋಣ .


"ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ 

ನಮ್ಗೂ ನಿಮ್ಗೂ ಯಾಕೆ ಟೆನ್ಸನ್ನು" ಎಂಬ ಯೋಗರಾಜ್ ಭಟ್ಟರ ಹಾಡಿನಂತೆ . ಜೀವನದಲ್ಲಿ ಬಹುತೇಕ ಬಾರಿ ನಾವು ಅಂದುಕೊಂಡತೆ ಇರುವುದಿಲ್ಲ .ಬದುಕು  ಬಂದಂತೆ ಸ್ವೀಕರಿಸುವ ಮೂಲಕ ಜೀವನದಲ್ಲಿ ಮುಂದಡಿ ಇಡಬೇಕಿದೆ. Man proposes God disposes ಎಂಬ ಉಕ್ತಿಯಂತೆ ನಾವೇನೇನೋ ಪ್ಲಾನ್ ಮಾಡಿದರೂ ಅವನು ನಮ್ಮೆಲ್ಲಾ ಯೋಜನೆಗಳನ್ನು ತಲೆಕೆಳಗುಮಾಡಿ ಹೇಗಿದೆ ಆಟ? ಎಂದು ಮರೆಯಲೇ ನಿಂತು ನಗುವನು. 


ಅಂದರೆ ನಾವು ಯೋಜನೆ ಮಾಡಬಾರದಾ ? ಹಿಂಗೇ ಇರಬೇಕು ಎಂದು ಗುರಿ ಇಟ್ಟುಕೊಳ್ಳಲೇ ಬಾರದಾ? ಎಂದರೆ ಖಂಡಿತವಾಗಿ ಗುರಿಯೂ ಇರಲಿ . ಯೋಜನೆಯು ಇರಲಿ . ಅದಕ್ಕೆ ಪೂರಕವಾಗಿ ಪ್ರಯತ್ನ ಸಹ ಜಾರಿಯಲ್ಲಿ ಇರಲಿ ನಮ್ಮೆಲ್ಲ ಪ್ರಾಮಾಣಿಕವಾದ ಪ್ರಯತ್ನದ ನಡುವೆಯೂ ನಾವಂದುಕೊಂಡದ್ದು ಆಗಲಿಲ್ಲ ಎಂದರೆ ಬೇರೇನೋ ಯೋಚಿಸುತ್ತಾ, ಬೇಸರ ಮಾಡಿಕೊಂಡು ಮಾನಸಿಕವಾಗಿ ಕುಗ್ಗಿ ಖಿನ್ನತೆಯೆಡೆಗೆ ಜಾರಿ ಬದುಕಿನಲ್ಲಿ ಅನರ್ಥದ ನಿರ್ಧಾರ ಕೈಗೊಳ್ಳುವ ಮೂಲಕ ನಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳವ ನಿರ್ಧಾರವನ್ನು ಕೈಗೊಳ್ಳಬಾರದು. ಸೂರ್ಯ ಮುಳುಗಿದ ಎಂದು ಕೊರಗಿ ಕೂರುವ ಬದಲಿಗೆ ನಕ್ಷತ್ರಗಳ ನೋಡುವ ಕಾತರತೆ ಮತ್ತು ಸಂತಸ ಹೊಂದಬೇಕಿದೆ.ಎಲ್ಲಾ ಬಾಗಿಲುಗಳು ಮುಚ್ಚಿವೆ ಬೆಳಕು ಬರುತ್ತಿಲ್ಲ ಎಂದು ಪರಿತಪಿಸುವ ಬದಲಿಗೆ ಕಿಟಕಿಯ ಮೂಲಕ ಬರುವ ಬೆಳಕಿನ ಕಡೆಗೆ ಗಮನ ಹರಿಸಬಹುದು. ಜೀವನದಲ್ಲಿ ನಮಗೆ ನಾವಂದುಕೊಂಡ ಯಾವುದೋ ಸಿಗಲಿಲ್ಲ ಎಂದರೆ   ದೇವರು ನಮಗಾಗಿ ಮತ್ತೇನೊ ಕೊಡಲು ಸಿದ್ದತೆ ಮಾಡಿಕೊಂಡಿರುವ ಎಂದು ಭಾವಿಸಿ ಮುನ್ನೆಡೆಯೋಣ. ವಿಪ್ರೊ ಕಂಪನಿಯಲ್ಲಿ ಕೆಲಸ ಸಿಗಲಿಲ್ಲ ಎಂದು ಬೇಸರ ಪಟ್ಟುಕೊಂಡು ಚಿಂತೆ ಮಾಡುತ್ತಾ ಕುಳಿತಿದ್ದರೆ ನಾರಾಯಣ ಮೂರ್ತಿ ರವರು ಇನ್ಫೋಸಿಸ್ ಎಂಬ ದೈತ್ಯ ಕಂಪನಿಯು ಕಟ್ಟಿ ಸಾವಿರಾರು ಕೋಟಿ ವಹಿವಾಟು ನಡೆಸಿ ಸಾವಿರಾರು ಜನರಿಗೆ ಉದ್ಯೋಗ ಕೊಡಲು ಆಗುತ್ತಿರಲಿಲ್ಲ. 


ಇದೇ ರೀತಿಯಲ್ಲಿ ಜೀವನದಲ್ಲಿ ಕೆಲವೊಮ್ಮೆ ನಾವಂದುಕೊಂಡಂತೆ ಆಗದಿದ್ದರೆ ಬೇಸರ ಪಟ್ಟುಕೊಳ್ಳದೆ ಜೀವನವನ್ನು ಬಂದಂತೆ ಸ್ವೀಕರಿಸಿ ಮುನ್ನಡೆಯಬೇಕು ಜೀವನದ ಪ್ರತಿ ಕ್ಷಣವನ್ನು ಅನುಭವಿಸುತ್ತಾ ಅವನು ಕರೆದಾಗ ಹೋಗಲು ಕೂಡಾ ನಾವು ಸಿದ್ದರಾಗಿರಬೇಕು.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

28 ನವೆಂಬರ್ 2021

ಸೌಗಂಧಿನಿ .ಹನಿಗವನ

 


*ಟೈಪ್ ಮಾಡು* 

ಸುಗಂಧ ಕೂಡಿಕೊಂಡ ಸೌಗಂಧಿನಿ 

ನುಲಿಯಿತ್ತಾ ಬಾಸ್ ಕ್ಯಾಬಿನ್

ಒಳಹೊಕ್ಕ ಆಪ್ತಸಹಾಯಕಿಗೆ

ಇಂದು ರಾತ್ರಿ ನೀನು ಫ್ರೀ ಇದ್ದರೆ

ನೋಡು|

ಮನದಲ್ಲೇ ಸಂತಸಗೊಂಡ ಅವಳು

ಗಗನದಲ್ಲಿ ಹಾರಾಡಿದಂತೆ ಖುಷಿಯಾದಳು.

ಬಾಸ್ ಮುಂದುವರೆದು ಹೇಳಿದ

ಈ ನಲವತ್ತು ಪೇಜ್ ಗಳ ಟೈಪು

ಮಾಡು!!


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

27 ನವೆಂಬರ್ 2021

ಕುಣಿಗಲ್ ಶೋಧ .ಪುಸ್ತಕ ವಿಮರ್ಶೆ


 



ಕುಣಿಗಲ್ ಶೋಧ .ಕೃತಿ ವಿಮರ್ಶೆ

(ಸಂಶೋಧನಾ ಲೇಖನಗಳ ಸಂಗ್ರಹ)

ಡಾ. ಕೆ ರೇವಣ ಸಿದ್ದಯ್ಯ .



ಬಿ .ಎಡ್. ಗೆಳೆಯ ಯೋಗಾನಂದ ರವರ ಮೂಲಕ ಪರಿಚಿತವಾದ ಡಾ. ಕೆ. ರೇವಣ ಸಿದ್ದಯ್ಯ ರವರು ಬರೆದ ಸಂಶೋಧನಾ ಕೃತಿಯನ್ನು ಓದಿದಾಗ ಬಹಳಷ್ಟು ಐತಿಹಾಸಿಕ ಸತ್ಯಗಳನ್ನು ತಿಳಿದೆನು. 


ಈ ಕೃತಿಗೆ ಆದಿಚುಂಚನಗಿರಿ ಮಹಾ ಸಂಸ್ಥಾನ ದ ಡಾ. ಶ್ರೀ. ನಿರ್ಮಲಾನಂದ ಸ್ವಾಮೀಜಿ ರವರ ಆಶೀರ್ವಚನ ಪುಸ್ತಕದ ಘನತೆಯನ್ನು ಹೆಚ್ಚಿಸಿದೆ. ಎಂ. ಪ್ರಕಾಶ ಮೂರ್ತಿ ರವರ ಮುನ್ನುಡಿ ಮತ್ತು ಜಾಣಗೆರೆ ವೆಂಕಟರಾಮಯ್ಯ ರವರ ಬೆನ್ನುಡಿ ಮೌಲಿಕವಾಗಿದೆ.


ಕುಣಿಗಲ್ ತಾಲ್ಲೂಕಿನ ಬೇಗೂರು ಪಂಚಾಯ್ತಿ ಕುರುಪಾಳ್ಯ ಗ್ರಾಮದ ರೈತಾಪಿ ಕುಟುಂಬದಿಂದ ಬಂದಿರುವ ಡಾ| ಕೆ. ರೇವಣಸಿದ್ದಯ್ಯ ರವರು ಪ್ರತಿಭಾವಂತ ಮತ್ತು ಭರವಸೆಯ  ಸಂಶೋಧಕರು , ವ್ಯಾಸಂಗದ ಹಂತದಲ್ಲೇ ಚಿಂತನೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡು ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಸಂಶೋಧನೆಯತ್ತ ಆಸಕ್ತಿ ಬೆಳೆಸಿ ಕೊಂಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕುಣಿಗಲ್ ನಾಡು-ಇತಿಹಾಸ ಮತ್ತು ಪುರಾತತ್ವ ಅಧ್ಯಯನ' ಎಂಬ ವಿಷಯದ ಬಗ್ಗೆ ಪಿಹೆಚ್.ಡಿ ಪದವಿ ಪಡೆದುಕೊಂಡಿದ್ದಾರೆ.


ಯುವ ಸಂಶೋಧಕರು ತನ್ನ ತವರೂರು ಕುಣಿಗಲ್ ತಾಲ್ಲೂಕಿನ ಮೇಲಿನ ಅಭಿಮಾನ, ಆಸಕ್ತಿಯಿಂದ ಜನ್ಮ ನೀಡಿದ ಕರ್ಮಭೂಮಿಯನ್ನು ಪ್ರೀತಿಸುವುದು, ಅದರ ಇತಿಹಾಸದ ಬಗೆಗೆ ಆಸಕ್ತಿ ತಾಳುವುದು, ವಾಸ್ತವ ಇತಿಹಾಸವನ್ನು ಶೋಧಿಸುವುದು ಕರ್ತವ್ಯವೆಂದು ಭಾವಿಸಿ ಆ ದಿಸೆಯಲ್ಲಿ ಅವುಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಪ್ರಶಂಸನೀಯ.


 ಕುಣಿಗಲ್ ಶೋಧ ಕೃತಿಯಲ್ಲಿ ೧೪ ಬಿಡಿ ಬರಹಗಳು ಬಹುತೇಕ ಸಂಶೋಧನಾತ್ಮಕ ಲೇಖನಗಳಾಗಿದ್ದು, ಕೃತಿಗೆ ಮಹತ್ವವನ್ನು ತಂದುಕೊಟ್ಟಿವೆ.


ಕುಣಿಗಲ್ ಪರಿಸರದ ನವಶೋಧಿತ ಕಬ್ಬಿಣದ ಕುಲುಮೆಗಳು ಎಂಬ ಲೇಖನವು ಲೇಖಕರಿಗೆ ಡಾ.ಎಂ. ಎಚ್. ಕೃಷ್ಣ ಮೆರಿಟ್ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಅಭಿನಂದನಾರ್ಹ.


ಹುತ್ರಿದುರ್ಗ ಪರಿಸರದ ನವಶೋಧಿತ ಶಿಲಾಯುಗ ಸಂಸ್ಕೃತಿಯ ಸಮಾಧಿ ನೆಲೆಗಳು ಎಂಬ ಲೇಖನ ಓದುತ್ತಿದ್ದರೆ  ನಾವು ಹುತ್ರಿ ದುರ್ಗಕ್ಕೆ ಭೇಟಿ ನೀಡಿದ ಅನುಭವವಾಗುತ್ತದೆ.ಪೂರಕವಾಗಿ ನೀಡಿರುವ ಚಿತ್ರಗಳು ಓದುಗರಿಗೆ ಸಚಿತ್ರ ಮಾಹಿತಿ ನೀಡಲು ಸಹಕಾರಿಯಾಗಿವೆ.ಇದರಲ್ಲಿ ಉಲ್ಲೇಖಿತವಾದ ಕಲ್ಲುಸೇವಾ ಪದ್ದತಿಯು ಪಾರ್ಸಿ ಧರ್ಮದ ಶವಸಂಸ್ಕಾರ ಪದ್ಧತಿಯನ್ನು ನೆನಪಿಸುತ್ತದೆ.

 ಕುಣಿಗಲ್  ನಾಡಿನ ಕಂಬದ ನರಸಿಂಹನ ಆರಾಧನಾ ನೆಲೆಗಳು ಎಂಬ ಲೇಖನವು ಕುಣಿಗಲ್ ತಾಲೂಕಿನಲ್ಲಿ ಇರುವ ಹತ್ತಕ್ಕೂ ಹೆಚ್ಚು ನರಸಿಂಹ ದೇವರ ದೇಗುಲಗಳ ಸಮಗ್ರ ಮಾಹಿತಿಯನ್ನು ನೀಡುತ್ತವೆ.

ಬೇಗೂರು ಗ್ರಾಮದ  ಪ್ರಾಚ್ಯಾವಶೇಷಗಳು ಎಂಬ ಲೇಖನವು  ಬೇಗೂರಿನ ಕೆರೆ , ವೀರಗಲ್ಲುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ನಮ್ಮ ಪ್ರತೀ ಗ್ರಾಮಗಳು  ಸಾಂಸ್ಕೃತಿಕ ಪರಂಪರಾ ಕೇಂದ್ರಗಳು ಎಂಬ ಭಾವನಾತ್ಮಕ ಅಂಶವನ್ನು ತೆರೆದಿಡುತ್ತದೆ.

ಇನ್ನೂ ಈ ಪುಸ್ತಕದ ಇತರೆ ಲೇಖನಗಳಾದ 

ಪ್ರಾಚೀನ ಜೈನಕೇಂದ್ರ ಸಂಕೀಘಟ್ಟ ,

ಸ್ಥಳನಾಮಗಳ ಹಿನ್ನೆಲೆಯಲ್ಲಿ ಕುಣಿಗಲ್ ನಾಡಿನ ಕೋಟೆಗಳ ಅಧ್ಯಯನ, ಕುಣಿಗಲ್ ನಾಡಿನ ಶಾಸನೋಕ್ತ ಸ್ಥಳನಾಮಗಳು,

ಕುಣಿಗಲ್ ಪಟ್ಟಣದ ಪ್ರಾಚೀನ ದೇವಾಲಯಗಳು, ಕುಣಿಗಲ್ ಪರಿಸರದ ನಂಬಿಕೆ ಆಚರಣೆಗಳು,

ಕುಣಿಗಲ್ ಪರಿಸರದ ಸಾಂಪ್ರದಾಯಿಕ ಆಹಾರ ಪದ್ಧತಿ, ಕುಣಿಗಲ್ ತಾಲ್ಲೂಕಿನ ಶಾಸನೋಕ್ತ ಆಗ್ರಹಾರಗಳು, ಹುತ್ರಿದುರ್ಗದ ಪ್ರಾಚ್ಯಾವಶೇಷಗಳು,ಕುಣಿಗಲ್ ಸೀಮೆಯ ಸ್ಥಳಪುರಾಣ ಮತ್ತು ಐತಿಹ್ಯಗಳು,ಮಾರ್ಕೋನಹಳ್ಳಿ ಮತ್ತು ಮಂಗಳಾ ಜಲಾಶಯ ಮುಂತಾದ ಲೇಖನಗಳು ಸಮಗ್ರ ಸಂಶೋಧನಾ ಪ್ರಬಂಧಗಳಾಗಿದ್ದು ಇತಿಹಾಸದ ವಿದ್ಯಾರ್ಥಿಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಸಕ್ತಿ ಇರುವವರ ಪಾಲಿನ ಆಕರ ಗ್ರಂಥವಾಗಿದೆ ಎಂದರೆ ತಪ್ಪಾಗಲಾರದು. 



ಡಾ| ಕೆ. ರೇವಣಸಿದ್ಧಯ್ಯನವರು ತಮ್ಮ ಕೃತಿಯಲ್ಲಿ ಕುಣಿಗಲ್ ಬಗ್ಗೆ ಸರಿಯಾಗಿ ಪರಿಚಯವಿಲ್ಲದ ನನ್ನಂತಹ ಹೊರ ಜಿಲ್ಲೆಯಿಂದ ಬಂದವರಿಗೆ   ತಿಳಿಯದಿದ್ದ ಹೊಸ ಹೊಸ ಸಂಗತಿಗಳನ್ನು ದಾಖಲೆ ಸಹಿತವಾಗಿ ವಿವರಿಸಿರುವುದು  ಸಂತಸ ತಂದಿದೆ. ಅವರ ಸಂಶೋದನಾ ಕಾರ್ಯ ನಿರಂತರವಾದ ಕ್ಷೇತ್ರ ಅಧ್ಯಯನ ಈ ಪುಸ್ತಕದಲ್ಲಿ ಪ್ರತಿಬಿಂತವಾಗಿದೆ. ಶ್ರೀಯುತರು ಮುಂದಿನ ದಿನಗಳಲ್ಲಿ ಇಂತಹ ಮೌಲಿಕ ಕೃತಿಗಳನ್ನು ರಚಿಸುತ್ತಾ ಇತಿಹಾಸದ ಮೇಲೆ ಬೆಳಕು ಚೆಲ್ಲವ ಕಾರ್ಯ ಮಾಡಲಿ ಎಂದು ಆಶಿಸುತ್ತೇನೆ .



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

990925529 


ಪುಸ್ತಕದ ಹೆಸರು: ಕುಣಿಗಲ್ ಶೋಧ 

ಸಂಶೋಧನಾ ಲೇಖನಗಳ ಸಂಗ್ರಹ

ಲೇಖಕರು:ಡಾ. ಕೆ ರೇವಣ ಸಿದ್ದಯ್ಯ .

 ಪ್ರಕಾಶನ:  ಸುಹಾಸ್ ಗ್ರಾಫಿಕ್ಸ್, ಬೆಂಗಳೂರು

ಬೆಲೆ: 170 ₹