29 ಏಪ್ರಿಲ್ 2021

ಅತಿಯಾಸೆ ಗತಿಗೇಡು .ಶಿಶುಗೀತೆ


 





*ಅತಿಯಾಸೆ ಗತಿಗೇಡು*


ಶಿಶುಗೀತೆ


ರಾಮನಳ್ಳಿಯಲ್ಲಿ ರಾಮಪ್ಪನೆಂಬ 

ರೈತನಿದ್ದನು

ಬೇಸಾಯದೊಂದಿಗೆ ಒಂದು

ಕೋಳಿ ಸಾಕಿದ್ದನು.


ಕೋಳಿ ಬೆಳೆದು ಮೊಟ್ಟೆ

ಇಡಲು ಶುರು ಮಾಡಿತು

ಅಚ್ಚರಿಯೆಂಬಂತೆ ಬಂಗಾರದ

ಮೊಟ್ಟೆ ಇಟ್ಟಿತು.


ಕೋಳಿ ದಿನವೂ ಬಂಗಾರದ

ಮೊಟ್ಟೆಯನು ಇಟ್ಟಿತು

ರಾಮಪ್ಪನ ಮನವು 

ಸಂತೋಷದಿ ಕುಣಿದಾಡಿತು.


ಅವನಲಿ ಅತಿಯಾಸೆಯ

ಬೀಜವೊಂದು ಮೊಳಕೆಯೊಡೆಯಿತು

ಒಂದೆ ದಿನ ಎಲ್ಲಾ ಮೊಟ್ಟೆಗಳ 

ಪಡೆಯಲು ಆಸೆಯಾಯಿತು.


ಕೋಳಿ ಹಿಡಿದು ಚೂರಿಯಿಂದ

ಹೊಟ್ಟೆ ಬಗೆದನು

ಬಂಗಾರವಿಲ್ಲ ಬರೀ ಕರುಳು 

ಮಾಂಸವನ್ನು ಕಂಡನು.


ನಿರಾಸೆಯಿಂದ ಅಳುತಲಿ

ಜನರ ನೋಡಿದ

ಅತಿಯಾಸೆ ಪಡದಿರೆಂದು

ಜನಕೆ ಬುದ್ದಿ ಹೇಳಿದ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು 



ಕತ್ತಿವರಸೆ .ಹನಿಗವನ





 *ಕತ್ತಿವರಸೆ*


ಜನನಾಯಕರೆ 

ಜನರು ಸಂಕಷ್ಟದಲ್ಲಿ

ಇರುವಾಗ ಸಾದ್ಯವಾದರೆ

ಅವರ ಕಣ್ಣೀರ ಒರೆಸಿ

ನೀಡಿ ಸಾಂತ್ವನ ಭರವಸೆ|

ಅದು ಬಿಟ್ಟು ನೊಂದವರ

ಮೇಲೆ ನಡೆಸಲೇ ಬೇಡಿ

ಅಮಾನವೀಯವಾಗಿ

"ಕತ್ತಿ ವರಸೆ"||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

28 ಏಪ್ರಿಲ್ 2021

ಒಗ್ಗಟ್ಟಿನಲ್ಲಿ ಬಲವಿದೆ .ಶಿಶುಗೀತೆ೨೬


 ಶಿಶುಗೀತೆ


*ಒಗ್ಗಟ್ಟಿನಲ್ಲಿ ಬಲವಿದೆ*


ಒಂದು ಊರಿನಲ್ಲಿ ಒಬ್ಬ

ರೈತನಿದ್ದನು

ಅವನಿಗೆ ಮೂರು ಗಂಡು

ಮಕ್ಕಳಿದ್ದರು.


ದಿನವು ಅವರು ತಮ್ಮ ತಮ್ಮಲ್ಲೆ 

ಕಚ್ಚಾಡುತ್ತಿದ್ದರು 

ಅಪ್ಪನ ಕಿವಿಮಾತು ಕೇಳದೆ

ಬಡಿದಾಡುತ್ತಿದ್ದರು.


ಮಕ್ಕಳಿಗೆ ಬುದ್ದಿ ಹೇಳಲು

ಅಪ್ಪ ಯೋಚಿಸಿದ

ಒಂದು ಉಪಾಯವನ್ನು

ಅವನು  ಯೋಜಿಸಿದ.


ಮೂರು ಕಡ್ಡಿಯ ಗಂಟನ್ನು

ಅವರಿಗೆ ನೀಡಿದನು

ಒಬ್ಬೊಬ್ಬರು ಮುರಿಯಲು

ಪ್ರಯತ್ನಿಸಲು ಹೇಳಿದನು.


ಕಷ್ಟಪಟ್ಟರೂ ಯಾರಿಗೂ

ಮುರಿಯಲಾಗಲಿಲ್ಲ

ಮಕ್ಕಳ ಪೆಚ್ಚು ಮೋರೆ

ಅಪ್ಪಗೆ ನೋಡಲಾಗಲಿಲ್ಲ.


ಅಪ್ಪನೆದರು ಮೂವರು

ತಲೆ ತಗ್ಗಿಸಿ ನಿಂತರು

ದಾರಬಿಚ್ಚಿದ ಒಂದೊಂದು

ಕಟ್ಟಿಗೆಯ ಪಡೆದರು.


ಈಗ ಮುರಿಯಿರೆಂದು

ಅಪ್ಪ ಆಜ್ಞೆ ನೀಡಿದರು

ಸುಲಭವಾಗಿ ಮಕ್ಕಳು ಕಟ್ಟಿಗೆ

ಮುರಿದು ಹಾಕಿದರು.


ಒಗ್ಗಟ್ಟಿನಲ್ಲಿ ಬಲವಿದೆ ಎಂದು

ಅಪ್ಪ ಹೇಳಿದರು

ಜಗಳವಾಡದೆ ಬದುಕುವುದನು

ಮಕ್ಕಳು ಕಲಿತರು.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು