19 ಏಪ್ರಿಲ್ 2020

ಆಧುನಿಕ ಕೃತಘ್ನ ಸಮಾಜಕ್ಕೆ ಹಿಡಿದ ಕನ್ನಡಿ (ವಿಮರ್ಶೆ)

*ಆಧುನಿಕ ಕೃತಘ್ನ ಸಮಾಜಕ್ಕೆ ಹಿಡಿದ ಕನ್ನಡಿ*

ಪುಸ್ತಕ ವಿಮರ್ಶೆ

ಹೆಸರಾಂತ ಕಥೆಗಾರರು, ಅಂಕಣಕಾರರು, ಮತ್ತು ಕಾದಂಬರಿಕಾರರಾದ ನಾಗರಾಜ ಜಿ ನಾಗಸಂದ್ರ ರವರು ತಮ್ಮ ಕಾದಂಬರಿ "ಅಂತರ " ದಲ್ಲಿ ಆಧುನಿಕ ಕುಟುಂಬ ವ್ಯವಸ್ಥೆಯ ಸೂಕ್ಷ್ಮ ಚಿತ್ರಣ ನೀಡಿದ್ದಾರೆ.ಮದ್ಯಮ ವರ್ಗಗಳ ಆಸೆ,ತಳಮಳ,ತಲ್ಲಣ,ಅನ್ಯಾಯ ಮಾರ್ಗದಿ ಶ್ರೀಮಂತರಾಗುವವರ ಹಪಾಹಪಿತನ ಮುಂತಾದವುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಮಕ್ಕಳನ್ನು ಬೆಳೆಸುವಾಗ ಹೇಗೆ ಪಾಲಕರು ತಮ್ಮ ಒಣ ಪ್ರತಿಷ್ಠೆಯನ್ನು ತೋರಿಸಿತ್ತಾ ಅವರಲ್ಲಿ ಮೌಲ್ಯಗಳನ್ನು ಬೆಳೆಸಲು ವಿಫಲವಾಗಿ ಕೊನೆಯಲ್ಲಿ ಅವರ ಮಕ್ಕಳ ಭವಿಷ್ಯವನ್ನು ಅವರೇ ಹಾಳು ಮಾಡುತ್ತಾರೆ. ಇದಕ್ಕೆ ವಿರುದ್ಧವಾಗಿ ಮಕ್ಕಳ ಬಾಲ್ಯದಲ್ಲಿ ಅವರಿಗೆ ಒಳ್ಳೆಯ ಸಂಸ್ಕಾರ,ವಿನಯ,ಸಭ್ಯತೆ,ಮುಂತಾದ ಸದ್ಗುಣಗಳನ್ನು ಬೆಳೆಸಿದರೆ ಅವರ ಬದುಕು ಹೇಗೆ ಹಸನಾಗುವುದು ಎಂದು ತಿಳಿಸುವ ಒಂದು ಮೌಲಿಕ ಕಾದಂಬರಿ ಎಂದರೆ ತಪ್ಪಾಗಲಾರದು.

ವಿವೇಚನೆ ಇಲ್ಲದೇ ಹೆಂಡತಿಯ ತಾಳಕ್ಕೆ ಕುಣಿದ ರಾಜೇಶ್, ಮತ್ತು ತಿಳುವಳಿಕೆಯಿಲ್ಲದ ನಯನ ಇವರಿಬ್ಬರೂ ಅಮಾಯಕ ಹಳ್ಳಿಯ ರಕ್ತ ಸಂಬಂಧಿಕರಿಗೆ ಮೋಸ ಮಾಡಿದ ಫಲವನ್ನು ಹೇಗೆ ಉಣ್ಣುವರು ಎಂಬುದನ್ನು ಲೇಖಕರು ಕಾದಂಬರಿಯಲ್ಲಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ.

ಪೋಷಕರು ಸರಿ ದಾರಿಯಲ್ಲಿ ನಡೆದು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡಿದರೆ ನಿರ್ಮಲ ಮತ್ತು ನಾಗೇಶ್ ದಂಪತಿಗಳಂತೆ ಅವರ ಮಕ್ಕಳು ಉನ್ನತ ಪ್ರಜೆಗಳಾಗುವ ಸಾಧ್ಯತೆ ಇದೆ.

ಪೋಲೀಸ್ ಅಧಿಕಾರಿ ಮಧುಕರ್,ಮತ್ತು ಅವರ ಪತ್ನಿ ಬಹಳ ದರ್ಪದಿಂದ ಇತರರನ್ನು ಬಹಳ ಕೀಳಾಗಿ ಕಾಣುತ್ತಿದ್ದ ಪರಿಣಾಮವಾಗಿ ಅವರ ಮಗ ಅಪ್ಪನ ಹಣ ಪೋಲು ಮಾಡುವ ಸಕಲ ಚಟಾದೀಶನಾಗಿ ಕೊನೆಗೆ ಅಪ್ಪನ ಮೇಲೆ ಕೈ ಮಾಡುವ ಹಂತಕ್ಕೆ ಹೋಗುತ್ತಾನೆ.

ಕಾದಂಬರಿಯ ಕೊನೆಯ ಹತ್ತು ಪುಟಗಳನ್ನು ಓದುವಾಗ ಕಣ್ಣುಗಳು ಒದ್ದೆಯಾದವು. ಈಗಲೂ ಕೆಲ ಪೋಷಕರು ನಮ್ಮ ಮಕ್ಕಳು ವಿದೇಶಕ್ಕೆ ಹೋಗಲು ಆಸೆ ಪಡುವರು ಈ ಕಾದಂಬರಿಯಲ್ಲಿ ರಾಜೇಶ್ ಬದುಕು ಸಾವಿನ ನಡುವೆ ಹೋರಾಡುತ್ತಾ ಕೊನೆಯಲ್ಲಿ ಮಗನ ನೋಡಲು ಆಸೆ ಪಟ್ಟರೆ ಮಗ ಬರುವಿದಿಲ್ಲ ಎಂದು ಕಠೋರವಾದ ನಿರ್ಧಾರ ಆಧುನಿಕ ಕೃತಘ್ನ ಸಮಾಜಕ್ಕೆ ಹಿಡಿದ ಕನ್ನಡಿಯಂತೆ ಕಾಣದಿರದು.
ಕಾದಂಬರಿಯ ಸಂಭಾಷಣೆ, ಬಿಗಿಯಾದ ನಿರೂಪಣೆ ಗಮನ ಸೆಳೆಯಿತು. ಅಲ್ಲಲ್ಲಿ ಅಚ್ಚಿನ ದೋಷಗಳನ್ನು ಬಿಟ್ಟರೆ ಇದೊಂದು ಸುಂದರವಾದ ಸಂದೇಶ ನೀಡುವ ಕಾದಂಬರಿ ಎನ್ನಬಹುದು.

ಪುಸ್ತಕದ ಹೆಸರು: ಅಂತರ (ಕಾದಂಬರಿ)

ಲೇಖಕರು : ನಾಗರಾಜ್ ಜಿ ನಾಗಸಂದ್ರ

ಪ್ರಕಾಶನ:ವರ್ಷಾ ಪ್ರಕಾಶನ ಬೆಂಗಳೂರು

ಬೆಲೆ :೧೩೦₹

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಭೀಮ ವಿಜಯ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ

ಭೀಮ ವಿಜಯ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ  ಭಾಗ ಒಂದು

18 ಏಪ್ರಿಲ್ 2020

ಶಿಲಾಬಾಲಿಕೆ(ವಿಶ್ವ ಪಾರಂಪರಿಕ ದಿನದ ಹನಿ)

*ಶಿಲಾಬಾಲಿಕೆ*

ಯಾವಾಗ ನೋಡಿದರೂ
ಅದೇ ಸೌಂದರ್ಯ
ಅದೇ ಲವಲವಿಕೆ
ಅವಳೇ ನಮ್ಮ
ನಾಡಿನ ಹೆಮ್ಮೆ
ಬೇಲೂರು ಶಿಲಾಬಾಲಿಕೆ.

(ಇಂದು ವಿಶ್ವ ಪಾರಂಪರಿಕ ದಿನ)

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಕೂಡಿ ಬಾಳೋಣ (ಭಾವಗೀತೆ)

*ಕೂಡಿ ಬಾಳೋಣ*


ಕನಸುಗಳ ಮೂಟೆಯನ್ನು ಹೊತ್ತು
ಮನಸಿಟ್ಟು ಕಾಯಕ ಮಾಡೋಣ
ಮನಸುಗಳನ್ನು  ಬೆಸೆಯುತ್ತಾ
ಕೂಡಿಬಾಳಿ ಸ್ವರ್ಗಸುಖ ಕಾಣೋಣ||

ಸಹನೆಯ ತೋರತ ಸರ್ವರೆಡೆಗೆ
ಸಮರಸದಿ ಬಾಳಿ ಬದುಕೋಣ
ನಾನು ಅವನೆಂಬ ಭೇದ ತೊರೆದು
ಅವನಿಯಲಿ ಕೂಡಿ ಬಾಳೋಣ.||

ಅಸಮಾನತೆಯನ್ನು ತೊರೆಯುತ
ಸಮತೆಯನು ಪ್ರತಿಪಾದಿಸೋಣ
ಆ ಜನ ಈಜನ ಎಂದು ನೋಡದೆ
ಜನಾರ್ದನ ಮೆಚ್ಚುವಂತಿರೋಣ.||

ನಾಕುದಿನದ ಬಾಳಲಿ ಕಚ್ಚಾಟವೇಕೆ?
ಸಹಬಾಳ್ವೆಯನ್ನು ನಡೆಸೋಣ
ಕವಿಜನರು ಕಂಡ ಕನಸಂತೆ
ಭುವಿಯನ್ನು ನಾಕವ ಮಾಡೋಣ.||

*ಸಿ ಜಿ ವೆಂಕಟೇಶ್ವರ*
*ತುಮಕೂರು*

17 ಏಪ್ರಿಲ್ 2020

ನಮಗೆಲ್ಲಿದೆ ಮತಿ(ಹನಿ ಹನಿ ವಿಸ್ಮಯ ಸ್ಪರ್ಧೆಯಲ್ಲಿ ಮೂರನೇಯ ಬಹುಮಾನ ಲಭಿಸಿದ ಕವನ

*ನಮಗೆಲ್ಲಿದೆ ಮತಿ*
 ಕವನ

ಬುದ್ದ ಬಸವಣ್ಣ ಅಂಬೇಡ್ಕರರು
ಬೋಧನೆ ಮಾಡಿದರು ಬೇಡ ಜಾತಿ
ಜಾತಿ ಧರ್ಮಕ್ಕೊಂದೊಂದು ಮಠವ
ಕಟ್ಟಿ ಕಚ್ಚಾಡುವ ನಮಗೆಲ್ಲಿದೆ ಮತಿ

ಹೆಣ್ಣು ಗಂಡೆಂಬ ತರತಮ ಅಳಿದಿಲ್ಲ
ಜನಸಂಖ್ಯೆ ಏರಿಕೆಗೆ ಕಡಿವಾಣವಿಲ್ಲ
ಉದ್ಯೋಗ ಮಾಡಲು ಕೆಲಸವಿಲ್ಲ
ನಮ್ಮಾತ್ಮಪ್ರೌಢಿಮೆಗೆ ಕೊರತೆಯಿಲ್ಲ.

ಗೊಡ್ಡು ಸಂಪ್ರದಾಯ ಕಂದಾಚಾರ
ಜ್ಞಾನವಿದ್ದೂ ಅಜ್ಞಾನಿಗಳಾಗುತಿಹೆವು
ಜನ ಮರುಳೊ ಜಾತ್ರೆ ಮರುಳೋ
ಈಗಲೂ ನಮಗೆ ಬುದ್ದಿ ಬಂದಿಲ್ಲ

ದಕ್ಷಿಣೆ ಪಡೆವ ಅಶಕ್ತ  ವರಗಳು
ಗರ್ಭದಲೆ ಮಡಿವ ಕಂದಮ್ಮಗಳು
ಮಾತೆಯರ ಮೇಲೆ ದೌರ್ಜನ್ಯಗಳು
ತರೆವುದಾವಾಗ ನಮ್ಮ ಕಣ್ಣುಗಳು.

*ಸಿ ಜಿ ವೆಂಕಟೇಶ್ವರ*
*ತುಮಕೂರು*