18 ಏಪ್ರಿಲ್ 2020

ಕೂಡಿ ಬಾಳೋಣ (ಭಾವಗೀತೆ)

*ಕೂಡಿ ಬಾಳೋಣ*


ಕನಸುಗಳ ಮೂಟೆಯನ್ನು ಹೊತ್ತು
ಮನಸಿಟ್ಟು ಕಾಯಕ ಮಾಡೋಣ
ಮನಸುಗಳನ್ನು  ಬೆಸೆಯುತ್ತಾ
ಕೂಡಿಬಾಳಿ ಸ್ವರ್ಗಸುಖ ಕಾಣೋಣ||

ಸಹನೆಯ ತೋರತ ಸರ್ವರೆಡೆಗೆ
ಸಮರಸದಿ ಬಾಳಿ ಬದುಕೋಣ
ನಾನು ಅವನೆಂಬ ಭೇದ ತೊರೆದು
ಅವನಿಯಲಿ ಕೂಡಿ ಬಾಳೋಣ.||

ಅಸಮಾನತೆಯನ್ನು ತೊರೆಯುತ
ಸಮತೆಯನು ಪ್ರತಿಪಾದಿಸೋಣ
ಆ ಜನ ಈಜನ ಎಂದು ನೋಡದೆ
ಜನಾರ್ದನ ಮೆಚ್ಚುವಂತಿರೋಣ.||

ನಾಕುದಿನದ ಬಾಳಲಿ ಕಚ್ಚಾಟವೇಕೆ?
ಸಹಬಾಳ್ವೆಯನ್ನು ನಡೆಸೋಣ
ಕವಿಜನರು ಕಂಡ ಕನಸಂತೆ
ಭುವಿಯನ್ನು ನಾಕವ ಮಾಡೋಣ.||

*ಸಿ ಜಿ ವೆಂಕಟೇಶ್ವರ*
*ತುಮಕೂರು*

17 ಏಪ್ರಿಲ್ 2020

ನಮಗೆಲ್ಲಿದೆ ಮತಿ(ಹನಿ ಹನಿ ವಿಸ್ಮಯ ಸ್ಪರ್ಧೆಯಲ್ಲಿ ಮೂರನೇಯ ಬಹುಮಾನ ಲಭಿಸಿದ ಕವನ

*ನಮಗೆಲ್ಲಿದೆ ಮತಿ*
 ಕವನ

ಬುದ್ದ ಬಸವಣ್ಣ ಅಂಬೇಡ್ಕರರು
ಬೋಧನೆ ಮಾಡಿದರು ಬೇಡ ಜಾತಿ
ಜಾತಿ ಧರ್ಮಕ್ಕೊಂದೊಂದು ಮಠವ
ಕಟ್ಟಿ ಕಚ್ಚಾಡುವ ನಮಗೆಲ್ಲಿದೆ ಮತಿ

ಹೆಣ್ಣು ಗಂಡೆಂಬ ತರತಮ ಅಳಿದಿಲ್ಲ
ಜನಸಂಖ್ಯೆ ಏರಿಕೆಗೆ ಕಡಿವಾಣವಿಲ್ಲ
ಉದ್ಯೋಗ ಮಾಡಲು ಕೆಲಸವಿಲ್ಲ
ನಮ್ಮಾತ್ಮಪ್ರೌಢಿಮೆಗೆ ಕೊರತೆಯಿಲ್ಲ.

ಗೊಡ್ಡು ಸಂಪ್ರದಾಯ ಕಂದಾಚಾರ
ಜ್ಞಾನವಿದ್ದೂ ಅಜ್ಞಾನಿಗಳಾಗುತಿಹೆವು
ಜನ ಮರುಳೊ ಜಾತ್ರೆ ಮರುಳೋ
ಈಗಲೂ ನಮಗೆ ಬುದ್ದಿ ಬಂದಿಲ್ಲ

ದಕ್ಷಿಣೆ ಪಡೆವ ಅಶಕ್ತ  ವರಗಳು
ಗರ್ಭದಲೆ ಮಡಿವ ಕಂದಮ್ಮಗಳು
ಮಾತೆಯರ ಮೇಲೆ ದೌರ್ಜನ್ಯಗಳು
ತರೆವುದಾವಾಗ ನಮ್ಮ ಕಣ್ಣುಗಳು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

16 ಏಪ್ರಿಲ್ 2020

ಸಿಹಿಜೀವಿಯ ೫ ಹನಿಗಳು

*ಸಿಹಿಜೀವಿಯ ೫ ಹನಿಗಳು*

*೧*

*ನಾರಾಯಣ*

ಜಂಬದಿ ಡಂಬದಿ
ಏತಕೆ ಮಾಡುವೆ
ದೇವರ ಪಾರಾಯಣ|
ಹಸಿದ ಹೊಟ್ಟೆಗೆ
ಅನ್ನವ ನೀಡು
ಅಲ್ಲೇ ಇರುವ
ನಮ್ಮ ನಾರಾಯಣ||

*೨*

*ಗೆಲುವು*


ಸಿಕ್ಕೇ ಸಿಗುವುದು
ನೀನೆಣಿಸಿದ ಗೆಲುವು
ಇದ್ದರೆ ನಿನಗೆ
ಜ್ಞಾನದ ಹಸಿವು


*೩*
*ಪಾಲು*

ಗೆಲುವು ಬಂತೆಂದು
ಹಿರಿಹಿರಿ ಹಿಗ್ಗಬೇಡ
ಅದರಲ್ಲಿ ಸೋಲಿನ
ಪಾಲಿದೆ ಮರೆಯಬೇಡ.

*೪*

*ಜೇಡ*

ಸೋತೆನೆಂದು
ಎಂದಿಗೂ ಕುಗ್ಗಬೇಡ
ಬಿಡುವುದೇ
ಬಲೆ ಹೆಣೆವುದ
ಸೋತ ಜೇಡ?

*೫*

*ಕನ್ನಡಿ*

ಬರುವುದು ಗೆಲುವು ಒಂದು ದಿನ
ಪ್ರಯತ್ನ ಮಾಡು ಪ್ರತಿ ದಿನ
ಸೋಲೇ ಗೆಲುವಿನ ಮುನ್ನುಡಿ
ಪ್ರಯತ್ನ ಯಶಸ್ವಿನ ಕನ್ನಡಿ.


*ಸಿ ಜಿ ವೆಂಕಟೇಶ್ವರ*
*ತುಮಕೂರು*


ಮರೆಯದಿರು (ಬಹುಮಾನ ಪಡೆದ ಚುಟುಕು)

*ಮರೆಯದಿರು* 
(ಹನಿ ಹನಿ ವಿಸ್ಮಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಚುಟುಕು )

ಸೋತೆನೆಂದು ಚಿಂತಿಸುತ ನೀ ಕೂರುವೆ ಏಕೀಗ
ಬಿದ್ದರು ಬಲೆಯನು ಹೆಣೆಯುವ ಜೇಡವ ನೋಡೀಗ
ನಿನ್ನೊಳಗಿರುವ ಶಕ್ತಿಯು ಹೆಚ್ಚಿದೆ ಮರೆಯದಿರು
ಗೆಲುವದು ಬಂದಾಗ ಹುಚ್ಚಾಗಿ ಮೆರೆಯದಿರು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

15 ಏಪ್ರಿಲ್ 2020

ಆರೈಕೆ ಮಾಡು(ಕವನ)



*ಆರೈಕೆ ಮಾಡು*

ನೀನು ಒಂದು ದಿನ
ಆಗುವೆ ಮುದುಕ
ಆಗ ನೀನು ಅರಿತು
ಕೊಳ್ಳುವೆ  ಬದುಕ

ಯೌವನ ಯಾರಿಗೂ
ಶಾಶ್ವತವಲ್ಲ
ಮಗನೆ ವೃದ್ಧಾಪ್ಯ
ಇದು ತಪ್ಪಲ್ಲ

ಹಣ್ಣೆಲೆ ಉದರುವ
ಕಾಲವು ಬಂದಿದೆ
ಚಿಗುರೆಲೆ ನಗುವ
ನೋಡಿ ನಲಿದಿದೆ

ಬಾಲ್ಯದಿ ನಡೆದೆನು
ಆಡಿಸಿ‌ ಕೈಕಾಲು
ಈಗ ಬಂದಿದೆ
ನೋಡಿಲ್ಲಿ ಕೈಕೋಲು

ಆರೈಕೆ ಮಾಡು
ಈ ಅಪ್ಪನನು
ಮಗನು ಹಿಡಿವ
ನಿನ್ನ ದಾರಿಯನು.

*ಸಿ ಜಿ ವೆಂಕಟೇಶ್ವರ*
*ತುಮಕೂರು*