15 ಏಪ್ರಿಲ್ 2020

ಸಿಹಿಜೀವಿಯ ಹತ್ತು ಹನಿಗಳು (ಸಹನೆ)

*ಚುಟುಕುಗಳು*

*೧*

*ವರ*

ದೇವರಿಗೆ ನೂರು ನಮನ
ಕೊಟ್ಟ ನನಗೆ ಸಾವಿರ ವರ
ಅಮ್ಮನೆಂಬ ಸಹನಾಮೂರ್ತಿ
ಕೊಡುಗೆಯು ದೊಡ್ಡ ವರ.

*೨*

*ಆತುರ*

ಸಹನೆಯಿಲ್ಲ ಎಲ್ಲೆಡೆ ಆತುರದ
ಪಾಸ್ಟ್ ಪುಡ್ ಜಮಾನ
ಇಂದು ಗಿಡ ನೆಟ್ಟು
ನಾಳೆ ಬಯಸುವರು ಹಣ್ಣನ್ನ.

*೩*

*ಜೀವನದಿ*

ರೂಢಿಸಿಕೊಂಡರೆ ನೀನು
ಸತ್ಯ, ಶಾಂತಿ ,ಸಹನೆಯ ಜೀವನದಿ
ಸರಾಗವಾಗಿ ಸಾಗರವ
ಸೇರುವುದು ಬದುಕೆಂಬ ‌ಜೀವನದಿ

*೪*

*ಸಿಂಹಿಣಿ*

ನನ್ನವಳು ಸಾಮಾನ್ಯವಾಗಿ
ಸಹನಾಮಣಿ ಸಹಧರ್ಮಿಣಿ
ಕೆರಳಿ ನಿಂತರೆ ನೋಡಬೇಕು
ಅವಳೊಂದು ಸಿಂಹಿಣಿ.

*೫*

*ಸಾಧನೆಯ ಮೂಲ*

ಮಾಡುವ ಕೆಲಸದಲ್ಲಿದ್ದರೆ
ಸಹನೆ, ಶ್ರದ್ಧೆ ಯಶ ಪಡೆವೆ
ಕಾಟಾಚಾರದ ಗುಣವಿದ್ದರೆ
ಏನೂ ಸಾಧಿಸದೆ ಮಡಿವೆ.

*೬*

*ತಾಯಿ*

ಸಹನೆಗೆ ಮತ್ತೊಂದು ಹೆಸರೇ
ನಮ್ಮ ಭೂಮಿತಾಯಿ
ಭೂತಾಯಿಯ ಪ್ರತಿರೂಪ
ನನ್ನನೆತ್ತ  ತಾಯಿ .

*೭*

*ನಮನ*

ಸಹನೆಗೆ ಮತ್ತೊಂದು ಹೆಸರೇ
ಜನ್ಮ ಕೊಟ್ಟ ನನ್ನಮ್ಮ
ಮಹಾನ್ ಕೊಡುಗೆಗೆ ಇದೋ
ನಮನ ನಿನಗೆ ಬ್ರಹ್ಮ .

*೮*

*ಮಹಾಜಾಣ*

ಸಾಧಕನಾದವನಿಗೆ ಇರಲೇಬೇಕು
ಸಹನೆಯೆಂಬ ಮಹಾಗುಣ
ಅಂತಹವನ ಹೊಗಳುವುದು
ಜಗವು ಮಹಾಜಾಣ .

*೯*

*ಪಶ್ಚಾತ್ತಾಪ ಪಡೆದಿರು*

ಸಹನೆಯು ದೌರ್ಬಲ್ಯದ
ಸಂಕೇತವೆಂದು ತಿಳಿಯದಿರು
ಕೋಪದ ಕೈಗೆ ಬುದ್ದಿ
ನೀಡಿ ಪಶ್ಚಾತ್ತಾಪ ಪಡೆದಿರು.

*೧೦*

*ತೂತು ಮಡಿಕೆ*

ಸಹನೆಯಲಿ ಕೇಳುವವನು
ಉತ್ತಮ ಮಾತುಗಾರನಾಗುವ
ಅರೆಬರೆ ಕಲಿತವನು
ತೂತು ಮಡಕೆಯಾಗುವ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

14 ಏಪ್ರಿಲ್ 2020

ಸಿಹಿಜೀವಿಯ ಹನಿ‌(ನಿಗ)

*ನಿಗ*

ಅವನು ರೂಪದಲಿ
ಚೆಲುವಾಂತ ಚೆನ್ನಿಗ
ಅದಕ್ಕೆ ಅವಳು
ಯಾವಾಗಲೂ
ಅವನ ಮೇಲೆ
ಇಟ್ಟಿರುವಳು ನಿಗ

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಭಯವನು ತೊಲಗಿಸು (ಭಾವಗೀತೆ) ಹನಿ ಹನಿ ವಿಸ್ಮಯ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದ ಭಾವಗೀತೆ

*ಭಯವನು ತೊಲಗಿಸು*

ಭಯದಲಿ‌ ಕುಳಿತು ಚಿಂತಿಸಬೇಡ
ಕಾಯಕ ಮಾಡಲು ನೀ ಕಲಿ
ನಿರ್ಭಯವಾಗಿ ಮುನ್ನುಗ್ಗಲು
ಯಶಸ್ಸು ಲಬಿಸುವುದು ನೀ ತಿಳಿ.

ವೇದನೆ ಪಡುತಾ ಚಿಂತಿಪೆಯೇಕೆ
ಕಾದುವ ಯೋಧನ ನೋಡಿ ಕಲಿ
ಸಾಧನೆ ಮಾಡಲು ಭಯವೇಕೆ
ಹೇಡಿಯಾಗದಿರು ರಣರಂಗದಲಿ.

ಜಯಗಳಿಸಲು ಇಲ್ಲ ಅಡ್ಡದಾರಿ
ಮಾಡುವ ಕೆಲಸದಿ‌ ಸ್ಪಷ್ಟತೆ ಇರಲಿ
ಧೈರ್ಯವೊಂದೇ ಗೆಲ್ಲುವ ರಹದಾರಿ
ನಾಯಕನಾಗು ಕಠಿಣವಾದ ಕೆಲಸದಲಿ.

ಭಯವನು‌ ತೊಲಗಿಸು ಮನದಿಂದ
ಒಳಗಿನ ಶಕ್ತಿಯು ಜಾಗೃತವಾಗುವುದು
ಅಭಯವನಿತ್ತರೆ ದೇವ ಮುದದಿಂದ
ತಮವು ಕಳೆದು ಜಗಕೆ ಬೆಳಕಾಗುವುದು.






13 ಏಪ್ರಿಲ್ 2020

ಒಳಿತಿಗೆ ಸೋಲಿಲ್ಲ(ಭಾವಗೀತೆ)

*ಒಳಿತಿಗೆ ಸೋಲಿಲ್ಲ*

ಒಳಿತು ಮಾಡು ನೀ ಜಗಕೆ
ಆನಂದ ಸಿಗುವುದು ಮನಕೆ
ಸಹನೆಯ ಗಣಿಯು ನೀನಾಗು
ತಾಳ್ಮೆಯಿದ್ದರೆ ಗೆಲುವೆ ನೀನು.

ಉಳಿಗಳ ಪೆಟ್ಟಿಗೆ ಬೆದರದಿರು
ಬಿರುಗಾಳಿಗೆ  ನೀ ಜಗ್ಗದಿರು
ಅಳಿಯುವ ಜನರಿಗೆ ಕಿವುಡಾಗು
ನಿಧಾನವಾದರೂ ಮುಂದೆ ಸಾಗು.

ಕಷ್ಟಗಳಿದ್ದರೂ ಇರಲಿ ತಾಳ್ಮೆ
ಬಂದೆ ಬರುವುದು ಮುಂದೆ ಬಲ್ಮೆ
ಕಲಿಯಬೇಕು ಸೋಲಿನಲಿ ಸಹನೆ
ಅದುವೆ ಗೆಲುವಿನ ತವರುಮನೆ .

ಅಮೂಲ್ಯವಾದದು ಈ ಜೀವ
ಸಹಿಸಬೇಕು ಬರುವ ನೋವ
ಕೆಡುಕು ದೀರ್ಘಕಾಲ ಬಾಳಲ್ಲ
ಒಳಿತಿಗೆ ಎಂದೂ ಸೋಲಿಲ್ಲ.

ಮುಂಜಾನೆ ಕದನ(ಹನಿಗವನ)

*ಮುಂಜಾನೆ ಕದನ*

ಮುಂಜಾನೆ ಕಾಯತ್ತಿದ್ದೆ ನನ್ನವಳ
ನಸುನಗೆಯ ವದನಕೆ|
ತರಕಾರಿಯಿಲ್ಲ ಅಡುಗೆ ಹೇಗೆ ಮಾಡಲೆಂದು ಇಳಿದೇ ಬಿಟ್ಟಳು ಕದನಕೆ||

*ಸಿ ಜಿ ವೆಂಕಟೇಶ್ವರ*
*ತುಮಕೂರು*