12 ಏಪ್ರಿಲ್ 2020

ಮೌನಿ (ಕವನ)

*ಮೌನಿ*

ಮೌನಕಿರುವುದು ನೂರು ಅರ್ಥ
ಮೌನವು  ಗೆದ್ದಿದೆ ಹಲವು ಅನರ್ಥ
ಮೌನವು ಬಂಗಾರವೂ ಹೌದು
ವ್ಯಕ್ತಿತ್ವದ ಸಿಂಗಾರವೂ ಹೌದು.

ಮೌನಿಯೆಂದರೆ ಮೂಗನಾಗುವುದಲ್ಲ
ಮೂಗಿನ ನೇರಕೆ ಮಾತಾನಾಡುವುದಿಲ್ಲ
ಮೌನಿಯಾದವ ಗೆದ್ದಿರುವ ಕಲಹಗಳ
ಉಳಿಸಿಕೊಂಡಿರುವ ಸಂಬಂಧಗಳ.

ಮೌನದಲ್ಲಿದೆ ಹಲವು ಪರಿಹಾರ
ಮೌನದಿಂದಿದ್ದರೆ ಶಾಂತಿ ಸಾಕಾರ
ದಾರಿಯಿದೆ ಆಂತರ್ಯದ ತುಮುಲಕೆ
ಅವಕಾಶವಿದೆ ಆತ್ಮಾನುಸಂಧಾನಕೆ

ಮೌನಿಯಾಗಬೇಕು ಟೀಕೆಗಳಿಗೆ
ಅಜ್ಞಾನಿಗಳ  ಮಾತುಗಳಿಗೆ
ಮೌನಿಯಾಗಬೇಕಿದೆ ನಾನು
ನನ್ನಿಂದಲೇ  ತೊಲಗಲು ನಾನು


*ಸಿ ಜಿ ವೆಂಕಟೇಶ್ವರ*
*ತುಮಕೂರು*


11 ಏಪ್ರಿಲ್ 2020

ಗಟ್ಟಿ ಮೇಳ(ಭಾವಗೀತೆ)

*ಗಟ್ಟಿ ಮೇಳ*

ನನ್ನ ತೂಗುವ ತೊಟ್ಟಿಲು ನೀನಲ್ಲವೆ
ನಿನ್ನ ಸಂತೋಷ ಕೋರುವವ ನಾನಲ್ಲವೆ||

ನೀ ಬಳಿಯಿದ್ದರೆ ನನಗರಿವಿಲ್ಲದೆ
ನರ್ತಿಸುವುದೆನ್ನ  ಮನ
ದೂರಾದರೆ ಒಂದರೆಕ್ಷಣ
ಹೃದಯದಲ್ಲಿ ಕಂಪನ||

ಒಲವಿನ ಮಾತುಗಳಾಡುತ
ಬಳಿ ಬಂದರೆ ಜಗವ ಮರೆವೆ
ಕಾಣದೆ ದೂರಾದರೆ ಚಡಪಡಿಸಿ
ಎಲ್ಲಿದ್ದರೂ ಹುಡುಕಲು ಬರುವೆ||

ಸುಳಿದಾಡು ನನ್ನ ಹಿಂದೆ ಮುಂದೆ
ನನಗರಿವಿಲ್ಲದೆ ಎದೆ ತಪ್ಪುವುದು ತಾಳ
ದೇವತೆ ನೀನು ನನ್ನ ಬಾಳಿಗೆ
ಕೈ ಹಿಡಿದಾಗಲೆ ಆಗಿದೆ ಗಟ್ಟಿಮೇಳ||

*ಸಿ ಜಿ ವೆಂಕಟೇಶ್ವರ*
*ತುಮಕೂರು*


ಶಾಯರಿ

ಶಾಯರಿ

ಅವನು ನೋಡಿದ ಅವಳನ್ನು
ವಿವಿಧ ಕೋನಗಳ ಬದಲಿಸಿ|
ಅವಳು ಹೊಡೆದಳು ಅವನ
ಚಪ್ಪಲಿಯ ಬೆಲ್ಟ್ ಸಡಿಲಿಸಿ||

"ಸಿ ಜಿ ವೆಂಕಟೇಶ್ವರ*
*ತುಮಕೂರು*

10 ಏಪ್ರಿಲ್ 2020

ಮೂರು ಶಾಯರಿಗಳು


*ಮೂರು  ಶಾಯರಿಗಳು*

*೧*

ನಾನು ಸದಾ ಅವಳ ಹೊಗಳುತ್ತಲೇ ಇದ್ದೆ
ಲಾವಣ್ಯವತಿ‌ ಗುಣವತಿ ಸೌಂದರ್ಯವತಿ|
ಬಿಟ್ಟೇ ಹೋದಳು ನನ್ನನು ಗೊಣಗುತ್ತ
ಮಾಡದೆ ಕೆಲಸ ವರ್ಣನೆಯಾಯಿತು ಅತಿ||.

*೨*

ನನಗೂ ಆಸೆ ಕಣೇ ಕೊಡಿಸಲು ನಿನಗೆ
ಬಂಗಾರದ ,ಬೆಳ್ಳಿಯ, ವಜ್ರದ ಒಡವೆಗಳನ್ನ|
ಮೊದಲು ನೋಡಿಕೋ ಧರಿಸಬೇಕಿರುವ
ನಿನ್ನ ಕೈ ಕಾಲು ಮೂಗು ಕಿವಿಗಳನ್ನ||

*೩*

ಕಾಯುತಲೇ ಇದ್ದೆ ಒಂದಲ್ಲ ಒಂದು
ದಿನ ಅವಳು ಬೀರುವಳು ಕಿರುನಗೆ|
ಧನವಿರುವವನ  ಮದುವೆಯಾಗಿ
ನನ್ನ ಹೃದಯಕ್ಕೆ ಹಾಕಿ ಹೋದಳು ಹೊಗೆ||

ಮನಸ್ಸು ಮಾಡು (ಭಾವಗೀತೆ)

*ಮನಸ್ಸು ಮಾಡು*

ಚಿಂತಿಪೆ ಏಕೆ ಓ ಗೆಳೆಯ
ಬೆಳಗಬೇಕು ನೀ ಧರೆಯ
ಏಳು ಎದ್ದೇಳು ನಿಲ್ಲದಿರು
ಕೈಲಾಗದವನೆಂದು ಕೊರಗದಿರು.

ಮನಸ್ಸು ಮಾಡು ನೀ ಗೆಳೆಯ
ತೆಗೆದಿಡು ಮನದ ಕೊಳೆಯ
ನಿನ್ನಲಿದೆ ಅಪಾರ ಶಕುತಿ
ಕಾಪಾಡುವಳು ಆ ಪಾರ್ವತಿ.

ಹಿಂದಡಿ‌ ಇಡದಿರು‌ ಎಂದು
ನುಗ್ಗುತಿರು ಜಗ ನಿನ್ನದೆಂದು
ಧೈರ್ಯವಂತರಿಗಿದೆ ದಾರಿ
ಶುರು ಮಾಡು ಮುಟ್ಟುವೆ ಗುರಿ.

ನೀನಾಗು ಒಂದು ಜೀವನದಿ
ಸಮರಸವಿರಲಿ ಜೀವನದಿ
ಅಶಕ್ತರ ಸಹಾಯಕೆ ಸನಿಹವಾಗು
ಮೂಕಪ್ರಾಣಿಗಳ ಸಂರಕ್ಷಕನಾಗು.

*ಸಿ ಜಿ ವೆಂಕಟೇಶ್ವರ*
*ತುಮಕೂರು*