13 ಅಕ್ಟೋಬರ್ 2019

ಎಲ್ಲಿ ಹೋದವು ಆ ದಿನಗಳು(ಕವನ)



*ಎಲ್ಲಿ ಹೋದವು ಆ ದಿನಗಳು*


ಎಲ್ಲಿ‌ಹೋದವು ಆ ದಿನಗಳು
ಎಲ್ಲಿ ನೋಡಿದರೂ ದಾವಂತದ ಯಾಂತ್ರಿಕ ಬದುಕಿನ ತೋರಿಕೆಗಳು

ಬೆಳ್ಳಿ ಚುಕ್ಕಿ ಬಂತು ಏಳೋ
ಕಂದ ಎಂದು ಎಬ್ಬಿಸಿ ನಿತ್ಯ ಕರ್ಮ ದೊಂದಿಗೆ ಕರ್ಮ ಆರಂಬಿಸಿ
ಗಂಗಾ ಯಮುನ ನದಿಗಳ ನೆನೆದು
ಸ್ನಾನವ ಮಾಡಿ  ಬ್ರಾಹ್ಮಿ  ಮುಹೂರ್ತದಿ ಜಪ ತಪ  ಪೂಜೆಗಳು ಅಂದು.

ಇಂದು

ನೇಸರ ನೆತ್ತಿಗೆ  ಬಂದರೂ
ಏಳು ಎಂದು ಹೇಳಲು ಹಿಂಜರಿವ ಪಾಲಕರು ಎದ್ದರೂ ಕರಾಗ್ರೆ ವಸತೇ...
ಬದಲಾಗಿ ಕರದಲಿ  ಜಂಗಮವಾಣಿ ಹಿಡಿದು ಮುಖ ತೊಳೆಯದೇ ಮುಖಪುಟಕೆ ಹಾತೊರೆವ ನವ
ಪೀಳಿಗೆಗಳು.

ಗೋಧೂಳಿ ಸಮಯದಿ ಮನೆ ಕಸವ
ತೆಗೆದು ದೀಪ ಮುಡಿಸಿ
ಕಾಯಕನಿರತ ಗೃಹಿಣಿಯರು
ಭಾಗವತ ರಾಮಾಯಣ ಕಥೆಗಳ
ಹೇಳುವ ಅಜ್ಜಿಗಳು ಕುತೂಹಲದಿಂದ ಕೇಳುವ ಮಕ್ಕಳು .ನೈತಿಕತೆ ಮೌಲ್ಯಗಳು ಬೆಳೆಯಲು ಪೂರಕ ಚಟುವಟಿಕೆಗಳು.

 ಇಂದಿನ ಬಹುತೇಕ ಡ್ಯಾಡಿ ಮಮ್ಮಿಗಳಿಗೆ
ಮೊಬೈಲೇ ಸ್ವರ್ಗ ಮಕ್ಕಳ ಕೈಗೂ
ಅದನ್ನಿತ್ತು ಬೆಳಕು ನೀಡುವ ಬದಲು
ಕತ್ತಲಾಗಿ ಮಾಡಿ
ಮೌಲ್ಯಗಳ ಸಾರುವ ಕಥೆಗಳ ಹೇಳುವ
ಅಜ್ಜ ಅಜ್ಜಿಯರನು ವೃದ್ದಾಶ್ರಮಕೆ ತಳ್ಳಿ
ಅದೇ ಪುಟ್ಟ ಗೌರಿನೋಡುತಾ ಗಟ್ಟಿ ಮೇಳ ಬಾರಿಸುತಾ  , ಮನೆಯೊಂದು ಮೂರುಬಾಗಿಲು ಮಾಡಲು ಸಜ್ಜಾಗಿರುವ ಆದರ್ಶ ಜನಗಳು.?

ಎಲ್ಲಿ‌ಹೋದವು ಆ ದಿನಗಳು?
ಎಲ್ಲಿ ನೋಡಿದರೂ ದಾವಂತದ ಯಾಂತ್ರಿಕ ಬದುಕಿನ ತೋರಿಕೆಗಳು .

*ಸಿ ಜಿ ವೆಂಕಟೇಶ್ವರ*

02 ಅಕ್ಟೋಬರ್ 2019

ಅಹಿಂಸೆ ಪಾಲಿಸಿ (ನ್ಯಾನೋ ಕಥೆ,)



*ಅಹಿಂಸೆ ಪಾಲಿಸಿ*
(ನ್ಯಾನೋ ಕಥೆ)


"ಗಾಂಧೀಜಿಯವರ ತತ್ವ ಮತ್ತು ನೀತಿಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಬೇರೆಯವರಿಗೆ ತೊಂದರೆ ಕೊಡಬಾರದು " ಈಗೆ ಗೋವಿಂದಪ್ಪ ನವರು ಸುಮಾರು ಅರ್ಧಗಂಟೆಗಳ ಕಾಲ ಸುಡು ಬಿಸಿಲಿನಲ್ಲಿ ಕುಳಿತ  ಮಕ್ಕಳ ಮುಂದೆ ಭಾಷಣ ಮಾಡುತ್ತಿದ್ದಾಗ  ಕೊನೆ ಸಾಲಿನಲ್ಲಿದ್ದ ಸತೀಶ್ ಎಂಬ ಬಾಲಕ "ಸಾರ್ ಭಾಷಣ ನಿಲ್ಲಿಸಿ ಅಹಿಂಸಾ ನೀತಿ ಪಾಲಿಸಿ" ಎಂದದ್ದು ವೇದಿಕೆಯಲ್ಲಿರುವವರಿಗೆ ಕೇಳದೇ ಇರಲಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 ಸೆಪ್ಟೆಂಬರ್ 2019

ಚುಟಕುಗಳು(ಉತ್ತಮ ಚುಟುಕುಗಳು ಎಂದು ಪುರಸ್ಕೃತ)

ಸಿಹಿಜೀವಿಯ ಹನಿಗಳು (ಮಡದಿ)

*೧*

*ಆಧುನಿಕ ಪತಿಗಳು*

ಮಡದಿ ಹತ್ತಿರವಿದ್ದರೆ
ನನಗದೇ ಕೋಟಿ ರೂಪಾಯಿ
ಎಂದರು ಕವಿಗಳು
ನಮ್ಮ ಪಾಡಿಗೆ ನಮ್ಮ ಬಿಟ್ಟರೆ
ನಮಗದೆ ಕೋಟಿಗಿಂತ ಹೆಚ್ಚು
ಎಂದರು ಆಧುನಿಕ ಪತಿಗಳು .


*೨*

*ಮುತ್ತು*

ಮಡದಿ ಇಷ್ಟಪಡುವಳೆಂದು
ಮೈಸೂರು ಮಲ್ಲಿಗೆ
ಮೈಸೂರ್ ಪಾಕ್ ತಂದು
ಕೇಳಿದನು ಕೊಡೆ ಮುತ್ತೊಂದನು
ಅವಳಂದಳು
ಕೊಡಿಸಬಾರದೆ ಮುತ್ತಿನ
ಸರವೊಂದನು.


*ಸಿ ಜಿ ವೆಂಕಟೇಶ್ವರ*

27 ಸೆಪ್ಟೆಂಬರ್ 2019

ಪ್ರವಾಸ (ಹನಿ)

*ಪ್ರವಾಸ*

(ಇಂದು ವಿಶ್ವ ಪ್ರವಾಸ ದಿನ)

ಎಲ್ಲರಿಗೂ
ಮನೆಯಲಿ
ಪ್ರತಿದಿನ ಮಾಮೂಲಿ
ವಾಸ .
ಹೆಚ್ಚುಕಡಿಮೆಯಾದರೆ
ವನವಾಸ.
ದೇಶ ಸುತ್ತಲು
ಜ್ಞಾನ ಪಡೆಯಲು
ವರ್ಷಕ್ಕೊಮ್ಮೆ ಮಾಡಿ
ಪ್ರವಾಸ.

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ಚಾಲಕ (ಭಾವಗೀತೆ)

*ಚಾಲಕ*

ಕತ್ತಲ ಕೂಪದಿಂದ
ನಿನಗೆ ಬಿಡುಗಡೆ ಎಂದು?
ಬೆಳಕಿನೆಡೆ ಸಾಗಲು
ನೀನು ಅಡಿಇಡು ಇಂದು.

ನಿನ್ನಾತ್ಮ ದರ್ಶನಕೆ
ಪರರ ನೆರವೇಕೆ?
ನೆರಳಂತೆ ಕಾಯುವುದು
ಸತ್ಕಾರ್ಯ ಚಿಂತೆಯೇಕೆ?

ಜಗದ ಮೂಲೆಗಳಿಂದ
ಪಡೆ ನೀನು ಜ್ಞಾನ
ಜನ ಮೆಚ್ಚಿ ಹೊಗಳುವರು
ನೀನೆ ಮಹಾಜಾಣ.

ಭಕ್ತಿಯಲಿ ಭಜಿಸಿದರೆ
ಕಾಣುವುದು ಸ್ವರ್ಗ
ಮುಕ್ತಿಯ ಮೂಲ
ಅದುವೆ ಭಕ್ತಿಮಾರ್ಗ.

ಮೇಲು ಕೀಳೆನೆದೆ
ಮಾಡು ನಿನ್ನ ಕಾಯಕ
ನಿನ್ನ ಮೋಕ್ಷದ ಯಾತ್ರಗೆ
ನೀನಾಗುವೆ ಚಾಲಕ.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*