01 ಮೇ 2018

ನ್ಯೂಟನ್ ಮೂರನೇ ನಿಯಮ (ಮದುವೆ ಕುರಿತ ಕವನ )

*ನ್ಯೂಟನ್ ಮೂರನೇ ನಿಯಮ*

ನಮ್ಮ  ಜವರ ಬಹಳ ಬುದ್ದಿವಂತ
ಎಂದು ಅವನೇ ತಿಳಿದಿದ್ದ
ಮದುವೆಯಾಗುವೆನೆಂದು ಹೆಣ್ಣು
ಹುಡುಕುತ್ತಲೇ ಇದ್ದ

ನಾಯಿಗೆ ಹೊಡೆಯಲು ಬೇಗ
ಒಳ್ಳೆಯಕಲ್ಲು ಸಿಗಲ್ಲವಂತೆ
ಇವನಿಗೂ ತಿರುಗಿ ದರೂ
ಒಳ್ಳೆಯ ಹೆಂಡತಿ ಸಿಗಲಿಲ್ಲವಂತೆ

ಹೆಣ್ಣು ಸಿಗದೆ ಜವರ  ಬಸವಳಿದು
ನಾನು ಬ್ರಹ್ಮಚಾರಿ ಆಗುವೆನೆಂದ
ಮದುವೆಯಾದ ನಾನು ಅನುಭವದಿಂದ
ಅವನಿಗಂದೆ ನೀನೇ ನಿಜವಾದ ಬುದ್ದ

ಮೊನ್ನೆ ಊರಲ್ಲಿ  ಜವರ ಸಿಕ್ಕಿದ್ದ
ನನ್ನ ಕಂಡೊಡನೆ  ಹಿರಿಹಿರಿಹಿಗ್ಗಿದ್ದ
ನಾನು ಕೇಳಿದೆ ಸಂತಸಕೆ ಕಾರಣವ
ಮದುವೆಯಾದನೆಂದು ತಿಳಿಸಿದ

ತಟ್ಟನೆ ನನಗೆ ನ್ಯೂಟನ್ ಮೂರನೆ
ನಿಯಮ ನೆನಪಿಗೆ ಬರುವುದು
ಪ್ರತಿ  ಮೂರ್ಖ ಗಂಡನಿಗೆ ಅಷ್ಟೇ
ಮೂರ್ಖ ಹೆಂಡತಿ ಸಿಗುವಳೆಂದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ಏಪ್ರಿಲ್ 2018

ಬಳುಕುವ ಬಳ್ಳಿ (ಭಾವಗೀತೆ)

*ಬಳುಕುವ ಬಳ್ಳಿ*

ಶಿಲೆಗಳ ಸಂಗೀತದ ಹಿನ್ನೆಲೆಯಲ್ಲಿ
ಕಲಾದೇವತೆಯ ಸನ್ನಿದಿಯಲ್ಲಿ
ಕಮಲವಿರುವ ಕೊಳದ ಸನಿಹದಲ್ಲಿ
ನಿಂತಿರುವೆ ನಾನು ಬಳುಕುವ ಬಳ್ಳಿ

ಧರಿಸಿರುವೆ ರೇಶಿಮೆಯ ಸೀರೆ
ನಾಚಿ ನಿಂತಿರುವೆ ಕೋಮಲ ನೀರೆ
ಮೈಮೇಲಿನ ನಗವ ನೋಡು ಬಾರೆ
ನಾನಿದ್ದರೆ ಸೊಗಸೆಲ್ಲ ಈ ಧರೆ

ಮೈಮೇಲೆ ಹೊಳೆಯುತಿದೆ ನನ್ನ ನಗ
ಸೌಂದರ್ಯದಿ ಕಂಗೊಳಿಸುತಿದೆ ಮೊಗ
ನೋಡಲು ಬನ್ನಿ ನೀವೆಲ್ಲ ಬೇಗ
ನಾ ಹಚ್ಚಿದ ದೀಪಗಳು ಬೆಳಗಲಿ  ಜಗ

  *ಸಿ.ಜಿ.ವೆಂಕಟೇಶ್ವರ*
  *ಗೌರಿಬಿದನೂರು*

ಚೌ ಚೌಪದಿ (ಒಡತಿಯಾಗು)


*ಚೌ ಚೌ ಪದಿ*
ಬಂಜರಾಗಿದೆ ನನ್ನ ಹೃದಯ ನೀನಿಲ್ಲದೆ
ಬಾಗಿಲು ತೆರೆದು‌ ಕಾಯುತಿಹೆ
ಬೀದಿಯಲಿ ಹಾದಿಯ ನೋಡುತಿರುವೆ
ಒಡತಿಯಾಗು  ಬಾ ನನ್ನ ಬಾಡಿಗೆ ಮನೆಗೆ
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

29 ಏಪ್ರಿಲ್ 2018

ಗಜ಼ಲ್ ೩೮ (ಆಸೆ)

*ಗಜ಼ಲ್೩೮*

ಜಗದೆಲ್ಲ ಜೀವಿಗಳಿಗೆ ಅನ್ನದ ಕಣ ದೊರಕಲಿ  ಎಂಬ ಆಸೆ
ಸಕಲ ಜೀವಾತ್ಮರಿಗೆ ಆನಂದದ ಕ್ಷಣ ಲಬಿಸಲಿ ಎಂಬ ಅಸೆ

ದ್ವೇಷದ ಜ್ವಾಲೆಗೆ ಎಲ್ಲೆಡೆ  ನಲುಗುತಿವೆ ಮುಗ್ದ ಜೀವಗಳು
ಪ್ರೀತಿಯೆಲ್ಲೆಡೆ  ಹಬ್ಬಿ ಧರೆ  ಸುಂದರವಾಗಲಿ ಎಂಬ ಆಸೆ

ಉಳ್ಳವರ ಅಟ್ಟಹಾಸ ಎಲ್ಲೆ ಮೀರುತಿದೆ ಕೆಲವೆಡೆಗಳಲ್ಲಿ
ಮೇಲು ಕೀಳಿಲ್ಲದೇ  ಸರ್ವರಿಗೂ ಸಮಪಾಲು ಸಿಗಲಿ ಎಂಬ ಆಸೆ

ಅಜ್ಞಾನದ ಅಂದಕಾರದಲಿ ಕೆಲವರು ಮುಳುಗಿ ತೊಳಲುತಲಿರುವರು
ಜ್ಞಾನದ ಬೆಳಕ ಪಡೆದು ಎಲ್ಲರ ಜೀವನ ಕಂಗೊಳಿಸಲಿ ಎಂಬ ಆಸೆ

ಐಹಿಕ ಸುಖವೇ ಮೇಲೆಂದು ಮೌಡ್ಯದಿ ಕಳಿತಿಹರು ಮೂಢರು
ಸೀಜೀವಿಗೆ ಆತ್ಮಾನಂದ ಪಡೆದ ಮಾನವರು ಕಾಣಿಸಲಿ‌ ಎಂಬ ಆಸೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 ಏಪ್ರಿಲ್ 2018

ಯಾಕೋ ಹಸಿವಿಲ್ಲ (ನ್ಯಾನೋ ಕಥೆ)

*ನ್ಯಾನೋ ಕಥೆ*

*ಯಾಕೋ ಹಸಿವಿಲ್ಲ*

" ಓ ಪಾಂಡುರಂಗ ಎಷ್ಟು ದಿನ ಆಯ್ತು ನಿನ್ನ ನೋಡಿ ಹೇಗಿದ್ದೀಯಾ? ಇವನು ನನ್ನ ಕ್ಲಾಸ್ ಮೇಟ್ ಕಣಮ್ಮ" ಎಂದು ಮಗಳಿಗೆ ಪರಿಚಯ ಮಾಡಿದ ರಮೇಶ್ "ನೀನು ಜನರಲ್ ಆದರೂ ನಿನಗೆ ಹೇಗೋ ಮೇಷ್ಟ್ರು ಕೆಲ್ಸ ಸಿಕ್ತು ನಮ್ಮದು ರಿಜರ್ವೇಶನ್ ಇದ್ದರೂ ಸರ್ಕಾರಿ ಕೆಲಸನೂ ಸಿಗದೇ,  ಹಳ್ಳೀಲಿ ಮಳೆ ಇಲ್ಲದೇ ಜೀವನ ಬಹಳ ಕಷ್ಟವಾಗಿದೆ" ಎಂದ ಪಾಂಡುರಂಗ ನ ಮಾತಿಗೆ ಅನುಕಂಪ ತೋರಿದ ರಮೇಶ್ "ಇವತ್ತು ನಮ್ಮ ಮನೆಯಲ್ಲಿ ಹಬ್ಬ ಮಾಡಿದ್ದೇವೆ, ಊಟ ಮಾಡು‌.?ಎಂದಾಗ ಸ್ನೇಹಿತ ಸಿಕ್ಕ ಸಂತಸದಲ್ಲಿ ಊಟಕ್ಕೆ ಒಪ್ಪಿ ಮನೆಯ ಹೊರಗೆ ಊಟಕ್ಕೆ ಕುಳಿತ, ಪ್ಲಾಸ್ಟಿಕ್ ಲೋಟ ದಲ್ಲಿ ಮನೆಯ ಯಜಮಾನಿ ನೀರು ತಂದು ಕೊಟ್ಟಾಗ ಪಾಂಡುರಂಗ ನಿಗೆ ಎಲ್ಲಾ ಅರ್ಥವಾಗಿ ನನಗೆ ಯಾಕೋ ಹಸಿವಿಲ್ಲ ಮತ್ತೊಮ್ಮೆ ಯಾವಾಗಲಾದರೂ ಊಟಮಾಡುವೆ ಎಂದು ಹೊರಟು ಹೋದ ...

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*