20 ಮಾರ್ಚ್ 2018

ಗಜ಼ಲ್ ೩೧ (ಕಳೆದುಕೊಂಡೆ ) ( ನನ್ನ ಬ್ಲಾಗ್ ನ ಮುನ್ನೂರನೇ300 ಪೋಸ್ಟ್ ಸಂಭ್ರಮ )


*ಗಜ಼ಲ್೩೧*

ಬನ್ನಪಡುತ ಈ ಕ್ಷುದ್ರ ಜೀವನದಿ ಸಂತಸವ ಕಳೆದುಕೊಂಡೆ
ಬೆಳೆದು ಬಲಿತು ದೊಡ್ಡವನಾಗಿ ಬಾಲ್ಯವ  ಕಳೆದುಕೊಂಡೆ

ಮತ್ಸರ ಸುಲಿಗೆ  ಕಾಲೆಳವ ಗುಣ ಸಾಮಾನ್ಯ ಎಲ್ಲೆಡೆ
ಎಲ್ಲ ಒಂದೇ  ಎನುವ ಮುಗ್ದ ಮಗುವಿನ ಮನವ ಕಳೆದುಕೊಂಡೆ

ಆಟಗಳೆಂದರೆ ಜೂಜು ಮೋಜು ಮೋಸ ವಂಚನೆಗಳ ಜಾಲ
ಗೆಳೆಯರ ಜೊತೆಗೂಡಿದ ಆಟ ಪಾಟವ ಕಳೆದುಕೊಂಡೆ

ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆಯ ಜನರ ಜಗವಿದು
ನುಡಿದಂತೆ ನಡೆದ ಒಳ್ಳೆಯ ಮಾನವಕುಲವ  ಕಳೆದುಕೊಂಡೆ

ಐಶ್ವರ್ಯ ಸೌಂದರ್ಯಕೆ ಪ್ರಥಮ ಪ್ರಾಶಸ್ತ್ಯ ಎಲ್ಲೆಡೆ
ಸೀಜೀವಿಯ ಮುತ್ತಿನಂತಹ ಕಾಲವ ಕಳೆದುಕೊಂಡೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 ಮಾರ್ಚ್ 2018

ಸಂಕರಣ (ಹನಿಗವನ)

ಹನಿಗವನ
*ಸಂಕರಣ*

ಬಣ್ಣದ ಹಣ್ಣುಗಳು ತೋರಣ
ಇದಕೆ ಕಾರಣ ತಳಿ   ಸಂಕರಣ
ನನ್ನ ಬೆಳೆ ನೋಡಲು ಸೊಗಸು
ಬೇಕಿದ್ದರೆ ನೀ ಈಗಲೆ  ಖರೀದಿಸು
ಸಮಯವೆ ನನ್ನ ದೇವರು ನೋಡು
ಬೆಳೆದಿಹ ಬೆಳೆಗಳ ನೀ ಕಾಪಾಡು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಜೀವನ ಬಹಳ ಬೇಜಾರು ಅಲ್ಲ ಸಂಭ್ರಮ*(ಸಂಗ್ರಹ ಲೇಖನ)

*ಜೀವನ ಬಹಳ ಬೇಜಾರು ಅಲ್ಲ ಸಂಭ್ರಮ*(ಸಂಗ್ರಹ ಲೇಖನ)

ಜೀವನ “ಬಹಳ ಬೇಜಾರು” ಅನ್ನುವವರು ಬುದ್ಧನ ಈ 19 ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು .

1. ಒಳ್ಳೆಯವರಾಗಿರಿ ಆದರೆ ಅದನ್ನು ಸಾಬೀತುಪಡಿಸವಲ್ಲಿಯೇ ನಿಮ್ಮ ಜೀವನವನ್ನು ಮತ್ತು ಸಮಯವನ್ನು ವ್ಯರ್ಥ ಮಾಡಬೇಡಿ.

2. ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಿಕೊಡಬೇಡಿ.

3. ಯಾವತ್ತೂ ಬೇರೆಯವರಲ್ಲಿ ಕ್ಷಮೆ ಕೇಳಬೇಡಿ. ಯಾಕೆಂದರೆ ಅವರು ನಿಮ್ಮ ಮಾತನ್ನು ತಪ್ಪು ಅರ್ಥ ಮಾಡಿಕೊಂಡರೆ ನೀವ್ಯಾಕೆ ಕ್ಷಮೆ ಕೇಳಬೇಕು.

 4. ನಾವು ಒಂಟಿಯಾಗಿ ಇದ್ದರೆ ಅದರ ಅರ್ಥ ನಾವು ಒಂಟಿಯಾಗಿದ್ದೇವೆ ಎಂದು ಅಲ್ಲ. ಅದರ ಅರ್ಥ ನಾವು ಒಬ್ಬರೇ ಎಲ್ಲಾ ವಿಷಯಗಳನ್ನು ಎದುರಿಸುವ ಸಾಮರ್ಥ್ಯ ನಮಗಿದೆ ಎಂದು.

5. ಎಲ್ಲೇ ಆಗಲಿ ನೀವು ಒಂದೇ ತರದ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಒಂದೇ ತರನಾದ ವ್ಯಕ್ತಿಯಾಗಿರಿ. ಅದು ನಿಮ್ಮ ಸ್ವಂತ ವಿಷಯದಲ್ಲಾಗಲಿ, ಸಾರ್ವಜನಿಕವಾಗಿಯಾಗಲಿ ಅಥವಾ ಖಾಸಗಿಯಾಗಲಿ.

 6. ಹಣ ಮನುಷ್ಯರ ಜೀವನದ ಒಂದು ಅತೀ ಕೆಟ್ಟ ಸಂಶೋಧನೆ. ಆದರೆ ಅದು ನಂಬಿಕೆಗೆ ಮನುಷ್ಯನು ಅರ್ಹನೋ ಆಲ್ಲವೋ ಎಂಬುದನ್ನು ಮತ್ತು ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ.

7. ಈ ಜಗತ್ತಿನ ತುಂಬೆಲ್ಲಾ ಅಧಿಕವಾಗಿ ರಾಕ್ಷಸರೇ ಇರುವುದು. ಆದರೆ ಸ್ನೇಹಿತರಂತೆ ಮುಖವಾಡವನ್ನು ಹಾಕಿಕೊಂಡಿದ್ದಾರೆ ಅಷ್ಟೇ.

8. ನಿಮ್ಮ ಮಕ್ಕಳನ್ನು ಶ್ರೀಮಂತರನ್ನಾಗಿ ಮಾಡಿಸಲು ಶಿಕ್ಷಣ ಕೊಡಿಸಬೇಡಿ. ಅದರ ಬದಲು ಜೀವನದಲ್ಲಿ ಹೇಗೆ ಖುಷಿಯಾಗಿರುವುದು ಎಂದು ಹೇಳಿಕೊಡಿ. ಆಗ ಅವರು ಬೆಳೆದು ದೊಡ್ಡವರಾದಾಗ ವಸ್ತುಗಳ ಮಹತ್ವ ತಿಳಿಯುತ್ತಾರೆ ಬರೀ ಅದರ ಬೆಲೆಯನಲ್ಲ.

9. ನೀವು ಎಷ್ಟು ಕಡಿಮೆ ಕೆಟ್ಟ ವ್ಯಕ್ತಿಗಳಿಗೆ ಸ್ಪಂದಿಸದೇ ಇರುತ್ತೀರೋ, ಜೀವನದಲ್ಲಿ ಅಷ್ಟು ನೆಮ್ಮದಿಯಿಂದ ಇರುತ್ತೀರಿ.

10. ಬಲಹೀನ ವ್ಯಕ್ತಿಗಳು ಪ್ರತೀಕಾರವನ್ನು ತೆಗೆದುಕೊಳ್ಳುತ್ತಾರೆ. ಬಲವಾದ ವ್ಯಕ್ತಿಗಳು ಕ್ಷಮಿಸಿಬಿಡುತ್ತಾರೆ, ಬುದ್ದಿವಂತ ವ್ಯಕ್ತಿಗಳು ನಿರ್ಲಕ್ಷಿಸುತ್ತಾರೆ.

11. ನೀವು ಸಂತೋಷದಿಂದ ಇರಬೇಕಾದರೆ, ಹಿಂದೆ ನಿಮ್ಮ ಜೀವನದಲ್ಲಿ ಆದ ಘಟನೆಗಳನ್ನು ನೆನೆಸಿಕೊಂಡು ಕೊರಗಬೇಡಿ. ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳಬೇಡಿ. ಈಗಿರುವ ಜೀವನದ ಬಗ್ಗೆ ಸಂಪೂರ್ಣವಾಗಿ ಹೇಗಿರಬೇಕೆಂದು ಯೋಚಿಸಿ.

12. ನೀವು ನಿಮ್ಮ ಜೀವನದಲ್ಲಿ ಗಳಿಸುವ ಸಂತೋಷಕ್ಕೆ ನೀವೇ ಕಾರಣಕರ್ತರಾಗಬೇಕು. ಬೇರೆಯವರು ನಿಮ್ಮನ್ನು ಸಂತೋಷಪಡಿಸುತ್ತಾರೆ ಎಂದು ಅಂದುಕೊಂಡರೆ, ಅದು ಯಾವಾಗಲೂ ಕೊನೆಗೆ ನಿರಾಸೆಯಿಂದಲೇ ಕೊನೆಗೊಳ್ಳುತ್ತದೆ.

13. ನಾನು ಸತ್ಯವನ್ನು ಹೇಳುವವರನ್ನು ಗೌರವಿಸುತ್ತೇನೆ. ಸತ್ಯವು ಎಷ್ಟೇ ಕಠಿಣವಾಗಿದ್ದರೂ ಸರಿಯೇ.

14. ನೀವು ಜೀವನದಲ್ಲಿ ಗಿಣಿಯ ತರ ಇರಬೇಡಿ ಬದಲಿಗೆ ಹದ್ದುಗಳಾಗಿ ಇರಿ. ಗಿಣಿಯು ಅಧಿಕವಾಗಿ ಮಾತನಾಡುತ್ತದೆ. ಆದರೆ ಹದ್ದು ಶಾಂತವಾಗಿ ಇದ್ದು, ಅದಕ್ಕೆ ಆಕಾಶವನ್ನು ಮುಟ್ಟುವಂತಹ ಯೋಚನಾ ಶಕ್ತಿ ಇದೆ.

15. ಜೀವನದಲ್ಲಿ ಬದಲಾವಣೆಯನ್ನು ಕಾಲಕ್ಕೆ ತಕ್ಕಂತೆ ಮಾಡಿಕೊಳ್ಳಿ, ಹೆದರಿಕೊಳ್ಳಬೇಡಿ, ನೀವು ಯಾವುದೋ ಒಂದು ಒಳ್ಳೆಯದನ್ನು ಕಳೆದುಕೊಳ್ಳುತ್ತೀರ, ಆದರೆ ಏನೋ ಒಂದು ಉತ್ತಮವಾದುದನ್ನು ಪಡೆದುಕೊಳ್ಳುತ್ತೀರ.

16. ನಮ್ಮ ತೊಂದರೆಗಳ ಬಗ್ಗೆ ಮಾತನಾಡುವುದೇ ನಮ್ಮ ಅತೀ ದೊಡ್ಡ ತಪ್ಪು, ಹುಚ್ಚು ಚಟವಾಗಿದ್ದು , ಅಂತಹ ಅಭ್ಯಾಸವನ್ನು ಬಿಟ್ಟುಬಿಡಿ, ನಿಮ್ಮ ಸಂತೋಷ ಮತ್ತು ಖುಷಿಯ ಬಗ್ಗೆ ಮಾತನಾಡಿ.

17. ಯಾರ ಜೊತೆಗೂ ಯಾವತ್ತೂ ಕೂಡ ಅತಿಯಾದ ಬಾಂಧವ್ಯವನ್ನು ಇಟ್ಟುಕೊಳ್ಳಬೇಡಿ, ಯಾಕೆಂದರೆ ಆ ಅತಿಯಾದ ಬಾಂಧವ್ಯ ಅತಿಯಾದ ನಿರೀಕ್ಷೆಗಳನ್ನು ತಂದೊಡ್ಡಿ ಆ ನೀರಿಕ್ಷೆಗಳು ಸುಳ್ಳಾದಾಗ ನೋವಿನಿಂದ ಬಳಲುವಂತೆ ಮಾಡುತ್ತದೆ.

18. ಅಸಂಬದ್ಧತೆಗಿಂತ ಶಾಂತಿಯೇ ಮೇಲು.

19. ಅತಿಯಾದ ಯೋಚನೆಯೇ ನಮ್ಮ ಜೀವನದ ಸಂತೋಷವನ್ನು ಹಾಳುಮಾಡಿ ದುಃಖಪಡಲು ಅತೀ ದೊಡ್ಡ ಕಾರಣವಾಗುತ್ತದೆ.





One thought on “ಜೀವನ “ಬಹಳ ಬೇಜಾರು” ಅನ್ನುವವರು….ಬುದ್ಧನ ಈ 19 ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು...


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಕೃಪೆ: ವಾಟ್ಸಪ್

18 ಮಾರ್ಚ್ 2018

ಆದರ್ಶ ರೈತ ( ನನ್ನ ಮೊದಲ ಕಥೆ) ಕವಿಬಳಗ ವಾಟ್ಸಪ್ ಗುಂಪಿನ ಕಥಾ ಸ್ಪರ್ಧೆ ಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದ ಕಥೆ

ಆದರ್ಶ ರೈತ*

"ಚೆನ್ನಾಗಿ ಒದಿ ಪಾಸಾದರೆ ಬಿಎಸ್ಸಿ ಎಜಿ ಓದುಸ್ತೀನಿ ಪೇಲ್ ಆದ್ರೆ ಅಗೋ ನೋಡು ಆ ಮೂಲೆಯಲ್ಲಿ ಸಲಿಕೆ ಇದೆ ತೊಗೊಂಡು ನೀರ್ ಕಟ್ಟು ಹೊಲದಲ್ಲಿ ಕೆಲಸ ಮಾಡು" ಎಂದು ಮಾಧವ ಮೂರ್ತಿ ತನ್ನ ಅಳಿಯನಿಗೆ ಎಚ್ಚರಿಕೆಯ ರೂಪದ ತಿಳುವಳಿಕೆ ಮಾತು ಅಷ್ಟಾಗಿ ತಲೆಯೊಳಗೆ ಹೋಗಿರಲಿಲ್ಲ .

ಮಾಧವ ಮೂರ್ತಿಯ ಅಕ್ಕನನ್ನು ದೂರದೂರಿನ ರೈತಕುಟಂಬದ ಬಾಲಜಿಗೆ ಕೊಟ್ಟು ಮದುವೆ ಮಾಡಿ ಎರಡು ಗಂಡು ಮಕ್ಕಳ ಪಡೆದು ಸುಖೀ ಸಂಸಾರ ನಡೆಸುವಾಗಲೆ ವಿಧಿಯು ತನ್ನ ಕ್ರೂರತನ ತೋರಿ ಬಾಲಾಜಿಯು ಹಾವು ಕಚ್ಚಿ  ವಿಧಿವಶನಾದನು ಚಿಕ್ಕ ಮಕ್ಕಳು ಮತ್ತು ತನ್ನ ಅಕ್ಕನ ಸ್ಥಿತಿಯನ್ನು ನೋಡಿದ ಮಾಧವ ಮೂರ್ತಿ ತವರುಮನೆಗೆ ಬರಲು ಆಹ್ವಾನವನ್ನು ನೀಡಿದ ಸ್ವಾಭಿಮಾನಿಯಾದ ಶಾಂಭವಿಯು ತನ್ನ ತಮ್ಮನ ಕರೆಯ ನ್ನು ನಯವಾಗಿ ತಿರಸ್ಕರಿಸಿದರು. ನಿನ್ನ ದೊಡ್ಡ ಮಗನಾದ  ಸುರೇಂದ್ರ ನನ್ನಾದರೂ ನಮ್ಮ ಜೊತೆಗೆ ಕಳಿಸಿ ಕೊಡು ಇಬ್ಬರೂ ಮಕ್ಕಳ ಸಾಕಲು ನಿನಗೆ ಕಷ್ಟವಾಗುತ್ತದೆ ಎಂದಾಗ ಶಾಂಭವಿಗೆ ಇಲ್ಲ‌ಎನ್ನಲು ಮನಸ್ಸು ಬರಲಿಲ್ಲ.

ಒಂದರಿಂದ ಪಿ.ಯು.ಸಿ.ವರೆಗೆ ಯಾವುದೇ ಕೊರತೆ ಬರದೇ ಸ್ವಂತ ಮಗನಂತೆ ಸಾಕಿ ವಿದ್ಯಾಭ್ಯಾಸವನ್ನು ನೀಡಿದ ಮಾಧವ ಮೂರ್ತಿ ಎಂದೂ ಸುರೇಂದ್ರ ನಿಗೆ ಆರೀತಿಯಲ್ಲಿ ಎಚ್ಚರಿಕೆಯ ಮಾತನ್ನು ಗಟ್ಟಿಯಾಗಿ ಆಡಿರಲಿಲ್ಲ .
ಇದೇ ವಿಷಯ ಯೋಚಿಸುತ್ತಾ ಸುರೇಂದ್ರ ರಾತ್ರಿಯ ನಿದ್ರೆ ಮಾಡಲಿಲ್ಲ

"ಪಿ.ಯು.ಸಿ.ಸೈನ್ಸ್ ಪಾಠಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ ಮಾವ ನಾನು ಪಟ್ಟಣಕ್ಕೆ ಟ್ಯೂಷನ್ ಗೆ ಹೋಗುವೆ " ಎಂದಿದ್ದಕ್ಕೆ
"ಎಷ್ಟು ಪೀಸು ತಗೋ ನಾಳೆಯಿಂದಲೇ ಟ್ಯೂಷನ್ಗೆ ಹೋಗು ಆದರೆ ಚೆನ್ನಾಗಿ ಪಾಸಾಗಬೇಕು ,ಬಿಎಸ್ಸಿ ಎಜಿ ಮಾಡಬೇಕು ಅಷ್ಟೇ"
ಎಂದು ಸಾವಿರ ಹಣ ನೀಡಿದ ಮಾಧವ ಮೂರ್ತಿ ಹೊಲದಲ್ಲಿ ಕಡಲೆ ಬೆಳೆಗೆ ನೀರು ಬಿಡಲು ಹೊರಟರು.

" ಮಾಧವಣ್ಣ ನಿನ್ನ ಅಳಿಯ ಇಂದು ಟ್ಯೂಷನ್ ಬಿಟ್ಟು ಸಿನಿಮಾ ತೇಟರ್ ನಲ್ಲಿದ್ದಾಗ ನಾನು ನೋಡಿದೆ" ಎಂದು ಗುರುಸಿದ್ದ ಹೇಳಿದಾಗ ಅಳಿಯನ ಮೇಲಿನ‌ ನಂಬಿಕೆಯಿಂದ ಅದನ್ನು ನಿರ್ಲಕ್ಷಿಸಿ ಸುಮ್ಮನಾಗಿದ್ದರು .

"ಮಾಧವಣ್ಣ ನಿಮ್ಮ ಅಳಿಯನನ್ನು ಪೋಲಿ ಹುಡುಗರ ಜೊತೆ ನೋಡಿದೆ ಯಾವುದಕ್ಕೂ ನೀನು ಸ್ವಲ್ಪ ಗಮನಿಸು"  ಎಂದು ಭಾಗ್ಯಮ್ಮ ಹೇಳಿದಾಗ ಎರಡನೆಯ ಪಿ ಯು ಸಿ ಪರೀಕ್ಷೆ ಮೂರು ದಿನ ಉಳಿದಿತ್ತು. ಈಗ ಬೇಡ ಎಂದು ಸುಮ್ಮನಾದ ಮಾಧವ ಮೂರ್ತಿ ಎಂದಿನಂತೆ ತನ ತೋಟದ ಕೆಲಸವನ್ನು ಮಾಡುತ್ತಾ ಇದ್ದರು

ಪಿ ಯು. ರಿಸಲ್ಟ್ ದಿನ ಮಾಧವ ಮೂರ್ತಿ ಯ ಆಶಾಸೌಧ ಕುಸಿದು ಬಿದ್ದಿತ್ತು ತನ್ನ ಅಳಿಯನ ಲೀಲೆಗಳ ಬಗ್ಗೆ ಊರವರು ಹೇಳಿದ ದೂರುಗಳು ಒಂದೊಂದಾಗಿ ತಲೆಯಲ್ಲಿ ಗುಯ್ ಗುಯ್ ಗುಡ ತೊಡಗಿದವು ಎಸ್ ಎಸ್ ಎಲ್ ಸಿ ವರೆಗೆ ಉತ್ತಮವಾಗಿ ಓದುತ್ತಿದ್ದ ಅಳಿಯ ಪಿ ಯು.ಸಿ.ಯಲ್ಲಿ ಆಲ್ಡೌನ್ ಆಗಿ ಮಾವನ ಮುಂದೆ ತಲೆ ತಗ್ಗಿಸಿ‌ ನಿಂತಿದ್ದ . ಒಂದೇ ಏಟಿಗೆ ಒಡೆದು ಬಿಡಬೇಕು ಎಂಬ ರಣಕೋಪ ಬಂದರೂ ಅಕ್ಕನ‌ ನೆನೆದು ಸಮಾಧಾನ ಪಟ್ಟುಕೊಂಡು‌ ಅಳಿಯನ ಹತ್ತಿರ ಕರೆದು " ಬರುವ ಸಪ್ಲಿಮೆಂಟರಿ  ಯಲ್ಲಿ ಪರೀಕ್ಷೆ ಬರೆಯುವಂತೆ ಪರೀಕ್ಷೆ ಕಟ್ಟಿ‌ ಈಗಲಾದರೂ ಚೆನ್ನಾಗಿ ಓದು" ಎಂದು  ಸಮಾಧಾನ ದಿಂದ ಹೇಳಿದರು " ನಾನು ಓದಲ್ಲ ಹೊಲದಲ್ಲಿ ಕೆಲಸ ಮಾಡುವೆ " ಎಂದು ಮೆಲ್ಲನೆಯ ಧ್ವನಿಯಲ್ಲಿ ಹೇಳಿದಾಗ ಮಾಧವ ಮೂರ್ತಿ ಯ ಪಿತ್ತ ನೆತ್ತಿಗೇರಿ ನಾಳೆ ನಿಮ್ಮಮ್ಮನನ್ನು ಕರೆಸಿ‌ ಕಳುಹಿಸುತ್ತೇನೆ ನಿನಗೆ ತಿಳಿದಂಗೆ ಮಾಡು ಎಂದು ಎದ್ದು ಹೋದರು .

ಅಕ್ಕನನ್ನು ಸಮ್ಮುಖದಲ್ಲಿ ಸುರೇಂದ್ರ ನನ್ನ ಪಕ್ಕದಲ್ಲಿ ಕೂರಿಸಿಕೊಂಡು " ನೋಡು ಸುರೇಂದ್ರ ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದರೆ ವ್ಯವಸಾಯ ಬಹಳ ಕಷ್ಟ ನನ್ನ ಮಾತು ಕೇಳು   ಓದಿ ಒಂದು ಚಿಕ್ಕ ದಾದರೂ ಒರವಾಗಿಲ್ಲ ಸರ್ಕಾರಿ ಕೆಲಸ ಪಡಿ ಈ ಬೇಸಾಯ ಸವಾಸ ಮಾತ್ರ ಬ್ಯಾಡಪ್ಪ "ಎಂದು ತಿಳಿ ಹೇಳಿದರು

ಶಾಂಭವಿಯು ತನ್ನ ಮಗನ ನಿರ್ಧಾರ ದಿಂದ ಮೊದಲು ಆಘಾತಕ್ಕೊಳಗಾದರೂ ಪುನಃ ಸಾವರಿಸಿಕೊಂಡು ತನ್ನ ತಮ್ಮನಿಗೆ " ಹೋಗಲಿ ಬಿಡಪ್ಪ ಅವನ ತಲೆಗೆ ವಿದ್ಯ ಹತ್ತಲ್ಲ ಅನುಸುತ್ತೆ  ಅವನಿಗೆ ಬ್ಯಾಸಾಯ ಮಾಡಕೆ ಇಷ್ಟ ಅಂತೆ ನಿಮ್ಮ ತೋಟದಲ್ಲಿ ಕೆಲಸ ಮಾಡ್ಲಿ" ಎಂದರು

ಸ್ವಲ್ಪ ದಿನ ಮಾವನ‌ ತೋಟದಲ್ಲಿ ಕೆಲಸ ಮಾಡಿದ ಸುರೇಂದ್ರ ತಮ್ಮ ಊರಿನಲ್ಲಿ ಇರುವ ಜಮೀನಿನಲ್ಲಿ ಬೋರ್ವೆಲ್ ಕೊರೆಸಿ
ಕ್ರಮೇಣ  ಸ್ವಂತ ಹೊಲದಲ್ಲಿ ಕೆಲಸ ಮಾಡಲು ಆರಂಭಿಸಿದ ಸುರೇಂದ್ರ ರೇಷ್ಮೆ ಬೆಳೆಯುವ ತಾಲ್ಲೂಕಿನ ಹೆಸರುವಾಸಿ ರೈತನಾದ .ತಾಲ್ಲೂಕಿನ ಎಲ್ಲರೂ ಇವನ ಬಳಿ‌ಸಲಹೆ ಕೇಳಿ ಅವರ ರೇಷ್ಮೆ ಬೆಳೆಯ ಇಳುವರಿ ಹೆಚ್ಚು ಪಡೆದರು .
ಜೊತೆಗೆ ತೆಂಗು, ಅಡಿಕೆ ಸಪೋಟ ಮಾವಿನ ಬೆಳೆ ಈಗೆ ಬಹುಬೆಳೆ ಕೃಷಿಮಾಡಿ ಸುರೇಂದ್ರ ಜಿಲ್ಲಾ ಮತ್ತು ರಾಜ್ಯದ ಪ್ರಗತಿ ರೈತ ಎಂದು ಪ್ರಶಸ್ತಿ ಪಡೆದ .
ಇದ್ದಕ್ಕಿದ್ದಂತೆ ಒಂದು ದಿನ ಬೋರ್ ವೆಲ್ ನಲ್ಲಿ ನೀರು ಪೂರ್ಣ ನಿಂತು ಬೆಳೆಗಳೆಲ್ಲಾ ಒಣಗಲಾರಂಬಿಸಿದವು . ಎರಡು ಬೋರ್ವೆಲ್ ಕೊರೆಸಿ ಲಕ್ಷಾಂತರ ಹಣ ಖರ್ಚು ಮಾಡಿದರೂ ನೀರಿನ ಸುಳಿವಿರಲಿಲ್ಲ . ಕಷ್ಟ ದ ದಿನಗಳ ನೆನದು ಸುರೇಂದ್ರ ಪಿ ಯು ಸಿ‌ ಪೇಲಾದಾಗ ಮಾವ ಆಡಿದ ಮಾತು ನೆನಪಾದವು .ಛಲಬಿಡದೆ
ಕೊನೆಗೆ ದೇವರ ಮೇಲೆ  ಭಾರ ಹಾಕಿ‌ ಮತ್ತೊಂದು ಬೋರ್ ಕೊರೆಸಿದಾಗ ಉತ್ತಮ ನೀರು ಬಂದವು
ಮಾಧವ ಮೂರ್ತಿಗಳ ತೋಟಕ್ಕಿಂತ ಸುರೇಂದ್ರ ನ ತೋಟ   ಉತ್ತಮ ಮತ್ತು ಲಾಭದಾಯಕವಾದ ರೀತಿ ನೋಡಿ
" ಸುರೇಂದ್ರ ನೀನು ಬಿಎಸ್ಸಿ ಎಜಿ‌ ಮಾಡದಿದ್ದರೂ ಕೃಷಿ ವಿಜ್ಞಾನಿಯಂತೆ ಕೃಷಿ ಮಾಡುತ್ತಿರುವೆ  ನಿನಗೆ ಒಳ್ಳೆಯದಾಗಲಿ ,ನೀನು‌ ಇಷ್ಟ ಪಟ್ಟರೆ ನನ್ನ ಮಗಳ ಜೊತೆಯಲ್ಲಿ ನಿನಗೆ ಮದುವೆ ಮಾಡುವೆ" ಎಂದರು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೩೦ (ಮಳೆ )


*ಗಜ಼ಲ್೩೦*

ಮನೆ ಮಠಗಳ ಕೊಚ್ಚಿ ರೊಚ್ಚಿಗೇಳುವುದು  ಮಳೆ
ಇಳೆಯ  ನಲಿವಿಗೆ ಆಧಾರವಾಗಿಹುದು  ಮಳೆ

ಬಿರಿದ ಮಣ್ಣಿಗೆ ತಂಪೆರೆದು ಹದಗೊಳಿಸುವುದು
ಮನ ಮನಗಳ ಬೆಸುಗೆಯ ಕಾರಕವಾಗಿಹುದು  ಮಳೆ

ಸಕಲ ಕೊಳೆಯ ತೊಳೆದು ಹಸನುಗೊಳಿಸುವುದು
ನಲ್ಲೆ ಬಳಿಯಿರಲು ರೋಮಾಂಚನಗೊಳಿಸುವುದು ಮಳೆ

ಬರಡು ಮರುಭೂಮಿ ಬಡತನದ ಜ್ವಾಲೆ
ಸಮೃದ್ಧ ಹಸಿರುಡುಗೆ ಉಡಿಸುವುದು ಮಳೆ 

ಸುಮಧುರ ಮಣ್ಣಿನ ಘಮಲು ನಾಸಿಕಕೆ ಅಹ್ಲಾದ
ಸೀಜೀವಿಯ ಮನಕಾನಂದಗೊಳಿಸುವುದು ಮಳೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*