14 ಫೆಬ್ರವರಿ 2018

ಗಜ಼ಲ್ ೨೫ (ಹೇಳು ಶಿವ) ನನ್ನ ಬ್ಲಾಗ್ ನ 250 ನೇ ಪೋಸ್ಟ್ ಸಂಭ್ರಮ

*ಗಜ಼ಲ್ ೨೫*

ಅಜ್ಞಾನಿಗಳಿಗೆ ಎಂದು ಬುದ್ದಿ ನೀಡುವೆ ಹೇಳು ಶಿವ
ಅಧರ್ಮಿಯರಿಗೆ ಎಂದು ಬುದ್ದಿಕಲಿಸುವೆ ಹೇಳು ಶಿವ?

ಹಸುಳೆ ಮುದುಕಿಯರ ಬಿಡರು ದುಷ್ಟ ದೂರ್ತ ಕೀಚಕರು
ಅತ್ಯಾಚಾರ ಅನಾಚಾರಗಳ ಎಂದು ನಿಲಿಸುವೆ ಹೇಳು ಶಿವ?

ಮಣ್ಣು ನೀರು ಗಾಳಿ ಮನಗಳು ಮಲಿನವಾಗುತಿವೆ
ಉಳಿಸಿ ಬೆಳೆಸುವ ಮನವ ಎಂದು ಕೊಡುವೆ ಹೇಳು ಶಿವ?

ಕಾನನ ಖಗ ಮೃಗಗಳ ಮಾರಣ ಹೋಮ ನಿರಂತರವಾಗಿದೆ
ಸಹಬಾಳ್ವೆ ಜೀವನವನು  ಎಂದು ಕಲಿಸುವೆ ಹೇಳು ಶಿವ?

ಅನ್ನವಿಲ್ಲದೆ ಕೆಲವರು, ಅತಿಯಾಗಿ ಕೆಲವರ ಮರಣ ನಿರಂತರ
ಸೀಜೀವಿಯ ಪ್ರಭುದ್ದತೆ ಸಮಾಜ ಎಂದು ನೀಡುವೆ ಹೇಳು ಶಿವ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಫೆಬ್ರವರಿ 2018

ಇಳಿದು ಬಾ (ಹನಿಗವನ)

ಇಳಿದು ಬಾ*

ಇಳಿದು ಬಾ ಓ ಮಳೆಯೆ
ತಂಪನೀಯು ಈ ಇಳೆಗೆ
ನೀ ಬಂದರೆ ನನಗಾನಂದ
ನನ್ನ  ಮೈ ಮನಕೆ ಆಹ್ಲಾದ
ನೆನೆಯುವೆ ಮಳೆಯಲ್ಲಿ
ಕಳೆದೋಗಲಿ ಕೊಳೆಯಿಲ್ಲಿ
ಮಳೆಹನಿಗಳು ನನ್ನುಸಿರು
ಮಾಡಲಿ ಭುವಿ ಹಸಿರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಶಿವನಾಮಾವಳಿ ( ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ಉತ್ತಮ ಭಕ್ತಿ ಗೀತೆ ಪುರಸ್ಕಾರ ಪಡೆದ ಗೀತೆ)


*ಶಿವನಾಮಾವಳಿ*

ಶಿವನೊಲಿದರೆ ನಮಗೆ ಭಯವಿಲ್ಲ
ಶಿವ ನಾಮ ಭಜಿಸೋಣ ನಾವೆಲ್ಲ|ಪ|

ಶಂಕರ ಶಶಿಧರ  ಎನ್ನೋಣ
ಗೌರಿಯ ಪತಿಯನು ಭಜಿಸೋಣ
ಗಣೇಶನ ಪಿತನ ನನೆಯೋಣ
ಜಾಗರಣೆಯಲಿ ಪಾಲ್ಗೊಳ್ಳೋಣ|೧|

 ಹರ ನಮ್ಮನು ಕಾಯುವನು
ನಮ್ಮೆಲ್ಲರನು ಪೊರೆಯುವನು
ದುಷ್ಟರ ಶಿವನು ಸಂಹರಿಸುವನು
ಗಂಗೆಯ ಭುವಿಗೆ ಕಳಿಸಿಹನು|೨|

ನೀಡು   ಮುಕ್ಕಣ್ಣ ಅಭಯವ
ನಿನ್ನೊಲುಮೆಯಿದ್ದರೆ ಇಲ್ಲ ಭಯ
ನೀನಿದ್ದರೆ ಜಗವು ಸುಂದರವು
ನಮ್ಮಯ ಜೀವನ ಪಾವನವು|೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 ಫೆಬ್ರವರಿ 2018

ಹನಿಗವನ

*ಹನಿಗವನ*

*ಕಂಬನಿ ನಿಲಿಸು*

ಕಂಬನಿ ನಿಲಿಸು ನನ್ನಮ್ಮ
ನೋಯಿಸೆ ನಿನ್ನ ನಿಜವಮ್ಮ
ಹೇಳಿದ ಮಾತ ಕೇಳುವೆನು
ಸ್ನಾನವನೀಗಲೆ ಮಾಡುವೆನು
ಬಟ್ಟೆಗಳ ಧರಿಸಿ ನಲಿಯುವೆನು
ಮೊದಲು ಅಳುವನು ನಿಲ್ಲಿಸು
ಆನಂದಾಶೃಗಳ ಈಗಲೆ ಸುರಿಸು


*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

11 ಫೆಬ್ರವರಿ 2018

ಹನಿಗವನಗಳು ( ವಿಶ್ವ ಮದುವೆ ದಿನದ ವಿಶೇಷ)



*ಹನಿಗವನಗಳು*

*೧*

ಅಭಿಶೇಕ್ ಮತ್ತು ಪ್ರಿಯ
ಪ್ರತಿದಿನ ತಪ್ಪದೇ ಶಿವನ
ದೇವಾಲಯ ದರ್ಶನ
ಮಾಡುತ್ತಿದ್ದರು
ಕಾರಣ
ನಮ್ಮ ಶಿವ
ಅಭಿಶೇಕ ಪ್ರಿಯ

*೨*

*ಹೇಗೆ?*
(ಇಂದು ವಿಶ್ವ ಮದುವೆ ದಿನ ಅದರ ಪ್ರಯುಕ್ತ)

ಹರಿಹರರೆ ನಿಮಗಿದೋ
ದೊಡ್ದ ನಮಸ್ಕಾರ
ಶಿವನೇ ತಿಳಿಸು ನನಗೆ
ಹೇಗೆ ಬಾಳಿಸಿದೆ
ಇಬ್ಬರು ಹೆಂಡಿರ
ಹರಿಯೆ ಅರುಯೆನಗೆ
ಹೇಗೆ ನಿಬಾಯಿಸಿದೆ
ಹದಿನಾರು ಸಾವಿರ

*೩*

*ಶಿವನಪಾದ*

ಇಂದು ವಿಶ್ವ ಗುಂಡಿಗೆ ಬಿದ್ದದಿನ
ಗುಂಡಿಗೆ ಇರುವ ಗಂಡಂದಿರು
ಗುಂಡಿಯನು ಎದುರಿಸಿ
ಬಾಳುತ್ತಿದ್ದಾರೆ .
ಗುಂಡಿಗೆ ದುರ್ಬಲವಾದ
ಗಂಡಂದಿರು ಗುಂಡಿನ
ಮೊರೆ ಹೋಗಿದ್ದಾರೆ.
ಗುಂಡಿಗೆ ಅತಿದುರ್ಬಲವಿರುವ
ಗಂಡಂದಿರು ಶಿವನಪಾದ
ಸೇರಿದ್ದಾರೆ .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*