13 ಫೆಬ್ರವರಿ 2018

ಶಿವನಾಮಾವಳಿ ( ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ಉತ್ತಮ ಭಕ್ತಿ ಗೀತೆ ಪುರಸ್ಕಾರ ಪಡೆದ ಗೀತೆ)


*ಶಿವನಾಮಾವಳಿ*

ಶಿವನೊಲಿದರೆ ನಮಗೆ ಭಯವಿಲ್ಲ
ಶಿವ ನಾಮ ಭಜಿಸೋಣ ನಾವೆಲ್ಲ|ಪ|

ಶಂಕರ ಶಶಿಧರ  ಎನ್ನೋಣ
ಗೌರಿಯ ಪತಿಯನು ಭಜಿಸೋಣ
ಗಣೇಶನ ಪಿತನ ನನೆಯೋಣ
ಜಾಗರಣೆಯಲಿ ಪಾಲ್ಗೊಳ್ಳೋಣ|೧|

 ಹರ ನಮ್ಮನು ಕಾಯುವನು
ನಮ್ಮೆಲ್ಲರನು ಪೊರೆಯುವನು
ದುಷ್ಟರ ಶಿವನು ಸಂಹರಿಸುವನು
ಗಂಗೆಯ ಭುವಿಗೆ ಕಳಿಸಿಹನು|೨|

ನೀಡು   ಮುಕ್ಕಣ್ಣ ಅಭಯವ
ನಿನ್ನೊಲುಮೆಯಿದ್ದರೆ ಇಲ್ಲ ಭಯ
ನೀನಿದ್ದರೆ ಜಗವು ಸುಂದರವು
ನಮ್ಮಯ ಜೀವನ ಪಾವನವು|೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 ಫೆಬ್ರವರಿ 2018

ಹನಿಗವನ

*ಹನಿಗವನ*

*ಕಂಬನಿ ನಿಲಿಸು*

ಕಂಬನಿ ನಿಲಿಸು ನನ್ನಮ್ಮ
ನೋಯಿಸೆ ನಿನ್ನ ನಿಜವಮ್ಮ
ಹೇಳಿದ ಮಾತ ಕೇಳುವೆನು
ಸ್ನಾನವನೀಗಲೆ ಮಾಡುವೆನು
ಬಟ್ಟೆಗಳ ಧರಿಸಿ ನಲಿಯುವೆನು
ಮೊದಲು ಅಳುವನು ನಿಲ್ಲಿಸು
ಆನಂದಾಶೃಗಳ ಈಗಲೆ ಸುರಿಸು


*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

11 ಫೆಬ್ರವರಿ 2018

ಹನಿಗವನಗಳು ( ವಿಶ್ವ ಮದುವೆ ದಿನದ ವಿಶೇಷ)



*ಹನಿಗವನಗಳು*

*೧*

ಅಭಿಶೇಕ್ ಮತ್ತು ಪ್ರಿಯ
ಪ್ರತಿದಿನ ತಪ್ಪದೇ ಶಿವನ
ದೇವಾಲಯ ದರ್ಶನ
ಮಾಡುತ್ತಿದ್ದರು
ಕಾರಣ
ನಮ್ಮ ಶಿವ
ಅಭಿಶೇಕ ಪ್ರಿಯ

*೨*

*ಹೇಗೆ?*
(ಇಂದು ವಿಶ್ವ ಮದುವೆ ದಿನ ಅದರ ಪ್ರಯುಕ್ತ)

ಹರಿಹರರೆ ನಿಮಗಿದೋ
ದೊಡ್ದ ನಮಸ್ಕಾರ
ಶಿವನೇ ತಿಳಿಸು ನನಗೆ
ಹೇಗೆ ಬಾಳಿಸಿದೆ
ಇಬ್ಬರು ಹೆಂಡಿರ
ಹರಿಯೆ ಅರುಯೆನಗೆ
ಹೇಗೆ ನಿಬಾಯಿಸಿದೆ
ಹದಿನಾರು ಸಾವಿರ

*೩*

*ಶಿವನಪಾದ*

ಇಂದು ವಿಶ್ವ ಗುಂಡಿಗೆ ಬಿದ್ದದಿನ
ಗುಂಡಿಗೆ ಇರುವ ಗಂಡಂದಿರು
ಗುಂಡಿಯನು ಎದುರಿಸಿ
ಬಾಳುತ್ತಿದ್ದಾರೆ .
ಗುಂಡಿಗೆ ದುರ್ಬಲವಾದ
ಗಂಡಂದಿರು ಗುಂಡಿನ
ಮೊರೆ ಹೋಗಿದ್ದಾರೆ.
ಗುಂಡಿಗೆ ಅತಿದುರ್ಬಲವಿರುವ
ಗಂಡಂದಿರು ಶಿವನಪಾದ
ಸೇರಿದ್ದಾರೆ .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೩ (ಬಹಳವಿತ್ತು)



*ಗಜ಼ಲ್*

ಬೊಗಸೆ ಕಂಗಳಲಿ ಬತ್ತದ ಆಸೆಗಳು ಬಹಳವಿತ್ತು
ತುಂಟು ವಯಸಲಿ ತೀರದ ಚೇಷ್ಟೆಗಳು ಬಹಳವಿತ್ತು

ಮರಕೋತಿ ಅಡುತ್ತಿತ್ತು ಹುಚ್ಚುಕೋಡಿ ಮನಸು
ಕಟ್ಟಿದ ಮೇಲೆ ಬಿದ್ದ ಮರಳ ಮನೆಗಳು ಬಹಳವಿತ್ತು

ಹಗಲುಗನಸುಗಳಿಗೆ ಎಂದಿಗೂ  ಬರವಿರಲಿಲ್ಲ
ಇಲ್ಲದಿರುವುದು ಬೇಕೆಂಬ ಕನಸುಗಳು ಬಹಳವಿತ್ತು

ಈಗ ಆಡಲು ಯಾರಿಗೂ ಸಮಯವಿಲ್ಲ ಮನಸಿಲ್ಲ
ಆಗ ಚಿನ್ನಿ ದಾಂಡು ಲಗೋರಿ ಆಟಗಳು ಬಹಳವಿತ್ತು

ಸೀಜೀವಿಯ ಬಾಲ್ಯದ ಲೀಲೆಗಳೆಲ್ಲವೂ ಮಧುರ ಆಮರ
ಮೊಗೆದು ಕುಡಿದರೂ ಸಾಲದ ನೆನಪುಗಳು ಬಹಳವಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 ಫೆಬ್ರವರಿ 2018

ಮನವಿ ( ಕಿರುಗವನ)

ಹನಿಗವನ

ಮನವಿ

ರಾಜಕೀಯ ಪಕ್ಷಗಳ
ಜಟಾಪಟಿ‌ ಆರಂಭವಾಗಿದೆ
ನಮ್ಮ ‌ಸರ್ಕಾರದಲ್ಲಿ
ಕಡಿಮೆ ಕೊಲೆಯಾಗಿವೆ
ನಿಮ್ಮ ಸರ್ಕಾರದಲ್ಲಿ
ಹೆಚ್ಚು ಕೊಲೆಯಾಗಿವೆ
ನಮ್ಮ ಸರ್ಕಾರದಲ್ಲಿ
ಕಡಿಮೆ ಸುಲಿಗೆಯಿತ್ತು
ನಿಮ್ಮ ಸರ್ಕಾರದಲ್ಲಿ
ಹೆಚ್ಚು ಸುಲಿಗೆಯಿತ್ತು
ನಮ್ಮನ್ನೆ ಮುಂದೆಯೂ
ಆಯ್ಕೆ ಮಾಡಿ
ನಿಮಗೆ ಗೊತ್ತಾಗದಂತೆ
ಭ್ರಷ್ಟಾಚಾರ ಮಾಡುವೆವು
ಕಡಿಮೆ ಸುಲಿಯುತ್ತೇವೆ
 ಕಡಿಮೆ ಲೂಟಿ ಮಡುವೆವು
ನಮ್ಮನ್ನು ನಂಬಿ
ನಮಗೊಂದು ಅವಕಾಶ ಕೊಡಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು