01 ಜನವರಿ 2018

ಮರಿಬೇಡ ( ಭಾವಗೀತೆ)

ಭಾವಗೀತೆ

*ಮರಿಬೇಡ*

ಕುಣಿಯೋಣ ಬಾ ಗೆಳತಿ
ನಲಿಯೋಣ  ಬಾ  ಗೆಳತಿ |ಪ|

ನೀ ನನ್ನ ಬಾಳಸಂಗಾತಿ
ನೀಡುವೆ ಬಾ ಸಂಪ್ರೀತಿ
ನೋವಿರಲಿ ನಲಿವಿರಲಿ
ಪ್ರೀತಿಯು ಉಕ್ಕುತಿರಲಿ |೧|

ಕಷ್ಟ ಬಂದರೆ  ನನಗಿರಲಿ
ಸುಖ ನಿನಗೆ ಮೀಸಲಿರಲಿ
ಸಖನ ಸಂಗವ ಮರಿಬೇಡ
ಸಖಿ ನನ್ನನ್ಮೇ ನೀ ನೋಡ |೨|

ಲೋಕದ ಗೊಡವೆ ಬೇಕಿಲ್ಲ
ಶೋಕದ ಮಾತೇ ತಿಳಿದಿಲ್ಲ
ಟಾಕುಟೀಕಾಗಿ ಬಾಳೋಣ
ಏಕತೆಯಲಿ ನಾವು ಸಾಗೋಣ|೩|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಶೃಂಗಾರ ಶಿವ (ಭಾವಗೀತೆ.ಹೊಸ ಕ್ಯಾಲೆಂಡರ್ ವರ್ಷದ ಮೊದಲ ಪೋಸ್ಟ್ ಶಿವನಿಗೆ ಅರ್ಪಣೆ)



ಭಾವಗೀತೆ

*ಶೃಂಗಾರ ಶಿವ*

ಮಾರನ ಸುಟ್ಟವನಿಗೆ  ಶಿವೆ ಮಾರುಹೋದಳು
ಮೈ ಮನ ಅವನಿಗೊಪ್ಪಿಸಿ   ಜಾರಿಹೋದಳು|ಪ|

ಬಿಸಿಯುಸಿರು ತಾಗಿ ಏನೋ ರೋಮಾಂಚನ
ಇಬ್ಬರ ದೇಹದಿ ಬೆವರೂಪದಿ ಗಂಗೆಆಗಮನ
ವಶಪಡಿಸಿಕೊಳ್ಳಲು ಹರನು ಪರವಶನಾದನು
ಊಳಿಟ್ಟ ಘೀಳಿಟ್ಟ ಹರ ಮದ್ದಾನೆಯಾದನು|೧|

ಶಿವಲೋಕದಲಿ ಹೊಸ ಲೋಕ ನೋಡಿದರು
ವಾತ್ಸಯಾನನಿಗೆ  ಕಾಮಾಸೂತ್ರ ಹೇಳಿದರು
ಅತಿಕಾಲ ಮೈಮರೆತು ರತಿಮನ್ಮಥರಾದರು
ರಸಗಳಲಿ ಶೃಂಗಾರ ಶ್ರೇಷ್ಠವೆಂದು ತೋರಿದರು|೨|

ಅಧರಾಮೃತ ಸವಿದು ಉದರ ಬಿಸಿಯಾಯಿತು
ಇಬ್ಬರ ಮೈಶಾಖದಲಿ  ನಾಗ ಬುಸ್ ಎಂದಿತು
ಶಿವನು ಮನ್ಮಥನ  ಬಾಣವ  ಬಿಟ್ಟೇ ಬಿಟ್ಟನು
ಶೃಂಗಾರದ ರಸ ತೊಟ್ಟಿಕ್ಕಿಸುತ  ಮೊರೆದನು|೩|

*ಸಿ.ಜಿ .ವೆಂಕಟೇಶ್ವರ*
*ಗೌರಿಬಿದನೂರು*

31 ಡಿಸೆಂಬರ್ 2017

ಚಿತ್ರ ಹನಿಗವನ

ಚಿತ್ರ ಹನಿಗವನ

*ಬಾಂಧವ್ಯ*

ವರುಣನಾಗಮನ ನನಗೆ ಸಂತಸ
ನನ್ನ  ಕೋಳಿಮರಿಗಳಿಗೆ ಸಂಕಟ
ನೆನೆಯುತಿಹವು ಮಳೆಹನಿಗೆ
ತಂದಿಹೆನು ಎಲೆಯ ರಕ್ಷಣೆಗೆ
ನಾನು ನೆನೆದರೆ ಚಿಂತೆಯಿಲ್ಲ
ನಿಮಗೊಂದು  ಸೂಕ್ತ ಸೂರಿಲ್ಲ
ನಿಮ್ಮ ರಕ್ಷಣೆ ನನ್ನ ಕರ್ತವ್ಯ
ಇರಲಿ ಈಗೆ ನಮ್ಮ ಬಾಂಧವ್ಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೦ (ಇದು ಹೊಸ ವರ್ಷ)ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಬಳಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಎಂದು ಪುರಸ್ಕಾರ ಪಡೆದ ಗಜ಼ಲ್

 
*ಗಜ಼ಲ್ ೨೦*

ಹುಚ್ಚು ಕೇಕೆ ಗದ್ದಲ ಪ್ರದರ್ಶನ  ಇದು ಹೊಸವರ್ಷ ?
ವಸಂತನಾಗಮನದಿ ಪ್ರಕೃತಿ ನರ್ತನ  ಇದು  ಹೊಸವರ್ಷ.

ಕಂಠಪೂರ್ತಿ ಎಣ್ಣೆ ಕುಡಿದು ವಾಂತಿ ಮಾಡಿ ಬಿದ್ದು ಒದ್ದಾಡುವರು .
ಎಣ್ಣೆ ಅಭ್ಯಂಜನ ಸ್ನಾನದ ತಂಪಿಗೆ ಹೂವಾದ ಮೈಮನ ಇದು ಹೊಸ ವರ್ಷ.

ಕೇಕು ಬಾಕುಗಳ ದರ್ಬಾರು ಪಿಜಾ ಬರ್ಗರುಗಳ  ಕಾರಬಾರು.
ಬೇವು ಬೆಲ್ಲವ ಹಂಚಿ ನೋವು ನಲಿವಿನ ಆಹ್ವಾನ ಇದು ಹೊಸ ವರ್ಷ.

ಮದ್ಯರಾತ್ರಿಯ ಅಬ್ಬರ ಊರ ಜನಕೆ ಉಪದ್ರವ ನೀಡುವರು.
ಹಗಲಿನಲಿ ಮನೆ ಮಂದಿ ನಲಿವ ಸಹಜೀವನ ಇದು ಹೊಸ ವರ್ಷ.

ಕರ್ಕಶ ಗಾನ ಅಸಭ್ಯ ಅಶ್ಲೀಲ  ಉಡುಗೆಗಳ  ಗಲಾಟೆಗಳ ಅಬ್ಬರ.
ವೆಂಕಟೇಶನ ಧ್ಯಾನ ಮಾಡಿ ಮಾಡುವ ನಮನ ಇದು ಹೊಸ ವರ್ಷ.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೧೯(ನೋಡಿಲ್ಲಿ)

*ಗಜ಼ಲ್ ೧೯(ನೋಡಿಲ್ಲಿ)

ಮೂರು ದಿನದ ಸಂತೆಯಲಿ ನೂರಾರು ತಕಾರಾರು ನೋಡಿಲ್ಲಿ
ನಾಲ್ಕು ದಿನದ ಜಾತ್ರೆಗೆ ಸಾವಿರಾರು ಪುಕಾರು ನೋಡಿಲ್ಲಿ

ಚೆಂಡು ಬಲೂನು ವಾಚು ಬೇಕು ಬಾಲ್ಯದ ಜೀವಕೆ
ಸರ ಬಳೆ ಬಿಂದಿ ಯೌವನದ ಬೇಡಿಕೆ ನೂರಾರು ನೋಡಿಲ್ಲಿ

ಬೆಂಡು ಬತ್ತಾಸು ಸಿಹಿಯ ಪುಳಕ ಸವಿಯ ಜಳಕ
ಕಾರಾ ಬೂಂದಿಯ ಕಾರಕೆ ನಾಲಿಗೆ ಚುರು ಚುರು ನೋಡಿಲ್ಲಿ


ಹೂವಿನ ಪಲ್ಲಕ್ಕಿ ತೇರುಗಳ ನೈವೇದ್ಯ ಹಣ್ಣು ಕಾಯಿ
ಬಾಯಿಗೆ ಬೀಗ ಹಾಕಿ ನೆನಪುಗಳ ಕಾರುಬಾರು ನೋಡಿಲ್ಲಿ

ಮೆರವಣಿಗೆಯಲಿ ಜನಜಂಗುಳಿ ಎಲ್ಲೆಡೆ ಭಕ್ತರು
ಸೀಜೀವಿಯು ಹೊರಟಾಗ ಬರಲಿಲ್ಲ ನೆಂಟರು ನೋಡಿಲ್ಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*