18 ಡಿಸೆಂಬರ್ 2017

ಗಜ಼ಲ್ ೧೪ (ಏಕೆ)

*ಗಜ಼ಲ್ ೧೪*

ಬಾಳದೋಣಿಯ ಪಯಣದ ಮಧ್ಯದಲಿ ಬಿಟ್ಟೆ ಏಕೆ?
ನಡುನೀರಿನಲಿ ಒಬ್ಬನನೆ ತೊರೆದು ಕೈಕೊಟ್ಟೆ    ಏಕೆ ?


ಜಕ್ಕವಕ್ಕಿಯ ಹಾಗೆ ಮಧುರ ಮಿಲನದಿ ಸುಖಿಸಿ
ಮಲ್ಲಿಗೆಯ ಸುಗಂಧ ಸವಿದು ಕನಸುಗಳ ಪೇರಿಸಿಟ್ಟೆ ಏಕೆ ?

ಚಳಿಗಾಲದಲ್ಲಿ ಮೈಬಿಸಿಯ ಶಾಖ ಸೋಕಿಸಿ ಬೆಚ್ಚನೆಯ
ನೆನಪುಗಳ ನೀಡಿ ನನ್ನಲ್ಲಿ ಹುಸಿ ಕನಸುಗಳ ನೆಟ್ಟೆ ಏಕೆ?

ಅಮರ ,ನಿಷ್ಕಲ್ಮಷ,  ನನ್ನ  ವಾಸ್ತವ ಪ್ರೀತಿಯ
ತೊರೆದು ಬಿಸಿಲುಗುದುರೆಯ ಹಿಂದೆ ಓಡಿಬಿಟ್ಟೆ ಏಕೆ?


ಹೂವಿಂದ ಹೂವಿಗೆ ಹಾರದ ದುಂಬಿ ನಾನು
ಮಧುರ ಮನಸಿನ ಸೀಜೀವಿಯ ಬಿಟ್ಟು ಕೆಟ್ಟೆ ಏಕೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನಿರೀಕ್ಷೆ (ಕವನ)


*ನಿರೀಕ್ಷೆ*

ಮುಸ್ಸಂಜೆ ತಂಪಿಗೆ ಹೂಗುಚ್ಚ ಕಳೆಗಟ್ಟಿದೆ
ನನ್ನವಳಿಗರ್ಪಿಸಲು ಮನ ತವಕದಿ ಕಾದಿದೆ
ರವಿಮಾಮ ನಿಲ್ಲು ಅರೆ ಕ್ಷಣ ಚಲಿಸದೇ
ಬೀಳ್ಕೊಡುವೆ ನಿನ್ನ ಅವಳು ಬಂದರೆಕ್ಷಣದೇ ||

ದಿನವೂ ಬರುತಿದ್ದಳು ಸರಿಯಾದ ಸಮಯಕೆ
ಸರಿಯದೀಗ ಸಮಯ ವಿಳಂಬಿಸಿದಳು ಏತಕೆ
ಸವಿದಿದ್ದೆ ಸಿಹಿ ಮುತ್ತು ನಿನ್ನೆ ಇದೇ ತಾಣದಲಿ
ಅದೇ ಕೊನೆಯಾಗುವ ಆತಂಕವೀಗ  ಮನದಲಿ||

ಬಾರೆ ನನ  ಗೆಳತಿ ಹೂ ಬಾಡುವ ಮೊದಲು
ಸೂರ್ಯ ಮುಳುಗಿ ಕತ್ತಲಾಗುವ ಮೊದಲು
ಮಾತಾಡದಿದ್ದರೂ ಬಂದು ಕಣ್ಮುಂದೆ ನಿಲ್ಲು
ನಾ ತಪ್ಪು ಮಾಡಿದ್ದರೆ ನಿನ್ನ  ಕಣ್ಗಳಲೆ  ಕೊಲ್ಲು||

ಮರೆತಿರಬಹುದೆ ನನ್ನನು  ಅವಳು ಇಂದು
ಛೆ ಮರೆಯಲಾಗದ ಸಂಭಂದ ನಮ್ಮದು
ಇಂದೇಕೋ ಕಾರ್ಯನಿಮಿತ್ತ ಬರದಿರಬಹುದು
ನಾಳೆ ತಪ್ಪಿಸಳು ನನ್ನ  ಮನ ಹೇಳುತಿಹುದು||

*ಸಿ. ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 ಡಿಸೆಂಬರ್ 2017

ಹನಿಗವನ

*ಥಟ್ ಅಂತ ಹನಿಗವನ*

*ನಗುತಿಹಳು ಶರದಿ*

ಚಂದಮಾಮನ ಕರೆದು ಬಸವಳಿದೆ
ಸಳ್ಳು ಹೇಳಿದ  ನಾಳೆ ಬರುವೆನೆಂದೆ
ಪೋರಿ ನಾನೆಂಬ ತಾತ್ಸಾರ ಅವನಿಗೆ
ಹಿಡಿವೆ ಚಂದಿರನೆಂದು ಹೇಳಿದೆ ಗೆಳತಿಗೆ
ತಿಂಗಳಿನಿಂದ ಕಟ್ಟಿರುವೆ ಇವನ ಹಗ್ಗದಿಂದ
ನಗುತಿಹಳು ಶರಧಿ ನೋಡಿ ಕುತೂಹಲದಿಂದ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಸೂತ್ರಧಾರ (ಭಾವಗೀತೆ.ಕನ್ನಡ ಸಾಹಿತ್ಯ ಬಳಗ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕವನ)



*ಭಾವಗೀತೆ*

*ಸೂತ್ರಧಾರ*


ಜೀವನವೆಂಬುದು ಒಂದು ನಾಟಕ
ಇಲ್ಲೇ ಇರುವುದು  ನರಕ ನಾಕ

ಸೂತ್ರದ ಬೊಂಬೆಗಳು ನಾವು
ಸಾಮಾನ್ಯ ಇಲ್ಲಿ ನಲಿವು ನೋವು
ಮೇಲಿರುವ ಸೂತ್ರದಾರ ಅವನು
ಸದಾ ನಮ್ಮ ಪಾಲಿಸುತಿಹನು

ನ್ಯಾಯ ಸಲ್ಲಿಸಬೇಕು ನಮ್ಮ ಪಾತ್ರಕೆ
ಬದ್ದರಾಗಿರಬೇಕು ಅವನ ಸೂತ್ರಕೆ
ನಾವಂದು ಕೊಂಡಂತೆ  ಏನೂ ಆಗದಿಲ್ಲಿ
ಅವನಾಡಿಸಿದಂತೆ ಆಡುವೆವು ನಾವಿಲ್ಲಿ

ನಾವಿರುವೆವು ಇಲ್ಲಿ ನಾಲ್ಕು ದಿನ
ತೀರಿಸಬೇಕು ಈ ನೆಲದ ಋಣ
ಅವನಾಡಿಸಿದಂತೆ ಆಡಬೇಕು
ಕರೆ ಬಂದಾಗ ಹೋಗುತಿರಬೇಕು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೧೩ (ಕೊನೆಯೆಲ್ಲಿ)

ಗಜ಼ಲ್ ೧೩ (ಕೊನೆಯೆಲ್ಲಿ)

ಸ್ವಾರ್ಥವಿರದ ಕೇಡಿರದ ನಮ್ಮ ಸ್ನೇಹಕೆ ಕೊನೆಯೆಲ್ಲಿ
ಚಿರಸ್ಥಾಯಿ ಚಿರನೂತನ ನಿರಂತರ ಗೆಳತನಕೆ ಕೊನಯೆಲ್ಲಿ

ಹಗಲಿನಲಿ ಇಳೆಗೆ ದಿನಕರನ ಗೆಣೆತನ ಇರುಳತಮಕೆ
ಧರಣಿಗೆ ತಿಂಗಳ ಬೆಳಕಿನ ಜೊತೆ ಇರುವ ಬಂಧಕೆ ಕೊನೆಯೆಲ್ಲಿ

ಹನಿ ಹನಿಗಳ ಕೂಡಿ ಹಳ್ಳವಾಗುವ ಹಾಗೆ ನದಿಗೆ ಸಾಗರ
ಸೇರುವ ತವಕ ಇವೆಲ್ಲದರ ಮೂಲ ಮುಗಿಲಿನ ಮೂಲಕೆ ಕೊನೆಯೆಲ್ಲಿ


ಹಸುವಿಗೆ ಕರುವಿನ ಮೇಲೆ ಮಮತೆ ತಾಯಿಗೆ ಮಡಿಲ ಕಂದನ
ಮೇಲೆ ಪ್ರೀತಿಯು ಇವರ ಮುಗಿಯದ  ಬಾಂಧವ್ಯಕೆ ಕೊನೆಯೆಲ್ಲಿ

ಜಗದಿ ಇರುವ ಸಕಲಚರಾಚರ ಜೀವಿಗಳ
ಮೇಲೆ ಸೀಜೀವಿಗಿರುವ ಅನುಬಂಧಕೆ ಕೊನೆಯೆಲ್ಲಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು