21 ಮಾರ್ಚ್ 2026

ನಮ್ಮೂರ ಪಾತೇದೇವರು.

 


ಪಾತಲಿಂಗೇಶ್ವರ ಮಹಿಮೆ.


ನಮ್ಮೂರ ಅಧಿ ದೇವತೆ ಚೌಡೇಶ್ವರಿಯಷ್ಟೇ ಪ್ರಮುಖವಾದ ಮೂರು ದೇವಾಲಯಗಳಲ್ಲಿ ಪಾತಲಿಂಗೇಶ್ವರ ಅಥವಾ ಪಾರ್ಥಲಿಂಗೇಶ್ವರ ಗುಡಿಯು ನಮ್ಮೂರ ಜನರ ಪ್ರಾರ್ಥನಾ ತಾಣವಾಗಿದೆ.
ಬಾಲ್ಯದಲ್ಲಿ  ನಮ್ಮೂರ ಶಾಲೆಯಲ್ಲಿ ಓದುವಾಗ ಸೋಮವಾರ ಮತ್ತು ಪ್ರಮುಖವಾದ ದೇವರ ಕಾರ್ಯವಿದ್ದಾಗ ನಮ್ಮ ಸಹಪಾಠಿ ಚಂದ್ರ ಶಾಲೆಗೆ ಬರುತ್ತಿರಲಿಲ್ಲ. ನಮ್ಮ TNT ಅರ್ಥಾತ್  ತಿಪ್ಪೇಶಪ್ಪ  ‌ಮೇಷ್ಟ್ರು ಚಂದ್ರನ ಅಕ್ಷರಶಃ ಹೊತ್ತುಕೊಂಡು ಬನ್ನಿ ಎಂದು  ನಮ್ಮನ್ನು ಕಳಿಸುತ್ತಿದ್ದರು.ನಾವು ಕೆಲವೊಮ್ಮೆ ಗುರುಗಳ ಮಾತನ್ನು ಶಿರಸಾವಹಿಸಿ ಪಾಲಿಸಿ ಅವನನ್ನು ಎತ್ತಾಕಿಕೊಂಡು ಬಂದಿದ್ದೆವು.ಹೀಗೆ ಒಮ್ಮೆ ಚಂದ್ರನನ್ನು ಎತ್ತಾಕಿಕೊಂಡು ಬರಲು ಹೋದಾಗ ಅವರಪ್ಪ ನಮ್ಮನ್ನು ಗದರಿ ಕಳಿಸಿ‌‌ ಶಾಲೆಗೆ ಬಂದು " ಮೇಷ್ಟ್ರೇ ನಮ್ ಹುಡ್ಗ ಸೋಮಾರ ಇಸ್ಕೂಲ್ ಗೆ ಬರಲ್ಲ ಅಷ್ಟೇ, ಇನ್ಮೇಲೆ ಈ ಹುಡುಗ್ರು ನಮ್ ಮನೆ ಹತ್ರ ಬಂದ್ರೆ ನೆಟ್ಗಿರಲ್ಲ ನೋಡು" ಎಂದು ಗದರಿ ಹೋಗಿದ್ದರು. ಅಲ್ಲಿ ಗೆ ನಮ್ ಮಾಷ್ಟ್ರು ಚಂದ್ರು ಬಂದಾಗ ಬರಲಿ ಎಂದು ತೀರ್ಮಾನಕ್ಕೆ ಬಂದು ಸುಮ್ಮನಾಗಿದ್ದರು.ಚಂದ್ರಪ್ಪನಿಗೆ ಪಾತಲಿಂಗೇಶ್ವರನ ಸೇವೆ ಮಾಡುವ ಪುಣ್ಯ ಲಭಿಸಿತ್ತು.ದೊಡ್ಡಪ್ಪ ಜಡಿಯಪ್ಪ,ಹಾಗೂ  ಅಪ್ಪ ತಮ್ಮಣ್ಣನವರ ದೈವ ಭಕ್ತಿಯಿಂದ ಪ್ರೇರಿತನಾದ ಚಂದ್ರಪ್ಪ ದೇವರ ಪೂಜೆಗೆ ತನ್ನ ‌ಜೀವನ ಮೀಸಲಿಟ್ಟ.ಈಗ ಪಾತಲಿಂಗೇಶ್ವರ ಸ್ವಾಮಿಯ ಪ್ರಮುಖ ಅರ್ಚಕನಾಗಿರುವ ನನ್ನ ಗೆಳೆಯ ಚಂದ್ರಪ್ಪ ನಮ್ಮ  ಪಾತೇದೇವರ ದೈವಿಕ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿದ್ದಾನೆ.ಯುಗಾದಿ ಹಬ್ಬಕ್ಕೆ ‌ಊರಿಗೆ ಹೋದಾಗ ಪಾತೇದೇವರ ಗುಡಿಯ  ಬಾಗಿಲು ಮುಚ್ಚಿತ್ತು.ಎಲ್ಲಿದ್ದನೋ ಗೆಳೆಯ ಕ್ಷಣಾರ್ಧದಲ್ಲಿ ಬಂದು  ಬಾಗಿಲು ತೆರೆದು ನಮ್ಮ ಕುಟುಂಬಕ್ಕೆ ಸ್ವಾಮಿಯ ದರ್ಶನ ಮಾಡಿಸಿ ಪ್ರಸಾದ ಕೊಟ್ಟ. ಅದಕ್ಕಿಂತ ಮಿಗಿಲಾಗಿ ಒಂದು ವಿಶೇಷ ಪುಸ್ತಕದ ಪ್ರಸಾದ ನೀಡಿದ. ಅದು ಪಾತಲಿಂಗೇಶ್ವರ ಸ್ವಾಮಿ ಕುರಿತಾಗಿ ನಮ್ಮೂರ ಕಂಡಕ್ಟರ್ ರಾಮಣ್ಣ ಬರೆದ ಪುಸ್ತಕ. ಅದರಲ್ಲಿ ಸ್ವಾಮಿಯ ಜೀವನ ಮತ್ತು ಪವಾಡಗಳ ಕುರಿತಾದ ಹತ್ತಾರು ಪ್ರಸಂಗಗಳಿವೆ.ಮುಂದೆ ಅವುಗಳ ಬಗ್ಗೆ ತಿಳಿಸುವೆ.ಸ್ವಾಮಿಯ ಕೃಪೆಯಾದರೆ ನಾನು ಪಾತೇದೇವರ ಕುರಿತೊಂದು ಪುಸ್ತಕ ಬರೆಯುವ ಬಯಕೆಯಿದೆ.
ಪಾತೇದೇವರು ನಿಮ್ಮನ್ನು ಹರಸಲಿ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ