ಕೆಲಸ ಸಿಗಲಿಲ್ಲ ಎಂದು ಪರಿತಪಿಸುತ್ತಾ ಸರ್ಕಾರಿ ಉದ್ಯೋಗ ಪಡೆಯಲು ಪರದಾಡುತ್ತಿರುವ ಮಧ್ಯೆಸಾಮಾನ್ಯ ರೈತ ಕುಟುಂಬದ ಮೂವರು ಒಡಹುಟ್ಟಿದವರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಮೂಲಕ ತಂದೆಯ ಕನಸನ್ನು ಈ ಮೂವರು ಮಕ್ಕಳು ಈಡೇರಿಸಿದ್ದಾರೆ.
ಕರೀಂನಗರ ಜಿಲ್ಲೆಯ ವೀನವಂಕ ಬಳಿಯ ರೆಡ್ಡಿಪಲ್ಲಿ ಗ್ರಾಮದ ಪೊತುಲು ಇಂದಿರಾ ಮತ್ತು ಚಂದ್ರೈ ದಂಪತಿಯ ಮೂವರೂ ಮಕ್ಕಳು ಸರ್ಕಾರಿ ಹುದ್ದೆ ಪಡೆದಿದ್ದಾರೆ. 2 ಎಕರೆಯಲ್ಲಿ ದಂಪತಿ ಕೃಷಿ ಜೊತೆಗೆ ಕೂಲಿ ಕೆಲಸ ಮಾಡುತ್ತಾ ಕಷ್ಟಪಟ್ಟು ಮಕ್ಕಳನ್ನು ಓದಿಸಿದ್ದರು. ಎಲ್ಲ ಪೋಷಕರು ಬಯಸುವಂತೆ ತಮ್ಮ ಮಕ್ಕಳನ್ನು ಸರ್ಕಾರಿ ಕೆಲಸಕ್ಕೆ ಸೇರಿಸಬೇಕು ಎಂದು ತಂದೆ ಕನಸು ಕಂಡಿದ್ದರು.
ಸರ್ಕಾರಿ ಶಾಲೆಯಲ್ಲೇ ಕಲಿತು ಸರ್ಕಾರಿ ಉದ್ಯೋಗ ಪಡೆದ ಮಕ್ಕಳ ಸಾಧನೆ ಕಂಡ ಪೋಷಕರು ಆನಂದ ಭಾಷ್ಪ ಸುರಿಸಿದ್ದಾರೆ.
ಓರ್ವ ಮಗ ಸಿಆರ್ಪಿಎಫ್ ಅಸಿಸ್ಟಂಟ್ ಕಮಾಂಡರ್, ಇನ್ನೊಬ್ಬ ಸಿಐಎಸ್ಪಿ ಕಾನ್ಸ್ಟೇಬಲ್ ಮತ್ತು ಪುತ್ರಿ ಅಬಕಾರಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ರೈತನ ಹಿರಿಯ ಮಗ ಎಂ ಬಿ ಬಿ ಎಸ್ ಓದಿದದರೂ ಸರ್ಕಾರಿ ಹುದ್ದೆ ಸಿಗದ ಕಾರಣದಿಂದ ಡಾಕ್ಟರ್ ಹುದ್ದೆ ತೊರೆದು ತಂದೆಯ ಆಸೆಯಂತೆ ಸರ್ಕಾರಿ ಕೆಲಸ ಪಡೆದಿದ್ದಾರೆ.
ಅಜಯ್ ಕರೀಂ ನಗರದ ಪ್ರತಿಮಾ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಇವರು ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯದೇ ಅಪ್ಪನ ಆಸೆಯಂತೆ ಪೊಲೀಸ್ ಸಮವಸ್ತ್ರ ಧರಿಸಬೇಕೆಂದು ನಿರ್ಧರಿಸಿದ್ದರು. ಅಂತೆಯೇ ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸಿಆರ್ಪಿಎಫ್ ಅಸಿಸ್ಟಂಟ್ ಕಮಾಂಡರ್ ಆಗಿ ಆಯ್ಕೆ ಆಗಿದ್ದಾರೆ.
"ಚೆನ್ನಾಗಿ ಓದಿ ಪೊಲೀಸ್ ಅಧಿಕಾರಿಯಾಗುವಂತೆ ನಮ್ಮ ತಂದೆ ನನಗೆ ಬಾಲ್ಯದಿಂದಲೂ ಹೇಳುತ್ತಿದ್ದರು. ಆದರೆ ಡಾಕ್ಟರ್ ಆಗಬೇಕೆಂಬ ನನ್ನ ಕನಸು ಪೂರೈಸಿಕೊಳ್ಳಲು ಎಂಬಿಬಿಎಸ್ ಮಾಡಿದೆ. ತಂದೆಯ ಮಾತು ನನ್ನನ್ನು ಕಾಡುತ್ತಿತ್ತು. ಆದ್ದರಿಂದ ಸ್ಫರ್ಧಾತ್ಮಕ ಪರೀಕ್ಷೆ ಪಡೆದು ಕಮಾಂಡರ್ ಆಗಿ ತಂದೆಯ ಕನಸು ನನಸು ಮಾಡಿರುವೆ" ಎಂದು ಅಜಯ್ ತಿಳಿಸಿದ್ದಾರೆ.
ಅಜಯ್ ಅವರ ತಂಗಿ ನವಥಾ ಸರ್ಕಾರಿ ಶಾಲೆಯಲ್ಲಿ ಕಲಿತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಕೂಡ ನೇಮಕಾತಿ ಪರೀಕ್ಷೆಯಲ್ಲಿ ಪಾಸಾಗಿ ಅಬಕಾರಿ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಇವರ ಸಹೋದರ ಶ್ರವಣ ಕೂಡ ಉತ್ತರ ಪ್ರದೇಶದ ಲಖನೌದಲ್ಲಿ ಸಿಐಎಸ್ಎಫ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ತಂದೆ ತಾಯಿಗಳು ಕಷ್ಟ ಪಟ್ಟು ಶಿಕ್ಷಣ ನೀಡಿದರು. ಅದಕ್ಕೆ ತಕ್ಕಂತೆ ಮಕ್ಕಳು ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಸರ್ಕಾರಿ ಉದ್ಯೋಗ ಪಡೆದರು.
ಮಧ್ಯಮ ವರ್ಗದ ಕುಟುಂಬದ ಗ್ರಾಮೀಣ ಹಿನ್ನೆಲೆಯಿಂದ ಬಂದ ಈ ಮೂವರ ಸಾಧನೆ ಇತರರಿಗೆ ಪ್ರೇರಣೆಯಾಗಿದೆ.
ಸಿಹಿಜೀವಿ ವೆಂಕಟೇಶ್ವರ