ಅವರು ತಮ್ಮ ಬಾಲ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರು. ಅವರು ಕುಳ್ಳಗಿದ್ದರು, ಕಪ್ಪಗಿದ್ದರು. ತೊದಲುತ್ತಿದ್ದರು ಎಂಬ ಕಾರಣಕ್ಕಾಗಿ ಅವರನ್ನು ಅವರ ಸ್ನೇಹಿತರು ಕೀಟಲೆ ಮಾಡಿ ಅವಮಾನ ಮಾಡಿದ್ದರು. ಅವರು ಮಾತನಾಡುವಾಗ ಜನರು ಅವರ ಕಡೆ ಗಮನ ಕೊಡುತ್ತಿರಲಿಲ್ಲ ಅಥವಾ ಅವರ ಮಾತಿನ ಮಧ್ಯದಲ್ಲೇ ಬೇರೆಡೆ ನೋಡುತ್ತಿದ್ದರು. ಈ ಕೀಳರಿಮೆಯೇ ಅವರನ್ನು ಜೀವನದಲ್ಲಿ ದೊಡ್ಡದನ್ನು ಸಾಧಿಸಲು ಪ್ರೇರೇಪಿಸಿತು. ಇಂದು ಅವರು ಯಶಸ್ವಿ ಉದ್ಯಮಿ 700000 ಕ್ಕೂ ಜನರ ಉದ್ಯೋಗದಾತ.ಈಗ ತಾವು ತೊದಲುತ್ತಾ ಮಾತನಾಡೊದರೂ ಜನರು ಅವರ ಮಾತನ್ನು ಗಮನವಿಟ್ಟು ಕೇಳುತ್ತಾರೆ.ಅವರೇ ಜೊಮಾಟೋ ಕಂಪನಿಯ ಸಂಸ್ಥಾಪಕ ದೀಪೇಂದರ್ ಗೋಯಲ್.
ಗೋಯಲ್ ಜನವರಿ 26, 1983 ರಂದು ಭಾರತದ ಪಂಜಾಬ್ನ ಮುಕ್ತಸರ್ನಲ್ಲಿ ಜನಿಸಿದರು. ಅವರು 2005 ರಲ್ಲಿ ದೆಹಲಿಯ ಐ ಐಟಿ ಗಣಿತ ಮತ್ತು ಕಂಪ್ಯೂಟಿಂಗ್ನಲ್ಲಿ ಎಂ.ಟೆಕ್ ಪದವಿ ಪಡೆದ
ನಂತರ ಜನವರಿ 2006 ರಲ್ಲಿ ಬೈನ್ ಅಂಡ್ ಕಂಪನಿಯಲ್ಲಿ ಹಿರಿಯ ಸಹಾಯಕ ಸಲಹೆಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬೈನ್ನಲ್ಲಿದ್ದಾಗ ಗೋಯಲ್ ತಮ್ಮ ಸಹೋದ್ಯೋಗಿ ಪಂಕಜ್ ಅವರೊಂದಿಗೆ ಆಹಾರ ಆರ್ಡರ್ಗಳಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಅನಾನುಕೂಲತೆಯಿಂದ ಪ್ರೇರಿತರಾಗಿ ಜೊಮ್ಯಾಟೊದ ಕಲ್ಪನೆಯನ್ನು ರೂಪಿಸಿದರು. ಬೈನ್ ಉದ್ಯೋಗಿಗಳಿಗೆ ಆಹಾರ ಆರ್ಡರ್ ಮಾಡುವ ವೆಬ್ಸೈಟ್ ಎಂಬ ಅವರ ಆರಂಭಿಕ ಯೋಜನೆಯು ಯಶಸ್ವಿಯಾಯಿತು. ಇದು 2008 ರಲ್ಲಿ ಜೊಮ್ಯಾಟೊ ಸ್ಥಾಪನೆಗೆ ಕಾರಣವಾಯಿತು.
ಆರಂಭದಲ್ಲಿ ಫುಡೀಬೇ ಎಂದು ಹೆಸರಿಸಲಾದ ಜೊಮ್ಯಾಟೊ ಭಾರತೀಯ ಬಹುರಾಷ್ಟ್ರೀಯ ರೆಸ್ಟೋರೆಂಟ್ ಸಂಗ್ರಾಹಕ ಮತ್ತು ಆಹಾರ ವಿತರಣಾ ಕಂಪನಿಯಾಗಿದೆ. ಇದು ಗ್ರಾಹಕರು, ರೆಸ್ಟೋರೆಂಟ್ ಪಾಲುದಾರರು ಮತ್ತು ವಿತರಣಾ ಪಾಲುದಾರರನ್ನು ಸಂಪರ್ಕಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಜೊಮ್ಯಾಟೊ ಜಾಗತಿಕವಾಗಿ ವಿಸ್ತರಿಸಿದೆ.ಸುಮಾರು 22 ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಮಗ್ರ ರೆಸ್ಟೋರೆಂಟ್ ಮಾಹಿತಿ, ಮೆನು ವಿವರಗಳು, ಬೆಲೆ ಮತ್ತು ವಿಮರ್ಶೆಗಳನ್ನು ನೀಡುತ್ತದೆ.
ಗೋಯಲ್ ಅವರ ನಾಯಕತ್ವದಲ್ಲಿ, ಜೊಮಾಟೊ ಪೋಲೆಂಡ್ನಲ್ಲಿ ಗ್ಯಾಸ್ಟ್ರೋನೌಸಿ , ಇಟಲಿಯಲ್ಲಿ ಸಿಬಾಂಡೋ ಮತ್ತು ಭಾರತದಲ್ಲಿ ಬ್ಲಿಂಕಿಟ್ ಗಳ ಸ್ವಾಧೀನಗಳ ಮೂಲಕ ತನ್ನ ಜಾಗತಿಕ ಉಪಸ್ಥಿತಿಯನ್ನು ಬೆಳೆಸಿಕೊಂಡಿದೆ.
ಝೊಮಾಟೊದ ಯಶಸ್ಸು ಕಂಡು ಸುಮ್ಮನೆ ಕೂರದ ಗೋಯಲ್ ಮೇನ್ಸ್ಟ್ರೀಟ್, ಗ್ಯಾಬಿಟ್, ಥೆರಾಡೊ, ಶಿಪ್ರಾಕೆಟ್, ಬ್ಲಿಂಕಿಟ್, ಬಿರಾ 91, ಹೈಪರ್ಟ್ರಾಕ್, ಟೆರ್ರಾಡೊ, ಚೆಫ್ಕಾರ್ಟ್, ಸ್ಕ್ವಾಡ್ಸ್ಟ್ಯಾಕ್ ಮತ್ತು ಅನ್ಅಕಾಡೆಮಿ ಸೇರಿದಂತೆ ವಿವಿಧ ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಇವರ ಸಾಧನೆಯನ್ನು ಗುರ್ತಿಸಿದ ಹಲವಾರು ಸಂಸ್ಥೆಗಳು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
೨೦೧೧ ರಲ್ಲಿ, ಗೋಯಲ್ ಅವರಿಗೆ ಎಕನಾಮಿಕ್ ಟೈಮ್ಸ್ ಸ್ಟಾರ್ಟ್ಅಪ್ ಆಫ್ ದಿ ಇಯರ್ ಪ್ರಶಸ್ತಿ ೨೦೧೨ ರಲ್ಲಿ ಬಿಸಿನೆಸ್ ಟುಡೇ ಯಂಗ್ ಬಿಸಿನೆಸ್ ಲೀಡರ್ ಪ್ರಶಸ್ತಿ,೨೦೧೮ ರಲ್ಲಿ ಐಐಟಿ ದೆಹಲಿಯಿಂದ ಡಿಸ್ಟಿಂಗ್ವಿಶ್ಡ್ ಅಲುಮ್ನಿ ಪ್ರಶಸ್ತಿ, ೨೦೧೯ ರಲ್ಲಿ ವರ್ಷದ ಜಿಕ್ಯೂ ಪುರುಷರ ಪ್ರಶಸ್ತಿ ಸ್ವೀಕರಿಸಿದ್ದಾರೆ. 2020 ರಲ್ಲಿ ಗೋಯಲ್ ಫಾರ್ಚೂನ್ ಇಂಡಿಯಾ 40 ವರ್ಷದೊಳಗಿನವರ ಪಟ್ಟಿಯಲ್ಲಿ ಸೇರಿಸಲಾಯಿತು.ಅವರು 2023 ರ EY ಉದ್ಯಮಿ ಪ್ರಶಸ್ತಿಗೆ ಅಂತಿಮ ಸ್ಪರ್ಧಿಯೂ ಆಗಿದ್ದರು.
ಗೋಯಲ್ ಅವರು ಐಐಟಿ ದೆಹಲಿಯಲ್ಲಿ ಕಾಲೇಜು ವರ್ಷಗಳಲ್ಲಿ ಭೇಟಿಯಾದ ಕಾಂಚನ್ ಜೋಶಿ ಅವರನ್ನು ವಿವಾಹವಾಗಿದ್ದು. ಅವರಿಗೆ ಸಿಯಾರಾ ಎಂಬ ಮಗಳಿದ್ದಾಳೆ.ಇತ್ತೀಚಿಗೆ ಮಾಧ್ಯಮದವರ ಜೊತೆಯಲ್ಲಿ ಮುಕ್ತವಾಗಿ ಮಾತನಾಡಿದ ಗೋಯಲ್ ರವರು ತಮ್ಮ ಆದ್ಯತೆ, ಮುಂದಿನ ಗುರಿಗಳ ಬಗ್ಗೆ ವಿವರ ನೀಡಿದ್ದಾರೆ.
ಜೋಮಾಟೊದಲ್ಲಿ ಯಾವುದೇ ತ್ರೈಮಾಸಿಕ ಅಥವಾ ವಾರ್ಷಿಕ ಗುರಿಗಳಿಲ್ಲ ಗುರಿಗಳನ್ನು ನಿಗದಿಪಡಿಸುವುದರಿಂದ ಜನರು ತಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.
ಬ್ಲಿಂಕಿಟ್ ಸೇವೆಯು ದೀಪಿಂದರ್ ಅವರಿಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾಗಿದ್ದರಿಂದ ಗೆಳೆಯ ಅಲ್ಬಿಂದರ್ ಧಿಂದ್ಸಾ ಅವರಿಂದ ಖರೀದಿಸಿದರು. ಪ್ರಸ್ತುತ ಜೋಮಾಟೊ ಮತ್ತು ಬ್ಲಿಂಕಿಟ್ನಲ್ಲಿ 7,50000 ಕೆಲಸಗಾರರಿಗೆ ಉದ್ಯೋಗ ನೀಡಿದೆ. ಒಬ್ಬ ಸವಾರ ದಿನಕ್ಕೆ 8 ರಿಂದ 10 ಗಂಟೆ ಕೆಲಸ ಮಾಡಿದರೆ ತಿಂಗಳಿಗೆ ₹25,000 ಕ್ಕಿಂತ ಹೆಚ್ಚು ಗಳಿಸಬಹುದು ಎಂದು ಅವರು ತಿಳಿಸಿದ್ದಾರೆ.
ಇತರೆ ಡೆಲಿವರಿ ಕಂಪನಿಗಳಿಗಿಂತ ಜೊಮಾಟೊ 10 ನಿಮಿಷಗಳ ಡೆಲಿವರಿ ನೀಡುವ ಬಗ್ಗೆ ಕೇಳಿದಾಗ ಇದು ಸವಾರರ ಬರವೇಗದಿಂದ ಸಾಧ್ಯವಾಗುತ್ತಿಲ್ಲ ಬದಲಾಗಿ ಮಳಿಗೆಗಳ ಸಾಂದ್ರತೆಯಿಂದ ಸಾಧ್ಯವಾಗುತ್ತಿದೆ. ಸವಾರರಿಗೆ ಯಾವುದೇ ಸಮಯದ ಮಿತಿಯನ್ನು ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಷ್ಟಕ್ಕೇ ನಿಲ್ಲದ ಗೋಯಲ್ ರವರ ವಿಷನ್ ವಿಸ್ತರಿಸುತ್ತಲೇ ಇದೆ.
ಸಣ್ಣ ವಿಮಾನಗಳನ್ನು ತಯಾರಿಸುವ ಯೋಜನೆಗಾಗಿ ದೀಪಿಂದರ್ ಅವರು 50 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧರಾಗಿದ್ದಾರೆ. ಇದು ನಗರಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಅವರ ಆಶಯ.ಮೆದುಳಿಗೆ ರಕ್ತದ ಹರಿವನ್ನು ಮೇಲ್ವಿಚಾರಣೆ ಮಾಡುವ ಟೆಂಪಲ್ ಎಂಬ ಮತ್ತೊಂದು ಸಾಧನ ಆವಿಷ್ಕಾರಕ್ಕೆ ಕೈಹಾಕಿದ್ದಾರೆ. ಭೂಮಿಯ ಗುರುತ್ವಾಕರ್ಷಣೆಯು ನಮ್ಮ ವಯಸ್ಸಾಗುವ ಪ್ರಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಿಸುವುದು ಇದರ ಉದ್ದೇಶ.
ದೀಪಿಂದರ್ ಗೋಯಲ್ ಅವರ ವ್ಯವಹಾರ ಶೈಲಿಯು ಬಲು ವಿಭಿನ್ನ ಅದಕ್ಕೆ ಅವರು ಈ ಎತ್ತರಕ್ಕೆ ಏರಿದ್ದಾರೆ. ಅವರ ವ್ಯವಹಾರ ಶೈಲಿಯನ್ನು ಹೀಗೆ ಹೇಳಬಹುದು ಒಂದು ರೇಸ್ ಕಾರ್ ಎಂಜಿನ್ ಎಷ್ಟು ದೂರ ಹೋಗಬೇಕು ಎಂದು ಅವರು ಮೊದಲೇ ಗುರಿಯೊಂದಿಗೆ ನಿರ್ಧರಿಸುವುದಿಲ್ಲ. ಆದರೆ ಪ್ರತಿ ಭಾಗವೂ ಅತ್ಯಂತ ನಿಖರವಾಗಿ ಮತ್ತು ತೀವ್ರತೆಯಿಂದ ಕೆಲಸ ಮಾಡಬೇಕೆಂದು ಅವರು ಬಯಸುತ್ತಾರೆ.ಆಗ ಮಾತ್ರ ಕಾರು ಯಾರಿಗೂ ತಲುಪಲಾಗದ ವೇಗವನ್ನು ತಲುಪಲು ಸಾಧ್ಯವಾಗುತ್ತದೆ.
ಗೋಯಲ್ ನಮ್ಮ ನೆಲದ ನಕ್ಷತ್ರ! ಇಂತಹ ಸಾವಿರಾರು ನಕ್ಷತ್ರಗಳಿಗೆ ಗೋಯಲ್ ಸ್ಪೂರ್ತಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು




