26 ಏಪ್ರಿಲ್ 2025

ಇರುವುದೇ ವರವು.

 


ಇರುವುದೇ ವರವು.


ನಾವು ಇಲ್ಲಿ ಸಂಪತ್ತನ್ನು ಹುಡುಕುತ್ತಿದ್ದರೆ ಅನೇಕರು  ಆರೋಗ್ಯವನ್ನು ಹುಡುಕುತ್ತಿದ್ದಾರೆ.


ನಾವು ಇಲ್ಲಿ ಆರೋಗ್ಯವನ್ನು ಹುಡುಕುತ್ತಿದ್ದರೆ ಬಹುತೇಕರು ಮರಣ ಹೊಂದಿದ್ದಾರೆ.


ನಾವು ಅಧಿಕಾರವನ್ನು ಹುಡುಕುತ್ತಿದ್ದರೆ  ಕೆಲವರು ಅದನ್ನು ಪಡೆದುಕೊಂಡು  ಶಕ್ತಿಹೀನರಾಗಿದ್ದಾರೆ.


ನಾವು  ಫ್ಯಾನ್ಸಿ ಕಾರನ್ನು ಕೊಂಡು  ಓಡಿಸಲು ಬಯಸುತ್ತಿರುವಾಗ  ಅಲ್ಲಾರೋ  ಕಾರು ಅಪಘಾತದಲ್ಲಿ ಸಾಯುತ್ತಿದ್ದಾರೆ.


ನಾವು  ಭೂಮಿಯಿಂದ ಮೇಲಕ್ಕೆ ಹೊಸ ಮಹಲುಗಳನ್ನು ಕಟ್ಟುವಾಗ  ಕೆಲವರು  ಭೂಮಿಯ ಕೆಳಗೆ ಹೊಸ ಸಮಾಧಿಯನ್ನು ಅಗೆಯುತ್ತಿದ್ದಾರೆ.


ನಾವು  ಆಹಾರವನ್ನು ಕಸದ ಬುಟ್ಟಿಗೆ ಎಸೆದು ಪೋಲು ಮಾಡುವಾಗ ಬೇರೊಬ್ಬರು ತಿನ್ನಲು ಅಗಳು ಅನ್ನ  ಹುಡುಕುತ್ತಿದ್ದಾರೆ.


ನಾವು ನಮ್ಮ  ಸ್ಥಿತಿಯನ್ನು ಉತ್ತಮ ಪಡಿಸಲು ಭಗವಂತನನ್ನು ಕೇಳುವಾಗ  ಬೇರೊಬ್ಬರು ನಮ್ಮ ಸ್ಥಿತಿಗೆ ಬರಲು ಪ್ರಾರ್ಥಿಸುತ್ತಿದ್ದಾರೆ.


 ನಾವು   ಹೆರಿಗೆಯ ಆಚರಣೆ ಮಾಡುವಾಗ  ಅಲ್ಲಾರೋ ಮಸಣದಲ್ಲಿ  ಕಣ್ಣೀರಿಡುತ್ತಿದ್ದಾರೆ.


ನಾವು  ಸಹಜವಾಗಿ ಮೂತ್ರ ವಿಸರ್ಜಿಸುವಾಗ  ಅಥವಾ ನೀರು ಕುಡಿಯುವಾಗ  ಮತ್ತಾರೋ ಅದೇ ಉದ್ದೇಶಕ್ಕಾಗಿ ಪೈಪ್ ಬಳಸುತ್ತಿದ್ದಾರೆ.


ಇರುವುದೇ ವರವೆಂದು ಅರಿತು ಸಿಹಿಜೀವಿಗಳಾಗುವುದನ್ನು ಮರೆತು ಇಲ್ಲದಿರುವುದರ ಬಗ್ಗೆ ಕೊರಗಿ ಮರುಗುತ್ತಿದ್ದಾರೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು




21 ಏಪ್ರಿಲ್ 2025

10G ಗೆ ದಾಪುಗಾಲಿಟ್ಟ ಡ್ರಾಗನ್


  

10G ಗೆ ದಾಪುಗಾಲಿಟ್ಟ ಡ್ರಾಗನ್..


ಭಾರತದ ಕೆಲ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳು ಭಾರತದ ಎಲ್ಲಾ ಕಡೆ 5G ಸೇವೆ ಅರಂಭಿಸಿದ್ದೇವೆ ಎಂದು ನಾಮಮಾತ್ರಕ್ಕೆ ಹೇಳುತ್ತಿವೆ.ಇನ್ನೂ 2G ಮುಟ್ಟದ ಗ್ರಾಮಗಳಿವೆ. ನಾನಿರುವ ತುಮಕೂರಿನಲ್ಲಿ ನನ್ನ ಒಂದೇ ಮೊಬೈಲ್ ನಲ್ಲಿ ಎರಡು ಕಂಪನಿಗಳ 5G ಸಿಮ್ ಇದ್ದರೂ ಇಂಟರ್ನೆಟ್ ಸ್ಪೀಡ್ ಇನ್ನೂ kbps ನಲ್ಲೇ ಇದೆ.ಇನ್ನೂ ಹಳ್ಳಿಗಳ ನೆಟ್ವರ್ಕ್ ನೀವೇ ಯೋಚಿಸಿ. ನಮ್ಮ ಕಥೆ ಇದಾದರೆ ಚೀನಾವು ಆರು, ಏಳಲ್ಲ 10G  ಇಂಟರ್ನೆಟ್ ಸೇವೆಯನ್ನು ಪರೀಕ್ಷೆ ಮಾಡಿ ಜಗತ್ತಿಗೆ ಅಚ್ಚರಿಯ ಸಂದೇಶ ನೀಡಿದೆ.

ಹುವೈ ಮತ್ತು ಚೀನಾ ಯುನಿಕಾರ್ನ್ ಜಂಟಿಯಾಗಿ ಚೀನಾದ ಈ ಮೊದಲ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಹೆಬ್ಬೆಪ್ರಾಂತ್ಯದ ಸುನನ್ ಕೌಂಟಿಯಲ್ಲಿ  ಅನುಷ್ಠಾನಗೊಳಿಸಿದೆ.

ಭಾರತದಲ್ಲಿ ಸರಾಸರಿ ಬ್ರಾಡ್‌ಬ್ಯಾಂಡ್‌ ಡೌನ್‌ಲೋಡ್ ಸ್ಪೀಡ್ 100 ಎಂಬಿ ಪಿಎಸ್ ಒಳಗಿದೆ. ಆದರೆ ಚೀನಾವು 1000 ಎಂ ಬಿ ಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್ ಪರಿಚಯಿಸುವ ಮೂಲಕ ಇಂಟರ್ನೆಟ್ ಮೂಲಸೌಲಭ್ಯ ಕ್ಷೇತ್ರದಲ್ಲಿ ಆ ದೇಶ ಬಹುದೊಡ್ಡ ಜಿಗಿತ ದಾಖಲಿಸಿದೆ.ಇದರ ಪರಿಣಾಮವಾಗಿ 

900 ಜಿಬಿಯಷ್ಟು ಭಾರಿ ಫೈಲ್‌ಗಳನ್ನು ಈ ತಂತ್ರಜ್ಞಾನದಿಂದ ಕೆಲ ಸೆಕೆಂಡಲ್ಲಿ ಡೌನ್‌ಲೋಡ್ ಮಾಡಬಹುದು ಈ ಸ್ಪೀಡ್ ನಿಂದ 

8ಕೆ ವಿಡಿಯೋ ಸ್ಟ್ರೀಮಿಂಗ್, ಅಡ್ವಾನ್ಸ್ ಕ್ಲೌಡ್ ಕಂಪ್ಯೂಟಿಂಗ್‌ಗೆ ಅನುಕೂಲವಾಗಲಿದೆ.

ಭಾರತದ ಟೆಲಿಕಾಂ ಕ್ಷೇತ್ರವು ಮುಂದಿನ  ವರ್ಷ 6G ಅನುಷ್ಠಾನ ಮಾಡಲು ತಯಾರಿ ನಡೆಸಿದೆ. 10 G ಗೆ ಹೋಗಲು ಇನ್ನೂ ಎಷ್ಟು ಸಂವತ್ಸರ ಕಳೆಯಬೇಕೋ ಆ ಭಗವಂತನಿಗೇ ಗೊತ್ತು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು 

18 ಏಪ್ರಿಲ್ 2025

ಸಿಹಿಜೀವಿಯ ಹನಿ


 


ಸಿಹಿಜೀವಿಯ ಹನಿ 


ಎನಿತು ಕಾಲ ಕುಳಿತೇ 

ಇರುವೆ ಚಿಂತಿಸುತಾ| 

ಏಳು ಎದ್ದೇಳು ಸಂತಸಪಡೆ 

ಕಾಯಕ ಮಾಡುತಾ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು


15 ಏಪ್ರಿಲ್ 2025

ಜಗದೆಲ್ಲಾ ಕಲಾವಿದರಿಗೆ ವಿಶ್ವ ಕಲಾ ದಿನದ ಶುಭಾಶಯಗಳು*💐🌷🌺🪷🌸


 *ಜಗದೆಲ್ಲಾ ಕಲಾವಿದರಿಗೆ ವಿಶ್ವ ಕಲಾ ದಿನದ ಶುಭಾಶಯಗಳು*💐🌷🌺🪷🌸 



ಕಲೆಯ ಅಭಿವೃದ್ಧಿ, ಪ್ರಸರಣ ಮತ್ತು ಆನಂದವನ್ನು ಉತ್ತೇಜಿಸುವ ಆಚರಣೆಯಾದ ವಿಶ್ವ ಕಲಾ ದಿನವನ್ನು  2019 ರಲ್ಲಿ ಯುನೆಸ್ಕೋದ ಸಾಮಾನ್ಯ ಸಮ್ಮೇಳನದ 40 ನೇ ಅಧಿವೇಶನದಲ್ಲಿ ಘೋಷಿಸಲಾಯಿತು.


ಕಲೆಯು ಜಗತ್ತಿನಾದ್ಯಂತ ಎಲ್ಲಾ ಜನರಿಗೆ ಸೃಜನಶೀಲತೆ, ನಾವೀನ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪೋಷಿಸುತ್ತದೆ ಮತ್ತು ಜ್ಞಾನವನ್ನು ಹಂಚಿಕೊಳ್ಳುವಲ್ಲಿ ಮತ್ತು ಕುತೂಹಲ ಮತ್ತು ಸಂವಾದವನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 


ಪ್ರತಿ ವರ್ಷಏಪ್ರಿಲ್ 15 ರಂದು ವಿಶ್ವ ಕಲಾ ದಿನಾಚರಣೆಯು ಕಲಾತ್ಮಕ ಸೃಷ್ಟಿಗಳು ಮತ್ತು ಸಮಾಜದ ನಡುವಿನ ಸಂಪರ್ಕವನ್ನು ಬಲಪಡಿಸಲು, ಕಲಾತ್ಮಕ ಅಭಿವ್ಯಕ್ತಿಗಳ ವೈವಿಧ್ಯತೆಯ ಬಗ್ಗೆ ಹೆಚ್ಚಿನ ಅರಿವನ್ನು ಉತ್ತೇಜಿಸಲು  ಮತ್ತು ಸುಸ್ಥಿರ ಅಭಿವೃದ್ಧಿಗೆ ಕಲಾವಿದರ ಕೊಡುಗೆಯನ್ನು ಎತ್ತಿ ತೋರಿಸಲು ಈ ಆಚರಣೆ ಮಾಡಲಾಗುತ್ತದೆ.


ವಿಶ್ವ ಕಲಾ ದಿನದಂದು ಕಲಿಯಲು, ಹಂಚಿಕೊಳ್ಳಲು ಮತ್ತು ಆಚರಿಸಲು ಬಹಳಷ್ಟಿದೆ.  ಜಗದ ಎಲ್ಲಾ ಕಲಾವಿದರನ್ನು ಗೌರವಿಸೋಣ.ಅವರ ಕಲಾಕೃತಿಗಳನ್ನು ಮೆಚ್ಚೋಣ..


*ಸಿಹಿಜೀವಿ ವೆಂಕಟೇಶ್ವರ*