17 ಜನವರಿ 2024

ಮಿಡಿವ ಮನವೇ ಮಗಳು


 


ಮಿಡಿವ ಮನವೇ ಮಗಳು..


ಇಂದಿನ ದಿನಗಳಲ್ಲಿ ವೃದ್ದಾಶ್ರಮಗಳು ಹೆಚ್ಚಾಗುತ್ತಿವೆ.ಹೆತ್ತವರನ್ನು ಅವರ ಸಂಧ್ಯಾ ಕಾಲದಲ್ಲಿ ಗೌರವದಿಂದ ಕಾಣುವವರು ಕ್ರಮೇಣವಾಗಿ ಕಡಿಮೆಯಾಗುತ್ತಿದ್ದಾರೆ. ಇದಕ್ಕೆ ಅಪವಾದವೆಂಬಂತೆ ಗಂಡುಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳು ತಮ್ಮ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವ ನಿದರ್ಶನಗಳು ನಮಗೆ ಬಹಳ ಸಿಗುತ್ತವೆ. ನ್ಯಾಯಾಲಯ ಮಗಳಿಗೂ ಅಪ್ಪನ ಆಸ್ತಿಯಲ್ಲಿ ಸಮಪಾಲಿದೆ ಎಂದು ಆದೇಶ ಮಾಡಿದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ವಾದ ಮಾಡಿ ಸಹೋದರಿಯ ಸಾಗ ಹಾಕುವ ಸಹೋದರರೇ ಅಧಿಕ. ನಮ್ಮ ಬಹುತೇಕ ಹೆಣ್ಣು ಮಕ್ಕಳು ಅಪ್ಪನೇ ಆಸ್ತಿಯೆಂಬ ವಿಶಾಲ ಮನೋಭಾವದಿಂದ ತನ್ನ ಹೆತ್ತವರ ಬಗ್ಗೆ ಅಪಾರ ಗೌರವದಿಂದ ಗಂಡನ ಮನೆಯ ದಾರಿ ಹಿಡಿಯುವಳು.ಎಷ್ಟೋ ಬಾರಿ ಅಣ್ಣಂದಿರ ಅಪ್ಪ ಅಮ್ಮ ನ ನೋಡಿಕೊಳ್ಳದೇ ಮನೆಯಿಂದ ಹೊರಹಾಕಿದಾಗ ಮಿಡಿವ ಮನವೇ ಮಗಳು.ಹೆಣ್ಣು ಭ್ರೂಣ ಹತ್ಯೆ ,ಹೆಣ್ಣು ಶಿಶು ಹತ್ಯೆ ಮಾಡುವ ಮೂಢರು ಈ ಕಥೆ ಓದಬೇಕು.


ಅದು ದೊಡ್ಡ ಶ್ರೀಮಂತ ಕುಟುಂಬ. ಶ್ರೀಮಂತನಿಗೆ ಪತ್ನಿ ನಾಲ್ಕು ಜನ ಗಂಡು ಮಕ್ಕಳು ಒಬ್ಬಳು ಮಗಳು ಇದ್ದಳು. ಶ್ರೀಮಂತ ನ್ಯಾಯವಾಗಿ ಸಂಪಾದನೆ ಮಾಡಿ ಆಸ್ತಿ ಗಳಿಸಿ ಊರಿನಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆ ಹೆಸರು ಪಡೆದಿದ್ದನು. ಕಷ್ಟ ಕಾಲ ಎಂದು ಬಂದವರಿಗೆ ಸಹಾಯ, ಕೆಲವರಿಗೆ ಸಾಲ ಕೊಡುತ್ತಿದ್ದನು. ಕುಟುಂಬದಲ್ಲಿ ಮಗಳನ್ನು ಒಳ್ಳೆಯ ಮನೆಗೆ ಕೊಟ್ಟು ವಿವಾಹ ಮಾಡಿದ್ದನು. ಮಾಡಿದ ಆಸ್ತಿಯನ್ನು  ನಾಲ್ಕು ಜನ ಗಂಡು ಮಕ್ಕಳು ಮತ್ತು ಒಬ್ಬಳು ಮಗಳು ಪತ್ನಿ ಎಲ್ಲರಿಗೂ ಸಮನಾಗಿ ಬರುವಂತೆ ವಿತರಣೆ ಮಾಡಿದ್ದನು. ಶ್ರೀಮಂತನು ವಯೊ ಸಹಜ ಕಾರಣದಿಂದ ಮೃತಪಟ್ಟನು. ಮುಂದಿನ ಸಂಸ್ಕಾರಕ್ಕಾಗಿ ತಯಾರು ಮಾಡುತ್ತಿದ್ದರು ಸಾಕಷ್ಟು ಬಂಧು ಬಳಗ, ಊರಿನವರು, ಮನೆ ಮಕ್ಕಳು ಎಲ್ಲಾ ನೆರದಿದ್ದರು. ಇಡೀ ಕುಟುಂಬ ದುಃಖದಲ್ಲಿ ಮುಳುಗಿತ್ತು. ಇನ್ನೇನು ಶವಯಾತ್ರೆ ಹೊರಡಬೇಕು ಅನ್ನುವ ಹೊತ್ತಿಗೆ ಒಬ್ಬ ಹಿರಿಯ ವ್ಯಕ್ತಿ ಬಂದು ಸ್ವಲ್ಪ ತಡೆಯಿರಿ ನನ್ನದೊಂದು ವಿನಂತಿ ಇದೆ ಕೇಳಿ ಎಂದಾಗ ಅಲ್ಲಿದ್ದವರ ಗಮನವೆಲ್ಲ 

ಏನು ಎಂಬಂತೆ ಅವನತ್ತ ಹರಿಯಿತು. 


ಬಂದ ವ್ಯಕ್ತಿ, ನೋಡಿ ಈ ಶ್ರೀಮಂತರು ಕೆಲವು ತಿಂಗಳ ಹಿಂದೆ ನನ್ನಿಂದ 25 ಲಕ್ಷ ಸಾಲ ಪಡೆದಿದ್ದರು. ಅದನ್ನು ಹಿಂತಿರುಗಿಸಿಲ್ಲ ಈ ದಿನ ಇವರು ಮೃತಪಟ್ಟರೆಂದು ತಿಳಿಯಿತು ಆದ್ದರಿಂದ ಸಾಲ ಪಡೆಯಲು ಬಂದಿದ್ದೇನೆ ನನ್ನ ಸಾಲ ಕೊಟ್ಟು ಮುಂದಿನ ಕಾರ್ಯ ಮಾಡಿ ಎಂದರು. ಆಗ ಕೆಲವು ಹಿರಿಯರು, ನೋಡಿ ಶವಸಂಸ್ಕಾರ ಮುಗಿದು ಬಿಡಲಿ ಆಮೇಲೆ ಮಾತುಕತೆ ಆಡೋಣ ಎಂದರು.

ಆ ವ್ಯಕ್ತಿ ಪಟ್ಟು ಬಿಡದಂತೆ ಇಲ್ಲ ನನಗೆ ಹಣವನ್ನಾದರೂ ಕೊಡಲಿ ಇಲ್ಲದಿದ್ದರೆ ಯಾರಾದರೂ ಕೊಡುವವರು ಜವಾಬ್ದಾರಿ ತೆಗೆದುಕೊಳ್ಳಲಿ ಎಂದರು. ಊರಿನವರೆಲ್ಲ ಆ ನಾಲ್ಕು ಗಂಡು ಮಕ್ಕಳ ಕಡೆ ದೃಷ್ಟಿ ಹರಿಸಿದರು. ಆದರೆ ಅವರ್ಯಾರು ತುಟಿ ಪಿಟಕ್ ಅನ್ನಲಿಲ್ಲ. ಹಾಗಾದರೆ ಯಾರು ಕೊಡುವವರು ಅದೇ  ಚರ್ಚೆಯಾಗಿ ಶವಸಂಸ್ಕಾರಕ್ಕೆ ವಿಳಂಬವಾಗುತ್ತಿತ್ತು. ಆಗ ಈ ಸುದ್ದಿ ಒಳಗಿದ್ದ ಹೆಂಗಸರು ಶ್ರೀಮಂತರ ಪತ್ನಿ ಮತ್ತು ಮಗಳ ಕಿವಿಗೂ ಬಿದ್ದಿತ್ತು. 


ಕೆಲವೇ ನಿಮಿಷಗಳಲ್ಲಿ, ದುಃಖ ತಪ್ತಳಾಗಿದ್ದ ಶ್ರೀಮಂತನ ಮಗಳು ಹೊರಗೆ ಬಂದು

ಒಂದು ಬಟ್ಟೆಯ ಗಂಟನ್ನು ತೆಗೆದು ಸಾಲ  ಕೊಡಬೇಕಾದ ವ್ಯಕ್ತಿಗೆ ಕೊಡುತ್ತಾ, ಇದು ನಮ್ಮ ತಂದೆ ಮಾಡಿಸಿಕೊಟ್ಟ ಒಡವೆಗಳು ಇದನ್ನು ತೆಗೆದುಕೊಂಡು ಶವಸಂಸ್ಕಾರಕ್ಕೆ ಅನುವು ಮಾಡಿಕೊಡಿ ನಮ್ಮ ತಂದೆ ಬಹಳ ಮರ್ಯಾದಸ್ತರು ಎಂದು ಕೈ ಮುಗಿದಳು. ಆ ವ್ಯಕ್ತಿ ಒಡವೆ ಗಂಟನ್ನು ತೆಗೆದುಕೊಂಡು ಹೋದರು. ಮತ್ತೆ ಮುಂದಿನ ಕಾರ್ಯವೆಲ್ಲವೂ ಮುಗಿಯಿತು.


ಮರುದಿನ   ಒಡವೆ ಗಂಟು ತೆಗೆದುಕೊಂಡು ಹೋಗಿದ್ದ  ವ್ಯಕ್ತಿ ಬಂದು ಒಡವೆ ಗಂಟನ್ನು ಶ್ರೀಮಂತನ ಮಗಳ ಕೈಗೆ ಕೊಟ್ಟು ಮಗಳೇ ಇದನ್ನು ನೀನು ತೆಗೆದುಕೋ ಇದು ನಿನ್ನದು, ಜೊತೆಗೆ ಈ 25 ಲಕ್ಷ ರೂಪಾಯಿಗಳು ನಿನಗೆ ಸೇರಿದ್ದು ಎಂದು ಕೊಟ್ಟರು.

ಎಲ್ಲರಿಗೂ ಆಶ್ಚರ್ಯವಾಯಿತು!ಇದು ಯಾವ ಹಣ? ಏಕೆ ಕೊಟ್ಟಿರಿ?ಎಂದು ಕೇಳಿದಾಗ, ಆ ಹಿರಿಯರು ಹೇಳಿದರು. ನಾನು ನಿಮ್ಮ ತಂದೆಗೆ ಸಾಲ ಕೊಟ್ಟಿಲ್ಲ.

ಅವರೇ ನನಗೆ 20 ಲಕ್ಷ  ಸಾಲ ಕೊಟ್ಟಿದ್ದರು. ನಾನು ಇನ್ನೆರಡು ಮೂರು ದಿನದಲ್ಲಿ ಕೊಡಬೇಕು ಎಂದುಕೊಂಡಿದ್ದೆ ಆದರೆ ಅಷ್ಟರಲ್ಲಿ ಮೃತರಾದ ಸುದ್ದಿ ಬಂದಿತು. ಹಣವನ್ನು ಯಾರಿಗೆ ಕೊಡಲಿ ಎಂಬ ಚಿಂತೆ ಶುರುವಾಯಿತು. ಅದಕ್ಕಾಗಿ ಈ ನಾಟಕ ಆಡಬೇಕಾಯಿತು ಎಂದರು.‌


ಅಲ್ಲಿ ಕುಳಿತಿದ್ದ ಗಂಡು ಮಕ್ಕಳೆಲ್ಲ ತಲೆ ತಗ್ಗಿಸಿದರು. ಬಾಕಿ ಇದ್ದವರೆಲ್ಲ ಹೆಣ್ಣು ಮಗಳ ಕಡೆ ಹೆಮ್ಮೆಯಿಂದ ನೋಡಿದರು. ಆ ಹೆಣ್ಣು ಮಗಳು ಆ ಹಣದಿಂದ ತಂದೆಯ ಸಂಸ್ಕಾರವನ್ನೆಲ್ಲ ಮಾಡಿಸಿ ಉಳಿದ ದುಡ್ಡನ್ನು ತಾಯಿಗೆ ಕೊಟ್ಟು ಗಂಡನ ಮನೆಗೆ ಹೊರಟು ಹೋದಳು.


16 ಜನವರಿ 2024

ಶಿಕ್ಷಣ ಶ್ರೀನಿಧಿ ಕೆ ಬಿ ಜಯಣ್ಣ.

 


ಶಿಕ್ಷಣ ಶ್ರೀನಿಧಿ ಕೆ ಬಿ ಜಯಣ್ಣ.


ಕೆಬಿಜೆ ಎಂದೇ ಜನಮಾನಸದಲ್ಲಿ ನೆಲೆಸಿರುವ ಕೆ ಬಿ ಜಯಣ್ಣ ರವರ ಸೇವೆಯನ್ನು ತುಮಕೂರಿನ ನಾಗರೀಕರು ಸದಾ ಸ್ಮರಿಸುತ್ತಲೇ ಇರುತ್ತೇವೆ. ಶಿಕ್ಷಣ ,ಕಲೆ ಸಂಸ್ಕೃತಿ ನಾಡು ನುಡಿಗೆ ಅವರ ಕೊಡುಗೆ ಅಪಾರ.

ಇಂತಹ ಮಹಾನ್ ಚೇತನಕ್ಕೆ ವಂದನೆ ಸಲ್ಲಿಸುವ ಅವಕಾಶವನ್ನು ನೀಡಿದ ಕೆ ಎಸ್ ಉಮಾಮಹೇಶ್ ಸರ್ ರವರಿಗೆ ಮತ್ತು  ಈ ಅಭಿನಂದನಾ ಗ್ರಂಥದ ಸಂಪಾದಕರಾದ ನನ್ನ ಗುರುಗಳಾದ ವಿದ್ಯಾ ವಾಚಸ್ಪತಿ ಕವಿತಾ ಕೃಷ್ಣ ಗುರುಗಳಿಗೆ ಮೊದಲು ನನ್ನ ನಮನಗಳನ್ನು ಸಲ್ಲಿಸುವೆ.

ವಿದ್ಯಾವಾಹಿನಿ ಕಾಲೇಜ್ ಎಂದರೆ ಥಟ್ಟನೆ ನೆನಪಾಗುವ ಹೆಸರೆ ಕೆ ಬಿ ಜೆ . ಶಿಕ್ಷಣ ಕ್ಷೇತ್ರದಲ್ಲಿ ಬೋಧಕರಾಗಿ, ಶಿಕ್ಷಣ ತಜ್ಞರಾಗಿ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸುತ್ತಿರುವ  ಶ್ರೀ ಕೆ.ಬಿ.ಜಯಣ್ಣ ಅವರು ಕನ್ನಡ ನಾಡು ಕಂಡ ಸಾಧಕರತ್ನವಾಗಿದ್ದಾರೆ. ತುಮಕೂರು ನಗರದಲ್ಲಿ ವಿದ್ಯಾವಾಹಿನಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ, ತನ್ಮೂಲಕ ವಿದ್ಯಾವಾಹಿನಿ ಮತ್ತು ವಿದ್ಯಾನಿಧಿ ಪದವಿ ಪೂರ್ವ ಕಾಲೇಜುಗಳ ಮುಖಾಂತರ ಸಲ್ಲಿಸಿರುವ ಸೇವೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ನಾನಾ ಬಗೆಯ ಶಿಕ್ಷಣ ಶಾಖೆಗಳನ್ನು ತೆರೆದು ವಿದ್ಯಾರ್ಥಿಸ್ತೋಮಕ್ಕೆ ಮಹದುಪಕಾರವೆಸಗಿದ್ದಾರೆ. ಶ್ರೀಯುತರು ಕಲೆ,ಸಾಹಿತ್ಯ,ಸಾಂಸ್ಕೃತಿಕ,ಕ್ರೀಡೆ ಹಾಗೂ ಲಲಿತಕಲೆಗಳನ್ನು ಪೋಷಿಸುವಲ್ಲಿ ಬದುಕಿನುದ್ದಕ್ಕೂ ಶ್ರಮಿಸಿದ್ದಾರೆ.

ಇತ್ತೀಚೆಗೆ ಎರಡು ಸಮಾರಂಭಗಳಲ್ಲಿ ನಾನು ಕೆ ಬಿ ಜೆ ರವರ ಮಾತುಗಳನ್ನು  ಕೇಳಿದೆ. ಒಂದು ಸೋಮೇಶ್ವರ ಶಾಲೆಯ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ, ಮತ್ತೊಂದು ವಿದ್ಯಾನಿಧಿ ಕಾಲೇಜಿನ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ.   78 ರ ಇಳಿವಯಸ್ಸಿನಲ್ಲೂ ಅವರ ಪ್ರಖರ ಚಿಂತನೆಯ ಮಾತುಗಳು ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿದ್ದವು. ನಾಡು ನುಡಿ ಶಿಕ್ಷಣದ ಬಗ್ಗೆ ಅವರ ಮನ ಮಿಡಿಯುವುದು ಅವರ ಭಾಷಣದಲ್ಲಿ ಎದ್ದು ಕಾಣುತ್ತಿತ್ತು. 


ತುಮಕೂರಿನ ಕ್ಯಾತ್ಸಂದ್ರದಲ್ಲಿ 

 01-06-1946 ರಲ್ಲಿ

 ಶ್ರೀ ಪಟೇಲ್ ಬಸಪ್ಪನವರು ಶ್ರೀಮತಿ ಸರೋಜಮ್ಮನವರು ಸುಪತ್ರರಾಗಿ ಜನಿಸಿದ ಕೆ ಬಿ ಜೆ ರವರು ಕ್ಯಾತ್ಸಂದ್ರ ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ,ಶ್ರೀ ಸಿದ್ದಗಂಗಾ ಮಠದ  ಶ್ರೀ ಸಿದ್ಧಲಿಂಗೇಶ್ವರ ಸನಿವಾಸ ಶಾಲೆಯಲ್ಲಿ ಪ್ರೌಢಶಾಲೆ ವ್ಯಾಸಂಗ ಮಾಡಿದರು.

ತುಮಕೂರಿನ  ಸರ್ಕಾರಿ ಪದವಿ ಪೂರ್ವ ಕಾಲೇಜು,

 ಶ್ರೀ ಸಿದ್ಧಗಂಗಾ ವಿಜ್ಞಾನ, ಕಲೆ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಓದಿದ ಇವರು

ಮೈಸೂರಿನ ಮಾನಸ ಗಂಗೋತ್ರಿಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ

ಎಂ ಎಸ್ಸಿ, ಬೆಂಗಳೂರಿನ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ ಎಡ್ ಪದವಿ ಪಡೆದರು.


ಮಾಗಡಿ ತಾಲೂಕಿನ ತಿಪ್ಪಸಂದ್ರದ  ಖಾಸಗಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಕೆ ಬಿ ಜಯಣ್ಣರವರು ನಂತರ 

ತಾವು ಓದಿದ  ಶ್ರೀಮಠದ ಸಿದ್ಧಲಿಂಗೇಶ್ವರ ಸನಿವಾಸ ಉನ್ನತ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಭಾಗ್ಯ ಲಭಿಸಿತು.


ಶಿಕ್ಷಣದ ಬಗ್ಗೆ ಅಪಾರ ಒಲವಿದ್ದ ಕೆ ಬಿ ಜೆ ರವರು ಶಿಕ್ಷಣ ಸಂಸ್ಥೆಗಳನ್ನು ಅರಂಭಿಸಲು ತೀರ್ಮಾನಿಸಿ ಒಂದು ಸಂಸ್ಥೆ ಆರಂಭಿಸಿದರು ಅದು ಕ್ರಮೇಣವಾಗಿ ಎರಡು,ನಾಲ್ಕು, ಹೀಗೆ ದ್ವಿಗುಣಗೊಂಡು ಪ್ರಸ್ತುತ 6000 ವಿದ್ಯಾರ್ಥಿಗಳು ಕೆ ಬಿ ಜೆ ರವರ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ!  ಎಂದರೆ ಅವರ ಕೊಡುಗೆಯನ್ನು ನೀವೇ ಅರ್ಥೈಸಿಕೊಳ್ಳಬಹುದು.

ಅವರು ಸ್ಥಾಪಿಸಿದ ಕೆಲ ಶೈಕ್ಷಣಿಕ ಸಂಸ್ಥೆಗಳಲ್ಲಿ

ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜು, ವಿದ್ಯಾವಾಹಿನಿ ಕೈಗಾರಿಕಾ ತರಬೇತಿ ಕೇಂದ್ರ, ಸುಮತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ,

 ವಿದ್ಯಾವಾಹಿನಿ ನರ್ಸಿಂಗ್ ಕಾಲೇಜು, ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು,ವಿದ್ಯಾನಿಧಿ ಪದವಿ ಪೂರ್ವ ಕಾಲೇಜು,

ವಿದ್ಯಾವಾಹಿನಿ ಪ್ಯಾರಾ ಮೆಡಿಕಲ್ ಕಾಲೇಜು, ಪ್ರಮುಖವಾಗಿವೆ.


ಕೇವಲ ಶಿಕ್ಷಣ ಕ್ಷೇತ್ರವಲ್ಲದೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ಕಾಗಿ ಕೆ ಬಿ ಜೆ ರವರ ಸ್ಮರಿಸಲೇ ಬೇಕು.


ಪ್ರತಿವರ್ಷ ಡಾ. ಜಿ.ಪರಮೇಶ್ವರ ಅಭಿಮಾನಿ ಬಳಗದ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯ ಮಾಡುತ್ತಿದ್ದಾರೆ.

ಸೆಕೆಂಡರಿ ಶಿಕ್ಷಕರ ಸಂಘದ ವತಿಯಿಂದ ಪ್ರತಿ ವರ್ಷ 10 ತಾಲ್ಲೂಕಿನ ಪ್ರೌಢಶಾಲೆ ಮತ್ತು ಪದವಿ ಪೂರ್ವ

ಕಾಲೇಜು ಹಾಗೂ ಪದವಿ ಕಾಲೇಜುಗಳ ಒಟ್ಟು 90 ರಿಂದ 100 ಜನ ಸಂಪನ್ಮೂಲ ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಸನ್ಮಾನ ಮಾಡಿ ಪ್ರೋತ್ಸಾಹ ಮಾಡುತ್ತಾ ಬಂದಿದ್ದಾರೆ.


ಸೆಕೆಂಡರಿ ಶಿಕ್ಷಕರ ಸಂಘದ ವತಿಯಿಂದ ಪ್ರತಿವರ್ಷ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದಾರೆ.


ತುಮಕೂರು ನಗರ ಹಾಗು ಸುತ್ತಲಿನ ಗ್ರಾಮಗಳಲ್ಲಿ ನಡೆಯುವ ಕ್ರೀಡೆ, ಜಾತ್ರೆ, ಉತ್ಸವ, ಹಬ್ಬಹರಿದಿನಗಳು, ದೇವಾಲಯಗಳ ಅಭಿವೃದ್ಧಿ, ಸಾಮೂಹಿಕ ವಿವಾಹ, ಗಣೇಶೋತ್ಸವ ಇತ್ಯಾದಿಗಳಿಗೆ ಉದಾರ ನೆರವು ನೀಡುತ್ತಾ ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸಲು ನೆರವಾಗುತ್ತಿದ್ದಾರೆ.


ಸಾಹಿತ್ಯ ಸಮ್ಮೇಳನ, ನಾಟಕೋತ್ಸವ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿದ್ಯಾವಾಹಿನಿ ಸಂಸ್ಥೆಯ ಸಹಯೋಗ ಹಾಗೂ ಪ್ರೋತ್ಸಾಹ ನೀಡುವಲ್ಲಿ ಕೆ ಬಿ ಜೆ ಎತ್ತಿದ ಕೈ.


ಪ್ರತಿವರ್ಷ ತಮ್ಮ ಕಾಲೇಜಿನ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವಗಳಿಗೆ ರಾಜ್ಯದ ಪ್ರಸಿದ್ಧ ಗಾಯಕರು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಪ್ರಶಸ್ತಿ ಪುರಸ್ಕೃತರು, ಕ್ರೀಡಾಪಟುಗಳು, ವಿಜ್ಞಾನಿಗಳು ಹಾಗೂ ಚಲನಚಿತ್ರ ನಟರನ್ನು ಆಹ್ವಾನಿಸಿ ಗೌರವ ಸಮರ್ಪಣೆ ಮಾಡುತ್ತಾ ಬಂದಿದ್ದಾರೆ.


ಪ್ರತಿವರ್ಷ ತಮ್ಮ ಕಾಲೇಜಿಗೆ ದಾಖಲಾಗುವ ನೂರಾರು ಬಡವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮೂಲಕ ಅವರ ವಿದ್ಯಾಭ್ಯಾಸ ಮುಂದುವರೆಸಲು ಹಾಗೂ ಸ್ವಂತ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡುತ್ತಿದ್ದಾರೆ.


ವೃತ್ತಿ ರಂಗಭೂಮಿಯ ಬಗ್ಗೆ ಹಾಗೂ ವೃತ್ತಿ ರಂಗ ಕಲಾವಿದರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ತುಮಕೂರಿನಲ್ಲಿ ವೃತ್ತಿ ರಂಗಭೂಮಿಯ ನಾಟಕಗಳು ನಡೆಯಲು ಉತ್ತೇಜನ ನೀಡುತ್ತಿದ್ದಾರೆ.


ಕೆ.ಬಿ.ಜೆ. ಅಭಿಮಾನಿ ಬಳಗದ ಮೂಲಕ ಪ್ರತಿವರ್ಷ ಶ್ರೀ ಸಿದ್ದಗಂಗಾ ಮಠದ ಜಾತ್ರೆ ಹಾಗೂ ಶ್ರೀಗಳ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ಉಚಿತ ಸೇವೆ ಸಲ್ಲಿಸಲಾಗುತ್ತಿದೆ.


ಕೆ ಬಿ ಜಯಣ್ಣ ರವರ  ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಲವಾರು ಪುರಸ್ಕಾರಗಳು ಇವರನ್ನು ಹರಸಿ ಬಂದಿವೆ.


 ಅಮೇರಿಕಾದ ವಿಶ್ವವಿದ್ಯಾಲಯ, 1997ರಲ್ಲಿ ಮ್ಯಾನ್ ಆಫ್ ದಿ ಇಯರ್ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.

 ಶೈಕ್ಷಣಿಕ ಸೇವೆಗಾಗಿ ಸಲ್ಲಿಸಿದ ಸೇವೆಯನ್ನು ಗುರ್ತಿಸಿ ಬಿಜಾಪುರದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ  ಸ್ವೀಕರಿಸಿದ್ದಾರೆ.

 ತುಮಕೂರಿನ  ಶ್ರೀ ಸಿದ್ಧಗಂಗಾ ಮಠವು ನೀಡುವ ಪ್ರತಿಷ್ಠಿತ ಬಸವ ಪ್ರಶಸ್ತಿಯನ್ನು ಕೆ ಬಿ ಜೆ ರವರು ಸ್ವೀಕರಿಸಿದ್ದಾರೆ.


ತುಮಕೂರಿನ ಜಿಲ್ಲಾಡಳಿತವು  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ  ಗೌರವಿಸಿದೆ.

 

2009 ರಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆಯು  ಉತ್ತಮ ಸಾಧಕ ಪ್ರಶಸ್ತಿ ನೀಡಿದೆ.


ಇವರ  ಸಾಮಾಜಿಕ ಸೇವೆಯನ್ನು ಗುರ್ತಿಸಿ ಕ್ಯಾತ್ಸಂದ್ರ ದ ಕೆ.ಬಿ.ಜೆ. ಅಭಿಮಾನಿ ಬಳಗವು ಪುರಸ್ಕಾರ ನೀಡಿ ಗೌರವಿಸಿದೆ.

 ಕವಿತಾಕೃಷ್ಣ ಸಾಹಿತ್ಯ ಮಂದಿರವು  ಶಿಕ್ಷಣ ಶ್ರೀನಿಧಿ ಎಂಬ ಬಿರುದು ನೀಡಿ ಸನ್ಮಾನಿಸಿದೆ.

ಇದರ   ಜೊತೆಗೆ ವಿವಿಧ ಕನ್ನಡ ಪರ ಸಂಘಟನೆಗಳು, ಕ್ರೀಡಾ ಹಾಗೂ ಕಲಾಸಂಘಗಳು, ಶಾಲಾ ಕಾಲೇಜುಗಳು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿಕ್ಷಕರ ಸಂಘಟನೆಗಳ ಗೌರವಗಳು. ಸಂದಿವೆ.

 ಅವರ  ಧರ್ಮಪತ್ನಿ  ಶ್ರೀಮತಿ ಡಿ.ಆರ್.ಪೂರ್ಣಿಮಾ ಜಯಣ್ಣನವರು ಕೆ ಬಿ ಜೆ ರವರ ಎಲ್ಲಾ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದಾರೆ.


ಸಂಘಟನೆ, ಹೋರಾಟ ಮತ್ತು   ಶಿಕ್ಷಣ ಇವು ವ್ಯಕ್ತಿಯ ವ್ಯಕ್ತಿತ್ವದ ನಿರ್ಣಾಯಕ ಅಂಶಗಳು. ಕೆ ಬಿ ಜೆ ರವರು ಈ ಮೂರು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಶ್ರೀಯುತರಿಗೆ ಭಗವಂತ ಆಯುರಾರೋಗ್ಯ ಕರುಣಿಸಲಿ ಎಂದು ಮನದುಂಬಿ ಹಾರೈಸುವೆನು.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಮತ್ತು ಸಾಹಿತಿಗಳು

ತುಮಕೂರು

9900925529



15 ಜನವರಿ 2024

ಎಲ್ಲರೊಳಗೊಂದಾಗು.ಚುಟುಕು.

 ಸ್ಪರ್ಧೆಗೆ..



*ಎಲ್ಲರೊಳಗೊಂದಾಗು*


ವಿದ್ಯೆ ಬುದ್ಧಿಯ ಪಡೆದು ದಾರ್ಶನಿಕನಾಗು 

ಗುರು ಹಿರಿಯರ  ಚರಣ

ಪದ್ಮಗಳಿಗೆ ಬಾಗು 

ಪರೋಪಕಾರಕ್ಕೆ ಮೊದಲು ಮುಂದಾಗು

ಭೇದ ಭಾವವನೆಣಿಸದೆ ಎಲ್ಲರೊಳಗೊಂದಾಗು.


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

07 ಜನವರಿ 2024

ರೈತರ ಶೋಷಣೆ ಮತ್ತು ಜಾತಿ ಪದ್ದತಿಯ ವಿರುದ್ದ ಸಿಡಿದೆದ್ದ #ಕಾಟೇರ...

 


ರೈತರ ಶೋಷಣೆ ಮತ್ತು ಜಾತಿ ಪದ್ದತಿಯ ವಿರುದ್ದ ಸಿಡಿದೆದ್ದ #ಕಾಟೇರ...


ಜಗತ್ತಿನಲ್ಲಿ ಇರೋದೆ ಕೆಲವು ಕಥೆಗಳು ಆ ಕಥೆಗಳನ್ನು ವಿಭಿನ್ನವಾಗಿ ಪ್ರಸ್ತುತಪಡಿಸುವವನೇ ಉತ್ತಮ ಕಥೆಗಾರ. ಅಂತಹ ಕಥೆಗಳನ್ನು ಸಶಕ್ತವಾಗಿ ಚಿತ್ರರೂಪ ನೀಡಿ ನಿರ್ದೇಶನ ಮಾಡಿ ಗೆದ್ದ ಚಿತ್ರ ಕಾಟೇರ. ವಾರದಲ್ಲೇ ಶತಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗೋ ಚಿತ್ರದ ಸೂತ್ರದಾರ ತರುಣ್  ಸುಧೀರ್ .

ರೀನಾ ಡಿಸೋಜಾ ಪಾತ್ರದಲ್ಲಿ ಶ್ವೇತಾ ಪ್ರಸಾದ್ ರವರು ಪೋರೆನ್ಸಿಕ್ ತಂಡದ ಜೊತೆಗೆ ತಲೆಬುರುಡೆಯ ಬಗ್ಗೆ ಸಂಶೋಧನೆ ಮಾಡುವ ಶಾಟ್ ನೊಂದಿಗೆ ಆರಂಭವಾಗುವ ಚಿತ್ರದ ಕೊನೆಯ ಫ್ರೇಮ್ ವರಗೆ ಟೈಟಲ್ ಕಾರ್ಡ್ ನೋಡುವವರೆಗೆ ಉಸಿರು ಬಿಗಿ ಹಿಡಿದು ನೋಡುವ ಸಿನಿಮಾ ಕಾಟೇರ. ದರ್ಶನ್ ರವರ ಮಾಮೂಲಿ ಸಿನಿಮಾಕ್ಕೆ ಹೋಲಿಸಿದರೆ ಇಲ್ಲಿ ಬೇರೆ ರೀತಿಯ ದರ್ಶನ್ ರವರ ದರ್ಶನವಾಗುತ್ತದೆ.

ಭೀಮನಹಳ್ಳಿಯ ಕಬ್ಬಿಣ ಕಾಸಿ ಬಡಿದು ಹತಾರ ಮಾಡುವ  ಕಾಟೇರ ತನ್ನ ಹಳ್ಳಿಯ ರೈತರಿಗೆ ಭೂಸುಧಾರಣಾ ಕಾಯಿದೆಯನ್ನು ಜಾರಿಗೆ ತರಲು ರೈತರನ್ನು ಊಳಿಗಮಾನ್ಯ ಭೂಮಾಲೀಕರಾದ ದೇವರಾಯ ಮತ್ತು ಕಾಳೇಗೌಡರಿಂದ ಪಾರು ಮಾಡಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಆ ಸವಾಲುಗಳನ್ನು ಕಾಟೇರ ಹೇಗೆ ಎದುರಿಸದ ಜಾತಿ ಪದ್ದತಿಗೆ ಹೇಗೆ ಸೆಡ್ಡು ಹೊಡೆದ  ಎಂಬುದನ್ನು ನೀವು ತೆರೆಯ ಮೇಲೆಯೇ ನೋಡಬೇಕು.ಈ ಚಿತ್ರದಲ್ಲಿ ದರ್ಶನ್ ಅಭಿನಯ ಬೇರೆಯೇ ಲೆವೆಲ್ ನಲ್ಲಿದೆ. 

ನಾನು ಸಿನಿಮಾ ನೋಡಿದ್ದು ಐನಾಕ್ಸ್ ರಾಯಲ್ ಸೀಟ್ ನಲ್ಲಿ ನನ್ನ ಪಕ್ಕ ಆರಾಮಾಗಿ ಮಲಗಿ ಸಿನಿಮ ನೋಡುವ ಸುಮಾರು ಅರವತ್ತು ವರ್ಷ ವಯಸ್ಸಿನ ವ್ಯಕ್ತಿ ಸಿನಿಮಾ ಅರಂಭವಾದ ಹತ್ತು ನಿಮಿಷಕ್ಕೆ ಸೀಟಿನ ತುದಿಗೆ ಕುಳಿತು ನೋಡಲಾರಂಬಿಸಿದರು.ಈ ಉದಾಹರಣೆ ಸಾಕು ಸಿನಿಮಾದ ಗುಣಮಟ್ಟ ತಿಳಿಸಲು. ಮಾಸ್ತಿಯವರ ಸಂಭಾಷಣೆ ಚಿತ್ರವನ್ನು ಇನ್ನೂ ಕಳೆಗಟ್ಟಿಸಿದೆ" ಗಂಡ್ಸಾದವ್ನು ಕೆಲ್ಸ ಮಾಡಿ ಬೆವ್ರು ಸುರ್ಸುಬೇಕಲೇ, ಹೆಣ್ ನೋಡಿ  ಜೊಲ್ ಸುರ್ಸ್ ಬಾರ್ದು" ಮುಂತಾದ ಡೈಲಾಗ್ ಜನರ ಮನ ತಾಗುತ್ತವೆ.

ತಾರಾಗಣದಲ್ಲಿ ಅನುಭವಿ ನಟ ನಟಿಯರು ಚಿತ್ರದ ಘನತೆಯನ್ನು ಹೆಚ್ಚಿಸಿದ್ದಾರೆ.

ಕಾಟೇರನಾಗಿ ದರ್ಶನ್ ಎರಡು ಶೇಡ್ ಗಳಲ್ಲಿ ಅಭಿನಯಿಸಿರುವುದು ಅವರ ಅಭಿಮಾನಿಗಳಿಗೆ ಡಬಲ್ ಧಮಾಕ.

ಪ್ರಭಾವತಿ ಪಾತ್ರದಲ್ಲಿ ಆರಾಧನಾ ರಾಮ್ ಮೊದಲ ಚಿತ್ರದಲ್ಲೇ ಅಭಿನಯದಲ್ಲಿ ಸೆಂಚುರಿ ಹೊಡೆದಿರುವರು.

ದೇವರಾಯನಾಗಿ ಜಗಪತಿ ಬಾಬು ಉತ್ತಮ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ.

ಮಹದೇವಣ್ಣ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಭಿನಯ ಸುಂದರ.

ಕಾಟೇರನ ಸಹೋದರಿ

ಕುಮಾರಿಯಾಗಿ ಶ್ರುತಿ ಅಭಿನಯ ಎಂದಿನಂತೆ ಉತ್ತಮ.

ಮಾತುಬಾರದ ನಾಟಕ ಕಲಾವಿದ 

ಚೋಂಗ್ಲಾ ಪಾತ್ರದಲ್ಲಿ ವೈಜನಾಥ ಬಿರಾದಾರ್ ಅಭಿನಯ ಕೆಲವೆಡೆ ನಗು ತಂದರೆ ಕೆಲವೆಡೆ ಕಣ್ಣು ತೇವವಾಗುತ್ತದೆ.

ಪುಟ್ಟರಾಜು ಪಾತ್ರದಲ್ಲಿ ಮಾಸ್ಟರ್ ರೋಹಿತ್ ಚುರುಕಾಗಿ ಅಭಿನಯಿಸಿದರೆ,

ಅವಿನಾಶ್ ಶಾನುಬೋಗನಾಗಿ ತಣ್ಣನೆಯ ವಿಲನ್ ಪಾತ್ರ ಮಾಡಿದ್ದಾರೆ.

ಕಾಳೇಗೌಡನಾಗಿ ವಿನೋದ್ ಕುಮಾರ್ ಆಳ್ವ ತೆರೆಯ ಮೇಲೆ ಮಿಂಚಿದ್ದಾರೆ.

ಸುಧಾಕರ್ ರವರ ಛಾಯಾಗ್ರಹಣ ಕಣ್ಣಿಗೆ ಹಬ್ಬ. ಸಂಕಲನಕಾರರಾದ ಕೆ ಎಮ್ ಪ್ರಕಾಶ್ ಚಿತ್ರ ವೇಗವಾಗಿ ಚಲಿಸಲು ತಮ್ಮದೇ ಯೋಗದಾನ ನೀಡಿದ್ದಾರೆ.ಹರಿಕೃಷ್ಣ ರವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್.ಸಂಗೀತಕ್ಕೆ ತಕ್ಕ ಚೇತನ್ ಕುಮಾರ್, ಯೋಗರಾಜ್ ಭಟ್ ಹಾಗೂ ನನ್ನ ನೆಚ್ಚಿನ ಗೀತ ರಚನೆಕಾರ ವಿ ನಾಗೇಂದ್ರ ಪ್ರಸಾದ್ ರವರ ಸಾಹಿತ್ಯ ಅತ್ಯುತ್ತಮ. 

ಈ ಚಿತ್ರ 70 ,80 ರ ದಶಕದ ಕಥೆ ಆಧಾರಿತ ಆದರೂ ಈಗಲೂ ಅಲ್ಲಲ್ಲಿ ಮರ್ಯಾದೆಗೇಡು ಹತ್ಯೆ, ಜಾತಿ ಪದ್ದತಿಯು ಆಚರಣೆ ನೋಡಿದರೆ ಇದು ಇಂದಿನ ಕಥೆಯೂ ಹೌದು.

 ಎಂಭತ್ತರ ದಶಕಕ್ಕೂ ಹಿಂದಿನವರು ಈ ಚಿತ್ರ ನೋಡಿ ತಮ್ಮ ಕಾಲದ ಜನ  ಜೀವನ ರಿವೈಂಡ್ ಮಾಡಿಕೊಳ್ಳಬಹುದು 

ಜಾತಿ ಪದ್ದತಿ, ಇಂದಿನ ಪೀಳಿಗೆಯ  ಯುವಕರು ಆ ಕಾಲದ ಜೀವನಪದ್ದತಿ ನೋಡಬಹುದು.ಒಟ್ಟಾರೆ ಇದು ಎಲ್ಲರೂ ನೋಡಬೇಕಾದ ಸಿನಿಮಾ ಕೊನೆಯದಾಗಿ ಇಂತಹ ಚಿತ್ರ ನಿರ್ಮಿಸಿದ ಧೀರ ರಾಕ್ಲೈನ್ ವೆಂಕಟೇಶ್ ರವರಿಗೆ ಅಭಿನಂದನೆ ಸಲ್ಲಿಸಲೇಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

03 ಜನವರಿ 2024

ಎರಡು ಹಾಯ್ಕುಗಳು

 


ಹಾಯ್ಕುಗಳು 


ಸತತ ಮೋಡ

ದಂಗಾದನು ದಿನಪ

ಬೆಳಕು ಎಲ್ಲಿ?



ರೈತಗೆ ಕಷ್ಟ

ದಂಗೆಯೇಳಬೇಕೇನು 

ಅನ್ನದಾತನು?


ಸಿಹಿಜೀವಿ ವೆಂಕಟೇಶ್ವರ

ತುಮಕೂರು