21 ಡಿಸೆಂಬರ್ 2023

ನೀರೆಯರಿಗೆ ಸೀರೆ ದಿನದ ಶುಭಾಶಯಗಳು.


 


ನೀರೆಯರಿಗೆ ಸೀರೆ ದಿನದ ಶುಭಾಶಯಗಳು.


 ನಮ್ಮ ಸಹೋದ್ಯೋಗಿಗಳೊಂದಿಗೆ  ಹೀಗೆ ಮಾತುಕತೆ ನಡೆಯುತ್ತಿತ್ತು. "ಅಯ್ಯೋ ನಮ್ ಮನೆ ಬೀರು ತುಂಬಾ ನಮ್ ಮನೇರ ಸೀರೇನೇ ಸರ್, ಆ ಬೀರ್ ನಲ್ಲಿ ಒಂದ್ ಮೂಲೇನಲ್ಲಷ್ಟೇ ನನ್ ಬಟ್ಟೆಗೆ ಜಾಗ" ಎಂದು ಅವರಿನ್ನೂ ಮಾತು ಮುಗಿಸಿರಲಿಲ್ಲ ಮತ್ತೊಬ್ಬ ಸಹೋದ್ಯೋಗಿ "ಅಯ್ಯೋ ನಮ್ ಮನೆ ಕಥೆನೂ ಅದೇ ಸಾ" ಎಂದರು.

ಇತ್ತೀಚಿನ ದಿನಗಳಲ್ಲಿ ನೈಟಿಯು ಸೀರೆಯ ಸ್ಥಾನ ಆಕ್ರಮಿಸಿಕೊಂಡಿದೆಯೇನೋ ಎಂಬ ಅನುಮಾನ ಮೂಡುತ್ತದೆ.


ನೀರೆಯರು

ಸೀರೆಯಿಂದ ದೂರ

ಪಾಶ್ಚಾತ್ಯ ಮೋಹ.


ಅವ್ಯಾವುದೋ ಪಾಶ್ಚಾತ್ಯ ಮಾದರಿಯ ಡ್ರೆಸ್ ಬಂದರೂ ನಮ್ಮ ಮಹಿಳೆಯರು ಸೀರೆ ಕೊಳ್ಳುವುದು ಮತ್ತು  ಉಡುವುದು ಕಮ್ಮಿಯಾಗಿಲ್ಲ.


ಗಂಡ ಹೆಂಡಿರ ನಡುವೆ ಜಗಳ ಆಗಲು ಸಾಮನ್ಯ ಕಾರಣಗಳಲ್ಲಿ ಸೀರೆ ಕೊಳ್ಳುವ ಕಾರಣಕ್ಕೆ ಹೆಚ್ಚು ಜಗಳವಾಗುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

ಇಂತಹ ಜಗಳ ನೋಡಿದ ಮೇಲೆ ನಾನು ಬರದ ಹನಿಗವನ...


ಪ್ರತಿ ಬಾರಿಯೂ

ನಾನು ಸೀರೆ ಕೊಡಿಸಿ

ಎಂದಾದಲೆಲ್ಲಾ ನಿರಾಕರಿಸುವಿರಿ

ನಿಮಗೆ ಅರ್ಥವಾಗುವುದಿಲ್ಲ

ನನ್ನ ಮನಸ್ಥಿತಿ|

ಅವನು ಗೊಣಗಿದ

ನಿನಗೂ ಅರ್ಥವಾಗುವುದಿಲ್ಲ

ನನ್ನ ಆರ್ಥಿಕ ಪರಿಸ್ಥಿತಿ||


ಸೀರೆ ಮಹತ್ವ ತಿಳಿದ ನಮ್ಮವರು ಸೀರೆಗೂ ಒಂದು ದಿನ ಮೀಸಲಿಟ್ಟಿದ್ದಾರೆ ಪ್ರತಿವರ್ಷ ಡಿಸೆಂಬರ್ 21 ನ್ನೂ ಸೀರೆ ದಿನವಾಗಿ ಆಚರಿಸಲಾಗುತ್ತದೆ.

ಸೀರೆಯ ವಿಧಗಳು ನೂರಾರು ಆಯಾ ಪ್ರಾಂತ್ಯ ಸಂಸ್ಕಾರ, ಸಂಪ್ರದಾಯದ ಆಧಾರದ ಮೇಲೆ ಹಲವಾರು ವಿಧಗಳಿವೆ.

ನಮ್ಮ ನಾಡಲ್ಲಿ ಸೀರೆ ಎಂದರೆ ತಟ್ಟನೆ ಹೊಳೆವುದು ಮೈಸೂರು ಸಿಲ್ಕ್ ಜೊತೆಯಲ್ಲಿ ‌ಇಳಕಲ್ ಮೊಳಕಾಲ್ಮೂರು ಸೀರೆಗಳು ಪ್ರಖ್ಯಾತಿ ಪಡೆದಿವೆ. 


ಆಂದ್ರ ಮತ್ತು ತೆಲಾಂಗಣದಲ್ಲಿ 

ಪೋಚಂಪಲ್ಲಿ ಸೀರೆ, ವೆಂಕಟಕಿರಿ ಸೀರೆ, ಗಡ್ವಾಲ್ ಸೀರೆ, ಗುಂಟೂರ ಸೀರೆ, ನಾರಾಯಣ ಪೇಠ್ ಸೀರೆ,ಮಂಗಲಮುರಿ ಸೀರೆ ,ಧರ್ಮಾವರಂ ಸೀರೆ ಎಂಬ ವಿಧಗಳಿವೆ.  ಬಿಹಾರ, ಚತ್ತೀಸ್ ಘಡ ದಲ್ಲಿ ಈರಿರೇಷ್ಮೆ ಸೀರೆ (ಕಾಡು ರೇಷ್ಮೆಯ ಸೀರೆ ) ಪ್ರಸಿದ್ಧ.

ಗುಜರಾತ್, ಹರ್ಯಾಣ, ಗಳಲ್ಲಿ

ತಾರಿನ್ ಜೋಯಿ ಬ್ರೋಕೇಡ್ಪ ,(ಪಟೋಲಾ ) ಟೋಲಾ ಸೀರೆ , 

ಕೇರಳದಲ್ಲಿ ಬಾಂಧಣಿ ಸೀರೆ , ಭಂದೇಜ ಸೀರೆ,ಬಕರಾಂಪುರಂ ಸೀರೆ ಹೆಚ್ಚು ಬಳಕೆಯಲ್ಲಿವೆ.


 ಈಶಾನ್ಯ ರಾಜ್ಯಗಳಲ್ಲಿ

ಚಂದ್ರಗಿರಿ ಸೀರೆ , ಮಹೆಶ್ವರಿ ಸೀರೆ  ಹೆಚ್ಚು ಜನಪ್ರಿಯ.

ತಮಿಳುನಾಡಿನಲ್ಲಿ

ಕಾಂಜೀವರಂ ಸೀರೆ, ಧರ್ಮಾವರಂ ಸೀರೆ, ಅರನಿ ಸೀರೆ, ಮಧುರೈ ಸೀರೆ, ಚಟ್ಟಿನಾಡು ಸೀರೆ, ಛಿನ್ನಲಪತ್ತಿ ಸೀರೆ, ಕೊಯಂಬತ್ತೋರ ಸೀರೆ ಬಹುಬೇಡಿಕೆ ಹೊಂದಿವೆ.

ಉತ್ತರ ಪ್ರದೇಶದಲ್ಲಿ  

ಬನಾರಸಿ ಸೀರೆ (ಬಫ್ಟಾ ಮತ್ತು ಅಮೃ ಶೈಲಿ), ಶಾಲು ಸೀರೆ, ಕಿಂಕಾಬ್ ಸೀರೆ 

ಪಶ್ಚಿಮ ಬಂಗಾಳದಲ್ಲಿ

ಜಾಮ್ದಾನಿ’ ಎಂಬ ಹೆಸರಿನ ಕುಸುರಿ ಕಲೆ ಹಾಗೂ ಜರಿಯುಳ್ಳ ಮಸ್ಲಿನ್ ಸೀರೆ, ಬಿರ್ ಭೌಮ್ ಸೀರೆ, ಕಲ್ಕತ್ತಾ ಕಾಟನ್ ಸೀರೆ ಧಾನಿಖಾಲಿ ಹತ್ತಿ, ಬುಲುಛರಿ, ಫುಲಿಯ ಮತ್ತು ಸಮುದ್ರಗಡದ ವಿಶಿಷ್ಟ ಸೀರೆಗಳು ಢಾಕಾ ಜಾಮ್ದಾನಿ, ಢಾಕಾ ಕಾಟನ್, ಢಾಕಾ ಸಿಲ್ಕ್, ಐದು ಗ್ರಾಂ ಸೀರೆ, ಕೈಯಿಂದ ನೇಯ್ದ ಫೂಲಿಯಾ, ತಾನ್‌ಚೂಡಿ ಸಿಲ್ಕ್, ಬಾಪಾ ಬುಟ್ಟಿ, ಓಂಕೈ ಕಾಟನ್, ಬನಾರಸಿ, ಟಾಂಗೈ ಬಾಲುಚೂಡಿ, ಮಲ್‌ಮಲೈ ಹೀಗೆ ಹಲವು ಬಗೆಯ ಸೀರೆಗಳು 

ಅಬ್ಬಾ! ನಮ್ಮ ಭಾರತದಲ್ಲಿ ಇಷ್ಟೆಲ ಸೀರೆಗಳ ವಿಧಗಳಿವೆ. ಕರ್ನಾಟಕದ ಸೀರೆಗಳ ಕೊಂಡೇ ನಮ್ಮ ಮನೆಗಳ ಬೀರುಗಳು ತುಂಬಿವೆ ಇನ್ನೂ ಈ ಸೀರೆಗಳ ಮಾಹಿತಿ ನಮ್ಮ ನೀರೆಯರಿಗೆ ಸಿಕ್ಕರೆ ನಮ್ಮ ಪುರುಷರನ್ನು ದೇವರೇ ಕಾಪಾಡಬೇಕು.

ಇರಲಿ ಎಲ್ಲಾ ನೀರೆಯರಿಗೆ ಸೀರೆ ದಿನದ ಶುಭಾಶಯಗಳು...


ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 ಡಿಸೆಂಬರ್ 2023

ನಿಸರ್ಗಕ್ಕೆ ಋಣಿಯಾಗಿರೋಣ.



 


ನಿಸರ್ಗಕ್ಕೆ ಋಣಿಯಾಗಿರೋಣ.


ನಿಸರ್ಗಕ್ಕೆ ನಾವು ಋಣಿಯಾಗಿರಬೇಕು ಎಂದು ಅಂತಃಪ್ರಜ್ಞೆ ಜಾಗೃತಿ ಕೇಂದ್ರದ ಸಂಸ್ಥಾಪಕರಾದ ಶ್ರೀನಿವಾಸ ಅರ್ಕ ಗುರೂಜಿಯವರು ಕರೆ ನೀಡಿದರು.


ಅನನ್ಯ ಕಾಲೇಜು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಗುರೂಜಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 


ನಮ್ಮ ಸುತ್ತಲಿನ ಪರಿಸರವನ್ನು ಗಮನಿಸಿದರೆ ಚಳಿ, ಮಳೆ, ಬಿಸಿಲು, ಬಿರುಗಾಳಿಯಂತಹ ವಿಭಿನ್ನ ಋತುಮಾನಗಳನ್ನು ಕಾಣುತ್ತೇವೆ.  ನಮಗೆ ನಿಸರ್ಗ  ಎಲ್ಲವನ್ನೂ ನೀಡಿದೆ. ಅದಕ್ಕೆ ನಾವು ಋಣಿಯಾಗಿರಬೇಕು.  ಯಾವಾಗಲೂ ಸಕಾರಾತ್ಮಕವಾಗಿರಬೇಕು. ಯಾವುದೇ ಸನ್ನಿವೇಶಗಳಲ್ಲಿ ರಚನಾತ್ಮಕ ದೃಷ್ಟಿಯಿಂದ ನೋಡುವ ಮನೋಭಾವವನ್ನು ನಾವು ಬೆಳೆಸಿಕೊಂಡಾಗ  ನಮ್ಮೊಳಗೆ ನಿರಾಳವಾದ ಹಾಗೂ  ಹಗುರ ಎಂದೆನಿಸುವ ಭಾವ ಒಡಮೂಡುತ್ತದೆ. ಇಂತಹ ಭಾವ ನಿಮ್ಮ ಉನ್ನತ ವ್ಯಕ್ತಿತ್ವ ರೂಪಿಸುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅದ್ಯಕ್ಷರಾದ ಗೀತಾ ನಾಗೇಶ್ ರವರು ಶ್ರೀನಿವಾಸ ಅರ್ಕ ಗುರೂಜಿಯವರು ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿತ್ವ ವಿಕಸನ ತರಬೇತುದಾರ ರಾಗಿದ್ದು ಅವರು ನೀಡುವ ಜ್ಞಾನದ ಸದುಪಯೋಗ ಪಡೆದು ನಿಮ್ಮ ವ್ಯಕ್ತಿತ್ವ ಉತ್ತಮಪಡಿಕೊಳ್ಳಿ, ಹಾಗೂ ಕನ್ನಡ ಭಾಷೆಯ ಮಹತ್ವ ಅರಿತು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳು ಕೈಜೋಡಿಸಿ ಎಂದು ನುಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡಿದ ಗುರೂಜಿಯವರು ವಿದ್ಯಾರ್ಥಿಗಳ ಸಂದೇಹಗಳಿಗೆ ಪರಿಹಾರ ಸೂಚಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಿಕ್ಕ ಬೆಳ್ಳಾವಿ ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಕಾರ್ಯದರ್ಶಿಗಳಾದ ಚಾಂದು, ಸಿಹಿಜೀವಿ ವೆಂಕಟೇಶ್ವರ,

ಅನನ್ಯ ಕಾಲೇಜಿನ ಪ್ರಾಂಶುಪಾಲರಾದ   ಡಾಕ್ಟರ್ ವಿಶ್ವಾಸ್  ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸುಗುಣದೇವಿ, ಲತಾ ವೆಂಕಟೇಶ್ ಅನನ್ಯ ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು. 

ಅಹಂಕಾರ...

 ಅಹಂಕಾರ.

ಸುಂದರ ಶಿಲೆಯಾಗಿ ಕೆತ್ತಬಹುದು ಕಲ್ಲನ್ನು ಇಲ್ಲದಿದ್ದರೂ ಯಾವುದೇ ಆಕಾರ|

ಬದಲಿಸಲಾಗುವುದೇ ಇಲ್ಲ

ಮನುಷ್ಯರಲ್ಲಿ ತುಂಬಿಕೊಂಡರೆ ಅಹಂಕಾರ||

18 ಡಿಸೆಂಬರ್ 2023

ಚಿತ್ತಾರ...


 ಓ ನಲ್ಲೆ..  ಮನೆಯ ಬಣ್ಣ ಮಾಸಿರಬಹುದು ಕೊಂಚ|

ಚಿತ್ತಾರ ಬಿಡಿಸುವೆನು ತನು,ಮನದಲಿ ಹಿಡಿದು ಕುಂಚ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

15 ಡಿಸೆಂಬರ್ 2023

ಹೊಣೆ ಯಾರು...?



 


ಯಾರು ಹೊಣೆ...

ಅವನ  ತಂದೆ ಸರ್ಕಾರಿ ನೌಕರಿಯಲ್ಲಿದ್ದರು.ಅವರ ಅಕಾಲಿಕ ಮರಣದಿಂದ ಆ ಹುಡುಗನ ಅಕ್ಕನಿಗೆ ಅನುಕಂಪದ ಸರ್ಕಾರಿ ನೌಕರಿ ದೊರೆಯಿತು. ನೌಕರಿಯ ಬಲದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಯಿತು. ಹೋಗಿ ಬರುವ ಪಯಣ
ಸುಮಾರು 100 ಕಿಲೋಮೀಟರ್ ಆದರೂ ಕೆಲಸ ಸಿಕ್ಕ ಖುಷಿಯಲ್ಲಿ ಅದೇನು ಅಷ್ಟು ತೊಂದರೆ ಎನಿಸಲಿಲ್ಲ.  ತನ್ನ ಹಳ್ಳಿಯಿಂದ ನಗರಕ್ಕೆ, ಪುನಃ ನಗರದಿಂದ ಮತ್ತೊಂದು ನಗರಕ್ಕೆ ಕೆಲಸ ಮಾಡಲು ಹೋಗಿ ಬರಬೇಕಾಗಿತ್ತು. ಆರಂಭದಲ್ಲಿ ಇದು ಕಷ್ಟವಾದರೂ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಅಷ್ಟೇ ಸಾಕು ಎಂದು ಬರು ಬರುತ್ತಾ ಕಷ್ಟದ ಜೀವನಕ್ಕೆ ಹೊಂದಿಕೊಂಡಿದ್ದಳು. ದೂರದ ಪ್ರಯಾಣವಾದ್ದರಿಂದ ಬಸ್ ಗಳು ಸಕಾಲದಲ್ಲಿ ಸಿಗದೆ ಕೆಲವೊಮ್ಮೆ ನಗರಕ್ಕೆ ತಲುಪುವುದೇ ರಾತ್ರಿ ಒಂಭತ್ತರ ಮೇಲಾಗುತ್ತಿತ್ತು.ಅಲ್ಲಿಂದ ಹಳ್ಳಿಯ ಮನೆ ಸೇರಲು ಮತ್ತೆ ಕಾಲು ಗಂಟೆ ಬೇಕಾಗುತ್ತಿತ್ತು.
ಕೆಲವು ದಿನ ಡ್ಯೂಟಿಯಿಂದ ರಾತ್ರಿ  ಲೇಟಾಗಿ ಬಂದರೆ ನಗರದಿಂದ ಅಕ್ಕನ ಕರೆತರಲು ಹತ್ತನೇ ತರಗತಿಯಲ್ಲಿ ಓದುವ ತಮ್ಮ ಪಕ್ಕದ ಮನೆಯ ಗೆಳೆಯ ನನ್ನು ಕರೆದುಕೊಂಡು ತನಗೆ ಪರಿಚಿತವಾಗಿರುವ ಅಂಕಲ್ ನಿಂದ  ಬೈಕ್ ಕೇಳಿ ಪಡೆದು ನಗರದಿಂದ ಹಳ್ಳಿಗೆ ಕರೆ ತರುತ್ತಿದ್ದ. ರಾತ್ರಿ ಹತ್ತರ ನಂತರ ಬರುವ ಮಗಳ ಸ್ಥಿತಿಯನ್ನು ನೋಡಿ " ಅಲ್ಲೇ ಟೌನ್ ನಲ್ಲಿ ಒಂದು ರೂಮೋ ಪಿ ಜಿ ನೋ ಮಾಡ್ಕಂಡಿರಮ್ಮ ರಾತ್ರಿ ಹೊತ್ತು ಇಂಗ್ ಬಂದ್ರೆ ಎಂಗಮ್ಮ" ಎಂದು ತಾಯಿ ಸಲಹೆ ನೀಡಿದ್ದರು. ಮಗಳು ಇದನ್ನು ನಯವಾಗಿಯೇ ನಿರಾಕರಿಸಿದ್ದಳು.
ತಂದೆಯ ಅನುಪಸ್ಥಿತಿಯಲ್ಲಿ ತಾಯಿ,  ಮಗಳು, ಮಗ ಸಂತೋಷವಾಗಿ ಜೀವನ ಸಾಗಿಸುತ್ತಿದ್ದರು. ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ..
ಅಂದು ರಾತ್ರಿ ಒಂಭತ್ತು ಗಂಟೆಗೆ ಅಕ್ಕ ಪೋನ್ ಮಾಡಿದರು.ತಮ್ಮನು  ಪಕ್ಕದ ಮನೆಯ ಅಂಕಲ್ ನಿಂದ  ಬೈಕ್ ಪಡೆದು ತನ್ನ ಗೆಳೆಯನ ಜೊತೆಯಲ್ಲಿ ನಗರದ ಕಡೆ ಸ್ವಲ್ಪ ಜೋರಾಗಿಯೇ ಎಕ್ಸಲೇಟರ್  ಒತ್ತಿದ. 
ಅತ್ತ ಅಕ್ಕ ಕಾಯುತ್ತಿದ್ದರು.ಈ ಮಧ್ಯ ರಾತ್ರಿ ಹತ್ತರ ಸಮಯದಲ್ಲಿ ಒಂಟಿ ಯುವತಿ ನಿಂತಿರುವುದನ್ನು ಕಂಡ ಪುಂಡರ ಗುಂಪು ಚುಡಾಯಿಸಲಾರಂಭಿಸಿದೆ.ಯುವತಿ ಅಲ್ಲಿಂದ ನಿಧಾನವಾಗಿ ಮುಂದೆ ಚಲಿಸಿದ್ದಾಳೆ. ಗಾಬರಿಯಿಂದ ತಮ್ಮನಿಗೆ ಮತ್ತೆ ಕರೆ ಮಾಡಿದಳು.ಕರೆ ಸ್ವೀಕರಿಸಿದ ತಮ್ಮ ಗಾಡಿಯ ಎಕ್ಸಲೇಟರ್ ಮತ್ತೂ ಒತ್ತಿದ.  ಸ್ಪೀಡೋಮೀಟರ್ ಮುಳ್ಳು ಏರುತ್ತಾ ಬೈಕ್ ಮುಂದೆ ಚಲಿಸಿತು.ಆಗಲೇ ಅವಘಡ ಸಂಭವಿಸಿದ್ದು! ಕ್ಷಣಾರ್ಧದಲ್ಲಿ   ಅತಿ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕರು ಆರು ಅಡಿ ಜಿಗಿದು ದೂರದಲ್ಲಿ ಬಿದ್ದರು. ರಸ್ತೆ ಅಕ್ಕ ಪಕ್ಕದ ಜನರು ಸೇರಿ ಮಕ್ಕಳ ಎತ್ತಿದ್ದರು.ಅಷ್ಟರಲ್ಲಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿತ್ತು. ಕಾರಿನ ಚಾಲಕನೂ ಗಾಯಗೊಂಡು ಆಸ್ಪತ್ರೆ ಸೇರಿದ.ಸ್ಥಳಕ್ಕೆ ಬಂದ ಪೋಲಿಸರು ಮಹಜರು ಮಾಡಿ ಬೈಕ್ ಮಾಲೀಕನನ್ನು ಪತ್ತೆ ಹಚ್ಚಿ ಅಪ್ರಾಪ್ತ ಬಾಲಕರಿಗೆ ಬೈಕ್ ಕೊಟ್ಟ ಅರೋಪದ ಮೇಲೆ ಬಂದಿಸಲಾಯಿತು. 
ಸ್ಥಳದಲ್ಲಿದ್ದ ಜನ ಆ ಬಾಲಕರ ಸ್ಥಿತಿಯನ್ನು ಕಂಡು ಮರುಗುತ್ತಿದ್ದರು.ಕೆಲವರು ಅದು ಕಾರ್ ನ ಚಾಲಕನ  ಅಜಾಗರೂಕತೆಯಿಂದ ಆದ ಅವಘಡ ಎಂದರೆ ಕೆಲವರು ಅಪ್ರಾಪ್ತ ಮಕ್ಕಳು ಬೈಕ್ ಯಾಕೆ ಓಡಿಸಬೇಕಿತ್ತು? ಎಂದು ಮಾತನಾಡುವ ವೇಳೆಯಲ್ಲಿ ಸ್ಥಳಕ್ಕೆ ಬಂದ ಸಹೋದರಿ ಈ ದುರ್ಘಟನೆಗೆ ನಾನೇ ಕಾರಣವೆಂದು ಗೋಳಾಡತೊಡಗಿದಳು.ಅಂಬುಲೆನ್ಸ್ ಶಬ್ದ ದೂರದಲ್ಲಿ ಕೇಳುತ್ತಿತ್ತು... ಪಾಪ  ಈ ಹುಡುಗ್ರ ಸಾವಿಗೆ ಯಾರ್ ಹೊಣೆ ಎಂದು ಪ್ರಶ್ನಿಸುತ್ತಿರುವಾಗ ಮೂಲೆಯಲ್ಲಿ ಬೆಡ್ ಶೀಟ್ ಹೊದ್ದು ನಿಂತ ವಯೋವೃದ್ದರು ಹಣೆ ಬರಹಕ್ಕೆ ಯಾರು ಹೊಣೆನಪ್ಪ? ಎಂದಾಗ ನೀರವ ಮೌನ ಆವರಿಸಿತು..

ಸಿಹಿಜೀವಿ ವೆಂಕಟೇಶ್ವರ
ತುಮಕೂರು