01 ಸೆಪ್ಟೆಂಬರ್ 2023

ಉದ್ಯೋಗ ಮತ್ತು ಆತ್ಮ ತೃಪ್ತಿ..

 


ಉದ್ಯೋಗ ಮತ್ತು ಆತ್ಮ ತೃಪ್ತಿ..

ಈಗ ಉದ್ಯೋಗಂ ಪುರುಷ ಲಕ್ಷಣ ಎಂಬ ಮಾತು ಬದಲಾಗಿ ಉದ್ಯೋಗ ಮಾನವ ಲಕ್ಷಣ, ರೋಬಾಟ್ ಲಕ್ಷಣ ಮುಂದುವರೆದು ಯಾಂಬು (ಯಾಂತ್ರಿಕ ಬುದ್ದಿ ಮತ್ತೆ) ಲಕ್ಷಣವಾಗಿದೆ.ಉದ್ಯೋಗ ಗಳಿಸಿದ ಕೂಡಲೆ ತಾನು ಮಾಡುವ
ಉದ್ಯೋಗ ಕ್ಷೇತ್ರದಲ್ಲಿ ನಿಂತ ನೀರಾಗಿರಲು ಯಾರೂ ಇಷ್ಟಪಡುವುದಿಲ್ಲ. ಆದರೆ ಕೆಲವೊಂದು ಕಾರಣಗಳಿಂದ ಹಲವು ವರ್ಷಗಳಿಂದ ಉದ್ಯೋಗದಲ್ಲಿ ಒಂದೇ ಸ್ಥಿತಿಯಲ್ಲಿ ಬಹುತೇಕರು ಇರುತ್ತಾರೆ. ಕರಿಯರ್ನಲ್ಲಿ ಪ್ರಗತಿಯಾಗದೆ ಇರುವುದಕ್ಕೆ ಹಲವು ಕಾರಣಗಳು ಇರಬಹುದು. ಕಂಪನಿಯ ಸ್ಥಿತಿ ಕಾರಣ ಇರಬಹುದು, ಕಂಪನಿಯೊಳಗಿನ ಪೈಪೋಟಿ ಕಾರಣ ಇರಬಹುದು. ಆದರೆ ಕರಿಯರ್ ಯಶಸ್ಸಿಗೆ ನಾವು ಕೂಡ ಕಾರಣ. ನಮ್ಮೊಳಗಿನ ಕೆಲವೊಂದು  ಮನೋಧೋರಣೆಗಳು, ತೊಂದರೆಗಳು ನಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ ಎಂಬುದು ನಮ್ಮ ಅರಿವಿಗೆ ಬರುವ ಮುನ್ನ ನಮ್ಮ ಕೆರಿಯರ್ ಗ್ರಾಪ್ ಏರದೇ ಕೆಲವೊಮ್ಮೆ ವಿರುದ್ಧ ದಿಕ್ಕಿನಲ್ಲಿ ಪಯಣಿಸಿದ ಉದಾಹರಣೆಗಳಿವೆ.

ಉತ್ತಮವಾದ ಹಾಗೂ ಪ್ರಗತಿಶೀಲ ಜೀವನ ನನ್ನದಾಗಬೇಕೆಂಬುದು ಪ್ರತಿಯೊಬ್ಬರ ಆಸೆ. ಹೀಗಾಗಿ ಮಹತ್ವಾಕಾಂಕ್ಷೆಯ ಹಂಬಲವಿರುವುದು ಮಾನವಸಹಜ ಗುಣ. ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಇನ್ನಷ್ಟು ಬೆಳೆಯಬೇಕು ಎನ್ನುವುದು ಬಹುತೇಕರ ಆಸೆ. ನಮ್ಮನ್ನು ನಾವು ಸುಧಾರಿಸಿಕೊಳ್ಳುವ ಮೂಲಕ  ಚಿಕ್ಕ ಚಿಕ್ಕ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ  ನಿರೀಕ್ಷಿತ ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ.

ಸ್ವಾಮಿ ವಿವೇಕಾನಂದರು ಹೇಳಿದಂತೆ ನಿನ್ನ ಮುಂದಿರುವ ಮತ್ತು ಹಿಂದಿರುವ ಶಕ್ತಿಗಿಂತ ನಿನ್ನೊಳಗಿನ ಶಕ್ತಿ ಅಧಿಕ ಆ ಶಕ್ತಿಯನ್ನು ಬಳಸಿಕೊಂಡು
ಸ್ವಯಂ ಬೆಳವಣಿಗೆಯ ಪಯಣ ಮುಂದುವರೆಸಬೇಕು.  ಹುಟ್ಟಿನಿಂದ ಚಟ್ಟದವರೆಗೆ  ಕಲಿಯುವುದು ಸಾಕಷ್ಟಿರುತ್ತದೆ.   ನಮ್ಮನ್ನು ನಾವು ಸುಧಾರಿಸುವ ಅವಕಾಶವೂ ಇರುತ್ತದೆ. ಆ ಅವಕಾಶ ಬಂದಾಗ ಸದುಪಯೋಗ ಪಡಿಸಿಕೊಳ್ಳಲು ಸದಾ ಕಾತರರಾಗಿರೋಣ.

ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಪುಸ್ತಕಗಳು ಬುದ್ಧಿಮತ್ತೆಯನ್ನು ಹೆಚ್ಚಿಸುವ ಮೂಲಗಳಾಗಿವೆ. ಹೆಚ್ಚೆಚ್ಚು ಪುಸ್ತಕಗಳನ್ನು ಓದಿದಂತೆಲ್ಲ ಹೆಚ್ಚು ಬುದ್ಧಿವಂತರಾಗುತ್ತೇವೆ  ನಮ್ಮನ್ನು ನಾವು ಜ್ಞಾನಸಮೃದ್ಧಗೊಳಿಸಿಕೊಳ್ಳಲು ಪುಸ್ತಕಗಳನ್ನು ಓದಲು  ಪ್ರಾರಂಭಿಸೋಣ. ಪ್ರಾರಂಭದಲ್ಲಿ ಪುಸ್ತಕ ಓದುವುದಕ್ಕೆ ಆಸಕ್ತಿ ಇರುವುದಿಲ್ಲ.ಓದಲು ಆರಂಭಿಸಿದೊಡನೇ ಬೋರ್ ಆಗಿ ಅದನ್ನು ಮುಚ್ಚಿಡಬೇಕೆನ್ನಿಸುತ್ತದೆ. ಆದರೂ ಪುಸ್ತಕ ಓದುವುದನ್ನು ನಿಲ್ಲಿಸಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಪುಸ್ತಕ ಓದುವ ಹವ್ಯಾಸ ಒಮ್ಮೆ ರುಚಿಸಿದರೆ ಅದರ ಮಜವೇ ಬೇರೆ ಕಳೆದ ವರ್ಷ ನನ್ನ ಕೆಲಸದ ಒತ್ತಡದ ನಡುವೆಯೂ ಐವತ್ತು ಕನ್ನಡ ಪುಸ್ತಕ ಓದಿರುವುದನ್ನು ನಾನು ಹೆಮ್ಮೆಯಿಂದ ಹೇಳುವೆ.

ಇದರ ಜೊತೆಗೆ ಬಹು ಭಾಷೆಯ ಕಲಿಕೆ ನಮ್ಮ ಕೆರಿಯರ್ ಬೆಳವಣಿಗೆಗೆ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿದೆ. ನಮ್ಮ ಮಾತೃಭಾಷೆ ಹಾಗೂ ಇಂಗ್ಲಿಷ್ ಗೊತ್ತಿದ್ದರೆ ಮಾತ್ರ ಸಾಕು ಎಂದುಕೊಳ್ಳಬೇಡಿ. ಹೇಗಾದರೂ ಸರಿ, ಬೇರೆ ಭಾಷೆಗಳನ್ನು ಕಲಿಯೋಣ. ಸಾಧ್ಯವಾದರೆ ಭಾಷಾ ಕೋರ್ಸ್ಗಳ ಮೂಲಕ, ಒಂದಾದರೂ ವಿದೇಶಿ ಭಾಷೆಯನ್ನು ಕಲಿಯುವುದು ಉತ್ತಮ. ಅನ್ಯ ಭಾಷೆಯನ್ನು ಕಲಿಯುವುದರಿಂದ ಹೊಸ ಕೌಶಲ ಬೆಳೆಸಿಕೊಂಡಂತಾಗುತ್ತದೆ ಜೊತೆಗೆ ಅಲ್ಲಿನ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ಈ ನಿಟ್ಟಿನಲ್ಲಿ ಈ ವರ್ಷದಿಂದ ನಾನು ಸಂಸ್ಕೃತ ಭಾಷೆಯನ್ನು ಕಲಿಯಲು ಆರಂಭಿಸಿರುವೆ.

ಇಂದಿನ ಆಧುನಿಕ ಜಗದಲ್ಲಿ ಇಂದು ಟ್ರೆಂಡಿಂಗ್ ನಾಳೆ ಹಳತಾಗುತ್ತದೆ.ಅದಕ್ಕೆ ತಕ್ಕಂತೆ ನಾವೂ ಅಪ್ಡೇಟ್ ಆಗುತ್ತಲೇ ಇರಬೇಕು ಇಲ್ಲದಿದ್ದರೆ ಔಟ್ಡೇಟ್ ಆಗುವ ಸಂಭವಿರುತ್ತದೆ. ನಾವು ಸೇರಬಹುದಾದ ಹೊಸ ಕೋರ್ಸ್ ಏನಾದರೂ ಇದೆಯೇ ಎಂಬುದನ್ನು ಪರಿಶೀಲಿಸಿ. ಹೊಸ ಜ್ಞಾನ ಮತ್ತು ಕೌಶಲಗಳನ್ನು ಗಳಿಸಲು ಕೋರ್ಸ್ಗಳು ಉಪಯುಕ್ತ. ಇದಕ್ಕಾಗಿ ದೀರ್ಘಾವಧಿಯ ಸೆಮಿನಾರ್  ವರ್ಕ್ಷಾಪ್ಗಳ ಅಗತ್ಯವಿಲ್ಲ. ಆನ್ಲೈನ್ ತರಬೇತಿಯಾದರೂ ಆದೀತು.  ಒಂದೆರಡು ವರ್ಕ್ಷಾಪ್ಗಳಿಂದಲೇ ಹೊಸ ಒಳದೃಷ್ಟಿಕೋನವನ್ನು ಪಡೆಯಬಹುದು.

ಕೆಲಸದ ಪರಿಸರ ಮತ್ತು ಮನೆಯ ಪರಿಸರ ನಮ್ಮ ಉದ್ಯೋಗದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ.ನಮ್ಮ ಸುತ್ತಮುತ್ತಲಿನ ಪರಿಸರವೂ ನಮಗೊಂದು ಒಳ್ಳೆಯ ಮೂಡ್ ತಂದುಕೊಡಬಲ್ಲದು. ನಾವು ವಾಸಿಸುವ  ಮತ್ತು ಕಚೇರಿಯಲ್ಲಿನ ಸ್ಥಳವು ಸ್ಪೂರ್ತಿದಾಯಕ ಪರಿಸರದಲ್ಲಿದ್ದರೆ ಅದುವೇ ನಮಗೆ ಪ್ರತಿದಿನವೂ ಪ್ರೇರಣೆ ನೀಡಬಲ್ಲದು.

ಉತ್ತಮ ಹವ್ಯಾಸಗಳು ನಮ್ಮ ಮಾನಸಿಕ ಆರೋಗ್ಯಕ್ಕೆ ಪೂರಕ.ಕೆಲವೊಮ್ಮೆ ಈ ಹವ್ಯಾಸಗಳು ನಮ್ಮ ವೃತ್ತಿ ಜೀವನದ ಬೆಳವಣಿಗೆಗೂ ಸಹಕಾರಿಯಾಗುತ್ತವೆ.
ನಮಗಿಷ್ಟವಾದ ಕೆಲವು ಹವ್ಯಾಸಗಳ ಜೊತೆಯಲ್ಲಿ. ಅದಲ್ಲದೇ ನಾವು ಕಲಿಯಬೇಕಿರುವ ಯಾವುದಾದರೂ ಆಟ ಇದೆಯೆ?. ಗಾಲ್ಫ್, ಚಾರಣ, ಬೆಟ್ಟ ಹತ್ತುವುದು, ಡ್ಯಾನ್ಸ್ ಇತ್ಯಾದಿಗಳಿಗೆ ಪ್ರಯತ್ನಿಸಿ ನೋಡಬಹುದು. ಏನಾದರೂ ಹೊಸತನ್ನು ಕಲಿಯುವುದರಿಂದ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕ ಯಾವುದಾದರೂ ವಿಭಿನ್ನ ದೃಷ್ಟಿಕೋನಗಳಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ.

ನಮ್ಮ ಕೆರಿಯರ್ ನಲ್ಲಿ ಮುಂದುವರೆಯಲು ಅನವಶ್ಯಕ ಹೆದರಿಕೆ ತ್ಯಜಿಸಬೇಕು.
ಹೆದರಿಕೆ ಎನ್ನುವುದು ಎಲ್ಲರಲ್ಲಿಯೂ ಇರುವಂಥಾದ್ದೇ. ಅನಿಶ್ಚಿತತೆಯ ಭೀತಿ, ಸಾರ್ವಜನಿಕವಾಗಿ ಮಾತನಾಡಲು ಅಂಜಿಕೆ, ರಿಸ್ಕ್ ತೆಗೆದುಕೊಳ್ಳುವಾಗಿನ ಗಾಬರಿ ಇವು ನಮ್ಮನ್ನು ನಾವಿರುವ ಸ್ಥಾನಕ್ಕೇ ಸೀಮಿತಗೊಳಿಸಿಬಿಡುತ್ತವೆ. ನಮ್ಮ ಬೆಳವಣಿಗೆಗೆ ಇವು ಅಡ್ಡಿಯಾಗಿಬಿಡುತ್ತವೆ. ಯಾವ ಕ್ಷೇತ್ರದಲ್ಲಿ ಬೆಳೆಯಬೇಕು ಎಂದುಕೊಳ್ಳುವಿರೋ ಅದರ ಮೇಲೆ ಹೆದರಿಕೆಯ ಛಾಯೆ ಬೀಳದಂತೆ ನೋಡಿಕೊಳ್ಳಬೇಕು.
ವಾಸ್ತವದಲ್ಲಿ ಜೀವಿಸುತ್ತಾ ಗತದಲ್ಲಿ ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಕಾಲಕಾಲಕ್ಕೆ ನಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ನಮ್ಮ ಕರ್ತವ್ಯ ನಿಭಾಹಿಸಿದರೆ ನಾವೊಬ್ಬ ಉತ್ತಮ ಕೆಲಸಗಾರರಾಗುವುದರಲ್ಲಿ ಸಂದೇಹವಿಲ್ಲ. ಒಟ್ಟಿನಲ್ಲಿ ಕೆಲಸ ಯಾವುದೇ ಇರಲಿ ಶ್ರದ್ಧೆಯಿಂದ ಬದ್ದತೆಯಿಂದ ಮಾಡಬೇಕು ಎಲ್ಲಕ್ಕಿಂತ ಮಿಗಿಲಾಗಿ ನಾವು ಮಾಡುವ ಕಾರ್ಯ ಆತ್ಮತೃಪ್ತಿ ನೀಡಬೇಕು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529


30 ಆಗಸ್ಟ್ 2023

ನೀ ಯಾವ ಮಲ್ಲಿಗೆ..?

 ಅನುಮಾನವಿಲ್ಲ...

ಗೆಳತಿ ನೀನೊಂದು ಮಲ್ಲಿಗೆ...

ಕೆಲವೊಮ್ಮೆ ಅನುಮಾನ..

 ನೀಕಾಡುಮಲ್ಲಿಗೆಯಾ? 

 ಸೂಜಿಮಲ್ಲಿಗೆಯಾ?ಜಾಜಿಮಲ್ಲಿಗೆಯಾ?ದುಂಡುಮಲ್ಲಿಗೆಯಾ?ಮೈಸೂರು ಮಲ್ಲಿಗೆಯಾ? ಮಂಗಳೂರು ಮಲ್ಲಿಗೆಯಾ?ಮುತ್ತುಮಲ್ಲಿಗೆಯಾ?

ಯಾವುದಾದರೇನಂತೆ...

ನೀನೇ ಸುಗಂಧ 

ನೀ ಜೊತೆಗಿದ್ದರೆ ಅದೇ ಚೆಂದ...


#ಸಿಹಿಜೀವಿ ವೆಂಕಟೇಶ್ವರ

ತುಮಕೂರು

29 ಆಗಸ್ಟ್ 2023

ಬಂಗಾರದ ಮನುಷ್ಯ...ನೀರಜ್


 #ಬಂಗಾರದ_ಮನುಷ್ಯ


#ಸಿಹಿಜೀವಿಯ_ಹನಿ*



 

ವಿಶ್ವ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ

ಭರ್ಜಿ ಎಸೆತದಲ್ಲಿ ಭಾರತಕ್ಕೆ ಬಂದಿದೆ

ಬಂಗಾರ| 

ಇನ್ನೇಕೆ ತಡ 

ಎಲ್ಲರೂ ಸೇರಿ

ಕುಣಿಯೋಣ ಬಾರ ||



ಭಾರತಕ್ಕೆ ಬಂಗಾರದ

ಪದಕ ತಂದಿದೆ

ನೀರಜ್ ಚೋಪ್ರ 

ರವರ ಭರ್ಜಿ ಎಸೆತ|

ಇಡೀ ಭಾರತ ಇಂದು

ಸಂತಸದಲ್ಲಿ ಹುಚ್ಚೆದ್ದು

ಕುಣಿಯುತ್ತಿದೆ ಸತತ||


ಸಿಹಿಜೀವಿ  ವೆಂಕಟೇಶ್ವರ

ತುಮಕೂರು.

28 ಆಗಸ್ಟ್ 2023

ದಿ‌ನಮಣಿ..


 



*ದಿನಮಣಿ*


ಜಗಕೆ ಬೆಳಕ ನೀಡುವ ತರಣಿ

ದಿನವೂ ಬರುವ ದಿನಮಣಿ 

ಅಪಾರವಾದ  ಶಕ್ತಿಯ ಗಣಿ 

ಕೃತಜ್ಞತೆಯಿಂದ ನೀ ಹಣೆ ಮಣಿ.


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

25 ಆಗಸ್ಟ್ 2023

ಅಂಬಿಕಾ I A S ...

 

ಅಂಬಿಕಾ I P S

ಅರ್ಧದಲ್ಲೇ ಶಾಲೆ ಬಿಟ್ಟ ಬಾಲಕಿ...ಬಾಲ್ಯಾವಿವಾಹವಾದ ಯುವತಿ ಇಂದು IPS ಅಧಿಕಾರಿ...

ಜೀವನದಲ್ಲಿ ಸಣ್ಣ ಪುಟ್ಟ ಅಡೆತಡೆಗಳನ್ನು ಎದುರಿಸಿದಾಗ ಎದೆಗುಂದಿ ತಮ್ಮ ಗುರಿಯೆಡೆಗೆ  ಸಾಗುವುದನ್ನು   ನಿಲ್ಲಿಸಿ ತಮ್ಮ ಹಣೆಬರಹ ಎಂದು ತಮ್ಮನ್ನೇ  ಹಳಿದುಕೊಂಡು ಕೆಲವೊಮ್ಮೆ ದೇವರ ಶಪಿಸುತ್ತಾ ತಲೆ ಮೇಲೆ ಕೈಹೊತ್ತುಕೊಂಡು ಕುಳಿತವರನ್ನು  ಬಹಳ ಮಂದಿಯನ್ನು ನೋಡುತ್ತೇವೆ.ಇದಕ್ಕೆ ಅಪವಾದವೆಂಬಂತೆ ಇಲ್ಲೊಬ್ಬ ಮಹಿಳೆ  ಛಲದಿಂದ ತನ್ನ ಗುರಿಸಾಧಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ.

ತಮಿಳುನಾಡು ಮೂಲದ ಆಕೆಯ ಹೆಸರು ಅಂಬಿಕಾ. ಬಾಲ್ಯವಿವಾಹ ಪದ್ದತಿಗೆ ಬಲಿಯಾಗಿ ಸಾಧಾರಣ ಗೃಹಿಣಿಯಾಗಿದ್ದ ಅಂಬಿಕಾ I P S ಪಾಸು ಮಾಡಿ ಅಧಿಕಾರಿಯಾಗಿರುವ ಕಥೆಯೇ ರೋಚಕ ಮತ್ತು ಸ್ಪೂರ್ತಿದಾಯಕ.

ತಮಿಳುನಾಡಿನ ಬಡ ಕುಟುಂಬದಲ್ಲಿ ಜನಿಸಿದ ಎನ್ ಅಂಬಿಕಾರವರಿಗೆ ಪೋಷಕರು    14 ವರ್ಷಕ್ಕೆ ಮದುವೆ ಮಾಡಿ ಬಿಟ್ಟರು. ಪತಿ ಪೊಲೀಸ್ ಪೇದೆಯಾಗಿದ್ದರು. 18ನೇ ವಯಸ್ಸಿಗೆ ಅವರು ಇಬ್ಬರು ಹೆಣ್ಣುಮಕ್ಕಳ ತಾಯಿಯಾದರು. ಜೀವನ ಸುಖವಾಗಿ ಸಾಗುತ್ತಿತ್ತು. ಇಬ್ಬರು ಮಕ್ಕಳ ತಾಯಿಯಾಗಿದ್ದ ಅಂಬಿಕಾ ಅವರು ಒಮ್ಮೆ ತಮ್ಮ ಪತಿಯೊಂದಿಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿ ಪತಿ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದರು. ಆ ಘಟನೆ  ಅಂಬಿಕಾ ರವರ ಜೀವನವನ್ನೇ ಬದಲಾಯಿಸುವ ಘಟನೆಯಾಗುತ್ತದೆ ಎಂದು ಸ್ವತಃ ಅವರಿಗೇ ಗೊತ್ತಿರಲಿಲ್ಲ. ತನ್ನ ಪತಿ ಇತರ ಅಧಿಕಾರಿಗೆ ಸೆಲ್ಯೂಟ್ ಹೊಡೆದ  ಆ ಕ್ಷಣ ಆಕೆಯ ಮನಸ್ಸಿನಲ್ಲಿ ಉಳಿಯಿತು.
ಪತಿ ನಮಸ್ಕರಿಸಿದ್ದು ಉನ್ನತ ಅಧಿಕಾರಿಗೆ ಎಂದು ಕೇಳಿ ತಿಳಿದುಕೊಂಡರು. ತಾನೂ ಅದೇ ರೀತಿ ಅಧಿಕಾರಿ ಆಗಬೇಕೆಂದು ದೃಢ ಸಂಕಲ್ಪ ಮಾಡಿದರು. ಆಗ ಅವರಿಗೆ ನೆನಪಾಯಿತು  ಪ್ರೌಢಶಾಲೆ ಅರ್ಧಕ್ಕೆ ಬಿಡಿಸಿ ಮದುವೆ ಮಾಡಿಸಿದ್ದು. ತಾನಿನ್ನೂ ಹತ್ತನೆ ತರಗತಿ ಪಾಸಾಗಿಲ್ಲ ಎಂದು ಅರಿವಿಗೆ ಬಂದ ಕ್ಷಣದಿಂದ   10ನೇ ತರಗತಿಯನ್ನು ದೂರ ಶಿಕ್ಷಣದ ಮೂಲಕ ಮಾಡಲು ಆರಂಭಿಸಿದರು. ಅದೇ ರೀತಿಯಲ್ಲಿ ಪಿಯು ಸಿ ಮತ್ತು ಪದವಿಯನ್ನು ಸಹ ಕರಾಸ್ಪಾಂಡನ್ಸ್ ಕೋರ್ಸ್ ಮೂಲಕ ಪೂರೈಸಿದರು.

ಪದವಿಯ ನಂತರ ಅಂಬಿಕಾ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಪ್ರಾರಂಭಿಸಲು ಬಯಸಿದ್ದರು. ಆದರೆ ಅವರು ವಾಸಿಸುತ್ತಿದ್ದ ಸ್ಥಳದಲ್ಲಿ UPSC ಪರೀಕ್ಷೆಗೆ ತಯಾರಾಗಲು ಕೋಚಿಂಗ್ ಸೆಂಟರ್ ಸೇರಿದಂತೆ ಯಾವುದೇ ಸೌಲಭ್ಯವಿರಲಿಲ್ಲ.
ಬೇರೆ ದಾರಿ ಇಲ್ಲದೆ ಯುಪಿಎಸ್ ಸಿ ಕೋಚಿಂಗ್ ಗಾಗಿ ಚೆನ್ನೈಗೆ ಹೋಗಲು ಅಂಬಿಕಾ ನಿರ್ಧರಿಸಿದ್ರು. ಮಕ್ಕಳನ್ನು ಬಿಟ್ಟು ಹೋಗುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು. ಆಗ ಅವರ ಪತಿ ಬೆಂಬಲ ನೀಡಿದರು.
ಅಂಬಿಕಾ ಅವರ ಯಶಸ್ಸಿನಲ್ಲಿ ಪತಿ ಪ್ರಮುಖ ಪಾತ್ರ ವಹಿಸಿದರು. ಅಂಬಿಕಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಮಕ್ಕಳನ್ನು ಪತಿಯೇ ನೋಡಿಕೊಂಡರು. ಆದರೆ ಕಠಿಣವಾದ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಂಬಿಕಾ ಮೊದಲ ಮೂರು ಬಾರಿ ಅನುತ್ತೀರ್ಣ ರಾದರು.

3 ವರ್ಷ ವಿಫಲರಾದಾಗ ಪತಿ ಅಂಬಿಕಾರನ್ನು ಮನೆಗೆ ಮರಳಲು ವಿನಂತಿಸಿದರು. ಆದರೆ ಅಂಬಿಕಾ ಪಟ್ಟು ಬಿಡದೆ ಕೊನೆಯ ಬಾರಿಗೆ ಪರೀಕ್ಷೆಗೆ ಹಾಜರಾಗಲು ಪತಿಯಿಂದ ಅನುಮತಿ ಕೋರಿದರು.
2008 ರಲ್ಲಿ ಅವರ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅಂಬಿಕಾ ತೇರ್ಗಡೆಯಾದರು. ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು  ತನ್ನ ನಾಲ್ಕನೇ ಪ್ರಯತ್ನದಲ್ಲಿ  ಯಶಸ್ವಿಯಾದರು. ಅವರು   ಪ್ರಸ್ತುತ ಐ ಪಿ ಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅವರ ದಿಟ್ಟ ಪೋಲಿಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕಾಗಿ ಜನರು ಅಭಿಮಾನದಿಂದ  ಲೇಡಿ ಸಿಂಗಂ ಎಂಬ ಬಿರುದು ನೀಡಿದ್ದಾರೆ.
ಮನಸ್ಸಿದ್ದರೆ ಮಾರ್ಗವುಂಟು ಸತತ ಪ್ರಯತ್ನಕ್ಕೆ ಸೋಲಿಲ್ಲ ಎಂಬುದಕ್ಕೆ ಅಂಬಿಕಾ ರವರು ಮಾದರಿಯಾಗಿ ನಿಂತಿದ್ದಾರೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529