23 ಆಗಸ್ಟ್ 2023

ಚಂದ್ರಯಾನ ಮೂರು...


 


ಚಂದ್ರಯಾನ ಮೂರು...


ಇಂದು ಚಂದ್ರನ ದಕ್ಷಿಣ ದೃವ

ತಲುಪಲಿದೆ  ಚಂದ್ರಯಾನ ಮೂರು|

ಭಾರತೀಯರ ವಿಕ್ರಮ ಕಂಡು 

ಗೊಗಳುವರು ಜಗದ ಜನರು ||


22 ಆಗಸ್ಟ್ 2023

ಕೂಲಿಯಿಂದ M B B S ಗೆ.....


 


ಕೂಲಿಯಿಂದ ಎಂ ಬಿ ಬಿ ಎಸ್ ಗೆ ...

ಬಹುತೇಕ ಎಲ್ಲಾ ಪೋಷಕರ ಆಸೆ ತಮ್ಮ ಮಕ್ಕಳನ್ನು ಡಾಕ್ಟರ್ ಅಥವಾ ಇಂಜಿನಿಯರಿಂಗ್ ಮಾಡಬೇಕು ಎಂಬುದು. ಇದಕ್ಕೆ ತಯಾರಿ ಮಾಡಲು ಐದನೇ ತರಗತಿಯಿಂದ ನೀಟ್ ಜೆ ಇ ಇ ಪರೀಕ್ಷೆಯ ಕೋಚಿಂಗ್ ಇರುವ ಶಾಲೆಗಳಿಗೆ ಲಕ್ಷಾಂತರ ಹಣ ಸುರಿದು ದಾಖಲು ಮಾಡುವರು. ಅಪ್ಪಿತಪ್ಪಿ ಮೊದಲ ಪ್ರಯತ್ನದಲ್ಲಿ ನೀಟ್ ಸಕ್ಸಸ್ ಆಗದಿದ್ದರೆ ಮತ್ತೊಂದಷ್ಟು ಲಕ್ಷ ಕಟ್ಟಿ ಲಾಂಗ್ ಟರ್ಮ್ ದಂಡಯಾತ್ರೆ ಶುರುಮಾಡುತ್ತಾರೆ.ಆಗಲೂ ಸೀಟ್ ಸಿಗದಿದ್ದರೆ ಬಾರಿ ಕುಳಗಳು ಕೋಟಿ ಸುರಿದು ಪ್ರೈವೇಟ್ ಎಂ ಬಿ ಬಿ ಎಸ್ ಕಾಲೇಜಗಳಲ್ಲಿ ದಾಖಲು ಮಾಡಿಯೇ ಬಿಡುತ್ತಾರೆ.ಒಟ್ಟಿನಲ್ಲಿ ನಮ್ಮ ಮಗ ಅಥವಾ ಮಗಳು ಡಾಕ್ಟರ್ ಆಗಲೇಬೇಕು ಎಂಬುದು ಪೋಷಕರ ದೃಢವಾದ ನಿರ್ಧಾರ! ಇನ್ನೂ ಕೆಲವರು ತಮ್ಮ ಮಕ್ಕಳನ್ನು ವಿದೇಶಗಳಿಗೆ ಕಳಿಸಿ ಡಾಕ್ಟರ್ ಮಾಡುವುದೂ ಉಂಟು.
ಇದು ಉಳ್ಳವರ ಕಥೆಯಾದರೆ ಬಡ ಮತ್ತು ಮದ್ಯಮ ವರ್ಗದ ಪೋಷಕರು ಎಟುಕದ ದ್ರಾಕ್ಷಿ ಉಳಿ ಎಂಬಂತೆ ಪಿ ಯು ಸಿ ನಂತರ ಇತರ ಕೋರ್ಸ್ ಸೇರುತ್ತಾರೆ.
ಆದರೆ ಇಲ್ಲೊಬ್ಬ ಯುವಕ ಬಡ ಕುಟುಂಬದಲ್ಲಿ ಜನಿಸಿ ,ಕೂಲಿ ಮಾಡುತ್ತಾ, ಸಂಸಾರ ನಿಭಾಯಿಸುತ್ತಾ  ತನ್ನ ಬಲವಾದ ಇಚ್ಚಾಶಕ್ತಿ ಮತ್ತು ಬದಲಾಗದ ಗುರಿಯನ್ನು ಸಾಧಿಸಲು ತನ್ನ 33 ನೇ ವಯಸ್ಸಿನಲ್ಲಿ M B B S ಸೀಟ್ ಪಡೆದು ಈ ವರ್ಷ ಕಾಲೇಜಿಗೆ ಸೇರಿದ್ದಾನೆ ಮತ್ತು ಡಾಕ್ಟರ್ ಆಗಲು ನಾಲ್ಕೂವರೆ ಹೆಜ್ಜೆ ಮಾತ್ರ ಬಾಕಿ..
12 ನೇ ತರಗತಿ ಮುಗಿದ ಮೇಲೆ 15 ವರ್ಷ ಕೂಲಿ ಕಾರ್ಮಿಕನಾಗಿ ದುಡಿದು  ನಂತರ ಎಂ ಬಿ ಬಿ ಎಸ್ ಸೀಟು ಪಡೆದ ಒಡಿಶಾದ ಕೃಷ್ಣ ಚಂದ ಅಟಕಾ ರವರ ಸಾಧನೆ ಯುವಕರಿಗೆ ಖಂಡಿತವಾಗಿಯೂ ಪ್ರೇರಣಾದಾಯಕ . 
ಅವರ ಸಾಧನೆಯ ಪಥವನ್ನು ಅವರ ಬಾಯಲ್ಲೇ ಕೇಳೋಣ ಬನ್ನಿ. 

ನಾನು ಒಡಿಶಾದ  ಬುಡಕಟ್ಟಿನ ಯುವಕ    ರಾಯಗಡ ಜಿಲ್ಲೆಯ ಬಿಸ್ಸಂಕಟಕ ಬ್ಲಾಕ್ನ  ಥುಪಾಡಿ ಎಂಬುದು ನಮ್ಮ ಗ್ರಾಮ. ನಮ್ಮ ತಂದೆಗೆ ನಾವು
ಐದು ಮಕ್ಕಳು.  ಒಂದು ಎಕರೆ ಮಾತ್ರ  ಅನುತ್ಪಾದಕ ಕೃಷಿ ಭೂಮಿಯಿದೆ.ಜೀವನಕ್ಕೆ ಕೂಲಿಯೇ ಆಧಾರವಾಗಿತ್ತು. ಕಷ್ಟಕರ ಜೀವನದ ನಡುವೆಯೂ  2006 ರಲ್ಲಿ 58% ಗಳಿಸುವ ಮೂಲಕ  ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾದೆ.
ನಾನು ಪಿ ಯು ಸಿ ಪಾಸ್ ಆಗಿ ಡಾಕ್ಟರ್ ಓದಲು ಆಸೆ ಇತ್ತು ಆದರೆ ಮನೆಯಲ್ಲಿ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿತ್ತು.
ನನ್ನ ಹೆತ್ತವರು ಜೀವನ ನಿರ್ವಹಣೆಗೆ ಹೆಣಗಾಡುತ್ತಿದ್ದ ಸಮಯದಲ್ಲಿ, ನನ್ನ ಆದ್ಯತೆ ಓದು ಆಗಿರಲಿಲ್ಲ.  ನನ್ನ ಮೂವರು ಕಿರಿಯ ಸಹೋದರರು ಕೂಡಾ ಸಂಸಾರ ನಿಭಾಯಿಸಲು ಕೆಲಸ ಮಾಡಲು ಪ್ರಾರಂಭಿಸಿದರು ಒಬ್ಬ ಮೇಸ್ತ್ರಿಯಾಗಿ , ಮತ್ತೊಬ್ಬ ಮೋಟಾರ್ ಮೆಕ್ಯಾನಿಕ್ ಆಗಿ   ಮತ್ತು ಮೂರನೆಯವನು   ಕೃಷಿಭೂಮಿಯಲ್ಲಿ  ಕೂಲಿಯಾಗಿ, ಕೆಲಸ ಮಾಡುತ್ತಿದ್ದ.
ಆದರೂ ಮನೆಯ ಖರ್ಚು ವೆಚ್ಚ ಹೆಚ್ಚಾಗುತ್ತಲೇ ಇತ್ತು. ಇದನ್ನು ಮನಗಂಡು  ಬಿ.ಎಸ್ಸಿಗೆ ಪ್ರವೇಶ ಪಡೆದರೂ, ಅರ್ಧದಲ್ಲೇ ಓದು ನಿಲ್ಲಿಸಿ
ಮನೆಗೆ ಹಿಂತಿರುಗಿದೆ. ಗದ್ದೆಯಲ್ಲಿ ದಿನವಿಡೀ  ಕಷ್ಟಪಟ್ಟು ದುಡಿಯುತ್ತಿದ್ದೆ.ಆದರೆ ನನಗೆ ಸಿಗುತ್ತಿದ್ದ ದಿನಗೂಲಿ  ಕೇವಲ  100ರೂಪಾಯಿ!  ಯಾರೋ ಕೇರಳದಲ್ಲಿ ಉತ್ತಮ ಕೂಲಿ ನೀಡುವರು ಎಂದು ಕೇಳಿ ಕೇರಳಕ್ಕೆ ವಲಸೆ ಬಂದೆ.
 ಪೆರುಂಬವೂರಿನಲ್ಲಿ ಮೊದಲ ಕೆಲವು ತಿಂಗಳುಗಳು ನನಗೆ ಕೆಲಸಕ್ಕೆ ತಕ್ಕ ಕೂಲಿ ಸಿಗಲೇ ಇಲ್ಲ. ಮತ್ತೆ ನನ್ನ ಅಲೆಮಾರಿ ದಿನಚರಿ ಮುಂದುವರೆಯಿತು.ಕೊಟ್ಟಾಯಂನಲ್ಲಿರುವ ಬೆಂಕಿಕಡ್ಡಿ ತಯಾರಿಕಾ ಘಟಕದಲ್ಲಿ  ಕೆಲಸಕ್ಕೆ ಸೇರಿದೆ
ಅಲ್ಲಿಯೂ ನಾನು ಹಣಕ್ಕಾಗಿ ಹೆಣಗಾಡಿದೆ.
2014 ರಲ್ಲಿ ತೌಪಾಡಿಗೆ ಹಿಂದಿರುಗಿದೆ ಅಲ್ಲಿಯೇ   ಕೃಷಿ ಕಾರ್ಮಿಕನಾಗಿ ಕೆಲಸ ಮಾಡಿದೆ. ಇದೇ ವೇಳೆಯಲ್ಲಿ ನನ್ನ ಜೀವನದಲ್ಲಿ ಮತ್ತೊಂದು ತಿರುವು ಕಂಡಿತು. ನನ್ನ ಮನೆಯವರು ನನಗೆ ಮದುವೆ ಮಾಡಲು ನಿಶ್ಚಯಿಸಿ, ಹೆಣ್ಣು ಗೊತ್ತುಪಡಿಸಿದರು. ಮದುವೆಯ ಹೆಣ್ಣು ಮಿಟ್ಟುಲ  ಒಪ್ಪಿದರೂ ಅವರ ತಂದೆ ಬಡತನದ ಕುಟುಂಬಕ್ಕೆ ಮಗಳ ಕೊಡಲು ಒಪ್ಪಲಿಲ್ಲ. ಕೊನೆಗೆ ಮಿಟ್ಟುಲ ಳ  ಹಠಕ್ಕೆ ಮಣಿದು ಅವರ ತಂದೆ ನನಗೆ ಮಗಳ ನೀಡಿ ಮದುವೆ ಮಾಡಿದರು. ನಮಗೀಗ ಒಬ್ಬ  ಮಗಳು ಮತ್ತು ಬ್ಬ ಮಗನಿದ್ದಾನೆ.
ನಾನು ಕೃಷಿ ಕೂಲಿಯಾಗಿ ಕೆಲಸ ಮಾಡುವಾಗ  ನನ್ನ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರೋತ್ಸಾಹದ ಮಾತುಗಳು ನನ್ನ ಕಿವಿಯಲ್ಲಿ ರಿಂಗಣಿಸುತ್ತಲೇ ಇದ್ದವು. ಡಾಕ್ಟರ್ ಆಗುವ ನನ್ನ ಬಯಕೆ ತೀವ್ರವಾಯಿತು.  2021 ರಲ್ಲಿ  ನಾನು ತರಬೇತಿ ಕೋರ್ಸ್ಗೆ ಸೇರಿಕೊಂಡೆ ಮತ್ತು ನೀಟ್   ಪರೀಕ್ಷೆಗೆ ತಯಾರಿಗಾಗಿ ಬರ್ಹಾಂಪುರದಿಂದ  ಪುಸ್ತಕಗಳನ್ನು ಖರೀದಿಸಿ ಓದಲು  ಪ್ರಾರಂಭಿಸಿದೆ ಕೂಲಿ ಮಾಡುತ್ತಲೇ ಓದುತ್ತಾ 2022 ರಲ್ಲಿ ನೀಟ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದರೂ   ಹಣದ ಕೊರತೆಯಿಂದ ಕೌನ್ಸೆಲಿಂಗ್ ಗೆ  ಹೋಗಲಾಗಲಿಲ್ಲ. 2023 ರಲ್ಲಿ   ಮತ್ತೊಮ್ಮೆ NEET  ಪರೀಕ್ಷೆ ಬರೆದೆ. 7,18,996 ರ ಅಖಿಲ ಭಾರತ ಶ್ರೇಣಿಯನ್ನು ಮತ್ತು 3,902 ರ ರಾಜ್ಯ ಶ್ರೇಣಿಯನ್ನು ಪಡೆದೆ.
ಮತ್ತೆ ಅವಕಾಶ ಕೈತಪ್ಪಿ ಹೋಗಬಾರದು ಎಂದು ನಿರ್ಧರಿಸಿ ನಮ್ಮ ಗ್ರಾಮದ ಲೇವಾದೇವಿದಾರರೊಬ್ಬರ ಬಳಿ ಪ್ರವೇಶ ಶುಲ್ಕವಾಗಿ ₹37,950 ಸಾಲ ಪಡೆಯಲು ಮುಂದಾದೆ. ಆಶ್ಚರ್ಯಕರ ಸಂಗತಿಯೆಂದರೆ, ಸಾಲಗಾರನು ತಾನು ಬಡ್ಡಿಯನ್ನು ವಿಧಿಸುವುದಿಲ್ಲ ಎಂದು ಹೇಳಿದರು.
ಈ ಬಾರಿ ಕುಟುಂಬ ಸದಸ್ಯರು ನನ್ನ ಬೆಂಬಲಕ್ಕೆ ನಿಂತಿದ್ದಾರೆ.
ಕಲಹಂಡಿಯ  ಸಾಹಿದ್ ರೆಂಡೋ ಮಜ್ಜಿ ವೈದ್ಯಕೀಯ ಕಾಲೇಜಿನಲ್ಲಿ M B B S  ಗೆ  ದಾಖಲಾಗಿರುವೆ. ನಮ್ಮ ಊರಿನಲ್ಲಿ ಅನಾರೋಗ್ಯದ ಪರಿಣಾಮವಾಗಿ ಹತ್ತಿರದಲ್ಲಿ ಯಾವುದೇ ಡಾಕ್ಟರ್ ಮತ್ತು  ಆಸ್ಪತ್ರೆ  ಇಲ್ಲದೆ ಹಲವಾರು ಜೀವಗಳು ಬಲಿಯಾಗಿವೆ.ನಾನು ಡಾಕ್ಟರ್ ಆಗಿ ನಮ್ಮ ಊರು ನಮ್ಮ ನಾಡಿನಲ್ಲಿ ಸೇವೆ ಮಾಡುವೆ.
ಎಂದು ಕೃಷ್ಣ ಚಂದ ಅಟಕಾ ರವರು  ಆತ್ಮವಿಶ್ವಾಸದಿಂದ ಹೇಳುವಾಗ ನಂಬಿಕೆ ,ಶ್ರದ್ದೆ,ಛಲವನ್ನು ಮೈಗೂಡಿಸಿಕೊಂಡು ಗುರಿಯೆಡೆಗೆ ಸಾಗುವವರಿಗೆ ಯಾವುದೂ ಅಸಾಧ್ಯವಲ್ಲ ಎಂಬುದು ಮನವರಿಕೆಯಾಗುತ್ತದೆ.ಕೃಷ್ಣ ಚಂದ ಅಟಕಾರವರು ಡಾಕ್ಟರ್ ಆಗಿ ಜನಸೇವೆಯಲ್ಲಿ ತೊಡಗಲಿ ಎಂದು ನಾವೆಲ್ಲರೂ ಹಾರೈಸೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

20 ಆಗಸ್ಟ್ 2023

ಸಿಹಿಜೀವಿಯ ಹನಿಗಳು...

 


ಸಿಹಿಜೀವಿಯ ಹನಿಗಳು 


ಕವನವಾಸ....


ಹದಿನಾಲ್ಕು ವರ್ಷ ಪಾಂಡವರು

ಕಾಡಿನಲ್ಲಿ ಮಾಡಿದರು ವನವಾಸ|

ಕವಿತೆಗಳೊಂದಿಗೆ  ಕವಿ ಹದಿನಾಲ್ಕು ವರ್ಷ ಕಳೆದ ಅದು ಕವನವಾಸ||


ನೆನೆದವರ ಮನದಲ್ಲಿ...


ನಾವು ಮನಸಿನಲ್ಲಿ ಅಂದುಕೊಂಡವರು ಮುಂದೆ ಬಂದರೆ 

ನೆನೆದವರ ಮನದಲ್ಲಿ ||

ಮಳೆಯಲ್ಲಿ ನೆನೆಯುವವರ ಮನದಲ್ಲಿ ನಾವು ಇದ್ದರೆ  ಅದೂ ಕೂಡಾ ನೆನೆದವರ ಮನದಲ್ಲಿ|| 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 ಆಗಸ್ಟ್ 2023

ಶ್ರಾವಣ ಮತ್ತು ಸಣ್ಣಪ್ಪ...

 


ಶ್ರಾವಣ ಮತ್ತು ಸಣ್ಣಪ್ಪ...


ಶ್ರಾವಣ ಪದವೇ ಒಂದು ಸಂಭ್ರಮ. ಬೇಂದ್ರೆ ಅಜ್ಜ ಹೇಳಿದಂತೆ ಶ್ರಾವಣ ಬರೀ ನಾಡಿಗೆ ಬರದೇ ಕಾಡಿಗೆ ಸಕಲ ಜೀವಿಗಳಿಗೆ ಹೊಸ ಚೈತನ್ಯ ಮೂಡಿಸುತ್ತದೆ. ಶ್ರಾವಣವೆಂದರೆ ಹೊಲ ಗದ್ದೆಗಳು ಹಸಿರೊದ್ದು ನಲಿವ ಕಾಲ. ಹಬ್ಬಹರಿದಿನಗಳ ಶ್ರದ್ಧಾ ಭಕ್ತಿಯ ಆಚರಣೆಗಳ ಕಾಲ. ನಾಡಿನ ಬಹುತೇಕ ಕಡೆ ಶ್ರಾವಣ ಶನಿವಾರ ಮತ್ತು ಸೋಮವಾರಗಳನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಕೆಲವೆಡೆ ಧಾರ್ಮಿಕ ಪುರಾಣಗಳನ್ನು ಶ್ರದ್ಧಾ ಭಕ್ತಿಯಿಂದ ಪಾರಾಯಣ ಮಾಡುವರು ಜೊತೆಗೆ ಕೆಲ ವ್ರತಗಳನ್ನು ಆಚರಿಸುವರು.ಅದರಲ್ಲಿ ಪ್ರಮುಖವಾದ ವ್ರತವೆಂದರೆ ವರಮಹಾಲಕ್ಷಿ ವ್ರತ. ಮೊದಲು ಕೆಲವೇ ಜನರು ಆಚರಿಸುತ್ತಿದ್ದ ವರಮಹಾಲಕ್ಷ್ಮಿ ಹಬ್ಬ ಇಂದು ಹಳ್ಳಿಗಳಿಗೂ ವ್ಯಾಪಿಸಿ ಸಾಂಸ್ಕೃತಿಕ ಬದಲಾವಣೆ ಮತ್ತು ಸಾಮಾಜಿಕ ಬದಲಾವಣೆಗೂ ಸಾಕ್ಷಿಯಾಗಿದೆ. ಶ್ರಾವಣ ಮಾಸವು ನನ್ನ ಬಾಲ್ಯವನ್ನು  ಬಹು ಸಂತಸಗೊಳಿಸಿದೆ ಅದಕ್ಕೆ ಶ್ರವಣಕ್ಕೆ ಧನ್ಯವಾದಗಳನ್ನು ಹೇಳಲೇಬೇಕು. ನಮ್ಮ ಬಾಲ್ಯದ ದಿನಗಳಲ್ಲಿ ನಮ್ಮ ಊರ ಸುತ್ತ ಮುತ್ತಲಿನ ಊರುಗಳಲ್ಲಿ ಶನಿವಾರಗಳಂದು ಶನಿಮಹಾತ್ಮೆ ಓದುವ ಮತ್ತು ಓದಿಸುವ ಕಾರ್ಯ ಸಾಮಾನ್ಯವಾಗಿತ್ತು ಆಗ ಶನಿಮಹಾತ್ಮೆ ಕಥೆ ಓದಲು ಎಲ್ಲರಿಗೂ ಬರುತ್ತಿರಲಿಲ್ಲ ಕಾರಣವೆಂದರೆ ಆ ಪುಸ್ತಕದಲ್ಲಿ ಬರುವ ,ಜಂಪೆ ತ್ರಿಹುಡಿ, ಆದಿತಾಳ ಮುಂತಾದ ಸಂಗೀತ ತಾಳ ಲಯಬದ್ಧವಾಗಿ ಓದಬೇಕಿತ್ತು. ಇದರಿಂದಾಗಿ  ಸಾಮಾನ್ಯವಾಗಿ ಓದಲು ಬರುವ ಎಲ್ಲರಿಗೂ ಸುಲಭವಾಗಿ ಶನಿಮಹಾತ್ಮೆ ಓದಲಾಗುತ್ತಿರಲಿಲ್ಲ. ನಮ್ಮ ಬೀದಿಯಲ್ಲಿ ನಮ್ಮ ಮನೆಯ ಪಕ್ಕದಲ್ಲೇ ವಾಸವಿದ್ದ ಸಣ್ಣಪ್ಪ ಶನಿಮಹಾತ್ಮೆ ಓದಲು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಹಳ ಪ್ರಸಿದ್ಧರು. ಕೃಷ ದೇಹದ ಸಣ್ಣಪ್ಪ ನವರು ಅರವತ್ತು ದಾಟಿದ್ದರೂ ಅವರ  ಕಂಚಿನ ಕಂಠ ಇತರ ಬೀದಿಗೂ ಕೇಳಿಸುತ್ತಿತ್ತು. ಅವರು ಶನಿಮಹಾತ್ಮೆ ಓದಲು ನಮ್ಮ ಊರು ಮತ್ತು  ಬೇರೆ ಹಳ್ಳಿಗಳಿಗೆ ಹೊರಟರೆ ನನಗೆ ಖುಷಿಯೋ ಖುಷಿ ಯಾಕಂದರೆ ಮರುದಿನ ನನಗೆ ಮತ್ತು ಅವರ ಮಗ ಹಾಗೂ ನನ್ನ ಗೆಳೆಯ ಸೀನನಿಗೆ ಸಣ್ಣಪ್ಪರವರು ದೇವರ ಪ್ರಸಾದ ನೀಡುತ್ತಿದ್ದ  ತಂಬಿಟ್ಟು, ಮಂಡಕ್ಕಿ, ಬಾಳೆಹಣ್ಣು ಇತಹಣ್ಣುಗಳು ! ನಾವಿಬ್ಬರು ಬಾಲಕರು ಆ ಎಲ್ಲಾ ತಿನಿಸುಗಳನ್ನು ತಿಂದು ಮಿಕ್ಕಿದರೆ ಉಳಿದ ನಮ್ಮ ಸ್ನೇಹಿತರಿಗೆ ಕೊಡುತ್ತಿದ್ದೆವು.ಮುಂದಿನ ಶನಿವಾರ ಕಳೆದು ಭಾನುವಾರಕ್ಕೆ ಕಾಯುತ್ತಿದ್ದೆವು. ಹೆಂಡತಿ ತೀರಿಕೊಂಡ ಮೇಲೆ ಸಣ್ಣಪ್ಪನವರು  ಮಗನಿಗೆ ತಾಯಿಯ ಪ್ರೀತಿ ಕಡಿಮೆಯಾಗದಂತೆ  ಸಾಕುತ್ತಿದ್ದರು.  ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ  ಅವರೇ ತಮ್ಮ ಮಗನಿಗೆ ಊಟ ಮಾಡಿ ಬಡಿಸುತ್ತಿದ್ದರು. ಈಗ ಸಣ್ಣಪ್ಪನವರು ಇಲ್ಲ.ಅವರ ಮಗ ಸೀನ ಇದ್ದಾನೆ  ಮೊನ್ನೆ ಊರಿಗೆ ಹೋದಾಗ ಅವನನ್ನು ಮಾತಾಡಿಸಿ ಬಂದೆ.ಅವರ ಮನೆಯಲ್ಲಿ ಸಣ್ಣಪ್ಪ ನೆನಪಾದರು. ಶ್ರಾವಣ ಮಾಸ ಬಂದಾಗಲೆಲ್ಲ ಇಂತಹ ಸಾರ್ಥಕ ಹಿರಿಯ ಜೀವಿಗಳ ನೆನಪಾಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

14 ಆಗಸ್ಟ್ 2023

ಪೇಡಾ..

 



ಹಂಚಿಬಿಡು ಪೇಡಾ .


ಕೋಗಿಲೆಯು ಕಪ್ಪಾದರೂ ನೋಡಾ

ಸದಾ ಹಾಡುವುದು ಸುಂದರ ಹಾಡ|

ಕೊರತೆ ನೆನದು ಕೊರಗುವುದು ಬೇಡ

ಇರುವುದ ನೆನೆದು ಹಂಚಿಬಿಡು ಪೇಡ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು