08 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _8 ಲಾಲಾ ಲಜಪತ ರಾಯ್...


 

ಆಗಸ್ಟ್ ಮಾಸದ ನೆನಪುಗಳು...

ಭಾಗ _8

ಲಾಲಾ ಲಜಪತ ರಾಯ್...

ಲಾಲ್ ಬಾಲ್ ಪಾಲ್ ತ್ರಿಮೂರ್ತಿಗಳು ಆಂಗ್ಲರ ನಿದ್ದೆಗೆಡಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು. ಈ ತ್ರಿಮೂರ್ತಿಗಳಲ್ಲಿ ಒಬ್ಬರು ಬ್ರಿಟಿಷರ ದುರಾಡಳಿತ ವಿರುದ್ಧವಾಗಿ ಸ್ವಾತಂತ್ರ್ಯ ಪಡೆಯುವ ಅದಮ್ಯ ಬಯಕೆಯೊಂದಿಗೆ  ಹೋರಾಟ ಮಾಡುವಾಗ ಬ್ರಿಟಿಷ್ ಅಧಿಕಾರಿಯ   ಲಾಟಿ ಏಟಿನಿಂದ  ಅಸುನೀಗಿದರು. ಆ  ಹಾನ್ ಚೇತನವೇ  ಲಾಲಾ ಲಜಪತ ರಾಯ್. 

ಲಾಲಾ ಲಜಪತ ರಾಯ್ ಅವರು ಪಂಜಾಬಿನ ಮೋಗಾ ಜಿಲ್ಲೆಗೆ ಸೇರಿದ ಧುಡಿಕೆ ಎಂಬ ಗ್ರಾಮದಲ್ಲಿ ಜನವರಿ 28, 1865ರಲ್ಲಿ  ಜನಿಸಿದರು. ‘ಲಾಲಾ’ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಹಿರಿಯ ಮನೆತನದಿಂದ ಬಂದವರಿಗೆ ಸಲ್ಲುತ್ತಿದ್ದ ಗೌರವಯುತ ಸಂಬೋಧನೆ. ರಾಯ್ ಅವರ ಪ್ರಾರಂಭಿಕ ಶಿಕ್ಷಣ ಪ್ರಸಕ್ತದಲ್ಲಿ ಹರ್ಯಾಣದಲ್ಲಿರುವ ರೆವಾರಿ ಎಂಬ ಊರಿನಲ್ಲಾಯಿತು. ಲಜಪತ ರಾಯ್ ಅವರ ತಂದೆ ರಾಧಾ ಕೃಷ್ಣನ್ ಅವರು ಅಂದಿನ ದಿನಗಳಲ್ಲಿ ಉರ್ದು ಶಿಕ್ಷಕರಾಗಿದ್ದರು.
ಹಿಂದೂ ಧರ್ಮ ಮತ್ತು ಮನುಸ್ಮೃತಿಗಳಿಂದ ತೀವ್ರ ಪ್ರಭಾವಿತರಾದ ಲಾಲಾ ಲಜಪತ ರಾಯ್ ಅವರು ರಾಜಕೀಯ ಹೋರಾಟ ಮತ್ತು ಬರವಣಿಗೆಗಳ ಕಡೆಗೆ ಅಪಾರ ಒಲವು ಬೆಳೆಸಿಕೊಂಡರು. ಹಿಂದೂ ಮಹಾಸಭಾದ ಕಾರ್ಯಕರ್ತರಾಗಿದ್ದ ಅವರು, ಹಿಂದೂ ಧರ್ಮದಲ್ಲಿ ಶಾಂತಿಯುತ ಹೋರಾಟಕ್ಕೆ ಮಹತ್ವವಿದೆ ಎಂದು ನಂಬಿದ್ದರು. ಇದೇ ಆಧಾರದ ಮೇಲೆ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಶಾಂತಿಯುತ ಚಳುವಳಿಗಳನ್ನು ಆಯೋಜಿಸತೊಡಗಿದರು.

ಆರ್ಯ ಸಮಾಜದಲ್ಲಿ ನಿಷ್ಠೆ ಹೊಂದಿದ್ದ ಅವರು ತಾವು ವಿದ್ಯಾರ್ಥಿಯಾಗಿದ್ದಾಗ  ‘ಆರ್ಯ ಗೆಜೆಟ್’ನ ಸಂಪಾದಕರಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಮೇಲೆ ಅವರು ಪಂಜಾಬಿನಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು. ಇದರಿಂದಾಗಿ ಬ್ರಿಟಿಷ್ ಆಡಳಿತ ಅವರನ್ನು ಬರ್ಮಾದ ಮಂಡಾಲೈ ಎಂಬಲ್ಲಿಗೆ ಗಡೀಪಾರು ಮಾಡಿತ್ತು. ಕೆಲವು ತಿಂಗಳ ನಂತರದಲ್ಲಿ ಲಾರ್ಡ್ ಮಿಂಟೋ ಅವರಿಗೆ ಲಾಲಾ ಲಜಪತ ರಾಯ್ ಅವರ ವಿರುದ್ಧ ಇರುವ ಆರೋಪಗಳಿಗೆ ಸರಿಯಾದ ಸಾಕ್ಷಾಧಾರಗಳಿಲ್ಲ ಎನಿಸಿ ಭಾರತಕ್ಕೆ ಹಿಂದಿರುಗಲು ಪರವಾನಗಿ ನೀಡಿದರು. 

1907ರಲ್ಲಿ ಅಮೆರಿಕಕ್ಕೆ ತೆರಳಿದ್ದ ಲಾಲಾ ಲಜಪತ್ ರಾಯ್ ಅವರು 1919ರಲ್ಲಿ ಭಾರತಕ್ಕೆ ಹಿಂದಿರುಗಿದರು. ಅವರು ರಚಿಸಿರುವ ಪ್ರವಾಸಿ ಕಥನದಲ್ಲಿ ಪ್ರಸಿದ್ಧ ಬರಹಗಾರರಾದ ಡಬ್ಲ್ಯೂ. ಇ. ಬಿ. ಡುಬೋಯಿಸ್ ಮತ್ತು ಫ್ರೆಡ್ರಿಕ್ ಡೌಗ್ಲಾಸ್ ಮುಂತಾದವರ ಅನೇಕ ಉಕ್ತಿಗಳನ್ನು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ. ಲಜಪತ ರಾಯ್ ಅವರು ಲಾಹೋರಿನಲ್ಲಿ ಬ್ರಿಟಿಷ್ ವಿದ್ಯಾಸಂಸ್ಥೆಗಳಿಗೆ ಪರ್ಯಾಯವಾಗಿ ನ್ಯಾಷನಲ್ ಕಾಲೇಜು  ಪ್ರಾರಂಭಿಸಿದಾಗ ಅದರಲ್ಲಿ ಭಗತ್ ಸಿಂಗ್ ಅವರೂ ವಿದಾರ್ಥಿಯಾಗಿದ್ದರು.  1920ರಲ್ಲಿ  ಕಲ್ಕತ್ತಾದಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಲಾಲಾ ಲಜಪತ ರಾಯ್ ಆ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ಅನುಸಾರವಾಗಿ ಅಸಹಕಾರ ಚಳುವಳಿಯನ್ನು ಕೈಗೊಂಡಾಗ 1921ರಿಂದ 1923ರ ಅವಧಿಯವರೆಗೆ ಅವರು ಕಾರಾಗೃಹ ವಾಸವನ್ನು ಅನುಭವಿಸಿದರು. ಬಿಡುಗಡೆಯಾದ ಸಂದರ್ಭದಲ್ಲಿ ಅವರು ಲೆಜಿಸ್ಲೇಟಿವ್ ಅಸೆಂಬ್ಲಿಗೆ ಚುನಾಯಿತರಾದರು. ಪಂಜಾಬಿನ ವಿಭಜನೆಗೆ ಅವರು ಮಾತುಕತೆಗಳನ್ನು ಆಯೋಜಿಸಿದರು. ಈ ಕುರಿತು ಅವರು 1924ರ ವರ್ಷದಲ್ಲಿ ‘ದಿ ಟ್ರಿಬ್ಯೂನ್ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯನ್ನು ಆಧರಿಸಿ ಪಂಜಾಬನ್ನು ಪೂರ್ವ ಮತ್ತು ಪಶ್ಚಿಮ ಪಂಜಾಬುಗಳಾಗಿ ವಿಂಗಡಿಸಬೇಕೆಂಬ ವಾದವನ್ನು ಮಂಡಿಸಿದರು. ಅದೇ ರೀತಿಯಲ್ಲಿ ಅವರು ವಾಯವ್ಯ ಸೀಮಾ ಪ್ರದೇಶ, ಸಿಂದ್ ಮತ್ತು ಪೂರ್ವ ಬಂಗಾಳಗಳಲ್ಲಿ ಮುಸ್ಲಿಂ ರಾಜ್ಯಗಳನ್ನು ಪ್ರತ್ಯೇಕಿಸಬೇಕೆಂದು ಪ್ರತಿಪಾದಿಸಿದ್ದರು.

1928ರಲ್ಲಿ  ಭಾರತದಲ್ಲಿನ ಪರಿಸ್ಥಿತಿಯನ್ನು ವರದಿ ಮಾಡಲು ನಿಯೋಜನೆಗೊಂಡಿದ್ದ  ಸರ್ ಜಾನ್ ಸೈಮನ್ ನೇತೃತ್ವದ ಆಯೋಗದಲ್ಲಿ ಒಬ್ಬರೇ ಒಬ್ಬರೂ ಭಾರತೀಯ ಪ್ರತಿನಿಧಿಗಳು ಇರಲಿಲ್ಲ ಎಂಬ ನಿಟ್ಟಿನಲ್ಲಿ ಭಾರತೀಯ ಸಂಘಟನೆಗಳು ಅದನ್ನು ಬಹಿಷ್ಕರಿಸಲು ತೀರ್ಮಾನ ಕೈಗೊಂಡು ದೇಶದಾದ್ಯಂತ ಚಳುವಳಿಯನ್ನು ನಡೆಸಿದವು. ಅಕ್ಟೋಬರ್ 30, 1928ರಂದು ಸೈಮನ್ ಆಯೋಗವು ಲಾಹೋರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಲಾಲಾ ಲಜಪತರಾಯ್ ಅವರು ಶಾಂತಿಯುತ ಮೆರವಣಿಗೆಯ ನೇತೃತ್ವ ವಹಿಸಿದರು. ಆ ಸಂದರ್ಭದಲ್ಲಿ ಪೋಲಿಸ್ ಸೂಪರಿಂಟೆಂಡೆಂಟ್ ಜೇಮ್ಸ್ ಎ. ಸ್ಕಾಟ್ ಎಂಬ ದುರಹಂಕಾರಿಯು ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡುವ ಆದೇಶವಿತ್ತದ್ದೇ ಅಲ್ಲದೆ ಲಾಲಾ ಲಜಪತ ರಾಯ್ ಅವರ ಮೇಲೆ ಸ್ವಯಂ ಆಕ್ರಮಣ ನಡೆಸಿ ಅವರು ತೀವ್ರವಾಗಿ ಗಾಯಗೊಳ್ಳುವುದಕ್ಕೆ ಕಾರಣನಾದನು. ಈ ತೀವ್ರ ಪೆಟ್ಟುಗಳಿಂದ ಹೊರಬರಲಾಗದ ಲಾಲಾ ಲಜಪತ ರಾಯ್ ಅವರು ನವೆಂಬರ್ 17, 1928ರಂದು ಹೃದಯಾಘಾತದಿಂದ ನಿಧನರಾದರು. ಸ್ಕಾಟನ ಈ ದುಷ್ಕೃತ್ಯ ಮಹಾನ್ ದೇಶಭಕ್ತ, ವಿದ್ವಾಂಸ, ಅಹಿಂಸಾ ಪ್ರವೃತ್ತಿಯ ಶಾಂತಿದೂತರೆನಿಸಿದ್ದ ಲಾಲಾ ಲಜಪತ ರಾಯ್ ಅವರ ಮರಣಕ್ಕೆ ಕಾರಣವಾಯಿತು. ಇದರಿಂದ ತೀವ್ರವಾಗಿ ನೊಂದ ಭಗತ್ ಸಿಂಗ್, ರಾಜ ಗುರು, ಸುಖದೇವ್ ಥಾಪರ್, ಚಂದ್ರಶೇಖರ್ ಆಜಾದ್ ಅಂತಹ ವೀರರು ತೀವ್ರ ಹೋರಾಟಕ್ಕಿಳಿದು ರಾಷ್ಟ್ರ ಸ್ವಾತಂತ್ರ್ಯ ಪಡೆಯಲು ಕಾರಣವಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

06 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _7 ಮದನ ಮೋಹನ ಮಾಳವೀಯ


 

ಆಗಸ್ಟ್ ಮಾಸದ ನೆನಪುಗಳು...

ಭಾಗ _7

ಮದನ ಮೋಹನ ಮಾಳವೀಯ

ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣತಜ್ಞ, ಬಹುಮುಖ ವ್ಯಕ್ತಿತ್ವದ ಪ್ರತಿಭೆ , ಸ್ವಾತಂತ್ರ್ಯ ಹೋರಾಟದ ವೇಳೆ ಸೌಮ್ಯವಾದಿಗಳು ಮತ್ತು ತೀವ್ರವಾದಿಗಳ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸಿದವರು,ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಿಸಿದವರೇ ಮದನ ಮೋಹನ ಮಾಳವೀಯ. 
ಮಾಳವೀಯರು 1861 ನೇ ಡಿಸೆಂಬರ್ 25 ಅಲಹಾಬಾದ್ ನಲ್ಲಿ  'ಶ್ರೀ ಗೌಡ್ ಬ್ರಾಹ್ಮಣ ಕುಟುಂಬ'ದಲ್ಲಿ ಜನಿಸಿದರು. ಅವರ ತಂದೆ 'ಪಂಡಿತ್ ಬ್ರಿಜ್ ನಾಥ್', ಮತ್ತು ತಾಯಿ 'ಮೂನಾ ದೇವಿ'. ಮೂಲತಃ ಅವರು ಮಧ್ಯಪ್ರದೇಶದ 'ಮಾಲ್ವಾ'ದವರು. ಅವರ ಪೂರ್ವಜರು ಸಂಸ್ಕೃತ ಪಾಂಡಿತ್ಯದಲ್ಲಿ ಹೆಸರುವಾಸಿಯಾಗಿದ್ದರು.

ಮಾಳವೀಯ  ರವರು ಸಾಂಪ್ರದಾಯಿಕವಾಗಿ ಎರಡು ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಒಂದು ಇಂಗ್ಲೀಷ್ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರು.   ತಮ್ಮ ಪ್ರಾಥಮಿಕ ಶಿಕ್ಷಣವನ್ನು 'ಹರದೇವ ಧರ್ಮ ಜ್ಞಾನೋಪದೇಶ ಪಾಠಶಾಲೆ'ಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ನಂತರ  'ವಿದ್ಯಾವರ್ಧಿನಿ ಸಭಾ ಶಾಲೆ'ಯಲ್ಲಿ ಓದು ಮುಂದುವರೆಸಿದರು. ಅನಂತರ ಅಲಹಾಬಾದ್ ಜಿಲ್ಲಾ ಶಾಲೆಗೆ ಸೇರಿದರು. ಅಲ್ಲಿದ್ದಾಗ ಮಕರಂದ್ ಕಾವ್ಯನಾಮದ ಅಡಿಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದರು.

ಅವು ನಂತರದಲ್ಲಿ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು.  ಅಲಹಾಬಾದ್ ವಿಶ್ವವಿದ್ಯಾಲಯದ 'ಮುಯಿರ್ ಸೆಂಟ್ರಲ್ ಕಾಲೇಜ್‍'ನಲ್ಲಿ 1879 ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದರು. ಆಗ 'ಹ್ಯಾರಿಸನ್ ಕಾಲೇಜ್`ನ ಪ್ರಾಂಶುಪಾಲರು ಅವರ ಕುಟುಂಬದ ಆರ್ಥಿಕ ಕಷ್ಟಗಳನ್ನು ಎದುರಿಸುತ್ತಿರುವುದನ್ನು ನೋಡಿ, ಮಾಳವೀಯರಿಗೆ ಒಂದು 'ಮಾಸಿಕ ವಿದ್ಯಾರ್ಥಿವೇತನ' ಒದಗಿಸಿದರು. ತಮ್ಮ 'ಬಿಎ ಪದವಿ'ಯನ್ನು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಅವರಿಗೆ ಸಂಸ್ಕೃತ ಎಂ.ಎ. ಮಾಡುವ ಆಸೆ ಇತ್ತು. ಆದಾಗ್ಯೂ ತನ್ನ ಕುಟುಂಬ ಪರಿಸ್ಥಿತಿಗಳು ಮತ್ತು ತನ್ನ ತಂದೆ ಅವರ ಕುಟುಂಬ ನಿರ್ವಹಣೆಗೆ ಭಾಗವತ ಕಥಾ ನಿರೂಪಣೆಯ ವೃತ್ತಿ ಪಡೆಯಲು ಬಯಸಿದರು. 1884 ರಲ್ಲಿ  ಅಲಹಾಬಾದ್ನಲ್ಲಿ ಸರ್ಕಾರದ ಪ್ರೌಢಶಾಲೆಯಲ್ಲಿ  ಶಿಕ್ಷಕನಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.ಆದರೆ  ವಿದ್ಯಾಭ್ಯಾಸ ಮುಂದುವರಿಸುವ ದೃಷ್ಟಿಯಿಂದಾಗಿ ಅವರು ವೃತ್ತಿ ಯನ್ನು ತೊರೆದರು. ಬಳಿಕ ಕಾನೂನು ಕಲಿತ ಮಾಳವೀಯರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನೂ ನಡೆಸಿದರು.

ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ಮಾಳವೀಯ ರವರು 50 ವರ್ಷಗಳ ಕಾಲ ಭಾರತೀಯ ಕಾಂಗ್ರೆಸ್ಸಿನ ಸದಸ್ಯರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದಿಗ್ದರ್ಶಕರಾಗಿದ್ದವರು.  ಸ್ವಾತಂತ್ರ್ಯ ಹೋರಾಟಗಾರರಾದ ಗೋಪಾಲ ಕೃಷ್ಣ ಗೋಖಲೆ, ಮತ್ತು ಸಮಾಜ ಸುಧಾರಕರೂ ಆದ 'ಬಾಲಗಂಗಾಧರ ತಿಲಕ'ರ ಅನುಯಾಯಿಯಾಗಿದ್ದರು.
1930 ರಲ್ಲಿ ಮಹಾತ್ಮಾ ಗಾಂಧಿಯವರು ಕರೆ ನೀಡಿದ್ದ ಉಪ್ಪಿನ ಸತ್ಯಾಗ್ರಹ ಮತ್ತು ಕಾನೂನು ಭಂಗ ಚಳವಳಿಯಲ್ಲಿ ಮಾಳವೀಯರು ಸಕ್ರಿಯವಾಗಿ ಭಾಗಿಯಾಗಿದ್ದರು. ಪರಿಣಾಮ ಅವರನ್ನು ಬ್ರಿಟಿಷರು ಬಂಧಿಸಿ ಜೈಲಿಗಟ್ಟಿದರು. ಸ್ವಾತಂತ್ರ್ಯ ಹೋರಾಟಕ್ಕೆ ಮಾಳವೀಯರ ಕೊಡುಗೆಯನ್ನು ಗೋಖಲೆಯವರು ಒಂದೆಡೆ ಹೀಗೆ ನೆನೆಯುತ್ತಾರೆ-'ಮಾಳವೀಯರು ನಿಜವಾದ ತ್ಯಾಗ ಜೀವಿ. ಕೈತುಂಬ ಸಂಬಳ, ಐಷಾರಾಮದ ಜೀವನ ನಡೆಸಬಹುದಾಗಿದ್ದ ಅವರು ದೇಶದ ಕಷ್ಟನಿವಾರಣೆಗೆ ಜೀವನ ಮುಡುಪಿಟ್ಟವರು. ಆದರೆ ಹೋರಾಟದ ಜೀವನ ಅವರನ್ನು ಬಡತನಕ್ಕೆ ನೂಕಿತು."

ಮಾಳವೀಯರು ಪತ್ರಕರ್ತರೂ ಆಗಿದ್ದರು. 1909 ರಲ್ಲಿ ಅಲಹಾಬಾದ್ನಲ್ಲಿ ಇಂಗ್ಲಿಷ್ ಪತ್ರಿಕೆ 'ದಿ ಲೀಡರ್' ಆರಂಭಿಸಿದರು. ಸಮಾಜಪರ, ಸ್ವಾತಂತ್ರ್ಯ ಹೋರಾಟಕ್ಕೆ ಪ್ರೋತ್ಸಾಹಕರವಾದ ವಿಚಾರಗಳನ್ನು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು.  1903 ರಿಂದ 1918 ರವರೆಗೆ ಅಲಹಾಬಾದ್ ನಗರ ಪಾಲಿಕೆಯ ಸದಸ್ಯರಾಗಿ, ಪ್ರಾದೇಶಿಕ ಶಾಸಕಾಂಗ ಸಮಿತಿಯ ಸದಸ್ಯರಾಗಿ ಮಾಳವೀಯರು ಸೇವೆ ಸಲ್ಲಿಸಿದ್ದರು.
1937  ರಲ್ಲಿ ಸಕ್ರಿಯ ರಾಜಕೀಯವರನ್ನು ತೊರೆದ ಅವರು ಬಳಿಕ ಸಮಾಜ ಸುಧಾರಣೆಯತ್ತ ಗಮನ ಕೇಂದ್ರೀಕರಿಸಿದರು. ಮಹಿಳೆಯರ ಶಿಕ್ಷಣ, ವಿಧವಾ ವಿವಾಹ, ಬಾಲ್ಯವಿವಾಹ, ಡಾಂಭಿಕ ಆಚರಣೆಗಳ ವಿರುದ್ಧ ದನಿ ಎತ್ತಿದರು.

ಮಹಾತ್ಮ ಗಾಂಧಿಯವರು ಅತಿ ಹೆಚ್ಚು ಗೌರವ ಹೊಂದಿದ್ದ ಮೂವರಲ್ಲಿ ಮಾಳವೀಯ ಒಬ್ಬರು. ತಿಲಕ್ ಮತ್ತು ಗೋಖಲೆ ಇತರ ಇಬ್ಬರು. ಲಂಡನ್ನಲ್ಲಿ ನಡೆದ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿ ಅವರೊಂದಿಗೆ ಭಾಗವಹಿಸಿದ್ದರು. ಖುದ್ದು ಸಂಸ್ಕೃತ ವಿದ್ವಾಂಸರು, ಆದರೆ, ಇಂಗ್ಲಿಷ್ ಮೇಲೆ ಅಷ್ಟೇ ಪ್ರಭುತ್ವ ಹೊಂದಿದವರು. ಅಲ್ಲಿ ನೀಡಿದ ಭಾಷಣದೊಂದಿಗೆ ಬ್ರಿಟಿಷರನ್ನು ಅಚ್ಚರಿಗೊಳಿಸಿದರು. ಆಕ್ಸ್ಫರ್ಡ್, ಕೇಂಬ್ರಿಜ್ನಲ್ಲಿ ಓದದಿದ್ದರೂ ಇಂಗ್ಲಿಷ್ ಮೇಲೆ ಹೊಂದಿರುವ ಹಿಡಿತದ ಬಗ್ಗೆ ಬಹಿರಂಗವಾಗಿ ಪ್ರಶಂಸೆ ವ್ಯಕ್ತಪಡಿಸಿದರಂತೆ ಬ್ರಿಟನ್ನ ರಾಜಕಾರಣಿ ಗಳು. ಭಾರತೀಯ ಶಾಸನಸಭೆಯ ಸದಸ್ಯರಾಗಿದ್ದ ಮಾಳವೀಯ ಅವರು ಜಲಿಯನ್ವಾಲಾಭಾಗ್ ಹತ್ಯಾಕಾಂಡವನ್ನು ಅತ್ಯುಗ್ರವಾಗಿ ಖಂಡಿಸಿದರು.  ಸಂಪ್ರದಾಯಸ್ಥ  ಎನಿಸಿಕೊಂಡರೂ ಬದಲಾವಣೆಗೆ ಸದಾ ತೆರೆದು ಕೊಂಡಿದ್ದರು. ಇದರಿಂದಾಗಿಯೇ ಮಹಾಮನ ಎಂದು ಕರೆಸಿಕೊಂಡಿದ್ದರು.
ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನವೇ ಅಂದರೆ 1946 ರ ನವೆಂಬರ್ 12 ಮಾನವೀಯ ರವರು   ಇಹಲೊಕ ತ್ಯಜಿಸಿದರು. ಮರಣೋತ್ತರವಾಗಿ ಶ್ರೀಯುತರಿಗೆ  2014  ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.

ಸ್ನೇಹಿತರ ದಿನದ ಹಾಯ್ಕುಗಳು..

 *ಹಾಯ್ಕುಗಳು...*



ಜೊತೆಗಿದ್ದರೆ

ಗೆಳೆಯರ ದಂಡು

ಸ್ವರ್ಗವೇತಕೆ 



ನನ್ನ ಸ್ನೇಹಿತ 

ಜೊತೆಗಿದ್ದರೆನಗೆ 

ಅದುವೇ ಹಿತ ...



*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

05 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _6 ನೇತಾಜಿ ಸುಭಾಷ್ ಚಂದ್ರ ಬೋಸ್.


 


ಆಗಸ್ಟ್ ಮಾಸದ ನೆನಪುಗಳು...

ಭಾಗ _6

ನೇತಾಜಿ ಸುಭಾಷ್ ಚಂದ್ರ ಬೋಸ್.

ಮಹಾತ್ಮಾ ಗಾಂಧೀಜಿಯವರ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡು ಅವರ ಅಹಿಂಸೆ, ಸತ್ಯಾಗ್ರಹ ಮುಂತಾದ ಅಸ್ತ್ರಗಳು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ನೀಡಿವೆ ಎಂಬುದನ್ನು ಅಲ್ಲಗಳೆಯಲಾಗದು. ಅದೇ ರೀತಿಯಲ್ಲಿ ನೇತಾಜಿಯವರು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದು ಅಷ್ಟೇ ಸತ್ಯ.

ಸುಭಾಷ್ ಚಂದ್ರ ಬೋಸ್ ಜನಿಸಿದ್ದು 1897ರ ಜನವರಿ 23ರಂದು, ಒಡಿಶಾದ ಕಟಕ್ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ 14 ಜನ ಮಕ್ಕಳಲ್ಲಿ ಸುಭಾಷ್ 9 ನೇಯವರು.ಕಟಕ್ ನಲ್ಲಿ ರ‍ಯಾವೆನ್ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಮಾಡಿ ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್  ರಿಂದ ಪ್ರೇರಣೆ ಪಡೆದು  ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗರಾಗಿದ್ದರು. 

1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ ಪಡೆದ ನಂತರ ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ ಬೆಳೆಸಿದರು. ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪಾಸು ಮಾಡಿದರು. ಆದರೆ ಬ್ರಿಟಿಷರ ನೀತಿಗಳ ವಿರುದ್ಧ ಸೆಟೆದು ನಿಂತು
ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಐ ಸಿ ಎಸ್ ಗೆ  ಗುಡ್ ಬೈ ಹೇಳಿದರು.

20 ತಿಂಗಳ ಇಂಗ್ಲೆಂಡ್ ವಾಸದ ನಂತರ 1921 ರ ಜುಲೈ 16ರಂದು ಮುಂಬಯಿಗೆ ಮರಳಿದರು. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ ಮಾಡಿದರು.  ಚಿತ್ತರಂಜನ್ ದಾಸ್ ರವರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ ನೀಡಿದರು. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು 6 ತಿಂಗಳ ಸಜೆ ಘೋಷಿಸಿದಾಗ ’ಬರಿಯ 6 ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು.

ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಎಂಬುದು ಬಲ್ಲವರ ಮಾತಾಗಿತ್ತು.   ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.

1927 ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಗಾಂಧೀಜಿಯವರ  ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು.
ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ ಕೈಗೊಂಡರು. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ  ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ ಮಾಡಿದರು. ಇಟೆಲಿ ಪ್ರಧಾನಿ ಬೆನಿಟೊ  ಮುಸ್ಸೋಲಿನಿ ಜತೆ ಚರ್ಚಿಸಿದರು.
ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ ಕಾರ‍್ಯಾಚರಣೆ ಮಾಡಲು   ’ಫ್ರೀ ಇಂಡಿಯಾ ಸೆಂಟರ್’ ಸ್ಥಾಪಿಸಿದರು.  ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ನೀಡಿದ  ಬೋಸರಿಗೆ  ಜನರು ಅಭಿಮಾನಿಗಳು  ’ನೇತಾಜಿ’ ಬಿರುದು ನೀಡಿದರು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ ನೀಡುತ್ತಾ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ ಮಾಡುತ್ತಾ  ಹಿಟ್ಲರ್ ಜತೆ ಭೇಟಿ ಮಾಡಿದರು. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಕೆ ಹಮ್ಮಿಕೊಂಡು ಅಂಡಮಾನ್ ನಿಕೋಬಾರ್ ನಾಗಾ ಲ್ಯಾಂಡ್ ಗಳಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ ಮಾಡಿ ಮುನ್ನುಗ್ಗುವಾಗ ಭಾರತೀಯರಿಗೆ ಸುದ್ದಿಯೊಂದು ಬರಸಿಡಿಲಿನಂತೆ ಎರಗಿತು.ನೇತಾಜಿಯವರು ವಿಮಾನ ಅಪಘಾತದಲ್ಲಿ ಮರಣ ಹೊಂದಿದರೆಂಬ ಸುದ್ದಿ ಇಂದಿಗೂ ವಿವಾದಾತ್ಮಕವಾಗಿರುವುದು ದುರದೃಷ್ಟಕರ.

ನರಿ ಬುದ್ದಿಯ ಕೆಂಪು ಮೂತಿಯವರ ಕುತಂತ್ರಗಳು , ಕೆಟ್ಟ ನಡೆಗಳು, ಗೋಮುಖ ವ್ಯಾಘ್ರ ಗುಣಗಳು, ಒಡೆದು ಆಳುವ ನಿಸ್ಸೀಮರಿಗೆ ಶಾಂತಿ ಅಹಿಂಸೆಯ ನಡೆಗಳು ನಾಟಲೇ ಇಲ್ಲ ಎಂಬುದನ್ನು ನಮ್ಮ ದೇಶದ ಇತಿಹಾಸ ಓದಿದ ಯಾರಾದರೂ ಒಪ್ಪಿಕೊಳ್ಳಲೇ ಬೇಕು . ಪರಂಗಿಗಳಿಗೆ ದಂಡಂ ದಶಗುಣಂ ನೀತಿಯೇ ಸರಿಯಾಗಿತ್ತು.ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸಿವೆ ಎಂದು ಗುಡುಗಿದ ನೇತಾಜಿವರ ಘರ್ಜನೆಗೆ ಬ್ರಿಟಿಷರು ಅಕ್ಷರಶಃ ಕಂಗಾಲಾಗಿ ಹೋದರು.ಅವರ ಆಕ್ರಮಣಕಾರಿ ನೀತಿಗೆ ಆಗಿನ ಯುವಜನ ಮಾರುಹೋಗಿ ಭಾರತೀಯ ರಾಷ್ಟ್ರೀಯ ಸೇನೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು.ಇದರಲ್ಲಿ ಮಹಿಳೆಯರು ಸಹ ಪಾಲ್ಗೊಂಡರು ಎಂಬುದನ್ನು ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ರಂತವರನ್ನು ಉದಾಹರಣೆ ನೀಡಬಹುದು.

ಹಿಂಸೆಯನ್ನು ಯಾರೂ ಪ್ರಚೋದಿಸಬಾರದು ಎಂಬುದನ್ನು ನಾನೂ ಒಪ್ಪುವೆ ಆದರೆ ದುಷ್ಟ ಸಂಹಾರ ಕ್ಕೆ ಕೊನೆಯ ಅಸ್ತ್ರವಾಗಿ ಹಿಂಸೆ ತಪ್ಪಲ್ಲ ಎಂಬ ನಮ್ಮ ಶಾಸ್ತ್ರ ಪುರಾಣಗಳಲ್ಲಿಯೂ ಉಲ್ಲೇಖವಿರುವುದನ್ನು ಗಮನಿಸಲೇಬೇಕು. ಮಹಿಷ ,ರಕ್ತಬೀಜರಂತಹ ರಕ್ಕಸರ ಸಂಹಾರ ಮಾಡದೇ ಶಾಂತಿ ಮಂತ್ರ ಪಠಿಸುತ್ತಾ ದೇವಿ ಕುಳಿತಿದ್ದರೆ ಜನರ ಪಾಡೇನಾಗುತ್ತಿತ್ತು? ಇನ್ನೂ ಕೃಷ್ಣಾವತಾರಗಳಲ್ಲಿಯೂ ಅಸುರಿ ಶಕ್ತಿಗಳ ಸಂಹಾರಕ್ಕೆ ಹಿಂಸೆ ತಪ್ಪಲ್ಲ ಎಂಬುದು ಸಾಬೀತಾಗಿದೆ.ಆದ್ದರಿಂದ ನೇತಾಜಿಯವರ ಮಾರ್ಗವೇ ಸರಿ ಎಂಬುದನ್ನು ಕೊನೆಗೆ ಮಹಾತ್ಮ ಗಾಂಧೀಜಿಯವರೇ ರೋಸಿ 1942 ರಲ್ಲಿ "ಬ್ರಿಟೀಷರೇ ಭಾರತ ಬಿಟ್ಟು ತೊಲಗಿ " ಎಂದು ಗುಡುಗಿ ಡೂ ಆರ್ ಡೈ ಎಂದು ಪರೋಕ್ಷವಾಗಿ ಪ್ರಭಲವಾದ ಹೋರಾಟಕ್ಕೆ ಕರೆ ನೀಡಿದ್ದು ನೇತಾಜಿವರ ಮಾರ್ಗವೇ ಸರಿ ಎಂಬುದನ್ನು ಒಪ್ಪಿದಂತೆ ಎಂದು ಕೆಲವರು ಹೇಳುವುದು ತಪ್ಪಲ್ಲ ಎನಿಸುತ್ತದೆ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಮಾತು ಎಂದಿಗೂ ಪ್ರಸ್ತುತ. ದುಷ್ಟ ಬುದ್ದಿಯ ಆಂಗ್ಲರ ಮಣಿಸಲು ಅಹಿಂಸೆಯ ಮಾರ್ಗ ಹಿಡಿಯದೇ ಬೇರೆ ದಾರಿಯಿರಲಿಲ್ಲ ಯುದ್ದ ಮತ್ತು ಪ್ರೀತಿಯಲ್ಲಿ ಎಲ್ಲವೂ ಸರಿ ಎಂಬಂತೆ ನಮ್ಮ ನೇತಾಜಿವರು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂಸೆಯ ಮಾರ್ಗ ಅನುಸರಿಸಿದ್ದು ತಪ್ಪಲ್ಲ ಅಂದು ಅದು ಅನಿವಾರ್ಯವಾಗಿತ್ತು. ನೇತಾಜಿವರ ಮುಂದಾಲೋಚನೆ, ಅವರ ಚಿಂತನೆ ಎಂದಿಗೂ ಅನುಕರಣೀಯ ಅದಕ್ಕೆ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಈಗಲೂ ಭಾರತೀಯರಿಗೆಲ್ಲ ಒಬ್ಬರೇ ನೇತಾಜಿ.

ಅವರ ಅಭಿಮಾನದಿಂದ ಮನದಾಳದಲ್ಲಿ ಮೂಡಿದ್ದು ಈ ಕವಿತೆ

*ಭಾಗ್ಯವಿಧಾತ*

ವಂದಿಪೆನು ನೇತಾಜಿಗೆ
ನಮಿಪೆನು ವೀರಸಿಂಹನಿಗೆ
ಭಾರತ ರಾಷ್ಟ್ರೀಯ ಸೇನೆ ಕಟ್ಟಿದೆ
ಬ್ರಿಟಿಷರ ಧಿಮಾಕಿಗೆ ಕುಟ್ಟಿದೆ|೧|

ಜೈ ಹಿಂದ್ ಘೋಷ ಮೊಳಗಿಸಿದೆ
ದೇಶ ಭಕ್ತಿಯ ಕಿಚ್ಚು ಹತ್ತಿಸಿದೆ
ಫಾರ್ವರ್ಡ್ ಬ್ಲಾಕ್ ಹರಿಕಾರ
ಪರಂಗಿಯರ ಎದುರಿಸಿದ ಎದೆಗಾರ|೨|

ಭಾರತ ದೇಶದ ಭಾಗ್ಯವಿಧಾತ
ತಾಯಿಯ ಋಣವ ತೀರಿಸಿದಾತ
ಶಿಸ್ತಿನ ಸಿಪಾಯಿ ನಮಗೆಲ್ಲ
ಸ್ಪೂರ್ತಿಯ ಸೆಲೆಯು ಜಗಕೆಲ್ಲ|೩|

ಹಾತೊರೆಯಲಿಲ್ಲ ನಿಮ್ಮ ಸುಖಕೆ
ಹೋರಾಡಿದಿರಿ ನೀವು ಸ್ವಾತಂತ್ರಕೆ
ಉಳಿದಿದೆ ನಿಮ್ಮೆಸರು ಧರೆಯಲೆಲ್ಲ
ನಾವೆಂದಿಗೂ ನಿಮ್ಮನು ಮರೆಯಲ್ಲ|೩|

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

ಆಹಾರ..

 


*ಆಹಾರ*


ಪುರಸ್ಕಾರ ಪ್ರಿಯರು ಇವರು

ಹೊಗಳಿಕೆಯೇ ಇವರ ದೇವರು 

ಅರಳುವರು  ಕಂಡರೆ  ಹಾರ 

ಪ್ರಶಸ್ತಿ ಫಲಕಗಳೇ ಇವರ  ಆಹಾರ .


ಸಿಹಿಜೀವಿ ವೆಂಕಟೇಶ್ವರ

ತುಮಕೂರು