06 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _7 ಮದನ ಮೋಹನ ಮಾಳವೀಯ


 

ಆಗಸ್ಟ್ ಮಾಸದ ನೆನಪುಗಳು...

ಭಾಗ _7

ಮದನ ಮೋಹನ ಮಾಳವೀಯ

ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣತಜ್ಞ, ಬಹುಮುಖ ವ್ಯಕ್ತಿತ್ವದ ಪ್ರತಿಭೆ , ಸ್ವಾತಂತ್ರ್ಯ ಹೋರಾಟದ ವೇಳೆ ಸೌಮ್ಯವಾದಿಗಳು ಮತ್ತು ತೀವ್ರವಾದಿಗಳ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸಿದವರು,ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಿಸಿದವರೇ ಮದನ ಮೋಹನ ಮಾಳವೀಯ. 
ಮಾಳವೀಯರು 1861 ನೇ ಡಿಸೆಂಬರ್ 25 ಅಲಹಾಬಾದ್ ನಲ್ಲಿ  'ಶ್ರೀ ಗೌಡ್ ಬ್ರಾಹ್ಮಣ ಕುಟುಂಬ'ದಲ್ಲಿ ಜನಿಸಿದರು. ಅವರ ತಂದೆ 'ಪಂಡಿತ್ ಬ್ರಿಜ್ ನಾಥ್', ಮತ್ತು ತಾಯಿ 'ಮೂನಾ ದೇವಿ'. ಮೂಲತಃ ಅವರು ಮಧ್ಯಪ್ರದೇಶದ 'ಮಾಲ್ವಾ'ದವರು. ಅವರ ಪೂರ್ವಜರು ಸಂಸ್ಕೃತ ಪಾಂಡಿತ್ಯದಲ್ಲಿ ಹೆಸರುವಾಸಿಯಾಗಿದ್ದರು.

ಮಾಳವೀಯ  ರವರು ಸಾಂಪ್ರದಾಯಿಕವಾಗಿ ಎರಡು ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಒಂದು ಇಂಗ್ಲೀಷ್ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರು.   ತಮ್ಮ ಪ್ರಾಥಮಿಕ ಶಿಕ್ಷಣವನ್ನು 'ಹರದೇವ ಧರ್ಮ ಜ್ಞಾನೋಪದೇಶ ಪಾಠಶಾಲೆ'ಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ನಂತರ  'ವಿದ್ಯಾವರ್ಧಿನಿ ಸಭಾ ಶಾಲೆ'ಯಲ್ಲಿ ಓದು ಮುಂದುವರೆಸಿದರು. ಅನಂತರ ಅಲಹಾಬಾದ್ ಜಿಲ್ಲಾ ಶಾಲೆಗೆ ಸೇರಿದರು. ಅಲ್ಲಿದ್ದಾಗ ಮಕರಂದ್ ಕಾವ್ಯನಾಮದ ಅಡಿಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದರು.

ಅವು ನಂತರದಲ್ಲಿ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು.  ಅಲಹಾಬಾದ್ ವಿಶ್ವವಿದ್ಯಾಲಯದ 'ಮುಯಿರ್ ಸೆಂಟ್ರಲ್ ಕಾಲೇಜ್‍'ನಲ್ಲಿ 1879 ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದರು. ಆಗ 'ಹ್ಯಾರಿಸನ್ ಕಾಲೇಜ್`ನ ಪ್ರಾಂಶುಪಾಲರು ಅವರ ಕುಟುಂಬದ ಆರ್ಥಿಕ ಕಷ್ಟಗಳನ್ನು ಎದುರಿಸುತ್ತಿರುವುದನ್ನು ನೋಡಿ, ಮಾಳವೀಯರಿಗೆ ಒಂದು 'ಮಾಸಿಕ ವಿದ್ಯಾರ್ಥಿವೇತನ' ಒದಗಿಸಿದರು. ತಮ್ಮ 'ಬಿಎ ಪದವಿ'ಯನ್ನು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಅವರಿಗೆ ಸಂಸ್ಕೃತ ಎಂ.ಎ. ಮಾಡುವ ಆಸೆ ಇತ್ತು. ಆದಾಗ್ಯೂ ತನ್ನ ಕುಟುಂಬ ಪರಿಸ್ಥಿತಿಗಳು ಮತ್ತು ತನ್ನ ತಂದೆ ಅವರ ಕುಟುಂಬ ನಿರ್ವಹಣೆಗೆ ಭಾಗವತ ಕಥಾ ನಿರೂಪಣೆಯ ವೃತ್ತಿ ಪಡೆಯಲು ಬಯಸಿದರು. 1884 ರಲ್ಲಿ  ಅಲಹಾಬಾದ್ನಲ್ಲಿ ಸರ್ಕಾರದ ಪ್ರೌಢಶಾಲೆಯಲ್ಲಿ  ಶಿಕ್ಷಕನಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.ಆದರೆ  ವಿದ್ಯಾಭ್ಯಾಸ ಮುಂದುವರಿಸುವ ದೃಷ್ಟಿಯಿಂದಾಗಿ ಅವರು ವೃತ್ತಿ ಯನ್ನು ತೊರೆದರು. ಬಳಿಕ ಕಾನೂನು ಕಲಿತ ಮಾಳವೀಯರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನೂ ನಡೆಸಿದರು.

ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ಮಾಳವೀಯ ರವರು 50 ವರ್ಷಗಳ ಕಾಲ ಭಾರತೀಯ ಕಾಂಗ್ರೆಸ್ಸಿನ ಸದಸ್ಯರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದಿಗ್ದರ್ಶಕರಾಗಿದ್ದವರು.  ಸ್ವಾತಂತ್ರ್ಯ ಹೋರಾಟಗಾರರಾದ ಗೋಪಾಲ ಕೃಷ್ಣ ಗೋಖಲೆ, ಮತ್ತು ಸಮಾಜ ಸುಧಾರಕರೂ ಆದ 'ಬಾಲಗಂಗಾಧರ ತಿಲಕ'ರ ಅನುಯಾಯಿಯಾಗಿದ್ದರು.
1930 ರಲ್ಲಿ ಮಹಾತ್ಮಾ ಗಾಂಧಿಯವರು ಕರೆ ನೀಡಿದ್ದ ಉಪ್ಪಿನ ಸತ್ಯಾಗ್ರಹ ಮತ್ತು ಕಾನೂನು ಭಂಗ ಚಳವಳಿಯಲ್ಲಿ ಮಾಳವೀಯರು ಸಕ್ರಿಯವಾಗಿ ಭಾಗಿಯಾಗಿದ್ದರು. ಪರಿಣಾಮ ಅವರನ್ನು ಬ್ರಿಟಿಷರು ಬಂಧಿಸಿ ಜೈಲಿಗಟ್ಟಿದರು. ಸ್ವಾತಂತ್ರ್ಯ ಹೋರಾಟಕ್ಕೆ ಮಾಳವೀಯರ ಕೊಡುಗೆಯನ್ನು ಗೋಖಲೆಯವರು ಒಂದೆಡೆ ಹೀಗೆ ನೆನೆಯುತ್ತಾರೆ-'ಮಾಳವೀಯರು ನಿಜವಾದ ತ್ಯಾಗ ಜೀವಿ. ಕೈತುಂಬ ಸಂಬಳ, ಐಷಾರಾಮದ ಜೀವನ ನಡೆಸಬಹುದಾಗಿದ್ದ ಅವರು ದೇಶದ ಕಷ್ಟನಿವಾರಣೆಗೆ ಜೀವನ ಮುಡುಪಿಟ್ಟವರು. ಆದರೆ ಹೋರಾಟದ ಜೀವನ ಅವರನ್ನು ಬಡತನಕ್ಕೆ ನೂಕಿತು."

ಮಾಳವೀಯರು ಪತ್ರಕರ್ತರೂ ಆಗಿದ್ದರು. 1909 ರಲ್ಲಿ ಅಲಹಾಬಾದ್ನಲ್ಲಿ ಇಂಗ್ಲಿಷ್ ಪತ್ರಿಕೆ 'ದಿ ಲೀಡರ್' ಆರಂಭಿಸಿದರು. ಸಮಾಜಪರ, ಸ್ವಾತಂತ್ರ್ಯ ಹೋರಾಟಕ್ಕೆ ಪ್ರೋತ್ಸಾಹಕರವಾದ ವಿಚಾರಗಳನ್ನು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು.  1903 ರಿಂದ 1918 ರವರೆಗೆ ಅಲಹಾಬಾದ್ ನಗರ ಪಾಲಿಕೆಯ ಸದಸ್ಯರಾಗಿ, ಪ್ರಾದೇಶಿಕ ಶಾಸಕಾಂಗ ಸಮಿತಿಯ ಸದಸ್ಯರಾಗಿ ಮಾಳವೀಯರು ಸೇವೆ ಸಲ್ಲಿಸಿದ್ದರು.
1937  ರಲ್ಲಿ ಸಕ್ರಿಯ ರಾಜಕೀಯವರನ್ನು ತೊರೆದ ಅವರು ಬಳಿಕ ಸಮಾಜ ಸುಧಾರಣೆಯತ್ತ ಗಮನ ಕೇಂದ್ರೀಕರಿಸಿದರು. ಮಹಿಳೆಯರ ಶಿಕ್ಷಣ, ವಿಧವಾ ವಿವಾಹ, ಬಾಲ್ಯವಿವಾಹ, ಡಾಂಭಿಕ ಆಚರಣೆಗಳ ವಿರುದ್ಧ ದನಿ ಎತ್ತಿದರು.

ಮಹಾತ್ಮ ಗಾಂಧಿಯವರು ಅತಿ ಹೆಚ್ಚು ಗೌರವ ಹೊಂದಿದ್ದ ಮೂವರಲ್ಲಿ ಮಾಳವೀಯ ಒಬ್ಬರು. ತಿಲಕ್ ಮತ್ತು ಗೋಖಲೆ ಇತರ ಇಬ್ಬರು. ಲಂಡನ್ನಲ್ಲಿ ನಡೆದ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿ ಅವರೊಂದಿಗೆ ಭಾಗವಹಿಸಿದ್ದರು. ಖುದ್ದು ಸಂಸ್ಕೃತ ವಿದ್ವಾಂಸರು, ಆದರೆ, ಇಂಗ್ಲಿಷ್ ಮೇಲೆ ಅಷ್ಟೇ ಪ್ರಭುತ್ವ ಹೊಂದಿದವರು. ಅಲ್ಲಿ ನೀಡಿದ ಭಾಷಣದೊಂದಿಗೆ ಬ್ರಿಟಿಷರನ್ನು ಅಚ್ಚರಿಗೊಳಿಸಿದರು. ಆಕ್ಸ್ಫರ್ಡ್, ಕೇಂಬ್ರಿಜ್ನಲ್ಲಿ ಓದದಿದ್ದರೂ ಇಂಗ್ಲಿಷ್ ಮೇಲೆ ಹೊಂದಿರುವ ಹಿಡಿತದ ಬಗ್ಗೆ ಬಹಿರಂಗವಾಗಿ ಪ್ರಶಂಸೆ ವ್ಯಕ್ತಪಡಿಸಿದರಂತೆ ಬ್ರಿಟನ್ನ ರಾಜಕಾರಣಿ ಗಳು. ಭಾರತೀಯ ಶಾಸನಸಭೆಯ ಸದಸ್ಯರಾಗಿದ್ದ ಮಾಳವೀಯ ಅವರು ಜಲಿಯನ್ವಾಲಾಭಾಗ್ ಹತ್ಯಾಕಾಂಡವನ್ನು ಅತ್ಯುಗ್ರವಾಗಿ ಖಂಡಿಸಿದರು.  ಸಂಪ್ರದಾಯಸ್ಥ  ಎನಿಸಿಕೊಂಡರೂ ಬದಲಾವಣೆಗೆ ಸದಾ ತೆರೆದು ಕೊಂಡಿದ್ದರು. ಇದರಿಂದಾಗಿಯೇ ಮಹಾಮನ ಎಂದು ಕರೆಸಿಕೊಂಡಿದ್ದರು.
ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನವೇ ಅಂದರೆ 1946 ರ ನವೆಂಬರ್ 12 ಮಾನವೀಯ ರವರು   ಇಹಲೊಕ ತ್ಯಜಿಸಿದರು. ಮರಣೋತ್ತರವಾಗಿ ಶ್ರೀಯುತರಿಗೆ  2014  ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.

ಸ್ನೇಹಿತರ ದಿನದ ಹಾಯ್ಕುಗಳು..

 *ಹಾಯ್ಕುಗಳು...*



ಜೊತೆಗಿದ್ದರೆ

ಗೆಳೆಯರ ದಂಡು

ಸ್ವರ್ಗವೇತಕೆ 



ನನ್ನ ಸ್ನೇಹಿತ 

ಜೊತೆಗಿದ್ದರೆನಗೆ 

ಅದುವೇ ಹಿತ ...



*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

05 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _6 ನೇತಾಜಿ ಸುಭಾಷ್ ಚಂದ್ರ ಬೋಸ್.


 


ಆಗಸ್ಟ್ ಮಾಸದ ನೆನಪುಗಳು...

ಭಾಗ _6

ನೇತಾಜಿ ಸುಭಾಷ್ ಚಂದ್ರ ಬೋಸ್.

ಮಹಾತ್ಮಾ ಗಾಂಧೀಜಿಯವರ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡು ಅವರ ಅಹಿಂಸೆ, ಸತ್ಯಾಗ್ರಹ ಮುಂತಾದ ಅಸ್ತ್ರಗಳು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ನೀಡಿವೆ ಎಂಬುದನ್ನು ಅಲ್ಲಗಳೆಯಲಾಗದು. ಅದೇ ರೀತಿಯಲ್ಲಿ ನೇತಾಜಿಯವರು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದು ಅಷ್ಟೇ ಸತ್ಯ.

ಸುಭಾಷ್ ಚಂದ್ರ ಬೋಸ್ ಜನಿಸಿದ್ದು 1897ರ ಜನವರಿ 23ರಂದು, ಒಡಿಶಾದ ಕಟಕ್ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ 14 ಜನ ಮಕ್ಕಳಲ್ಲಿ ಸುಭಾಷ್ 9 ನೇಯವರು.ಕಟಕ್ ನಲ್ಲಿ ರ‍ಯಾವೆನ್ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಮಾಡಿ ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್  ರಿಂದ ಪ್ರೇರಣೆ ಪಡೆದು  ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗರಾಗಿದ್ದರು. 

1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ ಪಡೆದ ನಂತರ ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ ಬೆಳೆಸಿದರು. ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪಾಸು ಮಾಡಿದರು. ಆದರೆ ಬ್ರಿಟಿಷರ ನೀತಿಗಳ ವಿರುದ್ಧ ಸೆಟೆದು ನಿಂತು
ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಐ ಸಿ ಎಸ್ ಗೆ  ಗುಡ್ ಬೈ ಹೇಳಿದರು.

20 ತಿಂಗಳ ಇಂಗ್ಲೆಂಡ್ ವಾಸದ ನಂತರ 1921 ರ ಜುಲೈ 16ರಂದು ಮುಂಬಯಿಗೆ ಮರಳಿದರು. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ ಮಾಡಿದರು.  ಚಿತ್ತರಂಜನ್ ದಾಸ್ ರವರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ ನೀಡಿದರು. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು 6 ತಿಂಗಳ ಸಜೆ ಘೋಷಿಸಿದಾಗ ’ಬರಿಯ 6 ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು.

ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಎಂಬುದು ಬಲ್ಲವರ ಮಾತಾಗಿತ್ತು.   ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.

1927 ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಗಾಂಧೀಜಿಯವರ  ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು.
ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ ಕೈಗೊಂಡರು. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ  ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ ಮಾಡಿದರು. ಇಟೆಲಿ ಪ್ರಧಾನಿ ಬೆನಿಟೊ  ಮುಸ್ಸೋಲಿನಿ ಜತೆ ಚರ್ಚಿಸಿದರು.
ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ ಕಾರ‍್ಯಾಚರಣೆ ಮಾಡಲು   ’ಫ್ರೀ ಇಂಡಿಯಾ ಸೆಂಟರ್’ ಸ್ಥಾಪಿಸಿದರು.  ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ನೀಡಿದ  ಬೋಸರಿಗೆ  ಜನರು ಅಭಿಮಾನಿಗಳು  ’ನೇತಾಜಿ’ ಬಿರುದು ನೀಡಿದರು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ ನೀಡುತ್ತಾ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ ಮಾಡುತ್ತಾ  ಹಿಟ್ಲರ್ ಜತೆ ಭೇಟಿ ಮಾಡಿದರು. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಕೆ ಹಮ್ಮಿಕೊಂಡು ಅಂಡಮಾನ್ ನಿಕೋಬಾರ್ ನಾಗಾ ಲ್ಯಾಂಡ್ ಗಳಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ ಮಾಡಿ ಮುನ್ನುಗ್ಗುವಾಗ ಭಾರತೀಯರಿಗೆ ಸುದ್ದಿಯೊಂದು ಬರಸಿಡಿಲಿನಂತೆ ಎರಗಿತು.ನೇತಾಜಿಯವರು ವಿಮಾನ ಅಪಘಾತದಲ್ಲಿ ಮರಣ ಹೊಂದಿದರೆಂಬ ಸುದ್ದಿ ಇಂದಿಗೂ ವಿವಾದಾತ್ಮಕವಾಗಿರುವುದು ದುರದೃಷ್ಟಕರ.

ನರಿ ಬುದ್ದಿಯ ಕೆಂಪು ಮೂತಿಯವರ ಕುತಂತ್ರಗಳು , ಕೆಟ್ಟ ನಡೆಗಳು, ಗೋಮುಖ ವ್ಯಾಘ್ರ ಗುಣಗಳು, ಒಡೆದು ಆಳುವ ನಿಸ್ಸೀಮರಿಗೆ ಶಾಂತಿ ಅಹಿಂಸೆಯ ನಡೆಗಳು ನಾಟಲೇ ಇಲ್ಲ ಎಂಬುದನ್ನು ನಮ್ಮ ದೇಶದ ಇತಿಹಾಸ ಓದಿದ ಯಾರಾದರೂ ಒಪ್ಪಿಕೊಳ್ಳಲೇ ಬೇಕು . ಪರಂಗಿಗಳಿಗೆ ದಂಡಂ ದಶಗುಣಂ ನೀತಿಯೇ ಸರಿಯಾಗಿತ್ತು.ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸಿವೆ ಎಂದು ಗುಡುಗಿದ ನೇತಾಜಿವರ ಘರ್ಜನೆಗೆ ಬ್ರಿಟಿಷರು ಅಕ್ಷರಶಃ ಕಂಗಾಲಾಗಿ ಹೋದರು.ಅವರ ಆಕ್ರಮಣಕಾರಿ ನೀತಿಗೆ ಆಗಿನ ಯುವಜನ ಮಾರುಹೋಗಿ ಭಾರತೀಯ ರಾಷ್ಟ್ರೀಯ ಸೇನೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು.ಇದರಲ್ಲಿ ಮಹಿಳೆಯರು ಸಹ ಪಾಲ್ಗೊಂಡರು ಎಂಬುದನ್ನು ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ರಂತವರನ್ನು ಉದಾಹರಣೆ ನೀಡಬಹುದು.

ಹಿಂಸೆಯನ್ನು ಯಾರೂ ಪ್ರಚೋದಿಸಬಾರದು ಎಂಬುದನ್ನು ನಾನೂ ಒಪ್ಪುವೆ ಆದರೆ ದುಷ್ಟ ಸಂಹಾರ ಕ್ಕೆ ಕೊನೆಯ ಅಸ್ತ್ರವಾಗಿ ಹಿಂಸೆ ತಪ್ಪಲ್ಲ ಎಂಬ ನಮ್ಮ ಶಾಸ್ತ್ರ ಪುರಾಣಗಳಲ್ಲಿಯೂ ಉಲ್ಲೇಖವಿರುವುದನ್ನು ಗಮನಿಸಲೇಬೇಕು. ಮಹಿಷ ,ರಕ್ತಬೀಜರಂತಹ ರಕ್ಕಸರ ಸಂಹಾರ ಮಾಡದೇ ಶಾಂತಿ ಮಂತ್ರ ಪಠಿಸುತ್ತಾ ದೇವಿ ಕುಳಿತಿದ್ದರೆ ಜನರ ಪಾಡೇನಾಗುತ್ತಿತ್ತು? ಇನ್ನೂ ಕೃಷ್ಣಾವತಾರಗಳಲ್ಲಿಯೂ ಅಸುರಿ ಶಕ್ತಿಗಳ ಸಂಹಾರಕ್ಕೆ ಹಿಂಸೆ ತಪ್ಪಲ್ಲ ಎಂಬುದು ಸಾಬೀತಾಗಿದೆ.ಆದ್ದರಿಂದ ನೇತಾಜಿಯವರ ಮಾರ್ಗವೇ ಸರಿ ಎಂಬುದನ್ನು ಕೊನೆಗೆ ಮಹಾತ್ಮ ಗಾಂಧೀಜಿಯವರೇ ರೋಸಿ 1942 ರಲ್ಲಿ "ಬ್ರಿಟೀಷರೇ ಭಾರತ ಬಿಟ್ಟು ತೊಲಗಿ " ಎಂದು ಗುಡುಗಿ ಡೂ ಆರ್ ಡೈ ಎಂದು ಪರೋಕ್ಷವಾಗಿ ಪ್ರಭಲವಾದ ಹೋರಾಟಕ್ಕೆ ಕರೆ ನೀಡಿದ್ದು ನೇತಾಜಿವರ ಮಾರ್ಗವೇ ಸರಿ ಎಂಬುದನ್ನು ಒಪ್ಪಿದಂತೆ ಎಂದು ಕೆಲವರು ಹೇಳುವುದು ತಪ್ಪಲ್ಲ ಎನಿಸುತ್ತದೆ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಮಾತು ಎಂದಿಗೂ ಪ್ರಸ್ತುತ. ದುಷ್ಟ ಬುದ್ದಿಯ ಆಂಗ್ಲರ ಮಣಿಸಲು ಅಹಿಂಸೆಯ ಮಾರ್ಗ ಹಿಡಿಯದೇ ಬೇರೆ ದಾರಿಯಿರಲಿಲ್ಲ ಯುದ್ದ ಮತ್ತು ಪ್ರೀತಿಯಲ್ಲಿ ಎಲ್ಲವೂ ಸರಿ ಎಂಬಂತೆ ನಮ್ಮ ನೇತಾಜಿವರು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂಸೆಯ ಮಾರ್ಗ ಅನುಸರಿಸಿದ್ದು ತಪ್ಪಲ್ಲ ಅಂದು ಅದು ಅನಿವಾರ್ಯವಾಗಿತ್ತು. ನೇತಾಜಿವರ ಮುಂದಾಲೋಚನೆ, ಅವರ ಚಿಂತನೆ ಎಂದಿಗೂ ಅನುಕರಣೀಯ ಅದಕ್ಕೆ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಈಗಲೂ ಭಾರತೀಯರಿಗೆಲ್ಲ ಒಬ್ಬರೇ ನೇತಾಜಿ.

ಅವರ ಅಭಿಮಾನದಿಂದ ಮನದಾಳದಲ್ಲಿ ಮೂಡಿದ್ದು ಈ ಕವಿತೆ

*ಭಾಗ್ಯವಿಧಾತ*

ವಂದಿಪೆನು ನೇತಾಜಿಗೆ
ನಮಿಪೆನು ವೀರಸಿಂಹನಿಗೆ
ಭಾರತ ರಾಷ್ಟ್ರೀಯ ಸೇನೆ ಕಟ್ಟಿದೆ
ಬ್ರಿಟಿಷರ ಧಿಮಾಕಿಗೆ ಕುಟ್ಟಿದೆ|೧|

ಜೈ ಹಿಂದ್ ಘೋಷ ಮೊಳಗಿಸಿದೆ
ದೇಶ ಭಕ್ತಿಯ ಕಿಚ್ಚು ಹತ್ತಿಸಿದೆ
ಫಾರ್ವರ್ಡ್ ಬ್ಲಾಕ್ ಹರಿಕಾರ
ಪರಂಗಿಯರ ಎದುರಿಸಿದ ಎದೆಗಾರ|೨|

ಭಾರತ ದೇಶದ ಭಾಗ್ಯವಿಧಾತ
ತಾಯಿಯ ಋಣವ ತೀರಿಸಿದಾತ
ಶಿಸ್ತಿನ ಸಿಪಾಯಿ ನಮಗೆಲ್ಲ
ಸ್ಪೂರ್ತಿಯ ಸೆಲೆಯು ಜಗಕೆಲ್ಲ|೩|

ಹಾತೊರೆಯಲಿಲ್ಲ ನಿಮ್ಮ ಸುಖಕೆ
ಹೋರಾಡಿದಿರಿ ನೀವು ಸ್ವಾತಂತ್ರಕೆ
ಉಳಿದಿದೆ ನಿಮ್ಮೆಸರು ಧರೆಯಲೆಲ್ಲ
ನಾವೆಂದಿಗೂ ನಿಮ್ಮನು ಮರೆಯಲ್ಲ|೩|

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

ಆಹಾರ..

 


*ಆಹಾರ*


ಪುರಸ್ಕಾರ ಪ್ರಿಯರು ಇವರು

ಹೊಗಳಿಕೆಯೇ ಇವರ ದೇವರು 

ಅರಳುವರು  ಕಂಡರೆ  ಹಾರ 

ಪ್ರಶಸ್ತಿ ಫಲಕಗಳೇ ಇವರ  ಆಹಾರ .


ಸಿಹಿಜೀವಿ ವೆಂಕಟೇಶ್ವರ

ತುಮಕೂರು 

04 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _5 ಆಚಾರ್ಯ ವಿನೋಬಾ ಭಾವೆ.


 

ಆಗಸ್ಟ್ ಮಾಸದ ನೆನಪುಗಳು...

ಭಾಗ _5
ಆಚಾರ್ಯ ವಿನೋಬಾ ಭಾವೆ.

ಭೂದಾನ ಚಳುವಳಿಯ ಹರಿಕಾರ,  ಕನ್ನಡ ಭಾಷೆಯ ಬಗ್ಗೆ ಅಪಾರ ಗೌರವ ಹೊಂದಿದ್ದ ಮತ್ತು ನಮ್ಮ ಕನ್ನಡ ಬರವಣಿಗೆಯನ್ನು " ಲಿಪಿಗಳ ರಾಣಿ" ಎಂದು ಮನಸಾರೆ ಹೊಗಳಿದ ಸರಳ ಸಜ್ಜನ ಸ್ವಾತಂತ್ರ್ಯ ಹೋರಾಟಗಾರರಾದ ಆಚಾರ್ಯ ಬಿರುದಾಂಕಿತ ವಿನೋಬಾ ಭಾವೆಯವರನ್ನು ಈ ಆಗಸ್ಟ್ ಮಾಸದಲ್ಲಿ ನೆನೆಯೋಣ.

ವಿನೋಬಾ ಅವರು ಮಹಾರಾಷ್ಟ್ರದ ಕೋಲಬಾ ಜಿಲ್ಲೆಯ ಗಾಗೋಡೆ ಗ್ರಾಮದಲ್ಲಿ ಸೆಪ್ಟೆಂಬರ್ 11, 1895ರಂದು ಜನಿಸಿದರು. ಇವರ ತಂದೆ ನರಹರಿ ಶಂಭುರಾವ್ ಭಾವೆ. ತಾಯಿ ರುಕ್ಮಿಣಿ ದೇವಿ. ಅವರ ಮೂಲ ಹೆಸರು ವಿನಾಯಕ್ ನರಹರಿ ಭಾವೆ. ಬಾಲ್ಯದಲ್ಲಿಯೇ ವಿವಿಧ ಧರ್ಮಗಳ ಸಾರವನ್ನು ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು. 

ಅವರಿಗೆ ಗಣಿತದಲ್ಲಿ ಅಪಾರ ಆಸಕ್ತಿ ಇತ್ತು. 1916ರಲ್ಲಿ ತಮ್ಮ ಇಂಟರ್ ಮೀಡಿಯೆಟ್ ಪರೀಕ್ಷೆಗಾಗಿ ಮುಂಬೈಗೆ ಹೊರಟಿದ್ದ ವಿನೋಬಾ ಭಾವೆ ಅವರಿಗೆ ಮಹಾತ್ಮ ಗಾಂಧಿಯವರ ಬರಹವೊಂದು ಕಣ್ಣಿಗೆ ಬಿದ್ದು, ತಮ್ಮ ಓದು ಬರಹದ ಪ್ರಮಾಣ ಪತ್ರಗಳಿಗೆಲ್ಲ ಬೆಂಕಿಗೆ ಹಚ್ಚಿಬಿಟ್ಟರಂತೆ. ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಗಾಂಧೀಜಿಯವರ ಅನುಯಾಯಿಯಾಗುವುದರೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಭಾವೆ ಅನಂತರ ತಿರುಗಿ ನೋಡಲಿಲ್ಲ.
ವಿನೋಬಾ ಭಾವೆ ಒಬ್ಬ ಹಠವಾದಿ ಸತ್ಯಾಗ್ರಹಿ. ಅಹಿಂಸಾ ಮಾರ್ಗದಲ್ಲಿ ಅಪ್ರತಿಮ ನಿಷ್ಠೆಯಿರಿಸಿದ್ದರು.  ಉಪವಾಸ ಸತ್ಯಾಗ್ರಹದಲ್ಲಿ ಎತ್ತಿದ ಕೈ. ಜಾತೀಯತೆಯ ಭೇದ ಅಳಿಸಿ ಎಲ್ಲರೂ ಸೌಹಾರ್ದದಿಂದ ಬಾಳಬೇಕೆಂಬ ಕನಸು ಕಟ್ಟಿ ಅದನ್ನು ನೆರವೇರಿಸಲು ಹರಿಜನರೊಡನೆ ವಿವಿಧ ಮತೀಯರೊಡನೆ ದೇವಾಲಯಗಳಿಗೆ ಪ್ರವೇಶಿಸಿ ಮತ್ತೆ ಮತ್ತೆ ಸೆರೆವಾಸ ಅನುಭವಿಸಿದರು. ಅವರ ಈ ಎಲ್ಲ ಪ್ರಯತ್ನಗಳು ಎಲ್ಲರ ಮನ್ನಣೆಗಳಿಸಿ ಹೊಸ ಕ್ರಾಂತಿಗೆ ನಾಂದಿಯಾಯಿತು.

ಸಂತರಂತೆ ಬಾಳಿದ್ದ ವಿನೋಬಾರವರ ಅಂತಃಸತ್ತ್ವ ಬಹಳ ಪ್ರಭಾವಶಾಲಿಯಾಗಿತ್ತು 1960ರಲ್ಲಿ ಚಂಬಲ್ ಕಣಿವೆಯ ಡಕಾಯಿತರು,   ಅವರಿಗೆ ಶರಣಾಗಿದ್ದು   ಅದಕ್ಕೊಂದು ಉದಾಹರಣೆ. ಈ ಡಕಾಯಿತರೆಲ್ಲರೂ ಮುಂದೆ ಭಾವೆಯವರ ಮಾರ್ಗದರ್ಶನದಲ್ಲಿ  ಜೀವನ ಕಳೆದರು.

1955ರಲ್ಲಿ ’ಭೂದಾನ ಚಳುವಳಿ’ಗೆ ಚಾಲನೆ ನೀಡಿದ ಭಾವೆ ರವರು  ಅದನ್ನು ವ್ಯಾಪಕಗೊಳಿಸಿ ಅಸಂಖ್ಯ ಭೂದಾನಕ್ಕೆ ಪ್ರೇರಣೆ ನೀಡಿದರು. ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಓಡಾಡಿ ಸಹಸ್ರಾರು ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆಯಾಗಿ ನಿಂತರು. ಅವರು ಸಿರಿವಂತರಿಂದ ದಾನ ಸ್ವೀಕರಿಸಿ ಬಡಬಗ್ಗರಿಗಾಗಿ ಹಸ್ತಾಂತರಿಸಿದ ಹಳ್ಳಿಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು. ಅವುಗಳಲ್ಲಿ ತಮಿಳುನಾಡು ಒಂದರಲ್ಲೇ ಅವರು ಸುಮಾರು 175 ಹಳ್ಳಿಗಳನ್ನು ಸಿರಿವಂತರಿಂದ ಸ್ವೀಕರಿಸಿ ಬಡಜನರಿಗೆ ಹಸ್ತಾಂತರಿಸಿದರು.

ಆಚಾರ್ಯ ವಿನೋಬಾ ಅವರು ಬಹುಭಾಷಾ ಪಂಡಿತರಾಗಿದ್ದು ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್, ಕನ್ನಡ ಭಾಷೆಗಳ ಪರಿಚಯ ಅವರಿಗಿತ್ತು. ಕನ್ನಡ ಭಾಷೆಯ ಲಿಪಿ ಅವರನ್ನು ಮೋಡಿ ಮಾಡಿತ್ತು. ಅವರು ಕನ್ನಡದ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಶ್ಲಾಘಿಸುತ್ತಿದ್ದರು. 1958ರಲ್ಲಿ ವಿನೋಬಾ ಅವರು ಸಲ್ಲಿಸಿದ ಸಮಾಜ ಸೇವೆಗಾಗಿ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1983ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು.
ವಿನೋಬಾ ಭಾವೆ ಸಮರ್ಥ ಲೇಖಕರಾಗಿದ್ದರು. 1923 ರಲ್ಲಿ ’ಮಹಾರಾಷ್ಟ್ರ ಧರ್ಮ’ ಪತ್ರಿಕೆಯ ಸಂಪಾದಕರಾದರು. ನಾಗಪುರದ ’ಧ್ವಜಸತ್ಯಾಗ್ರಹ’ ದಲ್ಲಿ ತಿಂಗಳಾನುಗಟ್ಟಲೆ ಬಂಧಿತರಾದರು ಮತ್ತು ಕೇರಳದ ’ವೈಕೋಮ್ ಸತ್ಯಾಗ್ರಹ’ಕ್ಕೆ ಹೊರಟು ನಿಂತರು. ಇವೆಲ್ಲದರ ನಡುವೆಯೂ ನಿರಂತರ ಅಧ್ಯಯನಶೀಲರಾಗಿದ್ದ ಅವರು ಮರಾಠಿಯಲ್ಲಿ ಗೀತಾಭಾಷ್ಯ ಬರೆದರು.

ಉಪನಿಷತ್ತುಗಳಿಗೆ ವ್ಯಾಖ್ಯಾನ ಬರೆದರು. ತಿಂಗಳುಗಟ್ಟಲೆ ಜೈಲಿನಲ್ಲಿದ್ದಾಗ ತಮ್ಮ ಸಹ ಖೈದಿಗಳಿಗೆಲ್ಲ ಇವುಗಳ ಬಗ್ಗೆ ಪ್ರವಚನ ಕೊಡಾ ನೀಡುತ್ತಿದ್ದರು. ಕುರಾನ್ ಮತ್ತು ಬೈಬಲ್ಲಿನ ಬೋಧನೆಗಳನ್ನು ಸಹ ಪ್ರಕಟಿಸಿದರಲ್ಲದೆ, ಶಿಕ್ಷಣ, ಸ್ವರಾಜ್ಯ ಶಾಸ್ತ್ರದ ಕುರಿತಾದ ಗ್ರಂಥ ರಚನೆಯನ್ನೂ ಮಾಡಿದರು.
1948 ರಲ್ಲಿ ಗಾಂಧೀಜಿಯವರ ಹತ್ಯೆಯಾದ ನಂತರ ಆಚಾರ್ಯ ವಿನೋಬಾ ಭಾವೆಯವರಿಗೆ ಆಶ್ರಮದ ಬದುಕು ಸಾಕೆನಿಸಿತು. ತಮ್ಮ ಗುರು ಹಾಕಿಕೊಟ್ಟಿದ್ದ ಸರ್ವೋದಯ ಪರಿಕಲ್ಪನೆಯಲ್ಲಿ ಏನಾದರೂ ಗ್ರಾಮ ಸುಧಾರಣೆ ಮಾಡಲು ಸಾಧ್ಯವೆ? ಎಂದು ಯೋಚಿಸಿದ ಅವರು ಗ್ರಾಮಭಾರತದ ದರ್ಶನಕ್ಕಾಗಿ ಕಾಲ್ನಡಿಗೆ ಪ್ರವಾಸ ಹೊರಟರು.

1951 ಏಪ್ರಿಲ್ 18 ರಂದು ಆಂಧ್ರದ ತೆಲಂಗಾಣ ಪ್ರಾಂತ್ಯದ ಪೂಚಂಪಲ್ಲಿ ಎಂಬಲ್ಲಿ ಭಾಷಣ ಮಾಡುತ್ತಾ, ಶ್ರೀಮಂತ ಜಮೀನ್ದಾರರು ತಮ್ಮಲ್ಲಿರುವ ಜಮೀನುಗಳನ್ನು ಬಡವರಿಗೆ ದಾನ ಮಾಡಬೇಕು. ಇದು ಯಾವ ಕಾರಣಕ್ಕೂ ನಿಮ್ಮ ಮನಸ್ಸಿನಲ್ಲಿ ಭಿಕ್ಷೆ ಎಂಬ ಭಾವನೆ ಮೂಡಕೂಡದು, ಬಡತನ ಹೋಗಲಾಡಿಸಲು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ದೀಕ್ಷೆ ಎಂದು ಭಾವಿಸಬೇಕು ಎಂದು ಕರೆಯಿತ್ತರು.
ವಿನೋಬಾ ಮಾತುಗಳಿಂದ ಪ್ರಭಾವಿತನಾದ ರಾಮರೆಡ್ಡಿ ಎಂಬ ಜಮೀನ್ದಾರ ಸ್ಥಳದಲ್ಲಿಯೇ ನೂರು ಎಕರೆ ಭೂಮಿಯನ್ನು ವಿನೋಬಾರವರಿಗೆ ದಾನ ಮಾಡಿದ. ಈ ಕ್ರಿಯೆಯಿಂದ ವಿನೋಬಾ ತಕ್ಷಣಕ್ಕೆ ವಿಚಲಿತರಾದರು. ಆದರೆ, ಇದು ದೇವರು ತೋರಿದ ದಾರಿ ಎಂದು ತಿಳಿದ ಅವರು ಈ ಕ್ರಿಯೆಗೆ ಭೂದಾನ ಎಂಬ ಹೆಸರಿಟ್ಟು ಜಮೀನುಗಳನ್ನು ಸ್ವೀಕರಿಸುತ್ತಾ ಹೋದರು. ನೀವು ನೀಡುವ ಜಮೀನಿನಲ್ಲಿ ಯಾವ ಕಾರಣಕ್ಕೂ ದೇಗುಲ, ಛತ್ರ, ಅಥವಾ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದಿಲ್ಲ.
ಹಸಿವು ಮತ್ತು ಬಡತನದಿಂದ ಬಳಲುತ್ತಿರುವ ಭಾರತದ ಬಡವರು ನಮ್ಮ ಪಾಲಿನ ನಿಜವಾದ ದೇವರಾಗಿದ್ದಾರೆ. ನೀವು ದಾನ ನೀಡುವ ಜಮೀನು ಅವರಿಗೆ ಸಲ್ಲುತ್ತದ ಎಂದು ಘೋಷಿಸುತ್ತಾ ಹೋದರು. ಮೊದಲ 70 ದಿನಗಳ ಪ್ರವಾಸದಲ್ಲಿ 12 ಸಾವಿರ ಎಕರೆ ಭೂಮಿ ದಾನವಾಗಿ ದೊರೆತರೆ, ನಂತರದ 60 ದಿನಗಳಲ್ಲಿ 18 ಸಾವಿರ ಎಕರೆ ಭೂಮಿ ದೊರೆಯಿತು.

ಮೊದಲ ಹಂತದ 800 ಕಿಲೋಮೀಟರ್ ಪಾದಯಾತ್ರೆಯಲ್ಲಿ 30 ಸಾವಿರ ಎಕರೆ ಭೂಮಿಯು ಭೂದಾನವಾಗಿ ವಿನೋಬಾರವರ ಮಡಿಲು ಸೇರಿತ್ತು. 1952 ರಲ್ಲಿ ನೆಹರೂ ರವರು ವಿನೋಬಾ ಅವರನ್ನು ದೆಹಲಿಗೆ ಆಹ್ವಾನಿಸಿ, ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮಾಭಿವೃದ್ಧಿಯ ಕುರಿತು ಯಾವ ರೀತಿಯ ಯೋಜನೆಗಳು ಇರಬೇಕೆಂದು ಕೇಳಿದಾಗ ಆಚಾರ್ಯರು ನೀಡಿದ ಉತ್ತರ ಹೀಗಿತ್ತು. “ ಬಡವರ ಹಸಿವನ್ನು ನೀಗಿಸಿಲಾಗದ, ದುಡಿಯುವ ಕೈಗಳಿಗೆ ಕೆಲಸ ನೀಡಲಾಗದ ನಿಮ್ಮ ಪಂಚವಾರ್ಷಿಕ ಯೋಜನೆಗಳನ್ನು ಕಸದ ಬುಟ್ಟಿಗೆ ಬಿಸಾಡಿ. ಮೊದಲು ನೀವು , ನಿಮ್ಮ ಪರಿವಾರ ದೆಹಲಿ ಬಿಟ್ಟು ಹಳ್ಳಿಗಳತ್ತ ಹೊರಡಿ. ಅಲ್ಲಿ ದರ್ಶನವಾಗುವ ನರಕ ಸದೃಶ್ಯ ಬದುಕು ನಿಮಗೆ ದಾರಿ ತೋರಿಸುತ್ತದೆ”.
1958ರಲ್ಲಿ ವಿನೋಬಾ ಅವರು ಸಲ್ಲಿಸಿದ ಸಮಾಜ ಸೇವೆಗಾಗಿ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು
1983ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು.
1982ರ ವರ್ಷದಲ್ಲಿ ಅವರು ತೀವ್ರ ಅನಾರೋಗ್ಯದಿಂದಿದ್ದರೂ ಯಾವುದೇ ರೀತಿಯ ಔಷದೋಪಚಾರ ಸ್ವೀಕರಿಸಲು ಒಪ್ಪದೆ ನವೆಂಬರ್ 15, 1982ರಂದು ನಿಧನರಾದರು. ಸ್ವಾರ್ಥಕ್ಕಾಗಿಯೇ ಬದುಕುವ ಸಂಕುಚಿತ ಮನೋಭಾವದ ಜನರೇ ಹೆಚ್ಚಾಗಿರುವ ಈ ಕಾಲದಲ್ಲಿ ವಿನೋಬಾ ಭಾವೆ ರವರ ಜೀವನ ಮಾದರಿಯಾಗಿ ಕಾಣಿಸುತ್ತದೆ. ಭಾರತೀಯ ಸಮಾಜದ ಸ್ವಾತಂತ್ರ್ಯ ಮತ್ತು ಒಳಿತಿಗಾಗಿ ಶ್ರಮಿಸಿದ ಆಚಾರ್ಯ ವಿನೋಬಾ ಭಾವೆ ಅವರು ಜನಮನದಲ್ಲಿ ಇಂದಿಗೂ  ಚಿರಸ್ಥಾಯಿಯಾಗಿದ್ದಾರೆ. 

ಸಿಹಿಜೀವಿ ವೆಂಕಟೇಶ್ವರ
ತುಮಕೂರು