05 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _6 ನೇತಾಜಿ ಸುಭಾಷ್ ಚಂದ್ರ ಬೋಸ್.


 


ಆಗಸ್ಟ್ ಮಾಸದ ನೆನಪುಗಳು...

ಭಾಗ _6

ನೇತಾಜಿ ಸುಭಾಷ್ ಚಂದ್ರ ಬೋಸ್.

ಮಹಾತ್ಮಾ ಗಾಂಧೀಜಿಯವರ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡು ಅವರ ಅಹಿಂಸೆ, ಸತ್ಯಾಗ್ರಹ ಮುಂತಾದ ಅಸ್ತ್ರಗಳು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ನೀಡಿವೆ ಎಂಬುದನ್ನು ಅಲ್ಲಗಳೆಯಲಾಗದು. ಅದೇ ರೀತಿಯಲ್ಲಿ ನೇತಾಜಿಯವರು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದು ಅಷ್ಟೇ ಸತ್ಯ.

ಸುಭಾಷ್ ಚಂದ್ರ ಬೋಸ್ ಜನಿಸಿದ್ದು 1897ರ ಜನವರಿ 23ರಂದು, ಒಡಿಶಾದ ಕಟಕ್ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ 14 ಜನ ಮಕ್ಕಳಲ್ಲಿ ಸುಭಾಷ್ 9 ನೇಯವರು.ಕಟಕ್ ನಲ್ಲಿ ರ‍ಯಾವೆನ್ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಮಾಡಿ ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್  ರಿಂದ ಪ್ರೇರಣೆ ಪಡೆದು  ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗರಾಗಿದ್ದರು. 

1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ ಪಡೆದ ನಂತರ ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ ಬೆಳೆಸಿದರು. ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪಾಸು ಮಾಡಿದರು. ಆದರೆ ಬ್ರಿಟಿಷರ ನೀತಿಗಳ ವಿರುದ್ಧ ಸೆಟೆದು ನಿಂತು
ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಐ ಸಿ ಎಸ್ ಗೆ  ಗುಡ್ ಬೈ ಹೇಳಿದರು.

20 ತಿಂಗಳ ಇಂಗ್ಲೆಂಡ್ ವಾಸದ ನಂತರ 1921 ರ ಜುಲೈ 16ರಂದು ಮುಂಬಯಿಗೆ ಮರಳಿದರು. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ ಮಾಡಿದರು.  ಚಿತ್ತರಂಜನ್ ದಾಸ್ ರವರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ ನೀಡಿದರು. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು 6 ತಿಂಗಳ ಸಜೆ ಘೋಷಿಸಿದಾಗ ’ಬರಿಯ 6 ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು.

ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಎಂಬುದು ಬಲ್ಲವರ ಮಾತಾಗಿತ್ತು.   ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.

1927 ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಗಾಂಧೀಜಿಯವರ  ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು.
ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ ಕೈಗೊಂಡರು. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ  ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ ಮಾಡಿದರು. ಇಟೆಲಿ ಪ್ರಧಾನಿ ಬೆನಿಟೊ  ಮುಸ್ಸೋಲಿನಿ ಜತೆ ಚರ್ಚಿಸಿದರು.
ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ ಕಾರ‍್ಯಾಚರಣೆ ಮಾಡಲು   ’ಫ್ರೀ ಇಂಡಿಯಾ ಸೆಂಟರ್’ ಸ್ಥಾಪಿಸಿದರು.  ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ನೀಡಿದ  ಬೋಸರಿಗೆ  ಜನರು ಅಭಿಮಾನಿಗಳು  ’ನೇತಾಜಿ’ ಬಿರುದು ನೀಡಿದರು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ ನೀಡುತ್ತಾ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ ಮಾಡುತ್ತಾ  ಹಿಟ್ಲರ್ ಜತೆ ಭೇಟಿ ಮಾಡಿದರು. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಕೆ ಹಮ್ಮಿಕೊಂಡು ಅಂಡಮಾನ್ ನಿಕೋಬಾರ್ ನಾಗಾ ಲ್ಯಾಂಡ್ ಗಳಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ ಮಾಡಿ ಮುನ್ನುಗ್ಗುವಾಗ ಭಾರತೀಯರಿಗೆ ಸುದ್ದಿಯೊಂದು ಬರಸಿಡಿಲಿನಂತೆ ಎರಗಿತು.ನೇತಾಜಿಯವರು ವಿಮಾನ ಅಪಘಾತದಲ್ಲಿ ಮರಣ ಹೊಂದಿದರೆಂಬ ಸುದ್ದಿ ಇಂದಿಗೂ ವಿವಾದಾತ್ಮಕವಾಗಿರುವುದು ದುರದೃಷ್ಟಕರ.

ನರಿ ಬುದ್ದಿಯ ಕೆಂಪು ಮೂತಿಯವರ ಕುತಂತ್ರಗಳು , ಕೆಟ್ಟ ನಡೆಗಳು, ಗೋಮುಖ ವ್ಯಾಘ್ರ ಗುಣಗಳು, ಒಡೆದು ಆಳುವ ನಿಸ್ಸೀಮರಿಗೆ ಶಾಂತಿ ಅಹಿಂಸೆಯ ನಡೆಗಳು ನಾಟಲೇ ಇಲ್ಲ ಎಂಬುದನ್ನು ನಮ್ಮ ದೇಶದ ಇತಿಹಾಸ ಓದಿದ ಯಾರಾದರೂ ಒಪ್ಪಿಕೊಳ್ಳಲೇ ಬೇಕು . ಪರಂಗಿಗಳಿಗೆ ದಂಡಂ ದಶಗುಣಂ ನೀತಿಯೇ ಸರಿಯಾಗಿತ್ತು.ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸಿವೆ ಎಂದು ಗುಡುಗಿದ ನೇತಾಜಿವರ ಘರ್ಜನೆಗೆ ಬ್ರಿಟಿಷರು ಅಕ್ಷರಶಃ ಕಂಗಾಲಾಗಿ ಹೋದರು.ಅವರ ಆಕ್ರಮಣಕಾರಿ ನೀತಿಗೆ ಆಗಿನ ಯುವಜನ ಮಾರುಹೋಗಿ ಭಾರತೀಯ ರಾಷ್ಟ್ರೀಯ ಸೇನೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು.ಇದರಲ್ಲಿ ಮಹಿಳೆಯರು ಸಹ ಪಾಲ್ಗೊಂಡರು ಎಂಬುದನ್ನು ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ರಂತವರನ್ನು ಉದಾಹರಣೆ ನೀಡಬಹುದು.

ಹಿಂಸೆಯನ್ನು ಯಾರೂ ಪ್ರಚೋದಿಸಬಾರದು ಎಂಬುದನ್ನು ನಾನೂ ಒಪ್ಪುವೆ ಆದರೆ ದುಷ್ಟ ಸಂಹಾರ ಕ್ಕೆ ಕೊನೆಯ ಅಸ್ತ್ರವಾಗಿ ಹಿಂಸೆ ತಪ್ಪಲ್ಲ ಎಂಬ ನಮ್ಮ ಶಾಸ್ತ್ರ ಪುರಾಣಗಳಲ್ಲಿಯೂ ಉಲ್ಲೇಖವಿರುವುದನ್ನು ಗಮನಿಸಲೇಬೇಕು. ಮಹಿಷ ,ರಕ್ತಬೀಜರಂತಹ ರಕ್ಕಸರ ಸಂಹಾರ ಮಾಡದೇ ಶಾಂತಿ ಮಂತ್ರ ಪಠಿಸುತ್ತಾ ದೇವಿ ಕುಳಿತಿದ್ದರೆ ಜನರ ಪಾಡೇನಾಗುತ್ತಿತ್ತು? ಇನ್ನೂ ಕೃಷ್ಣಾವತಾರಗಳಲ್ಲಿಯೂ ಅಸುರಿ ಶಕ್ತಿಗಳ ಸಂಹಾರಕ್ಕೆ ಹಿಂಸೆ ತಪ್ಪಲ್ಲ ಎಂಬುದು ಸಾಬೀತಾಗಿದೆ.ಆದ್ದರಿಂದ ನೇತಾಜಿಯವರ ಮಾರ್ಗವೇ ಸರಿ ಎಂಬುದನ್ನು ಕೊನೆಗೆ ಮಹಾತ್ಮ ಗಾಂಧೀಜಿಯವರೇ ರೋಸಿ 1942 ರಲ್ಲಿ "ಬ್ರಿಟೀಷರೇ ಭಾರತ ಬಿಟ್ಟು ತೊಲಗಿ " ಎಂದು ಗುಡುಗಿ ಡೂ ಆರ್ ಡೈ ಎಂದು ಪರೋಕ್ಷವಾಗಿ ಪ್ರಭಲವಾದ ಹೋರಾಟಕ್ಕೆ ಕರೆ ನೀಡಿದ್ದು ನೇತಾಜಿವರ ಮಾರ್ಗವೇ ಸರಿ ಎಂಬುದನ್ನು ಒಪ್ಪಿದಂತೆ ಎಂದು ಕೆಲವರು ಹೇಳುವುದು ತಪ್ಪಲ್ಲ ಎನಿಸುತ್ತದೆ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಮಾತು ಎಂದಿಗೂ ಪ್ರಸ್ತುತ. ದುಷ್ಟ ಬುದ್ದಿಯ ಆಂಗ್ಲರ ಮಣಿಸಲು ಅಹಿಂಸೆಯ ಮಾರ್ಗ ಹಿಡಿಯದೇ ಬೇರೆ ದಾರಿಯಿರಲಿಲ್ಲ ಯುದ್ದ ಮತ್ತು ಪ್ರೀತಿಯಲ್ಲಿ ಎಲ್ಲವೂ ಸರಿ ಎಂಬಂತೆ ನಮ್ಮ ನೇತಾಜಿವರು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂಸೆಯ ಮಾರ್ಗ ಅನುಸರಿಸಿದ್ದು ತಪ್ಪಲ್ಲ ಅಂದು ಅದು ಅನಿವಾರ್ಯವಾಗಿತ್ತು. ನೇತಾಜಿವರ ಮುಂದಾಲೋಚನೆ, ಅವರ ಚಿಂತನೆ ಎಂದಿಗೂ ಅನುಕರಣೀಯ ಅದಕ್ಕೆ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಈಗಲೂ ಭಾರತೀಯರಿಗೆಲ್ಲ ಒಬ್ಬರೇ ನೇತಾಜಿ.

ಅವರ ಅಭಿಮಾನದಿಂದ ಮನದಾಳದಲ್ಲಿ ಮೂಡಿದ್ದು ಈ ಕವಿತೆ

*ಭಾಗ್ಯವಿಧಾತ*

ವಂದಿಪೆನು ನೇತಾಜಿಗೆ
ನಮಿಪೆನು ವೀರಸಿಂಹನಿಗೆ
ಭಾರತ ರಾಷ್ಟ್ರೀಯ ಸೇನೆ ಕಟ್ಟಿದೆ
ಬ್ರಿಟಿಷರ ಧಿಮಾಕಿಗೆ ಕುಟ್ಟಿದೆ|೧|

ಜೈ ಹಿಂದ್ ಘೋಷ ಮೊಳಗಿಸಿದೆ
ದೇಶ ಭಕ್ತಿಯ ಕಿಚ್ಚು ಹತ್ತಿಸಿದೆ
ಫಾರ್ವರ್ಡ್ ಬ್ಲಾಕ್ ಹರಿಕಾರ
ಪರಂಗಿಯರ ಎದುರಿಸಿದ ಎದೆಗಾರ|೨|

ಭಾರತ ದೇಶದ ಭಾಗ್ಯವಿಧಾತ
ತಾಯಿಯ ಋಣವ ತೀರಿಸಿದಾತ
ಶಿಸ್ತಿನ ಸಿಪಾಯಿ ನಮಗೆಲ್ಲ
ಸ್ಪೂರ್ತಿಯ ಸೆಲೆಯು ಜಗಕೆಲ್ಲ|೩|

ಹಾತೊರೆಯಲಿಲ್ಲ ನಿಮ್ಮ ಸುಖಕೆ
ಹೋರಾಡಿದಿರಿ ನೀವು ಸ್ವಾತಂತ್ರಕೆ
ಉಳಿದಿದೆ ನಿಮ್ಮೆಸರು ಧರೆಯಲೆಲ್ಲ
ನಾವೆಂದಿಗೂ ನಿಮ್ಮನು ಮರೆಯಲ್ಲ|೩|

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

ಆಹಾರ..

 


*ಆಹಾರ*


ಪುರಸ್ಕಾರ ಪ್ರಿಯರು ಇವರು

ಹೊಗಳಿಕೆಯೇ ಇವರ ದೇವರು 

ಅರಳುವರು  ಕಂಡರೆ  ಹಾರ 

ಪ್ರಶಸ್ತಿ ಫಲಕಗಳೇ ಇವರ  ಆಹಾರ .


ಸಿಹಿಜೀವಿ ವೆಂಕಟೇಶ್ವರ

ತುಮಕೂರು 

04 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _5 ಆಚಾರ್ಯ ವಿನೋಬಾ ಭಾವೆ.


 

ಆಗಸ್ಟ್ ಮಾಸದ ನೆನಪುಗಳು...

ಭಾಗ _5
ಆಚಾರ್ಯ ವಿನೋಬಾ ಭಾವೆ.

ಭೂದಾನ ಚಳುವಳಿಯ ಹರಿಕಾರ,  ಕನ್ನಡ ಭಾಷೆಯ ಬಗ್ಗೆ ಅಪಾರ ಗೌರವ ಹೊಂದಿದ್ದ ಮತ್ತು ನಮ್ಮ ಕನ್ನಡ ಬರವಣಿಗೆಯನ್ನು " ಲಿಪಿಗಳ ರಾಣಿ" ಎಂದು ಮನಸಾರೆ ಹೊಗಳಿದ ಸರಳ ಸಜ್ಜನ ಸ್ವಾತಂತ್ರ್ಯ ಹೋರಾಟಗಾರರಾದ ಆಚಾರ್ಯ ಬಿರುದಾಂಕಿತ ವಿನೋಬಾ ಭಾವೆಯವರನ್ನು ಈ ಆಗಸ್ಟ್ ಮಾಸದಲ್ಲಿ ನೆನೆಯೋಣ.

ವಿನೋಬಾ ಅವರು ಮಹಾರಾಷ್ಟ್ರದ ಕೋಲಬಾ ಜಿಲ್ಲೆಯ ಗಾಗೋಡೆ ಗ್ರಾಮದಲ್ಲಿ ಸೆಪ್ಟೆಂಬರ್ 11, 1895ರಂದು ಜನಿಸಿದರು. ಇವರ ತಂದೆ ನರಹರಿ ಶಂಭುರಾವ್ ಭಾವೆ. ತಾಯಿ ರುಕ್ಮಿಣಿ ದೇವಿ. ಅವರ ಮೂಲ ಹೆಸರು ವಿನಾಯಕ್ ನರಹರಿ ಭಾವೆ. ಬಾಲ್ಯದಲ್ಲಿಯೇ ವಿವಿಧ ಧರ್ಮಗಳ ಸಾರವನ್ನು ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು. 

ಅವರಿಗೆ ಗಣಿತದಲ್ಲಿ ಅಪಾರ ಆಸಕ್ತಿ ಇತ್ತು. 1916ರಲ್ಲಿ ತಮ್ಮ ಇಂಟರ್ ಮೀಡಿಯೆಟ್ ಪರೀಕ್ಷೆಗಾಗಿ ಮುಂಬೈಗೆ ಹೊರಟಿದ್ದ ವಿನೋಬಾ ಭಾವೆ ಅವರಿಗೆ ಮಹಾತ್ಮ ಗಾಂಧಿಯವರ ಬರಹವೊಂದು ಕಣ್ಣಿಗೆ ಬಿದ್ದು, ತಮ್ಮ ಓದು ಬರಹದ ಪ್ರಮಾಣ ಪತ್ರಗಳಿಗೆಲ್ಲ ಬೆಂಕಿಗೆ ಹಚ್ಚಿಬಿಟ್ಟರಂತೆ. ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಗಾಂಧೀಜಿಯವರ ಅನುಯಾಯಿಯಾಗುವುದರೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಭಾವೆ ಅನಂತರ ತಿರುಗಿ ನೋಡಲಿಲ್ಲ.
ವಿನೋಬಾ ಭಾವೆ ಒಬ್ಬ ಹಠವಾದಿ ಸತ್ಯಾಗ್ರಹಿ. ಅಹಿಂಸಾ ಮಾರ್ಗದಲ್ಲಿ ಅಪ್ರತಿಮ ನಿಷ್ಠೆಯಿರಿಸಿದ್ದರು.  ಉಪವಾಸ ಸತ್ಯಾಗ್ರಹದಲ್ಲಿ ಎತ್ತಿದ ಕೈ. ಜಾತೀಯತೆಯ ಭೇದ ಅಳಿಸಿ ಎಲ್ಲರೂ ಸೌಹಾರ್ದದಿಂದ ಬಾಳಬೇಕೆಂಬ ಕನಸು ಕಟ್ಟಿ ಅದನ್ನು ನೆರವೇರಿಸಲು ಹರಿಜನರೊಡನೆ ವಿವಿಧ ಮತೀಯರೊಡನೆ ದೇವಾಲಯಗಳಿಗೆ ಪ್ರವೇಶಿಸಿ ಮತ್ತೆ ಮತ್ತೆ ಸೆರೆವಾಸ ಅನುಭವಿಸಿದರು. ಅವರ ಈ ಎಲ್ಲ ಪ್ರಯತ್ನಗಳು ಎಲ್ಲರ ಮನ್ನಣೆಗಳಿಸಿ ಹೊಸ ಕ್ರಾಂತಿಗೆ ನಾಂದಿಯಾಯಿತು.

ಸಂತರಂತೆ ಬಾಳಿದ್ದ ವಿನೋಬಾರವರ ಅಂತಃಸತ್ತ್ವ ಬಹಳ ಪ್ರಭಾವಶಾಲಿಯಾಗಿತ್ತು 1960ರಲ್ಲಿ ಚಂಬಲ್ ಕಣಿವೆಯ ಡಕಾಯಿತರು,   ಅವರಿಗೆ ಶರಣಾಗಿದ್ದು   ಅದಕ್ಕೊಂದು ಉದಾಹರಣೆ. ಈ ಡಕಾಯಿತರೆಲ್ಲರೂ ಮುಂದೆ ಭಾವೆಯವರ ಮಾರ್ಗದರ್ಶನದಲ್ಲಿ  ಜೀವನ ಕಳೆದರು.

1955ರಲ್ಲಿ ’ಭೂದಾನ ಚಳುವಳಿ’ಗೆ ಚಾಲನೆ ನೀಡಿದ ಭಾವೆ ರವರು  ಅದನ್ನು ವ್ಯಾಪಕಗೊಳಿಸಿ ಅಸಂಖ್ಯ ಭೂದಾನಕ್ಕೆ ಪ್ರೇರಣೆ ನೀಡಿದರು. ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಓಡಾಡಿ ಸಹಸ್ರಾರು ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆಯಾಗಿ ನಿಂತರು. ಅವರು ಸಿರಿವಂತರಿಂದ ದಾನ ಸ್ವೀಕರಿಸಿ ಬಡಬಗ್ಗರಿಗಾಗಿ ಹಸ್ತಾಂತರಿಸಿದ ಹಳ್ಳಿಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು. ಅವುಗಳಲ್ಲಿ ತಮಿಳುನಾಡು ಒಂದರಲ್ಲೇ ಅವರು ಸುಮಾರು 175 ಹಳ್ಳಿಗಳನ್ನು ಸಿರಿವಂತರಿಂದ ಸ್ವೀಕರಿಸಿ ಬಡಜನರಿಗೆ ಹಸ್ತಾಂತರಿಸಿದರು.

ಆಚಾರ್ಯ ವಿನೋಬಾ ಅವರು ಬಹುಭಾಷಾ ಪಂಡಿತರಾಗಿದ್ದು ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್, ಕನ್ನಡ ಭಾಷೆಗಳ ಪರಿಚಯ ಅವರಿಗಿತ್ತು. ಕನ್ನಡ ಭಾಷೆಯ ಲಿಪಿ ಅವರನ್ನು ಮೋಡಿ ಮಾಡಿತ್ತು. ಅವರು ಕನ್ನಡದ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಶ್ಲಾಘಿಸುತ್ತಿದ್ದರು. 1958ರಲ್ಲಿ ವಿನೋಬಾ ಅವರು ಸಲ್ಲಿಸಿದ ಸಮಾಜ ಸೇವೆಗಾಗಿ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1983ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು.
ವಿನೋಬಾ ಭಾವೆ ಸಮರ್ಥ ಲೇಖಕರಾಗಿದ್ದರು. 1923 ರಲ್ಲಿ ’ಮಹಾರಾಷ್ಟ್ರ ಧರ್ಮ’ ಪತ್ರಿಕೆಯ ಸಂಪಾದಕರಾದರು. ನಾಗಪುರದ ’ಧ್ವಜಸತ್ಯಾಗ್ರಹ’ ದಲ್ಲಿ ತಿಂಗಳಾನುಗಟ್ಟಲೆ ಬಂಧಿತರಾದರು ಮತ್ತು ಕೇರಳದ ’ವೈಕೋಮ್ ಸತ್ಯಾಗ್ರಹ’ಕ್ಕೆ ಹೊರಟು ನಿಂತರು. ಇವೆಲ್ಲದರ ನಡುವೆಯೂ ನಿರಂತರ ಅಧ್ಯಯನಶೀಲರಾಗಿದ್ದ ಅವರು ಮರಾಠಿಯಲ್ಲಿ ಗೀತಾಭಾಷ್ಯ ಬರೆದರು.

ಉಪನಿಷತ್ತುಗಳಿಗೆ ವ್ಯಾಖ್ಯಾನ ಬರೆದರು. ತಿಂಗಳುಗಟ್ಟಲೆ ಜೈಲಿನಲ್ಲಿದ್ದಾಗ ತಮ್ಮ ಸಹ ಖೈದಿಗಳಿಗೆಲ್ಲ ಇವುಗಳ ಬಗ್ಗೆ ಪ್ರವಚನ ಕೊಡಾ ನೀಡುತ್ತಿದ್ದರು. ಕುರಾನ್ ಮತ್ತು ಬೈಬಲ್ಲಿನ ಬೋಧನೆಗಳನ್ನು ಸಹ ಪ್ರಕಟಿಸಿದರಲ್ಲದೆ, ಶಿಕ್ಷಣ, ಸ್ವರಾಜ್ಯ ಶಾಸ್ತ್ರದ ಕುರಿತಾದ ಗ್ರಂಥ ರಚನೆಯನ್ನೂ ಮಾಡಿದರು.
1948 ರಲ್ಲಿ ಗಾಂಧೀಜಿಯವರ ಹತ್ಯೆಯಾದ ನಂತರ ಆಚಾರ್ಯ ವಿನೋಬಾ ಭಾವೆಯವರಿಗೆ ಆಶ್ರಮದ ಬದುಕು ಸಾಕೆನಿಸಿತು. ತಮ್ಮ ಗುರು ಹಾಕಿಕೊಟ್ಟಿದ್ದ ಸರ್ವೋದಯ ಪರಿಕಲ್ಪನೆಯಲ್ಲಿ ಏನಾದರೂ ಗ್ರಾಮ ಸುಧಾರಣೆ ಮಾಡಲು ಸಾಧ್ಯವೆ? ಎಂದು ಯೋಚಿಸಿದ ಅವರು ಗ್ರಾಮಭಾರತದ ದರ್ಶನಕ್ಕಾಗಿ ಕಾಲ್ನಡಿಗೆ ಪ್ರವಾಸ ಹೊರಟರು.

1951 ಏಪ್ರಿಲ್ 18 ರಂದು ಆಂಧ್ರದ ತೆಲಂಗಾಣ ಪ್ರಾಂತ್ಯದ ಪೂಚಂಪಲ್ಲಿ ಎಂಬಲ್ಲಿ ಭಾಷಣ ಮಾಡುತ್ತಾ, ಶ್ರೀಮಂತ ಜಮೀನ್ದಾರರು ತಮ್ಮಲ್ಲಿರುವ ಜಮೀನುಗಳನ್ನು ಬಡವರಿಗೆ ದಾನ ಮಾಡಬೇಕು. ಇದು ಯಾವ ಕಾರಣಕ್ಕೂ ನಿಮ್ಮ ಮನಸ್ಸಿನಲ್ಲಿ ಭಿಕ್ಷೆ ಎಂಬ ಭಾವನೆ ಮೂಡಕೂಡದು, ಬಡತನ ಹೋಗಲಾಡಿಸಲು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ದೀಕ್ಷೆ ಎಂದು ಭಾವಿಸಬೇಕು ಎಂದು ಕರೆಯಿತ್ತರು.
ವಿನೋಬಾ ಮಾತುಗಳಿಂದ ಪ್ರಭಾವಿತನಾದ ರಾಮರೆಡ್ಡಿ ಎಂಬ ಜಮೀನ್ದಾರ ಸ್ಥಳದಲ್ಲಿಯೇ ನೂರು ಎಕರೆ ಭೂಮಿಯನ್ನು ವಿನೋಬಾರವರಿಗೆ ದಾನ ಮಾಡಿದ. ಈ ಕ್ರಿಯೆಯಿಂದ ವಿನೋಬಾ ತಕ್ಷಣಕ್ಕೆ ವಿಚಲಿತರಾದರು. ಆದರೆ, ಇದು ದೇವರು ತೋರಿದ ದಾರಿ ಎಂದು ತಿಳಿದ ಅವರು ಈ ಕ್ರಿಯೆಗೆ ಭೂದಾನ ಎಂಬ ಹೆಸರಿಟ್ಟು ಜಮೀನುಗಳನ್ನು ಸ್ವೀಕರಿಸುತ್ತಾ ಹೋದರು. ನೀವು ನೀಡುವ ಜಮೀನಿನಲ್ಲಿ ಯಾವ ಕಾರಣಕ್ಕೂ ದೇಗುಲ, ಛತ್ರ, ಅಥವಾ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದಿಲ್ಲ.
ಹಸಿವು ಮತ್ತು ಬಡತನದಿಂದ ಬಳಲುತ್ತಿರುವ ಭಾರತದ ಬಡವರು ನಮ್ಮ ಪಾಲಿನ ನಿಜವಾದ ದೇವರಾಗಿದ್ದಾರೆ. ನೀವು ದಾನ ನೀಡುವ ಜಮೀನು ಅವರಿಗೆ ಸಲ್ಲುತ್ತದ ಎಂದು ಘೋಷಿಸುತ್ತಾ ಹೋದರು. ಮೊದಲ 70 ದಿನಗಳ ಪ್ರವಾಸದಲ್ಲಿ 12 ಸಾವಿರ ಎಕರೆ ಭೂಮಿ ದಾನವಾಗಿ ದೊರೆತರೆ, ನಂತರದ 60 ದಿನಗಳಲ್ಲಿ 18 ಸಾವಿರ ಎಕರೆ ಭೂಮಿ ದೊರೆಯಿತು.

ಮೊದಲ ಹಂತದ 800 ಕಿಲೋಮೀಟರ್ ಪಾದಯಾತ್ರೆಯಲ್ಲಿ 30 ಸಾವಿರ ಎಕರೆ ಭೂಮಿಯು ಭೂದಾನವಾಗಿ ವಿನೋಬಾರವರ ಮಡಿಲು ಸೇರಿತ್ತು. 1952 ರಲ್ಲಿ ನೆಹರೂ ರವರು ವಿನೋಬಾ ಅವರನ್ನು ದೆಹಲಿಗೆ ಆಹ್ವಾನಿಸಿ, ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮಾಭಿವೃದ್ಧಿಯ ಕುರಿತು ಯಾವ ರೀತಿಯ ಯೋಜನೆಗಳು ಇರಬೇಕೆಂದು ಕೇಳಿದಾಗ ಆಚಾರ್ಯರು ನೀಡಿದ ಉತ್ತರ ಹೀಗಿತ್ತು. “ ಬಡವರ ಹಸಿವನ್ನು ನೀಗಿಸಿಲಾಗದ, ದುಡಿಯುವ ಕೈಗಳಿಗೆ ಕೆಲಸ ನೀಡಲಾಗದ ನಿಮ್ಮ ಪಂಚವಾರ್ಷಿಕ ಯೋಜನೆಗಳನ್ನು ಕಸದ ಬುಟ್ಟಿಗೆ ಬಿಸಾಡಿ. ಮೊದಲು ನೀವು , ನಿಮ್ಮ ಪರಿವಾರ ದೆಹಲಿ ಬಿಟ್ಟು ಹಳ್ಳಿಗಳತ್ತ ಹೊರಡಿ. ಅಲ್ಲಿ ದರ್ಶನವಾಗುವ ನರಕ ಸದೃಶ್ಯ ಬದುಕು ನಿಮಗೆ ದಾರಿ ತೋರಿಸುತ್ತದೆ”.
1958ರಲ್ಲಿ ವಿನೋಬಾ ಅವರು ಸಲ್ಲಿಸಿದ ಸಮಾಜ ಸೇವೆಗಾಗಿ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು
1983ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು.
1982ರ ವರ್ಷದಲ್ಲಿ ಅವರು ತೀವ್ರ ಅನಾರೋಗ್ಯದಿಂದಿದ್ದರೂ ಯಾವುದೇ ರೀತಿಯ ಔಷದೋಪಚಾರ ಸ್ವೀಕರಿಸಲು ಒಪ್ಪದೆ ನವೆಂಬರ್ 15, 1982ರಂದು ನಿಧನರಾದರು. ಸ್ವಾರ್ಥಕ್ಕಾಗಿಯೇ ಬದುಕುವ ಸಂಕುಚಿತ ಮನೋಭಾವದ ಜನರೇ ಹೆಚ್ಚಾಗಿರುವ ಈ ಕಾಲದಲ್ಲಿ ವಿನೋಬಾ ಭಾವೆ ರವರ ಜೀವನ ಮಾದರಿಯಾಗಿ ಕಾಣಿಸುತ್ತದೆ. ಭಾರತೀಯ ಸಮಾಜದ ಸ್ವಾತಂತ್ರ್ಯ ಮತ್ತು ಒಳಿತಿಗಾಗಿ ಶ್ರಮಿಸಿದ ಆಚಾರ್ಯ ವಿನೋಬಾ ಭಾವೆ ಅವರು ಜನಮನದಲ್ಲಿ ಇಂದಿಗೂ  ಚಿರಸ್ಥಾಯಿಯಾಗಿದ್ದಾರೆ. 

ಸಿಹಿಜೀವಿ ವೆಂಕಟೇಶ್ವರ
ತುಮಕೂರು

ಆಗಸ್ಟ್_ಮಾಸದ_ನೆನಪುಗಳು #ಭಾಗ_4 #ಬಳ್ಳಾರಿ_ಸಿದ್ದಮ್ಮ.


 #ಆಗಸ್ಟ್_ಮಾಸದ_ನೆನಪುಗಳು 


#ಭಾಗ_4 


#ಬಳ್ಳಾರಿ_ಸಿದ್ದಮ್ಮ.


 ಕಿತ್ತೂರುರಾಣಿ ಚನ್ನಮ್ಮ,  ಬೆಳವಾಡಿ ಮಲ್ಲಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮುಂತಾದ ಧೀರ ಮಹಿಳೆಯರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸೊಲ್ಲೆತ್ತಿ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

 ಇವರಂತೆ ಸಾವಿರಾರು    ಮಹಿಳೆಯರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ.  ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಸ್ವಾತಂತ್ರ್ಯಾನಂತರ ಫಲಾಪೇಕ್ಷೆಯಿಲ್ಲದೆ ತೆರೆ ಮರೆಗೆ ಸರಿದ ಧೀಮಂತ ಮಹಿಳೆಯರನ್ನು ಆಗಸ್ಟ್ ಮಾಸದಲ್ಲಿ ನೆನೆಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ.ಅಂತಹವರಲ್ಲಿ ಪ್ರಮುಖ ಮಹಿಳೆ ಎಂದರೆ 'ಬಳ್ಳಾರಿ ಸಿದ್ದಮ್ಮ'ನವರು. 


ಮಹಾತ್ಮ ಗಾಂಧೀಜಿಯವರನ್ನು ನೋಡಲು ಕರ್ನಾಟಕದ ಬಳ್ಳಾರಿಯಿಂದ ಗುಜರಾತ್ ನ ಸಬರಮತಿ ಆಶ್ರಮಕ್ಕೆ ತೆರಳಿದ ದಿಟ್ಟ ಮಹಿಳೆ ನಮ್ಮ ಸಿದ್ದಮ್ಮ. ಶಿವಪುರ ಧ್ವಜ ಸತ್ಯಾಗ್ರಹ, ವಿದುರಾಶ್ವತ್ಥ ಧ್ವಜ ಸತ್ಯಾಗ್ರಹ ಗಳಲ್ಲಿ ಮಹಿಳೆಯರನ್ನು ಹುರಿದುಂಬಿಸಿ ಸ್ವತಂತ್ರ ಚಳುವಳಿಯನ್ನು ಜನಾಂದೋಲನ ಮಾಡುವಲ್ಲಿ ಸಿದ್ದಮ್ಮ ನವರು ಪ್ರಮುಖ ಪಾತ್ರ ವಹಿಸಿದರು. 


ಬಳ್ಳಾರಿ ಸಿದ್ದಮ್ಮನವರು ಬಳ್ಳಾರಿ ಜಿಲ್ಲೆ ಹಾವೇರಿ ತಾಲ್ಲೂಕಿನ ದುಂಡಸಿ ಗ್ರಾಮದ ಸಂಪ್ರದಾಯಸ್ಥ ಲಿಂಗಾಯತ ಸಮುದಾಯದ ಕುಟುಂಬದಲ್ಲಿ 1900ರಲ್ಲಿ ಜನಿಸಿದರು. ಇವರ ತಂದೆ ತಾಯಂದಿರು ಬಸೆಟಪ್ಪ ಮತ್ತು ಶಿವಮ್ಮ. ಬಸೆಟಪ್ಪನವರು ಮಧ್ಯಮ ಪ್ರಮಾಣದ ವ್ಯಾಪಾರಸ್ಥರು.  ಸಂಪ್ರದಾಯಸ್ಥ  ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವ ಪದ್ದತಿ ಇರಲಿಲ್ಲ. ಅವರ ಕಲಿಕೆ ಏನಿದ್ದರೂ ಮನೆಯ ನಾಲ್ಕು ಗೋಡೆಗಳ ಮಧ್ಯೆ. ಸಿದ್ದಮ್ಮಳಿಗೆ ಕಲಿಯಬೇಕೆಂಬ ಇಚ್ಛೆಯಿದ್ದರೂ ತಂದೆತಾಯಂದಿರು ಅದಕ್ಕೆ ವಿರೋಧ ಮಾಡಿದರು. ಕದ್ದುಮುಚ್ಚಿ ನಾಲ್ಕನೆಯ  ತರಗತಿಯ ತನಕ ವ್ಯಾಸಂಗ ಮಾಡಿದ್ದಾಯ್ತು. ಪ್ರಾಪ್ತ ವಯಸ್ಸಿಗೆ ಬರುತ್ತಲೇ ಬಳ್ಳಾರಿಯ ಮುರುಗಪ್ಪನವರೊಂದಿಗೆ ವಿವಾಹವಾಯ್ತು. ಸುಖ ದಾಂಪತ್ಯ ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ.   

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಆಂದೋಲನವು ಇಡೀ ದೇಶವನ್ನು ವ್ಯಾಪಿಸಿತು. ಅದರಲ್ಲೂ ಮಹಾತ್ಮ ಗಾಂಧಿಯವರು ಪ್ರಭಾವದಿಂದಾಗಿ 1920 ರಲ್ಲಿ ಆಸಹಕಾರ  ಚಳುವಳಿ,1939 ರಲ್ಲಿ ಉಪ್ಪಿನ ಸತ್ಯಾಗ್ರಹಗಳು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಛನ್ನು ಹೆಚ್ಚಿತ್ತು. ವಿದ್ಯಾವಂತರಲ್ಲದಿದ್ದರೂ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅವರ ಮನಸ್ಸು ತುಡಿಯುತ್ತಿತ್ತು. ತಿಲಕರ ಕೇಸರಿ, ಮರಾಠಿ ಪತ್ರಿಕೆಗಳು ಅವರ ಮೇಲೆ ಪ್ರಬಾವ ಬೀರಿದವು. ಮಹಾತ್ಮ ಗಾಂಧೀಜಿಯವರನ್ನು ನೋಡಿರದಿದ್ದರೂ ಅವರ ಪ್ರಭಾವ ಮುರುಗಪ್ಪ ದಂಪತಿಗಳ ಮೇಲೆ ಬಿದ್ದಿತು.   ಸಿದ್ದಮ್ಮನವರಿಗೆ ಗಾಂಧೀಜಿಯವರನ್ನು ನೋಡಬೇಕು, ಆ ಮಹಾತ್ಮನೊಂದಿಗೆ ಮಾತನಾಡಬೇಕು, ಅವರು ಎಲ್ಲಿ ಇರುತ್ತಾರೆ?ಎಲ್ಲಿ ಸಿಗುತ್ತಾರೆ ?ಎಂಬ ಕುತೂಹಲ. ಗಾಂಧೀಜಿಯವರನ್ನು ನೋಡಬೇಕೆಂದರೆ ವಾರ್ದಾದ ಅವರ ಆಶ್ರಮಕ್ಕೆ ಹೋದರೆ ಸಿಗುತ್ತಾರೆ ಎಂದು ತಿಳಿಯಿತು.ಅಲ್ಲಿಗೆ ಹೋಗಿ ಬರಲು ಹಣ ಬೇಕು. ಕೆಲವು ಕಾಲ ಅಲ್ಲಿಯೇ ತಂಗಬೇಕು. ಇವೇ ಮುಂತಾದ ಪ್ರಶ್ನೆಗಳು ಬಂದಾಗ ಉತ್ತರ ಸಿದ್ದಮ್ಮನವರಲ್ಲಿತ್ತು. ಮನಸ್ಸಿದ್ದರೆ ಮಾರ್ಗ ಎಂಬಂತೆ ಗುಜರಾತಿನ ವಾರ್ದಾಕ್ಕೆ ತೆರಳಿದರು. ಸಿದ್ದಮ್ಮನವರು. ಗಾಂಧೀಜಿಯವರನ್ನು ನೋಡಿ ಅವರೊಂದಿಗೆ ಮಾತನಾಡಿದರು.  ಆಶ್ರಮದಲ್ಲಿದ್ದ ಸಮಯದಲ್ಲಿ ಸ್ವಚ್ಛತಾ ಕೆಲಸ , ದವಸ ದಾನ್ಯಗಳಲ್ಲಿರುವ ಕಲ್ಲು, ಕಡ್ಡಿ ತೆಗೆಯುವುದು. ಮುಂತಾದ ಕೆಲಸಗಳನ್ನು ಮಾಡುತ್ತಾ ಇರುವಾಗಲೇ  ನಾಯಕರಗಳಾದ ಸರ್ದಾರ್ ವಲ್ಲಭಬಾಯಿ ಪಟೇಲ್, ರಾಜಗೋಪಾಚಾರಿ, ಕಾಮರಾಜ್  ಮುಂತಾದವರನ್ನು ಕಾಣುವ ಭಾಗ್ಯ ದೊರೆಯಿತು. ತಾನೂ ಅಂತಹ ನಾಯಕಿಯಾಗಬೇಕೆಂಬ ಹಂಬಲ ಸಿದ್ದಮ್ಮನವರಲ್ಲಿ ಮೂಡಿತು. ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳಬೇಕು ಎಂಬುದಾಗಿ ತೀರ್ಮಾನಿಸಿದರು. ಕರ್ನಾಟಕ ರಾಜ್ಯವು ಅಂದು ಹರಿದು ಹಂಚಿಹೋಗಿತ್ತು. ಒಂದೆಡೆ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಯುತ್ತಿದ್ದರೆ ಮತ್ತೊಂದೆಡೆ ಸ್ವಾತಂತ್ಯಕ್ಕಾಗಿ ಹೋರಾಟ ನಡೆಯುತ್ತಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಹಳೇ ಮೈಸೂರು ಭಾಗದಲ್ಲಿ ನಿರಂತರವಾಗಿ  ಬ್ರಿಟಿಷರ ಹಾಗೂ ಆಳರಸರ ವಿರುದ್ದ ಚಳುವಳಿ ನಡೆಯುತ್ತಿತ್ತು.  

 ಬಳ್ಳಾರಿ ಸಿದ್ದಮ್ಮನವರು  ಚಳುವಳಿಗಾರರನ್ನು ಹರಿದುಂಬಿಸುತ್ತಿದ್ದರು. ಪೋಲಿಸರಿಗೆ ಹೆದರದೆ ಭಾಷಣ ಮಾಡುತ್ತಿದ್ದರು. ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಅದು ಕೈತಪ್ಪಿ ಹೋಗುತ್ತದೆ. ಅಂತಹ ಒಂದು ಅವಕಾಶ ಸಿದ್ದಮ್ಮನವರಿಗೆ ಲಭಿಸಿತು. ಅದೇ  ಮಂಢ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹ. ಸಿದ್ದಮ್ಮನವರು ಬಳ್ಳಾರಿ ದಾವಣಗೆರೆ,ಚಿತ್ರದುರ್ಗ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಚಳುವಳಿಗಳು ಹರತಾಳಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಶ್ರೀಯುತರುಗಳಾದ ಎಸ್.ನಿಜಲಿಂಗಪ್ಪ, ಟಿ.ಸಿದ್ದಲಿಂಗಯ್ಯ, ಕೆ.ಎಸ್.ಪಾಲರು ಹಾಗೂ ಇನ್ನಿತರ ಮುಖಂಡರು ಚಳುವಳಿಯನ್ನು ಹಬ್ಬಿಸುತ್ತಿದ್ದರು. ಸಿದ್ದಮ್ಮನವರು ಈ ನಾಯಕರುಗಳಿಗೆ ಸಾತ್ ನೀಡುತ್ತಿದ್ದರು.


ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ದ್ವಜವನ್ನು ಸಾರ್ವಜನಿಕವಾಗಿ ಧ್ವಜಾರೋಹಣ ಮಾಡಲು ಒಂದು ಸ್ವಾಗತ ಸಮಿತಿಯನ್ನು ರಚಿಸಿಕೊಂಡರು. ಇದೊಂದು ಭಾರೀ ಪ್ರಮಾಣದ ಸಭೆಯಾದುದರಿಂದ ಹೆಚ್ಚಾಗಿ ಹಣಕಾಸಿನ ಅಗತ್ಯವಿದ್ದಿತು. ಆ ಕಾರಣದಿಂದಾಗಿಯೇ ಸಾಹುಕಾರ್ ಚನ್ನಯ್ಯನವರನ್ನು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು. ಹೆಚ್.ಕೆ.ವೀರಣ್ಣ ಗೌಡರು ಕಾರ್ಯದರ್ಶಿಯಾಗಿದ್ದರು. ಕೊಪ್ಪದ ಜೋಗಿಗೌಡರನ್ನು ಖಜಾಂಚಿಯನ್ನಾಗಿಯೂ ಎಂ.ಎನ್.ಜೋಯಿಸ್ರವರನ್ನು ಜೆ.ಓ.ಸಿ.ಯನ್ನಾಗಿ ನೇಮಕ ಮಾಡಿರುವುದಗಿ ಪ್ರಕಟಿಸಿದರು. ಶಿವಪುರದಲ್ಲಿ ತಿರುಮಲೇಗೌಡರ ಜಾಗದಲ್ಲಿ ಧ್ವಜಾರೋಹಣ ಮಾಡಲು ತೀರ್ಮಾನಿಸಿದರು. ಸಭೆ ನಡೆಯುವ ಒಂದು ವಾರ ಮೊದಲೇ ಹೆಚ್.ಸಿ.ದಾಸಪ್ಪ, ಯಶೋಧರ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ತಾಯಮ್ಮ ವೀರಣ್ಣಗೌಡ, ವೆಂಕಮ್ಮ ಸೀತಾರಾಮಯ್ಯ ಇಂದಿರಾಬಾಯಿ ಕೃಷ್ಣಮೂರ್ತಿ ಇನ್ನೂ ಮುಂತಾದ ನಾಯಕರು ಶಿವಪುರಕ್ಕೆ ಬಂದಿಳಿದರು. ಮಹಿಳೆಯರು ಒಂದೊಂದು ತಂಡಗಳನ್ನಾಗಿ ಮಾಡಿಕೊಂಡು ಹಳ್ಳಿಗಳಿಗೆ ತೆರಳಿ ಗ್ರಾಮಗಳ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದರು. ಸಿದ್ದಮ್ಮನವರು ಬಳ್ಳಾರಿಯಿಂದ ಶಿವಪುರದಂತಹ ಹಳ್ಳಿಗೆ ಬಂದು ಜನರನ್ನು ಹುರಿದುಂಬಿಸುತ್ತಿರುವುದನ್ನು ನೋಡಿದ ಜನ ಸ್ವಇಚ್ಛೆಯಿಂದ ಚಳುವಳಿಗೆ ಧುಮುಕಿದರು. ಹೆಚ್.ಕೆ.ವೀರಣ್ಣಗೌಡ, ಹೆಚ್.ಸಿ.ದಾಸಪ್ಪ, ಸಾಹುಕಾರ್ ಚನ್ನಯ್ಯ ಇನ್ನೂ ಮುಂತಾದವರು ಟಿ. ಸಿದ್ದಲಿಂಗಯ್ಯನವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದರು. ಇಂದಿನ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಶಿವಪುರದಲ್ಲಿ 1938 ಏಪ್ರಿಲ್ 11, 12, ಹಾಗೂ 13 ರಂದು ಕಾಂಗ್ರೆಸ್ ದ್ವಜವನ್ನು ಹಾರಿಸಲು   ತೀರ್ಮಾನಿಸಿದರು.ಇದನ್ನು ಶಿವಪುರ ರಾಷ್ಟ್ರಕೂಟವೆಂದು ಕರೆದರು. 1938 ರ  ಏಪ್ರಿಲ್ 11ನೇ ತಾರೀಖು ಶಿವಪುರದಲ್ಲಿ ಮೂವತ್ತು ಸಾವಿರ ಜನ ಸೇರಿದರು. ಜಿಲ್ಲಾ ಮ್ಯಾಜಿಸ್ಟ್ರೇಟರಾದ ಜಿ.ಎಂ.ಮೇಕ್ರಿಯವರು ಶಿವಪುರ  ಸುತ್ತಮುತ್ತ ಧ್ವಜಾರೋಹಣ  ಮಾಡದಂತೆ ನಿಷೇಧ ಹೇರಿದ್ದರು. ಅಂದು  ಟಿ. ಸಿದ್ದಲಿಂಗಯ್ಯನವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಟಿ ಸಿದ್ದಲಿಂಗಯ್ಯನವರು ಧ್ವಜಾರೋಹಣ ಮಾಡಲಾಗಿ ಅವರನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು. ಸ್ತ್ರೀ ಮುಖಂಡರು ವೇದಿಕೆಯ ಮೇಲೆ ಕುಳಿತಿದ್ದರು. ಸಿದ್ದಲಿಂಗಯ್ಯನವರು ತರುವಾಯ ಹೆಚ್.ಸಿ.ದಾಸಪ್ಪನವರು, ಎಂ.ಎಸ್.ಜೋಯಿಸ್, ಯಶೋಧರ ದಾಸಪ್ಪನವರು, ನಂತರ ಬಳ್ಳಾರಿ ಸಿದ್ದಮ್ಮನವರು ಧ್ವಜಾರೋಹಣ ಮಾಡಿದರು. ಇವರುಗಳನ್ನು ಬಂಧಿಸಿ ಮಂಡ್ಯದ ಜಿಲ್ಲಾ ನ್ಯಾಯಾಲಯಕ್ಕೆ ಕರೆದೂಯ್ದರು. ಬಳ್ಳಾರಿ ಸಿದ್ದಮ್ಮನವರಿಗೆ ಶಿಕ್ಷೆಯಾಯಿತು. 

ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹವು ಚಳುವಳಿಗಾರರಿಗೆ ಸ್ಫೂರ್ತಿಯಾಯಿತು. ತಮ್ಮ ತಮ್ಮ ಪಟ್ಟಣಗಳಲ್ಲಿ ಧ್ವಜಾರೋಹಣ ಮಾಡಲು ಜನ ಮುಂದಾದರು. ಅದೇರೀತಿ  ಅಂದಿನ  ಕೋಲಾರ ಜಿಲ್ಲೆ ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ  ಗೌರಿಬಿದನೂರಿನ ವಿದುರಾಶ್ವತ್ಥ ಎಂಬಲ್ಲಿ ಧ್ವಜಸತ್ಯಾಗ್ರಹ ಏರ್ಪಾಡಾಯಿತು. ಈಗಾಗಲೇ ತಿಳಿಸಿರುವಂತೆ ಶಿವಪುರ  ರಾಷ್ಟ್ರಕೂಟದ ಪ್ರಭಾವದಿಂದಾಗಿ ಬಳ್ಳಾರಿ ಸಿದ್ದಮ್ಮನವರು ಸೇರಿದಂತೆ ಕೆಲವು ಮಹಿಳಾ ಮುಖಂಡರು ವಿದುರಾಶ್ವತ್ಥಕ್ಕೆ ಬಂದಿಳಿದು ಧ್ವಜಾರೋಹಣ ಮಾಡಿದರು. ಜಿಲ್ಲಾ ಮ್ಯಾಜಿಸ್ಟ್ರೇಟರ ಆಜ್ಞೆಯಂತೆ ಪೋಲಿಸರು ಚಳುವಳಿಕಾರರ ಮೇಲೆ ಗುಂಡು ಹಾರಿಸಿದರು. ಕೆಲವರು ಅಸುನೀಗಿದರು. ಗರ್ಭಿಣಿ ಸ್ತ್ರೀಯೊಬ್ಬಳು ಈ ಗೋಲಿಬಾರ್ನಲ್ಲಿ ಅಸುನೀಗಿದಳು ಎಂದು ಸುಳ್ಳು ಸುದ್ದಿ ಹರಡಿತು. ಜನ ರೊಚ್ಚಿಗೆದ್ದು ದಾಂದಲೆ ನಡೆಸಿದರು. ಇದು ರಾಷ್ಟೀಯ ಸುದ್ದಿಯಾಯಿತು. ಸ್ವಾತಂತ್ರ್ಯ ನಂತರ ದಾವಣಗೆರೆಯ ಶಾಸಕಿಯಾಗಿ ಆಯ್ಕೆಯಾದ ಸಿದ್ದಮ್ಮ ರವರು ಹಲವಾರು ಜನಪರ ಕಾರ್ಯಗಳಿಂದ ಜನಮನ ಗೆದ್ದರು. 1982 ನೇ ಇಸವಿಯಲ್ಲಿ ಅವರು ದೈವಾಧೀನರಾದರು. ಈ ಆಗಸ್ಟ್ ಮಾಸದಲ್ಲಿ ಆ ಮಹಾನ್ ಚೇತನಕ್ಕೆ ನಮ್ಮ ನಮನ ಸಲ್ಲಿಸೋಣ...


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

9900925529

03 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು...* ಭಾಗ _3 *ಲೋಕಮಾನ್ಯ ಬಾಲ ಗಂಗಾಧರ ತಿಲಕ್

 

*ಆಗಸ್ಟ್ ಮಾಸದ ನೆನಪುಗಳು...*

ಭಾಗ _3

*ಲೋಕಮಾನ್ಯ  ಬಾಲ ಗಂಗಾಧರ ತಿಲಕ್*

ಭಾರತದ ಚಳುವಳಿಯ ಜನಕ ಎಂಬ ಬಿರುದು ಪಡೆದ ನಾಯಕ, ಗಣೇಶ ಚತುರ್ಥಿ ಮತ್ತು ಶಿವಾಜಿ ಜಯಂತಿಗಳನ್ನು ರಾಷ್ಟ್ರೀಯತೆ ಬಿತ್ತುವ ಹಬ್ಬಗಳಾಗಿ ಪರಿವರ್ತಿಸಿದ ಮಹಾನಾಯಕ ,  ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು ಅದನ್ನು ಪಡೆದೇ ತೀರುವೆ ಎಂದು ಘರ್ಜಿಸಿದ ಹುಲಿ,    ಜನಮಾನಸದಲ್ಲಿ  ಲೋಕಮಾನ್ಯ ಎಂದೇ ನೆಲೆಯೂರಿದ್ದ ಬಾಲ ಗಂಗಾಧರ ತಿಲಕ್ ರವರು ಪ್ರಾತಃ ಸ್ಮರಣೀಯರು. ಆಗಸ್ಟ್ ಮಾಸದ ಈ ಕಾಲದಲ್ಲಿ ತಿಲಕ್ ರವರ ತ್ಯಾಗ ಬಲಿದಾನ ನೆನೆಯುತ್ತಾ ಮಾಸದ ನೆನಪುಗಳ ಮೆಲುಕು ಹಾಕುತ್ತಾ ಮುಂದಿನ ಪೀಳಿಗೆಗೆ ಇಂತಹ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವು ಮೂಡಿಸೋಣ.

ಬಾಲ ಗಂಗಾಧರ  ತಿಲಕರು ಹುಟ್ಟಿದ್ದು 1856ರ ಜುಲೈ 23ರಂದು ಮಹಾರಾಷ್ತ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ ಇವರು  ಚತುರ ವಿದ್ಯಾರ್ಥಿಯಾಗಿದ್ದರು. ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ, ಕಾಲೇಜು ಶಿಕ್ಷಣ ಪಡೆದುಕೊಂಡ ನವ ಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು. ಪದವಿ ಪಡೆದ ಬಳಿಕ ಪುಣೆಯ ಖಾಸಗೀ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ ತಿಲಕರು ನಂತರ ಅದನ್ನು ಬಿಟ್ಟು ಪತ್ರಕರ್ತರಾದರು. ಪಾಶ್ಚಿಮಾತ್ಯ ಶಿಕ್ಷಣ ಪಧ್ಧತಿಯು ಭಾರತೀಯ ಪರಂಪರೆಯನ್ನು ಅವಹೇಳಿಸುವಂಥಾದ್ದೂ ಹಾಗೂ ಭಾರತದ ವಿದ್ಯಾರ್ಥಿಗಳನ್ನು ಕೀಳುಗಳೆಯುವಂಥಾದ್ದು ಎಂಬ ನಿರ್ಧಾರಕ್ಕೆ ಬಂದ ಅವರು ಈ ಪಧ್ಧತಿಯ ತೀವ್ರ ಟೀಕಾಕಾರರಾದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪುಣೆಯಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.

ತಿಲಕರು ಸ್ಥಾಪಿಸಿದ "ಕೇಸರಿ"  ಮತ್ತು  ಮರಾಠ ಪತ್ರಿಕೆಗಳು ಬಹುಬೇಗ ಜನಸಾಮಾನ್ಯರ ಮನೆಮಾತಾದವು. ಅಭಿಪ್ರಾಯ ಸ್ವಾತಂತ್ರ್ಯವನ್ನು, ಅದರಲ್ಲೂ ಮುಖ್ಯವಾಗಿ, 1905ರ ಬಂಗಾಳದ ವಿಭಜನೆಯ ವಿರೋಧವನ್ನು  ಹತ್ತಿಕ್ಕಿದ ಭಾರತದ ನಾಗರೀಕರನ್ನು  ಸಂಸೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಆಡಳಿತದ ವಿರುದ್ಧ ತೀವ್ರ ಟೀಕೆಯನ್ನು ಅವರು ಕೇಸರಿಯಲ್ಲಿ ಮಾಡುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ಬಿಟ್ಟುಕೊಡಬೇಕೆಂದು ಅವರು ಪ್ರತಿಪಾದಿಸಿದರು. 1890ರ ದಶಕದಲ್ಲಿ ತಿಲಕರು ಕಾಂಗ್ರೆಸ್ ಸೇರಿದರಾದರೂ  ಬಹುಬೇಗ  ಅದರ ಕೆಲ ನೀತಿಗಳನ್ನು ವಿರೋಧಿಸಿ ಹೊರನಡೆದರು. ಲಾಲ್ ಬಾಲ್ ಪಾಲ್ ಎಂದೇ ಖ್ಯಾತರಾದ
 ಬಿಪಿನ ಚಂದ್ರ ಪಾಲ್ ಹಾಗೂ ಪಂಜಾಬಿನ ಲಾಲಾ ಲಜಪತ ರಾಯ್  ರವರ ಜೊತೆಗೂಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಕೊಂಡರು.
1907 ರ ಸೂರತ್ ಅಧಿವೇಶನದಲ್ಲಿ  ಲಾಲ್ ಬಾಲ್ ಪಾಲ್  ನೇತ್ಳತ್ವದಲ್ಲಿ "ಗರಂ ದಳ" ವನ್ನು ಸ್ಥಾಪಿಸಿ ಹೋರಾಟವನ್ನು ಚುರುಕುಗೊಳಿಸಿದರು.
  ವಿವಿಧ ಮೊಕದ್ದಮೆಗಳ ಅಡಿಯಲ್ಲಿ  ಬ್ರಿಟಿಷ್ ನ್ಯಾಯಾಧೀಶರಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು, 1908 ರಿಂದ 1914 ರವರೆಗೆ ಬರ್ಮಾ ದೇಶದ ಮಂಡಾಲೆಯಲ್ಲಿ ಸೆರೆವಾಸ ಅನುಭವಿಸಿದರು. ಬಿಡುಗಡೆಯಾದ ನಂತರ ತಮ್ಮ ಸಹ- ರಾಷ್ಟ್ರೀಯವಾದಿಗಳನ್ನು ಕೂಡಿಕೊಂಡ ತಿಲಕರು  ಅಖಿಲ ಭಾರತ ಹೋಂ ರೂಲ್ ಲೀಗನ್ನು ಸ್ಥಾಪಿಸುವಲ್ಲಿ ಆನಿ ಬೆಸೆಂಟ್ ಮತ್ತು ಮಹಮದ್ ಆಲಿ ಜಿನ್ನಾರಿಗೆ ಸಹಕಾರ ನೀಡಿದರು. ಅದರ ಮೂಲಕ ಸ್ವಾತಂತ್ರ ಹೋರಾಟವನ್ನು ಮತ್ತೂ ಚುರುಕುಗೊಳಿಸಿದರು.

ತಿಲಕರು ಮೂಲತಃ ಅದ್ವೈತ ವೇದಾಂತದ ಪ್ರತಿಪಾದಕರಾಗಿದ್ದರೂ, ಸಾಂಪ್ರದಾಯಿಕ ಅದ್ವೈತದ "ಜ್ಙಾನವೊಂದರಿಂದಲೇ ಮುಕ್ತಿ" ಎಂಬ ನಂಬುಗೆಯು ಅವರಿಗೆ ಒಪ್ಪಿಗೆಯಿರಲಿಲ್ಲ. ಅದಕ್ಕೆ ಸರಿಸಮನಾಗಿ ಹಾಗೂ ಪೂರಕವಾಗಿ ಅವರು ಕರ್ಮಯೋಗವನ್ನೂ ಸೇರಿಸಿದರು. ವಿವಾಹಕ್ಕೆ ಕನಿಷ್ಠ ವಯೋಮಿತಿಯೇ ಮೊದಲಾಗಿ ತಿಲಕರು ಅನೇಕ ಸಾಮಾಜಿಕ ಸುಧಾರಣೆಗಳನ್ನು  ಮುಂದಿಟ್ಟರು. ಮದ್ಯಪಾನ ನಿಷೇಧದ ಪರವಾಗಿ ಅವರಿಗೆ ಅತ್ಯಂತ ಕಳಕಳಿಯಿತ್ತು. ಶಿಕ್ಷಣ ಹಾಗೂ ರಾಜಕೀಯ ಜೀವನದ ಬಗ್ಗೆ ಅವರ ವಿಚಾರಗಳು ಬಹಳ ಪ್ರಭಾವಶಾಲಿಯಾಗಿದ್ದವು ದೇವನಾಗರಿ ಲಿಪಿಯಲ್ಲಿ ಬರೆಯಲಾಗುವ ಹಿಂದಿ ಭಾಷೆಯು ಭಾರತದ ರಾಷ್ಟ್ರ ಭಾಷೆಯಾಗ  ಬೇಕು ಎಂದು ಮೊದಲು ಸೂಚಿಸಿದವರು ತಿಲಕರು. ಗಾಂಧೀಜಿ ಇದನ್ನು ಮುಂದೆ ಬಲವಾಗಿ ಅನುಮೋದಿಸಿದರು. ಆದರೆ, ತಿಲಕರು ಸಂಪೂರ್ಣವಾಗಿ ಭಾರತದಿಂದ ನಿರ್ಮೂಲನ ಮಾಡಬೇಕೆಂದು ಇಚ್ಛೆ ಪಟ್ಟಿದ್ದ ಇಂಗ್ಲೀಷ್  ಭಾಷೆ ಇಂದಿಗೂ ಸಂವಹನದ ಒಂದು ಮುಖ್ಯ ಸಾಧನವಾಗಿ ಉಳಿದುಕೊಂಡು ಬಂದಿದೆ.ಆದರೂ ಹಿಂದಿ ಮತ್ತು ಇತರ ಭಾರತೀಯ ಭಾಷೆಗಳನ್ನು ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಮತ್ತು ಬ್ರಿಟಿಷರ ಕಾಲದಿಂದ ಇಂದಿನವರೆಗೂ ನೀಡಲಾಗುತ್ತಿರುವ ಪ್ರೋತ್ಸಾಹಕ್ಕೆ ತಿಲಕರು ಅಂದು ಪ್ರಾರಂಭಿಸಿದ ಪುನರುಜ್ಜೀವನವೇ ಕಾರಣ ಎನ್ನಲಾಗುತ್ತದೆ. ತಿಲಕರ ಮತ್ತೊಂದು ದೊಡ್ಡ ಕಾಣಿಕೆಯೆಂದರೆ, ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ 11 ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ, ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು. ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಇಂದಿಗೂ ಮುಂದುವರಿಯುತ್ತಿದೆ.ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು.

ತಿಲಕರು ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ , ಅಸಹಕಾರ ಚಳುವಳಿಯ ಟೀಕಾಕಾರರಾಗಿದ್ದರು. ಒಂದು ಕಾಲದಲ್ಲಿ ತೀವ್ರವಾದಿ ಕ್ರಾಂತಿಕಾರಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನಂತರದ ವರ್ಷಗಳಲ್ಲಿ ಅವರು ಗಮನಾರ್ಹವಾಗಿ ಬದಲಾಗಿದ್ದರು. ಭಾರತದ ಸ್ವಾತಂತ್ರ ಗಳಿಸಲು, ಮಾತುಕತೆಗಳ ಮೂಲಕವೇ ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆಯೆ ಅವರಿಗೆ ಒಲವಿತ್ತು.  ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ್ಯ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ. ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಹಾಗೂ ನಾಗರೀಕತೆಗಳ ಅರಿವು ಮಾಡಿಕೊಟ್ಟು, ಅವರ ಪ್ರಜ್ಙೆಯಲ್ಲಿ ತಮ್ಮ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು . ತಿಲಕರನ್ನು ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ  ನಾಯಕರನ್ನಾಗಿಯೂ, ಮಹಾತ್ಮಾ ಗಾಂಧಿಯವರನ್ನು ಇವರ ಉತ್ತರಾಧಿಕಾರಿಯಾಗಿಯೂ ಅನೇಕರು ಪರಿಗಣಿಸುತ್ತಾರೆ. 1920ರಲ್ಲಿ ತಿಲಕರು ತೀರಿಕೊಂಡಾಗ, ಅವರ ಅಂತ್ಯಕ್ರಿಯೆಯಲ್ಲಿ  ಎರಡು ಲಕ್ಷಕ್ಕೂ ಹೆಚ್ಚು ಜನರು  ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರು ತಿಲಕರನ್ನು "ಭಾರತದಲ್ಲಿ ಚಳುವಳಿಯ ಜನಕ"   ಎಂದು ಬಣ್ಣಿಸಿದರು.

*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
9900925529