13 ಮೇ 2023

ವೈಜಂತಿಪುರದ ಜಯ...

 


ವೈಜಯಂತಿಪುರದ ಜಯ...


ಇಪ್ಪತ್ಮೂರು ವರ್ಷಗಳಿಂದ ಕದಂಬರ ಬಗ್ಗೆ ಮಕ್ಕಳಿಗೆ ಪಾಠ ಮಾಡುವಾಗ ಮಯೂರ ಶರ್ಮ ಮಯೂರವರ್ಮನಾದ ಕಥೆಯನ್ನು ಹೇಳಿರುವೆ.ಮಕ್ಕಳು ಅದನ್ನು ಬಹಳ ಆಸಕ್ತಿಯಿಂದ ಕೇಳಿದ್ದಾರೆ.ಮಯೂರನ ಸಾಹಿತ್ಯ  ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅವನ ಕೊಡುಗೆ ಬಗ್ಗೆಯೂ ಮಕ್ಕಳಿಗೆ ಬೋಧಿಸಿರುವೆ. 

ಮಯೂರನ ಕುರಿತಾದ ಸಂತೋಷಕುಮಾರ ಮೆಹಂದಳೆ ರವರು ಬರೆದ 327 ಪುಟಗಳ ಬೃಹತ್  ಕಾದಂಬರಿ ವೈಜಯಂತಿಪುರ ಓದಿದಾಗ ಮಯೂರನ ಬಗ್ಗೆ ಕದಂಬರ ಬಗ್ಗೆ ನಮ್ಮ ನಾಡಿನ ಬಗ್ಗೆ ಹೆಮ್ಮೆ ಎನಿಸಿತು.ಈ ಭಾವನೆ ಮೂಡಲು ಕಾರಣರಾದ ಮೆಹೆಂದಳೆ ರವರಿಗೆ ನಮನಗಳು. ತಿಂಗಳ ಅಂತರದಲ್ಲಿ ನಾಲ್ಕನೆಯ ಮುದ್ರಣ ಕಂಡ ಕೃತಿಯು ಇನ್ನೂ ಹಲವು ಮುದ್ರಣ ಕಾಣುವಲ್ಲಿ ಸಂಶಯವಿಲ್ಲ.

ಕನ್ನಡ ಪುಸ್ತಕ ಓದುವವರು ಇಲ್ಲ ಎನ್ನುವವರಿಗೆ ಇದು ಸ್ಪಷ್ಟ ಉತ್ತರ . 

ಕ್ರಿ ಶ 316 ರಿಂದ 355 ರವರೆಗೆ  ನಮ್ಮ ನಾಡನ್ನು  ಆಳಿದ ಪ್ರಥಮ ಸಾಮ್ರಾಜ್ಯದ ಸ್ಥಾಪಕ ಮತ್ತು ಮಹಾನ್ ರಾಜ ಕದಂಬ ಸಾಮ್ರಾಟ್ ಮಯೂರಶರ್ಮ ನ ಮಹಾಚರಿತೆ ಓದದೇ ಇದ್ದರೆ ನಮ್ಮ ನಾಡಿನ ಮಹಾನ್ ಐತಿಹಾಸಿಕ ಮಾನವೀಯ ಗುಣಗಳ, ಜನಾನುರಾಗಿ , ಮತ್ಸದ್ದಿಯ ಬಗ್ಗೆ ನೀವು ತಿಳಿಯುವುದೇ ಇಲ್ಲ.


ತಾತ ವೀರಶರ್ಮರೊಂದಿಗೆ  ಪಲ್ಲವರ ನಾಡಿನ  ಕಂಚಿಗೆ ವಿದ್ಯಾಭ್ಯಾಸಕ್ಕೆ ತೆರಳಿದಾಗ ಅನುಭವಿಸಿದ ಅವಮಾನ ಮುಂದೊಂದು ದಿನ ಪಲ್ಲವರ ಸಾಮ್ರಾಜ್ಯದ ಪತನವಾಗಿ ಹೆಮ್ಮೆಯ ಕರ್ನಾಟ ಸಾಮ್ರಾಜ್ಯದ ಉದಯವಾಗುವುದೆಂದು ಮಯೂರನ ಬಿಟ್ಟು ಬೇರಾರಿಗೂ ತಿಳಿದಿರಲಿಕ್ಕಿಲ್ಲ. ಶಾಸ್ತ್ರ ಹೇಳುವವನು  ಶಸ್ತ್ರ ಹಿಡಿದು ಸಾಮ್ರಾಜ್ಯ ಕಟ್ಟಬಲ್ಲ ಎಂಬುದನ್ನು ನಿರೂಪಿಸದವ ಮಯೂರ.

ಕಾದಂಬರಿಯ ಮೊದಲ ಅದ್ಯಾಯದಿಂದ ಕಡೆಯವರೆಗೆ ಓದುತ್ತಾ ಹೋದಂತೆ ಇನ್ನೂ ಓದಬೇಕು. ಎಂಬ.ವೇಗ..ವೇಗ.. ಒಂದೊಳ್ಳೆಯ ಸಿನಿಮಾದ ಸ್ಕ್ರೀನ್ ಪ್ಲೇ ಮತ್ತು ಎಡಿಟಿಂಗ್ ಚೆನ್ನಾಗಿದ್ದರೆ ಆ ಸಿನಿಮಾ ಸೋಲುವುದೆಲ್ಲಿ ಬಂತು .ವೈಜಯಂತಿಪುರ ಆ ಮಟ್ಟದ ಅನುಭವವನ್ನು ಓದುಗರಿಗೆ ನೀಡುತ್ತದೆ. ನಾಲ್ಕನೇ ಶತಮಾನದ ಚಿತ್ರಣವನ್ನು ಕಟ್ಟಿ ಕೊಡುವಲ್ಲಿ ಕಾದಂಬರಿಕಾರರು ಗೆದ್ದಿದ್ದಾರೆ. ಅದರಲ್ಲೂ ಯುದ್ಧದ ಸನ್ನಿವೇಶಗಳ ವರ್ಣನೆ ಓದುವಾಗ ಗ್ರಾಫಿಕ್ಸ್ ಇಲ್ಲದೇ ನಮ್ಮ ಕಣ್ಮುಂದೆ ಯುದ್ಧದ ಸನ್ನಿವೇಶಗಳು ಬಂದು ನಿಲ್ಲುತ್ತವೆ. 

ಗೆರಿಲ್ಲಾ ಮಾದರಿ ಯುದ್ಧದ ತಂತ್ರಗಳು ಸಾಮಂತರು ಮತ್ತು ಬಲಿಷ್ಠ ಸೈನ್ಯ ಎದುರಿಸುವಾಗ ತೋರುವ ವ್ಯೂಹಗಳು ನಿರ್ಧಯವಾಗಿ ಎದುರಾಳಿಗಳ ಶಿರಗಳನ್ನು ಭೀಕರವಾಗಿ ಚೆಂಡಾಡಿ ತನ್ನ ವಿರುದ್ಧವಾಗಿ ಅನಗತ್ಯವಾಗಿ ಬಂಡೆದ್ದರೆ ಇದೇ ಪಾಡು ಎಂದು ಸಂದೇಶ ಸಾರುವ  ಮಯೂರ ಪ್ರಜೆಗಳ ಒಳಿತಿಗೆ ಮಿಡಿಯುವ ಜನಾನುರಾಗಿಯಾಗಿಯೂ ಗಮನಸೆಳೆಯುತ್ತಾನೆ. ಚಂದ್ರವಳ್ಳಿ ಅವನು ಕಟ್ಟಿಸಿದ ಕೆರೆ ಇಂದಿಗೂ ಜೀವಂತ. ಬಂಗಾರದ ನಾಣ್ಯ ಟಂಕಿಸಿ ತಾನೊಬ್ಬ ಉತ್ತಮ ಅರ್ಥಶಾಸ್ತ್ರಜ್ಞ ಎಂದು ನಿರೂಪಿಸಿದ.ವಿದ್ಯಾಭ್ಯಾಸಕ್ಕಾಗಿ ದೂರದೂರಿಗೆ ಪಯಣ ಮಾಡುವುದನ್ನು ತಪ್ಪಿಸಿ ತನ್ನ ನಾಡಿನಾದ್ಯಂತ ಹಲವಾರು ಅಗ್ರಹಾರ ಸ್ಥಾಪಿಸಿ ತಾನೂ ಕಲಿಯುತ್ತಾ ಕಲಿಸಿದ ಶಿಕ್ಷಣಪ್ರೇಮಿಯಾಗಿ ಮಯೂರ ಗಮನಸೆಳೆಯುತ್ತಾನೆ. ಕಲೆ ವಾಸ್ತುಶಿಲ್ಪಕ್ಕೆ ಅವನು ನೀಡಿದ ಕೊಡುಗೆ ತಿಳಿಯಲು ಮಧುಕೇಶ್ವರ ದೇವಾಲಯ ನೋಡಿದರೆ ಸಾಕು  .ಹೀಗೆ ಕಾದಂಬರಿಯಲ್ಲಿ ಮಯುರನ  ವ್ಯಕ್ತಿತ್ವವು ಬಹಳ ಸುಂದರವಾಗಿ  ಮೂಡಿಬಂದಿದೆ. ಇವನು ನಮ್ಮ ನಾಡಿನ ಹೆಮ್ಮೆ. ನಮ್ಮ ಅಸ್ಮಿತೆ ಎಂದು ಹೆಮ್ಮೆ ಪಡಲು ಇನ್ನೇನು ಬೇಕು. 


ಕಾದಂಬರಿಯಲ್ಲಿ ನನಗೆ ಇಷ್ಷವಾದ ಮತ್ತೊಂದು ಅಂಶವೆಂದರೆ ಪಾತ್ರಪೋಷಣೆ.  ಪ್ರಧಾನ ಅಮಾತ್ಯರಾಗಿ ವೀರಶರ್ಮರ ಸಲಹೆ, ತಂದೆಯಾದ ಬಂಧುಸೇನರ ಸಕಾಲಿಕ ತಂತ್ರಗಳು ,ಗೆಳೆಯ ಚಂಡಸೇನನ ಸಕಾಲಿಕ ಬೆಂಬಲ ಮತ್ತು ಯುದ್ಧ ನೀತಿಗಳು ಬೃಹತ್ ಬಾಣನ ಶೌರ್ಯ,

ಚಕ್ರಭಾನು ಮತ್ತು ಶಿವಸ್ಕಂದವರ್ಮ ರು ರಣರಂಗದಲ್ಲಿ ಬಿದ್ದು ಒದ್ದಾಡುವ ಚಿತ್ರಣಗಳು ಗಮನಸೆಳೆಯುತ್ತವೆ. 


ಮೆಹಂದಳೆಯವರು ಈ ಕಾದಂಬರಿ ಬರೆಯಲು ಮಾಡಿದ ಗ್ರೌಂಡ್ ವರ್ಕ್ ಕಾದಂಬರಿಯ ಪುಟಗಳ ಅಡಿಟಿಪ್ಪಣಿಗಳಲ್ಲಿ ಎದ್ದು ಕಾಣುತ್ತದೆ.

ಮೆಹಂದಳೆಯವರ ಬಗ್ಗೆ ನನ್ನ ಮತ್ತೊಂದು ಮೆಚ್ಚುಗೆಯೆಂದರೆ ಸ್ವತಃ ಅವರೇ ಪುಸ್ತಕದ ಒಳಪುಟ ವಿನ್ಯಾಸ ಮತ್ತು ಮುಖಪುಟ ವಿನ್ಯಾಸ ಮಾಡಿರುವುದು .ಎರಡೂ ಸೂಪರ್.

ಒಟ್ಟಾರೆ ಬಹಳ ದಿನಗಳ ನಂತರ ಒಂದು ಉತ್ಕೃಷ್ಟ ಐತಿಹಾಸಿಕ ಕಾದಂಬರಿ ಓದಿದ ಸಂತಸವಾಯಿತು .

ನೀವು ಇನ್ನೂ ಈ ಕಾದಂಬರಿ ಓದಿಲ್ಲವೆಂದರೆ ಇಂದೇ ಖರೀದಿಸಿ ಓದಿ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.

11 ಮೇ 2023

ನಲಿ...

 



ನಲಿ


ಉನ್ನತಿ ಅವನತಿ ಏನೇ ಇರಲಿ

ಮಾನವನಾಗಿರುವುದನು ಕಲಿ

ಸದಾ ನಗುವಿರಲಿ ವದನದಲಿ 

ಭೇದ ಭಾವಗಳಿಗೆ ಹೊಡಿ ಗೋಲಿ 

ಉನ್ನತ ಚಿಂತನೆಗಳಿರಲಿ ಮನದಲಿ

ಎಲ್ಲರೊಳಗೊಂದಾಗಿ ನಲಿ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

06 ಮೇ 2023

ಮತದಾರನೇ ಮಹಾಪ್ರಭು...

 



ನಮ್ಮ ರಾಜ್ಯದಲ್ಲಿ ಐದು ವರ್ಷಕ್ಕೊಮ್ಮೆ ಬರುವ ಮತದಾನದ ಜಾತ್ರೆ ಬಂದಿದೆ.ಈ ಜಾತ್ರೆಯಲ್ಲಿ ನಾವೆಲ್ಲರೂ ಸಂಭ್ರಮ ಸಡಗರದಿ ಪಾಲ್ಗೊಂಡು ಜಾತ್ರೆಯ ಯಶಸ್ವಿಯಾಗಿಸಬೇಕಿದೆ. ಇದು ಚುನಾವಣಾ ಹಬ್ಬವೂ ಹೌದು.ಹಲವಾರು ಜನ ಇದನ್ನು ಯುದ್ಧ ,ಕುರುಕ್ಷೇತ್ರ ಜಂಗೀಕುಸ್ತಿ ಎಂತಲೂ ಕರೆಯುತ್ತಾರೆ. ಯಾವ ಹೆಸರಿನಿಂದ ಕರೆದರೂ ಇದು ಪ್ರಜಾಪ್ರಭುತ್ವದ ಒಂದು ಮಹತ್ವದ ಘಟ್ಟ ಎಂಬುದನ್ನು ಮರೆಯಬಾರದು.
ಈ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರನೇ ಮಹಾಪ್ರಭು .ಇತ್ತೀಚಿನ ದಿನಗಳಲ್ಲಿ ಈ ಪ್ರಭು ಯಾವ ರೀತಿಯಲ್ಲಿ ಭ್ರಷ್ಟಾನಾಗಿದ್ದಾನೆಂದರೆ ಓಟು ಕೇಳುವ ಅಭ್ಯರ್ಥಿಗಳು ತಮ್ಮ ಊರು,ಮನೆಗೆ ಬಂದರೆ ಅವರ   ಕೈ ಬಾಯಿ ನೋಡುತ್ತಾರೆ .ಇದಕ್ಕೆ ಪೂರಕವಾಗಿ ಅಲ್ಲಲ್ಲಿ ಕುಕ್ಕರ್, ಸ್ಟೋವ್, ಟೀವಿ,ಸೈಟ್, ಹಣ ಇತ್ಯಾದಿಗಳು ಮತದಾರರ ಕೈಸೇರಿವೆ ಎಂಬ ವರದಿ ಓದುತ್ತಿದ್ದೇವೆ.ಮತದಾರ ಮಹಾಪ್ರಭುವೆ ದಯವಿಟ್ಟು ನಿನ್ನನ್ನು ನೀ ಮಾರಿಕೊಳ್ಳದಿರು.

ಮಾರಿಕೊಳ್ಳದಿರು
ನೋಟಿಗಾಗಿ ನಿನ್ನ
ಓಟನ್ನು |
ಅರ್ಹ ಅಭ್ಯರ್ಥಿಗೆ
ತಪ್ಪದೇ ಒತ್ತು
ಇ. ವಿ .ಎಮ್
ಬಟನ್ನು ||

ನಮ್ಮ ದೇಶದ ಸ್ವಾತಂತ್ರ್ಯದ 75 ನೇ ವರ್ಷದ ಅಮೃತಮಹೋತ್ಸವ ಆಚರಿಸುತ್ತಿರುವ ಈ ಪರ್ವ ಕಾಲದಲ್ಲಿ  ನೂರು ಪ್ರತಿಶತ ಇರಲಿ, ಶೇಕಡಾ75 ಮತದಾನ  ದಾಟದಿರುವುದು ಮತದಾನದ ಬಗ್ಗೆ ನಮ್ಮ ನಿರಾಸಕ್ತಿಯನ್ನು ತೋರಿಸುತ್ತದೆ.
ಮತದಾನದ ದಿನ ಸಾರ್ವತ್ರಿಕ ರಜೆಯ ಮಜ ಸವಿಯಲು ಮತದಾನದ ಬದಲು ಪ್ರವಾಸ ಹೋಗುವ ಮಹಾನುಭಾವರಿಗೇನು ಕಮ್ಮಿಯಿಲ್ಲ.

ಮಾಡೋಣ ನಾವೆಲ್ಲರೂ
ಕಡ್ಡಾಯವಾಗಿ
ಮತದಾನ|
ಎತ್ತಿ ಹಿಡಿಯೋಣ
ನಮ್ಮ ಸಂವಿಧಾನ||

ಇನ್ನೂ ಮತದಾನ ಮಾಡುವ ಕೆಲವರು ದುಡುಕಿ ಆಮಿಷಗಳಿಗೆ ಬಲಿಯಾಗಿ ತಮ್ಮ ಮತ ಮಾರಿಕೊಂಡು ಐದು ವರ್ಷಗಳ ಕಾಲ ಯಾಮಾರಿಬಿಟ್ಟಿರುತ್ತಾರೆ. ಅದಕ್ಕೆ ಹೇಳುವುದು ಮತ ಮಾರಬೇಡಿ.

ನಿಮ್ಮ ಮತವನ್ನು
ಯಾರಿಗೂ
ಮಾರಬೇಡಿ|
ಆಮಿಷಗಳಿಗೆ ಮರುಳಾಗಿ
ಯಾಮಾರಬೇಡಿ||

ಪ್ರಜಾಪ್ರಭುತ್ವದಲ್ಲಿ ನಮ್ಮ ಮತವು ಅಮೂಲ್ಯವಾದುದು ನಮ್ಮ ಸಂವಿಧಾನ ನೀಡಿದ ಹಕ್ಕುಗಳ ಪಡೆಯಲು ನಾವು ಕರ್ತವ್ಯ ಮಾಡಲೇಬೇಕು ಆದ್ದರಿಂದ ನಾವೆಲ್ಲರೂ ಮತದಾನದ ಕರ್ತವ್ಯ ಮಾಡಿ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕಿದೆ.

ಮತದಾನ ಮಾಡಿ,
ಮಾಡಿದರೆ ನಮ್ಮ
ಕರ್ತವ್ಯ|
ಸುಂದರವಾಗುವುದು
ನಮ್ಮ ಭವಿತವ್ಯ||

ಆದ್ದರಿಂದ ಸಬೂಬು ಹೇಳದೆ, ಮತದಾನದ ದಿನ ಮತಗಟ್ಟೆಗೆ ತೆರಳಿ ನಮ್ಮ ಮನಸ್ಸಾಕ್ಷಿಯ ಮತ ಹಾಕೋಣ ಉತ್ತಮ ನಾಯಕರ ಆಯ್ಕೆ ಮಾಡಿ ಪ್ರಜಾಪ್ರಭುತ್ವದ ಯಶಸ್ಸು ಕೋರೋಣ.

ತಪ್ಪದೇ ನಾವು
ಚಲಾವಣೆ ಮಾಡಿದರೆ
ನಮ್ಮ ಮತ|
ಮುಂದೆ ನಮ್ಮ
ನಾಡಿಗಾಗುವುದು ಹಿತ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
ತುಮಕೂರು
9900925529


ನನ್ನ ಮತ ಮಾರಾಟಕ್ಕಿಲ್ಲ...


 




ನ್ಯಾನೋ ಕಥೆ ೨೩

ನನ್ನ ಮತ ಮಾರಾಟಕ್ಕಿಲ್ಲ.


"ತಗೋಳಪ್ಪ ಇದು ಕುಕ್ಕರ್, ಈ ಸಾರಿ ನಮ್ ಪಕ್ಷಕ್ಕೇ ಓಟ್ ಹಾಕ್ಬೇಕು" ಎಂದು ಕೊಟ್ಟು ಹಲ್ಲುಗಿಂಜಿ ಹೊರನಡೆದ   ಮಿಕ್ಸಿ, ಸೀರೆ, ವಾಚ್ಗಳು  ಮತದಾರನ ಮನೆಗೆ ಬಂದವು. ಕೊನೆಯಲ್ಲಿ ಬಂದವನು  ಐನೂರರ ಹತ್ತು ನೋಟು ನೀಡಿ "ನಮ್ ಪಕ್ಷದ್ ಸಿಂಬಲ್ ಗೊತ್ತಲ್ಲ ಮರೀಬೇಡ " ಎಂದು ಗತ್ತಿನಿಂದ ಹೇಳಿ ಹೋದ .ಒಂದು ಮೂಲೆಯಲ್ಲಿ ಐದನೇ ತರಗತಿ ಓದುತ್ತಿದ್ದ ಮಗ "ನನ್ನ ಮತ ಮಾರಾಟಕ್ಕಿಲ್ಲ "  ಬರಹವನ್ನು  ಹಿಡಿದಿದ್ದ ಯಾರೂ ಅದರೆಡೆ  ಗಮನ ನೀಡಲೇಇಲ್ಲ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



05 ಮೇ 2023

ಬುದ್ಧನ ಚಿಂತನೆಗಳು...

 


ಬುದ್ದನ ಚಿಂತನೆಗಳು...
ಧಾರ್ಮಿಕ ಮುಖಂಡರು ಹೇಗಿರಬೇಕು...

ಇತ್ತೀಚೆಗೆ ಪಾಲ್ ಕಾರಸ್ ರವರು ರಚಿಸಿರುವ "ಬುದ್ಧೋಪದೇಶ"  ಪುಸ್ತಕ ಓದಿದೆ .ನೂರಾರು ಮರು ಮುದ್ರಣ ಕಂಡ ಈ ಕೃತಿಯನ್ನು ಎಲ್ಲರೂ ಪದೇ ಪದೇ ಓದಬೇಕಾದ ಪುಸ್ತಕ.
ಈ ಪುಸ್ತಕದ ಎಲ್ಲಾ ಅಧ್ಯಾಯಗಳು ಬಹಳ ಉತ್ತಮವಾಗಿದ್ದರೂ ಮೂವತ್ತಮೂರನೇ ಅಧ್ಯಾಯ ನನ್ನನ್ನು ಬಹಳ ಸೆಳೆಯಿತು.ಅದಕ್ಕೆ ಇತ್ತೀಚಿನ ದಿನಗಳಲ್ಲಿ ಕೆಲ  ಧಾರ್ಮಿಕ ಕೇಂದ್ರಗಳ ಮತ್ತು ಕೆಲ ಧರ್ಮಗುರುಗಳ ನಡವಳಿಕೆಗಳು ಕಾರಣವಾಗಿದ್ದಿರಬಹುದು...
ಆ ಅಧ್ಯಾಯದಲ್ಲಿ ಭಿಕ್ಕುಗಳೆಲ್ಲ ಬುದ್ದನ ಬಳಿ ಬಂದು ಓ ಪ್ರಭುವೆ ಪ್ರಾಪಂಚಿಕ ಬದುಕನ್ನ  ತೊರೆದವರು ಮಹಿಳೆಯರನ್ನು ಹೇಗೆ ನೋಡಬೇಕು ಎಂದು ಕೇಳಿದಾಗ ಬುದ್ದನ ಉತ್ತರ ಈ ಕೆಳಗಿನಂತೆ ಇದೆ....
ಮಹಿಳೆಯರತ್ತ ಗಮನಹರಿಯುವುದರ ವಿರುದ್ಧ ರಕ್ಷಿಸಿಕೊಳ್ಳಿ.
ಮಹಿಳೆಯರನ್ನು ನೋಡಿದರೂ ಸಹ ನೋಡದಂತಿರಬೇಕು ಮತ್ತು ಆಕೆಯೊಂದಿಗೆ ಸಂಭಾಷಣೆ ಸಲ್ಲದು.
ಒಂದೊಮ್ಮೆ ಆಕೆಯೊಂದಿಗೆ ಮಾತನಾಡಲೇ ಬೇಕಾದರೆ ಸ್ವಚ್ಛವಾದ ಮನಸ್ಸಿರಬೇಕು.  ಈ. ಜಗತ್ತಿನಲ್ಲಿ ಕಮಲದ ಎಲೆಯಂತೆ ಕಳಂಕರಹಿತನಾಗಿರಬೇಕು ಮತ್ತು ಕೆಸರಿನಲ್ಲಿ ಬೆಳದಿದ್ದರೂ ನಿಷ್ಕಳಂಕತೆಯಿಂದಿರಬೇಕು ಎಂದು ಆಲೋಚಿಸಬೇಕು.  ಮಹಿಳೆಗೆ ವಯಸ್ಸಾಗಿದ್ದರೆ ಆಕೆಯನ್ನು ನಿನ್ನ ತಾಯಿಯಂತೆ ಕಂಡು
ಗೌರವಿಸು.ಆಕೆ ಚಿಕ್ಕವಳಾಗಿದ್ದರೆ ನಿನ್ನ ತಂಗಿಯಂತೆ ನೋಡು, ಆಕೆ ಇನ್ನೂ
ಬಾಲಕಿಯಾಗಿದ್ದರೆ ನಿನ್ನ ಮಗುವಿನಂತೆ ನೋಡು.
ಸಾಧು ಸಂತರು  ಮಹಿಳೆಯನ್ನು ಮಹಿಳೆಯೆಂದೇ ನೋಡಿದರೆ ಅಥವಾ ಅವಳನ್ನು ಮಹಿಳೆಯೆಂದೇ ಮುಟ್ಟಿದರೆ ತಾನು ಕೈಗೊಂಡ ಪ್ರಮಾಣವನ್ನು ಮುರಿದಂತೆ ಮತ್ತು ಆತ ತಥಾಗತನ ಶಿಷ್ಯನಾಗಿ ಇನ್ನೊಂದೂ ಉಳಿಯುವುದಿಲ್ಲ.
ಪುರುಷನಲ್ಲಿ ಕಾಮನೆಗಳ ಶಕ್ತಿ ಅತ್ಯಧಿಕ. ಅದೇ ಪ್ರಕಾರ ಅದಕ್ಕೆ ಹೆದರುತ್ತಾರೆ. ಆಗ ಶ್ರದ್ಧೆಯಿಂದ ದೃಢ ಮನಸ್ಸಿನ ಬಾಣವನ್ನು ತೆಗೆದುಕೊಳ್ಳಬೇಕು.ಆ ಬಾಣದ ಹರಿತವಾದ ತುದಿಯಲ್ಲಿ ಜ್ಞಾನವೆಂಬುದಿರಲಿ.
ನಿಮ್ಮ ಶಿರಗಳನ್ನು ಸತ್ಯಶೀಲ ಆಲೋಚನೆಗಳ ಶಿರಸ್ತ್ರಾಣದಿಂದ  ಮುಚ್ಚಿಕೊಳ್ಳಿ
ಮತ್ತು ಪಂಚೇಂದ್ರಿಯಗಳ ವಿರುದ್ಧ ಇರುವ ಖಚಿತ ನಿಶ್ಚಯದೊಂದಿಗೆ ಹೋರಾಡಿ.
ಕಾಮಾಂಧತೆ ಪುರುಷನ  ಹೃದಯವನ್ನು ಮರೆಮಾಚುತ್ತದೆ. ಮಹಿಳೆಯ ಸೌಂದರ್ಯದಿಂದ ಗೊಂದಲಗೊಂಡಾಗ ಮನಸ್ಸು ಮಂಕಾಗುತ್ತದೆ.
ನಿಮ್ಮ ಇಂದ್ರಿಯ ಬಯಕೆಗಳನ್ನು ಪ್ರೋತ್ಸಾಹಿಸುವ  ಬದಲು ನಿಮ್ಮ ಎರಡೂ ಕಣ್ಣುಗಳನ್ನು ನಿಗಿನಿಗಿ ಕಾಯಿಸಿದ ಕಬ್ಬಿಣದ ಸಲಾಕೆಗಳಿಂದ ಇರಿದುಕೊಳ್ಳುವುದು ವಾಸಿ. ಮಹಿಳೆಯರನ್ನು ಕಾಮಾಂಧತೆ ವಿಷಯಾಸಕ್ತಿಯಿಂದ ನೋಡುವುದಕ್ಕಿಂತ ಈ ಪಶ್ಚಾತ್ತಾಪವೇ ಸರಿಯಾದ ಕ್ರಮ.
ಮಹಿಳೆಯೊಂದಿಗೆ ಮಲಗಿ ನಿಮ್ಮ ವಿಷಯಾಸಕ್ತ ಆಲೋಚನೆಗಳನ್ನು ಉದ್ದೀಪಿಸಿಕೊಳ್ಳುವ ಬದಲು ಹಸಿದ ಹೆಬ್ಬುಲಿಯ ಬಾಯಿಗೆ ಬೀಳುವುದು ವಾಸಿ ಅಥವಾ ಮರಣದಂಡನೆ ಕೊಡುವ ಹಂತಕನ ಕತ್ತಿಯ ಕೆಳಗೆ ಸಿಕ್ಕುವುದು ವಾಸಿ.

ಜಗ ಮಹಿಳೆಯರಿಗೆ ತಮ್ಮ ರೂಪ ಸೌಂದರ್ಯ ತೋರಿಸಲು ಬಹು ಕುತೂಹಲ, ಅವರು ನಡೆಯುತ್ತಿರಲಿ, ನಿಂತಿರಲಿ, ಕುಳಿತಿರಲಿ ಅಥವಾ ಮಲಗಿರಲಿ. ಅದೇ ಅವರ ಹಂಬಲ, ಅವಳ ಚಿತ್ರ ತೆಗೆದಾಗಲೂ ತನ್ನ ಸೌಂದರ್ಯದ ರಮಣೀಯ ಆಕರ್ಷಣೆ ಆದರಲ್ಲಿ ಬಿಂಬಿಸಬೇಕೆಂಬುದೇ ಆಕೆಯ ಬಯಕೆ. ಇದರಿಂದ ಪುರುಷರ ಸ್ಥಿರ ಹೃದಯನ್ನು ಗೆಲ್ಲಬಹುದೆಂಬ ತವಕ
ಹಾಗಾದರೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ? ಎಂದು ಬುದ್ದ ಬಿಕ್ಕುಗಳನ್ನು  ಪ್ರಶ್ನಿಸುತ್ತಾ ಬುದ್ಧ  ಹೀಗೆಂದರು..
ಅವಳ ಕಣ್ಣೀರನ್ನಾಗಲಿ ಅವಳ ನಗೆಯನ್ನಾಗಲಿ ಶತ್ರುವಿನಂತೆ ನೋಡಬೇಕು.
ಆಕೆಯ ಬಳುಕಿ ಬಾಗುವ ಆಕಾರ, ತೂಗಾಡುವ, ಮರುಳು ಮಾಡುವ ಬಾಹುಗಳು ಮತ್ತವಳ ಸಿಕ್ಕು ಬಿಡಿಸಿದ ಹರಿ ಬಿಟ್ಟ ಕೂದಲುಗಳು, ಪುರುಷನ ಹೃದಯವನ್ನು ಬಲೆಗೆ ಬೀಳಿಸುವ ಉದ್ದೇಶದಿಂದಲೇ ವಿನ್ಯಾಸಿಸಲಾಗಿದೆ ಎಂದೇ ಪರಿಗಣಿಸಿ. ಆದ್ದರಿಂದ ನಾನೇನು ಹೇಳುತ್ತೇನೆಂದರೆ ನಿಮ್ಮ ಮನಸ್ಸನ್ನು ನಿಯಂತ್ರಿಸಿ.
ಅದಕ್ಕೆ ಮಾತ್ರ ಲಗಾಮಿಲ್ಲದ ಪರವಾನಗಿಯನ್ನು ಕೊಡಬೇಡಿ...
ಬುದ್ಧನ ಈ ಸಂದೇಶ ಓದಿದಾಗ ಬೇಡ ಎಂದರೂ ಪ್ರಸ್ತುತ ಸಮಾಜದಲ್ಲಿನ ಕೆಲ ಧಾರ್ಮಿಕ ಮುಖಂಡರ ಚಿತ್ರಗಳು ಕಣ್ಣ ಮುಂದೆ ಬಂದವು...ನಿಮಗೂ ಬಂದಿರುತ್ತದೆ ಅಲ್ಲವೇ? ಮೇಲಿನ ಎಲ್ಲಾ ಸಲಹೆ ಸೂಚನೆಗಳನ್ನು ಸಾಮಾನ್ಯ ಜನರು ಪಾಲಿಸಿದರೂ ತಪ್ಪಿಲ್ಲ.ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುವ ಅನೈತಿಕ ಸಂಬಂಧಗಳ ಪರಿಣಾಮಗಳು, ಮಹಿಳೆಯ ಮೇಲೆ ನಡೆಯುವ ಅಮಾನುಷ ದೌರ್ಜನ್ಯಗಳನ್ನು ಗಮನಿಸಿದಾಗ ಸರ್ವರೂ ಬುದ್ಧನ ಈ ಮೇಲಿನ ಮಾತುಗಳನ್ನು ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಸಮಾಜ ಸ್ವಲ್ಪ ಮಟ್ಟಿಗಾದರೂ ಸುಧಾರಿಸಬಹುದೇನೋ ಎಂಬ ಆಶಾವಾದ ನನ್ನದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.