26 ನವೆಂಬರ್ 2022

ಮಂದರಗಿರಿ


ಮಂದರಗಿರಿ 

ಕೆಲವೊಮ್ಮೆ ನಾವು ದೂರದ ಪ್ರದೇಶಗಳು, ಇತರೆ ರಾಜ್ಯಗಳ ಸ್ಥಳಗಳು ಅಷ್ಟೇ ಏಕೆ ವಿದೇಶಗಳ ಸಿರಿಯನ್ನು ಕಣ್ತುಂಬಿಸಿಕೊಳ್ಳಲು ಹಾತೊರೆಯುತ್ತೇವೆ.ಆದರೆ ನಮ್ಮ ಸುತ್ತ ಮುತ್ತ ಇರುವ ಎಷ್ಟೋ ಅಮೂಲ್ಯವಾದ ಐತಿಹಾಸಿಕ, ಪರಿಸರದ ಮಹತ್ವವಿರುವ ,ಧಾರ್ಮಿಕ ಪರಂಪರೆಯನ್ನು ಹೊಂದಿರುವ ಸ್ಥಳಗಳನ್ನು ನಾವು ನೋಡಿಯೇ ಇರುವುದಿಲ್ಲ.ಅವುಗಳನ್ನು ನೋಡಿದ ಮೇಲೆ ನಮ್ಮ ಪ್ರದೇಶದ ಬಗ್ಗೆ ನಮಗೆ ಹೆಮ್ಮೆ ಆಗಿ "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂಬ ರಾಮಾಯಣದ ಉಕ್ತಿ ನೆನಪಿಗೆ ಬರದೆ ಇರದು.ಇಂತದೇ ಅನುಭವ ನನಗೂ  ತುಮಕೂರಿನ ಸಮೀಪದ ಅತ್ಯದ್ಭುತ ತಾಣವನ್ನು ನೋಡಿದಾಗ ಅಯಿತು.   

ಇತ್ತೀಚೆಗೆ   ಬಾಯರ್ಸ್ ಕಾಫಿ ಹೌಸ್  ನಲ್ಲಿ ಕಾಫಿ ಕುಡಿಯುತ್ತಾ  ಮಾತನಾಡುವಾಗ ನಿಮ್ಮನ್ನು ಒಂದು ಐತಿಹಾಸಿಕ ಮತ್ತು ಸುಂದರ ಸ್ಥಳಕ್ಕೆ ಕರೆದುಕೊಂಡು ಹೋಗುವೆ ಎಂದರು ಗೆಳೆಯ ಸದಾಶಿವ್. ಎಂದು? ಅಂದೆ. ಇಂದೆ ಅಂದು ಬಿಟ್ಟರು !  ಆತ್ಮೀಯ ಶಂಕಾರಾನಂದ್ ಮತ್ತು ಸದಾಶಿವ್ ರವರ ಜೊತೆಯಲ್ಲಿ  ಯಾವುದೇ ಪ್ಲಾನ್ ಮಾಡದೇ ದಿಢೀರ್ ಎಂದು ಇಳಿಹೊತ್ತಿನ ಮೂರೂವರೆಗೆ ಕಾರಿನಲ್ಲಿ ತುಮಕೂರು ಬಿಟ್ಟು ಹೊರಟೆವು. ಇನ್ನೂ ಐದು ನಿಮಿಷವಾಗಿರಲಿಲ್ಲ ಕಾರ್ ನಿಲ್ಲಿಸಿ ಇಳೀರಿ ಸರ್ ಇದೇ ನಾವು ನೋಡಬೇಕಾದ ಜಾಗ ಅಂದರು .
ಕಾರ್ ಇಳಿದು ನಿಧಾನವಾಗಿ ನಡೆದು ಸಾಗಿದ ನಮ್ಮನ್ನು ಸ್ವಾಗತಿಸಿದ್ದು ಒಂದು ಸುಂದರ ಗಿರಿ ಅದೇ ಮಂದರಗಿರಿ.ಆ ಗಿರಿಯ ಏರಲು ಮೆಟ್ಟಿಲುಗಳ ಸೌಲಭ್ಯ ಇದೆ. ಒಂದೊಂದೆ ಮೆಟ್ಟಲು ಏರುತ್ತಾ ಹೊದಂತೆ ನಮ್ಮ ಮೈಯಿಂದ ಬೆವರ ಸಾಲುಗಳ ಆಗಮನವಾಗಿ ಆಗಾಗ್ಗೆ ಬೀಸುವ ತಂಗಾಳಿ ಆ ಬೆವರಿಗೆ ಸೋಕಿದೆಡೆ ಹಿತವಾದ ಅನುಭವ.ಇನ್ನೂ ಮೇಲೆ ಸಾಗಿದಂತೆ ತುಮಕೂರು ನಗರ, ಮೈದಾಳ ಕೆರೆ, ಹೊಲಗದ್ದೆಗಳು, ರಸ್ತೆಗಳು ಹೀಗೆ ನೋಡಿದ ಪ್ರದೇಶಗಳೇ ವಿಶೇಷವಾಗಿ ಕಾಣಲಾರಂಬಿಸಿದವು.  ಬೆಟ್ಟದ ತುದಿ ತಲುಪಿದ ನಮ್ಮನ್ನು   ಜೈನ ಮಂದಿರಗಳ ಸಂಕೀರ್ಣ  ಸ್ವಾಗತಿಸಿತು . "ಈ ಸಂಕೀರ್ಣದಲ್ಲಿ  ಶ್ರೀಚಂದ್ರನಾಥ (ಪದ್ಮಾಸನ), ಶ್ರೀಪಾರ್ಶ್ವನಾಥ, ಶ್ರೀಸುಪಾರ್ಶ್ವನಾಥ ಮತ್ತು ಶ್ರೀಚಂದ್ರನಾಥ (ಖಡ್ಗಾಸನ) ಎಂಬ ನಾಲ್ಕು ಬಸದಿಗಳಿವೆ. ಅತ್ಯಂತ ಪುರಾತನವಾದ ಈ ಬಸದಿಗಳನ್ನು 12 ಮತ್ತು 14ನೇ ಶತಮಾನದಲ್ಲಿ ಕಟ್ಟಲಾಗಿದೆ. ಸುಮಾರು ಸಾವಿರ ವರ್ಷಗಳ ಇತಿಹಾಸ ಈ ಕ್ಷೇತ್ರಕ್ಕಿದೆ" ಎಂದು ತುಮಕೂರಿನ ಗೋಕುಲ ಬಡಾವಣೆಯ ನಿವಾಸಿಗಳಾದ ಅಜಿತ್ ರವರು ಮಾಹಿತಿಯನ್ನು ನೀಡಿದರು. ಆ ಜಿನ ಮೂರ್ತಿಗಳಿಗೆ ವಂದಿಸಿ ಹೊರಬಂದಾಗ  ಅಲ್ಲಲ್ಲಿ ಇರುವ ಶಾಸನಗಳು ನಮ್ಮ ಗಮನ ಸೆಳೆದವು. ಇತ್ತೀಚಿಗೆ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಬರದಿಂದ ಸಾಗಿದ್ದು ಕಾಂಕ್ರೀಟ್ ಮತ್ತು ಕಬ್ಬಿಣ ಬಳಸಿ ಮರದ ಆಕೃತಿಯ ರಚನೆಯು ಕುತೂಹಲ ಕೆರಳಿಸಿತು . ಬೆಟ್ಟದ ಮೇಲ್ಬಾಗಕ್ಕೆ  ವಾಹನಗಳು ಚಲಿಸುವಂತೆ ಸರ್ವಋತು ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.




" ಕರ್ನಾಟಕ ಸರ್ಕಾರದ ವತಿಯಿಂದ ಬೆಟ್ಟಕ್ಕೆ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಕಾಮಗಾರಿ  ನಡೆಯುತ್ತಿದೆ. ಳಲ್ಲಿ ಯಕ್ಷ-ಯಕ್ಷಿ ವಿಗ್ರಹಗಳ ಸ್ಥಾಪನೆ.ಕಾರ್ಯ ಆಗುತ್ತಿದೆ.
1ನೇ ಬಸದಿಯ ನೆಲಹಾಸು ಜೀರ್ಣೋದ್ಧಾರ ಕಾರ್ಯವು ಯಶಸ್ವಿಯಾಗಿ ನಡೆದಿದ್ದು ಹಾಗೂ ಶ್ರೀ ಚಂದ್ರಪ್ರಭ ಬಸದಿಯ ಪಾಲಿಶ್ ಕಾರ್ಯವು ಪ್ರಗತಿಯಲ್ಲಿದೆ.
ಶ್ರೀ ಬ್ರಹ್ಮದೇವರ ಗುಡಿ ಹಾಗೂ ಗೋಪುರ ನಿರ್ಮಾಣ.  ದೇವಸ್ಥಾನಗಳ ಪ್ರಕಾರದಲ್ಲಿ ಗ್ರಾನೈಟ್, ನೆಲಹಾಸು ಅಳವಡಿಕೆ.
ಉತ್ತರ ದಿಕ್ಕಿನಲ್ಲಿ ಗೋಪುರ ಹಾಗೂ ಮಹಾದ್ವಾರ ನಿರ್ಮಾಣ. ಉತ್ತರ ದಿಕ್ಕಿನಲ್ಲಿ ಗೌತಮ ಗಣಧರರ ಚರಣ ಹಾಗೂ ಭದ್ರಬಾಹು ಶ್ರುತಿಕೇವಲಿ ಚರಣಗಳಿಗೆ ಕೂಟ ನಿರ್ಮಾಣ.
4ನೇ ಜಿನಮಂದಿರದಲ್ಲಿ ಶ್ರುತಸ್ಕಂಧ ಬಸದಿ ನಿರ್ಮಾಣ.  ಮುನಿನಿವಾಸ ಮತ್ತು ಮುನಿಗಳ ಚೌಕ ನಿರ್ಮಾಣ.  ಬಸದಿಯ ಸುತ್ತ ಇರುವ ಕಾಂಪೌಂಡ್ ಗೋಡೆಯ ನವೀಕರಣ,
ಗ್ರೀಲ್, ವಿದ್ಯುತ್ ದೀಪ ಹಾಗೂ ಸಿ. ಸಿ. ಕ್ಯಾಮರಗಳ ಅಳವಡಿಕೆ.  ಬೆಟ್ಟದ ಮೇಲೆ 4 ಕೊಠಡಿ, ಕಾರ್ಯಾಲಯ ಮತ್ತು ಭದ್ರತಾ ಸಿಬ್ಬಂದಿಗೆ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಜೀರ್ಣೋದ್ಧಾರ ಕಾರ್ಯದಲ್ಲಿ ದಾನ ನೀಡಲು ಇಚ್ಛಿಸುವ ಭಕ್ತಾಧಿಗಳು  ತನು ಮನ ಧನ ನೀಡಿ  ಸಹಕರಿಸಬಹುದು" ಎಂದು  ಅಜಿತ್ ರವರು ತಿಳಿಸಿದರು.





ಅಲ್ಲೇ ಇರುವ ಗೂಡಂಗಡಿಯಲ್ಲಿ ಚುರುಮುರಿ ಖರೀದಿಸಿ ತಿನ್ನುತ್ತಾ ಸೂರ್ಯಾಸ್ತದ ದೃಶ್ಯವನ್ನು ಮತ್ತು ಮೈದಾಳ ಕೆರೆಯ ಸೌಂದರ್ಯವನ್ನು  ನಮ್ಮ ಕಣ್ತುಂಬಿಸಿಕೊಂಡು ಮೊಬೈಲ್ ನಲ್ಲೂ ತುಂಬಿಸಿಕೊಂಡು ಬೆಟ್ಟದಿಂದ ಕೆಳಗಿಳಿದು ಬಂದು ಅಲ್ಲಿರುವ ಮತ್ತೊಂದು ಆಕರ್ಷಣೆ ಬಸದಿ ನೋಡಲು ಹೊರಟೆವು.





ದೂರದಿಂದಲೇ
ಬಾಹುಬಲಿಯಂತೆ ಕಾಣುವ ಶಾಂತ ಮೂರ್ತಿಯೊಂದು ನಮ್ಮನ್ನು ಸ್ವಾಗತಿಸಿತು. ಆದರೆ ಇದು ಬಾಹುಬಲಿಯಲ್ಲ. ದಿಗಂಬರ ಚಂದ್ರನಾಥ ತೀರ್ಥಂಕರರ ಮೂರ್ತಿ. ಇದನ್ನು 2011ರಲ್ಲಿ ಉದ್ಘಾಟಿಸಲಾಗಿದೆ. ಮೂರ್ತಿಯ ಮುಂದೆ ಸ್ತಂಭವೊಂದಿದ್ದು ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುತ್ತದೆ. 

ಚಂದ್ರನಾಥ ತೀರ್ಥಂಕರರ ಮೂರ್ತಿ ಪಕ್ಕದಲ್ಲೇ ಚಿತ್ತಾಕರ್ಷಕವಾದ  ನವಿಲಿನ ಗರಿಗಳ ಬೀಸಣಿಗೆಯ  ಆಕಾರದ ಮಂದಿರವು ತನ್ನ ವಿಶಿಷ್ಠವಾದ ವಿನ್ಯಾಸದಿಂದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಇದು 1855 ರಿಂದ 1955ರವರೆಗೆ ಜೀವಿಸಿದ್ದ ಆಚಾರ್ಯ ದಿಗಂಬರ ಜೈನ ಚಾರಿತ್ರ ಚಕ್ರವರ್ತಿ ಶ್ರೀಶಾಂತಿ ಸಾಗರ್ ಜೀ ಮಹಾರಾಜ್ ಗುರು ಮಂದಿರ. ದಿಗಂಬರ ಜೈನ ಮುನಿಗಳು ಉಪಯೋಗಿಸುತ್ತಿದ್ದ ನವಿಲುಗರಿಯ ಮುಚ್ಚಳಿಕೆಯ ಆಕಾರದ ಈ ಮಂದಿರ 81 ಅಡಿ ಎತ್ತರವಿದೆ ಎಂಬುದು ವಿಶೇಷ. ಇದಲ್ಲದೆ ಇದರಲ್ಲಿ ಜೈನ ತೀರ್ಥಂಕರರ ದಿನನಿತ್ಯದ ಜೀವನಶೈಲಿಯ ಚಿತ್ರಗಳನ್ನು ಪ್ರತಿಮೆಯ ಇಕ್ಕೆಲಗಳಲ್ಲಿ ಇಡಲಾಗಿದೆ. ಗುರು ಮಂದಿರದಲ್ಲಿನ ಫೋಟೊ ಗ್ಯಾಲರಿಯನ್ನು ನೋಡಿದರೆ ಜೈನ ತೀರ್ಥಂಕರರ ಜೀವನಶೈಲಿಯು ನಮಗೆ ಮನದಟ್ಟಾಗುತ್ತದೆ. ಆ ಪ್ರದೇಶದಲ್ಲಿ ಇರುವಾಗ ಎಂತಹ ಬಾಯಿಬಡುಕರು ಸಹ ಮೌನವಹಿಸಿಬಿಡುತ್ತಾರೆ.ಆ ವಾತಾವರಣದಿಂದ ಪ್ರೇರಿತರಾಗಿ ನಾವೂ ಮೌನವಾಗಿ ಕುಳಿತು ಒಂದೈದು ನಿಮಿಷ ಧ್ಯಾನ ಮಾಡಿ ಹೊರಬಂದಾಗ ಮನಕ್ಕೆ ಏನೋ ಒಂಥರ ಆನಂದವುಂಟಾಯಿತು. ನಮ್ಮ ಕಾರಿನ ಕಡೆ ಹೆಜ್ಜೆ ಹಾಕುವಾಗ
ಏಳೆಂಟು  ಕಿಲೋಮೀಟರ್ ಸನಿಹದಲ್ಲೇ ಇರುವ ಇಂತಹ ಇತಿಹಾಸ ಪ್ರಸಿದ್ಧ ತಾಣವನ್ನು ಇಷ್ಟು ದಿನವಾದರೂ ನೋಡದಿದ್ದಕ್ಕೆ ಬೇಸರವಾಯಿತು. ಇದಕ್ಕೆ ಪ್ರಾಯಶ್ಚಿತ್ತ ಎಂಬಂತೆ ಪದೇ ಪದೇ ಈ ಸ್ಥಳಕ್ಕೆ ಬರಬೇಕು ಹಾಗೂ   ನಮ್ಮವರಿಗೂ ಈ ತಾಣದ ಬಗ್ಗೆ ಮಾಹಿತಿ ನೀಡಿ ಅವರ ಸ್ವಾಗತಿಸಬೇಕು ಎನಿಸಿತು ಅದಕ್ಕೆ ಈ ಲೇಖನ .ಆತ್ಮೀಯರೆ ಒಮ್ಮೆ ಬನ್ನಿ ಮಂದರಗಿರಿ ಮತ್ತು ಬಸ್ತಿ ಬೆಟ್ಟದ ಸಿರಿಯ ಸೊಬಗನ್ನು ಕಣ್ತುಂಬಿಸಿಕೊಳ್ಳಿ.

ತಲುಪಲು ಮಾರ್ಗ.
ಈ ಸುಂದರ ತಾಣ  
ತುಮಕೂರಿನಿಂದ 10 ಕಿ.ಮೀ ದೂರದಲ್ಲಿದೆ.  ಬೆಂಗಳೂರು ಪೂನಾ  ರಾಷ್ಟ್ರೀಯ ಹೆದ್ದಾರಿಯಿಂದ ಈ ಬೆಟ್ಟ ಕಾಣಲು ಸಿಗುತ್ತದೆ. ಈ ಸ್ಥಳಕ್ಕೆ ತಲುಪಲು ತುಮಕೂರಿನಿಂದ ಬರುವವರು  ರಾಷ್ಟ್ರೀಯ ಹೆದ್ದಾರಿಯ  ರಸ್ತೆ ಸುಂಕ ಕಟ್ಟಿದ ನಂತರ 1 ಕಿಲೋಮೀಟರ್ ಮುಂದುವರೆದರೆ ಎಡಬಾಗದಲ್ಲಿ ಬೆಟ್ಟದ ಬಗ್ಗೆ ಒಂದು ಸ್ವಾಗತ ಕಮಾನು ಇದೆ. ಇಲ್ಲಿಂದ  ಮತ್ತೊಂದು  ಕಿಲೋಮೀಟರ್ ಕ್ರಮಿಸಿದರೆ ಬಸ್ತಿ   ಬೆಟ್ಟದ ಕೆಳಬಾಗಕ್ಕೆ ತಲುಪಬಹುದು.
ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆಯ ವರೆಗೆ ಕ್ಷೇತ್ರದಲ್ಲಿ ವೀಕ್ಷಿಸಲು ಅವಕಾಶವಿರುತ್ತದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

 

ಎರಡು ಹನಿಗಳು

 


*ಸಿಹಿಜೀವಿಯ ಹನಿಗಳು*


*ಕಾಲ ಎನ್ನುವ ಮದ್ದು..*


ಎಷ್ಟೇ ಕಷ್ಟ ಕೋಟಲೆಗಳಿದ್ದರೂ,

ಬಿದ್ದರೂ   ದೃತಿಗೆಡದೇ 

ನಡೆಯುತಿರಬೇಕು ಎದ್ದು|

ಎಲ್ಲರ ಸಕಲ ಸಮಸ್ಯೆಗಳ

ಪರಿಹರಿಸುವುದು ಕಾಲ

ಎನ್ನುವ ಮದ್ದು ||


೨ 

*ಗಂಧದ ಹೋಳು*


ಸಂಬಂಧಗಳ ಬಿರುಕಾಯಿತೆಂದು

ಕೊರಗದಿರು ಎಂದಿಗೂ

ನಿಲ್ಲಿಸಿ ಬಿಡು ನಿನ್ನ ಗೋಳು |

ಎಷ್ಟೇ ತುಂಡುಗಳಾಗಿ ವಿಭಜಿಸಿದರೂ 

ತನ್ನ ಪರಿಮಳವ ಕಳೆದುಕೊಳ್ಳುವುದೇ

ಗಂಧದ ಹೋಳು ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


ಕಾಲ ಎನ್ನುವ ಮದ್ದು.

 



*ಕಾಲ ಎನ್ನುವ ಮದ್ದು..*


ಎಷ್ಟೇ ಕಷ್ಟ ಕೋಟಲೆಗಳಿದ್ದರೂ,

ಬಿದ್ದರೂ   ದೃತಿಗೆಡದೇ 

ನಡೆಯುತಿರಬೇಕು ಎದ್ದು|

ಎಲ್ಲರ ಸಕಲ ಸಮಸ್ಯೆಗಳ

ಪರಿಹರಿಸುವುದು ಕಾಲ

ಎನ್ನುವ ಮದ್ದು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


24 ನವೆಂಬರ್ 2022

ಬಾಲಾಜಿಯ ದರ್ಶನ ಮಾಡೋಣ ಬನ್ನಿ ...

 


ಬಾಲಾಜಿಯ ದರ್ಶನ ಮಾಡೋಣ ಬನ್ನಿ.


ಆಗಾಗ್ಗೆ ಕೇಳಿಸುವ ಮಕ್ಕಳ ಅಳುವಿನ ಸದ್ದು, ಕೆಲವೊಮ್ಮೆ ಸಂತಸದಿಂದ ಕುಣಿದಾಡುವ ಶಿಶುಗಳ ಕಲರವ, ಒಂದೆಡೆ ಹಿಂದಿಮಾತುಗಳು ಕಿವಿಯಮೇಲೆ ಬೀಳುತ್ತಿದ್ದರೆ ಪಕ್ಕದಲ್ಲೇ ತಮಿಳು ಭಾಷೆಯ ಸದ್ದು, ತೆಲುಗು ಭಾಷೆ ಸ್ವಲ್ಪ ಹೆಚ್ಚೇ ಎನ್ನುವಂತೆ ಕೇಳುತ್ತಿದ್ದರೆ.ಕ್ಷೀಣವಾಗಿ ಅಲ್ಲೊಂದು ಇಲ್ಲೊಂದು ಕನ್ನಡ ಪದಗಳು ಕೇಳುತ್ತಿದ್ದವು. 

ಇದು ಇತ್ತೀಚಿನ ತಿರುಮಲದ ಶ್ರೀವೆಂಕಟೇಶ್ವರ ಸ್ವಾಮಿಯ ವೈಕುಂಠ  ಕ್ಯೂ  ಕಾಂಪ್ಲೆಕ್ಸ್ ನಲ್ಲಿರುವ ಸರ್ವ ದರ್ಶನ ಕಂಪಾರ್ಟ್ ಮೆಂಟ್ ನ ಚಿತ್ರಣ...  

ವೆಂಕಟೇಶ್ವರ ಎಂಬ ಹೆಸರಿನ ನಾನು ವರ್ಷಕ್ಕೊಮ್ಮೆ ಬಾಲಾಜಿಯ ದರ್ಶನ ಮಾಡದಿದ್ದರೆ ಏನೋ ಕಳೆದುಕೊಂಡ ಅನುಭವ .ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಸ್ವಾಮಿಯ ದರ್ಶನ ಭಾಗ್ಯದಿಂದ ವಂಚಿತನಾದ ನಾನು ಕಳೆದ ವಾರ ಬಸ್ ಏರಿ ತಿರುಮಲೆಗೆ ಹೊರಟೇಬಿಟ್ಟೆ.ತಿರುಪತಿಯಿಂದ ತಿರುಮಲಾಗೆ ಟಿ ಟಿ ಡಿ ಬಸ್ ನಲ್ಲಿ ಪಯಣ ಆರಂಭವಾದಾಗ ನಿಧಾನವಾಗಿ ಮೋಡ ಕವಿದ ವಾತಾವರಣ ಆಗಾಗ್ಗೆ ಬೀಳುವ ತುಂತುರು ಮಳೆ, ಬಸ್ ಮೇಲೇರಿದಂತೆಲ್ಲಾ  ತಿರುಪತಿಯ ಕಾಂಕ್ರೀಟ್ ಕಾಡು ಮಾಯವಾಗಿ  ಶೇಶಾಚಲಂ ಕಾನನದ ವೈಭವ ನಮ್ಮ ಮನವನ್ನು ಮುದಗೊಳಿಸಿತು .

ತಿರುಮಲ ಬೆಟ್ಟ ತಲುಪಿ ಸ್ನಾನ ಮಾಡಿ. ಮೊದಲಿಗೆ ವರಹಾಸ್ವಾಮಿಯ ದರ್ಶನ ಪಡೆದು ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ  ಸರ್ವ ದರ್ಶನ ಸಾಲಿನಲ್ಲಿ ನಿಂತಾಗ ಎಷ್ಟು ಹೊತ್ತಿಗೆ ದರ್ಶನವಾಗುತ್ತದೆ ಎಂಬ ನಿರ್ದಿಷ್ಟವಾದ ಸಮಯದ ಅರಿವಿಲ್ಲದಿದ್ದರೂ  ಸ್ವಾಮಿಯ ದರ್ಶನವಾಗೇ ಆಗುತ್ತದೆ ಎಂಬ ಅದಮ್ಯ ವಿಶ್ವಾಸ ನಮ್ಮದು. 





ಸರತಿಯ ಸಾಲು ಗೋವಿಂದ ನಾಮ ಸಂಕೀರ್ತನೆ ಮಾಡುತ್ತ  ಕ್ರಮೇಣ ಮುಂದೆ ಸಾಗಿ ಇಂದು ಕಂಪಾರ್ಟ್ ಮೆಂಟ್ ತಲುಪಿತು. ಅಲ್ಲಿಯ ಚಿತ್ರಣ ಅದೊಂದು ಭಾರತದ ಪ್ರತಿಬಿಂಬ ಎಂಬಂತೆ ಕಂಡಿತು.ಅಲ್ಲಿ ಬಡವರಿದ್ದರು ಧನಿಕರು, ಕಪ್ಪನೆಯ, ಕೆಂಪನೆಯ ಎಣ್ಣೆಗೆಂಪು ಬಣ್ಣದ,ಗಂಡು ಹೆಣ್ಣು, ವಿವಿಧ ಭಾಷೆಯ, ವಿವಿಧ ಸಂಸ್ಕೃತಿಗಳ ಜನ ಸೇರಿದ್ದರು ವಿಭಿನ್ನವಾದ ನೆಲ ಮೂಲ, ಸಂಸ್ಕೃತಿಯಾದರೂ   ,ಗಡಿ,ನೀರು, ಜಾತಿ ಭಾಷೆಗಳ ವಿಚಾರಕ್ಕೆ ಕಿತ್ತಾಡುವವರೆಲ್ಲರ  ಬಾಯಲ್ಲಿ ಗೋವಿಂದ ನಾಮಾವಳಿ ಪ್ರತಿಧ್ವನಿಸುತ್ತಿತ್ತು !ಆ ಮಟ್ಟಿಗೆ ಬಾಲಾಜಿ      ನಮ್ಮನ್ನೆಲ್ಲಾ ಏಕತೆಯ ಮಂತ್ರ ಪಠಿಸುವ ಬುದ್ದಿ ಕರುಣಿಸಿದ್ದ .





ಬಾಲಾಜಿಯ ದರ್ಶನ ಸಮಯದಲ್ಲಿ ನಾವೆಲ್ಲರೂ ಮೊಬೈಲ್ ಮತ್ತು ನಮ್ಮ ಎಲ್ಲಾ ಎಲೆಕ್ಟ್ರಾನಿಕ್ ಡಿವೈಸ್ ಗಳಿಂದ ದೂರವಿರುವ ಕಾರಣ ಉಚಿತವಾದ ಮೊಬೈಲ್ ಡಿ ಅಡಿಕ್ಷನ್ ಆದ ಅನುಭವ ಆ ಸಮಯದಲ್ಲಿ ಕಿವಿಯ ಮೇಲೆ ಬೀಳುವ ಗೋವಿಂದ ನಾಮಾವಳಿ ನಮಗೆ ಬೇರೇನೂ ಬೇಡ  ಎಂಬ ಭಾವನೆ ತರಿಸುವುದು ಸುಳ್ಳಲ್ಲ.

 

ಕಂಪಾರ್ಟ್ ಮೆಂಟ್ ನಲ್ಲಿ ಟಿ ಟಿ ಡಿ ಯವರು ಆಗಾಗ್ಗೆ ಅನ್ನ ಪ್ರಸಾದ ನೀಡುವರು. ಅಲ್ಲೇ ಜಲಪ್ರಸಾದ ಲಭ್ಯ ಉಳಿದಂತೆ ನಿತ್ಯ ಕರ್ಮಕ್ಕೂ ಸ್ಥಳಾವಕಾಶವನ್ನು ಕಲ್ಪಿಸಿದ್ದಾರೆ. ದೊಡ್ಡ ಪರದೆಯ ಮೇಲೆ ಸ್ವಾಮಿಯ ವಿವಿಧ ಸೇವೆಗಳನ್ನು ಕಣ್ತುಂಬಿಸಿಕೊಳ್ಳುವ ಭಾಗ್ಯ. ಇನ್ನೇನು ಬೇಕು ನಮಗೆ ಅದಕ್ಕೆ ಹಿರಿಯರು ಆ ಜಾಗಕ್ಕೆ ವೈಕುಂಠ ಕ್ಯೂ ಕಾಂಪ್ಲೆಕ್ಸ್ ಎಂಬ ನಾಮಕರಣ ಮಾಡಿರುವುದು! 


ಸುಮಾರು ಹದಿನೇಳು ಗಂಟೆಗಳ ಭಕ್ತಿ ಪೂರ್ವಕ ಕಾಯುವಿಕೆಯ ಫಲವಾಗಿ ಸ್ವಾಮಿಯ ದಿವ್ಯ ಸ್ವರೂಪವನ್ನು ಕಣ್ತುಂಬಿಸಿಕೊಂಡು ಹೊರಬರುವಾಗ ಒಂದು ಅವ್ಯಕ್ತವಾದ ಸಂತಸ ಮನೆ ಮಾಡಿ ಧನ್ಯತಾ ಭಾವ ಮೂಡುತ್ತದೆ. ನಂತರದ ಕ್ಷಣದಲ್ಲಿ ನಮ್ಮ ಮನದಲ್ಲಿ ಮತ್ತದೇ ಪ್ರಶ್ನೆ ಮತ್ತೆ ಸ್ವಾಮಿಯ ದರ್ಶನ ಯಾವಾಗ? 





ಈ ಬಾರಿ ತಿರುಪತಿಗೆ ಹೋದಾಗ ನಾನು ಗಮನಿಸಿದ ಮತ್ತೊಂದು ಒಳ್ಳೆಯ ಅಂಶ ಏಕ ಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ! ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ಬದಲಿಗೆ  ಒಂದು ಲೀಟರ್ ಗಾಜಿನ ಬಾಟಲ್ ಗಳಲ್ಲಿ ನೀರಿನ ಮಾರಾಟ ಮಾಡುವುದು ಕಂಡು ಬಂತು. ದರ ಸ್ವಲ್ಪ ಹೆಚ್ಚಾದರೂ ಪರಿಸರ ಕಾಳಜಿಯ ಸರ್ವರೂ ಇದಕ್ಕೆ ಒಗ್ಗಿಕೊಳ್ಳಲೇ ಬೇಕಿದೆ. ನಾನೂ ಕೂಡಾ ಪುನಃ ಉಪಯೋಗಿಸಬಹುದಾದ  ಗಾಜಿನ ಬಾಟಲ್ ನಲ್ಲಿ ನೀರು ಖರೀದಿಸಿ ಕುಡಿದೆ.

ಲಾಡು ಖರೀದಿಸಲು ಮೊದಲ ಪ್ಲಾಸ್ಟಿಕ್ ಚೀಲದ ಬದಲಿಗೆ ಪರಿಸರ ಸ್ನೇಹಿ ಚೀಲಗಳ ವಿತರಣೆ ಗಮನ ಸೆಳೆಯಿತು. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ 

ಈ ಬಾರಿ ಬಾಲಾಜಿಯ ದರ್ಶನಕ್ಕೆ ತೆರಳಿದ ನಮ್ಮದು  ಬರೀ ತೀರ್ಥ ಯಾತ್ರೆ ಅನಿಸಲ್ಲ ಬದಲಿಗೆ ಅದೊಂದು ಸಮಾಜೋ ಆರ್ಥಿಕ ಮಹತ್ವದ ಪಯಣವಾಗಿತ್ತು, ಏಕತೆಯ ಯಾತ್ರೆಯಾಗಿತ್ತು.ಪರಿಸರ ಜಾಗೃತಿಯ ಸಮಾವೇಶವಾಗಿತ್ತು. ಮೊಬೈಲ್ ಮುಂತಾದ ಗಾಡ್ಜೆಟ್ ಅತಿಯಾದ ಬಳಕೆ ವಿರುದ್ಧದ ಜಾಗೃತಿ ಮೂಡಿಸುವ ಕೇಂದ್ರದ ದರ್ಶನ ವಾದಂತಾಗಿತ್ತು. ಆತ್ಮೀಯರೆ ಬನ್ನಿ ನೀವು ಸಹ 

ಪ್ರಪಂಚದ ಶ್ರೀಮಂತ ದೇವ, ಅನಾಥ ರಕ್ಷಕ ಬಾಲಾಜಿಯ ದರ್ಶನ ಮಾಡೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


18 ನವೆಂಬರ್ 2022

ಕಂಬನಿ ಖಾಲಿ...

 #ಕಂಬನಿ_ಖಾಲಿಯಾಗಿದೆ 


ನೀ ಬೆನ್ನಿಗೆ ಚೂರಿ ಹಾಕಿದರೂ

ಅದು ಹೃದಯಕ್ಕೆ ತಾಗಿದೆ |

ಖಂಡಿತವಾಗಿಯೂ ಅಳುವುದಿಲ್ಲ

ನೀ ಮಾಡಿದ ಮೋಸಕ್ಕೆ

ಏಕೆಂದರೆ ಕಂಬನಿ ಖಾಲಿಯಾಗಿದೆ ||


#ಸಿಹಿಜೀವಿ