25 ಅಕ್ಟೋಬರ್ 2022

ದೀವಣಿಗೆ ಹಬ್ಬ ...


 

ದೀವಣಿಗೆ ಹಬ್ಬ

ನಮ್ಮ ಹುಟ್ಟೂರು ಕೊಟಗೇಣಿಯಲ್ಲಿ ದೀಪಾವಳಿ ಆಚರಣೆಯ ಸಂಪ್ರದಾಯವಿರಲಿಲ್ಲ .ದಸರಾ ರಜೆಗೆಂದು ಮಾವನವರ ಊರಾದ ಯರಬಳ್ಳಿಗೆ ಹೋದರೆ ಕೆಲವೊಮ್ಮೆ ಶಾಲೆ ಶುರುವಾದರೂ ಅಮ್ಮ ಕರೆದರೂ ಬರುತ್ತಿರಲಿಲ್ಲ.ಕಾರಣ ದೀವಣಿಗೆ ಹಬ್ಬ! ದೀವಣಿಗೆ  ಹಬ್ಬ ಮುಗಿಸಿಕೊಂಡೇ ಬರುವೆ ಎಂದು ಅಮ್ಮನಿಗೆ ಹೇಳುತ್ತಿದ್ದೆ.  ದೀಪಾವಳಿ ಹಬ್ಬವನ್ನು ಯರಬಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ "ದೀವಣಿಗೆ " ಹಬ್ಬ ಎಂದೇ ಕರೆಯುತ್ತಿದ್ದರು. ಆಗ ನಮ್ಮ ಮಾವನವರ ಮನೆಯಲ್ಲಿ ಬಹಳ ಚೆನ್ನಾಗಿ ಸಾಕಿದ ಎರಡು ಬಿಳಿ ಎತ್ತುಗಳಿದ್ದವು .ನೋಡಲು ಚೆನ್ನಾಗಿದ್ದರೂ ಗುದ್ದುವುದರಲ್ಲಿ  ಬಹಳ ಚಾಲಾಕಿಗಳಾಗಿದ್ದವು .ನಮ್ಮ ಚಿಕ್ಕಮಾಮ ಮಾತ್ರ ಅವುಗಳ ಕಟ್ಟುವುದು, ಮೇಯಿಸುವುದು , ಮೈತೊಳೆಯುವುದು ಮುಂತಾದ ಕೆಲಸ ಮಾಡುತ್ತಿದ್ದರು. ನಾನು ಅವರ ಜೊತೆಯಲ್ಲಿ ಭಯದಿಂದಲೇ ಎತ್ತುಗಳ ಬಳಿ ಸಾಗುತ್ತಿದ್ದೆ.
ದೀಪಾವಳಿ ಹಬ್ಬ ಹತ್ತಿರ ಬಂದಂತೆ ಎತ್ತುಗಳನ್ನು ಚೆನ್ನಾಗಿ  ಮೇಯಿಸಲು ಹೊಲಗಳ ಬದುಗಳಲ್ಲಿ ಮತ್ತು ಹುಲ್ಲುಗಾವಲಿನ ಕಡೆ ಹೋಗುತ್ತಿದ್ದೆವು . ಬದುಗಳಲ್ಲಿ ಎತ್ತು ಮೇಯುವಾಗ ನಾವೂ ಆಗ ತಾನೆ ಎಳೆಕಾಯಿಯಾಗಿರುವ  ಕಡ್ಲೇ ಕಾಯಿ, ಸಜ್ಜೆ ತೆನೆ, ಅವರೇ ಕಾಯಿ, ಅಲಸಂದೇ ಕಾಯಿ, ಹೆಸರು ಕಾಯಿ , ಮುಂತಾದವುದಳನ್ನು ಮೇಯುತ್ತಿದ್ದೆವು. 
ದೀಪಾವಳಿ ಹಬ್ಬದ ದಿನ ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಎತ್ತು ಮೇಯಿಸಲು ಹೊಲಕ್ಕೆ ಹೋಗಿ ಮಧ್ಯಾಹ್ನದ ವೇಳೆಗೆ ದೊಡ್ಡಸೇತುವೆ ಹಳ್ಳದಲ್ಲಿ ಎತ್ತುಗಳ ಮೈತೊಳೆದುಕೊಂಡು  ಮನೆಗೆ ಬರುತ್ತಿದ್ದೆವು .ನಮ್ಮ ಊಟದ ನಂತರ ಎತ್ತಿನ ಕೊಂಬು ಎರೆಯುವವರು ಬರುತ್ತಿಧ್ದರು . ಎತ್ತಿನ ಕೊಂಬುಗಳನ್ನು ಸೂಕ್ಷ್ಮವಾಗಿ ಎರೆದು ನೈಸ್ ಆಗಿ ಮಾಡಿ ನಾವು ಕೊಟ್ಟಷ್ಟು ಹಣ ಪಡೆದು ಅವರು ತೆರಳಿದ ಬಳಿಕ ಎತ್ತುಗಳಿಗೆ  ಅಲಂಕಾರ ಮಾಡುವ ಕೆಲಸ ಶುರು.ಮೊದಲಿಗೆ ಎತ್ತಿನ ಕೊಂಬುಗಳಿಗೆ ಬಣ್ಣ ಬಳಿಯುವುದು. ನಂತರ. ಕೊಂಬಿನ ತುದಿಗೆ ಕಳಸದಂತಹ  ಕೊಡಣಸು ಹಾಕುತ್ತಿದ್ದೆವು. ಕೆಲವೊಮ್ಮೆ ಗಗ್ಗರ ಸಹ ಹಾಕಿ . ಕಾಲಿಗೆ ಗೆಜ್ಜೆ ಕಟ್ಟುತ್ತಿದ್ದೆವು.ಎರಡು ಕೊಂಬುಗಳ ತುದಿಗೆ ಒಂದು ಕಡ್ಡಿ ಕಟ್ಟಿ ಎತ್ತಿನ ಮುಖಗಳಿಗೆ   ಮುಖವಾಡ ಕಟ್ಟಿ   ಅದಕ್ಕೆ ಚೆಂಡು ಹೂ ,ಕನಕಾಂಬರ ಹೂ, ಸೇವಂತಿಗೆ ಹೂಗಳ ಹಾರವನ್ನು ,ಬಲೂನ್ ಗಳನ್ನು, ಪೇಪರ್ ನಿಂದ ಮಾಡಿದ ಡಿಸೈನ್ ಗಳನ್ನು ಕಟ್ಟುತ್ತಿದ್ದೆವು . ಇದರ ಜೊತೆಗೆ ಎತ್ತುಗಳ ಮೈಮೇಲೆಲ್ಲ ಅದರ ಚರ್ಮ ಕಾಣದಂತೆ ಹೂಗಳನ್ನು ಹೊದಿಸುತ್ತಿದ್ದೆವು. ಅದು ಎಂಭತ್ತರ ದಶಕ   ಆಗಿನ ಕಾಲಕ್ಕೆ ನೂರಾರು ರೂಪಾಯಿಗಳನ್ನು ಎತ್ತುಗಳ ಅಲಂಕಾರಕ್ಕಾಗಿ ನಮ್ಮ ಮಾವನವರು   ಖರ್ಚು ಮಾಡುತ್ತಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಕೊಂಬು ಎರೆಯುವ ಪ್ರಕ್ರಿಯೆಯ ಮೂಲಕ ಅರಂಭವಾದ ನಮ್ಮ  ಎತ್ತುಗಳ  ಅಲಂಕಾರ ಮುಗಿದಾಗ ಸೂರ್ಯ ತನ್ನ ಗೂಡು ಸೇರಿದ್ದ.ಅಲಂಕಾರ ಮುಗಿದ ಮೇಲೆ ನಮ್ಮ ಎತ್ತುಗಳ ಅಂದ ಚೆಂದ ನೋಡಿ ನಮಗೇ ಗುರುತು ಹಿಡಿಯಲಾಗುತ್ತಿರಲಿಲ್ಲ. ಸಂಜೆಗೆ ಮನೆ ದೇವರ ಪೂಜೆ ಮಾಡಿ ಎಡೆ ಇಟ್ಟು ಎತ್ತುಗಳಿಗೂ ಎಡೆ ತಿನ್ನಿಸಿದರೆ ಅರ್ಧ ದೀಪಾವಳಿ ಹಬ್ಬ ಮುಗಿದಂತೆ. ಕ್ರಮೇಣ ನನ್ನ ಬೇಡಿಕೆಯ ಕಡೆ ಗಮನ ಹರಿಸಿದ ನನ್ನ ಮಾವನವರು ವಿರೂಪಾಕ್ಷಪ್ಪರ ಅಂಗಡಿಗೆ ಕರೆದುಕೊಂಡು  ಹೋಗಿ ನನಗೂ ನನ್ನ ಅಣ್ಣನಿಗೂ     ಕಲ್ಲಲ್ಲಿ ಕುಟ್ಟುವ ಪಟಾಕಿ, ತಂತಿ ಮತಾಪು, ಭೂಚಕ್ರ ಮುಂತಾದ ಶಬ್ದ ಬರದ ಪಟಾಕಿ ಕೊಡಿಸುತ್ತಿದ್ದರು.ಆ ಪಟಾಕಿ ಹೊಡೆವಾಗ ನಮಗೆ ಸ್ವರ್ಗ ಮೂರೇ ಗೇಣು.
ಅಲಂಕೃತವಾದ ಎತ್ತುಗಳನ್ನು ಉರುಮೆ ಬಾರಿಸಿಕೊಂಡು ಮೆರವಣಿಗೆ ಮಾಡಿಕೊಂಡು ಊರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಬಯಲಿನಲ್ಲಿ ಒಣಗಿದ ಸೀಮೇಜಾಲಿ ಮತ್ತು  ಇತರ ಕಟ್ಟಿಗೆಯನ್ನು ಒಂದೆಡೆ ದೊಡ್ಡದಾದ ಗುಡ್ಡೆ ಹಾಕಿರುವ" ಈಡು" ಎಂಬ ಕಡೆ ಎತ್ತುಗಳನ್ನು ಓಡಿಸಿಕೊಂಡು ಹೋಗುತ್ತಿದ್ದರು. ಊರಿನ ಎಲ್ಲಾ ಅಲಂಕೃತವಾದ ಎತ್ತುಗಳ ನೋಡುವುದೇ ಒಂದು ಸಂಭ್ರಮ ಕತ್ತಲಲ್ಲೂ ಎತ್ತುಗಳ ಸೌಂದರ್ಯ ಕಂಗೊಳಿಸುತ್ತಿತ್ತು. ಎಲ್ಲಾ ಎತ್ತುಗಳು ಈಡಿನ ಬಳಿ ಬಂದಾಗ ಈಡಿಗೆ ಬೆಂಕಿ ಹಚ್ಚುತ್ತಿದ್ದರು. ಎತ್ತು ಹಿಡಿದವರು ಜೋರಾಗಿ ಕೇಕೇ ಹಾಕುತ್ತಾ ,ಶಿಳ್ಳೆ ಹೊಡೆಯುತ್ತಾ ತಮ್ಮ ಎತ್ತುಗಳು ಜೊತೆ ಈಡು ಸುತ್ತಿ ಊರ ಕಡೆ ಎತ್ತುಗಳ ಜೊತೆಯಲ್ಲಿ ಓಡಿಬರುವ ದೃಶ್ಯಗಳನ್ನು ನೋಡುವುದೇ ಚೆಂದ.ಅಂತಹ ಸಂಧರ್ಭದಲ್ಲಿ ಕೆಲ ಎತ್ತುಗಳಿಗೆ ಮತ್ತು ಜನರಿಗೆ ಬೆಂಕಿಯಿಂದ ಸಣ್ಣ ಪುಟ್ಟ ಗಾಯಗಳಾದ ಉದಾಹರಣೆಗಳೂ ಉಂಟು. ಊರ ಬಳಿ ಬಂದ ಎತ್ತುಗಳನ್ನು ಹಿಡಿದ ರೈತರು ಮೊದಲಿಗೆ ಮಾರಮ್ಮನ ಗುಡಿ ಸುತ್ತಿಸಿ ಆಶೀರ್ವಾದ ಪಡೆದು ತೀರ್ಥ  ಬಂಡಾರ ಹಾಕಿಸಿಕೊಂಡು ರಂಗಪ್ಪನವರ ಗುಡಿ ಸುತ್ತಿಸಿ ಮನೆಗೆ ತೆರಳಿ ಎತ್ತುಗಳಿಗೆ ಮೇವು ಹಾಕಿ ನಾವು ಕರಿಗಡುಬು ಊಟ ಮಾಡುತ್ತಿದ್ದೆವು  . ಊಟದ ಬಳಿಕ ನಾನು ಮತ್ತು ಅಣ್ಣ ಈ ಮೊದಲೇ ತಂದ ಕಲ್ಲಲ್ಲಿ ಕುಟ್ಟುವ ಪಟಾಕಿಯ ಪುಟ್ಟ ಪೇಪರ್ ಡಬ್ಬಿ ಬಿಚ್ಚಿ ಚಟ್ ಎಂದು ಒಂದೊಂದೇ ಪಟಾಕಿ ಕುಟ್ಟಿ ಸಂತಸ ಪಡುವುದನ್ನು ನಮ್ಮಜ್ಜಿ ನೋಡಿ ಖುಷಿ ಪಡುತ್ತಾ ಹುಷಾರು ಕಣ್ರೋ ಎಂದು ಹೇಳುವುದು ಈಗಲೂ ಕಿವಿಯಲ್ಲಿ ಕೇಳಿಸಿದಂತಾಗುತ್ತದೆ. ಈಗ ಹಳ್ಳಿಗಳಲ್ಲೂ ಎತ್ತುಗಳು ಕಡಿಮೆಯಾಗಿ ಟ್ರಾಕ್ಟರ್ ಟಿಲ್ಲರ್ ಬಂದಿವೆ ಎತ್ತುಗಳ ಪೂಜೆಯೆಲ್ಲಿ ಬಂತು?
ನಿನ್ನೆ ನನ್ನ ಚಿಕ್ಕ ಮಗಳು ಅಪ್ಪಾ ನನಗೂ ದೀಪಾವಳಿ ಹಬ್ಬಕ್ಕೆ  ಪಟಾಕಿ ಕೊಡಿಸು ಎಂದಾಗ ಮನುಷ್ಯ ಪ್ರಾಣಿಗಳ ಸಹಜೀವನದ ನನ್ನ ಬಾಲ್ಯದ ದೀಪಾವಳಿ ಬಹಳ ನೆನಪಾಯಿತು. ಬೈಕ್ ಹತ್ತಿ ಮಗಳಿಗೆ ಪಟಾಕಿ ಕೊಡಿಸಲು ತುಮಕೂರು  ನಗರದಲ್ಲಿ ವಾಹನಗಳಿಂದ ಗಿಜಿಗುಡುವ ರಸ್ತೆಯಲ್ಲಿ   ಹೊರಟಾಗ ಯಾಕೋ ಟ್ರಾಪಿಕ್ ನಲ್ಲಿ ಬಹಳ ಕಾಲ ರೆಡ್ ಸಿಗ್ನಲ್ ಕಂಡಂತಾಯ್ತು....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

24 ಅಕ್ಟೋಬರ್ 2022

23 ಅಕ್ಟೋಬರ್ 2022

ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕ ಬೇಲೂರು..

 



ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕ ಬೇಲೂರು...


ಇತ್ತೀಚೆಗೆ ವಿಶ್ವಸಂಸ್ಥೆಯ ಯುನೆಸ್ಕೋ ತಂಡ ಕರ್ನಾಟಕದ ಇತಿಹಾಸ ಪ್ರಸಿದ್ಧ  ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳಿಗೆ ಭೇಟಿ ನೀಡಿ ಯುನೆಸ್ಕೊ ದ   ಸಾಂಸ್ಕೃತಿಕ ಪರಂಪರೆಯ ತಾಣವಾಗಿ ಘೋಷಿಸಲು ಬೇಕಾದ ಮಾರ್ಗದರ್ಶಿ ನಿಯಮಗಳನ್ನು ಪರಿಶೀಲಿಸಿತು. ನಮ್ಮ  ಇತಿಹಾಸ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಪಡುವ ನನ್ನಂತಹ ಕೋಟ್ಯಾಂತರ ಭಾರತೀಯರು ಆಗ ಬಹಳ ಸಂತಸಗೊಂಡೆವು.  ಈಗಾಗಲೇ ಹಲವಾರು ಬಾರಿ ಬೇಲೂರು ನೋಡಿದ್ದರೂ ಮತ್ತೆ ಬೇಲೂರು ನೋಡುವ ಮನಸಾಯಿತು.



ಕಳೆದ ವಾರ ಸಮಾನ ಮನಸ್ಕ ಗೆಳೆಯರೊಂದಿಗೆ ಬೇಲೂರಿಗೆ ಭೇಟಿ ನೀಡಿದ್ದೆ.ಅಂದೂ ಕೂಡಾ ಬೇಲೂರು ಮತ್ತು ಬೇಲೂರಿನ ಶಿಲ್ಪಕಲೆಯು ನನಗೆ ಹೊಸದಾಗಿ ಕಂಡಿತು .800 ವರ್ಷಗಳ ಬಳಿಕವೂ ಆ ಶಿಲ್ಪಕಲೆ ನಮ್ಮನ್ನು ಸೆಳೆಯುತ್ತಿವೆ ಎಂದರೆ ಅದಕ್ಕೆ ಕಾರಣರಾದ  ನಮ್ಮ ಹೊಯ್ಸಳ ಮಹಾರಾಜರ ಬಗ್ಗೆ ಮತ್ತು ಶಿಲ್ಪಿಗಳ ಬಗ್ಗೆ ಹೆಮ್ಮೆ ಅನಿಸಿತು.


ದೇವಾಲಯ ಪ್ರವೇಶ ಮಾಡಿದ ನಮ್ಮ ತಂಡಕ್ಕೆ ಸ್ಥಳೀಯರು ಮತ್ತು ಮಾರ್ಗದರ್ಶಕರು ಕೆಲ ಅಮೂಲ್ಯವಾದ ಮಾಹಿತಿ ನೀಡಿದರು.ಅದರಲ್ಲಿ ಕೆಲವು ನಾವೀಗಾಗಲೆ ಪುಸ್ತಕ ಮತ್ತು ಪತ್ರಿಕೆಗಳಲ್ಲಿ ಓದಿದ ಮಾಹಿತಿಗಳೂ ಇದ್ದವು.





ಬೇಲೂರು ಒಂದು ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಚೆನ್ನಕೇಶವ ದೇವಾಲಯ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ.  ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಯಾದ  ಈ ದೇವಾಲಯವು ನಕ್ಷತ್ರ ಆಕಾರದಲ್ಲಿದೆ. ಈ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಹೆಚ್ಚುಹೆಚ್ಚು ಜನ ಬಂದು ಈ ದೇವಾಲಯನ್ನು ವೀಕ್ಷಿಸುತ್ತಾರೆ. 

ಇದನ್ನು ಹಿಂದೆ  ವೇಲುಪುರ    ಎಂದು ಕರೆಯುತ್ತಿದ್ದರು. ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ಸಾಮಾನ್ಯ ಶಕ  1117ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶೀರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ    ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು 103  ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಾಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳರ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು 70 ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ಸಾಮಾನ್ಯ ಶಕ  1397 ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ 'ಆನೆ ಬಾಗಿಲು' ಎಂದು ಕರೆಯುತ್ತಾರೆ.



ದೇವಾಲಯದ ಸುತ್ತಲೂ, ಸಂಕೀರ್ಣವಾದ ಕೆತ್ತನೆಗಳು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳ ಚಿತ್ರಣವಿದೆ. ಬೇಲೂರು ಜೊತೆಗೆ ಹೊಯ್ಸಳ ಅಧಿಕಾರಾವಧಿಯಲ್ಲಿ ಚಾಲ್ತಿಯಲ್ಲಿದ್ದ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುತ್ತವೆ. ಈ ಕಲಾಕೃತಿಗಳನ್ನು ಕಂಡು ಮನಸಾರೆ ಮೆಚ್ಚಿದ ನಾವು ಕೆಲ ಪೋಟೋ ತೆಗೆದುಕೊಂಡು ಕೆಲ ವೀಡಿಯೋ ಮಾಡಿಕೊಂಡೆವು .ನಮ್ಮ ಅಕ್ಕಪಕ್ಕದಲ್ಲಿ ವಿದೇಶಿ ಪ್ರವಾಸಿಗರು ಮತ್ತು ಹೊರರಾಜ್ಯದ ಜನರು ನಮಗಿಂತ ಆಸಕ್ತಿಯಿಂದ ನಮ್ಮ ದೇವಾಲಯ ವೀಕ್ಷಿಸುವುದನ್ನು  ಕಂಡು ನಮ್ಮ ರಾಜ್ಯದ ಬಗ್ಗೆ ಹೆಮ್ಮೆ ಅನಿಸಿತು.




ಇದೇ ದೇವಾಲಯ ಸಮುಚ್ಚಯದಲ್ಲಿ 

 ಚೆನ್ನಕೇಶವ ದೇವಾಲಯದ ಜೊತೆಗೆ ಅನೇಕ ದೇವಾಲಯಗಳಿವೆ. ಅವುಗಳ ನೋಡಲು ನಾವು ಮುಂದೆ ಸಾಗಿದೆವು.ಅವುಗಳಲ್ಲಿ ಪ್ರಮುಖ ದೇವಾಲಯಗಳು ಹೀಗಿವೆ.

ಕಪ್ಪೆ ಚೆನ್ನಿಗರಾಯ ದೇವಸ್ಥಾನ,

ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ,ಕಲ್ಯಾಣ ಮಂಟಪ,

ವೀರನಾರಾಯಣ ದೇವಸ್ಥಾನ,

ರಂಗನಾಯಕಿ ಅಮ್ಮನವರ ದೇವಸ್ಥಾನ,

ಇದಲ್ಲದೆ ಗೋಪುರದ ಎಡಭಾಗದಲ್ಲಿ ಮಂಟಪ ಸಾಲನ್ನು ಮಾಡಿ ಅಲ್ಲಿ ಚಿಕ್ಕ ಗುಡಿಗಳನ್ನು ಮಾಡಿದ್ದಾರೆ. ಇದರ ನಂತರ ಶ್ರೀ ರಾಮದೇವರ ಗುಡಿ ಇದೆ. ಗೋಪುರದ ಬಲಭಾಗದಲ್ಲಿ ಪುಷ್ಕರಣಿಯನ್ನು ಮಾಡಲಾಗಿದೆ. 


ಕಪ್ಪೆ ಚೆನ್ನಿಗರಾಯನ  ಗುಡಿಯನ್ನು ನೋಡುವಾಗ ಹಿಂದೆ ಓದಿದ ಕೆಲ ಅಂಶಗಳು ನೆನಪಾದವು. ಮುಖ್ಯ ಗುಡಿಯ ಹಾಗೆ ನಕ್ಷತ್ರಾಕಾರವಾದ ಶ್ರೀಚಕ್ರದ ಪೀಠದ ಮೇಲೆ ಕಟ್ಟಲ್ಪಟ್ಟಿದೆ. ಸ್ಥಳೀಯ ಕೆಲವು ಜನರಿಂದ ಇದೇ ಮೂಲವಾಗಿ ಪ್ರಧಾನ ದೇವಾಲಯವಾಗಬೇಕಿತ್ತು ಎಂದು ಕೇಳಿ ಬಂದರೂ ಈ ನಕ್ಷತ್ರಾಕಾರದ ಪೀಠವನ್ನು ಬಿಟ್ಟರೆ ಯಾವುದೇ ಸಾಕ್ಷ್ಯಾಧಾರಗಳು ಮೂಡಿ ಬಂದಿಲ್ಲ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಕಪ್ಪೆ ಚೆನ್ನಿಗರಾಯನ ವಿಗ್ರಹವಿದೆ. ಈ ವಿಗ್ರಹದ ಹೊಟ್ಟೆಯಲ್ಲಿ ಕಪ್ಪೆಯನ್ನು ಕೆತ್ತಲಾಗಿದೆ. ಈ ಕಪ್ಪೆಯ ಕೆತ್ತನೆಗೆ ಒಂದು ಹಿನ್ನೆಲೆ ಇದೆ.

ಹಿಂದೆ ಜಕಣಾಚಾರಿಗೂ ಅವರ ಮಗ ಡಂಕಣಾಚಾರ್ಯರಿಗೂ ವಾದ ನಡೆದು, ಡಂಕಣನು ಚೆನ್ನಿಗರಾಯನ ವಿಗ್ರಹದಲ್ಲಿ ದೋಷವಿರುವುದಾಗಿ ಹೇಳಿ, ಅದನ್ನು ನಿರೂಪಿಸಲು ಹೊರಟಾಗ ವಿಗ್ರಹದ ಗರ್ಭದಲ್ಲಿ ಕಪ್ಪೆ ಕಂಡು ಬರಲು, ವಿಗ್ರಹಕ್ಕೆ ಈ ಹೆಸರು ಬಂದಿತೆಂದು ಹೇಳಲಾಗುತ್ತದೆ. ಇದಲ್ಲದೇ ಒಳಾಂಗಣದಲ್ಲಿ ಗೋಪಾಲಕೃಷ್ಣ, ಮಹಿಷಾಸುರಮರ್ದಿನಿ ಮತ್ತು ವಿಷ್ಣು-ಲಕ್ಷ್ಮಿಯರ ಸುಂದರ ಮೂರ್ತಿಗಳಿವೆ. ಈ ದೇವಾಲಯದ ನಂತರ  ಎಡಪಾರ್ಶ್ವದಲ್ಲಿರುವ ದೇವಸ್ಥಾನ ರಂಗನಾಯಕಿ ಅಮ್ಮನವರ ದೇವಸ್ಥಾನ ನೋಡಿದೆವು. ಚತುರ್ಭುಜಾಧಾರಿಯಾದ ಸೌಮ್ಯನಾಯಕಿ ಅಮ್ಮನವರು  ಚೆನ್ನಕೇಶವನ ಮೆಚ್ಚಿನ ಪತ್ನಿಯೆಂದು ಹೇಳುತ್ತಾರೆ.

ಸೌಮ್ಯನಾಯಕಿ ಅಮ್ಮನವರ  ದೇವಾಲಯ ದರ್ಶನ  ನಂತರ  ಕಲ್ಯಾಣ ಮಂಟಪ ನೋಡಿದೆವು.ಇಲ್ಲಿ ಚೆನ್ನಕೇಶವ ಸ್ವಾಮಿಗೂ ಸೌಮ್ಯನಾಯಕಿ ಅಮ್ಮನವರಿಗೂ ಕಲ್ಯಾಣೋತ್ಸವವನ್ನು ಮಾಡಲಾಗುತ್ತದೆ ಎಂದು ತಿಳಿಯಿತು. 

ನಂತರ ಕಲ್ಯಾಣ ಮಂಟಪದ ಒಳಭಾಗದಲ್ಲಿದ ವೀರನಾರಾಯಣ ದೇವಾಲಯ ನೋಡಿದೆವು. ಒಳಗೆ ಗರ್ಭಗುಡಿಯಲ್ಲಿರುವ ವಿಗ್ರಹ ಭಿನ್ನವಾಗಿದೆ. ಈ ಕಾರಣವಾಗಿ ಈ ದೇವಸ್ಥಾನದ ಬಾಗಿಲು ಮುಚ್ಚಿದೆ ಎಂದು ಗೈಡ್ ವಿವರಣೆ ನೀಡಿದರು.


ವೀರನಾರಾಯಣ ದೇವಸ್ಥಾನದ ನಂತರ ಸಿಗುವ ರಂಗನಾಯಕಿ ಅಮ್ಮನವರ ದೇವಾಲಯ ದರ್ಶಿಸಿದೆವು.  ರಂಗನಾಯಕಿ ಅಮ್ಮನವರನ್ನು ಚೆನ್ನಕೇಶವಸ್ವಾಮಿಯ ಜೇಷ್ಠ ಪತ್ನಿ ಎಂದು ಹೇಳುತ್ತಾರೆ. ಕಾರಣಾಂತರಗಳಿಂದ ರಂಗನಾಯಕಿ ಅಮ್ಮನವರಿಗೆ ಆಭರಣಗಳನ್ನು ತೊಡಿಸಲಾಗುವುದಿಲ್ಲವೆಂದು ಸ್ಥಳೀಯರು ಮಾಹಿತಿ ನೀಡಿದರು.


ದೇವಸ್ಥಾನದ ಆವರಣದಲ್ಲಿ ಮೇಲ್ಕಂಡ ದೇವಸ್ಥಾನಗಳನ್ನು ಬಿಟ್ಟು ನೋಡಲು ಇನ್ನೂ ಕೆಲವು ಸ್ಮಾರಕಗಳು  ಆಕರ್ಷಣೆಯ  ಕೇಂದ್ರಗಳಾಗಿ ನಮ್ಮ ಮನಸೆಳೆದವು .ಅವುಗಳೆಂದರೆ ಯಜ್ಞ ಯಾಗಾದಿಗಳನ್ನು ಮಾಡಲು ಯಾಗಶಾಲೆ, ಅಡಿಗೆ ಮಾಡಲು ಪಾಕಶಾಲೆ, ಪುಷ್ಕರಣಿ ಇತ್ಯಾದಿ...


ದೇವಸ್ಥಾನವನ್ನು ಗೋಪುರದ ಮೂಲಕ ಪ್ರವೇಶಿಸಿದರೆ ಆವರಣದ ಎಡಭಾಗದಲ್ಲಿ ಸುಮಾರು   ೪೦ಅಡಿ ಎತ್ತರದ ಒಂದು ಕಂಬ ಕಾಣಿಸುವುದು.ಅದೇ ದೀಪಾಲೆ ಕಂಬ  ಈ ಕಂಬವನ್ನು ನಕ್ಷತ್ರಾಕಾರದ ಒಂದು ಜಗುಲಿಯ ಮೇಲೆ ನಿರಾಧಾರವಾಗಿ ನಿಲ್ಲಿಸಲಾಗಿದೆ. ಕಂಬವು ಈ ಜಗುಲಿಯ ಮಧ್ಯದಲ್ಲಿದ್ದು ಇದರ ಕೆಳಗಡೆ 4 ಸಂದುಗಳನ್ನು ಮಾಡಲಾಗಿದೆ. ಈ ಸಂದುಗಳ ಮೂಲಕ ಒಂದು ಕಡೆ ಇಂದ ಇನ್ನೊಂದು ಕಡೆ ನೋಡಬಹುದು. ಈ ರೀತಿಯಾಗಿ ಈ ಕಂಬವು ಯಾವ ಆಧಾರವೂ ಇಲ್ಲದೆ ನಿಂತಿದೆ ಎಂದು ಖಚಿತವಾಗುತ್ತದೆ. ಜೊತೆಗೆ ವಾಯವ್ಯ ದಿಕ್ಕಿನಿಂದ ಒಂದು ತೆಳುವಾದ ಬಟ್ಟೆ ಅಥವ ಪೇಪರ್ ಚೂರನ್ನು ತುದಿಯಿಂದ ಮಧ್ಯದ ವರೆಗೆ ತಳ್ಳಿದರೆ ಸಲೀಸಾಗಿ ಹೋಗುತ್ತದೆ ಹೀಗಾಗಿ ಇದು ಮೂರೇ ದಿಕ್ಕುಗಳಲ್ಲಿ ನಿಂತಿದೆ ಎಂದು ಸಾಬೀತಾಗುತ್ತದೆ.  ಇದನ್ನು ಗುರುತ್ವಾಕೇಂದ್ರ ಕಂಬ (ಗ್ರಾವಿಟಿ ಪಿಲ್ಲರ್) ಎಂದು ಕರೆಯುತ್ತಾರೆ.ಈ ತುದಿಯ ಬೆಳಕನ್ನು ಆ ತುದಿಯಿಂದ ನೋಡಬಹುದು. ಆ ಕಾಲದ ಶಿಲ್ಪಿಗಳ ಚಾಕಚಕ್ಯತೆಗೆ ಇದಕ್ಕಿಂತ ನಿದರ್ಶನ ಬೇಕಿಲ್ಲ ಎನಿಸಿತು. ಅಲ್ಲಿ ಕೆಲ ಪೋಟೋ ತೆಗೆದುಕೊಂಡ ನಮ್ಮ ತಂಡ  ಆನೆ ಬಾಗಿಲ ಕಡೆ ನಡೆಯಿತು. 

ದೇವಸ್ಥಾನದ ಇನ್ನೊಂದು ಬಾಗಿಲಿಗೆ ಆನೆಬಾಗಿಲು ಎಂದು ಕರೆಯುತ್ತಾರೆ. ಇದು ಸಾಧಾರಣವಾಗಿ ಮುಚ್ಚಿರುತ್ತದೆ. ಮೂಲ ದ್ವಾರ ಗೋಪುರದ ದ್ವಾರವಾಗಿದ್ದರೂ, ದೇವರಿಗೆ ನಡೆಯುವ ಎಲ್ಲಾ ಉತ್ಸವಗಳು ಈ ದ್ವಾರದ ಮೂಲಕವಾಗಿ ಸಂಚರಿಸುತ್ತದೆ. ಈ ರೀತಿಯಾಗಿ ಇದು ವೈಶಿಷ್ಟತೆಯನ್ನು ಪಡೆದಿದೆ ಎಂದು ಮಾರ್ಗದರ್ಶಕ ಮಾಹಿತಿ ನೀಡಿದರು. 

ಮತ್ತು ನಮ್ಮನ್ನು ಮಂಟಪದ ಸಾಲಿನ ಕಡೆ ಕರೆದುಕೊಂಡು ಹೋದರು.

ದೇವಸ್ಥಾನದ ಗೋಪುರ ಮತ್ತು ಆನೆಬಾಗಿಲ ನಡುವೆ ಮಂಟಪದ ಸಾಲನ್ನು ಮಾಡಿದ್ದಾರೆ. ಇಲ್ಲಿ ಚಿಕ್ಕ ಗುಡಿಗಳನ್ನು ಮಾಡಲಾಗಿದೆ. ಈ ಗುಡಿಗಳಲ್ಲಿ ರಾಮಾನುಜಾಚಾರ್ಯರು, ಯೋಗನರಸಿಂಹರು, ಕಾಳಿಮರ್ಧನ ಕೃಷ್ಣ, ಆಂಜನೇಯ ಮುಂತಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ ರಂಗನಾಯಕಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲೂ ಮಂಟಪದ ಸಾಲು ಇದೆ. ಇಲ್ಲಿ ಅನೇಕ ಶಿಲಾವಿಗ್ರಹಗಳನ್ನು ಸಂಗ್ರಹಿಸಿ ಪ್ರೇಕ್ಷಕರಿಗೆ ನೋಡಲು ಅನುಕೂಲ ಮಾಡಿ ಇಟ್ಟಿದ್ದಾರೆ. ಮೂಲತಃ ದೇವಸ್ಥಾನದ ಆವರಣವನ್ನು ಅಗೆದಾಗ ದೇವಸ್ಥಾನಕ್ಕೆ ಸಂಬಂಧಪಟ್ಟ ವಿಗ್ರಹಗಳನ್ನು ಇಲ್ಲಿ ಇಡಲಾಗಿದೆ. ಈ ಶಿಲೆಗಳಲ್ಲಿ ಸುಮಾರು 4 ಅಡಿ ಎತ್ತರದ ಗಣಪತಿಯ ವಿಗ್ರಹ, ವಿಷ್ಣು, ಆಂಜನೇಯರ ವಿಗ್ರಹಗಳು ಮತ್ತು ನಾಗ ಕಲ್ಲುಗಳನ್ನು ಕಾಣಬಹುದು. ಮುಖ್ಯವಾಗಿ ಇಲ್ಲಿ ಅನೇಕ ಶಾಸನ ಕಂಬಕಲ್ಲುಗಳನ್ನು ಇಡಲಾಗಿದೆ.ಈ ಶಾಸನಗಳಲ್ಲಿ ದೇವಾಲಯದ ಇತಿಹಾಸ, ದೇವಸ್ಥಾನವನ್ನು ಕಟ್ಟಿದ ಶಿಲ್ಪಿಗಳ ಹೆಸರಿದೆ ಎಂಬ ಮಾಹಿತಿಯನ್ನು ನೀಡಿದರು. 

ಆನೆ ಬಾಗಿಲಿನ ಪಕ್ಕದಲ್ಲಿರುವುದೇ ಪಾಕಶಾಲೆ. ಇಲ್ಲಿ ಪ್ರತಿ ದಿನವೂ  ದೇವರ ನೈವೇದ್ಯಕ್ಕಾಗಿ ಪ್ರಸಾದವನ್ನು ಮಾಡುತ್ತಾರೆ. ಇದರ ಪಕ್ಕದಲ್ಲೇ ಯಾಗಶಾಲೆ ಉಂಟು. ರಥೋತ್ಸವ ಅಥವ ಉತ್ಸವದ ಸಮಯದಲ್ಲಿ ಇಲ್ಲಿ ಶಾಸ್ತ್ರೀಯವಾಗಿ ನಡೆಯಬೇಕಾದ ಯಜ್ಞ-ಯಾಗಾದಿಗಳನ್ನು ಮಾಡುತ್ತಾರೆ.

ಯಾಗಶಾಲೆಯ ಪಕ್ಕದಲ್ಲಿ ರಾಮದೇವರ ದೇವಸ್ಥಾನವಿದೆ. ಗರ್ಭಗುಡಿಯಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಮಾರುತಿಯರ ವಿಗ್ರಹಗಳಿದೆ. ಸಾಮಾನ್ಯವಾಗಿ ರಾಮನ ಎಡಭಾಗದಲ್ಲಿರುವ ಸೀತೆ, ಇಲ್ಲಿ ಬಲಭಾಗದಲ್ಲಿರುವುದನ್ನು ಗಮನಿಸಿ ಎಂದರು ನಮ್ಮ ಗೈಡ್.

ರಾಮದೇವರ ದೇವಸ್ಥಾನದ ಪಕ್ಕದಲ್ಲಿ ವಾಹನ ಮಂಟಪವಿದೆ. ಉತ್ಸವಗಳಿಗೆ ಬೇಕಾಗುವ ವಾಹನ ಪ್ರತಿಮೆಗಳನ್ನು ಇಲ್ಲಿ ಇಡಲಾಗಿದೆ. ಸುಮಾರು ೭ ಅಡಿ ಎತ್ತರದ ಹಿತ್ತಾಳೆಯಿಂದ ನಿರ್ಮಿಸಲಾಗಿರುವ ಗರುಡ, ಹಂಸ, ಆನೆ, ಆಂಜನೇಯ, ಕುದುರೆ, ನವಿಲು ಮುಂತಾದ ವಿಗ್ರಹಗಳನ್ನು ಇಲ್ಲಿ ಇಟ್ಟಿರುತ್ತಾರೆ. ಉತ್ಸವದ ಸಮಯದಲ್ಲಿ ದೇವರ ಉತ್ಸವ ಮೂರ್ತಿಗೆ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿ, ಈ ವಾಹನಗಳ ಮೇಲೆ ಕೂರಿಸಿ ಊರಿನಲ್ಲಿ ಉತ್ಸವ ಮಾಡುತ್ತಾರಂತೆ .


ಹೀಗೆ ಬೇಲೂರಿನ ಶಿಲ್ಪಕಲೆಯ ವೈಭವವನ್ನು ಕಣ್ತುಂಬಿಸಿಕೊಂಡು ಗೈಡ್ ಹೇಳುವ ಮಾಹಿತಿಯನ್ನು ಅರ್ಥಮಾಡಿಕೊಂಡು ಸಾಗುತ್ತಿದ್ದ ನಮಗೆ ಸಮಯ ಸರಿದದ್ದೆ ತಿಳಿಯಲಿಲ್ಲ. ಈ ಮೊದಲು ಬೇಲೂರಿಗೆ ಪ್ರವಾಸ ಬಂದಾಗ ನಮ್ಮ ಗಮನವೆಲ್ಲ ಶಿಲಾಬಾಲಿಕೆಯರ ಕಡೆ ಮಾತ್ರ ಇತ್ತು. ಈ ಬಾರಿ ಅಲ್ಲಿನ ಶಾಸನಗಳು, ಮತ್ತು ವಿವಿಧ ದೇವಾಲಯಗಳು ಅವುಗಳ ಇತಿಹಾಸದ ಕಡೆ ಹೆಚ್ಚು ಗಮನಹರಿಸಿ ಮಾಹಿತಿ ಪಡೆದೆವು . ಸುಮಾರು ನಾಲ್ಕು ಗಂಟೆಗಳ ಕಾಲ ನಾವು ನೀರನ್ನು ಸಹ ಕುಡಿಯದೇ ಶಿಲ್ಪಕಲೆ ಆಸ್ವಾದ ಮಾಡಿದ್ದೆವು.  ನಮ್ಮ ದೇಹದಲ್ಲಿ ಇಂಧನ ಕಡಿಮೆಯಾಗಿದೆ ಎಂದು ನಮ್ಮ ಹೆಜ್ಜೆಗಳ ವೇಗ ಹೇಳುತ್ತಿತ್ತು. 

ದೇವಾಲಯದಿಂದ ಹೊರ ಬಂದು ದೇವಸ್ಥಾನದವರೇ ನಿರ್ವಹಣೆ ಮಾಡುತ್ತಿರುವ  ಬೋಜನಾ ಶಾಲೆಯಲ್ಲಿ ಪಾಯಸ ,ಅನ್ನ ಸಾಂಬಾರ್, ಮೊಸರನ್ನ ಸವಿದು. ಮಕ್ಕಳಿಗೆ ಸರ  ತೆಗೆದುಕೊಂಡು ಕಾರ್ ಹತ್ತಲು ಹೊರಟಾಗ 

 ರಾಷ್ಟ್ರಕವಿ ಕುವೆಂಪು ಅವರು ಬೇಲೂರಿನ   ದೇವಾಲಯಗಳನ್ನು ನೋಡಿ ರಚಿಸಿದ  "ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಸೌಂದರ್ಯ ವಿಪ್ಲವದ ಪಲ್ಲವಿಯು" ಎಂಬ ಮಾತುಗಳು ನೆನಪಾದವು.ವಿಶ್ವಸಂಸ್ಥೆಯ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಲಿರುವ ಬೇಲೂರಿಗೆ ನೀವೂ ಬನ್ನಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಜಗಕ್ಕೆ ಪರಿಚಯಿಸಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು




ಚಾರ್ಮಾಡಿ ಘಾಟಿ .ನಮ್ಮ ಪ್ರಾಕೃತಿಕ ಪರಂಪರೆ..




 


ಪ್ರವಾಸ ೭

ಪಶ್ಚಿಮ ಘಟ್ಟಗಳು.. ನಮ್ಮ ಪ್ರಾಕೃತಿಕ ಪರಂಪರೆ...

ಇತ್ತೀಚಿನ ದಿನಗಳಲ್ಲಿ ಪರಿಸರದ ವಿಚಾರದಲ್ಲಿ ಕಸ್ತೂರಿ ರಂಗನ್ ರವರ ವರದಿಯ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳು ಚರ್ಚೆಯ ವಿಷಯವಾಗಿದ್ದವು .
ಘಟ್ಟಪ್ರದೇಶಗಳೆಂದರೆ ಪರಿಸರ ಪ್ರಿಯರಿಗೆ ಸಂಭ್ರಮದ ತಾಣ, ವಾಂತಿ ಮಾಡಿಕೊಳ್ಳುವ ವ್ಯಕ್ತಿಗಳಿಗೆ ಭಯದ ಸ್ಥಳ, ಕೈಗಾರಿಕೋದ್ಯಮಿಗಳಿಗೆ ತಮ್ಮ ಲಾಭವನ್ನು ಕಡಿಮೆ ಮಾಡುವ ಅಡೆತಡೆಗಳನ್ನು ಒಡ್ಡುವ ಪ್ರದೇಶಗಳು.ಹೀಗೆ ಅವರವರ ಭಾವ ಭಕುತಿಗೆ ವಿಭಿನ್ನವಾಗಿ ಕಾಣುವ ಪಶ್ಚಿಮ ಘಟ್ಟಗಳು ನಮ್ಮ ಪ್ರಾಕೃತಿಕ ಪರಂಪರೆಯ ಪ್ರತೀಕ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಕಳೆದ ವಾರ ನಮ್ಮ ಸಮಾನ ಮನಸ್ಕ ತಂಡದ ಆತ್ಮೀಯರು ಕೋಟೆ ಕುಮಾರ್  ರವರ  ನೇತೃತ್ವದಲ್ಲಿ ಧರ್ಮಸ್ಥಳದ ಕಡೆ ಪ್ರವಾಸ ಹೋದಾಗ ಹಲವು ಬಾರಿ ಘಟ್ಟ ಪ್ರದೇಶಗಳನ್ನು ನೋಡಿದ್ದರೂ ಅಂದು ಘಟ್ಟ ಪ್ರದೇಶ ಹೊಸದಾಗಿ ಕಂಡಿತು. ಚಾರ್ಮಾಡಿ ಘಾಟಿಯ ಸೊಬಗಂತೂ ನಮ್ಮನ್ನು ಬಹುವಾಗಿ ಆಕರ್ಷಿಸಿತು.




ಕರ್ನಾಟಕದಲ್ಲಿ ಶಿರಾಡಿ ಘಾಟಿ, ಆಗುಂಬೆ ಘಾಟಿಗಳೆಂಬ ಇತರೆ ಘಾಟಿಗಳಿದ್ದರೂ ಚಾರ್ಮಾಡಿ ಘಾಟಿಯ ಸೌಂದರ್ಯ ನಿಸರ್ಗ ಪ್ರಿಯರಿಗೆ ಬಹು ನೆಚ್ಚಿನ ಪ್ರಾಕೃತಿಕ ತಾಣವಾಗಿದೆ.

ಚಾರ್ಮಾಡಿ ಘಾಟಿಯು  ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದಿಕೊಂಡಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತವೆ. ಚಾರ್ಮಾಡಿ ಘಟ್ಟಗಳ ಕೆಳಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ. ಅದರಿಂದಾಗಿ ಈ ಘಟ್ಟಗಳಿಗೆ ಈ ಹೆಸರು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಮುಖ್ಯ ರಸ್ತೆಯೊಂದು ಚಾರ್ಮಾಡಿ ಘಟ್ಟದಲ್ಲಿ ಹಾದು ಹೋಗಿದೆ. ಇಲ್ಲಿ ಎತ್ತರವಾದ ಬೆಟ್ಟ-ಗುಡ್ದ, ಆಳವಾದ ಕಣಿವೆ-ಪ್ರಪಾತ, ದಟ್ಟ ಕಾಡು, ಅಸಂಖ್ಯಾತ ಜಲಪಾತಗಳು, ವನ್ಯಮೃಗಗಳು, ಹತ್ತಾರು ಝರಿ-ತೊರೆ, ಶೋಲ ಕಾಡು,ಅಪರೂಪವಾದ ಹುಲ್ಲುಗಾವಲುಗಳನ್ನು ಕಾಣಬಹುದು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಎಂಬ ಗ್ರಾಮದಿಂದ ಪ್ರಾರಂಭವಾಗುವ ಈ ಘಟ್ಟಗಳು ಚಾರ್ಮಾಡಿ ಗ್ರಾಮದ ಬಳಿ ಕೊನೆಗೊಳ್ಳುತ್ತವೆ.



ನಮ್ಮ ಕಾರಿನಲ್ಲಿ  ಬೆಂಗಳೂರಿನ ಕಡೆಯಿಂದ ಹೊರಟ ನಾವು  ಕೊಟ್ಟಿಗೆಹಾರದಲ್ಲಿ ನೀರ್ ದೋಸೆ, ಪಲಾವ್ , ಬೋಂಡಾ ತಿಂದು   ಟೀ ಕುಡಿದು  ಹೊರಟ ನಮಗೆ ನಿಧಾನವಾಗಿ ನಿದ್ರೆ ಹತ್ತಲು ಶುರುವಾಯಿತು. ಚಾರ್ಮಾಡಿ ಘಾಟಿಯ ನಿಸರ್ಗ ನೋಡುತ್ತಾ ತಂಗಾಳಿಯು ನಮ್ಮ ಸೋಕುತ್ತಿದ್ದಂತೆ ನಿದ್ರಾ ದೇವಿ ಆಮೇಲೆ ಬರುವೆ ಎಂದು ಹೊರಟೇಬಿಟ್ಟಳು. ಅಲ್ಲಿಂದ ಮುಂದೆ ನಮ್ಮ ಮೊಬೈಲ್ ಕ್ಯಾಮರಾ ಮತ್ತು ಕಣ್ಣುಗಳಿಗೆ ಭರಪೂರ ಕೆಲಸ . ಕೋಟೇ ಕುಮಾರ್ ರವರು ಎದುರಿಗೆ ಬರುವ ವಾಹನಗಳ ಕಡೆಗೆ ಗಮನ ಹರಿಸುತ್ತಾ ನಿಸರ್ಗ ಸೌಂದರ್ಯ ಸವಿಯುತ್ತಾ ಡ್ರೈವ್ ಮಾಡುತ್ತಿದ್ದರೆ ನಾನು ಚಂದ್ರಶೇಖರಯ್ಯ ಎಮ್ ಎಚ್ ಹನುಮಂತರಾಯಪ್ಪ ಮತ್ತು ರಂಗಸ್ವಾಮಯ್ಯ ರವರು ಅಲ್ಲಲ್ಲಿ ಹರಿವ ಝರಿಯ ಕಲರವ ಕೇಳುತ್ತಾ ದೂರದ ಬೆಟ್ಟಗಳ ಚಿತ್ತಾರ ನೋಡುತ್ತಾ ಬಗೆ  ಬಗೆಯ ಮರಗಳ ನೋಡಿ ಬೆರಗಾಗುತ್ತಾ ಮುಂದೆ ಸಾಗಿದೆವು. ಅಲ್ಲಲ್ಲಿ ನಿಂತು ವ್ಯೂ ಪಾಯಿಂಟ್ ಗಳ ಬಳಿ ಸ್ವಲ್ಪ ಹೆಚ್ಚು ಸಮಯ ಕಳೆದು ನಿಸರ್ಗದಲ್ಲಿ ನಾವು ಒಂದಾಗಿ ನಿಂತು ಮೈ ಮರೆತೆವು.ಪೋಟೋ ವೀಡಿಯೋಗಳನ್ನು ಲೆಕ್ಕವಿಲ್ಲದಷ್ಟು ತೆಗೆದುಕೊಂಡೆವು..ನಿಧಾನವಾಗಿ ಸಾಗಿದ ನಮ್ಮ ಕಾರು ಏರ್ ಪಿನ್ ಬೆಂಡ್, ಎಸ್ ಬೆಂಡ್ ಗಳನ್ನು   ದಾಟಿಕೊಂಡು ಚಾರ್ಮಾಡಿಯ ಬಳಿ ಬಂದಿತು. ಅಲ್ಲಿಂದ ದೊಡ್ಡ ತಿರುವುಗಳು ಇಲ್ಲದಿದ್ದರೂ ನಿಧಾನವಾಗಿ ಸಾಗಬೇಕು. ಈ ಜಾಗದಲ್ಲಿ ವಾಹನ ಚಲಾಯಿಸಲು ಕ್ಷಮತೆ ಬೇಕು. ಹೀಗೆ ಸಾಗಿದ ನಮ್ಮ ಪಯಣ ಉಜಿರೆ ದಾಟಿ ನೇತ್ರಾವತಿ ನದಿಯ ಸೇತುವೆ ಮೇಲೆ ಚಲಿಸಿ ಧರ್ಮಸ್ಥಳ ತಲುಪಿತು. ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತಾಗ ಪಶ್ಚಿಮದ ಘಟ್ಟಗಳ ಚಾರ್ಮಾಡಿಯ ಸೌಂದರ್ಯ ಕಣ್ಣ ಮುಂದೆ ಬರುತ್ತಿತ್ತು ನಮ್ಮ ಪ್ರಾಕೃತಿಕ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾ  ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಮುಂದೆ ಸಾಗಿದೆವು...

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ