11 ಅಕ್ಟೋಬರ್ 2022

ನಿಮಗೂ ಹುಚ್ಚು ಹಿಡಿಯುತ್ತದೆ...


 *ನಿಮಗೂ ಖಂಡಿತವಾಗಿಯೂ ಹುಚ್ಚು ಹಿಡಿಯುತ್ತದೆ*.



ನಾನು ಟಿ ಸಿ ಹೆಚ್ ಓದುವಾಗ  ಯರಬಳ್ಳಿ ಗೊಲ್ಲರ ಹಟ್ಟಿಯ ನನ್ನ ಗೆಳೆಯ ರಾಜು    ಶಿವರಾಮ ಕಾರಂತರ ಪುಸ್ತಕ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಪುಸ್ತಕ ನೀಡಿ ಓದಲು ಹೇಳಿದ .ದೊಡ್ಡ ಗಾತ್ರದ ಶಿವರಾಮ್ ಕಾರಂತರ ಆತ್ಮ ಚರಿತ್ರೆಯನ್ನು ಅಷ್ಟೇನೂ ಆಸಕ್ತಿಯಿಂದ ಓದಲಿಲ್ಲ . ಆ ಪುಸ್ತಕದ ಶೀರ್ಷಿಕೆಯ ಕುರಿತು ಒಂದು ರೀತಿಯ ಕುತೂಹಲ ಇದ್ದದ್ದು ಸುಳ್ಳಲ್ಲ. ಒಂದೆರಡು ಅಧ್ಯಾಯ ಮುಗಿಸಿದ ಮೇಲೆ ಬಹಳ ಕುತೂಹಲ ಮತ್ತು ಆಸಕ್ತಿ ಬೆಳೆದು ಪುಸ್ತಕ ಮುಗಿಯುವವರೆಗೂ ನಿಲ್ಲಿಸಲಿಲ್ಲ .ಈ ಪುಸ್ತಕ ಒಂದು ರೀತಿಯಲ್ಲಿ ನನ್ನ ಕಣ್ತೆರಿಸಿದ ಪುಸ್ತಕ ಎಂದರೆ ತಪ್ಪಾಗಲಿಕ್ಕಿಲ್ಲ . ದೇವರು ಎಲ್ಲರಿಗೂ ಒಂದೇ ಗಾತ್ರದ ಮೆದುಳು ಮತ್ತು ಬುದ್ದಿ ಕೊಟ್ಟರೂ ಅದರ ಬಳಕೆಯನ್ನು ಕೆಲವರು ಸಂಪೂರ್ಣವಾಗಿ, ಕೆಲವರು ಭಾಗಶಃ ,ಕೆಲವರಂತೂ ಮೆದುಳು ಮತ್ತು ಬುದ್ದಿ ಬಳಸಿಕೊಳ್ಳದೇ ಮಡೆಯರಾಗಿ, ಮೂರ್ಖರಾಗಿ  ,ಕೀಳರಿಮೆಯಲ್ಲೆ ಜೀವನ ಸಾಗಿಸಿಬಿಟ್ಟಿರುತ್ತಾರೆ.


ಈ ಪುಸ್ತಕದಲ್ಲಿ ಅವರ ಜೀವನಾನುಭವ ಓದುತ್ತಾ ಸಾಗಿದಂತೆ ಅವರ ಬಹುಮುಖ ಪ್ರತಿಭೆ ಅನಾವರಣವಾಗುತ್ತಾ ಹೋಗುತ್ತದೆ.

ಬಹುತೇಕ ಕನ್ನಡಿಗರಿಗೆ  ತಿಳಿದಿರುವಂತೆ ಅವರು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕವಿ ಆ ಪುಸ್ತಕ ಓದುವ ಮೊದಲಿಗೆ ನನಗೆ ಅವರ ಬಗ್ಗೆ ಅಷ್ಟೇ ಗೊತ್ತಿತ್ತು. ಪುಸ್ತಕದ ಪುಟಗಳ ತಿರುಗಿಸಿದಂತೆ ಅವರ ಹತ್ತಾರು ಮುಖಗಳು ಒಂದೊಂದೇ ಅನಾವರಣಗೊಂಡವು. 

ಮಕ್ಕಳ ಸಂಪೂರ್ಣ ವಿಕಸನ ಕ್ಕಾಗಿ ಬಾಲವನ ಆರಂಭಿಸಿ ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಕಾರಣಕರ್ತರಾದರು ತನ್ಮೂಲಕ ತಮ್ಮೊಳಗೊಬ್ಬ ಶಿಕ್ಷಣ ತಜ್ಞ ಇದ್ದಾನೆಂದು ಪ್ರೂವ್ ಮಾಡಿದರು. 

ಚಲನಚಿತ್ರ ಕ್ಷೇತ್ರವು ತಂತ್ರಜ್ಞಾನ ಬೇಡುವ ಕ್ಷೇತ್ರ ಅವರೇ ಕಥೆ ,ಚಿತ್ರಕಥೆ ,ನಿರ್ಮಾಣ, ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತು ನಾನೊಬ್ಬ ತಂತ್ರಜ್ಞ ಎಂದು ಸಾಬೀತು ಮಾಡಿ ತೋರಿದರು. 

ಅಂದು ರಾಜಕೀಯ ಎಂದರೆ ಇಂದಿನಂತೆ ಕಲುಷಿತವಾಗಿರಲಿಲ್ಲ   ಹಣ ಮಾಡುವ  ಉದ್ಯಮವಾಗಿರಲಿಲ್ಲ ನಾನೂ ಒಂದು ಕೈ ನೋಡೇ ಬಿಡುವ ಎಂದು ಚುನಾವಣೆಗೂ ಸ್ಪರ್ಧೆ ಮಾಡಿದರು ಚುನಾವಣೆಯಲ್ಲಿ ಸೋತರು ಅದು ಬೇರೆ ಮಾತು .ಈ ಮೂಲಕ ನಾನೊಬ್ಬ ರಾಜಕೀಯ ಮತ್ಸದ್ದಿ ಎಂದು ತೋರಿಸಿದರು.

ಪರಿಸರದ ನಾಶದಿಂದ ಇಂದು ನಾವು ಬಹಳ ತೊಂದರೆ ಅನುಭವಿಸುತ್ತಿದ್ದೇವೆ ಅದನ್ನು ಕಳೆದ ಶತಮಾನದಲ್ಲೆ ನಮ್ಮನ್ನು ಎಚ್ಚರಿಸಿದ ಪರಿಸರ ತಜ್ಞ ನಮ್ಮ ಕಾರಂತರು. ಕಾರವಾರ ನೌಕಾನೆಲೆ ಮುಂತಾದ ಪರಿಸರಕ್ಕೆ ಹಾನಿಯಾಗುವ ಸರ್ಕಾರದ ಯೋಜನೆಗಳ ವಿರುದ್ಧವಾಗಿ ಜನಾಂದೋಲನ ರೂಪಿಸಿ ಸರ್ಕಾರಕ್ಕೆ ಸಿಂಹ ಸ್ವಪ್ನರಾದರು.

ನಮ್ಮ ಕಲೆ, ಸಂಸ್ಕೃತಿ, ನಮ್ಮ ಅಸ್ಮಿತೆ ಎಂದು ಕಾರಂತರು ತಮ್ಮ ಕೃತಿಗಳಲ್ಲಿ ತೋರಿಸಿಕೊಟ್ಟರು ಅದರ ಜೊತೆಯಲ್ಲಿ ಕೇವಲ ಕರ್ನಾಟಕದ ದಕ್ಷಿಣ ಕನ್ನಡಕ್ಕೆ ಸೀಮಿತವಾಗಿದ್ದ ಯಕ್ಷಗಾನ ಕಲೆಯನ್ನು ತಮ್ಮ ಇಳಿವಯಸ್ಸಿನಲ್ಲೂ ಕಲಿತು ,ಕಲಿಸಿ ಜಗತ್ತಿನ ವಿವಿಧ ದೇಶಗಳಲ್ಲಿ ಪ್ರದರ್ಶನ ನೀಡಿ ನಮ್ಮ ರಾಜ್ಯದ ಮತ್ತು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದ ಸಾಂಸ್ಕೃತಿಕ ರಾಯಬಾರಿ ನಮ್ಮ ಕಾರಂತರು .

ಹೀಗೆ ಪುಸ್ತಕ ಪೂರ್ತಿಯಾಗಿ ಓದಿ ಮುಗಿಸಿದಾಗ ಅವರಲ್ಲಿ ಕೆಲ ಹುಚ್ಚುಗಳು ನನಗೂ ಹತ್ತಿದ್ದು ಸುಳ್ಳಲ್ಲ ಆ ಹುಚ್ಚು ಇಂದು  ನನ್ನನ್ನು ಶಿಕ್ಷಕ ವೃತ್ತಿಯ ಜೊತೆಯಲ್ಲಿ  ಲೇಖಕನಾಗಿ, ಕವಿಯಾಗಿ, ಕಾದಂಬರಿಕಾರನಾಗಿ, ಗಾಯಕನಾಗಿ , ಭಾಷಣಕಾರನಾಗಿ, ಸಂಘಟಕನಾಗಿ ರಂಗಭೂಮಿ ನಟನಾಗಿ  , ಛಾಯಾಚಿತ್ರಗ್ರಾಹಕನಾಗಿ, ಕಾರ್ಯ ನಿರ್ವಹಿಸಲು ಪ್ರೇರಣೆಯಾಗಿದೆ .ಮುಂದಿನ ದಿನಗಳಲ್ಲಿ ಈ ಹುಚ್ಚುಗಳ ಪಟ್ಟಿ ದೊಡ್ಡದಾದರೂ ಅಚ್ಚರಿ ಪಡಬೇಕಿಲ್ಲ .

ನಡೆದಾಡುವ ವಿಶ್ವ ಕೋಶ, ಕಡಲತೀರದ ಭಾರ್ಗವ ಎಂಬ ಹೆಸರಿಗೆ ಅನ್ವರ್ಥವಾಗಿ ಬದುಕಿದ ಕಾರಂತರು ನನ್ನಂತಹ ಕೋಟ್ಯಾಂತರ ಜನರ ಪ್ರೇರಕ ಶಕ್ತಿ .ಕಾರಂತರ ಎಲ್ಲಾ ಪ್ರಕಾರದ ಸಾಹಿತ್ಯವನ್ನು ನಾವು ಓದಲೇಬೇಕು ಅದರಲ್ಲೂ ಅವರ ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ನೀವೂ ಓದಿ. ಖಂಡಿತವಾಗಿಯೂ ನಿಮಗೂ ಒಂದೆರಡಾದರೂ ನಿಮ್ಮ  ಹುಚ್ಚು ಮಖಗಳು  ಗೋಚರವಾಗುವುದರಲ್ಲಿ ಸಂಶಯವಿಲ್ಲ. 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ.

09 ಅಕ್ಟೋಬರ್ 2022

ನೆಮ್ಮದಿ ಎಲ್ಲಿದೆ ? ನ್ಯಾನೋ ಕಥೆ


 ನೆಮ್ಮದಿ ಎಲ್ಲಿದೆ 


ಸ್ಮಾರ್ಟ್ ಹೋಂ ನಲ್ಲಿ ಏನಿರಬೇಕೆಂದು  ನಿರ್ಧರಿಸಿದ ಮಾವನವರೇ  ನಿಂತು  ಅಳಿಯ, ಮಗಳ  ನೆಮ್ಮದಿಗೆ   ಐಷಾರಾಮಿ ಬಂಗಲೆ  ಕಟ್ಟಿಸಿದರು. ಇಂಪೋರ್ಟೆಡ್ ಹಾಸಿಗೆ ದಿಂಬು ಅವೂ ಲಕ್ಷಗಳ ಲೆಕ್ಕ !  ರಾತ್ರಿಯ ಪೈವ್ ಸ್ಟಾರ್ ಗೆ ಸಮನಾದ ಡೈನಿಂಗ್ ಟೇಬಲ್ ಮೇಲೆ ಭಕ್ಷ್ಯ ಭೋಜನದ ನಂತರ ಬೆಡ್ರೂಂಗೆ ತೆರಳಿದ ಸಂತೋಷನನ್ನು   ಸುವಾಸನೆ ಮತ್ತು ಮಧುರವಾದ ಸಂಗೀತ ಸ್ವಾಗತಿಸಿತು. ಇಂಪೋರ್ಟೆಡ್ ಬೆಡ್ ಮೇಲೆ ಮಲಗಿದವನಿಗೆ ರಾತ್ರಿ ಹನ್ನೆರಡಾದರೂ ನಿದ್ದೆ ಬರಲಿಲ್ಲ.ಬಲವಂತವಾಗಿ ಕಣ್ಣ ಮುಚ್ಚಿದವನಿಗೆ ಬಾಲ್ಯದಲ್ಲಿ  ಪುಟ್ಟ ಕೋಣೆಯಲ್ಲಿ ಸಗಣಿ ನೆಲದ ಘಮದೊಂದಿಗೆ ಗಾಢವಾದ ನಿದ್ದೆ ಮಾಡಿದ ನೆನಪಾಯಿತು .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

05 ಅಕ್ಟೋಬರ್ 2022

ಸಿಹಿಜೀವಿಯ ಹಾಯ್ಕುಗಳು

 *ಸಿಹಿಜೀವಿಯ ಹಾಯ್ಕುಗಳು*



*೧*


ಜಯಾಪಜಯ 

ಎಲ್ಲರಿಗೂ ಇದ್ದದ್ದೆ 

ಪ್ರಯತ್ನವಿರಲಿ .



*೨*

ಕಾಯಕ ಮಾಡು 

ಖಚಿತವು ನಿನಗೆ 

ವಿಜಯಮಾಲೆ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

04 ಅಕ್ಟೋಬರ್ 2022

ಬೇವಿನಳ್ಳಮ್ಮ

 https://youtu.be/a8_JqAO7Yts

*ಬೇವಿನಳ್ಳಮ್ಮನ ಗುಡ್ಡದ ಸೌಂದರ್ಯ* ಒಂದು ದಿನದ ಪಿಕ್ನಿಕ್ ಗೆ ಹಿರಿಯೂರು ತಾಲ್ಲೂಕಿನ ಮಾರಿಕಣಿವೆಯಿಂದ  ಹತ್ತಿರ ಇರುವ ಬೇವಿನಹಳ್ಳಿ ಗೆ ಒಮ್ಮೆ  ನೀವೂ  ಬೇಟಿ ಕೊಡಿ

ನಮ್ಮನೆಯ ಮಾರ್ನಾಮಿ...


 ನಮ್ಮನೆಯ ಮಾರ್ನಾಮಿ...


ನಾವು ವಿಜಯ ದಶಮಿಯಂದು ಮಾರ್ನಾಮಿ ಹಬ್ಬ ಮಾಡುವುದನ್ನು ರೂಢಿಸಿಕೊಂಡು ಬಂದಿದ್ದೇವೆ.

ಮೊದ ಮೊದಲು ನಮ್ಮ ಪೂರ್ವಜರ ಉಪ್ಪರಿಗೇನಹಳ್ಳಿಯ  ಮನೆಯಲ್ಲಿ ಮಾರ್ನಾಮಿ ಹಬ್ಬ ಮಾಡುತ್ತಿದ್ದ ನಾವು ಕ್ರಮೇಣ ಕೊಟಗೇಣಿಯ ನಮ್ಮ ಮನೆಯಲ್ಲಿ ಹಬ್ಬದ ಆಚರಣೆಯನ್ನು ಮುಂದುವರೆಸಿರುವೆವು. ಅಂದು ಎಲ್ಲರೂ ಬೆಳಿಗ್ಗೆ ಬೇಗನೆ ಎದ್ದು ನೆಲಕಾರ್ನೆ(ಮನೆಯ ಸ್ವಚ್ಚತೆ) ಮಾಡಿ , ಸ್ನಾನ ಮಾಡಿದ ನಂತರ ಹೆಣ್ಣು ಮಕ್ಕಳು ಅಡಿಗೆ ತಯಾರಿಯಲ್ಲಿ ನಿರತರಾದರೆ ಗಂಡಸರು ಪೂಜಾ ಸಾಮಗ್ರಿಗಳನ್ನು ತರುವುದು ಬಾಳೆ ಕಂದುಕಟ್ಟುವುದು, ಹೂ ಜೋಡಿಸುವುದು,ಪತ್ರೆ ತರುವುದು  ಇಂತಹ ಕಾರ್ಯಗಳಲ್ಲಿ ಮಗ್ನರಾಗುತ್ತೇವೆ.  ಇತ್ತೀಚಿನ ದಿನಗಳಲ್ಲಿ ಶ್ರೀ ಚಿದಾನಂದಾವಧೂತ ವಿರಚಿತ  ಶ್ರೀದೇವಿ ಮಹಾತ್ಮೆಯ ಪುಸ್ತಕ ಪಾರಾಯಣ ಮಾಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ಹದಿನೆಂಟು ಅಧ್ಯಾಯ ಪಾರಾಯಣ ಮಾಡಿ ಕೊನೆಯಲ್ಲಿ ಮಂಗಳಾರತಿ ಮಾಡಿ ನೆಂಟರಿಷ್ಟರಿಗೆ ಪ್ರಸಾದ ನೀಡಿ ನಾವು ತಿನ್ನುತ್ತೇವೆ .ನಮ್ಮ ಮನೆಯಲ್ಲಿ ದಶಮಿಯಂದು ಆಯುಧ ಪೂಜೆಯನ್ನು ಮಾಡುತ್ತೇವೆ ನಮ್ಮ ಟ್ರಾಕ್ಟರ್, ಕಾರ್, ಬೈಕ್ ಗಳನ್ನು ಸಾಲಾಗಿ ನಿಲ್ಲಿಸಿ ಪುಷ್ಪಾಲಂಕಾರ ಮಾಡಿ ಪೂಜೆ ಮಾಡುತ್ತೇವೆ. ಸಂಜೆ ಹಿರಿಯರ ಪೂಜೆಯ ಸಂಭ್ರಮ ಕಳಸಕ್ಕೆ ಅಜ್ಜ ಅಜ್ಜಿಯರ ಬಟ್ಟೆಗಳನ್ನು ಉಡಿಸಿ ಹೂವಿನ ಹಾರ ಆಭರಣಗಳನ್ನು ಹಾಕಿ ಸಿಂಗರಿಸಿ ಹಣ್ಣು, ವಿವಿಧ ಭಕ್ಷಗಳ ಎಡೆಯನಿಟ್ಟು  ಕಾಯಿ ಒಡೆದು ಕುಟುಂಬದ ಸರ್ವರೂ  ಪೂಜಿಸಿ ದೂಫ  ಹಾಕುವೆವು. 

ನಂತರ "ಮೂಡ್ಲ ಮಣೇವು" ಎಂಬ ವಿಶಿಷ್ಟವಾದ ಆಚರಣೆ ಆರಂಭ . ರಾತ್ರಿ ಹತ್ತುಗಂಟೆಯ ನಂತರ ಆರಂಭವಾಗುವ ಈ ಆಚರಣೆಗೆ ನಮ್ಮ ಬೀದಿಯ ಎಲ್ಲಾ ಅಣ್ಣತಮ್ಮಂದಿರ ಮನೆಯವರು ಶಂಖ ,ಜಾಗಟೆ, ಭವನಾಸಿಗಳ ಸಮೇತ ಬಂದು ಒಂದೆಡೆ ಆಸೀನರಾಗುತ್ತಾರೆ. ಅದೇ ಸಮಯದಲ್ಲಿ ಉರಿಮೆಯವರು, ಪಂಜಿನವರು ಬಂದು ತಮ್ಮ ಸೇವಾಕೈಂಕರ್ಯ ನೆರವೇರಿಸುತ್ತಾರೆ. ಕರಿಯ ಕಂಬಳಿಯ ಮೇಲೆ ಎಲ್ಲಾ ಜಾಗಟೆ, ಭವನಾಸಿ ಇಟ್ಟು ಮುತ್ತೈದೆಯರು ತಂದ ಆರತಿ ಇಟ್ಟು ,ನೆಂಟರ ದಾಸಯ್ಯ ಬಂದು ಮೂಡ್ಲ ಮಣೇವು ಕಾರ್ಯಕ್ರಮಕ್ಕೆ ಸಹಕಾರ ನೀಡುವುದು ಗಮನಾರ್ಹ.ಪೂಜೆಯ ಕಡೆಯ ಘಟ್ಟವೆಂಬಂತೆ ಮಣೇವು ಆಟ ಆರಂಭ! ಒಂದು ಟವಲ್ ಮಡಿಚಿ ನೆಲದ ಮೇಲೆ ಹಾಸಿ  ಅದರ ಮೇಲೆ ಬಾಳೆ ಹಣ್ಣು, ಮತ್ತು ಕಾಯಿ ತಂಬಿಟ್ಟು ಇಟ್ಟು ,ದಾಸಯ್ಯ ನವರು ಅದರ ಸುತ್ತಲೂ ಉರಿಮೆ ಸದ್ದಿಗೆ ಅನುಗುಣವಾಗಿ ಜಾಗಟೆ ಬಡಿಯುತ್ತಾ ಸುತ್ತಿ ಕೊನೆಗೆ ಬಾಳೆ ಹಣ್ಣು ತಿನ್ನುತ್ತಾರೆ. ಮಣೇವಿನ ನಂತರ ಎಲ್ಲಾ ಕಾಯಿ ಮತ್ತು ಬಾಳೆ ಹಣ್ಣು ಒಟ್ಟಿಗೆ ಹಾಕಿ ಮಂಡಕ್ಕಿ ಬೆಲ್ಲ ಬೆರೆಸಿ ಎಲ್ಲರಿಗೂ ಹಂಚಿ ತಿನ್ನುವುದರೊಂದಿಗೆ ಮೂಡಲ ಮಣೇವಿಗೆ ಮಂಗಳ ಹಾಡುತ್ತೇವೆ.ಕೊನೆಯಲ್ಲಿ ಉರುಮೆ ಮತ್ತು ಪಂಜಿನವರಿಗೆ ನಮ್ಮ ಕೇರಿಯವರು ಶಕ್ತನುಸಾರ ಹಣ ನೀಡುವುದನ್ನು ಮರೆಯುವುದಿಲ್ಲ. ಮೂಡ್ಲಮಣೇವು ನಂತರ ನಮ್ಮ ಮನೆಗಳಲ್ಲಿ ಪುನಃ ಪೂಜೆ ಮಾಡಿ ನೆಂಟರ ದಾಸಯ್ಯ ಬಂದು ಗೋವಿಂದ ..ಎನ್ನುವ ಶಾಸ್ತ್ರ ಮಾಡಿದಾಗ ಕೆಲವೊಮ್ಮೆ ರಾತ್ರಿ ಹನ್ನೆರಡು ಗಂಟೆ ಹೊಡೆದ ಉದಾಹರಣೆ ಸಹ ಇದೆ.ಗೋವಿಂದ...ಶಾಸ್ತ್ರ ಮುಗಿದ ಮೇಲೆ ಊಟ ಮಾಡಿ ಮಲಗಿದಾಗ ಆಗ ಆ ವರ್ಷದ ಮಾರ್ನಾಮಿ ಹಬ್ಬ ಸುಸೂತ್ರವಾಗಿ ನಡೆದಂತೆ... ಮಲಗುವ ಮುನ್ನ ಹಾರನ ಕಣಿವೆ ರಂಗಪ್ಪನ ಅಂಬು ನೆನೆದು ಮಲಗಿದರೆ ಕನಸಲ್ಲೂ ಅಂಬಿನ ಉತ್ಸವ ಜರುಗುತ್ತವೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ.