This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
20 ಆಗಸ್ಟ್ 2022
18 ಆಗಸ್ಟ್ 2022
ನನ್ನ ಪುಟ್ಟ ದೇವತೆ...
*ನನ್ನ ಪುಟ್ಟ ದೇವತೆ*
ಇವಳು ನನ್ನ ಪುಟ್ಟ ದೇವತೆ
ಸದಾ ನಗುವ ಸಂತಸದ ವರತೆ
ಅವಳ ಕಂಡರೆ ನೋವು ಮಾಯ
ಅವಳಿದ್ದರೆ ಜಗ ಆನಂದಮಯ||
ಚಿನ್ನ ಬೇಡ ಅವಳೇ ಚಿನ್ನಮ್ಮ
ಪ್ರತಿರೂದಲಿ ಅವಳೇ ನನ್ನಮ್ಮ
ಬೆಳೆವ ಸಿರಿ ಮೊಳಕೆಯಲಿ
ನಲಿವಳು ಪರೋಪಕಾರದಲಿ ||
ಬಲು ಚೂಟಿ ಆಟ ಪಾಠದಲಿ
ಬೇಸರವಾದರೆ ಗಂಗೆ ನಯನದಲಿ
ಮನೆಯಲಿದ್ದರೆ ಸಾಕು ಅವಳು
ಹಗಲಾಗುವುದು ಇರುಳು ||
ಅವಳೇ ನಮ್ಮನೆಯ ದೀಪ
ನೀಗಿಸುವಳು ನಮ್ಮಯ ಶಾಪ
ನಮ್ಮ ಭವಿಷ್ಯದ ಭರವಸೆ ಅವಳು
ನಡೆಸುವಳು ಹಿಡಿದು ಬೆರಳು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
16 ಆಗಸ್ಟ್ 2022
ಎಲೆ ಮರೆಯ ಅಲರು ...
ವಿಮರ್ಶೆ ೫೧
ಎಲೆ ಮರೆಯ ಅಲರು.
ಬೆಳಗೆರೆ ಕೃಷ್ಣಶಾಸ್ತ್ರಿಗಳ ಯೇಗ್ದಾಗೆಲ್ಲಾ ಐತೆ ಪುಸ್ತಕ ಓದಿದ ಮೇಲೆ ಅವರ ಇತರ ಕೃತಿಗಳನ್ನು ಓದುವ ಹಂಬಲವಾಯಿತು.ಅದರಂತೆ ಮೊನ್ನೆ ಎಲೆ ಮರೆಯ ಅಲರು ಎಂಬ ಅವರ ಕೃತಿಯನ್ನು ಓದಿದೆ.
ಓದುತ್ತಾ ಬೆಂಗಳೂರು, ತಳಕು, ಆಂದ್ರ ಹೆಗ್ಗೆರೆ ,ಕಾಪರಹಳ್ಳಿ ,ಬೆಳಗೆರೆ ಹೀಗೆ ನಾನಾ ಊರುಗಳ ಸುತ್ತಿದ ಹಾಗೂ ನಾನಾ ವ್ಯಕ್ತಿಗಳ ವ್ಯಕ್ತಿತ್ವದ ಪರಿಚಯವಾಯಿತು.ಕೃಷ್ಣ ಶಾಸ್ತ್ರಿಗಳ ನಿರೂಪಣೆ ಮತ್ತು ಬರವಣಿಗೆಯ ಶೈಲಿ ಓದುಗರನ್ನು ಸೆಳೆಯುತ್ತದೆ. ಒಂದೇ ಸಿಟ್ಟಿಂಗ್ ನಲ್ಲಿ ಕೂತು ಓದುವಂತೆ ಮಾಡುತ್ತದೆ.
ಸ್ವಿಮ್ಮಿಂಗ್ ನಾರಾಯಣ ರವರು ಅವರಿಗೆ ಬೆಂಗಳೂರಿನಲ್ಲಿ ಆಶ್ರಯದಾತರಾಗಿ ಅನ್ನದಾತರಾಗಿ ಸಹಕಾರ ನೀಡಿದ್ದನ್ನು ತಮ್ಮ ಅಗ್ರ ಲೇಖನದಲ್ಲಿ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾ ನಾರಾಯಣ ರವರ ವ್ಯಕ್ತಿತ್ವದ ಪರಿಚಯ ಮಾಡಿದ್ದಾರೆ.
ನಾವೂ ನಾಟಕವಾಡಿದ್ದು ಎಂಬ ಅಧ್ಯಾಯದಲ್ಲಿ ಹುಡುಗಾಟಿಕೆಗೆಂದು ಆಡಿದ ಮಾತು ನಿಜವಾಗಿ ಶಾಲೆಯ ಶಿಕ್ಷಕರ ಮತ್ತು ಹಿರಿಯರ ಬೆಂಬಲದಿಂದ ಯಶಸ್ವಿಯಾಗಿ ಅದರಿಂದ ಬಂದ ಹಣವನ್ನು ವಿದ್ಯಾರ್ಥಿಗಳ ಮಧ್ಯಾಹ್ನದ ಉಪಾಹಾರಕ್ಕೆ ಬಳಸುವ ಅವರ ಮುಂದಾಲೋಚನೆ ಮತ್ತು ಸಹಾಯ ಮಾಡುವ ಗುಣಕ್ಕೆ ಹಿಡಿದ ಕನ್ನಡಿ ಎನ್ನಬಹುದು ಇದು ಮುಂದೆ ಬೆಳಗೆರೆಯಲ್ಲಿ ಶಾರದಾ ಶಾಲೆ ಆರಂಭದಿಂದ ಹಿಡಿದು ಇತರ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರಕಟವಾಗಿದ್ದನ್ನು ಕಾಣಬಹುದು.
ಈ ಪುಸ್ತಕದಲ್ಲಿ ಹೆಗ್ಗರೆಯಲ್ಲಿ ಅವರು ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಸಂಧರ್ಭದಲ್ಲಿ ದಾನಿಗಳಿಂದ ಹಣ ಸಂಗ್ರಹಿಸಿ ಶಾಲಾ ಕೊಠಡಿಗಳು ಮತ್ತು ರಂಗಮಂದಿರ ನಿರ್ಮಾಣ ಮಾಡಿದ ವಿವರಗಳು ಮತ್ತು ಕಬ್ಬಿಣದ ಅಂಗಡಿಯ ಮುಸ್ಲಿಂ ಮಾಲಿಕನ ನಡುವಿನ ಸಂಭಾಷಣೆ ಮತ್ತು ಸಂಬಂಧ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಸರ್ಕಾರದ ಹಣದಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ಹೊಡೆಯೋಣ ಎಂದು ಯೋಚಿಸುವ ಕಂಟ್ರಾಕ್ಟರ್ ಮತ್ತು ಅಧಿಕಾರಿಗಳು ನಮ್ಮ ಕೃಷ್ಣ ಶಾಸ್ತ್ರಿಗಳ ಆದರ್ಶ ರೂಢಿಸಿಕೊಂಡು ಸೇವಾ ಮನೋಭಾವ ಹೊಂದಬೇಕಿದೆ.ಅದು ಅಸಾಧ್ಯ ಕನಸು ಎಂಬುದು ಸಹ ನನಗೆ ಮನವರಿಕೆ ಆಗಿದೆ.ಹೆಗ್ಗೆರೆಯ ನಮ್ಮ ಬಂಧುಗಳ ಮನೆಗೆ ಹೋದಾಗ ಈಗಲೂ ಗಟ್ಟಿಮುಟ್ಟಾಗಿ ನಿಂತ ಶಾಲಾಕೊಠಡಿಗಳು ಮತ್ತು ರಂಗಮಂದಿರ ನೋಡಿ ಮನದಲ್ಲೇ ಕೃಷ್ಣ ಶಾಸ್ತ್ರಿಗಳಿಗೆ ಒಂದು ನಮನ ಸಲ್ಲಿಸುವೆ.
ಟಿ ಎಸ್ ವೆಂಕಣ್ಣಯ್ಯನವರ ಆದರ್ಶ ಮತ್ತು ನಮ್ಮ ಒಡೆಯರ ಉನ್ನತವಾದ ಆಡಳಿತ ಚಿಂತನೆ ನಮಗೆ ಈ ಪುಸ್ತಕದಲ್ಲಿ ಶಾಸ್ತ್ರಿರವರು ಕಟ್ಟಿಕೊಟ್ಟಿದ್ದಾರೆ. ವೆಂಕಣ್ಣಯ್ಯನವರು ಮಹಾರಾಜರ ಮಗನ ಕಲಿಕೆ ಗಣನೀಯವಾಗಿ ಇಲ್ಲದ ಕಾರಣ ಅನುತ್ತೀರ್ಣ ಮಾಡಿರುತ್ತಾರೆ. ಆಗ ಅರಮನೆಗೆ ವೆಂಕಣ್ಣಯ್ಯನವರ ಕರೆಸಿದ ಮಹಾರಾಜರು ಮನಸ್ಸು ಮಾಡಿದ್ದರೆ ಮಗನನ್ನು ಪಾಸು ಮಾಡಲು ಹೇಳಬಹುದಾಗಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಮನೆ ಪಾಠ ಮಾಡಲು ವೆಂಕಣ್ಣಯ್ಯನವರ ಕೇಳಿದರು ಅದಕ್ಕೆ ಒಪ್ಪದೇ ಮನೆ ಪಾಠ ಮಾಡಲು ಅವರ ಶಿಷ್ಯರಾದ ಕುವೆಂಪುರವರ ಗೊತ್ತು ಮಾಡುವ ಭರವಸೆ ನೀಡಿದರು.ಕೊನೆಗೆ ಬಿ ಎಂ ಶ್ರೀ ರವರು ಮನೆ ಪಾಠ ಮಾಡುವ ಮೂಲಕ ಯುವರಾಜರು ಪಾಸಾದರು . ಈ ಘಟನೆಯನ್ನು ಓದಿದ ಶಿಕ್ಷಕನಾದ ನನಗೆ ಶಿಕ್ಷಣದ ವ್ಯಾಪರೀಕರಣದ ಈ ದಿನಗಳಲ್ಲಿ ವೆಂಕಣ್ಣಯ್ಯನವರಂತಹ ಅಧ್ಯಾಪಕರು ಮತ್ತು ಮಹಾರಾಜರಂತಹ ಆಡಳಿತಗಾರರ ಅವಶ್ಯಕತೆ ತೀರಾ ಇದೆ ಎಂದೆನಿಸಿತು.
ಮದ್ದನಕುಂಟೆಯಲ್ಲಿ ಜೈಮಿನಿ ಭಾರತ ಓದಿದ ಘಟನೆಯನ್ನು ನೆನೆಯುತ್ತಾ ಇವರು ಜೈಮಿನಿ ಭಾರತವನ್ನು ತಪ್ಪಾಗಿ ಓದಿದಾಗ ,ಇವರಿಗೆ ಮುಜಗರವಾಗದಂತೆ ಆ ಹಳ್ಳಿಯ ಅನಕ್ಷರಸ್ಥರು ತಿದ್ದಿದ ಪರಿಯನ್ನು ಶಾಸ್ತ್ರೀಯವರು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ.
ಹೀಗೆ ಇಡೀ ಪುಸ್ತಕದಲ್ಲಿ ಎಲೆ ಮರೆಯ ಅಲರುಗಳನ್ನು ನಮಗೆ ತೋರಿಸುವ ಕಾರ್ಯವನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಮಾಡಿದ್ದಾರೆ.ಈ ಎಲ್ಲಾ ಅಲರುಗಳು ನಮ್ಮಲ್ಲಿ ಸುಪ್ತವಾಗಿರುವ ಒಳ್ಳೆಯ ಗುಣಗಳನ್ನು ಜಾಗೃತಗೊಳಿಸುವುದರಲ್ಲಿ ಸಂದೇಹವಿಲ್ಲ. ನೀವೂ ಒಮ್ಮೆ ಎಲೆ ಮರೆಯ ಅಲರಿನ ದರ್ಶನ ಮಾಡಲು ಮನವಿ ಮಾಡುವೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
15 ಆಗಸ್ಟ್ 2022
13 ಆಗಸ್ಟ್ 2022
ಮನೆ ಮನೆಯಲ್ಲಿ ತಿರಂಗಾ ...
ಮನೆ ಮನೆಯಲ್ಲಿ ತಿರಂಗಾ
ನಮ್ಮ ರಾಷ್ಟ್ರ ಧ್ವಜ , ರಾಷ್ಟ್ರ ಗೀತೆ ಮತ್ತು ರಾಷ್ಟ್ರ ಲಾಂಛನಗಳನ್ನು ಗೌರವಿಸುವುದು ಪ್ರತಿಯೊಂದು ನಾಗರೀಕನ ಮೂಲಭೂತ ಕರ್ತವ್ಯವಾಗಿದೆ.ಇತ್ತೀಚಿನ ದಿನಗಳಲ್ಲಿ ಭಾರತೀಯರಲ್ಲಿ ರಾಷ್ಟ್ರಭಕ್ತಿ ಹೆಚ್ಚು ಜಾಗೃತಗೊಂಡಿರುವದು ಕಂಡುಬರುತ್ತಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಪರ್ವಕಾಲದಲ್ಲಿ ಭಾರತ ಸರ್ಕಾರವು ಧ್ವಜ ಸಂಹಿತೆಗೆ ಕೆಲ ತಿದ್ದುಪಡಿ ಮಾಡಿ ಮನೆ ಮನೆಯಲ್ಲೂ ಧ್ವಜಾರೋಹಣ ಮಾಡುವ ಅವಕಾಶವನ್ನು ನೀಡಿದೆ.ಸ್ವಾತಂತ್ರ್ಯ ಪಡೆದ ಎಪ್ಪತ್ತೈದು ವರ್ಷಗಳ ಸವಿನೆನಪಿಗಾಗಿ ಮಾಡುವ ಈ ಉಪಕ್ರಮವು ಸರ್ವ ನಾಗರೀಕರಿಂದ ಸ್ವಾಗತಿಸಲ್ಪಟ್ಟು ದಿನಾಂಕ13 ರ ಆಗಸ್ಟ್ ನ ಮನೆ ಮನೆಯಲ್ಲೂ ನಮ್ಮ ತಿರಂಗ ಹಾರಾಡುತ್ತಿದೆ ಈ ಹಿನ್ನೆಲೆಯಲ್ಲಿ ತಿರಂಗಾ ಹಾರಿಸುವ ಕೆಲ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುವೆ.
ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸಲಾಗುತ್ತದೆಯಾದರೂ ಈ ಎರಡೂ ದಿನಗಳ ಧ್ವಜಾರೋಹಣದ ಮಧ್ಯೆ ವ್ಯತ್ಯಾಸವಿದೆ.
ಭಾರತಕ್ಕೆ 1947ರ ಆ.15ರಂದು ಸ್ವಾತಂತ್ರ್ಯ ಸಿಕ್ಕ ನೆನಪಿಗಾಗಿ ಪ್ರತಿ ಆ.15ಕ್ಕೆ ಧ್ವಜಾರೋಹಣ ಮಾಡಲಾಗುತ್ತದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಸಂವಿಧಾನ ರಚನೆಯಾಗಿರಲಿಲ್ಲ ಹಾಗೂ ರಾಷ್ಟ್ರಪತಿ ಚುನಾಯಿತರಾಗಿರಲಿಲ್ಲ. ಆ ಹಿನ್ನೆಲೆ ಸ್ವಾತಂತ್ರ್ಯ ದಿನಕ್ಕೆ ಪ್ರಧಾನಿ ಅವರೇ ಧ್ವಜಾರೋಹಣ ಮಾಡುತ್ತಾರೆ. ಹಾಗೆಯೇ 1950ರ ಜ.26ರಂದು ಸಂವಿಧಾನ ರಚನೆಯಾದ ನೆನಪಿಗಾಗಿ ನಡೆಸಲಾಗುವ ಗಣರಾಜ್ಯೋತ್ಸವಕ್ಕೆ ರಾಷ್ಟ್ರಪತಿಗಳೇ ಧ್ವಜಾರೋಹಣ ನಡೆಸುತ್ತಾರೆ.
ಸ್ವಾತಂತ್ರೋತ್ಸವದಂದು ಧ್ವಜವನ್ನು ಕೆಳಗೇ ಕಟ್ಟಿರಲಾಗುತ್ತದೆ. ಹಾಗೆಯೇ ಪ್ರಧಾನಿ ಅವರು ಅದನ್ನು ನಿಧಾನವಾಗಿ ಮೇಲಕ್ಕೇರಿಸಿ, ಧ್ವಜ ಬಿಚ್ಚುತ್ತಾರೆ. ಆದರೆ ಗಣರಾಜ್ಯೋತ್ಸವದಂದು ಧ್ವಜವನ್ನು ಮೊದಲಿಗೇ ಮೇಲೆಯೇ ಕಟ್ಟಲಾಗಿರುತ್ತದೆ. ಅದನ್ನು ರಾಷ್ಟ್ರಪತಿ ಬಿಚ್ಚುತ್ತಾರಷ್ಟೇ. ಇಲ್ಲಿ ಧ್ವಜವನ್ನು ಮೇಲೇರಿಸುವ ಪ್ರಶ್ನೆ ಇರುವುದಿಲ್ಲ. ಇಂಗ್ಲಿಷ್ನಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣವು 'Flag Hoisting' ಎಂದು ಗುರುತಿಸಿಕೊಂಡರೆ, ಗಣರಾಜ್ಯೋತ್ಸವದ ಧ್ವಜಾರೋಹಣವು 'Flag Unfurling' ಎಂದು ಗುರುತಿಸಿಕೊಳ್ಳುತ್ತದೆ.
ಸ್ವಾತಂತ್ರೋತ್ಸವದಂದು ಧ್ವಜವನ್ನು ನವದೆಹಲಿಯ ಕೆಂಪು ಕೋಟೆಯಲ್ಲಿ ಹಾರಿಸಲಾಗುತ್ತದೆ. ಗಣರಾಜ್ಯೋತ್ಸವದಂದು ರಾಜಪಥದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗುತ್ತದೆ.
ಈಗ ಧ್ವಜವನ್ನು ನಾವೇ ನಮ್ಮ ಮನೆಗಳಲ್ಲಿ ಹಾರಿಸುವ ಅವಕಾಶವನ್ನು ನೀಡಿದ್ದಾರೆ .
"ಹರ್ ಘರ್ ತಿರಂಗಾ" ಎಂಬ ಅಭಿಯಾನದಲ್ಲಿ
2022ಅಗಷ್ಟ 13ರಿಂದ 15ವರೆಗೆ
ಪ್ರತಿಯೊಬ್ಬರೂ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸೋಣ
ತ್ರಿವರ್ಣದ ಕಂಪನ್ನು ಹಂಚೋಣ.
ತ್ರಿವರ್ಣ ಧ್ವಜಾರೋಹಣ ಮಾಡಲು ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಿ ದೇಶಪ್ರೇಮ ಮೆರೆಯೋಣ ಮತ್ತು ತಾಯಿ ಭಾರತಿಗೆ ನಮಿಸೋಣ.
ನಮ್ಮ ಮನೆಯ ಮೇಲೆ ಅಗಷ್ಟ್ 13 ರ ಶನಿವಾರ ಮುಂಜಾನೆ 7.00 ಘಂಟೆಗೆ ಧ್ವಜಾರೋಹಣ ಮಾಡಿ ಅಗಷ್ಟ 15 ಸೋಮವಾರ ಸಂಜೆ 5.00 ಘಂಟೆಗೆ ಧ್ವಜವನ್ನು ಇಳಸೋಣ.
ನಮ್ಮ ಮನೆಯ ಮೇಲಿನ ಅತೀ ಎತ್ತರದ ಜಾಗದಲ್ಲಿ ಧ್ವಜರೋಹಣ ಮಾಡೋಣ.
ಧ್ವಜ ಸ್ಥಂಭ & ಧ್ವಜ ನೇರವಾಗಿರುವಂತೆ ನೋಡಿಕೊಳ್ಳೋಣ. ಎಡಕ್ಕೆ ಬಲಕ್ಕೆ ಹಿಂದಕ್ಕೆ ಮುಂದಕ್ಕೆ ವಾಲಿರದಂತೆ ನೋಡಿಕೊಳ್ಳೋಣ.
ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ ಹಾಗೂ ಸಮಾನವಾಗಿ ಹಾಗೂ ಧ್ವಜದ ಬಲಗಡೆ ಯಾವುದೇ ಧ್ವಜ ಇರದಂತೆ ನೋಡಿಕೊಳ್ಳೋಣ.
ಗಲೀಜಾದ ಮತ್ತು ಹರಿದ ಧ್ವಜವನ್ನು ಹಾರಿಸದಿರೋಣ .
ಧ್ವಜವನ್ನು ಆಲಂಕಾರಿಕ ವಸ್ತುವಾಗಿ ಯಾವುದೇ ಕಾರಣಕ್ಕೆ ಬಳಸದಿರೋಣ.
ತೊಡುವ ಬಟ್ಟೆಯಲ್ಲಿ ಸೊಂಟಕ್ಕಿಂತ ಕೆಳಭಾಗದಲ್ಲಿ ಧ್ವಜವಿರದಂತೆ ನೋಡಿಕೊಳ್ಳೋಣ .ಒಂದೇ ದಾರದಲ್ಲಿ ಎರಡು ಧ್ವಜ ಹಾರಿಸದಿರೋಣ . ಧ್ವಜವನ್ನು ನೆಲಕ್ಕೆ ತಾಕಿಸದಿರೋಣ .ಯಾವುದೇ ಕಾರಣಕ್ಕೂ ತ್ರಿವರ್ಣ ಧ್ವಜವನ್ನು ಬಂಡಲ್ ರೀತಿ ಬಳಸದಿರೋಣ . ಶ್ವೇತ ವರ್ಣದ ಮಧ್ಯ 24 ಗೆರೆಗಳ ನೀಲಿ ಬಣ್ಣದ ಅಶೋಕ ಚಕ್ರವಿರುವ ಧ್ವಜವನ್ನೇ ಹಾರಿಸೋಣ .
ಧ್ವಜದ ಮೇಲೆ ಯಾವುದೇ ಬರಹ ಇರದಂತೆ ನೋಡಿಕೊಳ್ಳೋಣ . ಹಾಗೂ ಧ್ವಜವನ್ನು ಜಾಹೀರಾತಿಗೆ ಬಳಸದಿರೋಣ.
ಧ್ವಜವನ್ನು ಹಾರಿಸುವ ಕಂಬ/ಸ್ತಂಭದ ಮೇಲೆ ಜಾಹಿರಾತು ಇರದಂತೆ ನೋಡಿಕೊಳ್ಳೋಣ.
ಅಸುರಕ್ಷಿತ ಅಥವಾ ಧ್ವಜಕ್ಕೆ ಹಾನಿಯುಂಟಾಗಬಹುದಾದ ಸ್ಥಳದಲ್ಲಿ ಧ್ವಜಾರೋಹಣ ಮಾಡದಿರೋಣ.
ತ್ರಿವರ್ಣ ಧ್ವಜಕ್ಕೆ ತನ್ನದೇ ಆದ ಗೌರವ ಘನತೆ ಇರುತ್ತದೆ. ಅಗಷ್ಟ್ 15ರಂದು ಸಂಜೆ 5.00 ಘಂಟೆಗೆ ಧ್ವಜ ಇಳಿಸಿದ ನಂತರ ಅಶೋಕ ಚಕ್ರ ಮೇಲೆ ಬರುವಂತೆ ಧ್ವಜವನ್ನು ಮಡಿಕೆ ಮಾಡಿ ಸುರಕ್ಷಿತ ಜಾಗದಲ್ಲ ಇಡೋಣ.
ನಮ್ಮ ಧ್ವಜ ನಮ್ಮ ಹೆಮ್ಮೆ. ಮನೆ ಮನೆಯಲ್ಲಿ ನಮ್ಮ ದ್ವಜ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು




