06 ಮೇ 2022

ವಜ್ರದ ಹರಳು .


ವಜ್ರದ ಹರಳು .


ಕಳವಳಗೊಂಡು ತಲ್ಲಣಿಸಿತ್ತು

ಮನ ಸಿಗುವಳೋ ಅಥವಾ

ಸಿಗದಿರುವಳೋ ಅವಳು|

ಅದೇ ಮನ ಸಮಾಧಾನ

ಪಡಿಸಲು ನನ್ನ ಪ್ರಶ್ನೆ ಮಾಡಿತು

ಹೇಗೆ ಕಳೆದುಕೊಳ್ಳುವಳು 

ನಿನ್ನಂತಹ ವಜ್ರದ ಹರಳು||



ಸಿಹಿಜೀವಿ 

 

03 ಮೇ 2022

ಮೇಧಾಶಕ್ತಿ.ಹನಿಗವನ

 


ಮೇಧಾಶಕ್ತಿ

ಕೊರಗದಿರು ನಾ ಬಲಹೀನ
ನಾ ಬುದ್ದಿವಂತನಲ್ಲ ಎಂದು
ಅಂದುಕೊಳ್ಳದಿರು ನನಗಿಲ್ಲ ಯುಕ್ತಿ|
ಜ್ಞಾನವ ಪಡೆಯುತ,ಹಂಚುತಾ
ವಿವೇಕದಿ ಕಾಯಕ ಮಾಡುತಿರು
ನಿನಗರಿವಿಲ್ಲದೇ ನಿನ್ನಲಿ
ಉದಯಿಸುವುದು ಮೇಧಾಶಕ್ತಿ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


02 ಮೇ 2022

ನಟರಾಜ .ಲೇಖನ


 *"ನಟರಾಜ "ಬಾಲ್ಯದ ನೆನಪಿನ ಲೇಖನ*


https://pratilipi.page.link/ThsAjAMtiN6HLYhp8


*ನಟರಾಜ*


ನಾನಾಗ  ನಮ್ಮೂರ  ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮ ಶಿಕ್ಷಕರು ಪ್ರತಿವಾರ ನಮ್ಮನ್ನು ಹೊರಸಂಚಾರ ಕರೆದುಕೊಂಡು ಹೋಗುತ್ತಿದ್ದರು. ಅಷ್ಟೇನೂ ದೂರವಲ್ಲದಿದ್ದರೂ ಕನಿಷ್ಠ ಮೂರ್ನಾಲ್ಕು ಕಿಲೋಮೀಟರ್ ಹೊರಸಂಚಾರ  ಕರೆದುಕೊಂಡು ಹೋಗಿ ಯಾವುದಾದರೊಂದು ಕೆರೆ ಅಥವಾ ತೋಟದಲ್ಲಿ ನಾವು ನಮ್ಮ ಮನೆಯಿಂದ ಕಟ್ಟಿಕೊಂಡು ಹೋದ ಬುತ್ತಿ ಅನ್ನ, ಚಿತ್ರನ್ನ, ಪಕೋಡ, ರೊಟ್ಟಿ ಹೀಗೆ ವಿವಿಧ ತಿಂಡಿಗಳನ್ನು  ಪರಸ್ಪರ ಹಂಚಿಕೊಂಡು ತಿಂದ ನಂತರ  ಎಲ್ಲಾ ಮಕ್ಕಳ ಚಿತ್ತ ನನ್ನ ಕಡೆ ಹರಿಯುತ್ತಿತ್ತು. ಅವರು"  ಸಾ ವೆಂಕಟೇಶ್ ಹತ್ರ ಡ್ಯಾನ್ಸ್ ಮಾಡ್ಸಿ ಸಾ... " ಅಂದಾಗ ಆ... ಬಾರಾ ವೆಂಕಟೇಶ ಡ್ಯಾನ್ಸ್ ಮಾಡು ನಮ್ಮ ಶಿಕ್ಷಕರು ಕರೆಯುತ್ತಿದ್ದರು. ನಾನು ಹೋಗಿ ಆಗ ಪ್ರಚಲಿತದಲ್ಲಿದ್ದ "ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು...." ಹಾಡನ್ನು ನಾನೇ ಹೇಳಿಕೊಂಡು ಕುಣಿಯತೊಡಗಿದೆ. ಎಲ್ಲಾ ನನ್ನ ಸಹಪಾಠಿಗಳು ಮತ್ತು ಶಿಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಮತ್ತೊಮ್ಮೆ ಕುಣಿಯಲು ಹೇಳಿದರು .ಹೀಗೆ ಮೂರು ಬಾರಿ ಕುಣಿದ ಮೇಲೆ ಚೂರು ಚೂರು ತಿಂದ ವಿವಿಧ ಬಗೆಯ ತಿಂಡಿಗಳು ಯಾವಾಗಲೋ ಕರಗಿದ್ದವು. ನನ್ನ ಡ್ಯಾನ್ಸ್ ಆದ ಮೇಲೆ ಆನಂದ ಎಂಬ ನನ್ನ ಕ್ಲಾಸ್ ಮೇಟ್ ನನ್ನ ಕುಣಿಯಲು ಹೇಳಿದರು ಅವನು " ಒನ್ ಟೂ ತ್ರೀ ಪೋರ್ ಪಾನ್ ಪಟಾನ" ಎಂದು ಯಾರಿಗೂ ಅರ್ಥವಾಗದಿದ್ದರೂ ತೆಲುಗು ಹಾಡು ಹೇಳಿಕೊಂಡು ಕುಣಿಯುವಾಗ ನಾವೆಲ್ಲರೂ ಚಪ್ಪಾಳೆ ತಟ್ಟಿ ಅವನನ್ನು ಹುರಿದುಂಬಿಸಿ ಇನ್ನೂ ಕುಣಿಯುವಂತೆ ಮಾಡಿದೆವು. ಈ ರೀತಿಯಾಗಿ ಕುಣಿಯಲು ಆರಂಭ ಮಾಡಿದ  ನಮ್ಮನ್ನು ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ನಮ್ಮ ಡ್ಯಾನ್ಸ್ ಖಾಯಂ ಆಗಿರುತ್ತಿತ್ತು. ಒಂದು ರೀತಿಯಲ್ಲಿ ನಾವು ನಮ್ಮ ಶಾಲೆಯ  ಅಧಿಕೃತ ನಟ ರಾಜರಾಗಿ ಗುರ್ತಿಸಿಕೊಂಡಿದ್ದೆವು. 

ನಂತರ ನನ್ನ ವಿದ್ಯಾಭ್ಯಾಸ ಮುಂದುವರೆದು ಟಿ ಸಿ ಹೆಚ್ ಓದುವಾಗ ಹಿರಿಯೂರಿನಲ್ಲಿ " ತೂ ಚೀಜ್ ಬಡೀ ಹೈ....." ಹಾಡಿಗೆ ಡ್ಯಾನ್ಸ್ ಮಾಡಿದ್ದೆ. ಮೈಸೂರಿನಲ್ಲಿ ಬಿ ಎಡ್ ಓದುವಾಗ ಸಿ ಟಿ ಸಿ ಕ್ಯಾಂಪ್ ನಲ್ಲಿ " ಸಂದೇಶ್ ಆತೇ ಐ ..... ಎಂಬ ಹಾಡಿಗೆ  ಗೆಳೆಯರೊಂದಿಗೆ ಹೆಜ್ಜೆ ಹಾಕಿದ್ದೆ. 

ಇತ್ತೀಚಿಗೆ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮಾವೇಶದ ನಿಮಿತ್ತವಾಗಿ  ಹೈದರಾಬಾದ್ ಗೆ ಹೋದಾಗ ರಾಮೋಜಿ   ಪಿಲಂ ಸಿಟಿಯಲ್ಲಿ ಕೃತಕ ಮಳೆ ನೀರಿನಲ್ಲಿ ಎಲ್ಲಾ ಭಾಷೆಗಳ ಹಾಡಿಗೆ   ರೈನ್ ಡ್ಯಾನ್ಸ್ ಮಾಡಿದ್ದು ನೆನಪಾಯಿತು . ವಯಸ್ಸಿನ ನಿರ್ಬಂಧವಿಲ್ಲದೇ ತಮಗಿಷ್ಟ ಬಂದ ಹಾಗೆ ಕುಣಿದ ಆ ಕ್ಷಣಗಳು ನಮ್ಮ ಜೀವನದಿ ಮರೆಯಲಾರದ ಕ್ಷಣಗಳೆಂದು  ಹೇಳಬಹುದು.

ಆದರೂ ಬಾಲ್ಯದಲ್ಲಿ ಕುಣಿದ "ಕಾಣದಂತೆ ಮಾಯವಾದನು ... ಹಾಡು ನೆನೆದರೆ ಏನೋ ಒಂತರ ಸಂತಸ .ಮೊನ್ನೆ ಊರಿಗೆ ಹೋದಾಗ ಆನಂದ ಸಿಕ್ಕಿದ್ದ ಆ ಡ್ಯಾನ್ಸ್ ಜ್ಞಾಪಿಸಿದ ಮತ್ತೊಮ್ಮೆ ಆನಂದದಿಂದ ನಮ್ಮ ನೆನಪಿಗೆ ಜಾರಿ ಆನಂದಪಟ್ಟೆವು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

27 ಏಪ್ರಿಲ್ 2022

ಆಧುನಿಕ ಸೊಸೆ.


 



ಆಧುನಿಕ ಸೊಸೆ.


ಹೊಸ ಸಂಸಾರ ಹಾಲು ಉಕ್ಕಿದಂತೆ ಉಕ್ಕಿ ಹರಿಯಬೇಕು ಸೊಸೆಗೆ ಅತ್ತೆ ಸಲಹೆ ನೀಡಿದರು.  ದಿನಕ್ಕೆರಡು ಲೀಟರ್ ಹಾಲು ಉಕ್ಕಿಸುತ್ತಾ  ಉಕ್ಕಿ ಹರಿದ ಮೇಲೆ ಉಳಿದ ಹಾಲಿನಲ್ಲಿ ಟೀ ಮಾಡಿಕೊಂಡು ಕುಡಿದು ಎರಡು ತಿಂಗಳಿಗೇ ಸ್ಟವ್ ಕಮರಿ  ವಾಸನೆ ಹೊಡೆದದ್ದಕ್ಕೆ ಹೊಸ ಸ್ಟವ್ ಖರೀದಿಸಿದ್ದಾಳೆ.ಏಕೆಂದರೆ ಇವಳು ಆಧುನಿಕ ಸೊಸೆ.


ಹೊಸ  ಕೆಲಸ ಕಲಿತುಕೋ ಎಂಬ ಅತ್ತೆಯ ಮಾತಿಗೆ ಬೆಲೆ ಕೊಟ್ಟು ನಿತ್ಯ 5 ಗಂಟೆಗಳು ಧಾರಾವಾಹಿ ನೋಡುತ್ತಾ ಅದರಲ್ಲಿ ಬರುವ ಸೊಸೆಯ ತರಹ ಕೆಲಸ ಮಾಡಲು ಕಲಿಯುತ್ತಿದ್ದಾಳೆ.ಇವಳೇ ಹೊಸ ಸೊಸೆ.


ಅತ್ತೆ ಅವರ  ಮಗನ ಆರೋಗ್ಯದ ಬಗ್ಗೆ ಎಚ್ಚರ ವಹಿಸಲು ಸೊಸೆಗೆ ಹೇಳಿದರು  .ಆರೋಗ್ಯದ ದೃಷ್ಟಿಯಿಂದ ನಿತ್ಯ ಒಂದು ಸಲ ಮಾತ್ರ ಗಂಡನಿಗೆ ಊಟ  ನೀಡುತ್ತಿದ್ದಾಳೆ.ಇವಳೇ ಅಧುನಿಕ ಸೊಸೆ.


ಗಂಡನಿಗೆ ಕಷ್ಟ ಕೊಡಬಾರದು ಎಂಬ ಸಮಾಜದ ಮಾತು ನೆನಪಾಗಿ ಬೆಳಗ್ಗೆ ಮಾತ್ರ ಅಡುಗೆ ಗಂಡನಿಂದ  ಮಾಡಿಸುತ್ತಿದ್ದಾಳೆ ಕಾರಣ ಇವಳು ಆಧುನಿಕ ಸೊಸೆ.


ಉಳಿತಾಯ ಮಾಡು ಎಂಬ ಮಾವನವರ  ಮಾತಿನಿಂದ ವಾರಕ್ಕೆ ಒಂದು ಹೊಸ ಡ್ರೆಸ್ ಮಾತ್ರ ಕೊಳ್ಳುತ್ತಿದ್ದಾಳೆ.  ಎರಡು ಸಿನಿಮಾಗಳನ್ನು ಮಾತ್ರ ನೋಡುತ್ತಿದ್ದಾಳೆ. ಅದಕ್ಕೆ ಅವಳಿಗೆ ಹೇಳುವುದು ಅಧುನಿಕ ಸೊಸೆ.


ಪತಿಯೇ ಪ್ರತ್ಯಕ್ಷ ದೇವರು ಎಂದು ಅವಳ ಅಮ್ಮ ಹೇಳಿದ್ದು ನೆನಪಾಗಿ,  ವೈಕುಂಠ ಏಕಾದಶಿಯಂದು ಪತಿಯ ಪೂಜೆ ಮಾಡಿ ಮುಖಕ್ಕೆ ಮಂಗಳಾರತಿ ಎತ್ತಿ,ಅವನ ಕಾಲುಗಳ ಮೇಲೆ ತೆಂಗಿನಕಾಯಿ ಹೊಡೆದಳು  ಪಾಪ ಕಾಲಿನ ಬೆರಳು ಜಜ್ಜಿಹೋಗಿ ರಕ್ತ ಬಂದು,ಕಟ್ಟನ್ನೂ ಕಟ್ಟಿದ್ದಾಳೆ  ಶೀಘ್ರದಲ್ಲೇ ಗುಣಮುಖವಾದರೆ 

ತಿರುಪತಿಗೆ ಬರುವೆ ಎಂದು ಹರಕೆ 

ಹೊತ್ತಿದ್ದಾಳೆ.ಇವಳೇ ಆಧುನಿಕ ಸೊಸೆ.


(ಇದು ಎಲ್ಲಾ ಆಧುನಿಕ ಸೊಸೆಯಂದಿರಿಗೆ ಅನ್ವಯವಾಗುವುದಿಲ್ಲ ಹಾಗೇನಾದರೂ ಆದರೆ ಅದು ಕಾಕಾತಾಳೀಯ ಅಷ್ಟೇ)


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

25 ಏಪ್ರಿಲ್ 2022

ಏಕಗ್ರಾಹಿ. ಹನಿಗವನ.


 


ಏಕಗ್ರಾಹಿ.


ನೊಗ ಹೊತ್ತ ಬಸವನಿಗಿಂತ

ನಗಹೊತ್ತ ಬಸಣ್ಣಿ ಕಂಡರೆ 

ಅವಳು  ನೋಡುತ್ತಲೇ

ನಿಂತು ಬಿಡುವಳು 

ಮುಚ್ಚದಂತೆ ತೆರೆದ ಬಾಯಿ |

ಆಶ್ಚರ್ಯವೇನಿಲ್ಲ ಬಿಡಿ

ಪಾಪ ಅವಳು ನಗ ,ನಾಣ್ಯ

ಕಂಡರೆ ಆಗಿಬಿಡುವಳು ಏಕಗ್ರಾಹಿ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ