02 ಮಾರ್ಚ್ 2022

ಸುವರ್ಣಮುಖಿ. ಪುಸ್ತಕ ವಿಮರ್ಶೆ.


 


ಸುವರ್ಣ ಮುಖಿ . ವಿಮರ್ಶೆ.



ಆತ್ಮೀಯರು ಪ್ರಕಾಶಕರು ಆದ ಎಂ ವಿ  ಶಂಕರಾನಂದರ  ಜೊತೆ ಒಮ್ಮೆ ಸಿದ್ದರ ಬೆಟ್ಟದ ಚಾರಣಕ್ಕಾಗಿ ಹೋದಾಗ ಅಲ್ಲೇ ಹತ್ತಿರದ ಹೊಲತಾಳ್ ನ ಅಬೇತೋಸಂ ( ಅನೌಪಚಾರಿಕ ಬೇಸಾಯ ಮತ್ತು ತೋಟಗಾರಿಕೆ ಸಂಸ್ಕೃತಿ) ಗೆ ಭೇಟಿ ನೀಡಿದಾಗ ಈ ಪುಸ್ತಕವನ್ನು ಡಾ.ಸಿದ್ದಗಂಗಯ್ಯ ಹೊಲತಾಳ್ ರವರಿಂದ ಖರೀದಿಸಿ ತಂದು 464 ಪುಟಗಳ ಬೃಹತ್ ಪುಸ್ತಕವನ್ನು ಕೆಲವೇ ದಿನಗಳಲ್ಲಿ ಓದಿ ಮುಗಿಸಿದೆ.


ಸಿದ್ಧರ ಬೆಟ್ಟದ ಆಸುಪಾಸಿನ ಅಧ್ಯಯನ ಎಂಬ ಟ್ಯಾಗ್ ಲೈನ್ ನ ಪುಸ್ತಕದಲ್ಲಿ 

ಡಾ. ಸಿದ್ಧಗಂಗಯ್ಯ ಹೊಲತಾಳು ರವರು ಚನ್ನರಾಯನ ದುರ್ಗ ದ ಸಮಗ್ರ ಅಧ್ಯಯನ ಮತ್ತು ಪ್ರವಾಸ ಮಾಡಿ ಅನುಭವದ ಕಥನವನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ  ಪರಿಸರ ಪ್ರಿಯರು, ಸಂಶೋಧನಾ ವಿದ್ಯಾರ್ಥಿಗಳು, ಪ್ರವಾಸಪ್ರಿಯರಿಗೆ ಇದೊಂದು ಆಕರ ಗ್ರಂಥವೆಂದರೆ ತಪ್ಪಾಗಲಾರದು.


ಡಾ. ಸಿದ್ಧಗಂಗಯ್ಯ ಹೊಲತಾಳು ರವರ  ಈ ಹೆಸರಿನಲ್ಲಿಯೇ ನೆಲಮೂಲದ ಹಳ್ಳಿಯ ಹೆಸರು ಇರುವುದನ್ನು ಗುರುತಿಸಬಹುದು. 'ಹೊಲತಾಳು ಗ್ರಾಮವು ಕೋಳಿಕಲ್ ಅರಣ್ಯ ಪ್ರದೇಶದ ತಪ್ಪಲಿನಲ್ಲಿ ಅಂದರೆ ಸಿದ್ಧರಬೆಟ್ಟದ ದಕ್ಷಿಣ ದಿಕ್ಕಿನಲ್ಲಿದೆ. ಈ ನೆಲದಲ್ಲಿ ಆಳಿದನೆಂದು  ಆಕರಗಳಿಂದ ತಿಳಿದು ಬರುವ ಕುರಂಗರಾಯನ ಸತಿಯ ಕಥನದೊಂದಿಗೆ ತಳುಕ ಹಾಕಿಕೊಂಡಿರುವ 'ಹೊಲತಾಳು' ಗ್ರಾಮದವರಾದ ಸಿದ್ಧಗಂಗಯ್ಯನವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಇವರನ್ನು ಆಂಗ್ಲಭಾಷಾ ವಿದ್ವಾಂಸರಾಗಿ, ಪರಿಸರವಾದಿಯಾಗಿ ಸಾವಯವ ಕೃಷಿಕರಾಗಿ, ದೇಸೀ ಸಂಸ್ಕೃತಿಯ ಹರಿಕಾರರಾಗಿ, ದಣಿವರಿಯದ ಓದುಗರಾಗಿ, ಸಂಶೋಧಕರಾಗಿ ಗುರುತಿಸಬಹುದು. 'ಅಬೇತೋಸಂ' ಎಂಬ ಕೇಂದ್ರದ ಸ್ಥಾಪಕರಾಗಿದ್ದಾರೆ. ನೆಲಮೂಲದ ಕಥನವನ್ನು ಮುಂದಿನ ಪೀಳಿಗೆಗೂ ಪ್ರಸರಿಸುವ ಬದ್ಧತೆ ಮತ್ತು ಉತ್ಸಾಹವನ್ನು ಹೊಂದಿದ್ದಾರೆ.


ಚನ್ನರಾಯನದುರ್ಗ ಆಡಳಿತ ಘಟಕದ ವ್ಯಾಪ್ತಿಯಲ್ಲಿರುವ ಸ್ಥಳಗಳನ್ನು ಪರಿಚಯಿಸಿರುವ ಇವರ ಪ್ರಯತ್ನವು ಶ್ಲಾಘನೀಯವಾದುದು. ಚನ್ನರಾಯನದುರ್ಗದಿಂದ ದೊಗ್ಗನಹಳ್ಳಿ, ಮಲ್ಲೇಕಾವು,  ಗೌಜುಗಲ್ಲು, ಬೆಂಡೋಣೆ, ಬೂದಗವಿ, ಜೋನಿಗರಹಳ್ಳಿ, ತೋವಿನಕೆರೆ, ಮಣುವಿನಕುರಿಕೆ, ಹೊಲತಾಳು, ದೊಡ್ಡನರಸಯ್ಯನಪಾಳ್ಯ,ಮುಂತಾದ ಹಳ್ಳಿಗಳ ಪ್ರವಾಸ ಮಾಡಿ ಅಲ್ಲಿನ ಐತಿಹಾಸಿಕ, ಸಮಾಜೋ ಆರ್ಥಿಕ ಸಾಂಸ್ಕೃತಿಕ ಅಧ್ಯಯನ ಮಾಡಿ ನಮಗೆ ಒಂದು ಉತ್ತಮ ಚಿತ್ರಣ ನೀಡಿದ್ದಾರೆ.


ಕೃತಿಕಾರರ ಮಾತಿನಲ್ಲೇ ಹೇಳುವುದಾದರೆ 

'ಸುವರ್ಣಮುಖಿ' ಬಹುತೇಕ ನಿಧಾನ ನಡಿಗೆಯ ಪ್ರವಾಸಕಥನ.

ಈ ಪ್ರವಾಸದಲ್ಲಿ ಅರಿವು, ಅಧ್ಯಯನ : ಸಂವಾದ, ಸಂಶೋಧನೆ ; ಪ್ರಾಕೃತಿಕ ಸೊಬಗು, ಪ್ರಾಯೋಗಿಕ ಅನುಭವ; ಚಿಂತನ-ಮಂಥನ ; ಕರಕುಶಲ ಜಾನಪದ-ಸಂಪ್ರದಾಯ-ಆಚರಣೆ-ಹಾಡು ; ಹಿಂದಿನ - ಇಂದಿನ - ಮುಂದಿನ ನೋಟ

ಎಲ್ಲವೂ ಈ ಬರವಣಿಗೆಯಲ್ಲಿ ಸಂಮಿಳಿತವಾಗಿವೆ. ಕನಸು-ಕಲ್ಪನೆ-ಕತೆಯೂ ಇದೆ, ಸಿದ್ಧರಬೆಟ್ಟದ ಆಸುಪಾಸು - ಚನ್ನರಾಯನದುರ್ಗ ಹೋಬಳಿ, ಬಾರ್ಡರ್ ಲೈನ್ ಒಳಗೊಂಡಂತೆ. ಸುಮಾರು ಎಂಭತ್ತು ಕಿಲೋಮೀಟರ್ ಸುತ್ತಳತೆ, ಎಂಭತ್ತು ಹಳ್ಳಿಗಳ ವ್ಯಾಪ್ತಿಯಲ್ಲಿ ಅವರ ನಡಿಗೆ. 


ಸುವರ್ಣಮುಖಿ ನದಿಯ ಜಲದ ಜಾಡಿನಲ್ಲಿ ಬೇಸಾಯ ಸಂಸ್ಕೃತಿಯ ಅನಂತ ಮುಖಗಳನ್ನು  ಪಯಣದ ಅವಧಿಯಲ್ಲಿ ನೋಡಿ ದಾಖಲಿಸಿದ್ದಾರೆ. ಸಮಾಜ-ಕೃಷಿ-ಆರ್ಥಿಕತೆ-ನೀರು-ಅರಣ್ಯ ,ಮಣ್ಣಿನ ಗುಣ-ಕಲೆ-ಸ್ಥಳೀಯ ಸಂವೇದನೆ-ಸ್ಥಿತ್ಯಂತರ , ಅರಿವು, ಮಾಗಿಯ ಬೆಳಗಿನ ಚುಮುಚುಮು ಚಳಿ-ಮಂಜು, ಮಧ್ಯಾಹ್ನದ ಬಿಸಿಲು, ಸಂಜೆಯ ಸುಳಿಗಾಳಿಯಿಂದ ಆರಂಭವಾಗಿ ಚೈತ್ರದ ಚಿಗುರಿನ ಪಕ್ಷಿಗಳಿಂಚರದಲ್ಲಿ ಮುಂದುವರಿದು, ಮಳೆಬಿದ್ದ ನೆಲವ ಉತ್ತಿ ಬೀಜ ಬಿತ್ತಿ ಪೈರುನೆಟ್ಟು

ಗರಿಮೇದು ಬೆಳೆಕಟ್ಟುವ ತನಕ ನನ್ನ ಈ ಪ್ರವಾಸ ಮುಂದುವರೆದಿದೆ.


ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಜಾನಪದ ತಜ್ಞರಾದ ಡಾ.ಬಸವರಾಜ ನೆಲ್ಲಿಸರ ರವರ ಮಾತಿನಲ್ಲಿ ಹೇಳುವುದಾದರೆ 

ನಮ್ಮ ಹಳ್ಳಿಯ ಯುವಕರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದವರು ಏನು ಮಾಡ್ತಾ ಇದ್ದಾರೆ? ಬೇಕರಿಯಲ್ಲಿ, ಗ್ಯಾರೇಜಿನಲ್ಲಿ, ಗಾರ್ಮೆಂಟಿನಲ್ಲಿ, ಚಪ್ಪಲಿ ಅಂಗಡಿಗಳಲ್ಲಿ, ಟ್ಯಾಕ್ಸಿ ಚಾಲನೆಯಲ್ಲಿ, ಹೋಟೆಲ್ಗಳಲ್ಲಿ, ಮಾಲ್ಗಳಲ್ಲಿ ಜವಾನರೋ ದಿವಾನರೋ ಆಗಿ ದುಡಿಯುತ್ತಿದ್ದಾರೆ. ಮದುವೆ ಮಾಡಿಕೊಂಡ್ರೆ ಮನೆ ಮಾಡಬೇಕಲ್ಲಾ ಎಂದು ಸಣ್ಣ ರೂಮಿನಲ್ಲಿದ್ದು, ಅನ್ನ ಮಾಡಿಕೊಂಡು ಹೋಟೆಲ್ ಸಾಂಬಾರ್ ತಂದು, ಉಂಡು ಜೀವನ ಮಾಡ್ತಿದ್ದಾರೆ. 'ಕೆಟ್ಟು ಪಟ್ಟಣ ಸೇರು' ಅನ್ನೋ ಗಾದೆ ಮಾತು, ಈಗ 'ಕೆಡೋದಕ್ಕೆ ಪಟ್ಟಣ ಸೇರು' ಆಗಿದೆ. ಮೈಬಗ್ಗಿಸಿ ಬೆವರು ಹರಿಸಿ ದುಡಿದ್ರೆ 'ಭೂಮಿತಾಯಿ ಕೂಡಾಕಿಲ್ಲವಾ! ಹೀಗೆ ಪ್ರತಿ ಹಳ್ಳಿಗಳಲ್ಲೂ ಹಣದ ಬೆನ್ನುಹತ್ತಿ ಪೇಟೆ ಸೇರಿದವರ ದೊಡ್ಡ ಪಟ್ಟಿಯೇ ದೊರೆಯುತ್ತದೆ. ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯಲು, ಕೇರಳದ ಮಲೆಯಾಳಿಗಳು, ಪಾಳುಬಿದ್ದ ಜಮೀನು ನೋಡಲು ಹಳ್ಳಿಗಳಿಗೆ ಬರುತ್ತಿದ್ದಾರೆ. ಆದರೆ ನಮ್ಮವರು ಏನು ಮಾಡುತ್ತಿದ್ದಾರೆ? ಗಂಡಸರಿಗಿಂತ ನಮ್ಮೂರಿನ ಹೆಂಗಸರಿಗೆ ಶ್ರಮಿಕ ಪ್ರಜ್ಞೆ ಹೆಚ್ಚು ಕುಟುಂಬದಲ್ಲಿ ಹತ್ತು ಕೈಗಳು ಗಲೀಜು ಮಾಡುತ್ತವೆ ಎರಡು ಕೈಗಳು ಶುಚಿ ಮಾಡುತ್ತವೆ. ಹೊಲದಲ್ಲಿ ಸಿರಿಧಾನ್ಯಗಳಾದ ಆರ್ಕ, ನವಣೆ ಮುಂತಾದವನ್ನು ಬೆಳೆಯುತ್ತಾರೆ. ಗ್ರಾಮೀಣ ವೃತ್ತಿಗಳು ನೂರಾರಿದ್ದವು. ಕುಂಬಾರ, ಕಮ್ಮಾರ, ಚಮ್ಮಾರ, ತೋಟಿ, ತಳವಾರ, ಸಾರುವಯ್ಯ ಮುಂತಾದವರೆಲ್ಲರ ಕಸುಬುಗಳು, ಮೂಲ ಸಂಸ್ಕೃತಿ ಯಿಂದ ಮರೆಯಾಗುತ್ತಿವೆ. ದೇಶಿಜ್ಞಾನ ಪದ್ಧತಿ ಮರೆಯಾಗುತ್ತಿದೆ. ರೈತ ಕೃಷಿಯನ್ನೇ ನಂಬಿದವನು ಹೊಸದನ್ನ ಕಲಿಯುವುದಿಲ್ಲ, ಹಳೆಯದನ್ನು ಬಿಡುವುದಿಲ್ಲ ಎಂಬಂತಾಗಿದೆ. 'ನಮ್ಮಂಗೆ ನೀವಾಗ್ಬೇಡಿ' ಎಂದು ರೈತರು ತಮ್ಮ ಮಕ್ಕಳಿಗೆ ಹೇಳುತ್ತಾ, ಅಲ್ಪಸ್ವಲ್ಪ ಓದಿದ ಯುವಕ ಯುವತಿಯರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ನಮ್ಮೆಲ್ಲರ ಬೇರುಗಳು ಗ್ರಾಮಮೂಲವೇ ಆಗಿರುವುದರಿಂದ ನಮ್ಮ ಸಂಸ್ಕೃತಿ ಉಳಿದು ಬರಬೇಕಾದರೆ ಪ್ರಾಮಾಣಿಕ ದುಡಿಮೆ, ಶ್ರದ್ಧೆ, ಜೊತೆಗೆ ಸ್ವಸಾಮರ್ಥ್ಯವಿರಬೇಕು. ವಿದ್ಯಾವಂತರಾದವರು ಮರಳಿ ತಮ್ಮ ತಮ್ಮ ಊರುಗಳಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿ, ಮರಗಿಡಗಳನ್ನು ನೆಟ್ಟು, ಕೃಷಿಹೊಂಡಗಳನ್ನು ನಿರ್ಮಿಸಿ ಹಸಿರು ಸಮೃದ್ಧಿಯ ಬೇಸಾಯಮಾಡಿ ಗಾಂಧೀಜಿಯ ಗ್ರಾಮೀಣ ಅಭಿವೃದ್ಧಿಯ ಕನಸನ್ನು ನನಸು ಮಾಡುತ್ತ ಹೆಜ್ಜೆ ಹಾಕಬೇಕೆಂಬುದು ಲೇಖಕರ ಮಹದಾಸೆ .ಅದಕ್ಕೆ ಅವರೇ ಮಾದರಿ.


'ಸುವರ್ಣಮುಖಿ'ಯಲ್ಲಿ ನೀರು ಮತ್ತು ಮಣ್ಣಿನ ಸಂರಕ್ಷಣೆಯಲ್ಲದೆ, ಈ ನದಿ ಹರಿವ ಕಡೆಯಲ್ಲೆಲ್ಲಾ ಜೀವ ಅರಳಿಸುವ ಶಕ್ತಿ ಇದೆ.  ಸಿದ್ದಗಂಗಯ್ಯ ರವರು ಒಂದು ಹೋಬಳಿಯ ಸಮಗ್ರ ಪ್ರವಾಸ ಕಥನ ಓದಿದ ನನಗೆ ಇವರು ತುಮಕೂರು ಜಿಲ್ಲೆಯ ೧೦ ತಾಲೂಕಿನ ಎಲ್ಲಾ ಹೋಬಳಿಯ ಪ್ರವಾಸ ಕಥನ ಬರೆದರೆ ಅದು ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಂಪರೆಯನ್ನು ಚಿತ್ರಿಸುವ ಕೆಲಸ ಮಾಡಿದಂತಾಗುತ್ತದೆ. ಜೊತೆಗೆ ಒಂದು ಉತ್ತಮ ಆಕರ ಗ್ರಂಥ ನೀಡಿದಂತಾಗುತ್ತದೆ.


ಪುಸ್ತಕದ ಹೆಸರು: ಸುವರ್ಣಮುಖಿ


ಲೇಖಕರು: ಡಾ. ಸಿದ್ದಗಂಗಯ್ಯ ಹೊಲತಾಳು


ಪ್ರಕಾಶಕರು: ಸ್ಟೂಡೆಂಟ್ ಬುಕ್ ಕಂಪನಿ.ತುಮಕೂರು

ಬೆಲೆ: 400. ₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


01 ಮಾರ್ಚ್ 2022

ಬಾಲ್ಯದ ನಂಬಿಕೆಗಳು


 


ಬಾಲ್ಯದ ನಂಬಿಕೆಗಳು 


ಬಾಲ್ಯದಲ್ಲಿ ನಾವು ಆಡಿದ ಆಟಗಳು ಕೀಟಲೆಗಳು ಒಂದಾ ಎರಡಾ ಕೆಲವು ಮುಗ್ದ ನಂಬಿಕೆಗಳು ಸಹ ನಮ್ಮನ್ನು ಆ ತರಹದ ಆಟಗಳಿಗೆ ಪ್ರೇರಣೆ ನೀಡುತ್ತಿದ್ದವು .

ಅಂತಹ ನಂಬಿಕೆಗಳಲ್ಲಿ ಒಂದು ದೊಣ್ಣೆ ಕ್ಯಾತ ಹೊಡೆದು ಅದರ ಬಾಯಲ್ಲಿ ನಾಣ್ಯ ಇಟ್ಟು ನಾವು ಹಣ ಹುಡುಕಲು ಹೊರಟರೆ ಅಪಾರ ಪ್ರಮಾಣದ ಹಣ ಲಭಿಸುತ್ತದೆ ಎಂಬ ನಂಬಿಕೆ.ಒಮ್ಮೆ ಬೇಲಿ ಸಾಲು ಅಲೆದು ಹುಡುಕಿ ಕಡೆಗೂ ಒಂದು ದೊಣ್ಣೇಕ್ಯಾತ ಹೊಡೆದು ಅದರ ಬಾಯಲ್ಲಿ ಐದು ಪೈಸೆಯ ನಾಣ್ಯ ಇಟ್ಟು ಉತ್ತರ ದಿಕ್ಕಿನಲ್ಲಿ ಹಣ ಹುಡುಕಲು ನಡೆದೆವು ಕಾಕತಾಳೀಯ ಎಂಬಂತೆ ಚಂದ್ರಯ್ಯನವರ ಅಂಗಡಿಗೆ ಹತ್ತು ಹೆಜ್ಜೆ ದೂರದಲ್ಲಿ ಒಂದು ರೂಪಾಯಿ ಸಿಕ್ಕೇ ಬಿಟ್ಟಿತು. ನಮ್ಮ ಸಂತಸಕ್ಕೆ ಪಾರವೇ ಇರಲಿಲ್ಲ.ಎಲ್ಲಾ ಗೆಳೆಯರು ಚಂದ್ರಯ್ಯನವರ ಅಂಗಡಿಗೆ ಹೋಗಿ ಬೋಟಿ ಮತ್ತು ಮಂಡಕ್ಕಿ ಉಂಡೆ ತಿಂದು ಮಜಾ ಮಾಡಿದೆವು .ಮುಂದಿನ ಭಾನುವಾರದ ದೊಣ್ಣೇಕ್ಯಾತಕ್ಕೆ ಕಾದೆವು ಆದರೆ ಅಂದು ಎಷ್ಟು ಹುಡುಕಿದರೂ ಹಣದ ಸುಳಿವಿರಲಿಲ್ಲ.ಮೊನ್ನೆ ಊರಿಗೆ ಹೋದಾಗ ಆನಂದ ಸಿಕ್ಕಾಗ ಇದೆಲ್ಲಾ ನೆನದು ನಕ್ಕೆವು.

ಇದರ ಜೊತೆಯಲ್ಲಿ ಬಾಲ್ಯದಲ್ಲಿ ಇನ್ನೂ ವಿಚಿತ್ರ ನಂಬಿಕೆಗಳು ಇದ್ದವು .ಹುಣಸೆ ಬೀಜ ತಿಂದರೆ ಹೊಟ್ಟೆಯಲ್ಲಿ ಮರ ಬೆಳೆಯುತ್ತೆ, ನವಿಲು ಗರಿ ಪುಸ್ತಕದಲ್ಲಿ ಮರಿ ಹಾಕುತ್ತೆ, ಬೆಳೆಯುವ ಸಸ್ಯದ ಚಿಗುರಿಗೆ ಉಗುರು ತೋರಿಸಿದರೆ ಸುಟ್ಟು ಹೋಗುತ್ತದೆ, ಉದುರಿದ ಹಲ್ಲನ್ನು ಬೇರೆಯವರು ಕಾಲಲ್ಲಿ ತುಳಿದರೆ ಹಲ್ಲು ಹುಟ್ಟಲ್ಲ, ಆಕಾಶದಲ್ಲಿ ನಕ್ಷತ್ರಗಳ ಬಿದ್ದರೆ ಆ ಕಡೆ ನಮ್ಮ ಬಂಧುಗಳ ಮರಣ ಆಗುತ್ತದೆ. ಹೀಗೆ ನಂಬಿಕೆ, ಮೂಢನಂಬಿಕೆ  ನಮ್ಮ ಬಾಲ್ಯದಲ್ಲಿ ಹಾಸುಹೊಕ್ಕಾಗಿ ಹೋಗಿದ್ದವು ಅವನ್ನು ನೆನದರೆ ನಗು ಬರುತ್ತದೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಸ್ವರ್ಗ ನಿಸರ್ಗ .ಪುಸ್ತಕ ವಿಮರ್ಶೆ .


 


ಸ್ವರ್ಗ ನಿಸರ್ಗ . ವಿಮರ್ಶೆ.



ನಿಸರ್ಗದ ಚೆಲುವನ್ನು ವರ್ಣಿಸುವುದೇ ನನ್ನ ಕಾಯಕವೆಂದು ಪ್ರತಿದಿನವೂ ಜಪದಂತೆ ರೂಢಿಸಿಕೊಂಡಿರುವ ನೇಸರ ದಿನೇಶ್ ರವರ ಚೊಚ್ಚಲ ಕೃತಿ ಸ್ವರ್ಗ ನಿಸರ್ಗ ಓದುಗರ ಮನಸೆಳೆಯುತ್ತದೆ .ಪ್ರಕೃತಿ ಪ್ರಿಯರಿಗೆ ಇಲ್ಲಿನ ಕವಿತೆಗಳು ಬಹಳ ಇಷ್ಟವಾಗುತ್ತವೆ.ಬಹುತೇಕ ಗೀತೆಗಳು ಗೇಯತೆ ಹೊಂದಿರುವುದರಿಂದ ಓದುಗರು ಹಾಡಿನ ರೂಪದಲ್ಲಿ ಗುನುಗಿಕೊಳ್ಳುವರು.


ಹಾಸನದ ಕಾರ್ಯಕ್ರಮದಲ್ಲಿ ಪ್ರಾತಿನಿಧಿಕ ಚೊಚ್ಚಲ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪರಿಚಿತವಾದ ಸಹೃದಯ ದಿನೇಶ್ ರವರು ಸರಳ ಸಜ್ಜನ ಪ್ರತಿಭೆ .  ನಮ್ಮ ಸ್ನೇಹ. ಈಗಲೂ ಮುಂದುವರೆದಿದೆ. ಈ ಪುಸ್ತಕದಲ್ಲಿ ನನ್ನ ಹೆಸರನ್ನು ಸಹ ನಮೂದು ಮಾಡಿರುವುದು ಅವರ ದೊಡ್ಡತನ .


ದಿನೇಶ್, ಎನ್, ಮಡಿವಾಳ ಅಮ್ಮಿನಳ್ಳಿರವರು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಮಿನಳ್ಳಿಯವರು  .

ಓದಿದ್ದು ಹತ್ತನೆಯ ತರಗತಿಯಾದರೂ ಕವನ, ಕಥೆ, ಲೇಖನ, ಗಝಲ್, ಹನಿಗವನ, ನ್ಯಾನೊ ಕಥೆ, ಚುಟುಕು, ರುಬಾಯಿ, ಹಾಯ್ಕು, ಟಂಕಾ, ಮತ್ತು ಭಾವಗೀತೆಗಳ ರಚನೆಯಲ್ಲಿ ಅವರ ಪ್ರಬುದ್ಧತೆ ನೋಡಿದರೆ ಯಾವ ವಿದ್ವಾಂಸರಿಗೂ ಕಮ್ಮಿಯಿಲ್ಲ ಎನಿಸುತ್ತದೆ.

ಇವರ ಸಾಹಿತ್ಯ ಕೃಷಿ ಗುರ್ತಿಸಿ

ಕನ್ನಡ ಕವಿವಾಣಿ ಮಾಸಪತ್ರಿಕೆ ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರಿಂದ ಸಾಹಿತ್ಯ ಮಂದಾರ ಪ್ರಶಸ್ತಿ. 

ನವಪರ್ವ ಫೌಂಡೇಶನ್ (ರಿ.) ಬೆಂಗಳೂರು ಇವರಿಂದ ಜನಪದ ಕಾವ್ಯ ಪುರಸ್ಕಾರ 

 ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಚಿಂತಾಮಣಿ ಇವರಿಂದ ಕರುನಾಡು ಚುಟುಕು ಶ್ರೀ ಪ್ರಶಸ್ತಿ 

ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ (ರಿ.) ಬೆಂಗಳೂರು ಇವರಿಂದ ಉತ್ತಿಷ್ಟ

ಕನ್ನಡ ಕವನ ಪ್ರಶಸ್ತಿ. ನೀಡಿ ಗೌರವಿಸಿವೆ .

ಇವರ ರಚನೆಗಳು 

ನಿರಂತರ, ನಿಮ್ಮೆಲ್ಲರ ಮಾನಸ, ಕರ್ಮವೀರ, ತರಂಗ, ಸಂಪದ ಸಾಲು, ಮಾಸಪತ್ರಿಕೆಗಳು, ವಿಜಯವಾಣಿ, ಸಂಯುಕ್ತ ಕರ್ನಾಟಕ, ಜನಮಾಧ್ಯಮ, ಲೋಕಧ್ವನಿ, ಪ್ರಜಾಪ್ರಗತಿ, ಜನಮಿಡಿತ, ಬದಲಾವಣೆ, ಹೀಗೆ ಹಲವು ಮಾಸಪತ್ರಿಕೆಗಳು ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೂಡಬಿದಿರೆಯ "ಕಾಲ" ಎಂಬ ದೂರದರ್ಶನ ಚಾನೆಲ್ ಹಾಗೂ ಆಕಾಶವಾಣಿ ಕೇಂದ್ರ ಮಂಗಳೂರು ಮತ್ತು ಕಾರವಾರ ಇಲ್ಲೆಲ್ಲ ಸಾಹಿತ್ಯದ ಕಂಪು ಹರಡಿದೆ.


ಈ ಸಂಕಲನಕ್ಕೆ ಮುನ್ನುಡಿ ಬರೆದ ಕವಯತ್ರಿ ಮತ್ತು ವಿಮರ್ಶಕರಾದ ವಾಣಿ ಭಂಡಾರಿ ರವರ ಮಾತುಗಳಲ್ಲಿ ಹೇಳುವುದಾದರೆ 

ರವಿಯು ನಿತ್ಯವೂ ಬೆಳಗುತಿರಲು ಪ್ರಕೃತಿಯ ಒಡಲಾಳದಲ್ಲಿ ಇರುವ ಲಕ್ಷಾಂತರ ಜೀವಜಂತುಗಳಿಗೆ ಭಾಸ್ಕರನ ಹೊಂಗಿರಣಗಳಿಂದಾಗಿ ಬಾಡಿದ ಮೊಗದಲ್ಲಿ ಹಿಡಿಯಷ್ಟಾದರೂ ನಗೆಮೊಗ್ಗು ಚೆಲ್ಲಲಿ ಎಂಬ "ನಿಸರ್ಗಕವಿ" ಗಳ ಮಹೋನ್ನತವಾದ ಅಶಯವು ತಮ್ಮ ಬೆಳಗಿನ ಕವಿತೆಗಳ ಮೂಲಕ ಸಹೃದಯರನ್ನು ತಲುಪುತ್ತಾ ಕವಿ ಮನಗಳಲ್ಲಿ ಸಂಭ್ರಮವನ್ನುಂಟು ಮಾಡುತ್ತದೆ.

ಹೀಗೆ ದಿನ ದಿನವೂ ಬೆಳಗಿನ ನವಿರು ಕಿರಣಕ್ಕೊಂದು ಹೊಸ ಕವಿತೆ ಎಂಬಂತೆ ನವನೂತನತೆಯಲ್ಲಿ ನಿಸರ್ಗವನ್ನು ಆಸ್ವಾದಿಸುತ್ತಾ, ರವಿಯನ್ನು ಧ್ಯಾನಿಸುತ್ತಾ, ಆರಾಧಿಸುತ್ತಾ, ಮೌನದೊಳಗೆ ಧ್ಯಾನಿಯಾಗಿ ಸಹೃದಯ ರಸಿಕರನ್ನು ರಂಜಿಸುವ ಕವಿಹೃದಯವು ನಿಸರ್ಗ ಕವಿಗಳಾಗಿ ಹೊರಹೊಮ್ಮಿರುವುದು ಅವರ ನೈಜ ಕಾವ್ಯ ಸಂಪತ್ತಿನ ದ್ಯೋತಕವೆನ್ನಬಹುದು. ಹಚ್ಚ ಹಸಿರಿನ ಬೆಚ್ಚನೆಯ ಸಿರಿ-ಝರಿ, ಕೆರೆ-ತೊರೆ. ಹಳ್ಳ-ಕೊಳ್ಳ, ಬನ-ವನಗಳ ನಡುವೆ ಕಾವ್ಯಕುಸುಮವಾಗಿ ಕಂಗೊಳಪ ದಿನೇಶ್ ಅವರು ನಾ ಕಂಡಂತೆ ಈಗಾಗಲೇ ಬೆಳಗಿನ ಕುರಿತಾಗಿಯೆ ಬರೆದಿರುವ ಕವಿತೆಗಳ ಸಂಖ್ಯೆ ಒಂದು ಸಾವಿರಕ್ಕಿಂತಲೂ ಮಿಗಿಲಾಗಿದೆ ಎಂಬುದು ಹೆಮ್ಮೆಯ ವಿಷಯ. 

ಅವರ ನಿಸರ್ಗ ವರ್ಣನೆ ಯ ಕೆಲ ಸಾಲುಗಳು ಹೀಗಿವೆ..


ಹಾಡ್ಯಾವೊ ಬೆಳ್ಳಿ ಕಿರಣ ಓಡೋಡಿ ಬಂದು ನಿಂದು..

 ಹೊಳ್ಳೆತೆ ಮೊಗವು ಚೆಂದ ನಗಿಗಡಲು ಉಕ್ಕಿ ಮೆರ್ದು..


ಹೊಳೆವ ಬೆಳ್ಳಿ ತಾರೆ ಅಲ್ಲಿ ಬಾನ ಮಡಿಲು ಚೆಂದ.. 

ನಲಿವ ಬಳ್ಳಿ ಬಳುಕಿ ಇಲ್ಲ. ಇಳೆಯ ಗುಡಿಗೆ ಅಂದ..


ಹೀಗೆ ಪ್ರತಿ ಪದ್ಯ ಓದುವಾಗ ನಿಸರ್ಗ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.


ಬೆನ್ನುಡಿ ಬರೆದ ದತ್ತಗುರು ಕಂಠಿ ರವರ ಮಾತಿನಂತೆ  

ನಮ್ಮ ಸಾರಸ್ವತ ಲೋಕದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ದಿನೇಶ.ಎನ್.ಅಮ್ಮಿನಳ್ಳಿ  ಯವರು, ಮೃದು ಸ್ವಭಾವ, ಮಿತ ಭಾಷಿ, ಅವರ ಪ್ರಥಮ ಕವನ ಸಂಕಲನ 'ಸ್ವರ್ಗ ನಿಸರ್ಗ ದಲ್ಲಿ ಸೌಮ್ಯ-ಸಂಸ್ಕಾರಯುತ ಕಾವ್ಯಧಾರೆ ಸ್ಪುರಣಗೊಂಡಿದೆ. ಸಂಪದ್ಭರಿತ ಬೆಳಗಿನ ಮಡಿಲ ಬೆಡಗಿನ ಹಾಡುಗಳು ಅನಾವರಣಗೊಂಡಿವೆ. ಬಡತನದ ಕಾರಣ ಶಿಕ್ಷಣ ಕ್ಷೇತ್ರದಲ್ಲಿ ಇಂದಿನ ಕಾಲಕ್ಕನುಗುಣವಾಗಿ ಕಲಿತದ್ದು ಕಡಿಮೆಯೆನಿಸಿದರೂ ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಪಾಂಡಿತ್ಯ, ಶಬ್ಧಗಳನ್ನು ದುಡಿಸಿಕೊಳ್ಳುವ ಕೌಶಲ್ಯತೆ ದಿನೇಶರಿಗಿದೆ. ನನಗೆ ತಿಳಿದ ಹಾಗೆ ದಿನೇಶರ  ಕಾವ್ಯ ಸಂಪತ್ತು ಈಗಾಗಲೇ ನೂರಾರು ಕವಿಗೋಷ್ಠಿಗಳಲ್ಲಿ  ಆಕಾಶವಾಣಿಯಲ್ಲ, ದೂರದರ್ಶನದಲ್ಲಿ  ಸ್ಥಳೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಒಮ್ಮೆಲೆ ಹತ್ತು ಸಂಕಲನಕ್ಕಾಗುವಷ್ಟು ಕಾವ್ಯ ಸರಕು ಅವರಲ್ಲಿದ್ದರೂ ಸದ್ಯ ಒಂದಕ್ಕೆ ಮಾತ್ರ ಬಿಡುಗಡೆಯಾಗುವ ಸುಯೋಗ. ಸಾಹಿತ್ಯದ ಬಹುತೇಕ ಎಲ್ಲ ಪ್ರಾಕಾರಗಳಲ್ಲಿ ಕೈಯಾಡಿಸಿದರೂ ಕಾವ್ಯ ರಚನೆಯೆಂದರೆ, ಅಪರಿಮಿತ ಆಸಕ್ತಿ ಮತ್ತು ಸಾಹಿತ್ಯ ಭಕ್ತಿ, ಇಂದಿನ ಯುವ ಬರಹಗಾರರಿಗೆಲ್ಲ ಮಾದರಿಯೆನಿಸುವ ಅವರ ಕೈಂಕರ್ಯ ಅಮೋಘ ಮತ್ತು ಅದ್ಭುತ. 

ನೇಸರ ದಿನೇಶ್ ರವರ ಈ ಕೃತಿ ಕಂಡು ಮೊದಲು ಸಂತಸಗೊಂಡವನು‌ ನಾನು  .ಇವರ ಪುಸ್ತಕವು ಕನ್ನಡ ಪುಸ್ತಕ ಪ್ರಾಧಿಕಾರ ದ ಸಹಾಧನ ಪಡೆದ ಕೃತಿಯಾಗಿದೆ.ಕನ್ನಡಿಗರು ಇವರ ಪುಸ್ತಕ ಕೊಂಡು ಓದಬೇಕಿದೆ.ಈ ವರ್ಷ ಅವರ ಹಲವು ಕೃತಿಗಳು ಬೆಳಕು ಕಾಣಲಿ ಎಂದು ಹಾರೈಸುವೆ.


ಪುಸ್ತಕದ ಹೆಸರು: ಸ್ವರ್ಗ ನಿಸರ್ಗ

ಕವಿ:ದಿನೇಶ್ ಎನ್ ಮಡಿವಾಳ

ಪ್ರಕಾಶನ: ದಿನಾ ಪ್ರಕಾಶನ .ಅಮ್ಮಿಹಳ್ಳಿ

ಬೆಲೆ: ೧೦೦


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


ಅರ್ಧ ಸತ್ಯ .ಪುಸ್ತಕ ವಿಮರ್ಶೆ.


 



ಅರ್ಧ ಸತ್ಯ . ವಿಮರ್ಶೆ


ಮಾಕೋನಹಳ್ಳಿ ವಿನಯ್ ಮಾಧವ್ ರವರ ಅರ್ಧ ಸತ್ಯ ಒಂದು ಉತ್ತಮ ಕಥಾ ಸಂಕಲನ .ಇವರ ಕಥಾ ಸಂಕಲನ ಓದುತ್ತಾ ಅಪರಾದ ಜಗತ್ತಿನ ಪೂರ್ಣ ಸತ್ಯ ನಮಗೆ ಗೋಚರವಾಗುತ್ತದೆ .ಕೆಲ ಗಣ್ಯ ವ್ಯಕ್ತಿಗಳ ಮತ್ತು ಸ್ವಘೋಷಿತ ಮಾಹಾನ್ ನಾಯಕರ ಗೋಸುಂಬೆ ತನ ಬೆಳಕಿಗೆ ಬರುತ್ತದೆ.


ವಿನಯ್ ಮಾಧವ್ ರವರು

ಹುಟ್ಟಿದ್ದು, ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ.ಮೈಸೂರು, ಕಾರ್ಕಳ, ಉಡುಪಿ ಮತ್ತು ಶಿವಮೊಗ್ಗಗಳಲ್ಲಿ ಶಾಲಾ, ಕಾಲೇಜುಗಳಿಗೆ ಹೋಗಿ,ಓದಿದರೂ 

ಪದವಿ ವಂಚಿತರಾದರು.1989ರಲ್ಲೇ ಬೆಂಗಳೂರಿಗೆ ಬಂದರು.

 1994ರವರೆಗೆ ಪತ್ರಿಕೋದ್ಯಮದ ಬಗ್ಗೆ ಯಾವುದೇ ಜ್ಞಾನವಿಲ್ಲದವರು. 1996ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದರು . ಅವರ ಪತ್ರಕರ್ತರ ಜೀವನದ  ಅನುಭವದ ಮೂಸೆಯಲ್ಲಿ ಅರ್ಧ ಸತ್ಯ ಪುಸ್ತಕದ ಬಹುತೇಕ ಕಥೆಗಳು ಮೂಡಿ ಬಂದಿವೆ .

ಸೆಲೆಬ್ರಿಟಿ ಕ್ರೈಂ ರಿಪೋರ್ಟರ್. ಆದವರು  ಯಾವ ಸುದ್ದಿಯ ಹಿಂದೆ ಬೇಕಾದರೂ ಹೋಗಬಹುದು .ಯಾವ ಅಪರಾಧ ಸುದ್ದಿಯೂ ಅವರ  ಕಣ್ಣಪ್ಪಿಸಿ ಹೋಗೋಕೆ ಸಾಧ್ಯನೇ ಇಲ್ಲ. ವೇಶ್ಯಾವಾಟಿಕೆ, ಡ್ರಗ್ಸ್, ಕೊಲೆ, ಅಂಡರ್ವರ್ಲ್ಡ್ ಯಾವುದಾದರೂ ಸರಿ. ಯಾವ ಪೋಲಿಸ್ ಅಧಿಕಾರಿಯ ಹತ್ತಿರ ಬೇಕಾದರೂ ಘಂಟೆಗಟ್ಟಲೆ ಕುಳಿತು ಮಾತನಾಡಿ, ತಮಗೆ ಬೇಕಾದ ಸುದ್ದಿ ಹೊರ ತರಬಲ್ಲರು .ಆ ಹಿನ್ನೆಲೆಯಲ್ಲಿ ಈ ಕಥಾಸಂಕಲನ  ಗಮನ ಸೆಳೆಯುತ್ತದೆ.


 ಅರ್ಧ ಸತ್ಯ ಕಥೆಯ ಇಡೀ ಕಥಾ ಸಂಕಲನದ ದೊಡ್ಡ ಕಥೆ ಮತ್ತು ಕುತೂಹಲಕರ ತಿರುವುಗಳನ್ನು ಹೊಂದಿದ ಆಸಕ್ತಿ ಕೆರಳಿಸುವ ಕಥೆಯಾಗಿದೆ. ಈ ಕಥೆಯನ್ನು ಓದುವಾಗ ಒರ್ವ ವಿವಾದಿತ ಸ್ವಾಮೀಜಿಯವರು ನಮ್ಮ ಕಣ್ಣ ಮುಂದೆ ಬಂದರೆ ಅದು ಮಾಧ್ಯಮಗಳು ಆ ಕಾಲದಲ್ಲಿ ನೀಡಿದ ಬಹುವಾದ ಪ್ರಚಾರವೂ ಒಂದು ಕಾರಣ. ಇನ್ನುಳಿದ ಕಥೆಗಳಾದ ಪ್ರಮೋಶನ್,ಪರೀಕ್ಷೆ, ಕನಿಷ್ಠ ಬಿಲ್ಲೆ,ಅತ್ಯಾಚಾರದ ಸುಳಿ,ನಕ್ಷತ್ರಗಳು, ಮುಂತಾದವು ಉತ್ತಮ ನಿರೂಪಣೆ ಮತ್ತು ತಂತ್ರಗಳ ಮೂಲಕ ಗಮನ ಸೆಳೆಯುತ್ತವೆ.



ಪುಸ್ತಕದ ಹೆಸರು: ಅರ್ಧ ಸತ್ಯ 

  ಲೇಖಕರು:ಮಾಕೋನಹಳ್ಳಿ ವಿನಯ್ ಮಾಧವ್

 ಬೆಲೆ:150.00

ಪ್ರಕಾಶಕರು : ಸಾವನ್ನ ಪ್ರಕಾಶನ 


28 ಫೆಬ್ರವರಿ 2022

ಅಂತರಂಗ


*ಅಂತರಂಗ*


ಹೀಗೀಗ ಹೆಚ್ಚಾಗುತ್ತಿದೆ ಅಂತರ ,

ಎಲ್ಲೋ ಒಂದೆಡೆ ಅನುಮಾನ.

ಪ್ರೀತಿಸುವನೇನು ನನ್ನನೇ

ನನ್ನ ಇನಿಯ ರಂಗ |

ತಾಳ್ಮೆಯಿಂದ ಕಾಯುವೆನು 

ಎಂದಾದರೂ ಅರಿತೇನು

ಅವನ ಅಂತರಂಗ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ