17 ಜನವರಿ 2022

ಮಹಿಷನಾಗಿ ಸಿಹಿಜೀವಿ .ಆತ್ಮಕಥೆ ಭಾಗ ೨೨


 

ಮಹಿಷನಾಗಿ ಸಿಹಿಜೀವಿ.ಆತ್ಮಕಥೆ ೨೨

ನಾಟಕ ಸಂಗೀತ ಕಲೆ ಎಂದರೆ ನನಗೆ ಬಾಲ್ಯದಿಂದಲೂ ಬಲು ಆಸಕ್ತಿ ನಾನು ಮೊದಲು ನೋಡಿದ ನಾಟಕ ಶ್ರೀ "ದೇವಿ ಮಹಾತ್ಮೆ" ಅರ್ಥಾತ್ "ರಕ್ತಬಿಜಾಸುರ ವಧೆ" ಆಲೂರು ಪುಟ್ಟಾಚಾರ್ ಅವರು ಬರೆದು ನಿರ್ದೇಶಿಸಿದ ಆ ನಾಟಕ ನನಗೆ ಈಗಲೂ ಅಚ್ಚು ಮೆಚ್ಚು.

ಬಹುತೇಕ ಅನಕ್ಷರಸ್ಥರಿಗೆ ಪುಟ್ಟಾಚಾರ್ ರವರು ನಾಟಕ ಹೇಳಿಕೊಡುತ್ತಿದ್ದುದನ್ನು ನೋಡಲು ನಾವು ಪ್ರತಿದಿನ ರಾತ್ರಿ ಪ್ರಾಕ್ಟೀಸ್ ನೋಡಲು ಯರಬಳ್ಳಿಯ ರಂಗಪ್ಪನ ಗುಡಿಗೆ ಹೋಗುತ್ತಿದ್ದೆವು. ಅಲ್ಲಿ ನಮಗೆ ಹಾಸ್ಯ ಕುರುಕ್ಷೇತ್ರ ನಾಟಕದ  ಪ್ರಸಂಗಗಳಂತೆ ಕೆಲ ಅಮೂಲ್ಯವಾದ ಪ್ರಸಂಗಗಳನ್ನು ನೋಡಿ ಪುಕ್ಕಟೆ ಮನರಂಜನೆಗೆ ಕೊರತೆಯಿರುತ್ತಿರಲಿಲ್ಲ. ಮೊದ ಮೊದಲು ಹಾಡು ಹಾಡಲು ಬರದೇ , ಮಾತುಗಳನ್ನು ಸರಿಯಾಗಿ ಆಡದೆ ಹಾಸ್ಯ ಪಾತ್ರಗಳಂತೆ ಕಾಣುವ ಕಲಾವಿದರು ದೇವಿಯ ಕೃಪೆಯೋ ಎಂಬಂತೆ    ನಾಟಕದ ದಿನ ಹತ್ತಿರ ಬಂದಂತೆ ಪಾತ್ರಧಾರಿಗಳು ಉತ್ತಮವಾಗಿ ಹಾಡುಗಳು ಮತ್ತು ಮಾತುಗಳನ್ನು ಹೇಳುತ್ತಿದ್ದರು. ಅದಕ್ಕೆ ಹೇಳೋದು ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಪೆಕ್ಟ್  ಎಂದು .

ನಾಟಕದ ದಿನ ಹತ್ತೂವರೆಗೆ ನಾಟಕ ಶುರುವಾದರೆ ನಾನು ಮತ್ತು ನನ್ನ ಗೆಳೆಯರು  ಸಂಜೆ ಏಳು ಗಂಟೆಗೆ ಚಾಪೆ ತೆಗೆದುಕೊಂಡು ಹೋಗಿ ಸ್ಟೇಜಿನ ಮುಂದೆ ಹಾಸಿ ನಾಟಕ ನೋಡಲು ಕುಳಿತುಬಿಡುತ್ತಿದ್ದೆವು.

ಒಂ ನಮೋ ಭವಾನಿ ತಾಯೇ..... ಎಂಬ ಪ್ರಾರ್ಥನೆಯ ಮೂಲಕ ಅರಂಭವಾಗುವ ನಾಟಕದ ಮೊದಲ ಸೀನ್ ಕಶ್ಯಪ ಬ್ರಹ್ಮ ನ ಅರಮನೆಯಲ್ಲಿ ನಾರದರ ಭೇಟಿಯ ಸಂಭಾಷಣೆ ಎಲ್ಲರ ಸೆಳೆಯುತ್ತಿತ್ತು. ರಕ್ತ ಬಿಜಾಸುರ, ಮಹಿಷಾಸುರ, ಶುಂಭ ,ನಿಶುಂಭರ ಆರ್ಭಟಗಳು, ಶ್ರೀದೇವಿ, ಶ್ರೀಕೃಷ್ಣ, ಬ್ರಹ್ಮ, ಮತ್ತು ಮಹೇಶ್ವರ ಇವರ ಸೌಮ್ಯ ಸ್ವಭಾವದ ಅಭಿನಯ ನೋಡುತ್ತಾ ನಿಜಕ್ಕೂ ನಾವೆಲ್ಲರೂ ಭಕ್ತಿ ಪರವಶದಿಂದ ನಾಟಕ ನೋಡುತ್ತಿದ್ದೆವು .ಶ್ರೀ ದೇವಿ ಪ್ರತ್ಯಕ್ಷವಾಗುವ ಸೀನ್ ನಲ್ಲಿ ರಂಗಸ್ಥಳದ ಮುಂದಿನ ಎಲ್ಲಾ ಪ್ರೇಕ್ಷಕರು ತಮಗರಿವಿಲ್ಲದೇ ಕೈಜೋಡಿಸಿ ವಂದಿಸುತ್ತಿದ್ದೆವು.

ನಾಟಕ ಮುಂದುವರೆದಂತೆ ದೇವಿಯು ಒಬ್ಬೊಬ್ಬ ಅಸುರರ ಸಂಹಾರ ಮಾಡುತ್ತಾ ಕೊನೆಯದಾಗಿ ರಕ್ತಬಿಜಾಸುರನ ಸಂಹಾರ ಮಾಡುವಾಗ ಮೂಡಣದಲಿ ಸೂರ್ಯ ಉದಯಿಸುವ ಲಕ್ಷಣ ಗೋಚರಿಸುತ್ತಿತ್ತು.

ನಾಟಕದ ನಂತರದ ದಿನ ನಾವು ಗೆಳೆಯರೆಲ್ಲಾ  ಸೇರಿ ರಂಗಪ್ಪನ ಗುಡಿಯಲ್ಲಿ ಕಲೆತು ಕಟ್ಟಿಗೆಯ ಗದೆ, ಬಿಲ್ಲು ಬಾಣ ಮಾಡಿಕೊಂಡು ನಾವೇ ಹಾಡುತ್ತಾ .ಮಾತು ಹೇಳುತ್ತಾ ನಾಟಕ ಆಡುತ್ತಿದ್ದೆವು . ಸೀನ್ , ಹಾರ್ಮೋನಿಯಂ , ಪ್ರೇಕ್ಷಕರು ಮಾತ್ರ ಇರುತ್ತಿರಲಿಲ್ಲ!

ಅಂದು ಹುಡುಗರ ಆಟವಾಗಿ ಆಡಿದ ದೇವಿ ಮಹಾತ್ಮೆ ನಾಟಕದಲ್ಲಿ ನಾನು ದೊಡ್ಡವನಾದ ಮೇಲೆ ಮಹಿಷಾಸುರ ಪಾತ್ರವನ್ನು ಮಾಡುತ್ತೇನೆಂದು ಕನಸಲ್ಲೂ ಎಣಿಸಿರಲಿಲ್ಲ.
ಮೊನ್ನೆ ನನ್ನ ಕಿರಿಯ ಮಗಳು ನಾನು ಅಭಿನಯಿಸಿದ ಮಹಿಷಾಸುರ ಪಾತ್ರದ ಪೋಟೊ ನೋಡಿದಾಗ ಇದೆಲ್ಲವೂ ನೆನಪಾಯಿತು.

ಸಿಹಿಜೀವಿ.
ಸಿ ಜಿ ವೆಂಕಟೇಶ್ವರ

ಸಿಹಿಜೀವಿಯ ಹನಿ


 #ಹಾಸ್ಯಬರಹ 


#ಸಿಹಿಜೀವಿಯ_ಹನಿ


ಬಹಳ ಸಲ ಅವಳು

 ನನಗೆ ಕೊಡುವ 

ಸಲಹೆಗಳು 

ಸಮಯೋಚಿತ| 

ಅವುಗಳಲ್ಲಿ ಬಹುತೇಕ

 ಅದು ತಾ. ..ಇದು ತಾ. ..||


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ .

16 ಜನವರಿ 2022

ಮಹಾಬಯಲು. ವಿಮರ್ಶೆ



ಮಹಾಬಯಲು .ಕೃತಿ ವಿಮರ್ಶೆ.


  ವೃತ್ತಿಯಲ್ಲಿ ವೈದ್ಯರಾದ ಡಾ. ಎಸ್ ಪರಮೇಶ್ ರವರು ನಡೆದಾಡುವ ದೇವರಾದ ಶ್ರೀ ಶಿವಕುಮಾರ ಸ್ವಾಮೀಜಿರವರ ಕುರಿತಾದ ಪುಸ್ತಕ "ಮಹಾಬಯಲು" ಓದುತ್ತಿದ್ದರೆ ಸ್ವಾಮೀಜಿಯವರು ನಮ್ಮ ಪಕ್ಕ ಕುಳಿತು ಮಾತನಾಡುವ ಅನುಭವವಾಗುತ್ತದೆ.


ಲೇಖಕರು ಹತ್ತು ವರ್ಷದ ಬಾಲಕನಿದ್ದಾಗಿನಿಂದ ಅವರು ಶಿವೈಕ್ಯವಾಗುವವರೆಗೆ ಅವರೊಂದಿಗೆ ಒಡನಾಡಿದ ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.



ಶ್ರೀಗಳ    ದಿನಚರಿಯೇ ಅಚ್ಚರಿ! ಸೂರ್ಯನ ಹಾಗೆ ಬದಲಾವಣೆ ಆಗದ ಹಾಗಿರುತ್ತಿತ್ತು. ಬೆಳಗಿನ ಜಾವ 2.30 ಎಚ್ಚರವಾಗಿ ರಾತ್ರಿ 11 ಗಂಟೆಯವರೆಗೂ ನಿರಂತರವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಎದ್ದ ತಕ್ಷಣ ಲಘು ವ್ಯಾಯಾಮ, ಧ್ಯಾನ ಮಾಡಿ ಸ್ನಾನಪೂಜಾದಿ ಶಿವಯೋಗ ಮಾಡಿ ನಂತರ ಕಛೇರಿಗೆ ಬಂದು ದಾಸೋಹ, ಶಿಕ್ಷಣ ಸಂಸ್ಥೆಗಳ ಬಗ್ಗೆ ವಿಚಾರ ಮಾಡಿ ಭಕ್ತರ ಭೇಟಿ ಮಾಡಿ ನಂತರ ಹೊರಗಿನ ಪೂಜಾ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು. ಸಂಜೆಗೆ ಎಲ್ಲಾ ಜಮೀನುಗಳಿಗೆ ಹೋಗುವಂತಹದ್ದು. ಶ್ರಮದಾನ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ನ೦ತರ ಸಂಜೆಯ ಸಾಮೂಹಿಕ ಪ್ರಾರ್ಥನೆಗೆ ಎಂತಹ ಬಿಡುವಿಲ್ಲದ ವೇಳೆಯಲ್ಲೂ ಹಾಜರಾಗಿ ಮಕ್ಕಳಿಗೆ ಪ್ರಾರ್ಥನೆಯ ಮಹತ್ವ ತಿಳಿಸುತ್ತಿದ್ದರು. ನಂತರ ಭದ್ರಾಸನದಲ್ಲಿ ಕುಳಿತು ಬಂದ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದರು. ಬಂದಂಥವರಿಗೆ ಅವರ ಕಷ್ಟ ಸುಖಗಳನ್ನ ಕೇಳಿ ಆಶೀರ್ವದಿಸುತ್ತಿದ್ದರು. ರಾತ್ರಿ 9 ರ ನಂತರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ನಂತರ ಶಿವಪೂಜೆ ಪ್ರಸಾದ ಸ್ವೀಕರಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಎಂದು  ಶ್ರೀಗಳ ಬಗ್ಗೆ ಪ್ರಸ್ತುತ ಮಠದ ಸ್ವಾಮೀಜಿ ಗಳಾದ ಸಿದ್ದಲಿಂಗ ಮಹಾಸ್ವಾಮಿಗಳು  ನೀಡಿರುವ ವಿವರಣೆ ಇಂದಿನ ಸರ್ವರಿಗೂ ಮಾದರಿ .


ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಡಾ.ಗೋ .ರು .ಚ ರವರು 

ಸಿದ್ಧಗಂಗಾ ಕ್ಷೇತ್ರವನ್ನು ಲೋಕಸೇವೆಯ ಮಹಾಮಣಿಹದ ಸೋಜಿಗದ ಕೇಂದ್ರವನ್ನಾಗಿಸಿದ ಈ ಕಾಯಕಯೋಗಿಯನ್ನು, ದಾಸೋಹದ ದಿವ್ಯವನ್ನು, ಅನುಭಾವದ ಅನಂತವನ್ನು, ಪಾವಿತ್ರ್ಯತೆಯ ಪಾದುಕೆಯನ್ನು, ಸಂಕಲ್ಪಸಿದ್ಧಿಯ ವಾಕ್ಕನ್ನು, ನೇಗಿಲಯೋಗದ ಋಷಿಯನ್ನು, ಜ್ಞಾನಯೋಗದ ಜ್ಯೋತಿಯನ್ನು, ಸಕಲ ಜೀವರಾಶಿಯ ಲೇಸನ್ನು, ನಿಸರ್ಗಪ್ರೀತಿಯ ಸಾಗರವನ್ನು, ಜೀವಾನುಕಂಪದ ಆಗರವನ್ನು, ಜನಪ್ರೇಮದ ಜಂಗಮವನ್ನು, ಗಂಭೀರ ಚಿಂತನೆಯ ಘನವನ್ನು, ಮಕ್ಕಳ ಪಾಲಿನ ಕಕ್ಕುಲತೆಯನ್ನು, ಅನಾಥರ ಬಗೆಗಿನ ಕಾರುಣ್ಯವನ್ನು, ಶಿಕ್ಷಣಸೇವೆಯ ಶೈಲವನ್ನು, ಸರ್ವಸಮಾನತೆಯ ಸಮದರ್ಶಿಯನ್ನು ಶರಣ ಸಂಸ್ಕೃತಿಯ ಸಾಕಾರವನ್ನು ಕುರಿತು ಯಾರು ಎಷ್ಟು ಬರೆದರೂ ಸಾಲದು, ಪೂಜ್ಯರ ಬದುಕು ಅಳೆಯಲಾಗದ ಆಕಾಶ, ಎಣಿಸಲಾಗದ ನಕ್ಷತ್ರ; ಆದರೂ ಅವರ ಬಗೆಗೆ ಶ್ರದ್ಧಾಭಕ್ತಿಯಿದ್ದವರು ತಮ್ಮ ತಮ್ಮ ಶಕ್ತಿಗೆ ಸಾಮರ್ಥವಿದ್ದಷ್ಟು ಬರೆದಿದ್ದಾರೆ ಹಾಗೂ ಪ್ರಕಟಿಸಿದ್ದಾರೆ. ಆ ಎಲ್ಲ ಸಾಹಿತ್ಯದಲ್ಲಿ ಪೂಜ್ಯರ ಬದುಕಿನ ಬಹುತೇಕ ಸಂಗತಿಗಳು ದಾಖಲೀಕರಣವಾಗಿವೆ.ಎಂದಿರುವರು


ನೂರಾ ಅರವತ್ತು ಪುಟಗಳ ಈ ಕೃತಿಯಲ್ಲಿ ಮೂವತ್ತೇಳು ಅಧ್ಯಾಯಗಳಿದ್ದು ,ಲೇಖಕರು ತಾವು ಕಂಡ  ಶ್ರೀಗಳ ಬಗ್ಗೆ  ಮಾಹಿತಿಯನ್ನು ಹಂಚಿಕೊಂಡಿರುವರು.


 ತಾಯಿಗೆ ಮಗು ಕಾದಂತೆ ಕಾಯುತ್ತಾ ನಿಂತಿತ್ತು ನಮ್ಮೂರು ಎಂಬ ಅಧ್ಯಾಯದಲ್ಲಿ ಅವರು ಮೊದಲು ಶ್ರೀಗಳ ಭೇಟಿ ಮಾಡಿದ ಚಿತ್ರಣ ನೀಡಿರುವರು.   ಜಾತ್ರೆ ಗೆ ಬಂದಾಗ ಜಾಗವಿರದೆ   ಶ್ರೀಗಳ ದರ್ಶನದ ಮಂಚದ ಕೆಳಗೆ ಮಲಗಿದ್ದೆವು ಎಂಬ ಅಧ್ಯಾಯದಲ್ಲಿ ತಮ್ಮ ಅದೃಷ್ಟದ ಬಗ್ಗೆ ಉಲ್ಲೇಖ ಮಾಡಿರುವರು.

ಮಠದ ಆಶ್ರಯ ಅರಸಿ ಬರುವ  ಪ್ರತಿಯೊಂದು ಮಗುವಿನ ಅಡ್ಡಿಷನ್ ಫಾರಂಗೆ ಸಹಿ ಹಾಕುತ್ತಿದ್ದ ಶ್ರೀಗಳು  ಮಕ್ಕಳಿಗೆ ಹೇಳುವ ಬುದ್ದಿ ಮಾತು ಇಂದಿಗೂ ಪ್ರಸ್ತುತ.


ಇನ್ನೂ ಈ ಕೃತಿಯಲ್ಲಿ ನನಗೆ ಬಹಳ ಇಷ್ಟವಾದ ಅಧ್ಯಾಯಗಳೆಂದರೆ 

 'ಬುದ್ದೀ' ಅನ್ನೋದ್ರಲ್ಲಿ 'ಅಮ್ಮ' ಎನ್ನುವ ಕೂಗಿತ್ತು,

ಭಕ್ತಿಯಿಂದ ನೀಡಿದ ಪೊರಕೆ ದೇವರ ಗುಡಿ ಮುಟ್ಟಿತ್ತು, ಕಾಳುಗಳ ಸಾಂಬಾರ್' ಎಂದರೆ ಶ್ರೀಗಳಿಗೆ ಇಷ್ಟ,

ಮಿತಿಯಾದ ಆಹಾರವೇ ಕಾಯಕದ ಶಕ್ತಿ,  ಆರ್ಬಿಐ ಅಧಿಕಾರಿಗಳೇ ತಬ್ಬಿಬ್ಬಾಗಿದ್ದರು!

 ಒಂದರಿಂದ ಇನ್ನೊಂದು ಕೆಲಸಕ್ಕೆ ತೊಡಗುವುದೇ ವಿಶ್ರಾಂತಿ, ಇಷ್ಟೊಂದು ಕಾಣಿಕೆ ನೀಡಿ ನಿನಗೇನು ಮಾಡುತ್ತೀಯಾ?

 ಹಳೆಯ ಮಠದಲ್ಲಿ ಆಗುವ ಸಣ್ಣ ಬದಲಾವಣೆಯನ್ನೂ ಸಹಿಸುತ್ತಿರಲಿಲ್ಲ! ಶ್ರೀಗಳಿಗೆ ಎಂಡೋಸ್ಕೋಪಿ ಮಾಡಲು ನಡೆದ ವ್ಯಾಪಕ ಚರ್ಚೆ,  ಹಳೆಯ ಮಠ ಮಿನಿ ಐಸಿಯುವಿನಂತೆ ಬದಲಾಗಿತ್ತು! 


ಇದರ ಜೊತೆಗೆ ಶ್ರೀಗಳ ಕಡೆಯ ದಿನಗಳಲ್ಲಿ ಆಸ್ಪತ್ರೆಯಲ್ಲಿ ಕಳೆದ ವಿವರಗಳನ್ನು ಓದುವಾಗ ಮನಸ್ಸಿಗೆ  ಬಹಳ ನೋವಾಗುತ್ತದೆ.ಆದರೂ ಅವರು ಮಾನವ ಕುಲಕ್ಕೆ ನೀಡಿರುವ ಸೇವೆಯನ್ನು ನೆನೆದು ಸಂತಸವಾಗುತ್ತದೆ .ನಮ್ಮ ನಾಡಿನಲ್ಲಿ ಅಂತಹ ಮಹಾಪುರುಷರು ಪುನಃ ಹುಟ್ಟಿ ಬರಲಿ ಎಂಬ ಬಯಕೆಯಾಗುತ್ತದೆ.


ಈ ಪುಸ್ತಕ ಓದುವಾಗ ವಿಷಯಕ್ಕೆ ಪೂರಕವಾದ ರೇಖಾಚಿತ್ರಗಳು ಮತ್ತು ಮುಖಪುಟ ವಿನ್ಯಾಸ ಮತ್ತು ಒಳಪುಟ ವಿನ್ಯಾಸ ನಮ್ಮ ಗಮನ ಸೆಳೆಯುತ್ತವೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಕೋಟೆ ಕುಮಾರ್ ಮತ್ತು ಅವರ ಗೆಳೆಯರಾದ ಗುರುದತ್ ರವರ ಕಲಾಕುಸುರಿ ಪುಸ್ತಕಕ್ಕೆ ಹೊಸ ಮೆರಗು ನೀಡಿದೆ.

ನೀವೂ ಒಮ್ಮೆ ಈ ಮಹಾಬಯಲು ಪುಸ್ತಕ ಓದಿ ಶ್ರೀಗಳ ನೆನಪುಗಳು ನಿಮ್ಮನ್ನು ಹರಸಲಿ.


ಪುಸ್ತಕದ ಹೆಸರು: ಮಹಾಬಯಲು

ಪ್ರಕಾಶನ: ಪರಂಜ್ಯೋತಿ ಪ್ರಕಾಶನ

ಬೆಲೆ: 150 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529