11 ಅಕ್ಟೋಬರ್ 2021

ಮಕ್ಕಳೇಕೆ ಮನೆ ಬಿಟ್ಟು ಹೋದರು?


 


ಮಕ್ಕಳೇಕೆ ಮನೆ ಬಿಟ್ಟು ಹೋದರು?


ಒಂದೇ ದಿನ ಮನೆ ಬಿಟ್ಟು ಹೋದ 7 ವಿಧ್ಯಾರ್ಥಿಗಳು,ಮೊಬೈಲ್ ನೋಡುವುದು ಬಿಟ್ಟು ಓದು ಎಂದಿದ್ದಕ್ಕಾಗಿ ಮಗನ ಆತ್ಮಹತ್ಯೆ , ಶಾಲೆಗಳಲ್ಲಿ ಮಕ್ಕಳ ಅತಿರೇಕದ ವರ್ತನೆಗಳ ಕಂಡು ಶಿಕ್ಷಕರು ಕಂಗಾಲು ,ಖಿನ್ನತೆಗೆ ಜಾರುತ್ತಿರುವ ಮಕ್ಕಳು. ಇಂತಹ  ಹಲವಾರು ಸುದ್ದಿಗಳನ್ನು ಮಾಧ್ಯಮದಲ್ಲಿ ನೋಡಿದಾಗ ಮನಸಿಗೆ ಬಹಳ ನೋವಾಗುತ್ತದೆ. ಈ ಸಮಸ್ಯೆಗಳಿಗೆ ಮೂಲ ಹುಡುಕುತ್ತಾ ಹೊರಟರೆ ಮೊದಲ ಬೆರಳು ಮಹಾಮಾರಿ ಕರೋನ ಕಡೆಗೆ ತೋರಿಸಿದರೆ ಉಳಿದ ಬೆರಳುಗಳು ಶಿಕ್ಷಣ ವ್ಯವಸ್ಥೆ, ಪೋಷಕರು, ಸಮುದಾಯದ ಕಡೆಗೆ ತೋರಿಸುತ್ತವೆ ಎಂಬ ಕಟು ಸತ್ಯ ಒಪ್ಪಿಕೊಳ್ಳಲೇಬೇಕಿದೆ.


ಇತ್ತೀಚಿಗೆ ವರದಿಯಾದ ಪ್ರಕರಣದಲ್ಲಿ  ಮಕ್ಕಳು ಪತ್ರ ಬರೆದಿಟ್ಟು 

"ಓದುವಂತೆ ಒತ್ತಡ ಹೇರುತ್ತಿದ್ದೀರಿ, ಆದರೆ ನಮಗೆ ಆಸಕ್ತಿ ಇಲ್ಲ ಆದ್ದರಿಂದ ಮನೆ ಬಿಟ್ಟು ಹೋಗುತ್ತಿದ್ದೇವೆ"  ಎಂದು ನಾಪತ್ತೆಯಾಗಿದ್ದಾರೆ.

ಪತ್ರದಲ್ಲಿ ಮುಂದುವರೆದು  ಆ ಬಾಲಕರು "ನೀವು ಓದುವಂತೆ ಒತ್ತಾಯ ಮಾಡಿದರೂ ನಮಗೆ ಓದಿನಲ್ಲಿ ಆಸಕ್ತಿ ಇಲ್ಲ. ಕ್ರೀಡೆಯಲ್ಲೇ ಹೊಸ ಜೀವನ ರೂಪಿಸಿಕೊಳ್ಳುತ್ತೇವೆ, ಕ್ರೀಡೆ ಎಂದರೆ ಕಬಡ್ಡಿ ತುಂಬ ಇಷ್ಟ, ಅದರಲ್ಲೇ ಉತ್ತಮ ಹೆಸರು, ವೃತ್ತಿ ಹಾಗೂ ಹಣ ಸಂಪಾದಿಸುತ್ತೇವೆ. ಕ್ರೀಡೆಯಲ್ಲೇ ಉತ್ತಮ ಸಾಧನೆ ಮಾಡಿ ಮತ್ತೆ ವಾಪಸ್ ಬರುತ್ತೇವೆ." ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .


ಈ ಘಟನೆ ಗಮನಿಸಿದಾಗ  ಮಕ್ಕಳು ಓದಲಿ ಎಂದು ಪೋಷಕರು ಅಪೇಕ್ಷೆ ಪಡಯವುದೇ ತಪ್ಪೇ? ಪೋಷಕರಿಗೆ ಅಷ್ಟೂ ಹಕ್ಕಿಲ್ಲವೇ? ಎಂದು ಸಾಮಾನ್ಯವಾಗಿ ಕೇಳುತ್ತೇವೆ .ಓದು ಎಂಬುದು ತಪ್ಪಲ್ಲ ಆದರೆ ಇದನ್ನೇ ಓದು, ಇಷ್ಟೇ ಓದು, ಇದೇ ಕೋರ್ಸ್ ಓದು, ಡಾಕ್ಟರ್ ಆಗಲೇಬೇಕು, 99% ಸ್ಕೋರ್ ಮಾಡಲೇ ಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಿದರೆ ಮಕ್ಕಳೇನು ಮೆಷಿನ್ನಾ? ಅಥವಾ ರೋಬಾಟಾ? ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಮಾದ್ಯಮಗಳು ಕ್ರೀಡಾಕ್ಷೇತ್ರದ ಸಾಧಕರ ಸಾಧನೆ ತೋರಿಸುವುದೇ ತಪ್ಪ? ತಪ್ಪಲ್ಲ ಆದರೆ ಕ್ರೀಡಾ ಕ್ಷೇತ್ರ, ಸಿನಿಮಾ ರಂಗದಲ್ಲಿ ಮಾತ್ರ ದುಡ್ಡು ಮಾಡಬಹುದು , ಅವರು ಮಾತ್ರ ಅತಿಮಾನುಷರು ಎಂದು 24/7 ಅವರ ಬಗ್ಗೆಯೇ ಅವರು ಕುಂತರೂ ,ನಿಂತರೂ ಸೀನಿದರೂ ಇನ್ನೊಂದು ಮಾಡಿದರೂ ತಿರುಗಿಸಿ ತಿರುಗಿಸಿ ತೋರಿಸಿದರೆ ಮಕ್ಕಳಿಗೆ ಆ ಕ್ಷೇತ್ರ ಮಾತ್ರ ಶ್ರೇಷ್ಠ ಎಂದು ಮಕ್ಕಳು ತೀರ್ಮಾನಕ್ಕೆ  ಬರುವುದು ಸಹಜ. ಮಾದ್ಯಮಗಳೂ ಕೇವಲ ಟಿ ಆರ್ ಪಿ ಅಥವಾ ಹಣಕ್ಕಾಗಿ ಕೆಲಸ ಮಾಡದೆ ಸ್ವಲ್ಪ ಮಟ್ಟಿನ ಸಾಮಾಜಿಕ ಬದ್ಧತೆಯನ್ನು ತೋರ್ಪಡಿಸಬೇಕಿದೆ.

ಯಾವುದೂ ಅತಿಯಾಗಬಾರದು . ಮಕ್ಕಳ ಇಷ್ಟ ಕಷ್ಟಗಳ ಕಡೆ ಪೋಷಕರು , ಶಿಕ್ಷಕರು ಸಮುದಾಯಗಳು ಸಹ ಸೂಕ್ಷ್ಮವಾಗಿ ಸ್ಪಂದಿಸಬೇಕಿದೆ.


 ಕೊರೋನಾಸಾಂಕ್ರಾಮಿಕದಿಂದ ಬರೋಬ್ಬರಿ19ತಿಂಗಳಿನಿಂದ ಜಗತ್ತಿನಾದ್ಯಂತ ಶಾಲಾ-ಕಾಲೇಜುಗಳು ಮುಚ್ಚಿದ್ದು ಸದ್ಯ ಈ ಪೈಕಿ ಅರ್ಧ ಶಾಲೆಗಳು ಮಾತ್ರ ಭೌತಿಕ ತರಗತಿಗಳನ್ನು ಆರಂಭಿಸಿವೆ. ಶೇ.34ರಷ್ಟು ಶಾಲೆಗಳು ಭೌತಿಕ ಮತ್ತು ಆನ್ಲೈನ್ ಎರಡೂ ತರಗತಿಗಳನ್ನು ಮುಂದುವರೆಸಿವೆಎಂದುಕೊವಿಡ್-19 ಗ್ಲೋಬಲ್ ಎಜುಕೇಶನ್ ರಿಕವರಿ ಟ್ರಾಕರ್ ತಿಳಿಸಿದೆ.


ಜಾನ್ಸ್ ಹಾಪ್ಟಿನ್ ವಿ.ವಿ, ವಿಶ್ವಬ್ಯಾಂಕ್ ಮತ್ತು ಯುನಿಸೆಫ್ ಜಂಟಿಯಾಗಿ 200ಕ್ಕೂ ಹೆಚ್ಚು ದೇಶಗಳಲ್ಲಿ ಶಾಲೆಗಳನ್ನು ತೆರೆ ಯಲು ರೂಪಿಸಿದ ಯೋಜನೆಯನ್ನು ಆಧರಿಸಿ ಈ ಅಧ್ಯಯನ ವರದಿ ಸಿದ್ಧಪಡಿಸಿವೆ. ವರದಿಯ ಪ್ರಕಾರ ಶೇ.80ರಷ್ಟು ಶಾಲೆಗಳು ನಿರಂತರ ತರಗತಿಗಳನ್ನು ಆರಂಭಿಸಿವೆ. ಈ ಪೈಕಿ ಶೇ.54ರಷ್ಟು ಶಾಲೆಗಳು ಭೌತಿಕ ತರಗತಿಗಳನ್ನು ಆರಂಭಿಸಿವೆ, ಶೇ.34ರಷ್ಟು ಶಾಲೆಗಳು ಭೌತಿಕ, ಆನ್ ಲೈನ್ ಎರಡೂ ರೀತಿಯ ತರಗತಿ ನಡೆಸುತ್ತಿವೆ. ಉಳಿದ ಶೇ.10ರಷ್ಟು ಶಾಲೆಗಳು  ಆನ್ಲೈನ್ ತರಗತಿಯನ್ನೇ ಮುಂದುವರೆಸಿವೆ. ಆನ್ಲೈನ್ ತರಗತಿಗಳು ಎಷ್ಟು ಪರಿಣಾಮಕಾರಿ? ಎಂಬುದು ಹಲವಾರು ಸಮೀಕ್ಷೆಗಳಿಂದ ಬಹಿರಂಗವಾಗಿದೆ.


ಮಕ್ಕಳ ಅನುಚಿತ ವರ್ತನೆ , ವ್ಯಸನಗಳಿಗೆ ಬಲಿಯಾಗುವುದು , ಪೋಷಕರು ಮತ್ತು ಶಿಕ್ಷಕರ ಜೊತೆಯಲ್ಲಿ ಸಂಘರ್ಷ ಏರ್ಪಡಲು,  ಶಾಲೆಗಳಿಂದ ಮಕ್ಕಳು ಬಹುಕಾಲ ದೂರು ಉಳಿಯುವಂತೆ ಮಾಡಿದ್ದು ಕರೋನಾ ಎಂದು ಒಪ್ಪಿದರೂ   ಇದರ ಜೊತೆಗೆ ಪೋಷಕರ ಅನವಶ್ಯಕ ಒತ್ತಡ  ಸಹ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ .


ಇಂತಹ ಸೂಕ್ಷ್ಮ ಕಾಲದಲ್ಲಿ ನಮ್ಮ ಮಕ್ಕಳನ್ನು ಸರಿದಾರಿಗೆ ತರಲು ಮನಶ್ಶಾಸ್ತ್ರಜ್ಞರು, ಶಿಕ್ಷಕರು, ಪೋಷಕರು ಸಮುದಾಯ ಶಿಕ್ಷಣ ಇಲಾಖೆ ಎಲ್ಲರೂ ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

10 ಅಕ್ಟೋಬರ್ 2021

ಕೂಶ್ಮಾಂಡಾದೇವಿ.


 *ಕೂಶ್ಮಾಂಡಾ ದೇವಿಗೆ ನಮನ*


ನವರಾತ್ರಿಯ ನಾಲ್ಕನೇ ದಿನದಿ

ಕೂಶ್ಮಾಂಡಾ ದೇವಿಯ ಭಜಿಸೋಣ

ಆದಿ ಶಕ್ತಿಯ ಕರುಣೆಯ ಪಡೆದು

ನೆಮ್ಮದಿಯ ಜೀವನ ಪಡೆಯೋಣ.


ಸಕಲ ಸೃಷ್ಟಿಯ ಮೂಲರೂಪಿಣಿ

ಆದಿಮಾತೆಗೆ ನಮಿಸೋಣ

ಸಂತಾನ ದೇವತೆ, ಆರೋಗ್ಯದಾತೆಗೆ

ಕೈಮುಗಿದು ವರಗಳ ಬೇಡೋಣ.


ಅನಂತ ಗರ್ಭದ ಬ್ರಹ್ಮಾಂಡ ಸೃಷ್ಟಿಯ

ಅಮ್ಮನ ನಾಮವ ಸ್ಮರಿಸೋಣ 

ತಾರಕಾಸುರರ ಸಂಹಾರ ಮಾಡಿಸಿದ

ಶಾಂತಿದೂತಳಿಗೆ ಶಿರಬಾಗೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

9900925529

ಮಕ್ಕಳ ಮತ್ತು ಯುವಕರ ದುಶ್ಚಟಗಳಿಗೆ ಮದ್ದನ್ನು ಅರೆಯೋಣ.


 

ಮಕ್ಕಳು ಮತ್ತು ಯುವಕರನ್ನು ದುಶ್ಚಟಗಳಿಂದ ದೂರ ಮಾಡೋಣ

ನಾನು ಐದು ವರ್ಷಗಳ ಹಿಂದೆ ಗೌರಿಬಿದನೂರಿನಲ್ಲಿ  ಶಿಕ್ಷಕನಾಗಿ ಕಾರ್ಯ ನಿರ್ವಹಿಸುವಾಗ ಒಂದು ದಿನ ಮಧ್ಯಾಹ್ನ ವಾರ್ಷಿಕ ಪರೀಕ್ಷೆ ನಡೆಯುತ್ತಿತ್ತು . ನಮ್ಮ ಸಹೋದ್ಯೋಗಿ ಶಿಕ್ಷಕಿಯೋರ್ವರು ನನ್ನನ್ನು ಕರೆದು " ಸರ್ ಆ ಹುಡುಗನ ಹತ್ತಿರ ಹೋದರೆ ಏನೋ ವಾಸನೆ ಬರುತ್ತದೆ ನೋಡಿ" ಎಂದರು  ಹೋಗಿ ಗಮನಿಸಿದಾಗ ಆ ಬಾಲಕ ಕುಡಿದಿರುವುದು ಗಮನಕ್ಕೆ ಬಂತು , ಮುಖ್ಯ ಶಿಕ್ಷಕರ ಗಮನಕ್ಕೆ ತಂದು ವಿಚಾರಿಸಲಾಗಿ ಮನೆಯಲ್ಲಿ ಪ್ರತಿದಿನ ಪೋಷಕರ ಜಗಳ ಮತ್ತು ಕೆಟ್ಟ   ಸ್ನೇಹಿತರ ಸಹವಾಸದಿಂದ ಅವನು ದುಶ್ಚಟಕ್ಕೆ ಬಲಿಯಾಗಿರುವುದನ್ನು ಒಪ್ಪಿಕೊಂಡನು. ಅವರ ಪೋಷಕರ ಕರೆಸಿ ಆಪ್ತ ಸಮಾಲೋಚನೆ ಮಾಡಿ ಕಳಿಸಿದೆವು.

ಹೀಗೆ ಇಂದಿನ ದಿನಗಳಲ್ಲಿ ಮಾದ್ಯಮಗಳ ಪ್ರಭಾವ ,ಪೋಷಕರ ನಿರ್ಲಕ್ಷ್ಯ, ಸಮಾಜದ ಪ್ರಭಾವ ,ಸುಲಭವಾಗಿ ಸಿಗುವ ಮೊಬೈಲ್, ನಿಯಂತ್ರಣವಿಲ್ಲದೇ ಅಂತರ್ಜಾಲದಲ್ಲಿ ಸಿಗುವ ಬೇಡವಾದ ವಿಷಯ ವಸ್ತುಗಳು ಮಕ್ಕಳು ಮತ್ತು ಯುವಕರನ್ನು ದುಶ್ಚಟಗಳ ದಾಸರನ್ನಾಗಿ ಮಾಡುತ್ತಿವೆ.
ವಿಪರ್ಯಾಸವೆಂದರೆ ಈ ದುಶ್ಚಟಗಳನ್ನು ಮಕ್ಕಳು ಬೇಗ ಕಲಿತುಬಿಡುವರು. ಆದರೆ ಬಿಡಿಸಲು ಸಮಾಜ, ಶಿಕ್ಷಕರು, ಪೋಲಿಸರು, ಪೋಷಕರು, ಎಲ್ಲಾ ಸೇರಿದರೂ ಆ ಚಟಗಳ ಬಿಡಿಸಲು ಹರ ಸಾಹಸ ಮಾಡಬೇಕಾಗುತ್ತದೆ.

ಹಳ್ಳಿಯ ಅನುಭಾವಿಕರ ಮಾತಲ್ಲಿ ಹೇಳುವುದಾದರೆ ಕಲ್ಲು ತಿಂದ ಕರಗಿಸುವ ವಯಸ್ಸು ಯುವಕರದು. ಇದನ್ನು ಸ್ವಾಮಿ ವಿವೇಕಾನಂದರು ಕಬ್ಬಿಣದ ಮಾಂಸಖಂಡಗಳ ಮತ್ತು ಉಕ್ಕಿನ ನರಗಳ ಹೊಂದಿರುವ ಯುವಕರು ಯಾವುದೇ ದೇಶದ ಆಸ್ತಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ದೇಶದ ಭವಿಷ್ಯದ ಪ್ರಜೆಗಳು, ಪೋಷಕರ ಕನಸುಗಳು ದುಶ್ಟಕ್ಕೆ ಬಲಿಯಾಗಿ ಸಮಾಜಕ್ಕೆ ಹೊರೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ಇದೊಂದು ಸಾಮಾಜಿಕ ಪಿಡುಗಾಗಿ ಪರಿವರ್ತನೆ ಹೊಂದಿರುವುದು ನಮಗೆ ತಿಳಿದೇ ಇದೆ ಈ ಸಮಸ್ಯೆಗೆ ಪರಿಹಾರವನ್ನು ನಾವೆಲ್ಲರೂ ಸೇರಿ ಕಂಡುಕೊಳ್ಳಬೇಕಿದೆ.
ಮಕ್ಕಳು ಮತ್ತು ಯುವಕರು ದಾರಿ ತಪ್ಪದಂತೆ ಪೋಷಕರು ಮೊದಲಿಗೆ  ಎಚ್ಚರಿಕೆ ವಹಿಸಬೇಕು.
ಸರ್ಕಾರಗಳು ಸಹ ಈ ನಿಟ್ಟಿನಲ್ಲಿ ಚಿಂತಿಸಿವೆ ಕರ್ನಾಟಕ ರಾಜ್ಯ ಸರ್ಕಾರ  2012ರಲ್ಲಿ ಯುವ ನೀತಿ ರೂಪಿಸಲಾಗಿತ್ತು.  ವಿವೇಕಾನಂದ ಯುವ ನಿಗಮ ಸ್ಥಾಪಿಸಿದೆ.ಮತ್ತು ಮಕ್ಕಳು ಯುವಕರಿಗೆ ದುಶ್ಟಟಗಳ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ಮತ್ತು ಯುವಕರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಯೂಥ್ ಹೆಲ್ತ್ಲೈನ್, ಟ್ಯಾಲೆಂಟ್ ಬ್ಯಾಂಕ್, ಪೋರ್ಟಲ್, ಫೆಲೋಶಿಪ್ ನೀಡುವ ಕೆಲಸಗಳು ಆಗಬೇಕಿದೆ.
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಡಗ್ಸ್, ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅಪರಾಧ ಮನೋಭಾವ ಹೆಚ್ಚಾಗುತ್ತಿದೆ. ಯುವಕರು ದಾರಿ ತಪ್ಪದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹಾಗೂ ಬೇರೆ ಬೇರೆ ಜವಾಬ್ದಾರಿಗಳಲ್ಲಿ ತೊಡಗಿಕೊಳ್ಳಲು ಅವರ ಕೌಶಲ್ಯಕ್ಕೆ ತಕ್ಕಂತೆ ಅವರಿಗೆ ಸೂಕ್ತವಾದ ತರಬೇತಿಯನ್ನು ಮತ್ತು ಮಾರ್ಗದರ್ಶನ ನೀಡಿ ಅವರಲ್ಲಿರುವ ರಚನಾತ್ಮಕ ಶಕ್ತಿಯನ್ನು ಹೊರಗೆಳೆಯುವ ಕೆಲಸ ಮಾಡಬೇಕಿದೆ.
ಪ್ರತಿಭಾವಂತ ಮಕ್ಕಳು ಮತ್ತು ಯುವಕರಿಗೆ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಬಗ್ಗೆ ಆದ್ಯತೆ ನೀಡಿ ಅವಕಾಶ ಕಲ್ಪಿಸಬೇಕಿದೆ.
ಯುವ ಸಂಘಗಳ ಮೂಲಕ ಕ್ರೀಡೆಯಲ್ಲಿ ತೊಡಗುವಂತೆ ಮಾಡಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವಂತೆ ನೋಡಿಕೊಳ್ಳಬೇಕಿದೆ.

ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಅವಕಾಶಗಳ ಬಗ್ಗೆ ಮತ್ತು ಉನ್ನತವಾದ ಗುರಿಗಳನ್ನು ಹೊಂದಲು ಮನವರಿಕೆ ಮಾಡಿಕೊಡಬೇಕಿದೆ
ಸಾಮಾಜಿಕ ಮೌಲ್ಯಗಳನ್ನು ತಿಳಿಸುವ ಮೂಲಕ ರಾಷ್ಟ್ರೀಯ ಮನೋಭಾವ ಬೆಳೆಸುವುದು, ಅದರ ಮೂಲಕ ಭಾರತೀಯ ಸಂಸ್ಕೃತಿ ರಕ್ಷಣೆ ಮಾಡುವಂತೆ ಪ್ರೇರೇಪಿಸಬೇಕಿದೆ.
ಆರೋಗ್ಯ ಮತ್ತು ಆಹಾರದ ವಿಚಾರದಲ್ಲಿ ಎಚ್ಚರಿಕೆ ಮೂಡಿಸಿ ಕಾಲಕಾಲಕ್ಕೆ ಆಪ್ತ ಸಲಹೆ  ಮತ್ತು ಮಾರ್ಗದರ್ಶನ ನೀಡಬೇಕಿದೆ.

ಮಕ್ಕಳು ಮತ್ತು ಯುವಕರು ನಮ್ಮ ದೇಶದ ಆಸ್ತಿ  ವಿವಿಧ ಕಾರಣದಿಂದಾಗಿ ಅವರು ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳುಮಾಡಿಕೊಳ್ಳುವುದನ್ನು ತಡೆಯಲು ಸಕಾಲದಲ್ಲಿ ಅವರ ಮನ ಪರಿವರ್ತಿಸುವ ಕೆಲಸ ಆಗಬೇಕಿದೆ. ಅವರು ಕೇವಲ ಜನಸಂಖ್ಯೆ ಎಂದು ಭಾವಿಸದೇ ಮಾನವ ಸಂಪನ್ಮೂಲವಾಗಿ ಮಾರ್ಪಡಿಸಬೇಕು ಎಲ್ಲಕ್ಕಿಂತ ಮಿಗಿಲಾಗಿ ಅವರು ಉತ್ತಮ ವ್ಯಕ್ತಿತ್ವ ಉಳ್ಳ ಪ್ರಜೆಗಳನ್ನಾಗಿ ಮಾಡುವಲ್ಲಿ ನಾವೂ ಸಹ ಕೈಜೋಡಿಸಬೇಕಿದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ. ತುಮಕೂರು
9999925529

ಹಾಸನ ವಾಣಿ ೧೦/೧೦/೨೧