30 ಆಗಸ್ಟ್ 2021

ಮಾಲ್ಗುಡಿ ಡೇಸ್


 


ಮಾಲ್ಗುಡಿ ಡೇಸ್ ಅಂದ ತಕ್ಷಣ ಆರ್. ಕೆ  .ನಾರಾಯಣ್, ಶಂಕರ್ ನಾಗ್ ನಮ್ಮ ಕಣ್ಮುಂದೆ ಬಂದು ನಿಲ್ಲುವರು , ದೇಶಾದ್ಯಂತ ಆ ಧಾರಾವಾಹಿ ಮಾಡಿದ ಮೋಡಿ ಎಲ್ಲರಿಗೂ ತಿಳಿದದ್ದೆ.ಅದೇ ಹೆಸರಿನ ಚಿತ್ರವನ್ನು ಮೊನ್ನೆ ಒಂದು ವಾಹಿನಿಯಲ್ಲಿ ನೋಡಿದೆ .ಬಹು ದಿನಗಳ ನಂತರ ಕುಟುಂಬ ಸಮೇತ ಒಂದು ಉತ್ತಮ ಸದಭಿರುಚಿಯ ಚಿತ್ರ ನೋಡಿದ ಸಂತಸ ಮನೆ ಮಾಡಿತು.


ಕಿಶೋರ್ ಮೂಡುಬಿದಿರೆ ಅವರು ಉತ್ತಮ ಕಥೆಯ ಜೊತೆಯಲ್ಲಿ ,ಟೈಟ್ ಆದ ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ.ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ಭರವಸೆಯ ನಿರ್ದೇಶಕ ಲಭಿಸಿದಂತಾಗಿದೆ.


ಲಕ್ಷ್ಮಿ ನಾರಾಯಣ ಎಂಬ  ಪ್ರಖ್ಯಾತ ಕವಿಯ ಪಾತ್ರದಲ್ಲಿ ವಿಜಯರಾಘವೆಂದ್ರ ತನ್ನ ಇಳಿವಯಸ್ಸಿನಲ್ಲಿ ಬರವಣಿಗೆ ವಿದಾಯ ಹೇಳಿ , ಮಗಳ ಜೊತೆ ಅಮೆರಿಕ ಗೆ ಹೋಗಲು ಇಷ್ಟ ಪಡದೇ ಮನೆಬಿಟ್ಟು ಹೊರಡುತ್ತಾರೆ ಅದೇ ಸಮಯದಲ್ಲಿ ,  ಪ್ರಕೃತಿ ಪಾತ್ರಧಾರಿ ಗ್ರೀಷ್ಮ  ತನ್ನ ಬಾಸ್ ನ ಹೆಣ್ಣುಬಾಕತನಕ್ಕೆ ಮಂಗಳಾರತಿ ಎತ್ತಿ ಅವನ ಮುಖದ ಮೇಲೆ ರಾಜೀನಾಮೆ ಚೀಟಿ ಎಸೆದು ಕಾರಿನಲ್ಲಿ ಒಂದು ಲಾಂಗ್ ಜರ್ನಿ ಹೋಗಲು ಒಬ್ಬಂಟಿಯಾಗಿ ಹೊರಟಾಗ ಆಕಸ್ಮಿಕ ಅಪಘಾತದಲ್ಲಿ  ಲಕ್ಷ್ಮಿ ನಾರಾಯಣ ರವರ ಭೇಟಿಯಾಗಿ ಇವರಿಬ್ಬರೂ ಸೇರಿ ಹೊರಟ ಲಾಂಗ್ ಡ್ರೈವ್ ಇಡೀ ಚಿತ್ರ ಆವರಿಸಿಕೊಂಡಿದೆ.


ಲಕ್ಷ್ಮಿ ನಾರಾಯಣ ರವರು ತನ್ನ ಬಾಲ್ಯದ ಗೆಳತಿಯನ್ನು ನೋಡಲು ಮಾಲ್ಗುಡಿಗೆ ಹೊರಡುವರು ಈ ಪಯಣದಲ್ಲಿ ಪ್ರಕೃತಿ ಮತ್ತು ಲಕ್ಷ್ಮಿ ನಾರಾಯಣ ರವರ ಪ್ರೇಮ ಕಥೆಗಳ ಪ್ಲಾಶ್ ಬ್ಯಾಕ್ ನೋಡಲು ನಮಗೆ ಲಭ್ಯ. ಪ್ರಕೃತಿಗೆ ಅವಳ ಗೆಳೆಯ ವಿಜಯ್ ಸಿಕ್ಕನೇ? ನಮ್ಮ ಕವಿಗೆ  ಅವರ ಬಾಲ್ಯದ ಗೆಳತಿ  ಲಿನೆಟ್ಟಾ   ಸಿಕ್ಕಳೇ? ಇಲ್ಲವೆ ಎಂಬುದನ್ನು ನೀವು ಚಿತ್ರ ನೋಡಿಯೇ ತಿಳಿಯಬೇಕು.

ಬೆಂಗಳೂರಿನಿಂದ ಮಾಲ್ಗುಡಿಗೆ ಸಾಗುವ ಓಪನ್ ಎಲ್ಲೊ ಕಲರ್  ಗಾಡಿಯಲ್ಲಿ ಪ್ರೇಕ್ಷಕರೇ ಒಂದು ಟ್ರಿಪ್ ಹೋದಂತಿರುತ್ತದೆ, ಉತ್ತಮ ಛಾಯಾಗ್ರಹಣ ಕಣ್ಣಿಗೆ ಹಬ್ಬ .ಶೃಂಗೇರಿ, ಆಗುಂಬೆ ,ಪಶ್ಚಿಮ ಘಟ್ಟ , ಪಾಂಡಿಚೆರಿ ಯ ದೃಶ್ಯಗಳನ್ನು ಚಿತ್ರದಲ್ಲಿ ನೋಡಿಯೇ ಸವಿಯಬೇಕು.

ಗಗನ್ ಬಡೇರಿಯಾ ಅವರ ಸಂಗೀತ ಗಮನ ಸೆಳೆಯುತ್ತದೆ . ಸಂಚಿತ್ ಹೆಗಡೆ ಹಾಡಿರುವ 

ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.


ಪ್ರತಿಯೊಬ್ಬರಿಗೆ ಬಾಲ್ಯದ ತಮ್ಮದೇ ಆದ ಸಿಹಿಕಹಿ ನೆನಪುಗಳು ಸಾಮಾನ್ಯ. ಅಂತಹ ನೆನಪುಗಳನ್ನು ಅಗಾಗ್ಗೆ ನೆನಪುಮಾಡಿಕೊಳ್ಳುವೆವು . ಈ ಚಿತ್ರ ನೋಡುವಾಗ 

ಮತ್ತೆ ನಮ್ಮ ಬಾಲ್ಯಕ್ಕೆ ನಮಗರಿವಿಲ್ಲದೆ  ಹೋಗಿ ಬಂದ ಅನುಭವವಾಗುತ್ತದೆ. 

ಚಿನ್ನಾರಿ ಮುತ್ತನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ವಿಜಯ ರಾಘವೇಂದ್ರ ರವರು ಮತ್ತೊಮ್ಮೆ ಪ್ರಶಸ್ತಿ ಪಡೆದರೂ ಅಚ್ಚರಿಯಿಲ್ಲ. ಅರವತ್ತಕ್ಕೂ ಹೆಚ್ಚು ವಯಸ್ಸಿನ ಕವಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.


ಇತರೆ ಪಾತ್ರಗಳು ಸಹ ಮುಖ್ಯ ಪಾತ್ರಕ್ಕೆ ಪೂರಕವಾಗಿವೆ ಆರ್ಯನ್ ಗೌಡ,ಬ್ಯಾಂಕ್ ಜನಾರ್ದನ್, ಶೈಲಶ್ರೀ, ರಿಚರ್ಡ್ ಲೂಯಿಸ್,ವಿದ್ಯಾ ಮೂರ್ತಿ, ಮುಂತಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ..


ಕರೋನಾ ಮೊದಲ ಅಲೆ ಶುರಾವಾದಾಗ ಬಿಡುಗಡೆಯಾದ ಈ ಚಿತ್ರ ಎಲ್ಲಾ ಸಹೃದಯ ಕನ್ನಡಿಗರಿಗೆ ಚಿತ್ರ ಮಂದಿರದಲ್ಲಿ ನೋಡಲು ಸಾದ್ಯವಾಗಲಿಲ್ಲ  ಈಗ ಓಟಿಟಿ ಮತ್ತು ಕಿರುತೆರಯಲ್ಲಿ ಲಭ್ಯ. ಒಂದು ಸದಭಿರುಚಿಯ ಚಿತ್ರವನ್ನು ಕನ್ನಡದ ಮನಗಳು ನೋಡಿ ಉತ್ತಮ ಚಿತ್ರಗಳನ್ನು ಪ್ರೋತ್ಸಾಹ ಮಾಡುವಿರೆಂದು ನನ್ನ ಭಾವನೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಕೃಷ್ಣನೇ ಸರ್ವಸ್ವ


 ಕೃಷ್ಣನೇ ಸರ್ವಸ್ವ


ಕೃಷ್ಣನೆಂದರೆ ಆಕರ್ಷಣೆ

 ಕೃಷ್ಣನೆಂದರೆ ದೈವ

 ಕೃಷ್ಣನೆಂದರೆ ಸರ್ವಸ್ವ

 ಕೃಷ್ಣನೆಂದರೆ ಜೀವನ|

ಅವನ ಸದಾ ಸ್ಮರಿಸುತಾ

ಮಾಡಿಕೊಳ್ಳೋಣ ನಮ್ಮ

ಜೀವನವ ಪಾವನ||

29 ಆಗಸ್ಟ್ 2021

ಸನ್ಮಾನ (ನ್ಯಾನೋ ಕಥೆ)

 


*ಸನ್ಮಾನ* (ನ್ಯಾನೋ ಕಥೆ)


ಕಾಲಿಲ್ಲದವಳು ಎಂದು ಅವಳನ್ನು ಬಾಲ್ಯದಲ್ಲಿ ಊರವರು ಮೂದಲಿಸಿದ್ದರು. 

ಇಂದು ಅದೇ ಊರಿನಲ್ಲಿ ಅಂದು ನಿರ್ಲಕ್ಷ್ಯಕ್ಕೆ ಒಳಗಾದ ಭಾಗ್ಯಮ್ಮ   ಸನ್ಮಾನ  ಸ್ವೀಕರಿಸುತ್ತಿದ್ದಾರೆ. 

"ವಿಕಲಚೇತನೆ ಭಾರತಕ್ಕೆ ಬಂಗಾರದ ಪದಕ ಪಡೆದಿರುವುದು ನಮ್ಮ ದೇಶದ ಭಾಗ್ಯ "ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ  ಸಮಯಸಾಧಕ ಮೂರ್ತಿ ಭಾಷಣ ಮಾಡುವಾಗ ,ಸರ್ಕಾರ ಉಚಿತವಾಗಿ  ವಿಕಲಚೇತನರಿಗೆ ನೀಡುವ ಮೂರು ಚಕ್ರದ ಬೈಕ್ ನೀಡಲು ಸಾವಿರ ರೂ ಲಂಚ ಪಡೆದದ್ದು ಭಾಗ್ಯ ಳಿಗೆ ನೆನಪಾಯಿತು. 


#ಸಿಹಿಜೀವಿ


28 ಆಗಸ್ಟ್ 2021

ಸಂತನೊಂದಿಗೆ ಸಿಹಿಜೀವಿಯ ನಾಲ್ಕು ಮಾತು .ವಿಮರ್ಶೆ

 


"ಸಂತನೊಂದಿಗೆ  ಸಿಹಿಜೀವಿಯ ನಾಲ್ಕು ಮಾತುಗಳು"

  ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ  ಧನಸಹಾಯ ಪಡೆದ
ಶ್ರೀಮತಿ ವಾಣಿ ಭಂಡಾರಿ ಮೇಡಂರವರ ಮೊದಲ ಗಜಲ್ ಸಂಕಲನದ ಬಗ್ಗೆ ಸಿಹಿಜೀವಿಯ ನಾಲ್ಕು ಮಾತುಗಳು . ಕನ್ನಡ ಉಪನ್ಯಾಸಕರು, ಕವಿಗಳು ,ಅಂಕಣಕಾರರು, ಗಜಲ್ ಕಾರರು , ಗಾಯಕರು ಈಗೆ ಬಹುಮುಖ ಪ್ರತಿಭೆಯಾದ ವಾಣಿ ಭಂಡಾರಿ ರವರು   ಏಳನೇ ತರಗತಿಯಿಂದಲೇ ಸಾಹಿತ್ಯ ಆಸಕ್ತಿಯನ್ನು ಹೊಂದಿ   ಸಾಹಿತ್ಯ ಚಟುವಟಿಕೆಗಳಲ್ಲಿ ಮತ್ತು ಸಂಗೀತ ಕಲಿಕೆಯನ್ನು ಮಾಡಿರುವ ಬಗ್ಗೆ ಗಜಲ್ ಸಂಕಲನದಲ್ಲಿ ಅವರ ನುಡಿಗಳಲ್ಲಿ ವ್ಯಕ್ತವಾಗುತ್ತದೆ. ಅವರ ಗಜಲ್ ಗಳು ಅವರ ದೀರ್ಘ  ಸಾಹಿತ್ಯದ ಕೃಷಿಯನ್ನು  ಸಶಕ್ತವಾಗಿ ಬಿಂಬಿಸುತ್ತವೆ.

     
ಮೂರು ವರ್ಷಗಳ ಹಿಂದೆ  ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದಲ್ಲಿ ಪರಿಚಿತರಾದ ವಾಣಿ ಭಂಡಾರಿ ರವರು ಸದಾ ಹಸನ್ಮುಖಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಾ ನನ್ನಂತಹ ಕಲಿಕಾರ್ತಿಗಳಿಗೆ ಸಕಾಲಿಕ ಪ್ರೋತ್ಸಾಹ ಮತ್ತು ಸಲಹೆ ನೀಡುತ್ತಾ ಬಂದಿದ್ದಾರೆ.

   "ಸಂತೆನೊಳಗಿನ ಧ್ಯಾನ" ಎಂಬ ಶೀರ್ಷಿಕೆಯೇ  ಆಕರ್ಷಕ ಮತ್ತು ಕುತೂಹಲ ಪುಸ್ತಕ ಓದಿ ಮುಗಿಸಿದ ಮೇಲೆ ಈ ಶೀರ್ಷಿಕೆಯ ಔಚಿತ್ಯ ನನಗೆ ಮನವರಿಕೆಯಾಯಿತು.

ಈ  ಗಜಲ್ ಸಂಕಲನದಲ್ಲಿ  ಹೆಣ್ಣಿನಲ್ಲಿರುವ ನೋವುಗಳು, ಸಮಾಜದ ಅಂಕು ಡೊಂಕುಗಳು, ಸಮಯಸಾಧಕ ಜನರ ಡೋಂಗಿತನ, ನಮ್ಮ ಏಳಿಗೆಯನ್ನು ಕಂಡು  ಕಾಲೆಳೆಯುವ ಹಿತಶತೃಗಳ ಪ್ರಲಾಪ ,ಈಗೆ ವಿವಿಧ ವಿಷಯ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಬರೆದ ಬಹುತೇಕ ಗಜಲ್ ಗಳು ಸಮಾಜ ಮುಖಿಯಾಗಿರುವುದು ಗಮನಾರ್ಹ.

 
ಮೂರನೇ ಗಜಲ್ ನಲ್ಲಿ ಬರುವ
"ಕಣ್ಣಿದ್ದೂ ಕುರುಡಾಗಿ ನಿಂತಿದ್ದಾರೆ ಕೆಸರಿನ ಕಮಲದ ಏಳಿಗೆ ಸಹಿಸಲ್ಲ " ಎಂದು ಬದುಕ ಆಲಯದಲ್ಲಿ ಒಂಟಿ ಪಯಣ ಮಾಡುವಾಗ ಹೊಟ್ಟೆ ಕಿಚ್ಚಿನ ಜನರು ನೀಡುವ ಉಪದ್ರವಗಳ ಬಗ್ಗೆ ಸಂಕುಚಿತ ಭಾವದ ಮಾನವರಿಗೆ ಸೂಕ್ಷ್ಮವಾಗಿ ತಿವಿದಿದ್ದಾರೆ.

ಇತಿಹಾಸದ ಪುಟಗಳಲ್ಲಿ ,ಪುರಾಣಗಳ ಬೆಳಕಲ್ಲಿ ನೋಡಿದಾಗ ಹಿಂಸೆಯ ವಿರುದ್ದವಾಗಿ ಅಹಿಂಸೆ ,ದ್ವೇಷದ ವಿರುದ್ದವಾಗಿ ಪ್ರೀತಿಯು ಜಯ ಗಳಿಸಿರುವುದು ಸರ್ವ ವೇದ್ಯ.ಈ ಹಿನ್ನೆಲೆಯಲ್ಲಿ ಗಜಲ್ ಕಾರ್ತಿ ಯವರು
ಎಂಟನೆಯ ಗಜಲ್ ನಲ್ಲಿರುವಂತೆ
"ಗುದ್ದಲಿ ಹಾರೆ ಪಿಕಾಸಿ ಎಲ್ಲಾ ಚುಚ್ಚಿ ರಕ್ತ ಬರಿಸಿ ನಕ್ಕು ನಲಿದಿದ್ದವು|
ಕಾಲ ಕಾಯುವುದಿಲ್ಲ ಬಿಡಿ ಬೊಗಸೆ ಕಂಗಳ ಪ್ರೀತಿಗೂ ಒಮ್ಮೆ ಬಲ ಬರುತ್ತದೆ||"
ಎಂದು ಹೇಳುವ ಮೂಲಕ ಪ್ರೀತಿ ಮತ್ತು ಅಹಿಂಸೆಯನ್ನು ಜಗತ್ತಿನಲ್ಲಿ ಪಸರಿಸೋಣ ಎಂಬ ಸಂದೇಶ ನೀಡಿದ್ದಾರೆ.

ಗಜಲ್ ಸಂಕಲನದ ಹದಿನೈದನೇ ಗಜಲ್ ನಲ್ಲಿ ಕವಯಿತ್ರಿಯವರು

" ಕವಿಯ ಕೊಲ್ಲುವ ಭರದಲ್ಲಿ ಕವಿತೆಯ ಆಶಯ ಮರೆಯದಿರಿ|
ಕವಿಗೆ ಚುಚ್ಚುವ ಆವೇಶದಲ್ಲಿ ಕವಿಭಾವ ಏನೆಂದು ತಿಳಿಯದೇ ಮುನ್ನುಗ್ಗದಿರಿ||"
ಎಂದು ಮೊಸರಲ್ಲಿ ಕಲ್ಲು ಹುಡುಕುವ ಧೀರರಿಗೆ ಕಿವಿಮಾತು ಹೇಳಿರುವರು .
ಇದೇ ಭಾವದ ಇಪ್ಪತ್ತನೆಯ ಗಜಲ್ ನಲ್ಲಿ
"ಕವಿಯನ್ನು ಕೊಂದವರ ಕಂಡಿದ್ದೇನೆ ಆದರೆ ಕಾವ್ಯ ಸಾಯಲಿಲ್ಲ|
ಕವಿ ಭಾವವನ್ನು ಅರ್ಥೈಸದವರ ಕಂಡಿದ್ದೇನೆ ಆದರೆ ಭಾವ ಬತ್ತಲಿಲ್ಲ||"
ಎಂದು ಕವಿಭಾವ ಅರ್ಥೈಸದೆ ಬರೀ ಒಣ ಟೀಕೆ ಮಾಡುವ ಮೂಢರ ಬಗ್ಗೆ ಕನಿಕರ ತೋರುತ್ತಲೇ ಅಂತವರಿಗೆ ಚಾಟಿ ಬೀಸಿದ್ದಾರೆ.

ಪ್ರೀತಿಯಲ್ಲಿ ಮೋಸ ಮಾಡಿ ಕೈಕೊಟ್ಟು ಓಡಿ ಹೋದ ಪ್ರೇಯಸಿಯ ನೆನದು ತನ್ನ ತಾನೆ ಸಮಾಧಾನ ಮಾಡಿಕೊಳ್ಳುವ ಪರಿಯನ್ನು ನಲವತ್ತೈದನೇ ಗಜಲ್ ಬಹಳ ಚೆನ್ನಾಗಿ ಬಿಂಬಿಸುತ್ತದೆ.
"ಹೃದಯ ಹಿಂಡಿದ ಕಿರಾತಕಿಯ ನೆನೆಪುಗಳು ಏತಕೆ ಸುಮ್ಮನಿದ್ದು ಬಿಡು|
ನಿನ್ನಂತರಂಗದ ಒಲವು ದಿಕ್ಕರಿಸಿದ ಜಾರಿಣಿಯ ಪ್ರೀತಿ ಏಕೆ ಬೇಕು ಕೊರಗದೇ ಇದ್ದು ಬಿಡು||"
ಎಂದು ಖಾರವಾದ ಪದಗಳಲ್ಲಿ ಹೇಳಿದ್ದಾರೆ .

ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದು ಹೇಗೆ ? ಎಂಬ ಣವಿ ಯವರ ಕಾವ್ಯ ದಂತೆ
"ಒಲವಿರದ ಮನದ ಬಾವಿಯೊಳಗೆ ವಾಣಿ ಬದುಕಲಾರಳು |
ಗೋರಿಯೊಳಗೆ ಚುರನಿದ್ರಿಸಲು ಓಗೊಟ್ಟು ಬಂದಾಗಿದೆ ಗಾಲಿಬ್|| ಎಂಬ ಶೇರ್ ನಲ್ಲಿ ಪ್ರೀತಿಯಿರುವೊಡೆ ಮಾತ್ರ ನಾನಿರುವೆ ಪ್ರೀತಿಯಿಲ್ಲದೆಡೆ ಇರುವುದಕ್ಕಿಂತ ಇಹವ ತ್ಯಜಿಸುವುದೇ ಮೇಲು ಎಂದು ಅಭಿವ್ಯಕ್ತಿ ಪಡಿಸಿದ್ದಾರೆ.

ಹೀಗೆ ಒಂದಕ್ಕಿಂತ ಒಂದು ಚೆಂದದ ೬೦  ಗಜಲ್ ಒಳಗೊಂಡ ಈ ಸಂಕಲನ ಓದುಗರ ಮನ ಕಲಕದೆ ಇರದು.
ಇನ್ನೂ ಸ್ವಲ್ಪ  ಗಜಲ್ ಸಾಹಿತ್ಯ ಅಧ್ಯಯನ ಮಾಡಿದರೆ ಮತ್ತು ವಿವಿಧ ಪ್ರಕಾರಗಳ ಗಜಲ್ ಬರೆಯಲು ಪ್ರಯತ್ನ ಪಟ್ಟರೆ ಇನ್ನೂ ಸುಂದರ ರಚನೆ ವಾಣಿ ಭಂಡಾರಿ ಮೇಡಂ ರವರಿಗೆ ಬರೆಯಲು ಸಾದ್ಯವಿದೆ.ಅವರ ಲೇಖನಿಯಿಂದ ಮುಂದಿನ ದಿನಗಳಲ್ಲಿ ಗಜಲ್ ಸಂಕಲನ ಸೇರಿ ಕವನ, ವಿಮರ್ಶೆ, ಅಂಕಣರಹ ,ಕಥೆ, ಕಾದಂಬರಿ ಹೀಗೆ ವಿವಿದ ಪ್ರಕಾರಗಳಲ್ಲಿ ಪುಸ್ತಕಗಳು ಪ್ರಕಟವಾಗಲಿ ಎಂದು ಹಾರೈಸುವೆ.

        ಗಜಲ್ ಸಂಕಲನ:-ಸಂತನೊಳಗಿನ ಧ್ಯಾನ
ಕವಯಿತ್ರಿ:- ವಾಣಿ ಭಂಡಾರಿ
ಬೆಲೆ:-೧೦೦/-
ಪ್ರಕಾಶನ : ಭಂಡಾರಿ ಪ್ರಕಾಶನ
ಶಿವಮೊಗ್ಗ
ವರ್ಷ : ೨೦೨೦

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ


27 ಆಗಸ್ಟ್ 2021

ಕೊರೆಯುವವರು ಮತ್ತು ಸುತ್ತಿಗೆಗಳು


 

ಕೊರೆಯುವವರು ಮತ್ತು ಸುತ್ತಿಗೆಗಳು 

ಕೆಲವೊಮ್ಮೆ ನಮ್ಮ ಆತ್ಮೀಯರು, ಬಂಧುಗಳು, ಸಹೋದ್ಯೋಗಿಗಳು, ನಮ್ಮ ಜೊತೆಗೆ  ಮುಖತಃ ಅಥವಾ ಪೋನ್ ನಲ್ಲಿ ಮಾತನಾಡುವಾಗ ನಮಗೆ ಅವರ ಮಾತು ಕೇಳಲು ಸಮಯವಿದೆಯೇ? ಅಥವಾ ಇಷ್ಟ ಇದೆಯಾ? ಎಂದು ಕೇಳದೇ ಟೇಕನ್  ಫಾರ್ ಗ್ರಾಂಟೆಡ್ ಎಂಬಂತೆ ಗಂಟೆಗಟ್ಟಲೆ ಮಾತನಾಡಲು ಶುರು ಮಾಡುವರು. ಇದು ನಮಗೆ ಕಿರಿಕಿರಿಯಾದರೂ ಅವರೊಂದಿಗೆ ನೇರವಾಗಿ ನಮ್ಮ ಅಭಿಪ್ರಾಯಗಳನ್ನು ತಿಳಿಸಲು ನಮಗೂ ಮುಜುಗರ .

ಇನ್ನೂ ಕೆಲ ಮಹಾಶಯರು ಎದುಗಿರುವವರು ಮಾತನಾಡಲು ಅವಕಾಶ ನೀಡದೆ ತಾವೆ ವಟ ವಟ ಮಾತನಾಡುತ್ತಾ ತಮ್ಮ ಪಾಂಡಿತ್ಯ ತೋರುವರು.ಕೆಲವೊಮ್ಮೆ ವಿತಂಡವಾದಕ್ಕೂ ಇಳಿಯುವರು.
ಇಂತವರಿಂದ ಕೆಲವೊಮ್ಮೆ ನಾವು ತಪ್ಪಿಸಿಕೊಳ್ಳಲೇ ಬೇಕು ಅದಕ್ಕೆ ನಾವು ಹೀಗೆ ಮಾಡಬಹುದು.

೧ ವ್ಯಕ್ತಿಗಳು ಕರೆಯಲ್ಲಿ ಇದ್ದರೆ ನನಗೆ ಮತ್ತೊಂದು ಮುಖ್ಯವಾದ ಕರೆ ಬರುತ್ತಿದೆ ನಂತರ ಕರೆ ಮಾಡುವೆ ಎಂದು ಹೇಳಿ ಕರೆ ಕಟ್ ಮಾಡಬಹುದು.

ನಮಗೆ ಇಷ್ಟವಿಲ್ಲದಿದ್ದರೂ
ಕೆಲವರು ಮಾಡುತ್ತಲೆ 
ಇರುವರು ಕರೆ|
ಅಂತವರಿಗೆ ಮತ್ತೊಂದು
ಕರೆಯಿದೆ ಎಂದು
ಪೋನ್ ಕಟ್ 
ಮಾಡುವುದು ಖರೆ||

೨ ಕೊರೆಯುವ ವ್ಯಕ್ತಿ ಎದುರುಗಿದ್ದರೆ ಒಂದು ಅತೀ ತುರ್ತು ಕೆಲಸವಿದೆ ಎಂದು ಎದ್ದು ಹೋಗಬಹುದು.

ಕೆಲವರು ಕೊರೆಯುತ್ತಾರೆ
ಕೇಳುವವರ ತಾಳ್ಮೆ
ಪರೀಕ್ಷೆ ಮಾಡಲು|
ಅಂತವರ ಮುಂದೆ
ಅವರಿಗೆ ಗೊತ್ತಿಲ್ಲದೆ
ಕಿವಿಯಲ್ಲಿ 
ಇಟ್ಟುಕೊಂಡಿರುವೆ 
ಇಯರ್ ಪೋನ್
ಹೊಸ ಮಾಡೆಲ್ಲು||



೩ ಸುತ್ತಿಗೆ ಆಸಾಮಿ ಜೊತೆಗೆ ಕಾರ್ಯ ನಿರ್ವಹಿಸುವುದು ಅನಿವಾರ್ಯವಾದರೆ ಅವರ ಮಾತಿಗೆ ಕಡಿಮೆ ಪ್ರತಿಕ್ರಿಯೆ ನೀಡಿ ‌ನಮ್ಮ ಕೆಲಸದಲ್ಲಿ ತಲ್ಲೀನವಾಗುದು.

ಕೆಲವರೇ ಹಾಗೆ 
ಮಾತು ನಿಲ್ಲಿಸುವುದಿಲ್ಲ
ಒಂದು ಅಥವಾ ಎರಡು
ಸುತ್ತಿಗೆ|
ಅದಕ್ಕೆ ಅಂತವರಿಗೆ
ನಾಮಕರಣವಾಗುತ್ತದೆ
ಸುತ್ತಿಗೆ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.