09 ಜುಲೈ 2021

ತುಂಬಿಸಿಕೊಳ್ಳದಿರಲಿ ತಮ್ಮ ಜೋಳಿಗೆ


 


ತುಂಬಿಸಿ ಕೊಳ್ಳದಿರಲಿ ತಮ್ಮ ಜೋಳಿಗೆ 


ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ 

ವಿದ್ಯಾವಂತ ಯುವಕರ ರಾಜಕೀಯ ಪ್ರವೇಶವಾಗುತ್ತಿರುವುದು ಆಶಾದಾಯಕ ಬದಲಾವಣೆ ಎನ್ನಬಹುದು .ಅಂದರೆ ಇವರು ಮಾತ್ರ ಕಡಿದು ಕಟ್ಟೇ ಹಾಕುವರು ಅವಿದ್ಯಾವಂತ ರಾಜಕಾರಣಿಗಳು ಏನೂ ಸಾಧನೆ ಮಾಡಿಲ್ಲ ಎಂಬ ತೀರ್ಮಾನಕ್ಕೆ ಬರಲಾಗುವುದಿಲ್ಲ.

"ಓದು ಒಕ್ಕಾಲು ಬುದ್ದಿ ಮುಕ್ಕಾಲು " ಎಂಬ ವಾಣಿಯಂತೆ ಹಲವಾರು ರಾಜಕಾರಣಿಗಳು ಓದು ಕಡಿಮೆಯಾದರೂ ಚಾಕ ಚಾಕ್ಯತೆಯಿಂದ ಕೆಲಸ ಮಾಡಿ ಜನಮಾನಸದಲ್ಲಿ ಇಂದಿಗೂ ಸ್ಥಾನ ಪಡೆದಿರುವುದು ಸುಳ್ಳಲ್ಲ.

ಆದರೆ ಬದಲಾದ ಕಾಲಘಟ್ಟದಲ್ಲಿ ಇಂದಿನ ಕಂಪ್ಯೂಟರ್‌ ಯುಗದಲ್ಲಿ, ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ದಿನದಿಂದ ದಿನಕ್ಕೆ ನಾವೆಲ್ಲರೂ ಅಪ್ಡೇಟ್ ಆಗಲೇ ಬೇಕಿದೆ ಇದಕ್ಕೆ   ವಯಸ್ಸಾದವರು ಬೇಗನೆ ಹೊಂದಿಕೊಳ್ಳಲು ಕಷ್ಟ ಆಗಬಹುದು ,ಆ ನಿಟ್ಟಿನಲ್ಲಿ ಯೋಚಿಸಿದಾಗ ರಾಜಕೀಯ ರಂಗಕ್ಕೆ ಯುವ ವಿದ್ಯಾವಂತರ ಆಗಮನವನ್ನು ಸಕಾರಾತ್ಮಕವಾಗಿ ನೋಡಬೇಕಾಗುತ್ತದೆ.


ಜನರ ಸೇವೆಗೆ 

ರಾಜಕೀಯ ವ್ಯವಸ್ಥೆಗೆ

ಬೇಕಿದೆ ಹೊಸ ನೀರು|

ಬಂದ ಕೆಲವೇ

ದಿನಗಳಲ್ಲಿ ಜನರ

ಮರೆತು ಅವರು

ತೋರದಿರಲಿ ತಮ್ಮ

ಕುಟುಂಬದ ಕಾರುಬಾರು||



ಆದ್ದರಿಂದ ಜನಸೇವೆಯ ಉದ್ದೇಶ ಇಟ್ಟುಕೊಂಡು ಬರುವ ಎಲ್ಲಾ ಯುವಕರಿಗೆ ಕಿವಿಮಾತಾಗಿ ಈ ಮೇಲಿನ ಹನಿಗವನ ಹೇಳಬೇಕಾಯಿತು.


ಇಂದಿನ ದಿನಮಾನಗಳಲ್ಲಿ ರಾಜಕೀಯವನ್ನು ಒಂದು ಉದ್ಯಮವಾಗಿ ನೋಡುವವರ ಸಂಖ್ಯೆ ಹೆಚ್ಚಾಗಿದೆ ,ರಾಜಕೀಯ ಎಂದರೆ ಸ್ವ ಹಿತಾಸಕ್ತಿ, ತಮ್ಮ ಕುಟುಂಬದ ಅಭಿವೃದ್ಧಿ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ ಇದು ತೊಲಗಲು ಯುವ ರಾಜಕಾರಣಿಗಳು ಪಣ ತೊಡಬೇಕಿದೆ.


ಬಹಳ ಆದರದ ಸ್ವಾಗತ

ಬಂದರೆ ರಾಜಕಾರಣಕ್ಕೆ

ವಿದ್ಯಾವಂತ ಯುವಪೀಳಿಗೆ|

ಕ್ರಮೇಣ ಜನಸಾಮಾನ್ಯರ

ಮರೆತು ತುಂಬಿಸಿಕೊಳ್ಳದಿರಲಿ

ತಮ್ಮ ಕುಟುಂಬದ ಜೋಳಿಗೆ||



ಆರಂಭಶೂರರಂತೆ ಕೆಲ ಯುವ ರಾಜಕಾರಣಿಗಳು ಪ್ರಾಮಾಣಿಕವಾಗಿ ಜನ ಸೇವೆ ಮಾಡಿ ಜನಮನ್ನಣೆ ಗಳಿಸಿ ನಂತರ ವ್ಯವಸ್ಥೆಯಲ್ಲಿ ಅವರೂ ಹತ್ತರಲ್ಲಿ ಹನ್ನೊಂದು ಎಂಬಂತಾಗಿ ಬಿಡುವರು.


ಹೊಸದಾಗಿ ಗೆದ್ದ 

ನಮ್ಮ ಜನಪ್ರತಿನಿಧಿ

ಸೇವೆ ಮಾಡಲು 

ಜನರ ಬಳಿ ತೆರಳುತ್ತಿದ್ದರು

ಮತ್ತೆ ಮತ್ತೆ|

ಈಗೀಗ ಪಾಪ ಅವರಿಗೆ

ಪುರುಸೊತ್ತಿಲ್ಲ 

ಬರು ಬರುತ್ತಾ

ಆಗುತ್ತಿದೆ ರಾಯರ

ಕುದುರೆ ಕತ್ತೆ||


ಎಂಬಂತಾಗಬಾರದು ಜನರಿಗೆ ಅಗತ್ಯವಿದ್ದಾಗ ಸ್ಪಂದಿಸುವ ಗುಣವನ್ನು ಎಲ್ಲಾ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕಿದೆ, ಪ್ರಪಂಚದಲ್ಲೇ ಅತೀ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ,ಪ್ರಪಂಚದಲ್ಲೇ ಅತೀ ಉತ್ತಮ ಸಂವಿಧಾನವನ್ನು ಹೊಂದಿರುವ ನಮ್ಮ ದೇಶದಲ್ಲಿ ಅದಕ್ಕೆ ತಕ್ಕಂತೆ ಉತ್ತಮ ಸಜ್ಜನ , ವಿದ್ಯಾವಂತ ರಾಜಕಾರಣಿಗಳು ಜನಸೇವೆಯಲ್ಲಿ ತೊಡಗಿದರೆ ನಮ್ಮ ಭಾರತವು ಇನ್ನೂ ಅಭಿವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

08 ಜುಲೈ 2021

ಗುಂಡಿಗೆ ಹನಿಗವನ .


 


*ಗುಂಡಿಗೆ*


ಗಡಿಯಲ್ಲಿ ಶತೃಗಳ

ಒಳಸಂಚನ್ನು ಅರಿತು

ಒಬ್ಬನೇ ನುಗ್ಗಿ 

ದೇಶ ರಕ್ಷಣೆಗಾಗಿ

ಹೋರಾಡಿದ ಸೈನಿಕ

ಹತ್ತಾರು ಉಗ್ರರು

ಹತರಾದರು ಅವನ

ಗುಂಡಿಗೆ|

ಮರೆಮಾಚಿ ಬಂದ

ಶತೃ ಕೊಂದೇ ಬಿಟ್ಟ

ವೀರಸೈನಿಕನ ,

ಅವನ ಜೇಬಲಿ

ಸಿಕ್ಕ ಪತ್ರ ಓದಿದ

ಶತೃ ಸೈನಿಕನ‌ 

ಕಣ್ಣಾಲಿಗಳು ತುಂಬಿದವು,

ಪತ್ರದಲ್ಲಿ ಬರೆದಿತ್ತು

"ಬೇಗ ಬಂದು ಬಿಡು

ನಿಂತಿದೆ ನಿನ್ನ ಮಗನ

ಗುಂಡಿಗೆ"||


"ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


07 ಜುಲೈ 2021

ಇಂದಿನ ಸಿಂಹ ದ್ವನಿ ಪತ್ರಿಕೆ ೭/೭/೨೧


 

ನನ್ನ ನೇತಾಜಿ ‌ಲೇಖನ

 




ನನ್ನ ನೆಚ್ಚಿನ ಸ್ವತಂತ್ರ ಹೋರಾಟಗಾರ ನೇತಾಜಿ!


ಹೆಸರಲ್ಲೇ ನೇತಾರನ ಗುಣ ಹೊಂದಿರುವ ಸುಭಾಷ್ ಚಂದ್ರ ಬೋಸ್ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ದೇಶದ ಸ್ವತಂತ್ರ ಪಡೆಯಲು ಸಣ್ಣ ಮಟ್ಟದ ತ್ಯಾಗ ಮತ್ತು ಬದ್ದತೆ ಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಲು ಗೀವ್ ಮಿ ಬ್ಲಡ್ ಐ ವಿಲ್ ಗೀವ್ ಯು  ಇಂಡಿಪೆಂಡನ್ಸ್ ಎಂದು ಗರ್ಜಿಸಿದ ಧೀರ ನೇತಾಜಿ ನಮ್ಮ ಸುಭಾಷ್.


ನೇತಾರನಿಗಿರಬೇಕಾದ ಗುಣಗಳನ್ನು ಹುಟ್ಟಿನಿಂದಲೇ ಪಡೆದುಕೊಂಡು ಬಂದ ಸುಭಾಷ್ ರವರ ಸಂಘಟನಾ ಚಾತುರ್ಯ ಕಂಡು ಇಂಗ್ಲೀಷರು ಕೂಡಾ ಬೆಚ್ಚುತ್ತಿದ್ದರು.

ಪಾರ್ವಡ್ ಬ್ಲಾಕ್ ಸಂಘಟನೆಯ ಮೂಲಕ ದೇಶಾದ್ಯಂತ ಸ್ವಾಭಿಮಾನ  ಸ್ವತಂತ್ರ ಮತ್ತು ಸ್ವಾವಲಂಬನೆಯ ಕಿಚ್ಚು ಹತ್ತಿಸಿದರು .


"ದಿಲ್ಲಿ ಚಲೋ "ಎಂಬ  ಘೋಷಣೆಯೊಂದಿಗೆ  ಸಾಮಾನ್ಯರಲ್ಲಿ ಸ್ವಾತಂತ್ರ್ಯ ಜ್ಯೋತಿಯನ್ನು ಹಚ್ಚಿದರು, ಅದು ದೇಶಾದ್ಯಂತ ಬಹಳ ಯಶಸ್ವಿಯಾದ ಚಳುವಳಿಗಳಲ್ಲಿ ಒಂದಾಯಿತು.


ದೇಶಾದ್ಯಂತ ಸ್ವತಂತ್ರ ಹೋರಾಟದ ಪ್ರೇರಣೆ ನೀಡಿದ ನೇತಾಜಿರವರು ವಿದೇಶದಲ್ಲೂ ಸಂಘಟನೆಗೆ ತೊಡಗಿದರು, ಶತೃವಿನ ಶತೃ ನಮ್ಮ ಮಿತ್ರ ಎಂಬಂತೆ ನಮ್ಮ ಶತೃಗಳಾದ ಆಂಗ್ಲರ ವಿರೋಧಿಗಳಾದ ಜಪಾನ್ ಮತ್ತು ಜರ್ಮನಿಯ ದೇಶಗಳ ಸಹಾಯ ಪಡೆದು "ಆಜಾದ್ ಹಿಂದ್ ಪೌಜ್" ಎಂಬ  ಸೇನೆ ಕಟ್ಟಿದರು , ಮಹಿಳಾ ಸಬಲೀಕರಣದ ತತ್ವಗಳನ್ನು ಅಂದೇ ಬೆಂಬಲಿಸಿದ್ದ ನೇತಾಜಿರವರು ಆಜಾದ್ ಹಿಂದ್ ಪೌಜ್ ನಲ್ಲಿ ಮಹಿಳಾ ವಿಭಾಗ ಪ್ರಾರಂಭಿಸಿ ,ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್ ರವರಿಗೆ ಅದರ ನೇತೃತ್ವ. ವಹಿಸಿದ್ದರು, 


ಅಂಡಮಾನ್ ನಿಕೋಬಾರ್ ದ್ವೀಪಗಳು ಮತ್ತು ನಾಗಾಲ್ಯಾಂಡ್ ಪ್ರದೇಶದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಸುಭಾಷ್ ರವರು 1945ರಲ್ಲೇ ಭಾರತಕ್ಕೆ ಸ್ವತಂತ್ರ  ತಂದುಕೊಡುವ ಭರವಸೆ ನೀಡಿದರು, ಆದರೆ ನಿಗೂಢ ರೀತಿಯಲ್ಲಿ ಅವರು ಕಣ್ಮರೆಯಾದ ರೀತಿ ಕೋಟ್ಯಾಂತರ ಭಾರತೀಯ ಮನಗಳಿಗೆ ಆಘಾತ ನೀಡಿತು.


ಇಂದಿನ ಪೀಳಿಗೆಯು ಸುಭಾಷ್ ರಂತಹ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕಿದೆ ಅವರ ತತ್ವ ಆದರ್ಶ ಗಳನ್ನು ಅಳವಡಿಸಿಕೊಳ್ಳ ಬೇಕಿದೆ ,ಇದೇ ನಾವು ಆ ಹಿರಿಯ ಚೇತನಕ್ಕೆ ನೀಡುವ ಗೌರವವಾಗಿದೆ .



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


06 ಜುಲೈ 2021

ಧನಾತ್ಮಕ ಚಿಂತನೆ

 


ಚಿಂತಿಸಬೇಕಿಲ್ಲ


ಧನವಿರದಿದ್ದರೂ 

ಚಿಂತಿಸಬೇಕಿಲ್ಲ

ಧನವೊಂದೇ 

ಜೀವನವಲ್ಲ 

ಧನಾತ್ಮಕವಾಗಿ

ಯೋಚಿಸೋಣ |

ಸುಖ ನೆಮ್ಮದಿ

ಜೀವನವನ್ನು

ಪಡೆಯೋಣ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ