28 ಮೇ 2021

ಉಸಿರು .ಹನಿ.


 #ಉಸಿರು


ಉಸಿರಿರುವವರೆಗೆ

ಉಸಿರುಕೊಟ್ಟವರ ಮರೆಯದಿರು

ಉಸಿರಿದ್ದಾಗ ಮೆರೆಯದಿರು

ಉಸಿರು ಶಾಶ್ವತವಲ್ಲ ,

ಉಸಿರುನಿಂತರೂ ನಿನ್ನ

ಹೆಸರುಳಿಯಲಿ.


#ಸಿಹಿಜೀವಿ


ಸಿ ಜಿ ವೆಂಕಟೇಶ್ವರ

ತುಮಕೂರು

ಆ ಪತ್ರ .ಕಥೆ


 


*ಆ ಪತ್ರ* ಕಥೆ

ನಾನು ಕಾಲೇಜಿನಿಂದ ಮನೆ ಸೇರುವ ಮುಂಚೆಯೇ ಸಾಕಷ್ಟು ಜನರು ಮನೆ ಮುಂದೆ ಸೇರಿದ್ದರು.
ನಾನು ಗಾಬರಿಯಿಂದ ಮನೆಯ ಒಳಗಡೆ ನಡೆದೆ , ನೆರೆದ ನೂರಕ್ಕೂ ಹೆಚ್ಚು ಜನರು ನನ್ನ ಕಡೆ ಅಪರಾಧಿಯಂತೆ   ದುರುಗುಟ್ಟಿ ನೋಡುತ್ತಾ ನಿಂತಿದ್ದರು, ಹೊಸಿಲು ದಾಟಿ ಒಳಗೆ ಹೋದೆ, ಅಮ್ಮ ಅಳುತ್ತಾ ನೆಲದ ಮೇಲೆ ಕುಳಿತಿದ್ದರು,  ಕುರ್ಚಿಯಲ್ಲಿ ಬಿಳಿಅಂಗಿ, ಬಿಳಿ ಪಂಚೆ ಉಟ್ಟ ವ್ಯಕ್ತಿ ಕುಳಿತಿದ್ದರು, ನನಗೆ ದೂರದಿಂದಲೇ ಗೊತ್ತಾಯಿತು ಅವರು ನಮ್ಮ ಊರ ಗೌಡರು,  ಗಿರಿಜಾ ಮೀಸೆಯ ಒಳಗಿಂದಲೇ ಕೋಪದಲ್ಲಿ ಹಲ್ಲು ಕಡಿಯುವುದು ಕೇಳಿಸುತ್ತಿತ್ತು .

"ಬಂದೇನಪ್ಪ ಬಾ.....
ತಂದೆ ಇಲ್ಲದ ಮಗ ಅಂತ ಸಾಕಿದ್ದಕ್ಕೆ ಒಳ್ಳೆಯ ಗೌರವ ಕೊಟ್ಟೆ ಕಣಪ್ಪ, ಅಷ್ಟೊಂದು ಅವಸರ ಅಂತ ಹೇಳಿದ್ದರೆ ನೀನು ಡಿಗ್ರಿ ಓದಿಸೋದ್ ಬಿಟ್ಟು ಮದುವೆ ಮಾಡುತ್ತಿದೆ ಕಣೋ ಯಾಕೆ ಇಂಗ್ ಮಾಡ್ದೆ....? "
ಅಳುತ್ತಲೇ ಅಮ್ಮ ಕೇಳಿದರು

"ಅಮ್ಮ ಏನು ಹೇಳ್ತಿದಿಯಾ? ನನಗೇನೂ ಅರ್ಥವಾಗ್ತಿಲ್ಲ ,ಯಾಕೆ ಗೌಡ್ರು, ಈ ಜನ ಸೇರಿದಾರೆ? " ಆಶ್ಚರ್ಯಕರವಾಗಿ ಕೇಳಿದೆ.

"ನಾನು ಹೇಳ್ತೀನಿ ಬಾರೋ ,ನೀನ್ ಬಾಳ  ಬುದ್ದಿವಂತ ಕಣೋ, ನಿನಗೆ ನನ್ ಮಗಳು ಬೇಕೇನೋ ಬೋ....ಮಗನೆ ? ಹಲ್ಲು ಕಡಿಯುತ್ತಾ ಕೇಳಿದರು ಗೌಡರು .
"ಗೌಡ್ರೆ ಸರಿಯಾಗಿ ಮಾತಾಡಿ ,  ಏನೋ ಹಿರಿಯರು ಅಂತ ಗೌರವ ಕೊಟ್ರೆ ಈ ಥರ ಮಾತಾಡ್ ಬೇಡ್ರಿ, ಸ್ವಲ್ಪ ಸಿಟ್ಟಿನಿಂದಲೆ ಹೇಳಿದೆ"

"ಒಂದು ಪತ್ರ ನನ್ನೆಡೆ ಎಸೆದು ಏನೋ ನಿನಗೆ ಗೌರವ ಕೊಡೋದು? ನೋಡು",ಎಂದರು

ನಾನೂ ಆ ಪತ್ರ ತೆಗೆದುಕೊಂಡ ಓದಿದೆ " ಭಾರತಿ ಐ ಲವ್ ಯೂ, ನಿನ್ನ ಬಿಟ್ಟರೆ ನಾನೂ ಯಾರನ್ನೂ ಮದುವೆಯಾಗಲಾರೆ ,ಮದುವೆಗೆ ಸಿದ್ದನಾಗಿರು"
                       ಇಂತಿ ನಿನ್ನ
            ಮಂಜುನಾಥ್
ಈಗ ನನಗೆ ಅರ್ಥವಾಯಿತು ಮೂರು ದಿನದಿಂದ ನಮ್ಮ ಊರಿನ ಮೇಲಿನ ಮನೆ ರವಿಯಣ್ಣನ ಮಗ ಮಂಜುನಾಥ್ ಭಾರತಿಯ ಹಿಂದೆ ಅಲೆಯುತ್ತಿದ್ದ, ಇದು ಆ .... ಮಂಜುನಾಥನ ಕೆಲಸ ಎಂದು .
ಗೌಡರಿಗೆ ನ‌ನ್ನ ನೋಟ್ ಬುಕ್ ತೋರಿಸಿ, ಆ ಪತ್ರ ತೋರಿಸಿ , ನೋಡಿ ಗೌಡರೆ ಇದು ನನ್ನ ಹ್ಯಾಂಡ್ ರೈಟಿಂಗ್ ಅಲ್ಲ, ಇದು ಆ.... ಮಂಜುನಾಥನ ಕೆಲಸ ಎಂದೊಡನೆ ,ಆ ಪತ್ರವನ್ನು ಸರಕ್ಕನೆ ಕಿತ್ತುಕೊಂಡು ತನ್ನ ಪಟಾಲಂ ಜೊತೆ ಮೇಲಿನ ಮನೆಯ ರವಿಯವರ ಮನೆ ಕಡೆ ನಡೆದರು, ಅಮ್ಮ ಮಾತ್ರ ಒಳಗೆ ಬಿಕ್ಕುತ್ತಲೇ ಇದ್ದರು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

27 ಮೇ 2021

ಏನು ಮಾಡಲಿ ? ಕಥೆ


 ಏನು ಮಾಡಲಿ? ಕಥೆ

ಪ್ರೆಂಡ್ ರಿಕ್ವೆಸ್ಟ್ ಕಳಿಸಿದ ಎಂಟು ನೂರಕ್ಕೂ ಹೆಚ್ಚು ಜನರನ್ನು ನಾನು ಅಕ್ಸೆಪ್ಟ್ ಮಾಡಿರಲಿಲ್ಲ, ಅದಕ್ಕೆ ಕಾರಣ, ಕೆಲವರು ಯಾವುದೋ ನಟ ನಟಿಯರ ಪೋಟೋ ಪ್ರೊಪೈಲ್ ಆಗಿ ಇಟ್ಟುಕೊಂಡರೆ ,ಕೆಲವರು ಕ್ರಿಕೆಟಿಗರ ಪೋಟೋ ಹಾಕಿಕೊಂಡಿದ್ದರು, ಒಮ್ಮೆ ಕೆಂಪು ಮುಖದ ಮುದ್ದು ಮೊಗದ ಸುಂದರಿಯೊಬ್ಬಳು ಪ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಳು,  ಜೊತೆಗೆ ಈಗಾಗಲೆ ನನ್ನ ಐವರು ಸ್ನೇಹಿತರು ಅವಳ ಪ್ರೆಂಡ್ ಆಗಿರುವುದನ್ನು ಪೇಸ್ ಬುಕ್ ನನಗೆ ಬೇಡವೆಂದರೂ ತಿಳಿಸಿತು, ಇರಲಿ ನೋಡೋಣ ಎಂದು ಅಕ್ಸೆಪ್ಟ್ ಮಾಡಿದೆ, ಮಾರನೇ ದಿನ ನನ್ನ ಮೆಸೆಂಜರ್ ನಲ್ಲಿ ಪ್ಲೀಸ್ ಶೇರ್ ಯುವರ್ ಪೋನ್  ನಂಬರ್ ಎಂಬ ಮೆಸೇಜ್ ಬಂತು.
ಇರಲಿ ಎಂದು ಕಳಿಸಿದೆ,ಮರುಘಳಿಗೆಯಲ್ಲೇ ವಾಟ್ಸಪ್ ನಲ್ಲಿ " ಐ ಲವ್ ಯೂ" ಎಂಬ ಸಂದೇಶ ಕೆಳಗಡೆ  ಹಾರ್ಟ್ ಸಿಂಬಲ್ ನೊಂದಿಗೆ  ಮಿಲಿಂದಾ ಎಂಬ ಬರಹ  ನೋಡಿ ಸಂತಸ, ಅಚ್ಚರಿ, ಭಯ ಒಮ್ಮೆಲೆ ಆಯಿತು , ಎರಡೇ ದಿನಕ್ಕೆ ಬರೀ ಪೋಟೊ ನೋಡಿ ಲವ್? ಈಗೂ ಉಂಟಾ? ಅನಿಸಿತು ಮದುವೆಯಾಗುವ ವಯಸ್ಸಿಗೆ ಬಂದಿದ್ದರೂ ಡಿಗ್ರೀ ಮಾಡಿ ಮಾದರಿ ಕೃಷಿಕ ಎನಿಸಿಕೊಂಡು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲನಾದರೂ  ಭಾರತದ ಹುಡುಗಿಯರ  ಪೋಷಕರಿಗೆ ಏಕೋ ನನಗೆ ಕನ್ಯೆ ಕೊಡಲು ಹಿಂದು ಮುಂದೆ ನೋಡಿದ್ದರು. ನನ್ನ ಕ್ಲಾಸ್ ಮೇಟ್ ಪರಮೇಶಿ ಸರ್ಕಾರಿ ಕಛೇರಿಯಲ್ಲಿ ಜವಾನನಾದರೂ ಅವನಿಗೆ ಮದುವೆಯಾಗಿ ಆರು ವರ್ಷವಾಗಿವೆ, ಅವನಿಗೀಗ ಎರಡು ಮಕ್ಕಳು.

ಇದೆಲ್ಲಾ ನೆನೆದು ,ಯಾವ ಜಾತಿ ಯಾವ ದೇಶವಾದರೇನು ? ನನಗೆ ಮದುವೆಯಾಗಲು ಕನ್ಯೆ ಸಿಕ್ಕರೆ ಸಾಕು ಎಂದು ನನಗರಿವಿಲ್ಲದೇ
"ಐ ಲವ್ ಯೂ ಟೂ" ಮೆಸೇಜ್ ಟೈಪಿಸಿದ್ದೆ

ವಾರಗಳಿಂದ ನಮ್ಮ ಮೆಸೇಜ್ ವಿನಿಮಯ ಜರುಗಿತ್ತು ,
"ಐ ಹಾವ್ ಸಮ್ ಎಕಾನಾಮಿಕ್ ಕ್ರೈಸಿಸ್ , ಪ್ಲೀಸ್ ಸೆಂಡ್ ಪೈವ್ ಲ್ಯಾಕ್ ಟು ಮೈ ಬಿಲೋ ಅಕೌಂಟ್ ನಂಬರ್ "  ಸಂದೇಶ ಓದಿದ  ಮಂಜುನಾಥ ,

"ಒಕೆ ಯು ಡು ಒನ್ ಥಿಂಗ್ , ಪ್ಲೀಸ್ ಕಮ್ ಟು ಇಂಡಿಯಾ ಲೆಟ್ಸ್ ಮ್ಯಾರಿ, ಲೇಟರ್ ಐ ಸಾಲ್ವ್ ಯುವರ್ ಎಕಾನಮಿಕ್ ಪ್ರಾಬ್ಲಂ" ಟೈಪಿಸಿ ಕಳಿಸಿದ ಮೂರು ದಿನವಾದರೂ ಉತ್ತರವಿಲ್ಲ, ಅನುಮಾನವಿಲ್ಲ ಅವಳು ಮೆಸೇಜ್ ಓದಿರುವಳು ನೀಲಿ ಗುರುತಿನ ಎರಡು ಗೆರೆ ಎದ್ದು ಕಾಣುತ್ತಿವೆ ಜೊತೆಗೆ ನಾನು ಈಗಲೂ ಪ್ರತಿ ದಿನ ಗುಡ್ ಮಾರ್ನಿಂಗ್ ,ಗುಡ್ ನೈಟ್ ಮೆಸೇಜ್ ಕಳಿಸುತ್ತಿರುವೆ ಆದರೂ ಉತ್ತರವಿಲ್ಲ.
ನಿನ್ನೆ ರಾತ್ರಿ "ಆನಾ" ಎಂಬ ಇಂಗ್ಲೆಂಡ್ ಬೆಡಗಿಯ ಪ್ರೆಂಡ್ ರಿಕ್ವೆಸ್ಟ್ ಬಂದಿದೆ , ಅಕ್ಸೆಪ್ಟ್ ಮಾಡಲೋ ಬೇಡವೋ?......

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು .

ಏಳು ಅದ್ಭುತಗಳು .ಹನಿ


 *


*ಏಳು ಅದ್ಭುತಗಳು*

ವಿಶ್ವದ ಏಳು
ಅದ್ಭುತಗಳ
ನೋಡಿಲ್ಲವೆಂದು
ಏತಕ್ಕಾಗಿ
ಬೇಸರ ನಿನಗೆ|
ನಮ್ಮಲ್ಲೇ ಇವೆಯಲ್ಲ
೧ನೋಡಲು ಕಣ್ಣು
೨ಕೇಳಲು ಕಿವಿ
೩ಸ್ಪರ್ಷಕೆ ಚರ್ಮ
೪ವಾಸನೆಗೆ ಮೂಗು
೫ನಗಲು ವದನ
೬ಕಾರ್ಯಕೆ ಕೈಕಾಲು
೭ರುಚಿಗೆ ನಾಲಿಗೆ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

ಜನಮಿಡಿತ ೨೭/೫/೨೧