17 ಮಾರ್ಚ್ 2021

ಆಟವನಾಡೋಣ (ಶಿಶುಗೀತೆ)


 


*ಆಟವನಾಡೋಣ* ಶಿಶುಗೀತೆ √

ಬಾರೋ ಗೆಳೆಯ ಎಲ್ಲಾ
ಸೇರಿ ಆಟವನಾಡೋಣ
ಗೆಳೆಯರ ಜೊತೆಯಲಿ ಸೇರಿ
ಎಲ್ಲರೂ ನಕ್ಕು  ನಲಿಯೋಣ.

ಚಿನ್ನಿದಾಂಡು ಕೋಲನು
ಹಿಡಿದು ಆಟವನಾಡೋಣ
ಬುಗುರಿ ,ಗಿರಗಿಟ್ಲೆ ಆಟದಿ
ಮಜವನು ಮಾಡೋಣ.

ಮರಕೋತಿ ಆಟವನಾಡಲು
ಈಗಲೆ ಮರವನು ಏರೋಣ
ಅಳಿಗುಣಿ ಆಟಕೆ ಹುಣಸೆ
ಬೀಜಗಳನ್ನು ಸೇರಿಸೋಣ.

ಕುಂಟೋ ಬಿಲ್ಲೆಯ ಆಟವ
ಆಡುತ ಕೌಶಲ್ಯ ತೋರಣ
ಕಬ್ಬಡ್ಡಿ ,ಕೊಕೊ,ಆಡುತ
ನಾವು ಗಟ್ಟಿಗರಾಗೋಣ .

ಪಾಠದ ಜೊತೆಗೆ ಆಟವು
ಇರಲಿ ಎಂಬುದು ತಿಳಿಯೋಣ
ಆಟದ ಮಹತ್ವವನ್ನು ನಾವು
ಜಗತ್ತಿಗೆ ತಿಳಿಸೋಣ .

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

16 ಮಾರ್ಚ್ 2021

ರಜ .ಮಜ ( ಶಿಶುಗೀತೆ)


 


ಶಿಶುಗೀತೆ
*ರಜ  ಮಜ*

ನಾನು ರಜೆಯ ಕಳೆಯುವೆ
ರಜದಿ ಮಜವ ಮಾಡುವೆ

ಅಜ್ಜಿ ಮನಗೆ ಹೋಗುವೆ
ಸಜ್ಜೆ ಬೆಲ್ಲ ತಿನ್ನವೆ

ಗೆಳೆಯರೊಡನೆ ಅಡುವೆ
ಒಳ್ಳೆಯ ಆಟ ಕಲಿವೆ

ಜಾತ್ರೆ ಗೆ ನಾ ಹೋಗುವೆ
ತುತ್ತೂರಿ ಊದುವೆ

ಮತ್ತೆ ಶಾಲೆಗೆ ಹಿಂತಿರುಗುವೆ
ಕಲಿಕೆಯಲ್ಲಿ ತೊಡಗುವೆ

*ಸಿ.ಜಿ ವೆಂಕಟೇಶ್ವರ*

15 ಮಾರ್ಚ್ 2021

ಚಿಟ್ಟೆಯಾಗುವಾಸೆ . ಶಿಶುಗೀತೆ

 

*ಚಿಟ್ಟೆಯಾಗುವಾಸೆ* 


ತೋಟದಿ ಕಂಡೆನು 

ವಿಧ ವಿಧ ಚಿಟ್ಟೆ

ಪಟ್ಟೆಯ ಚಿಟ್ಟೆಯ

ಕಂಡು ಕುಣಿದಾಡಿಬಿಟ್ಟೆ. 


ಒಂದೇ ಎರಡೇ ನೋಡು 

ನೂರಾರು ಬಣ್ಣ

ಈ ಪರಿ ಬಣ್ಣವ

ಬಳಿದವರಾರಣ್ಣ?


ರೆಕ್ಕೆಯ ಬಡಿಯುತ 

ಪಕ್ಕದಿ ನಲಿದವು

ನೋಡಲು ಕಣ್ಣಿಗೆ

ಏನೋ ಆನಂದವು.


ಲವಲವಿಕೆಯಲಿ 

ನಲಿವವು ಅನುದಿನದಿ

ಚಿಟ್ಟೆಯಾಗುವಾಸೆ 

ಮುಂದಿನ ಜನ್ಮದಿ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಗಂಟು . ಹನಿ

 *ಗಂಟು*


ಮದುವೆಯಲ್ಲಿ ನಾನು

ನನ್ನವಳಿಗೆ ಹಾಕಿದ್ದೆ

ಮೂರು ಗಂಟು|

ಅದೇ ಸಿಟ್ಟಿಗೆ 

ಪ್ರತಿದಿನವೂ ಮುದ್ದೆಯಲಿ

ಮಾಡುತಿರುವಳು

ಹತ್ತಾರು ಗಂಟು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

14 ಮಾರ್ಚ್ 2021

ಋಣ ಹನಿ


 ಋಣ


ಆಡಂಬರ ತೋರುತ್ತಾ ಹೋಟೆಲ್  ಅನ್ನವನ್ನು ತಿನ್ನಲು ಬೇಕೇ 

ಬೇಕು ಹಣ|

ಜೋಪಡಿಯಾದರೂ ಪ್ರೀತಿಯಿಂದ

ಕೂಡಿದ  ಅಮ್ಮನ  ಕೈ ತುತ್ತು ತಿನ್ನಲು 

ಬೇಕು ಋಣ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ