17 ಜೂನ್ 2020

ಗಜ಼ಲ್ ೬೬ ( ರಂಗೋಲಿ)


*ಗಜ಼ಲ್೬೬*

ದಿನವೂ ನಾನು ಹಾಕುವೆ ಅಂಗಳದಲೆಲ್ಲಾ ರಂಗೋಲಿ
ನನ್ನವನು ಮಾಡಿರುವ ನನ್ನ ಬಾಳೆಲ್ಲಾ ರಂಗೋಲಿ

ಮುತ್ತುಗಳ ಮಳೆಗರೆದು ನನಗೆರಡು ಮುತ್ತುಗಳ ನೀಡಿದ
ಅವರಾಡುವ ಬಾಲಲೀಲೆಗಳಿಗೆ ಮನೆಯಲೆಲ್ಲಾ ರಂಗೋಲಿ

ಮುದ್ದಾಡಲು ಶುರು ಮಾಡಿದರೆ ರಸಿಕರಂಗನವನು
ಮೈಮುರಿದೆದ್ದಾಗ  ಹಾಸಿಗೆಯ ಮಡಿಕೆಯಲೆಲ್ಲಾ ರಂಗೋಲಿ

ದಾಂಪತ್ಯ ಜೀವನದಲ್ಲಿದೆ ಸವಿನೆನಪಿನ ಬುತ್ತಿ
ನನ್ನರಸ ನುಡಿಯುತಿರೆ ಹೃದಯದಲೆಲ್ಲಾ ರಂಗೋಲಿ

ಇನಿಯನಿರದಿರೆ ಮಲ್ಲಿಗೆ ಸಂಪಿಗೆಗೂ ವಾಸನೆಯಿಲ್ಲ
ಸಿಹಿಜೀವಿಯು ಬಳಿಯಿದ್ದರೆ ಮನದಲೆಲ್ಲಾ ರಂಗೋಲಿ

*ಸಿ ಜಿ ವೆಂಕಟೇಶ್ವರ*
.

16 ಜೂನ್ 2020

ಎದುರಿಸುವೆವು ( ಹನಿಗವನ)

*ಎದುರಿಸುವೆವು*

ನಾಚಿಕೆಯಾಗಬೇಕು ಛೆ.
ಅಂದು ನಿನ್ನ ಗಡಿಯಾಚೆ
ಕಳಿಸಿದೆ ವೈರಾಣು ಕರೋನ
ಇಂದು ನಮ್ಮ ಗಡಿಯಲ್ಲಿ
ಗಡಿಬಿಡಿ ಮಾಡುವ ಚೀನಾ
ಖಂಡಿತ ಎದುರಿಸುವೆವು ನಿನ್ನ
ಗಡಿಯಲ್ಲಿ ಆಸರೆ ವೀರ ಸೈನಿಕರು
ಗಡಿಯೊಳಗೆ ಕರೋನ ರಕ್ಷಕರು.

*ಸಿ ಜಿ ವೆಂಕಟೇಶ್ವರ*.ತ

ಪುಟ್ಟನ ಮೀನುಗಳು ( ಶಿಶುಗೀತೆ)



*ಪುಟ್ಟನ ಮೀನುಗಳು*

ಬೆಟ್ಟ ಗುಡ್ಡಗಳ ದಾಟುತ
ಕೋಳದ ಬಳಿ ಪುಟ್ಟ ನಡೆದನು
ಟಾಮಿಯ ಸಂಗಡ ಮೀನಿಗೆ
ಗಾಳ ಹಾಕಿ ಕುಳಿತನು.

ಒಂದು ಎರಡು ಮೀನು
ಹಿಡಿದು ಬುಟ್ಟಿಗೆ ಹಾಕಿದ
ಹಿಂದೆ ಕುಳಿತ ಟಾಮಿ
ಅವನು ಹೊಟ್ಟೆಗೆ ಇಳಿಸಿದ.

ಗಾಳ ಹಾಕಿ ಪುಟ್ಟನು  ಪ್ರಕೃತಿ
ಸೌಂದರ್ಯವನು ಸವಿದ
ಹಿಂದೆ ಕುಳಿತ ಟಾಮಿ
ಮೀನ ರುಚಿಯ ನೋಡಿದ

ಕೊಳದ ಬಳಿಯ ಗುಡಿಸಲಲ್ಲಿ
ಮೀನು ಸುಡಲು ಆಸೆ ಪಟ್ಟನು
ಒಂದೊಂದೆ ಮೀನು ತಿಂದ
ಟಾಮಿ ಡರ್.. ಎಂದು ತೇಗಿದನು.

ಖಾಲಿಬುಟ್ಟಿಯನ್ನು ನೋಡಿ ಪುಟ್ಟ
ಸಿಟ್ಟಿನಿಂದ ಕೋಲು‌ ಎತ್ತಿದ
ಕುಯ್ ..ಗುಡುತ ಟಾಮಿ
ಬಾಲ ಎತ್ತಿ ದೂರಕೆ ಓಡಿದ.

*ಸಿ ಜಿ ವೆಂಕಟೇಶ್ವರ*
*ತುಮಕೂರು*






ಗಜ಼ಲ್ ೬೫


ಗಜ಼ಲ್ ೬೫

ಗಿರಿಯು ಬರಸೆಳೆದು ಆಗಸವನು ತಬ್ಬಿದೆ
ನಾನಿಂದು  ಇನಿಯಳ ತನುವನು ತಬ್ಬಿದೆ

ಸಲಿಲಕೂ ಭುವಿಗೂ ಮುಗಿಯದ ಬಂಧ
ಸುಲಲಿತವಾಗಿ ಅರಿವ ಮನವನು ತಬ್ಬಿದೆ

ನೀನಿದ್ದರೆ ನನ್ನ ಬದುಕೆಲ್ಲ ಬಂಗಾರ
ನಮಗಾಗಿ ನಮ್ಮಿಬ್ಬರ ಗೆಲುವನು ತಬ್ಬಿದೆ

ನೀನಿರದೆ ಬಲಹೀನನು‌ ನೀನೆನಗೆ ಬಲ
ನನ್ನೊಲವ ನೂರಾನೆಯ ಬಲವನು ತಬ್ಬಿದೆ

ಕಾಮನೆಗಳಿಗೆ ಸಾವಿರಾರು ರಂಗುಗಳು
ಹೊಂಬಣ್ಣ ಸಿಹಿಜೀವಿಯ ಒಲವನು ತಬ್ಬಿದೆ

*ಸಿ ಜಿ ವೆಂಕಟೇಶ್ವರ*

15 ಜೂನ್ 2020

ಗಜ಼ಲ್ (ಕಟುಕರಿರುವರು)


ಗಜ಼ಲ್

ಚಿಗುರುವ ಮುನ್ನವೇ ಕತ್ತರಿಸುವ ಕಟುಕರಿರುವರು
ಹೆಣ್ಣು ಅಬಲೆಯೆಂದು  ಅಪಹರಿಸುವ ಕಟುಕರಿರುವರು.

ಹಸುಳೆ ಮುದುಕಿಯರೆಂದು ನೋಡದೆ
ಎರಗುವರು
ಮನೆಯ ಒಳಗೂ ಹೊರಗೂ ಹಿಂಸಿಸುವ ಕಟುಕರಿರುವರು.

ಅಬಲೆಯರ ಕಣ್ಣೀರ ಕೋಡಿಗೆ ಕೊನೆಯೆಂದು?
ಕೋಮಲೆಯರ ಶೀಲಹರಣ ಮಾಡಿ ಸಂಭ್ರಮಿಸುವ ಕಟುಕರಿರುವರು.

ಬೇಲಿಯೇ ಎದ್ದು ಹೊಲವ ಮೇಯುಲು ಕಾಯುವರಾರು?
ಕಾಯಬೇಕಾದ ಸಂಬಂಧಿಕರೆ ಕೊಂದು ಮುಗಿಸುವ ಕಟುಕರಿರುವರು.

"ಸಿಹಿಜೀವಿ"ಯಗಳಿಗೆ ಕಹಿ ಗುಳಿಗೆಗಳೆ ಎಲ್ಲಾಕಡೆ
ಗಳಿಗೆಗೊಬ್ಬರಂತೆ ಕೋಮಲೆಯರ ಮುಗಿಸುವ ಕಟುಕರಿರುವರು.

*ಸಿ ಜಿ ವೆಂಕಟೇಶ್ವರ*