27 ಮೇ 2020

ಸನ್ಮಾರ್ಗ (ಭಾಗ ೫)


ಸನ್ಮಾರ್ಗ  ಭಾಗ ೫

ರಸ್ತೆ ಅಗಲೀಕರಣ

ಕರ್ನಾಟಕ ಸರ್ಕಾರ ಎಂದು ಮುಂದೆ ಕಮಾನು ಆಕಾರದ ಬಿಲ್ಲೆ ಅದರ ಕೆಳಗೆ ತಹಶಿಲ್ದಾರರು ಮತ್ತು ತಾಲೂಕು ದಂಡಾದಿಕಾರಿಗಳು ಎಂಬ ಫಲಕ ಇರುವ ನೀಲಿ ಬಣ್ಣದ ಜೀಪು ನಿಧಾನವಾಗಿ ಬಂದು ನಿಂತಿತು. ರಾಜ್ಯ ಹೆದ್ದಾರಿ ಆದ್ದರಿಂದ ಆ ಊರಿನಲ್ಲಿ ದಿನವೂ ಅಂತಹ ನೂರಾರು ಜೀಪ್, ವ್ಯಾನ್ ,ಬಸ್ಸು,ಲಾರಿ ಬೈಕ್ ಓಡಾಡುವುದನ್ನು ನೋಡಿದ್ದ ಆ ಊರಿನವರಿಗೆ ಆ ನೀಲಿ ಸರ್ಕಾರದ ಜೀಪ್ ಅಂತಹ ಕುತೂಹಲ ಇರಲಿಲ್ಲ .
ಜೀಪಿನಿಂದ ಇಳಿದ ವ್ಯಕ್ತಿ ವಯಸ್ಸಿನಲ್ಲಿ ನಲವತ್ತೈದು ಐವತ್ತರ ಹಾಸುಪಾಸು ಇರಬೇಕು, ಲಿಬರ್ಟಿ ಕಪ್ಪು ಬಣ್ಣದ ಶೂ ಧರಿಸಿದ್ದರು, ತುಸು ದಪ್ಪವೇ ಎನ್ನಬಹುದಾದ ಸೋಡಾಗ್ಲಾಸ್ ಧರಿಸಿದ್ದರು, ಅರ್ಧದಷ್ಟು ಕೂದಲು‌ ಬಿಳಿಯಾಗಿದ್ದು ಇನ್ನರ್ಧ ಹೇರ್ಡೈ ಮಾಡಿರುವುದನ್ನು ಗುರುತಿಸಬಹುದಾಗಿತ್ತು, ಬಲವಂತಕ್ಕೆ ಅಂಗಿಯನ್ನು ಪ್ಯಾಂಟ್ ನ ಹೊಳಗೆ ಸೇರಿಸಿ ಇನ್ಷರ್ಟ್ ಮಾಡಿದ್ದರೂ ಹೊಟ್ಟೆಗೆ ಕಟ್ಟಿದ ಬೆಲ್ಟ್ ಲೆಕ್ಕಿಸದೇ ಮುಂದೆ ಬಂದು ನಿಂತಿತ್ತು. ಎರಡು ಹೆಜ್ಜೆ ನಡೆದಾಗ ಅವರು ದೇಹದ ಭಾರದ ಪರಿಣಾಮವಾಗಿ ನಡೆಯಲು ಏದುಸಿರು ಬಿಡುವುದು ಎಲ್ಲರಿಗೂ ಕಾಣಿಸುತ್ತಿತ್ತು  .
"ರೀ ರಮೇಶ್ ರೋಡ್ ಮಧ್ಯದಿಂದ ಅಳತೆ ಮಾಡಿ ಲಾಸ್ಟ್ ಟೈಂ ಮಾಡಿದ ಹಾಗೆ ತಪ್ಪು ಮಾಡಿದರೆ ಸಸ್ಪೆಂಡ್ ಆಗ್ತಿಯಾ"  ಎಂದು ‌ಆ ಅಧಿಕಾರಿ ಹೇಳಿದ ಮೇಲೆ ಆ ಊರಿನ ಜನರು ಕ್ರಮೇಣವಾಗಿ ಜೀಪಿನ ಹತ್ತಿರ ಬಂದರು . ಅವರ ಕೊನೆಯ ಮಾತು" ಲಾಸ್ಟ್ ಟೈಂ ಮಾಡಿದ ಹಾಗೆ ಮಾಡಿದರೆ ಸಸ್ಪೆಂಡ್ ಆಗ್ತಿರಾ" ಎಂಬುದನ್ನು ಕೇಳಿದ ಫಾಲಾಕ್ಷ ನಿ‌ನ್ನೆ ರಾತ್ರಿ ತೋಪಿನಲ್ಲಿರುವ ಕಂಬಣ್ಣನ ಹೆಂಡದ ಅಂಗಡಿಯಲ್ಲಿ ಹೆಚ್ಚು ಕೆಟ್ಟ ನಾತದಲ್ಲಿ ತುಸು ನಶೆಯಲ್ಲಿ ಹೋಟೆಲ್ ನಿಂಗಣ್ಣ ಆಡಿದ   ಮಾತುಗಳು ತಟ್ಟನೆ ನೆನಪಾದವು.ಹೋಟೆಲ್ ನಿಂಗಣ್ಣ ಎಂದೇ ಚಿರಪರಿಚಿತ ನಿಂಗಣ್ಣ ಬ್ರಹ್ಮರಾಯಪ್ಪ ಅಲಿಯಾಸ್ ಬ್ರಮ್ಮಿಗೆ ವಿರುದ್ದವಾಗಿ ಆರಂಬಿಸಿದ  ಮೇಲೆ ಅವರಿಗೆ ಹೋಟೆಲ್ ನಿಂಗಣ್ಣ ಎಂಬ ಹೆಸರು ಖಾಯಂ ಆಯಿತು.
ಬ್ರಮ್ಮಿ ಇಡ್ಲಿ,ಮೆಣಸಿನಕಾಯಿ ಬೋಂಡಾ,ಮಂಡಕ್ಕಿ ಉಸುಲಿ ಟೀ ಮುಂತಾದವುಗಳನ್ನು ಶುಚಿ ರುಚಿಯಾಗಿ ಮಾಡಿ ಹೆಚ್ಚೆನ್ನದ ಬೆಲೆಗೆ ಕೊಟ್ಟರೂ ಕ್ರಮೇಣವಾಗಿ ಗುಡಿಸಲಿನಿಂದ ಸಿಮೆಂಟ್ ಶೀಟ್ಮನೆ ನಂತರ ಅರ್ಸಿಸಿ ಮನೆ ಕಟ್ಟಿಸಿದ್ದು ಎಂತವರಿಗೂ ಮಾತ್ಸರ್ಯ  ಹುಟ್ಟಿಸಿತ್ತು . ನಿಂಗಪ್ಪನಿಗೆ ಸ್ವಲ್ಪ ಜಾಸ್ತಿಯೇ ಹೊಟ್ಟೆ ಉರಿದು ನಾನೂ ಒಂದು ಹೋಟೆಲ್‌ ಮಾಡುವೆ ಎಂದು ಸರಿಯಾಗಿ ಬ್ರಮ್ಮಿ ಹೋಟೆಲ್ ಎದುರಿಗೆ ಪಶ್ಚಿಮಾಭಿಮುಖವಾಗಿ  ರಸ್ತೆಗೆ ಸ್ವಲ್ಪ ಹತ್ತಿರಕ್ಕೆ ಸಿಮೆಂಟ್ ಶೀಟ್ ನ ಹೋಟೆಲ್ ಆರಂಭಮಾಡಿಯೇ ಬಿಟ್ಟಿದ್ದ .ತಿಂಡಿಯ ರುಚಿ ಕೊಂಚ ಕಡಿಮೆಯಿದ್ದರೂ ಸಾಲ ಕೊಡುವುದರಿಂದ ಬ್ರಮ್ಮಿಯ ಹೋಟೆಲ್ನಷ್ಟಲ್ಲದಿದ್ದರೂ ಸುಮಾರಾಗಿ ವ್ಯಾಪಾರವಾಗುತ್ತಿತ್ತು .ತಿಂಡಿ ತಿಂದ ನಂತರ ನಿಂಗಪ್ಪ  ಸಾಲದ ಹಣ ಕೇಳಿದದರೆ , ಗಿರಾಕಿಗಳು ಪುನಃ ಬ್ರಮ್ಮಿಯ ಹೊಟೆಲ್ನಲ್ಲಿ ಆಸೀನರಾಗುತ್ತಿದ್ದರು .ಇದರಿಂದಾಗಿ ನಿಂಗಪ್ಪ ಹೊಟೆಲ್ ಇಟ್ಟು ತಲೆ ಮೇಲೆ ಟವಲ್ ಹಾಕಿಕೊಳ್ಳುವ ಕಾಲ ದೂರವಿಲ್ಲ ಎಂದು ಅವರಿವರು ಮಾತಾನಾಡುವುದು ನಿಂಗಪ್ಪನ ಕಿವಿಗೂ ಬಿದ್ದು ವ್ಯಾಘ್ರನಾಗಿ ಹೊಟೆಲ್ ನಲ್ಲಿ ದುಡಿದು ಹೇಗೆ ಸಂಪಾದನೆ ಮಾಡುತ್ತೇನೆ ನೋಡುತ್ತಿರಿ ಎಂದು ಜನರಿಗೆ ಚಾಲೆಂಜ್ ಹಾಕಿದ್ದ.
ಈಗೆ ಚಾಲೆಂಜ್ ಮಾಡಿ ಮೂರೆ ದಿನಕ್ಕೆ ರಸ್ತೆಯ ಅಗಲ ಮಾಡುವವರು ಬಂದು ಅಳತೆ ಮಾಡುವಾಗ ಶಂಕರಜ್ಜರ ಅಂಗಡಿ ಕಡೆಯಿಂದ ಅಳೆದು ನೋಡಿದಾಗ ರಸ್ತೆಗೆ ಹತ್ತಿರದ ಅಂಗಡಿ ಮತ್ತು ಹೋಟೆಲ್ ಕೆಲವು ಅರ್ಧ ಭಾಗ ಕೆಲವು ಪೂರಾ  ಹೋಗುವವು ಎಂದು ಪುಕಾರಾಯಿತು. ಇದನ್ನು ಕೇಳಿದ ನಿಂಗಪ್ಪನಿಗೆ ಪುಕ ಪುಕ ಶುರುವಾಯಿತು. ಅಂದು ಅಳತೆಯ ಕಾರ್ಯನಡೆವ ಮಧ್ಯದಲ್ಲಿ ಟೇಪ್ ಹಿಡಿದು ಅಳತೆ ಮಾಡುವ ರಮೇಶ್ , ಒಮ್ಮೆ ಕಂಬಣ್ಣನ ಹೆಂಡದ ಅಂಗಡಿಗೆ  ಹೋಗಿ ಬಂದಿದ್ದ ಗಮನಿಸಿದ ನಿಂಗಣ್ಣ, ಸಂಜೆ ರಮೇಶ್ ನನ್ನ ಕರೆದುಕೊಂಡು ಹೋಗಿ ತಾನೆ ಹಣ ಕೊಟ್ಟು ಚೆನ್ನಾಗಿ ಇಬ್ಬರೂ ಕುಡಿದು,ಮಧ್ಯ ಮಧ್ಯ ಬೋಟಿ ಮಾಂಸ ತಿನ್ನುತ್ತಾ ಪೀಠಿಕೆ ಶುರುಮಾಡಿದ ನಿಂಗಪ್ಪ .
ರಸ್ತೆಯ ಅಳತೆ ಮಾಡುವಾಗ ನಮ್ಮ ಹೋಟೆಲ್ ಕಡಿಮೆ ಹೋಗುವಂತೆ ಬ್ರಮ್ಮಿದು ಜಾಸ್ತಿ ಹೋಗುವಂತೆ ಅಳತೆ ಮಾಡಿದರೆ ದಿನವೂ ಹೆಂಡ ಜೊತೆಗೆ ಹಣ ಕೊಡುವುದಾಗಿ ಹೇಳಿದ, ಮೊದಲು ಆಗಲ್ಲ ಎನ್ನುತ್ತಿದ್ದ ರಮೇಶ್ ,ಹೆಂಡದ ಗುಡಿಸಲ ಹೊರಗೆ ಮಾದರ ಮಾದೇವ ಕುಡಿದು ಜೋರಾಗಿ ಕಿರುಚುತ್ತಿದ್ದ ಸದ್ದು  ಕೇಳಿ ಒಳಗಿನಿಂದಲೇ ಏರಿದ ಧ್ವನಿಯಲ್ಲಿ "ಹೆ ಮುಚ್ಕೊಂಡ್ ಕುಡಿಯೋ ನನ್ ಮಗನೆ ಸೌಂಡ್ ಬಂದ್ರೆ ಜಾಡ್ಸಿ ಒದಿತಿನಿ" ಎಂದ ನಿಂಗಪ್ಪನ ಧ್ವನಿಗೆ  ಮಾದೇವ ಸುಮ್ಮನಾದ . ಜೋರಾದ ನಿಂಗಪ್ಪನ ಧ್ವನಿ ನಿಧಾನವಾಗಿ ಏರಿದ  ಹೆಂಡದ ನಶೆಯ ಪರಿಣಾಮ " ಆಯಿತು ಹಾಗೆ ಮಾಡ್ತೀನಿ " ಅಂದಿದ್ದ ರಮೇಶ. ನಿಂಗಪ್ಪ ರಮೇಶನ ಅಂಗಿಯ ಮೇಲಿನ ಜೇಬಿಗೆ ನೂರು ರೂಪಾಯಿ ತುರುಕಿದ.
  ಕಳೆದ ಬಾರಿ ರಸ್ತೆಯ ಅಗಲೀಕರಣದ ಸಂಬಂಧ ಅಳೆಯುವಾಗ ಬ್ರಮ್ಮಿ ಹೋಟೆಲ್ ಜಾಸ್ತಿ ಹೋಗುವಂತೆ ರಸ್ತೆಗೆ ಹತ್ತಿರವಿರುವ ನಿಂಗಣ್ಣನ ಹೋಟೆಲ್ ಕಡಿಮೆ ಹೋಗುವ ವಿಚಾರದಲ್ಲಿ ಜನರಿಗೆ ಅನುಮಾನವಿದ್ದು ,ಮೇಲಾಧಿಕಾರಿಗಳಿಗೆ ದೂರು ಬಂದ ಪರಿಣಾಮವಾಗಿ ಇಂದು ಪುನಃ ಅಳೆಯಲು ಬಂದಿದ್ದಾರೆ. ಫಾಲಾಕ್ಷನಿಗೆ ನಿನ್ನೆ ರಾತ್ರಿ ನಶೆಯಲ್ಲಿ ನಿಂಗಪ್ಪ ಹೇಳಿದ ಎಲ್ಲಾ ಕುತಂತ್ರದ ಮಾತುಗಳು ಅಧಿಕಾರಿಗಳ ಎಚ್ಚರಿಕೆಯ ಮಾತಿಗೂ ತಾಳೆಯಾಯಿತು. ಅಧಿಕಾರಿಗಳು ಮುಂದೆ ನಿಂತು ಮೊದಲು ರಸ್ತೆ ಮಧ್ಯದಿಂದ ಬ್ರಮ್ಮಿ ಹೋಟೆಲ್ಗೆ ೧೫  ಅಡಿ  ಟೇಪ್ ಹಿಡಿದಾಗ ಬ್ರಮ್ಮಿಹೋಟೆಲ್ ನಾಲ್ಕು ಅಡಿ ಹೊಡೆಯಲು ಮಾರ್ಕ್ ಮಾಡಿದರು. ಈಗ ಎದುರಿಗಿರುವ ನಿಂಗಪ್ಪನ ಹೋಟೆಲ್ ಸರದಿ ಟೇಪ್ ಹಿಡಿದಾಗ ನಿಂಗಪ್ಪನ ಹೋಟೆಲ್  ಹತ್ತು ಅಡಿ ಹೊಡೆಯಲು ಮಾರ್ಕ್ ಮಾಡಲಾಯಿತು.
"ನೋಡು ರಮೇಶ್ ಇದೇ ರೀತಿಯಲ್ಲಿ ಅಳತೆ ಮುಂದುವರೆಸು ನನಗೆ ಡಿ ಸಿ ಅಪೀಸ್ನಲ್ಲಿ ಮೀಟಿಂಗ್ ಇದೆ, ನಾನು ಹೊರಡುತ್ತೇನೆ , ಸಂಜೆ ರಿಪೋರ್ಟ್ ನನಗೆ ಕೊಡಬೇಕು" ಎಂದು ದಡೂತಿ ದೇಹ ಎಳೆದುಕೊಂಡು ಜೀಪಿನಲ್ಲಿ ಆಸಿನರಾದರು ಸಾಹೇಬರು. ಕೆಟ್ಟ ಸದ್ದಿನೊಂದಿಗೆ ಕಪ್ಪು ಹೊಗೆ ಉಗುಳುತ್ತಾ ಹರ್ತಿಕೋಟೆಯ ಕಡೆಗೆ ಜೀಪು ಹೊರಟಿತು.
ನಿಂಗಪ್ಪ ಒಳಗೊಳಗೆ ಕುದಿಯುತ್ತಿದ್ದ. ರಮೇಶನಿಗೆ ನಿಂಗಪ್ಪನನ್ನು ನೇರವಾಗಿ ನೋಡಲು ಒಳಗೊಳಗೆ ಏನೋ ಅಂಜಿಕೆ.
ಅಳತೆ ಮಾಡುತ್ತಾ ಸತ್ಯಪ್ಪನವರ ಮನೆಯ ಹತ್ತಿರ ಬಂದು ಅಳತೆ ಮಾಡಿದಾಗ ಕೇವಲ ಐದು ಅಡಿ ಮನೆ ಉಳಿದು ಇಡೀ ಮನೆ ಒಡೆಯುವರು ಎಂಬ ಸುದ್ದಿ ತಿಳಿದು ಸತ್ಯಪ್ಪ ಎದೆಯೊಡೆದು ಬಾಯಿ ಬಡಿದು ಕೊಳ್ಳತ್ತಾ . " ಮನೇಲಿ ನಮ್ಮೆಂಗುಸ್ರು ಕಾಯಿಲೆ ಬಿದ್ದವ್ಳೆ. ನನಗೆ ಮೂರು ಜನ ಹೆಣ್ಣು ಮಕ್ಕಳು ಇತ್ತೀಚಿನ ಅಂಗಡಿ ವ್ಯಾಪಾರನೂ ಕಮ್ಮಿ ಈಗ ಮನೆನೂ ಹೋದರೆ ನಾನು ಎಲ್ಲಿಗೆ ಹೊಗ್ಲಿ ,ಎನ್ರಪ್ಪ? ಇಂತ ಅನ್ಯಾಯ ಯಾರಿಗೆ ಬೇಕಪ್ಪ? ರಸ್ತೆ ಅಗಲ ಇಷ್ಟೇ ಇರಲಿ ಬಿಡ್ರಿ" ಎಂದು ಕಣ್ಣಲ್ಲಿ ನೀರು ಹಾಕುತ್ತಿದ್ದರೆ ನೋಡುತ್ತಿದ್ದವರ ಕಣ್ಣಾಲಿಗಳು ಒದ್ದೆಯಾದವು. ಒಳಗಡೆ ಸತ್ಯಪ್ಪನ ಹೆಂಡತಿ ಜೋರಾಗಿ ಕೆಮ್ಮವ ಸದ್ದು ಹೊರಗಡೆ  ಕೇಳುತ್ತಿತ್ತು, ಚಿಕ್ಕ ಮಗಳು ನೀರು ಕುಡಿ ಎಂದು ಅಮ್ಮನಿಗೆ  ನೀರು ಕೊಟ್ಟಳು
ಮುಂದುವರೆಯುವುದು
ಸಿ ಜಿ ವೆಂಕಟೇಶ್ವರ

26 ಮೇ 2020

ಹಾಯ್ಕುಗಳು ೧೦


ಹಾಯ್ಕುಗಳು೬ ರಿಂದ ೧೦



ಕವಿತೆಗಳು
ಹೃದಯದ ಆಳದ
ಭಾವನೆಗಳು



ಮಳೆಯಾಗಿದೆ
ಒಳಿತಿಗಿಂತ ಹೆಚ್ಚು
ಕೊಚ್ಚಿಹೋಗಿದೆ


ಬಡಿದಾಡುವೆ
ಇಲ್ಲಿರುವೆ ಕೇವಲ
ಮೂರುದಿವಸ



ನಾನೆನ್ನದಿರು
ಹಮ್ಮಿನಲಿ‌ ಏನಿದೆ?
ನಾವೆಂದುನೋಡು

೧೦
ಮೊದಲಿದ್ದವು
ಕಡಲಿನಾಳದಲಿ
ಕೆನ್ನೆಸೇರಿವೆ


ಸಿ ಜಿ ವೆಂಕಟೇಶ್ವರ

25 ಮೇ 2020

ನೆನಪು ಸುಂದರ ( ಕವನ)



*ನೆನಪು ಸುಂದರ*

ಸ್ಲೇಟು ಬಳಪ ಹಿಡಿದು
ಬರೆದ ನೆನಪು ಸುಂದರ
ಪಾಟಿ ಚೀಲ ಹೊತ್ತು
ನಡೆದ ಬಾಲ್ಯ ಸುಮಧುರ

ಪೆನ್ ಪೆನ್ಸಿಲ್ ಹಿಡಿದು
ಬರೆಯಲೇನೋ  ಆನಂದ
ನೆಲದ ಮೇಲೆ ಕುಳಿತು
ಓದಿದ್ದೆ ಬಲು ಚೆಂದ

ಗಡಿಗೆ ನೀರು ಇತ್ತು
ಅಂದು ತಣಿಸಲು ದಾಹ
ಪುಸ್ತಕದ ಬಗ್ಗೆ ನನಗೆ
ಇತ್ತು ಏನೋ ಮೋಹ

ಲಾಟೀನು‌ ನೀಡುತಿತ್ತು
ಓದಲು ರಾತ್ರಿ ಬೆಳಕು
ಇವೆಲ್ಲ ಸೇರಿ ರೂಪಿಸಿವೆ
ನನ್ನ ಸುಂದರ ಬದುಕು

ಸಿ ಜಿ ವೆಂಕಟೇಶ್ವರ
ತುಮಕೂರು

24 ಮೇ 2020

ಮಹಾಸಂತ ( ಕವನ)


*ಮಹಾಸಂತ*
ಸ್ವಾಮಿ ವಿವೇಕಾನಂದ

ವಿಶ್ವವ ಬೆಳಗಿದ ಪುಣ್ಯಾತ್ಮ
ಜಾಗೃತವಾಯಿತು ನಮ್ಮಾತ್ಮ||

ವಿಶ್ವನಾಥ, ಭುವನೇಶ್ವರಿ
ದೇವಿಯ ವರದಾನ
ಜನರ ಸೇವೆಯ ಮಾಡುತ
ಕಂಡಿರಿ ಅವರಲೆ ಜನಾರ್ಧನ||

ನಮ್ಮ ಸಂಸ್ಕೃತಿಯನ್ನು
ವಿಶ್ವಕೆ ಸಾರಿದ ಧೀಮಂತ
ಆತ್ಮೋಧ್ದಾರಕೆ ಕರೆ ನೀಡಿದ
ಯುಗದ ಮಹಾ ಸಂತ||

ರಾಮಕೃಷ್ಣರ ಆಧ್ಯಾತ್ಮ
ಪಾಲಿಸಿ ತೊರಿಸಿದಿರಿ ಆನಂದ
ಜನಮನದಲ್ಲಿ ನೆಲೆಸಿದ
ನೀವೇ ಸ್ವಾಮಿ ವಿವೇಕಾನಂದ||

 *ಸಿ ಜಿ‌ ವೆಂಕಟೇಶ್ವರ*

23 ಮೇ 2020

ಮರಳಿ ಗ್ರಾಮದೆಡೆಗೆ ( ಕಥೆ)


*ಮರಳಿ ಗ್ರಾಮದೆಡೆಗೆ*
" ಏ ಎದ್ದಾಳಪ್ಪ ಯಾರು ನೀನು? ಯಾವೂರು? ಯಾಕೆ ಇಲ್ಲಿ ಮಲಗಿದ್ದಿಯಾ?"
ಕಪ್ಪನೆಯ ಡಾಂಬರ್ ಕಾದು ರಸ್ತೆಯಿಂದ ಕೆಳಗಿಳಿಯುತ್ತಿತ್ತು,ಸ್ವಲ್ಪ ದೂರ ನೋಡಿದರೆ ಕಪ್ಪನೆಯ ರಸ್ತೆಯ ಮೇಲೆ ನೀರು ಕಂಡಂತಾಗುತ್ತಿತ್ತು, ಬಿಸಿಲಿನ ಜಳಕ್ಕೆ ರಸ್ತೆಯ ಪಕ್ಕದ ಮಾಗಿ ಮಾಡಿದ ಕೆಂಪುಮಣ್ಣು ಬಣ್ಣ ಕಳೆದುಕೊಂಡಿತ್ತು
ಮುಖದ ಮೇಲೆ ಹಾಕಿಕೊಂಡ ತೂತುಗಳಿರುವ ಬಣ್ಣ ಕಳೆದುಕೊಂಡ ಲುಂಗಿಯನ್ನು ಸರಿಸಿ ಮುಲುಕುತ್ತಾ, ಮಧ್ಯಾಹ್ನದ ಬಿರುಬಿಸಿಲಿನಲ್ಲೂ  ನಡುಗುತ್ತಾ  ಕಷ್ಟ ಪಟ್ಟು ಮೇಲೇಳಲು ಪ್ರಯತ್ನ ಪಟ್ಟರು ಆ ವ್ಯಕ್ತಿ,
ವಯಸ್ಸು ನಲವತ್ತರಿಂದ ಐವತ್ತು ಇರಬಹುದು, ಗಡ್ಡ ಮೀಸೆಗಳು ಉದ್ದವಾಗಿ ಬೆಳೆದಿದ್ದರಿಂದ ಮುಖದ ಆಕಾರ ಅಸ್ಪಷ್ಟ, ಕೆದರಿರುವ ಬಿಳಿಮಿಶ್ರಿತ  ಕಪ್ಪು ಕೂದಲನ್ನು ನೋಡಿದರೆ  ಎಷ್ಟೋ ದಿನಗಳಿಂದ ಸ್ನಾನ ಮಾಡಿಲ್ಲ ಎಂಬುದು ಗೊತ್ತಾಗುತ್ತಿತ್ತು.
ಚಿಗುರು ಮೀಸೆಯ, ಬೆಳ್ಳನೆಯ ಸುಂದರ ಮೈಕಟ್ಟಿನ, ಸಾಧಾರಣ ಆಳ್ತನದ ಸತೀಶನ ನೋಡಿ,
" ನಾನು ಮಾರಣ್ಣ ಕಣಪ್ಪ ನಮ್ಮ ಊರು ಬಳ್ಳಾರಿ ಹತ್ರ ತೋರಣಗಲ್ಲು ಕಣಪ್ಪ ."ಎಂದು ನಡುಗುತ್ತ ಉತ್ತರಿಸಿದ ಮಾರಪ್ಪ.
" ಅದು ಸರಿ ಈ ಬಿಸ್ಲಾಗೆ ಈ ಜಾಲಿ ಮರದ ಕೆಳಗೆ ಯಾಕೆ ಮಲ್ಗಿದಿಯಾ?
" ಅಯ್ಯೋ ನಮ್ಮಂತವ್ರಿಗೆ ಜಾಲಿ ಮರ ಅಲ್ದೆ ಇನ್ಯಾವ್ ಬಂಗ್ಲೆ ಸಿಗುತ್ತಪ್ಪ ಮಲ್ಗಾಕೆ"
ನೋವಿನಿಂದ ಮುಲುಕುತ್ತಾ , ಜೀವನದ ಮೇಲೆ , ಪ್ರಪಂಚದ ಮೇಲಿನ ಜಿಗುಪ್ಸೆಯಿಂದ ನುಡಿದ ಮಾರಪ್ಪ"
" ಅಣ್ಣಾ ಬೆಳಿಗ್ಗೆ ಊಟ ಗೀಟ ಮಾಡಿದ್ಯಾ ಇಲ್ವೊ?" ಕೇಳಿದ ಸತೀಶ
" ಅಯ್ಯೋ ನಿನ್ನೆ ಸಂಜೆ ಹಿರಿಯೂರಿನ ಟಿ ಬಿ ಸರ್ಕಲ್ ಹತ್ರ ಯಾರೋ ಪುಣ್ಯಾತ್ಮ ಒಂದ್ ಪ್ಲೇಟ್ ಇಡ್ಲಿ ಕೊಡಿಸಿದ್ದ ಕಣಪ್ಪ, ಅದನ್ನು ತಿಂದದ್ದೆ ಕೊನೆ ,ಹರ್ತಿಕೋಟೆ ಹತ್ತಿರ ಜಗ್ಗ ನಲ್ಲಿಲಿ ಈ ನೀರು ತುಂಬಿಸಿಕೊಂಡು ಕುಡಿತಿದಿನಿ " ಎಂದು
ಅರ್ಧದಷ್ಟು ತುಂಬಿದ   ನೀರಿನ ಬಾಟಲ್ ತೋರಿಸಿದರು ಮಾರಣ್ಣ.
"ಇಗ ಕೈ ತೊಳ್ಕ ಒಂದ್ ಅರ್ಧ ಮುದ್ದೆ ಸಾರು ಐತೆ ಉಣ್ಣು"  ಅಂದ ಸತೀಶ
" ಸತೀಶನ ಮಾವ ಬಿಳಿಯಪ್ಪ ಹೊಲದಲ್ಲಿ ನೇಗಿಲು ಹೊಡೆಯಲು ಬಂದಿದ್ದರು ಅವರಿಗೆ ಬುತ್ತಿ ತಂದಿದ್ದ ಸತೀಶ.ಹೊಲದಲ್ಲಿ ಉಳುವ ಕಷ್ಟಕರ ಕೆಲಸ ಮಾಡುವ ಬಿಳಿಯಪ್ಪ ಯಾವಾಗಲೂ ಮೂರು ಮುದ್ದೆ ಉಣ್ಣುತ್ತಿದ್ದರು, ಯಾಕೋ ಅಂದು ಎರಡೂವರೆ ಮುದ್ದೆ ಉಂಡು 
"ಸತೀಶ ನನಗೆ ಸಾಕು ನೀನೆ ಉಣ್ಣು" ಅಂದರಂತೆ
"ಬ್ಯಾಡ ಮಾವ ನಾನು ಮನೇಲೆ ಉಣ್ತೀನಿ" ಎಂದು ಬುತ್ತಿಯ ವೈರ್ ಬ್ಯಾಗ್ ನಲ್ಲಿ ಇಟ್ಟುಕೊಂಡು ದಾರಿಯಲ್ಲಿ ಸೈಕಲ್‌ ಮೇಲೆ ಬರುವಾಗ ಮಾರಪ್ಪನ ಕಂಡ.

ಕಷ್ಟ ಪಟ್ಟು ಎದ್ದು ತನ್ನ ಕೈಚೀಲದಲ್ಲಿದ್ದ ಅಲ್ಯೂಮಿನಿಯಂ ತಟ್ಟೆ ತೆಗೆದು ಅದಕ್ಕೆ ಸ್ವಲ್ಪ ನೀರು ಹಾಕಿ ತೊಳೆವ ಶಾಸ್ತ್ರ ಮಾಡಿ  ಮುದ್ದೆ ಸಾರು ಹಾಕಿಸಿಕೊಂಡು ಒಂದೇ ಸಮನೆ ಗಬಗಬನೆ ತಿನ್ನಲು ಶುರುಮಾಡಿದರು ಮಾರಣ್ಣ.
ಇದನ್ನು ನೋಡಿದ ಸತೀಶನಿಗೆ ಮೊದಲ ಬಾರಿ ಹಸಿವನ್ನು  ನೋಡಿದಂತಾಯಿತು. ಅವನ ಮಾವ ಮುಕುಂದಯ್ಯನವರು ಸತೀಶ ಒಮ್ಮೆ ಕಲ್ಲಿನ ಮುಸುರೆ ಬಾನಿಗೆ ತಟ್ಟೆಯಲ್ಲಿ ಹೆಚ್ಚಾಗಿ ಬಿಟ್ಟ ಮುದ್ದೆ ಬಿಸಾಕುವಾಗ ಹೇಳಿದ ಮಾತು ನೆನಪಾಯಿತು. " ಎಷ್ಟೋ ಜನ ಈ ಪ್ರಪಂಚದಲ್ಲಿ ಒಂದೊತ್ತು ಊಟ ಇಲ್ದೆ ಮಲಗ್ತಾರೆ ಇಂಗೆ ಉಣ್ಣೋ ಅನ್ನ ಪೋಲು ಮಾಡಬೇಡ"
"ಅದ್ಸರಿ ಮಾರಣ್ಣ ಇಂಗ್ಯಾಕೆ ಇಲ್ಲಿ ಮಲ್ಕಂಡಿದಿರಾ? ಇದು ಬಳ್ಳಾರಿ ರೋಡ್ ಅಲ್ವ ಯಾವುದಾದರೂ ಬಸ್ ಹತ್ತಿ ನಿಮ್ಮೂರ್ಗೆ ಹೋಗಾದಲ್ವ?
" ಅಯ್ಯೋ ,ಅಪ್ಪ ಬಸ್ ಗೆ ಹೋಗಾಕೆ ನನಗೂ ಆಸೆ , ಬಸ್ ಚಾರ್ಜು ಬೇಕಲ್ಲ? , "
"ಈಗ ನೀವು ಎಲ್ಲಿಂದ ಬಂದ್ರಿ?"
" ಬೆಂಗಳೂರಿನಿಂದ! "
ಕೇಳುತ್ತಲೆ ದಂಗಾದ ಸತೀಶ , ಸರಿ ಸುಮಾರು ನೂರಾ ಎಂಭತ್ತು ಕಿಲೋಮೀಟರ್ !.
" ಅಷ್ಟು ದೂರದಿಂದ ನಡೆದೇ ಬಂದಿರಾ?"
ಹೌದು ಎಂಬಂತೆ ತಲೆ ಆಡಿಸಿದರು ಮಾರಣ್ಣ.
"ಅದ್ಯಾಕೆ ಹೀಗೆ ನಡದೇ ಬಂದಿರಿ ದುಡ್ ಇರಲಿಲ್ಲವೆ?
" ಅಯ್ಯೋ ಅದೊಂದು ದೊಡ್ಡ ಕಥೆ ಕಣಪ್ಪ , ನಮ್ದು ಊರಾಗೆ ಜಮೀನೆಲ್ಲ ಇತ್ತು ,ಮಳೆ ಬೆಳೆ ಚೆನ್ನಾಗೆ ಆಗ್ತಿತ್ತು, ನಾನು ಬೇಸಾಯ ಮಾಡ್ಕೊಂಡು ಹೆಂಡ್ತಿ ,ಒಬ್ಬಳು ಮಗಳು, ಸುಖವಾಗಿ ಇದ್ವಿ.  ನಮ್ಮೂರ್ನಾಗೆ ಮೂರ್ನಾಲ್ಕು ಜನ ಬೆಂಗಳೂರಿನಲ್ಲಿ ಕೆಲ್ಸ ಮಾಡಿ ಚೆನ್ನಾಗಿ ದುಡಿದು ತಮ್ಮ ಮನೆಯನ್ನು ರಿಪೇರಿ ಮಾಡ್ಸಿ , ಸ್ವಲ್ಪ ದುಡ್ ಅವರ ಅಪ್ಪ ಅಮ್ಮನ ಕೈಗೆ ಕೊಟ್ಟು ಹೋದರು, ಅದನ್ನು ನೋಡಿದ ನನ್ ಹೆಂಡತಿ ,ನೀನೂ ಬೆಂಗಳೂರಿಗೆ ಹೋಗಿ ದುಡಿ ,ನನಗೆ ಬಂಗಾರದ ಒಡವೆ  ಮಾಡಿಸು, ಬೆಂಗಳೂರಿನಲ್ಲಿ ಚೆನ್ನಾಗಿ ದುಡಿದರೆ  ನಮ್ಮ ಮಗಳ  ಓದಿಗೆ ಅನುಕೂಲ ಆಗುತ್ತದೆ ಅಂದಳು. ನಾನು ಬೇಡ, ಇಲ್ಲೇ ನಮ್ಮ ಜಮೀನಿನ ಕೆಲಸ ಮಾಡುವೆ ದೇವರು ನಮಗೆ ಕೊಟ್ಟಿರೋದೆ ಸಾಕು ಎಂದರೂ ಕೇಳಲಿಲ್ಲ.
ಅಂತೂ ಬೆಂಗಳೂರು ಸೇರಿ ವಾಚ್ಮೆನ್ ಕೆಲಸಕ್ಕೆ ಸೇರಿ ಆರು ತಿಂಗಳಲ್ಲಿ ಎರಡು ಬಾರಿ ಊರಿಗೆ ಹೋಗಿ ಹಣ ಕೊಟ್ಟು ಬಂದಿದ್ದೆ ,ಹೆಂಡತಿಯೇನೋ ಸಂತಸ ಪಟ್ಟಳು ,ಮಗಳು ಮಾತ್ರ ಯಾಕೋ   "ಅಪ್ಪ ನೀನು ಬೆಂಗಳೂರಿಗೆ ಹೋಗ ಬೇಡ ಇಲ್ಲೇ ಇರು ಎಂದು ಕಣ್ಣೀರಾಕಿದ್ದಳು".
"ಅಯ್ತು ಮಗಳೆ   ಬೇಗ ಬರುವೆ "ಎಂದು ಪುನಃ ಬೆಂಗಳೂರಿಗೆ ಬಂದೆ .ನನ್ ಕೆಲಸ ನೋಡಿದ ಸಾವ್ಕಾರರು ನನಗೆ ಸಂಬಳ ಜಾಸ್ತಿ ಮಾಡಿ ,ಮೊದಲು ಕೆಲಸ ಮಾಡುವ ವಾಚ್ಮನ್ ಕೆಲಸದಿಂದ ತೆಗೆದರು.ಇದರಿಂದ ಸಿಟ್ಟಾದ ಆ ವಾಚ್ಮನ್ ನಾನಿಲ್ಲದಾಗ ನಮ್ ಕಂಪನಿಯಲ್ಲಿ ಕಳ್ಳತನ ಮಾಡಿ ಅದನ್ನು ನನ್ನ ಮೇಲೆ ಹೊರಿಸಿದ, ಸಾವ್ಕಾರರು  ನನ್ನನ್ನು ಕೆಲಸದಿಂದ ತೆಗೆದರು .
ಬೇರೆ ಕೆಲಸ ನೋಡುತ್ತಾ ಅಲೆದೆ ಕೆಲಸ ಸಿಗಲಿಲ್ಲ ,ಕೈಯಲ್ಲಿದ್ದ ಕಾಸು ಖಾಲಿಯಾಯಿತು .ಊರಿಗೆ ಹೋಗೋಣ ಎಂದು ಮೆಜೆಸ್ಟಿಕ್ ಗೆ ಬಂದು ಒಂದಿಬ್ಬರನ್ನು ಬಸ್ ಚಾರ್ಜ್ ಗೆ ಹಣ ಕೇಳಿದೆ ಅವರು ನನಗೆ ಅವಮಾನ ಮಾಡಿದರು ,ಇದರಿಂದ ಬೇಸತ್ತು ಅಲ್ಲಿಂದಲೆ ನಡೆದು ನಮ್ಮೂರು ಸೇರಲು ತೀರ್ಮಾನ ಮಾಡಿ ,ನಡೆಯುತ್ತಾ ಯಾರಾದರೂ ಏನಾದರೂ ಕೊಟ್ಟರೆ ತಿನ್ನುವೆ ,ಇಲ್ಲ ಅಂದರೆ ಇದೋ" ಎಂದು ನೀರಿನ ಬಾಟಲ್ ತೋರಿಸಿದರು ಮಾರಣ್ಣ
ಅವರ ಕಥೆ ಕೇಳಿ ಸತೀಶನಿಗೆ ಬಹಳ ಬೇಸರವಾಯಿತು.
" ಅಣ್ಣ ನಾನು ಸೈಕಲ್‌ ತಂದಿರುವೆ ,ನಿಮ್ಮನ್ನು ಯರಬಳ್ಳಿ ವರೆಗೆ ಸೈಕಲ್‌ ನಲ್ಲಿ ಕರೆದುಕೊಂಡು ಹೋಗುವೆ ಬನ್ನಿ " ಎಂದ ಸತೀಶ
ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಮತ್ತು   ಸಹಾಯ ಮಾಡುವ ಮಾಡುವ ಗುಣ ತಾಯಿ ಭೂದೇವಮ್ಮನಿಂದ ರಕ್ತಗತವಾಗಿ ಬಂದಂತಿತ್ತು ಸತೀಶನಿಗೆ.
ನಿಂತು‌ಕೊಳ್ಳಲು ಪ್ರಯತ್ನ ಪಟ್ಟ ಮಾರಣ್ಣ ನೋವಿಂದ ಬಳಲಿ ಬಿದ್ದರು ಅವರ ಎತ್ತಲು ಹೋದ ಸತೀಶ ನೋಡಿದ್ದು ಭಯಾನಕ,
ತನಗರಿವಿಲ್ಲದೆ ಕಣ್ಣಲ್ಲಿ ನೀರು ಹರಿಯಲಾರಂಬಿಸಿದವು.
ಅಂಗಾಲುಗಳಲ್ಲಿ ರಕ್ತ ಜಿನುಗುತಿದೆ ,ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದೆ ,ಅಲ್ಲಲ್ಲಿ ಬೊಬ್ಬೆ ಬಂದಿವೆ ,ಕೆಲವೆಡೆ ಬಟ್ಟೆ ಕಟ್ಟಲಾಗಿದೆ.
" ಅಲ್ಲಾ ಅಣ್ಣ ಇಂತಹ ನೋವು ಎಂಗೆ ತಡ್ಕೊಂಡಿದಿರಿ "ಎಂದು ಬುತ್ತಿ ಬಟ್ಟೆ ಹರಿದು ಎರಡೂ ಕಾಲಿಗೆ ಕಟ್ಟಿ ಸೈಕಲ್ ಮೇಲೆ ಕೂರಿಸಿಕೊಂಡು ಯರಬಳ್ಳಿಯ ಮಾರಮ್ಮನ ಗುಡಿಯ ಬಳಿ ನಿಲ್ಲಿಸಿದ .
"ಯಾರಪ್ಪ ಸತೀಶ ಇವರು "
ಕೇಳಿದರು ಊರ ಪ್ರಮುಖ ಕಾಟಯ್ಯ
ಮಾರಣ್ಣನ ಕಥೆ ಕೇಳಿ ಆಗಲೆ ಯರಬಳ್ಳಿಯ ಆಸ್ಪತ್ರೆಗೆ ಸೈಕಲ್‌ ಮೇಲೆ ಕರೆದುಕೊಂಡು ಹೋಗಿ ಬ್ಯಾಂಡೇಜ್ ಹಾಕಿಸಿ ಇಂಜೆಕ್ಷನ್ ಕೊಡಿಸಿ , ಬಸ್ಚಾರ್ಜ್ ಗೆ ಸ್ವಲ್ಪ ಹಣ ಕೊಟ್ಟು , ಸಂಜೆಯ ಐದು ಗಂಟೆಯ  ನೀಲಕಂಠೇಶ್ವರ ಬಸ್ ಗೆ ಹತ್ತಿಸಿ
" ಕಂಡಕ್ಟರ್ ಇವರನ್ನು ಬಳ್ಳಾರಿ ಗೆ ಇಳಿಸಿ"ಎಂದರು ಕಾಟಯ್ಯ.
ಸತೀಶನನ್ನು ಒಮ್ಮೆ, ಕಾಟಯ್ಯ ನನ್ನು ಒಮ್ಮೆ ನೋಡುತ್ತಾ ಗಳಗಳನೆ ಅಳಲಾರಂಬಿಸಿದರು ಮಾರಣ್ಣ.
ನೀಲಕಂಠೇಶ್ವರ ಬಸ್ ಹೊಗೆ ಉಗುಳುತ್ತಾ
ಆಸ್ಪತ್ರೆಯ ದಿನ್ನೆ ಹತ್ತಿ ಚಳ್ಳಕೆರೆ ಕಡೆಗೆ ಚಲಿಸಿತು, ದೂರ ಹೋಗುವವರೆಗೂ ಕಿಟಕಿಯಾಚೆ ಮಾರಣ್ಣನ ಅಲ್ಲಾಡುವ ಕೈ ಕಾಣುತ್ತಿತು.....
*ಸಿ ಜಿ ವೆಂಕಟೇಶ್ವರ*
*ತುಮಕೂರು*