09 ಏಪ್ರಿಲ್ 2020

ಬದುಕಬೇಕು (ಕವನ)

*ಬದುಕಬೇಕು*

ಬದುಕಬೇಕು ನೀನು ಬದುಕಬೇಕು
ಇತರರಿಗೆ ದಾರಿ ದೀಪವಾಗಬೇಕು
ಪ್ರತಿಕ್ಷಣವು ಜೀವಿಸುತಲಿರಬೇಕು
ಶಿವಮೆಚ್ಚಿ ಅಹುದಹುದು ಎನ್ನಬೇಕು.

ಅವರಿವರ ತೆಗೆಳಿಕೆಗೆ ಕಿವಿಗೊಡಬೇಡ
ಸರಿದಾರಿಯಲಿ ನಡೆವುದ ಮರೆಯಬೇಡ
ಅನವರತ ನಡೆ ಗುರಿ ಮುಟ್ಟುವೆ ನೋಡ
ನೀ ಹಾಡು ನಿನ್ನೆದೆಯ ಗೆಲುವ ಹಾಡ.

ಜೀವನವಿದು ಮೂರು ದಿನದ ಬಾಳು
ಇರುವುದು ಬಾಳಲ್ಲಿ  ಏಳು ಬೀಳು
ನಿನ್ನಂತೆ ಇತರರ ಬಾಳು ಕೇಳು
ಸಕಲ ಚರಾಚರದೊಂದಿಗೆ ಬಾಳು.

ಸೋತೆನೆಂದು ಮೂಲೆಯಲಿ ಕೂರದಿರು
ಗೆಲುವು ಸಿಗದು‌ ಎಂದು ಕೊರಗದಿರು
ನಿನ್ನ ದಾರಿಗೆ ನೀನಾಗು‌ ಗುರು
ಸನ್ಮಾನಿಸುವರು ಗೆದ್ದಾಗ ಜನರು.

ಕಾಯಕದಿ ಕೈಲಾಸವನು ಕಂಡರೆ
ಜನರಲ್ಲಿ‌ ಜನಾರ್ದನನು ಕಂಡರೆ
ಹಂಚಿ‌ ತಿನ್ನುವ ಗುಣವ ನೀ ಕಲಿತರೆ
ನಂದನವಾಗುವುದು ಈ ಧರೆ.

*ಸಿ ಜಿ‌ ವೆಂಕಟೇಶ್ವರ*
*ತುಮಕೂರು*

08 ಏಪ್ರಿಲ್ 2020

ಮನವಿ(ಹನುಮ ಜಯಂತಿಯ ಶುಭಾಶಯಗಳು)

ಮನವಿ

(ಇಂದು ಹನುಮ ಜಯಂತಿ)

ಇಂದು ನಿಮ್ಮ ‌ಜನಮದಿನ
ಮಾರುತಿ ತುಂಬಿಹನು ನನ್ನ ಮ‌ನ
ಕೊಡದಿದ್ದರೂ ಸರಿ ಧನ
ಹರಸು‌ ನೀಡಿ ಒಳ್ಳೆಯ ಗುಣ
ಆಗಲಿ ನನ್ನ ಜನ್ಮ ಪಾವನ

*ಸಿ ಜಿ ವೆಂಕಟೇಶ್ವರ*
*ತುಮಕೂರು*

07 ಏಪ್ರಿಲ್ 2020

ಸಿಹಿಜೀವಿಯ ಹನಿಗಳು ( ವಿಶ್ವ ಆರೋಗ್ಯ ದಿನದ ನೆನಪಿಗಾಗಿ)


*ಸಿಹಿಜೀವಿಯ ಹನಿಗಳು*

*೧*

*ಪರಲೋಕ ರವಾನೆ*

ಅಶುದ್ಧ ಗಾಳಿಯ ಸೇವನೆ 
ದೇಹವಾಗಿದೆ ರೋಗದ ಮನೆ
ಕಾಲನ ಮಹಾಚಿತಾವಣೆ 
ಶೀಘ್ರ ಪರಲೋಕಕೆ ರವಾನೆ 

*೨*

*ಜೀವಿಸು*

ಕಾಲ ಕಾಲಕೆ ದೇಹವ ದಂಡಿಸು
ಒಳ್ಳೆಯ ಗಾಳಿಯ ಸೇವಿಸು
ಒಳ್ಳೆಯ ಸ್ನೇಹಲೋಕ ಗಳಿಸು
ಆರೋಗ್ಯದಿಂದ ಜೀವಿಸು 

*೩*

*ಜೀವನ*

ಲೋಕದಲ್ಲಿರುವ ಬಹುಪಾಲು
ಗಾಳಿಗೋಪುರದಲಿ ವಿಹರಿಸುವ ಜನ
ಕಾಲನು ಬಂದು ಈ ದೇಹ ನನ್ನದು
ಎಂದಾಗ ಅರಿವರು ಇಷ್ಟೆ ಜೀವನ 

*ಸಿ .ಜಿ ವೆಂಕಟೇಶ್ವರ*
*ತುಮಕೂರು*


ತಣಿಸು ಬಾರೆ ( ಭಾವಗೀತೆ)

*ತಣಿಸು ಬಾರೆ*

ಎಂದು ಆಗಮಿಸುವೆ ಮನದ
ರತಿ ಈ ಮನ್ಮಥನ ಸೇರಲು
ಮುನ್ನ ನೀಡಿದ ಮಧುರ
ವಚನವನು ಉಳಿಸಲು

ದಿನ ಕಳೆದು ಪಕ್ಷ,ಮಾಸಗಳು
ಉರುಳಿದರೂ ಸುಳಿವಿಲ್ಲ
ನಿನ್ನಧರದ ಮಧುಪಾನದ
ಮಧುರ ಮಹೋತ್ಸವ ಮರೆತಿಲ್ಲ

ಬೆಳಗು ಬೈಗೆಂಬ ಪರಿವಿಲ್ಲ
ನಿನ್ನ ಆಗಮನಕೆ ಕಾದಿಹೆನು
ಜೇನಹೊಳೆಯಲಿ ತೇಲಿದ
ಮಾಸದ ನೆನಪಲಿ ಬದುಕಿಹೆನು

ನಿನ್ನ ಸಂಗವು ಪರಮಂಗಲ
ನೀಡು ಪ್ರೇಮದಾಲಿಂಗನ
ನೀನೇ ಅಮೃತ ನನ್ನ ಬಾಳಿಗೆ
ತಣಿಸು ಬಾರೆ ಮೈ ಮನ

*ಸಿ ಜಿ ವೆಂಕಟೇಶ್ವರ*
*ತುಮಕೂರು*






06 ಏಪ್ರಿಲ್ 2020

ಸುಲೋಚನ (ಭಾವಗೀತೆ)

*ಸುಲೋಚನ*

ನಾ ಬಂದಿಹೆ ಬಳಿ ಸಾರಿ
ನಿಂತಿಹೆನು ಪ್ರೀತಿ ಕೋರಿ
ನನ್ನ ಗುಳಿಕೆನ್ನೆಯ ರಾಣಿ
ಮಾಡು ಮುತ್ತಿನ ಬೋಣಿ

ಸುಂದರ ಕಣ್ಗಳ ಸುಲೋಚನ
ಬರುವೆ ಮಾಡದೆ ಆಲೋಚನೆ
ಬೇರಡೆ ಇಲ್ಲ ನನ ಗಮನ
ಬೆರೆಸೋಣ ನಮ್ಮ ಮೈಮನ

ಚಂದ್ರನ ತುಂಡಿನ ನಲ್ಲೆ
ಮೈಮಾಟ ಕಬ್ಬಿನ ಜಲ್ಲೆ
ಕೋಮಲ ಮಧುರ ಮಲ್ಲೆ
ವರಿಸುವೆ ನಾ ನಿನ್ನನು ಇಲ್ಲೆ

ಧರೆಗಿಳಿದವಳೆ ನನ್ನ ರತಿ
ನೀಡುವೆ ಜಗದೆಲ್ಲಾ ಪ್ರೀತಿ
ನೋಡುವುದಿಲ್ಲ ಜಾತೀ ಗೀತಿ
ನೀನಾಗು ಬಾ ನನ್ನ ಸತಿ

*ಸಿ ಜಿ ವೆಂಕಟೇಶ್ವರ*
*ತುಮಕೂರು*