04 ಏಪ್ರಿಲ್ 2020

ಬೋಧನೆ ( ನ್ಯಾನೋ ಕಥೆ) ಉತ್ತಮ ನ್ಯಾನೋ ಕಥೆ ಎಂದು ಹನಿ ಹನಿ ಇಬ್ಬನಿ ಬಳಗದಿಂದ ಪುರಸ್ಕೃತ

*ಬೋಧನೆ*

ನ್ಯಾನೋ ಕಥೆ

ಬೇಸಿಗೆ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ‌ ಭಾಗವಹಿಸಿದ ನಿಸರ್ಗ ಮೇಡಂರವರು " ಮಕ್ಕಳೇ ಈ ವರ್ಷದ ಬೇಸಿಗೆ ಬಹಳ ಬಿಸಿಲಿನಿಂದ ಕೂಡಿದೆ ಪಕ್ಷಿಗಳಿಗೆ ಕುಡಿಯಲು ನೀರು ಸಿಗುವುದಿಲ್ಲ ಅದಕ್ಕಾಗಿ ನಿಮ್ಮ ಮನೆಯ ತಾರಸಿ ಮೇಲೆ ಪಕ್ಷಿಗಳಿಗೆ ಚಿಕ್ಕ ತಟ್ಟೆಯಲ್ಲಿ ನೀರಿಡಿ ತನ್ಮೂಲಕ ಪಕ್ಷಿ ಸಂಕುಲ ಉಳಿಸಿ " ಎಂದರು .ಅವರು  ಮಧ್ಯಾಹ್ನ ಮನೆಯಲ್ಲಿ , ಊಟಮಾಡಿ ಕೈತೊಳೆಯಲು  ಅಂಗಳಕ್ಕೆ ಬಂದು ಬಕೆಟ್ ನಲ್ಲಿರುವ ನೀರನ್ನು  ಕುಡಿಯುವ‌ ಕಾಗೆಯನ್ನು  ಕಂಡು ಎಂಜಲು‌ ಕೈಯಲ್ಲೇ ಅದನ್ನು ಓಡಿಸಿದರು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

03 ಏಪ್ರಿಲ್ 2020

ಸಂಕಲ್ಪ ( ಹನಿ)

*ಸಂಕಲ್ಪ*

ಹಚ್ಚೋಣ ಎಲ್ಲರೂ  ನವ ದೀಪ
ಮಾಡೋಣ ಒಂದೇಮನದಿ ತಪ
ತೊಲಗಲಿ ಕರೋನ ಎಂಬ ಶಾಪ
ಈಡೇರಲಿ ಕೋಟಿಜನರ ಸಂಕಲ್ಪ

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಕದ್ದವರಾರು? (ನ್ಯಾನೋ ಕಥೆ)

*ಕದ್ದವರಾರು*

ಕಷ್ಟಪಟ್ಟು ವ್ಯವಸಾಯ ಮಾಡಿ ಬಂದ ಐವತ್ತು ಸಾವಿರ ಬ್ಯಾಂಕಿನಲ್ಲಿಟ್ಟಿದ್ದ‌‌ ಹಣವನ್ನು ಬಿಡಿಸಲು‌ ಹೋದ ಗೋವಿಂದಪ್ಪನಿಗೆ ಅಕೌಂಟ್ ನಲ್ಲಿ ಹತ್ತು ಸಾವಿರ ಮಾತ್ರ ಇದ್ದು‌ ಎ ಟಿ‌ ಎಂ ನಿಂದ ಹಣ ಡ್ರಾ ಅಗಿರುವುದು ತಿಳಿದು.ಇದ್ದ ಮೂವರಲ್ಲಿ ಕದ್ದವರಾರು ಎಂದು ಚಿಂತಿಸುತ್ತಾ ಜ್ವರ ಬಂದು‌ ಹಾಸಿಗೆ ಹಿಡಿದರು." ಅಪ್ಪಾ ನಿನಗೆ ಮಾತ್ರೆ ತರುವೆ " ಎಂದು ಮಗ ಹೋದ ಅರ್ಧ ಗಂಟೆಗೆ ಗೋವಿಂದಪ್ಪನ ಮೊಬೈಲ್ಗೆ ಮೇಸೇಜ್ ಬಂತು ಅವರ ಹೆಂಡತಿ ಓದಿದರು." Rs 5000 debited from Your account thank you for transaction "

*ಸಿ ಜಿ ವೆಂಕಟೇಶ್ವರ*
*ತುಮಕೂರು*

02 ಏಪ್ರಿಲ್ 2020

ನಟ(ಳ)ರಾಜ(ನ್ಯಾನೋ ಕಥೆ)

*ನಟ(ಳ)ರಾಜ*

(ನ್ಯಾನೋ ಕಥೆ)
"ರೀ ನೀವು ಅಡಿಗೆ ಮಾಡ್ತೀರಾ? ಸಾಕು ಸುಮ್ನಿರಿ ನಿಮಗೆ ತಿನ್ನೋಕು ನೆಟ್ಟಗೆ ಬರಲ್ಲ" ಎಂದು ಹಂಗಿಸಿದಳು ಸರಿತಾ " ಈ ಲಾಕ್ ಡೌನ್ ಮುಗಿಯೋದರೊಳಗೆ ನಿನಗೆ ಒಳ್ಳೆಯ ಅಡಿಗೆ ಮಾಡಿ ಬಡಿಸಲಿಲ್ಲ ಅಂದರೆ ನನ್ನ ಹೆಸರು ನಟ(ಳ)ರಾಜ ಅಲ್ಲ ."ಎಂದು ಈರುಳ್ಳಿ ತೆಗೆದುಕೊಂಡು
ಕತ್ತರಿಸಲು ಶುರುಮಾಡಿದನು ಕಣ್ಣಲ್ಲಿ ನೀರು ಗಳ ಗಳ ಶುರುವಾಗಿದ್ದನ್ನು ದೂರದಿಂದ ನೋಡಿದ ಸವಿತಾಳ ಕಣ್ಣಲ್ಲಿ ಅರಿವಿಲ್ಲದೇ ಎರಡು ಹನಿ ಉದುರಿದವು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಗಜ಼ಲ್ ೬೨ (ರಘುರಾಮ)

*ಗಜ಼ಲ್೬೨*

ಜಯತು‌ ಜಯ‌ ರಾಮ ಹರಸು ರಘುರಾಮ
ಭಯವ ನೀಗಿ ಅಭಯ ಕರುಣಿಸು ರಘುರಾಮ.

ಸದ್ಗುಣ ವೈಭವಶಾಲಿ ತ್ರಿಭುವನ ಪಾಲಕನೆ
ನಮ್ಮ ದುರ್ಗುಣಗಳ  ತೊಲಗಿಸು ರಘುರಾಮ.

ದಶಕಂಠನ ಹರಿದ ದಶರಥ ಪುತ್ರನೆ ಶ್ರೀರಾಮ
ದಿಶೆ ತೋರಿ ಸರಿಪಥದಲಿ‌ ನಡೆಸು ರಘುರಾಮ.

ಅಯೋಧ್ಯಾಪಾಲಕ ಜಯವ ನೀಡುವ ಜಯರಾಮ
ಜನಗಳ ಮನಗಳ  ದುಗುಡವ ಅಳಿಸು ರಘುರಾಮ

ತಾರಕ ಮಂತ್ರವ ಬಿಡದೆ ಜಪಿಸುವೆ  ರಘುನಾಥ
ಸಿಹಿಜೀವಿಗಳ ಕಾಪಾಡಿ ಉಳಿಸು  ರಘುರಾಮ

*ಸಿ ಜಿ ವೆಂಕಟೇಶ್ವರ*
*ತುಮಕೂರು*