16 ಫೆಬ್ರವರಿ 2020

ಬಟ್ಟೆ (ನ್ಯಾನೋ ಕಥೆ)

*ಬಟ್ಟೆ*
*ನ್ಯಾನೋ ಕಥೆ*

"ನನಗೆ 5000 ರೂಪಾಯಿ ಬೇಕೇ ಬೇಕು ,ಹೊಸ ವರ್ಷಕ್ಕೆ ನನ್ನ ಎಲ್ಲಾ ಸ್ನೇಹಿತರು ಬಟ್ಟೆಗಳನ್ನು ಕೊಳ್ಳಲು ಅವರ ತಂದೆ 10000 ಹಣ ನೀಡಿದ್ದಾರೆ." ಎಂದು ಮಗ ಏರು ಧ್ವನಿಯಲ್ಲಿ ಕೇಳಿದ " ನಮ್ಮದು ಮಧ್ಯಮವರ್ಗದ ಕುಟುಂಬ ಮನೆಯಲ್ಲಿ ದುಡಿಯುತ್ತಿರುವವನು ನಾನೊಬ್ಬ ,ನಿನಗೆ ಕೆಲಸವಿಲ್ಲ,ನಿನ್ನ ತಂಗಿಗೆ ಮದುವೆ ಮಾಡಬೇಕು,ಖರ್ಚು ಹೆಚ್ಚು ಅಲ್ಲವೇ" ಎಂದು ಅಪ್ಪ  ತಿಳಿಹೇಳಿದರೂ ಕೇಳದ ಮಗ 5000 ಹಣ ಪಡೆದು ಹೊರಟುಹೋದ. ರೂಮ್‌ ನಿಂದ ಹಳೆಯ ಶರ್ಟ್ ತಂದು ಕಿತ್ತಿದ್ದ ಗುಂಡಿ ತಾವೇ ಹಾಕಿ ಮಗಳೆ ಇದನ್ನು ಇಸ್ತ್ರಿ ಮಾಡಮ್ಮ ಶಾಲೆಗೆ ಹೋಗಬೇಕು ಟೈಮ್ ಆಯ್ತು ಎಂದು ಸ್ನಾನಕ್ಕೆ ಹೊರಟರು. ಅಪ್ಪನ ಶರ್ಟ್ ಇಸ್ತ್ರಿ ಮಾಡುವಾಗ ಮಗಳಿಗೆ ಅರಿವಿಲ್ಲದೆ ಅವಳ ಕಣ್ಣುಗಳಿಂದ ನಾಲ್ಕನಿ ನೀರು ಶರ್ಟ್ ಮೇಲೆ ಬಿದ್ದವು.

*ಸಿ.ಜಿ ವೆಂಕಟೇಶ್ವರ*

14 ಫೆಬ್ರವರಿ 2020

ಕರ್ನಾಟಕ ನೀರ್(ಕಿರು ಲೇಖನ)

*ಕರ್ನಾಟಕ ನೀರ್*


ಕೇರಳದಲ್ಲಿ ಒಂದು ಲೀಟರ್ ಖನಿಜಯುಕ್ತ ಕುಡಿಯುವ ನೀರಿನ ಬಾಟಲ್ಗೆ ಗರಿಷ್ಠ13 ರೂಗಳನ್ನು ನಿಗದಿ ಮಾಡಿ ಕೇರಳ ಸರ್ಕಾರ ಆದೇಶ ಮಾಡಿರುವುದು ಸ್ವಾಗತಾರ್ಹ. ಇದನ್ನು ಎಲ್ಲಾ ರಾಜ್ಯಗಳು ಅನುಸರಿಸುವುದು ಉತ್ತಮ. ನಮ್ಮ ರಾಜ್ಯದಲ್ಲಿ ಒಂದು ಲೀಟರ್ ನೀರಿನ ಬೆಲೆ 20 ರೂಪಾಯಿಗಳು ಎಂದು ನಿಗದಿ ಮಾಡಿದ್ದರೂ ಕೆಲ ಹೋಟೆಲ್ ಗಳು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಲ ನಿಲ್ದಾಣಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು ಗಮನಕ್ಕೆ ಬಂದರೂ ಸಂಬಂಧಿಸಿದ ಅಧಿಕಾರಿಗಳು ಜಾಣಕುರುಡು ,ಜಾಣಕಿವುಡು ಪ್ರದರ್ಶನವನ್ನು ಮಾಡುವುದು ಗುಟ್ಟಾಗಿ ಉಳಿದಿಲ್ಲ. ಈ ವಿಚಾರದಲ್ಲಿ ಭಾರತೀಯ ರೈಲ್ವೆ ನಡೆ ಉತ್ತಮ ಎಂದು ಹೇಳಬಹುದು ಅದು ತನ್ನದೇ ಆದ "ರೇಲ್ ನೀರ್" ಮೂಲಕ ಜನರಿಗೆ ಕಡಿಮೆ ಬೆಲೆಗೆ ನೀರು ನೀಡುತ್ತಿದೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ "ಕರ್ನಾಟಕ ಸಾರಿಗೆ ನೀರ್" ರಿಯಾಯಿತಿ ದರದಲ್ಲಿ ನೀಡಬಹುದಲ್ಲವೇ ?

*ಸಿ ಜಿ ವೆಂಕಟೇಶ್ವರ*
ಚೌಡಗೊಂಡನ ಹಳ್ಳಿ
ಹೊಳಲ್ಕೆರೆ ತಾಲ್ಲೂಕು
9900925529

13 ಫೆಬ್ರವರಿ 2020

ರೇಡಿಯೋ (ಕವನ)

‌*ರೇಡಿಯೋ*

(ಇಂದು ವಿಶ್ವ ರೇಡಿಯೋ ದಿನ)

ಬೆಳಗು ಮಾಡಲು
ವಂದೇ ಮಾತರಂ
ಸುಪ್ರಭಾತದೊಂದಿಗೆ ಬಂದು
ಪ್ರದೇಶ ಸಮಾಚಾರ ತಿಳಿಸಿ
ಗಾಂಧೀ ಸ್ಮೃತಿಯನ್ನು
ಮಾಡಿಸುತ್ತಿದ್ದ ನಿನ್ನ ಹೇಗೆ ಮರೆಯಲಿ.

ನನ್ನೂರು ಪರವೂರುಗಳ
ವರ್ತೆಗಳ ತಿಳಿಸಿ
ಸಂಸ್ಕೃತ ಬರದಿದ್ದರೂ ಕೇಳಿಸಿ
ಕೃಷಿಕರಿಗೆ ಮಾಹಿತಿ ನೀಡಿ
ಯುವಕರಿಗೆ ಯುವವಾಣಿಯಾದ
ನಿನ್ನ ಹೇಗೆ ಮರೆಯಲಿ.

ನಮ್ಮ ಹೆಸರು ಹೇಳಿ
ನಿಮ್ಮ ಮೆಚ್ಚಿನ ಗೀತೆಗಳ ಕೇಳಿಸಿ
ಮಕ್ಕಳ ಚಿಲಿಪಿಲಿ
ಗಿಳಿವಿಂಡು ಆಲಿಸಲು
ಕಲಿಸಿದ ನಿನ್ನ ಹೇಗೆ ಮರೆಯಲಿ.

ಕ್ರಿಕೆಟ್ ಎಬಿಸಿ
ಗೊತ್ತಿಲ್ಲದಿದ್ದರೂ
ಇಂಗ್ಲಿಷ್ ಮತ್ತು ಹಿಂದಿಯ
ಮೂಲಕ ವಿವರಣೆ ನೀಡಿ
ಬಹುಭಾಷೆಗಳ ಕಲಿಸಿದ
ನಿನ್ನ ಹೇಗೆ ಮರೆಯಲಿ.

ನೂರಾರು.ಜಿ ಬಿ ಗಟ್ಟಳೆ ಹಾಡಿವೆ,
ಹತ್ತಾರು ಚಾನೆಲ್ಗಳು ಮಾಹಿತಿ ನೀಡಿವೆ
ಸುದ್ದಿಗೆ ಸಾವಿರಾರು ವಾಹಿನಿಗಳಿವೆ
ನಿನ್ನಷ್ಟು ಆಪ್ತ ಯಾರೂ ಇಲ್ಲ
ನೀ ಮಾಡಿದ ಮೋಡಿ ಮರೆಯಲ್ಲ
ಕೋಟಿ ನಮನಗಳು ನಿ‌ನಗೆ ರೇಡಿಯೋ.

*ಸಿ ಜಿ ವೆಂಕಟೇಶ್ವರ*


12 ಫೆಬ್ರವರಿ 2020

ಗೌರವ ( ರುಬಾಯಿ)

ಗೌರವ (ರುಬಾಯಿ)
ಮರೆತುಬಿಡು ಇತರರಿಗೆ ಮಾಡಿದ ಉಪಕಾರವ
ನೆನೆಯದಿರು ನಿನಗೆ ಮಾಡಿದ ಅಪಕಾರವ
ಎಲ್ಲರಲೂ‌ ಉಂಟು ‌ಒಳಿತು ಕೆಡುಕು
ಒಳ್ಳೆಯದು ಗುರುತಿಸು ಹುಡುಕಿ ಬರುವುದು ಗೌರವ.
*ಸಿ ಜಿ ವೆಂಕಟೇಶ್ವರ*

11 ಫೆಬ್ರವರಿ 2020

ವೀಣಾಪಾಣಿ(ಭಕ್ತಿಗೀತೆ)




*ವೀಣಾಪಾಣಿ*

ಸುಜ್ಞಾನದಾಯಿಕೆ ಶಾರದಾ ಮಾತೆ
ವಂದಿಪೆ ನಿನಗೆ ಹೇ ಜಗನ್ಮಾತೆ
ವಿದ್ಯೆ ಬುದ್ಧಿಯ ನೀಡುವ ತಾಯಿ
ಹರಸುತ ನಮ್ಮನ್ನು ನೀ ಕಾಯಿ.

ಸುವಿಮಳ ಚರಿತೆ  ನಮಿಪೆ ನಿನಗೆ
ಗೆಲುವನು ಕರುಣಿಸು ನಮಗೆ
ಶ್ವೇತ ವಸ್ತ್ರ ದ   ಶಾರದಾ ಮಾತೆ
ಜ್ಞಾನವ ನೀಡಮ್ಮ ವಾತ್ಸಲ್ಯದಾತೆ.

ವಾಣಿ ವೀಣಾಪಾಣಿಯೆ ಭಕ್ತಿದಾತೆ
ತಮವ ತೊರೆಯಮ್ಮ ಮುಕ್ತಿದಾತೆ
ಕರದಲಿ ಪುಸ್ತಕವ ಹಿಡಿದಿರುವೆ
ಶರಣೆಂದರೆ ಪೊರೆದು‌ ಕಾಯುವೆ.

ಧರಸಿರುವೆ ಹೊಳೆವ ವರಮಣಿ
ಅಜನ ರಾಣಿ ಕರುಣಿಸು ವಾಣಿ
ಅರಿವನು ನೀಡುವ ತಾಯಿಸರಸ್ವತಿ
ನಿನ್ನ ಮಕ್ಕಳಿಗೆ ನೀಡು ಸದಾ ಸನ್ಮತಿ .

*ಸಿ ಜಿ ವೆಂಕಟೇಶ್ವರ*